ಪ್ರಧಾನ ಮಂತ್ರಿಯವರ ಕಛೇರಿ
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಭಾರತೀಯ ತಂಡದ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ಮೋದಿ ಸಂವಾದ
"ಪ್ಯಾರಾ-ಅಥ್ಲೀಟ್ ಗಳು ಭಾರತದ ಹೆಮ್ಮೆ ಮತ್ತು ಧ್ವಜಧಾರಿಗಳು"
"ಇಲ್ಲಿಯವರೆಗಿನ ಪ್ಯಾರಾ-ಅಥ್ಲೀಟ್ ಗಳ ಪ್ರಯಾಣವು ಅವರು ಆಂತರ್ಯದಲ್ಲಿ ಎಷ್ಟು ಬಲಶಾಲಿಯಾಗಿದ್ದಾರೆ ಎಂಬುದನ್ನು ಹೇಳುತ್ತದೆ. ಅವರು ಸಮಾಜದ ಸ್ಥಾಪಿತ ನಂಬಿಕೆಗಳನ್ನು ಮತ್ತು ದೇಹದ ಸವಾಲುಗಳನ್ನು ಸೋಲಿಸಿದ್ದಾರೆ"
"ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದ 31 ಪದಕಗಳಲ್ಲಿ 19 ಪದಕಗಳು ಟೋಕಿಯೊದಲ್ಲಿ ಗೆದ್ದಂತಹವು. ಕಳೆದ 10 ವರ್ಷಗಳಲ್ಲಿ ಭಾರತವು ಕ್ರೀಡೆ ಮತ್ತು ಪ್ಯಾರಾ ಗೇಮ್ಗಳಲ್ಲಿ ಎಷ್ಟು ದೂರ ಸಾಗಿ ಬಂದಿದೆ ಎಂದು ಯಾರೇ ಆದರೂ ಊಹಿಸಬಹುದು”
"ನಮ್ಮ ಪ್ಯಾರಾ-ಅಥ್ಲೀಟ್ ಗಳು ಟಾಪ್ಸ್ ಮತ್ತು ಖೇಲೋ ಇಂಡಿಯಾ ಕಾರ್ಯಕ್ರಮಗಳ ಅಡಿಯಲ್ಲಿ ಸೌಲಭ್ಯಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಈ ತಂಡದಲ್ಲಿ 50 ಕ್ರೀಡಾಪಟುಗಳು ಟಾಪ್ಸ್ ಯೋಜನೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು 16 ಕ್ರೀಡಾಪಟುಗಳು ಖೇಲೋ ಇಂಡಿಯಾದೊಂದಿಗೆ ಸಂಬಂಧ ಹೊಂದಿದ್ದಾರೆ.
"ಭಾರತದ ಸಾಧನೆ ವರ್ಧಿಸಿದೆ ಮತ್ತು ಅನೇಕ ಪಂದ್ಯಗಳಲ್ಲಿ ಸ್ಲಾಟ್ ಗಳು ಹೆಚ್ಚಾಗಿವೆ"
Posted On:
19 AUG 2024 9:27PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ನಡೆಯಲಿರುವ ಮುಂಬರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಭಾರತೀಯ ತಂಡದೊಂದಿಗೆ ಸಂವಾದ ನಡೆಸಿದರು. ಶ್ರೀ ಮೋದಿ ಅವರು ಭಾರತೀಯ ತಂಡದ ಅತ್ಯಂತ ಕಿರಿಯ ಅಥ್ಲೀಟ್ ಬಿಲ್ಲುಗಾರ್ತಿ ಶೀತಲ್ ದೇವಿ ಅವರೊಂದಿಗೆ ಸಂವಾದವನ್ನು ಪ್ರಾರಂಭಿಸಿದರು, ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು ಆಗಿರುವುದರಿಂದ ನಿಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂದು ಕೇಳಿದರು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಉತ್ಸುಕಳಾಗಿದ್ದೇನೆ ಎಂದು 17 ವರ್ಷದ ಆಟಗಾರ್ತಿ ಶೀತಲ್ ದೇವಿ ಅವರು ಪ್ರಧಾನಿಯವರಿಗೆ ತಿಳಿಸಿದರು. ಈ ಸಾಧನೆಯನ್ನು ಮಾಡಲು ತನಗೆ ದೇವಾಲಯ ಮಂಡಳಿ ನೆರವಾಗಿದೆ ಮತ್ತು ತನ್ನ ಸುತ್ತಮುತ್ತಲಿನ ಎಲ್ಲರ ಸಹಕಾರ ದೊರೆತಿದೆ ಎಂದ ಅವರು ಸರ್ವ ರೀತಿಯ ಸಹಕಾರಕ್ಕೆ ಧನ್ಯವಾದ ಅರ್ಪಿಸಿದರು. ಶ್ರೀ ಮೋದಿ ಅವರು ದೇವಿ ಅವರ ತರಬೇತಿಯ ಸ್ಥಿತಿ ಗತಿಯ ಬಗ್ಗೆ ಕೇಳಿದರು, ಇದಕ್ಕೆ ಉತ್ತರಿಸಿದ ದೇವಿ, ಅದು ಉತ್ತಮವಾಗಿ ನಡೆಯುತ್ತಿದೆ ಮತ್ತು ತನ್ನ ಗೆಲುವಿನ ನಂತರ ಪ್ಯಾರಿಸ್ ನಲ್ಲಿ ಭಾರತದ ರಾಷ್ಟ್ರಧ್ವಜವನ್ನು ಅರಳಿಸಿ ಮತ್ತು ರಾಷ್ಟ್ರಗೀತೆಯನ್ನು ನುಡಿಸಬೇಕು ಎನ್ನುವುದು ತನ್ನ ಗುರಿಯಾಗಿದೆ ಎಂದು ಹೇಳಿದರು. ದೇವಿ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ಪಂದ್ಯವನ್ನು ಗೆಲ್ಲುವ ಅಥವಾ ಸೋಲುವ ಬಗ್ಗೆ ಯಾವುದೇ ಒತ್ತಡವಿಲ್ಲದೆ ಪ್ರದರ್ಶನ ನೀಡುವಂತೆ ಮತ್ತು ಉತ್ತಮ ಪ್ರದರ್ಶನ ನೀಡುವುದರತ್ತ ಗಮನ ಹರಿಸುವಂತೆ ಪ್ಯಾರಾ-ಬಿಲ್ಲುಗಾರ್ತಿಗೆ ಸಲಹೆ ನೀಡಿದರು.
ಶೂಟರ್ ಅವನಿ ಲೇಖಾರಾ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನ ಮತ್ತು ಕಂಚಿನ ಪದಕ ಗೆದ್ದ ಕ್ರೀಡಾಪಟುವನ್ನು ಶ್ಲಾಘಿಸಿದರು ಮತ್ತು ಈ ಬಾರಿ ಅವರ ಗುರಿ ಏನು ಎಂದು ಕೇಳಿದರು. ರಾಜಸ್ಥಾನ ಮೂಲದ ಅಥ್ಲೀಟ್ ತನ್ನ ಹಿಂದಿನ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅನುಭವವನ್ನು ಗಳಿಸುವತ್ತ ಗಮನ ಹರಿಸಿದ್ದೆ, ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಮೊದಲ ಭಾಗವಿಸುವಿಕೆಯಾಗಿತ್ತು ಎಂದರು. ಪ್ಯಾರಾಲಿಂಪಿಕ್ಸ್ ವರ್ತುಲದಲ್ಲಿ ಕ್ರೀಡೆ ಮತ್ತು ಅದರ ತಂತ್ರದ ಬಗ್ಗೆ ಸಾಕಷ್ಟು ಕಲಿತಿದ್ದೇನೆ ಮತ್ತು ಈ ಬಾರಿ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದೇನೆ ಎಂದು 22 ವರ್ಷದ ಆಟಗಾರ್ತಿ ಹೇಳಿದರು. ಪ್ರಧಾನಿಯವರ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ ಅವರು, ಇದು ಜವಾಬ್ದಾರಿಯ ಪ್ರಜ್ಞೆಯನ್ನು ಪ್ರೇರೇಪಿಸುತ್ತದೆ ಮತ್ತು ತನ್ನ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಲು ಪ್ರೇರೇಪಿಸುತ್ತದೆ ಎಂದು ಹೇಳಿದರು. ಟೋಕಿಯೊ ಪ್ಯಾರಾಲಿಂಪಿಕ್ಸ್ ನಂತರ ಅವರ ಜೀವನ ಹೇಗೆ ಬದಲಾಯಿತು ಮತ್ತು ಭವಿಷ್ಯದ ಸ್ಪರ್ಧೆಗಳಿಗೆ ಅವರು ಹೇಗೆ ತಯಾರಿ ಮುಂದುವರಿಸಿದ್ದಾರೆ ಎಂಬುದರ ಬಗ್ಗೆ ಶ್ರೀ ಮೋದಿ ಅವರು ಲೇಖಾರಾ ಅವರನ್ನು ವಿಚಾರಿಸಿದರು. 2020 ರ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಮೊದಲು ಅಲ್ಲಿ ಅಡ್ಡಿ ಆತಂಕಗಳು ಇದ್ದವು, ತನ್ನ ಗೆಲುವಿನ ನಂತರ ಅವುಗಳು ಮುರಿದು ಬಿದ್ದವು, ಇದು ತನ್ನಲ್ಲಿ ಭರವಸೆ ಮತ್ತು ಆತ್ಮವಿಶ್ವಾಸವನ್ನು ತುಂಬಿದವು, ಒಮ್ಮೆ ಗೆಲ್ಲಲು ಸಾಧ್ಯವಾದರೆ,ಕಠಿಣ ಪರಿಶ್ರಮದ ಮೂಲಕ ಅದನ್ನು ಪುನರಾವರ್ತನೆ ಮಾಡಬಹುದು ಎಂಬ ವಿಶ್ವಾಸ ಬಂದಿದೆ ಎಂದು ಪ್ಯಾರಾ ಶೂಟರ್ ಹೇಳಿದರು.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಹೈ ಜಂಪರ್ ಮರಿಯಪ್ಪನ್ ತಂಗವೇಲು ಅವರ ಪ್ರದರ್ಶನವನ್ನು ಶ್ಲಾಘಿಸಿದ ಪ್ರಧಾನಿ, ಈ ಬಾರಿ ತಮ್ಮ ಹಿಂದಿನ ಬೆಳ್ಳಿ ಪದಕವನ್ನು ಚಿನ್ನವಾಗಿ ಪರಿವರ್ತಿಸಲು ಯೋಜಿಸುತ್ತಿದ್ದೀರಾ ಎಂದು ಕೇಳಿದರು. ಕಳೆದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಿಂದ ಕಲಿತ ಪಾಠಗಳ ಬಗ್ಗೆ ಶ್ರೀ ಮೋದಿ ಅವರು 29 ವರ್ಷದ ಆಟಗಾರನನ್ನು ವಿಚಾರಿಸಿದರು. ತಾನು ಪ್ರಸ್ತುತ ಜರ್ಮನಿಯಲ್ಲಿ ತರಬೇತಿ ಪಡೆಯುತ್ತಿರುವುದಾಗಿ ಮತ್ತು ಈ ಬಾರಿ ಚಿನ್ನ ಗೆಲ್ಲಲು ಬದ್ಧರಾಗಿರುವುದಾಗಿ ತಂಗವೇಲು ಅವರು ಶ್ರೀ ಮೋದಿ ಅವರಿಗೆ ತಿಳಿಸಿದರು. 2016ರಿಂದೀಚೆಗೆ ಪ್ಯಾರಾ ಅಥ್ಲೀಟ್ ಗಳ ಸಂಖ್ಯೆ ಹೆಚ್ಚಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಕ್ರೀಡಾಪಟು ಮತ್ತು ತರಬೇತುದಾರರ ದೃಷ್ಟಿಕೋನದಿಂದ ನಿಮ್ಮ ಅಭಿಪ್ರಾಯ ಏನು ಎಂದು ಅವರು ತಂಗವೇಲು ಅವರನ್ನು ಕೇಳಿದರು. ಕ್ರೀಡೆಯನ್ನು ವೃತ್ತಿಯಾಗಿ ಆಯ್ಕೆ ಮಾಡಲು ಬಹಳಷ್ಟು ಜನರು ಈಗ ಸ್ಫೂರ್ತಿ ಪಡೆದಿದ್ದಾರೆ ಎಂದು ಪ್ಯಾರಾ-ಅಥ್ಲೀಟ್ ಹೇಳಿದರು. ಭಾರತೀಯ ಕ್ರೀಡಾಪಟುಗಳು ಯಾವುದೇ ರೀತಿಯ ಕೊರತೆಯನ್ನು ಎದುರಿಸಬೇಕಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಶ್ರೀ ಮೋದಿ ಅವರು ತಮಿಳುನಾಡು ಮೂಲದ ಹೈಜಂಪ್ ಪಟುವಿಗೆ ಭರವಸೆ ನೀಡಿದರು.
ಟೋಕಿಯೊ ಪ್ಯಾರಾಲಿಂಪಿಕ್ಸ್ ಮತ್ತು ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಸುಮಿತ್ ಆಂಟಿಲ್ ಅವರ ಸಾಧನೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಈ ಜಾವೆಲಿನ್ ಎಸೆತಗಾರ ಎರಡೂ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ದಾಖಲೆಯನ್ನು ಮುರಿದಿದ್ದಾರೆ ಎಂದರು. ಪ್ರತಿ ಚಾಂಪಿಯನ್ಶಿಪ್ನಲ್ಲಿ ತಮ್ಮದೇ ಆದ ದಾಖಲೆಗಳನ್ನು ಮುರಿಯುವುದನ್ನು ಹೇಗೆ ಮುಂದುವರಿಸುತ್ತೀರಿ ಮತ್ತು ಸದಾ ಇದಕ್ಕೆ ಹೇಗೆ ಪ್ರೇರಣೆಯನ್ನು ಪಡೆಯುತ್ತಿರುತ್ತೀರಿ ಎಂದು ಅವರು 26 ವರ್ಷದ ಆಟಗಾರನನ್ನು ಕೇಳಿದರು. ದೇವೇಂದ್ರ ಜಜಾರಿಯಾ ಮತ್ತು ನೀರಜ್ ಚೋಪ್ರಾ ಅವರನ್ನು ತಮ್ಮ ಸ್ಫೂರ್ತಿಯ ಮೂಲಗಳೆಂದು ಆಂಟಿಲ್ ಉಲ್ಲೇಖಿಸಿದರು ಮತ್ತು ಹೊಸ ದಾಖಲೆಗಳನ್ನು ನಿರ್ಮಾಣ ಮಾಡುವಲ್ಲಿ ಸ್ವಯಂ ಶಿಸ್ತು ಮತ್ತು ಸ್ವಯಂ ಪ್ರೇರಣೆಯ ಮಹತ್ವವೂ ಅಡಗಿದೆ ಎಂದರು. ಭಾರತದ ಕ್ರೀಡಾ ಸಂಸ್ಕೃತಿಯಲ್ಲಿ ಹರಿಯಾಣದ ಕೊಡುಗೆಯನ್ನು ಉಲ್ಲೇಖಿಸಿದ ಶ್ರೀ ಮೋದಿ, ಸೋನಿಪಥ್ ನಲ್ಲಿ ಏನೋ ವಿಶೇಷವಿದೆ, ಏಕೆಂದರೆ ಇದು ಹಲವಾರು ದಾಖಲೆ ಮುರಿಯುವ ಕ್ರೀಡಾಪಟುಗಳನ್ನು ನಿರ್ಮಾಣ ಮಾಡುತ್ತಿದೆ ಎಂದರು. ಗೆಲುವಿನಲ್ಲಿ ಹರಿಯಾಣ ಕ್ರೀಡಾ ಸಂಸ್ಕೃತಿಯ ಪಾತ್ರದ ಬಗ್ಗೆ ಅವರು ಆಂಟಿಲ್ ಅವರನ್ನು ಪ್ರಶ್ನಿಸಿದರು. ತನ್ನ ಕ್ರೀಡಾ ಪ್ರಯಾಣದಲ್ಲಿ ಸಹಾಯ ಮಾಡಿದ ರಾಜ್ಯ ಮತ್ತು ಕೇಂದ್ರ ಎರಡಕ್ಕೂ ಸುಮಿತ್ ಧನ್ಯವಾದ ಅರ್ಪಿಸಿದರು. ಆಂಟಿಲ್ ಅವರನ್ನು ಅಭಿನಂದಿಸಿದ ಶ್ರೀ ಮೋದಿ ಅವರು ಅಂಟಿಲ್ ಎಲ್ಲರಿಗೂ ಸ್ಫೂರ್ತಿ ಎಂದು ಶ್ಲಾಘಿಸಿದರು ಮತ್ತು ಫ್ರಾನ್ಸ್ ನಲ್ಲಿ ಅವರ ಸಾಧನೆಗೆ ಶುಭ ಹಾರೈಸಿದರು.
ಪ್ಯಾರಾ-ಅಥ್ಲೀಟ್ ಅರುಣಾ ತನ್ವರ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಅವರ ಕ್ರೀಡಾ ಪ್ರಯಾಣ ಮತ್ತು ಅದರ ಉದ್ದಕ್ಕೂ ಅವರ ತಂದೆಯ ಬೆಂಬಲದ ಪಾತ್ರದ ಬಗ್ಗೆ ಕೇಳಿದರು. ಇದಕ್ಕೆ ಉತ್ತರಿಸಿದ 24 ವರ್ಷದ ಟೇಕ್ವಾಂಡೋಯಿನ್, "ಕುಟುಂಬದ ಬೆಂಬಲವಿಲ್ಲದೆ ಯಾರೂ ಸಾಮಾನ್ಯ ಪಂದ್ಯಾವಳಿಯನ್ನು ಗೆಲ್ಲುವುದಕ್ಕೂ ಸಾಧ್ಯವಿಲ್ಲ, ಮತ್ತು ನಾನು ಎರಡನೇ ಬಾರಿಗೆ ಪ್ಯಾರಾಲಿಂಪಿಕ್ಸ್ನಲ್ಲಿ ಸ್ಪರ್ಧಿಸಲಿದ್ದೇನೆ. ದಿವ್ಯಾಂಗರು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ, ಆದರೆ ನನ್ನ ಪೋಷಕರು ನನ್ನಲ್ಲಿ ಆತ್ಮವಿಶ್ವಾಸವನ್ನು ತುಂಬಿದ್ದಾರೆ ಮತ್ತು ನಾನು ಬಹಳಷ್ಟು ಕೆಲಸಗಳನ್ನು ಮಾಡಬಹುದು ಎಂದು ನಂಬುತ್ತೇನೆ ಎಂದರು. ಹಿಂದಿನ ಬಾರಿ, ಪ್ರಮುಖ ಪಂದ್ಯಕ್ಕೆ ಕೆಲವೇ ಕ್ಷಣಗಳ ಮೊದಲು ಕಳೆದ ಪ್ಯಾರಾಲಿಂಪಿಕ್ಸ್ ನಲ್ಲಿ ಅವರು ಅನುಭವಿಸಿದ ಗಾಯದ ಬಗ್ಗೆ ಮತ್ತು ಅವರು ಆ ಅಡೆತಡೆಯನ್ನು ಹೇಗೆ ನಿವಾರಿಸಿಕೊಂಡಿರಿ ಎಂದು ಶ್ರೀ ಮೋದಿ ಅವರು ತನ್ವರ್ ಅವರನ್ನು ಕೇಳಿದರು. ಗಾಯವು ನನ್ನ ಆಟವನ್ನು ನಿಲ್ಲಿಸಲು ಸಾಧ್ಯವಿಲ್ಲ ಏಕೆಂದರೆ ನನ್ನ ಗುರಿ ಅದಕ್ಕಿಂತ ದೊಡ್ಡದಾಗಿತ್ತು ಎಂದು ಕ್ರೀಡಾಪಟು ಉತ್ತರಿಸಿದರು. ಗಾಯವನ್ನು ಕ್ರೀಡೆಯಲ್ಲಿ ಆಭರಣ ಎಂದು ಕರೆದ ತನ್ವರ್, ತಾನು ತನ್ನನ್ನು ಬಲವಾಗಿರಿಸಿಕೊಂಡಿದ್ದೇನೆ ಮತ್ತು ಒಂದು ಪ್ಯಾರಾಲಿಂಪಿಕ್ ನನ್ನ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ, ಇನ್ನೂ ಅನೇಕ ಪಂದ್ಯಗಳು ಬರಲಿವೆ ಎಂದು ಹೇಳಿದರಲ್ಲದೆ ತನ್ನ ತರಬೇತುದಾರ ಮತ್ತು ಪೋಷಕರಿಗೆ ಧನ್ಯವಾದ ಅರ್ಪಿಸಿದರು. ಅವರನ್ನು ಹೋರಾಟಗಾರ್ತಿ ಮತ್ತು ಮಹಿಳೆಯರಿಗೆ ಸ್ಫೂರ್ತಿ ಎಂದು ಕರೆದ ಶ್ರೀ ಮೋದಿ ಅವರು, ತನ್ವರ್ ಅವರ ಧನಾತ್ಮಕ ನಿಲುವುವನ್ನು ಕೊಂಡಾಡಿದರು ಮತ್ತು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಅವರಿಗೆ ಶುಭ ಹಾರೈಸಿದರು.
ಇದುವರೆಗೂ ಮಾತನಾಡದೇ ಇರುವವರನ್ನು ಪ್ಯಾರಾಲಿಂಪಿಕ್ಸ್ ನಂತಹ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ದೇಶವನ್ನು ಪ್ರತಿನಿಧಿಸುವ ಬಗ್ಗೆ ತಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಹಂಚಿಕೊಳ್ಳಲು ಮಾತನಾಡುವಂತೆ ಪ್ರಧಾನಿ ಪ್ರೋತ್ಸಾಹಿಸಿದರು. ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹರಿಯಾಣ ಮೂಲದ ಪ್ಯಾರಾ ಪವರ್ ಲಿಫ್ಟರ್ ಅಶೋಕ್ ಮಲಿಕ್, ಜಾಗತಿಕ ಮಟ್ಟದಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಕನಸಾಗಿದೆ ಎಂದರು. ಪ್ಯಾರಾಲಿಂಪಿಕ್ಸ್ ನಲ್ಲಿ ಎರಡು ಅಥವಾ ಮೂರು ಬಾರಿ ಸ್ಪರ್ಧಿಸಿದವರ ಕಡೆಗೆ ಗಮನ ಹರಿಸಿದ ಪ್ರಧಾನಮಂತ್ರಿಯವರು ಮೊದಲ ಪಂದ್ಯದಿಂದ ಗಳಿಸಿದ ತಮ್ಮ ಅನುಭವ ಮತ್ತು ಕಲಿತ ಪಾಠಗಳನ್ನು ಹಂಚಿಕೊಳ್ಳುವಂತೆ ಕ್ರೀಡಾಪಟುಗಳನ್ನು ಕೇಳಿದರು. ಪ್ಯಾರಾ-ಅಥ್ಲೀಟ್ ಅಮಿತ್ ಸರೋಹಾ ಅವರು 2012 ರಲ್ಲಿ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್ನಲ್ಲಿ ಭಾಗವಹಿಸಿದಾಗಿನಿಂದ, ಪದಕಗಳ ಸಂಖ್ಯೆ ಮತ್ತು ತಂಡದ ಸಾಧನೆ ಬಹಳ ದೊಡ್ಡದಾಗಿದೆ ಎಂದರು. ಈ ಬಾರಿ ಪ್ಯಾರಿಸ್ನಲ್ಲಿ ಒಟ್ಟು 84 ಕ್ರೀಡಾಪಟುಗಳು ಪ್ರದರ್ಶನ ನೀಡಲಿದ್ದಾರೆ ಎಂದು ಉಲ್ಲೇಖಿಸಿದ ಅವರು, ನಿರಂತರ ಬೆಂಬಲ ಮತ್ತು ಸಹಾಯಕ್ಕಾಗಿ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ (ಸಾಯ್) ಧನ್ಯವಾದ ಅರ್ಪಿಸಿದರು. ತಾವು ಪಡೆಯುತ್ತಿರುವ ಆರ್ಥಿಕ ಬೆಂಬಲವು ಹಿಂದಿಗಿಂತ ಅನೇಕ ಪಟ್ಟು ಹೆಚ್ಚಾಗಿದೆ ಎಂಬುದರತ್ತಲೂ ಸರೋಹಾ ಗಮನಸೆಳೆದರು. ಟಾಪ್ಸ್ (ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್) ಸ್ಥಾಪನೆಯನ್ನು ಅವರು ಶ್ಲಾಘಿಸಿದರು.ಇದರಿಂದ ತಮಗೆಲ್ಲ ಜಗತ್ತಿನ ಯಾವುದೇ ಭಾಗದಲ್ಲಾದರೂ ತರಬೇತಿ ಪಡೆಯುವ ಅವಕಾಶ ಲಭ್ಯವಾಯಿತು ಎಂದರು.ತಮಗೆ ಅಗತ್ಯವಾದ ವೈಯಕ್ತಿಕ ಕೋಚ್, ಫಿಸಿಯೋಥೆರಪಿಸ್ಟ್ ಮತ್ತು ಬೆಂಬಲ ಸಿಬ್ಬಂದಿಗಳ ಅವಶ್ಯಕತೆಯನ್ನೂ ಈಡೇರಿಸಲಾಗುತ್ತಿದೆ ಎಂದ ಸರೋಹ ಈ ಬಾರಿ ಇನ್ನೂ ಹೆಚ್ಚು ಪದಕಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಶಾಲೆಗಳು ಮತ್ತು ಕಾಲೇಜುಗಳಲ್ಲಿ ಇನ್ನೂ ಅಧ್ಯಯನ ಮಾಡುತ್ತಿರುವ ಪ್ಯಾರಾ-ಅಥ್ಲೀಟ್ ಗಳು ಕ್ರೀಡೆ ಮತ್ತು ಅಧ್ಯಯನವನ್ನು ಹೇಗೆ ಒಟ್ಟಿಗೆ ಸಮತೋಲನಗೊಳಿಸುತ್ತಾರೆ ಎಂದು ಪ್ರಧಾನಿ ಕುತೂಹಲದಿಂದ ಕೇಳಿದರು. ತಮ್ಮ ಅನುಭವವನ್ನು ಹಂಚಿಕೊಂಡ ರಾಜಸ್ಥಾನದ ಭರತ್ಪುರ ಮೂಲದ ರುದ್ರಾಂಶ್ ಖಂಡೇಲ್ವಾಲ್, ದಿಲ್ಲಿಯಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿ ಮತ್ತು ತನ್ನ 12 ನೇ ಬೋರ್ಡ್ ಪರೀಕ್ಷೆಗಳನ್ನು ಈ ಬಾರಿ ಶೇಕಡಾ 83 ರಷ್ಟು ಅಂಕಗಳನ್ನು ಗಳಿಸಿ ಎರಡನ್ನೂ ನಿಭಾಯಿಸಿದ್ದೇನೆ ಎಂದು ಹೇಳಿದರು. ಕ್ರೀಡೆ ಮತ್ತು ಅಧ್ಯಯನ ಎರಡೂ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ, ಏಕೆಂದರೆ ಒಂದು ಚಾರಿತ್ರ್ಯವನ್ನು ನಿರ್ಮಿಸುತ್ತದೆ ಮತ್ತು ಇನ್ನೊಂದು ತಮ್ಮ ಹಕ್ಕುಗಳ ಬಗ್ಗೆ ಶಿಕ್ಷಣ ನೀಡುತ್ತದೆ ಮತ್ತು ಎರಡನ್ನೂ ಏಕಕಾಲದಲ್ಲಿ ನಿರ್ವಹಿಸುವುದು ತುಂಬಾ ಕಷ್ಟವಲ್ಲ ಎಂದು ಅವರು ಹೇಳಿದರು.
ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಬಗ್ಗೆ ಪ್ರತಿಕ್ರಿಯೆ/ಹಿಮ್ಮಾಹಿತಿ ಕೇಳಿದ ಪ್ರಧಾನಮಂತ್ರಿಯವರು, ಹಲವಾರು ಕ್ರೀಡಾಪಟುಗಳ ಸಲಹೆಯ ಮೇರೆಗೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದರು. "ಇಂತಹ ಕಾರ್ಯಕ್ರಮಗಳು ಕ್ರೀಡಾ ಪರಿಸರ ವ್ಯವಸ್ಥೆಯನ್ನು ಹೇಗೆ ಬೆಂಬಲಿಸುತ್ತವೆ?" ಎಂದು ಶ್ರೀ ಮೋದಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗುಜರಾತಿನ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್, "ಖೇಲೋ ಇಂಡಿಯಾ ಅಭಿಯಾನವು ಹಲವಾರು ತಳಮಟ್ಟದ ಪ್ರತಿಭೆಗಳನ್ನು ಮುಂಚೂಣಿಗೆ ತಂದಿದೆ. ಇದು ಪ್ಯಾರಾ-ಅಥ್ಲೀಟ್ಗಳಿಗೆ ಉತ್ತಮ ವೇದಿಕೆಯನ್ನು ಒದಗಿಸಿದೆ, ಅವರಿಗೆ ಸಾಗಬೇಕಾದ ದಿಕ್ಕಿನ ಬಗ್ಗೆ ಪ್ರಜ್ಞೆಯನ್ನು ಮೂಡಿಸುತ್ತಿದೆ. ಈ ಬಾರಿ ಖೇಲೋ ಇಂಡಿಯಾದಿಂದ 16 ಪ್ಯಾರಾ-ಅಥ್ಲೀಟ್ಗಳು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿರುವುದು ಈ ಅಭಿಯಾನದ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ ಎಂದರು.
ಪ್ಯಾರಾಲಿಂಪಿಕ್ಸ್ ಸಮಯದಲ್ಲಿ ಗಾಯಗಳನ್ನು ಹೇಗೆ ನಿಭಾಯಿಸುತ್ತೀರಿ ಎಂದು ಪ್ರಧಾನಿ ಪ್ಯಾರಾ-ಅಥ್ಲೀಟ್ ಗಳನ್ನು ಕೇಳಿದರು. ಟಿಒಪಿಎಸ್ ನ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ತರುಣ್ ಧಿಲ್ಲಾನ್ ಅವರು 2022ರಲ್ಲಿ ಕೆನಡಾ ಇಂಟರ್ ನ್ಯಾಷನಲ್ ಟೂರ್ನಮೆಂಟ್ ವೇಳೆ ಅನುಭವಿಸಿದ ಗಾಯದ ಬಗ್ಗೆ ಶ್ರೀ ಮೋದಿ ಅವರಿಗೆ ವಿವರಿಸಿದರು. ಕೇವಲ ಏಳು ತಿಂಗಳಲ್ಲಿ ತ್ವರಿತವಾಗಿ ಚೇತರಿಸಿಕೊಂಡಿದ್ದಕ್ಕಾಗಿ 30 ವರ್ಷದ ಈ ಆಟಗಾರ ಸಾಯ್ ಅಧಿಕಾರಿಗಳು ಮತ್ತು ತಂಡವನ್ನು ಶ್ಲಾಘಿಸಿದರು ಮತ್ತು ಮುಂದಿನ ತಿಂಗಳಲ್ಲಿ ಚಿನ್ನದ ಪದಕವನ್ನು ಗೆದ್ದದ್ದನ್ನು ವಿವರಿಸಿದರು. ತಮ್ಮನ್ನು ಬಿಸಿನೆಸ್ ಕ್ಲಾಸ್ ನಲ್ಲಿ ಭಾರತಕ್ಕೆ ಮರಳಿ ಕರೆತರಲಾಯಿತು, ಅಲ್ಲಿ ಅತ್ಯುತ್ತಮ ವೈದ್ಯರು ಅವರ ಗಾಯಕ್ಕೆ ಚಿಕಿತ್ಸೆ ನೀಡಿದರು ಮತ್ತು ನಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢನಾಗಿದ್ದೇನೆ ಎಂದು ಖಚಿತಪಡಿಸಿಕೊಳ್ಳುವ ಮೂಲಕ ನನಗೆ ಬೆಂಬಲ ನೀಡಿದರು ಎಂದು ಅವರು ಪ್ರಧಾನಮಂತ್ರಿಯವರಿಗೆ ತಿಳಿಸಿದರು. ಟಾಪ್ಸ್ ನಂತಹ ಯೋಜನೆಯಿಂದಾಗಿ ಮಧ್ಯಮ ವರ್ಗದ ಮಕ್ಕಳು ತೀವ್ರ ಗಾಯಗಳಿಂದ ಬಳಲಿದ ನಂತರವೂ ತಮ್ಮ ಗುರಿಗಳನ್ನು ಸಾಧಿಸಬಹುದು ಎಂಬುದನ್ನು ತೋರಿಸಲಾಗಿದೆ ಎಂದು ಅವರು ಹೇಳಿದರು.
ಪ್ಯಾರಾ-ಸ್ಪೋರ್ಟ್ಸ್ ಗೆ ಸಾಮಾಜಿಕ ಮಾಧ್ಯಮಗಳು ಹೇಗೆ ಸಹಾಯ ಮಾಡುತ್ತವೆ ಎಂಬುದರ ಕುರಿತು ಸಲಹೆಗಳನ್ನು ನೀಡುವಂತೆ ಪ್ರಧಾನಮಂತ್ರಿಯವರು ಪ್ಯಾರಾ-ಅಥ್ಲೀಟ್ ಗಳನ್ನು ಕೇಳಿದರು. ಡಿಸ್ಕಸ್ ಥ್ರೋನಲ್ಲಿ ಪರಿಣತಿ ಹೊಂದಿರುವ ಪ್ಯಾರಾ-ಅಥ್ಲೀಟ್ ಯೋಗೇಶ್ ಕಥುನಿಯಾ ಅವರು ಪ್ಯಾರಾ-ಗೇಮ್ಸ್ ಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮಗಳು ಸಹಾಯ ಮಾಡಿವೆ ಎಂದು ಶ್ರೀ ಮೋದಿ ಅವರಿಗೆ ತಿಳಿಸಿದರು. ಈ ಹಿಂದೆ, ದಿವ್ಯಾಂಗರು ಜೀವನದಲ್ಲಿ ಕೇವಲ ಒಂದು ಆಯ್ಕೆ ಇದೆ ಮತ್ತು ಅದು ಅಧ್ಯಯನ ಎಂದು ಭಾವಿಸುತ್ತಿದ್ದರು, ಆದರೆ ಈಗ ದೇಶದಲ್ಲಿ ಪ್ಯಾರಾ-ಅಥ್ಲೀಟ್ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದರು. "ಇಂದು, ತಳಮಟ್ಟದ ಆಟಗಾರರು ನಮ್ಮ ವೀಡಿಯೊಗಳನ್ನು ವೀಕ್ಷಿಸುತ್ತಾರೆ ಮತ್ತು ಪ್ರೇರೇಪಿಸಲ್ಪಡುತ್ತಾರೆ. ಅವರು ತಮ್ಮ ದೈನಂದಿನ ದಿನಚರಿಯಲ್ಲಿ ಸೇರಿಸಬೇಕಾದ ವ್ಯಾಯಾಮಗಳ ಬಗ್ಗೆಯೂ ಕಲಿಯುತ್ತಾರೆ. ಆದ್ದರಿಂದ, ಒಟ್ಟಾರೆಯಾಗಿ ಹೆಚ್ಚಿನ ಪರಿಣಾಮ ಮತ್ತು ಹೆಚ್ಚಿನ ಗೋಚರತೆ ಕಂಡುಬಂದಿದೆ" ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ಅವರು, ಕೇಂದ್ರ ಕ್ರೀಡಾ ಸಚಿವ ಶ್ರೀ ಮನ್ಸುಖ್ ಮಾಂಡವಿಯಾ ಜೀ, ಕ್ರೀಡಾ ಖಾತೆ ಸಹಾಯಕ ಸಚಿವ ರಕ್ಷಾ ಖಾಡ್ಸೆ ಜಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಪ್ಯಾರಾಲಿಂಪಿಕ್ಸ್ ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಿಬ್ಬಂದಿ ವಿಶ್ವದ ಪ್ರತಿಯೊಂದು ಮೂಲೆಯಲ್ಲೂ ಇದ್ದಾರೆ ಎಂದರು. ದೇಶವು ಪ್ರಸ್ತುತ ವಿಡಿಯೋ ಕಾನ್ಫರೆನ್ಸ್ ಮೂಲಕ ರಿಮೋಟ್ ಕೋಚಿಂಗ್ ಹಂತದಲ್ಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲಿರುವ ಪ್ಯಾರಾ-ಅಥ್ಲೀಟ್ ಗಳನ್ನು ಉಲ್ಲೇಖಿಸಿದ ಶ್ರೀ ಮೋದಿ ಅವರು, ಅವರನ್ನು ಭಾರತದ ಹೆಮ್ಮೆ ಮತ್ತು ಧ್ವಜಧಾರಿಗಳು ಎಂದು ಬಣ್ಣಿಸಿದರು, ಈ ಪ್ರಯಾಣವು ಅವರ ಜೀವನ ಮತ್ತು ವೃತ್ತಿಜೀವನಕ್ಕೆ ಅತ್ಯಂತ ಮಹತ್ವದ್ದಾಗಿದೆ, ಜೊತೆಗೆ ಇದು ದೇಶಕ್ಕೂ ಅಷ್ಟೇ ಮುಖ್ಯವಾದುದಾಗಿದೆ ಎಂದು ಹೇಳಿದರು. " ಪ್ಯಾರಿಸ್ನಲ್ಲಿ ನಿಮ್ಮ ಉಪಸ್ಥಿತಿಯ ಜೊತೆ ಭಾರತದ ಹೆಮ್ಮೆಯೂ ಸಮ್ಮಿಳಿತಗೊಂಡಿದೆ ಮತ್ತು 140 ಕೋಟಿ ದೇಶವಾಸಿಗಳ ಆಶೀರ್ವಾದ ನಿಮ್ಮೊಂದಿಗಿದೆ, ವಿಜಯೀ ಭವ!" ಎಂದೂ ಹೇಳಿದರು. ಪ್ಯಾರಾ-ಅಥ್ಲೀಟ್ ಗಳ ಉತ್ಸಾಹವು ಟೋಕಿಯೊ ಪ್ಯಾರಾಲಿಂಪಿಕ್ಸ್ ಮತ್ತು ಏಷ್ಯನ್ ಪ್ಯಾರಾ-ಗೇಮ್ ನಂತೆಯೇ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಹೊಸ ದಾಖಲೆಗಳನ್ನು ರಚಿಸುವ ಅವರ ಉತ್ಸುಕತೆಗೆ ಸಾಕ್ಷಿಯಾಗಿದೆ ಎಂದೂ ಶ್ರೀ ಮೋದಿ ಹೇಳಿದರು.
ಕ್ರೀಡಾಳುಗಳು ಹೊಂದಿರುವ ಧೈರ್ಯ, ಸಮರ್ಪಣೆ ಮತ್ತು ತ್ಯಾಗದ ಪ್ರಮಾಣವನ್ನು ಶ್ಲಾಘಿಸಿದ ಪ್ರಧಾನಿ, ಕ್ರೀಡಾಪಟುಗಳು ಶಿಸ್ತಿನ ಶಕ್ತಿಯೊಂದಿಗೆ ಮುಂದುವರಿಯುತ್ತಾರೆ, ಅವರ ಆತ್ಮವಿಶ್ವಾಸ ಮತ್ತು ಸ್ವಯಂ ನಿಯಂತ್ರಣಕ್ಕೆ ಅವರ ಯಶಸ್ಸು ಸಾಕ್ಷಿಯಾಗಿದೆ ಎಂದು ಹೇಳಿದರು. ಆದಾಗ್ಯೂ, ಪ್ಯಾರಾ-ಅಥ್ಲೀಟ್ಗಳ ವಿಷಯಕ್ಕೆ ಬಂದಾಗ, ಈ ಸತ್ಯ ಮತ್ತು ಸವಾಲುಗಳು ದೊಡ್ಡದಾಗುತ್ತವೆ ಎಂದರು. ಪ್ಯಾರಾ-ಅಥ್ಲೀಟ್ ಗಳ ಉತ್ಸಾಹವನ್ನು ಶ್ಲಾಘಿಸಿದ ಶ್ರೀ ಮೋದಿ, ಇಲ್ಲಿಯವರೆಗಿನ ಅವರ ಪ್ರಯಾಣವು ಅವರು ಆಂತರ್ಯದಲ್ಲಿ ಎಷ್ಟು ಸದೃಢರಾಗಿದ್ದಾರೆ ಮತ್ತು ದೇಹದ ಸವಾಲುಗಳನ್ನು ಹೇಗೆ ಸೋಲಿಸಿದ್ದಾರೆ ಎಂಬುದನ್ನು ಹೇಳುತ್ತದೆ, ಸಮಾಜದ ಸ್ಥಾಪಿತ ನಂಬಿಕೆಗಳನ್ನು ಸೋಲಿಸಿ ಅವುಗಳನ್ನು ಯಶಸ್ಸಿನ ಅಂತಿಮ ಮಂತ್ರಗಳನ್ನಾಗಿ ಮಾಡಿದ್ದಾರೆ. "ನೀವು ಯಶಸ್ಸಿನ ಉದಾಹರಣೆ ಮತ್ತು ಪುರಾವೆ ಮತ್ತು ನೀವು ಕ್ಷೇತ್ರಕ್ಕೆ ಪ್ರವೇಶಿಸಿದ ನಂತರ ಯಾರೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.
ಹಲವು ವರ್ಷಗಳಿಂದ ಪ್ಯಾರಾ ಗೇಮ್ಸ್ ನಲ್ಲಿ ಭಾರತದ ಪ್ರಾಬಲ್ಯ ಹೆಚ್ಚುತ್ತಿರುವುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, 2012ರ ಲಂಡನ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ ಶೂನ್ಯ ಚಿನ್ನದೊಂದಿಗೆ ಕೇವಲ ಒಂದು ಪದಕ ಗೆದ್ದಿದ್ದನ್ನು ಸ್ಮರಿಸಿದರು. 2016ರಲ್ಲಿ ಬ್ರೆಜಿಲ್ ನ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತ 2 ಚಿನ್ನ ಹಾಗೂ 4 ಪದಕಗಳನ್ನು ಗೆದ್ದಿತ್ತು. ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ 5 ಚಿನ್ನ, 8 ಬೆಳ್ಳಿ ಮತ್ತು 6 ಕಂಚಿನೊಂದಿಗೆ ಒಟ್ಟು 19 ಪದಕಗಳನ್ನು ಗೆದ್ದಿದೆ. ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದ 31 ಪದಕಗಳಲ್ಲಿ 19 ಪದಕಗಳು ಟೋಕಿಯೊ ಒಂದರಲ್ಲೇ ಗೆದ್ದಂತಹವು. "ನಿಮ್ಮಲ್ಲಿ ಅನೇಕರು ಆ ತಂಡದ ಭಾಗವಾಗಿದ್ದಿರಿ ಮತ್ತು ಪದಕಗಳನ್ನು ಗೆದ್ದಿದ್ದೀರಿ" ಎಂದು ಶ್ರೀ ಮೋದಿ ಹೇಳಿದರು, ಕಳೆದ 10 ವರ್ಷಗಳಲ್ಲಿ ಭಾರತವು ಕ್ರೀಡೆ ಮತ್ತು ಪ್ಯಾರಾ ಗೇಮ್ಗಳಲ್ಲಿ ಎಷ್ಟು ದೂರ ಬಂದಿದೆ ಎಂದು ಯಾರೊಬ್ಬರೂ ಊಹಿಸಬಹುದಾಗಿದೆ ಎಂದೂ ಪ್ರಧಾನಿ ಹೇಳಿದರು.
ಕ್ರೀಡೆಯ ಬಗ್ಗೆ ಜನರ ಬದಲಾಗುತ್ತಿರುವ ಗ್ರಹಿಕೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಕ್ರೀಡೆಯಲ್ಲಿ ಭಾರತದ ಸಾಧನೆಗಳು ಕ್ರೀಡೆಯ ಬಗ್ಗೆ ಸಮಾಜದ ಬದಲಾಗುತ್ತಿರುವ ಮನೋಭಾವದ ಪ್ರತಿಬಿಂಬವಾಗಿದೆ ಎಂದರು. ಕ್ರೀಡೆಯನ್ನು ವಿರಾಮ ಚಟುವಟಿಕೆ ಎಂದು ಪರಿಗಣಿಸುತ್ತಿದ್ದ ಕಾಲವಿತ್ತು. ಇದನ್ನು ಭರವಸೆಯ ವೃತ್ತಿಜೀವನವೆಂದು ನೋಡಲಾಗಿರಲಿಲ್ಲ, ಬದಲಿಗೆ ನಗಣ್ಯ ಅವಕಾಶಗಳೊಂದಿಗೆ ವೃತ್ತಿಜೀವನದಲ್ಲಿ ಒಂದು ಅಡಚಣೆಯಾಗಿ ನೋಡಲಾಯಿತು. "ನಮ್ಮ ಅಂಗವಿಕಲ ಸಹೋದರ ಸಹೋದರಿಯರನ್ನು ದುರ್ಬಲರೆಂದು ಪರಿಗಣಿಸಲಾಗಿತ್ತು. ಆದರೆ, ಇದೆಲ್ಲವೂ ಈಗ ಬದಲಾಗಿದೆ. ನಾವು ಈ ಆಲೋಚನೆಯನ್ನು ಬದಲಾಯಿಸಿದ್ದೇವೆ ಮತ್ತು ಅವರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಿದೆವು. ಇಂದು, ಪ್ಯಾರಾ-ಸ್ಪೋರ್ಟ್ಸ್ ಇತರ ಕ್ರೀಡೆಗಳಂತೆಯೇ ಮಾನ್ಯತೆಯನ್ನು ಪಡೆಯುತ್ತಿದೆ" ಎಂದು ಶ್ರೀ ಮೋದಿ ಹೇಳಿದರು. ಪ್ಯಾರಾ-ಅಥ್ಲೀಟ್ ಗಳಿಗೆ ಸಹಾಯ ಮಾಡಲು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಪ್ಯಾರಾ ಸ್ಪೋರ್ಟ್ಸ್ ತರಬೇತಿ ಕೇಂದ್ರವನ್ನು ಸ್ಥಾಪಿಸುವುದರ ಜೊತೆಗೆ ದೇಶದಲ್ಲಿ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಅನ್ನು ಪ್ರಾರಂಭಿಸಲಾಗಿದೆ ಎಂದು ಪ್ರಧಾನಿ ಹೇಳಿದರು. "ನಮ್ಮ ಪ್ಯಾರಾ-ಅಥ್ಲೀಟ್ಗಳು ಟಾಪ್ಸ್ ಮತ್ತು ಖೇಲೋ ಇಂಡಿಯಾ ಕಾರ್ಯಕ್ರಮಗಳ ಅಡಿಯಲ್ಲಿ ಸೌಲಭ್ಯಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಈ ತಂಡದಲ್ಲಿ 50 ಕ್ರೀಡಾಪಟುಗಳು ಟಾಪ್ಸ್ ಯೋಜನೆಗಳೊಂದಿಗೆ ಮತ್ತು 16 ಕ್ರೀಡಾಪಟುಗಳು ಖೇಲೋ ಇಂಡಿಯಾದೊಂದಿಗೆ ಸಂಬಂಧ ಹೊಂದಿರುವುದು ನನಗೆ ಸಂತೋಷ ತಂದಿದೆ" ಎಂದು ಅವರು ಹೇಳಿದರು.
2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನ ಮಹತ್ವವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಈ ಕಾರ್ಯಕ್ರಮ ಭಾರತಕ್ಕೆ ಹಲವು ರೀತಿಯಲ್ಲಿ ವಿಶಿಷ್ಟವಾಗಿದೆ ಎಂದರು. "ಅನೇಕ ಪಂದ್ಯಗಳಲ್ಲಿ ನಮ್ಮ ಸ್ಲಾಟ್ಗಳು ಹೆಚ್ಚಾಗಿವೆ, ನಮ್ಮ ಭಾಗವಹಿಸುವಿಕೆಯೂ ಹೆಚ್ಚಾಗಿದೆ ಎಂದರು. " ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಭಾರತದ ಸುವರ್ಣ ಪಯಣದಲ್ಲಿ ಒಂದು ದೊಡ್ಡ ಮೈಲಿಗಲ್ಲು ಎಂಬುದನ್ನು ಸಾಬೀತುಪಡಿಸುತ್ತದೆ ಎಂಬ ವಿಶ್ವಾಸವನ್ನು ಶ್ರೀ ಮೋದಿ ವ್ಯಕ್ತಪಡಿಸಿದರು. ಕ್ರೀಡಾಳುಗಳಿಗೆ ಶುಭ ಹಾರೈಸಿದ ಪ್ರಧಾನ ಮಂತ್ರಿಯವರು, ಕ್ರೀಡಾಪಟುಗಳು ಫ್ರಾನ್ಸ್ ನಿಂದ ಹಿಂದಿರುಗಿದ ನಂತರ ಅವರನ್ನು ಮತ್ತೊಮ್ಮೆ ಭೇಟಿ ಮಾಡುವುದಾಗಿ ಹೇಳಿದರು.
*****
(Release ID: 2047215)
Visitor Counter : 35