ರಾಷ್ಟ್ರಪತಿಗಳ ಕಾರ್ಯಾಲಯ
ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 78ನೇ ಸ್ವಾತಂತ್ರ್ಯೋತ್ಸವದ ಮುನ್ನಾದಿನದಂದು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣ
Posted On:
14 AUG 2024 7:37PM by PIB Bengaluru
ನನ್ನ ಪ್ರೀತಿಯ ದೇಶಬಾಂಧವರೇ,
ನಿಮ್ಮೆಲ್ಲರಿಗೂ ಸ್ವಾತಂತ್ತ್ರ್ಯ ದಿನದ ಹೃತ್ಪೂರ್ವಕ ಶುಭಾಶಯಗಳು.
ಇಡೀ ದೇಶವೇ 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಸಿದ್ಧತೆ ನಡೆಸುತ್ತಿರುವುದನ್ನು ಕಂಡು ನನಗೆ ತುಂಬಾ ಸಂತೋಷವಾಗಿದೆ. ಈ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದನ್ನು ನೋಡಿದಾಗ, ಅದು ಕೆಂಪು ಕೋಟೆಯಲ್ಲಿರಲಿ, ರಾಜ್ಯ ರಾಜಧಾನಿಗಳಲ್ಲಾಗಲಿ ಅಥವಾ ಸ್ಥಳೀಯ ನೆರೆಹೊರೆಯಲ್ಲಿರಲಿ, ಯಾವಾಗಲೂ ನಮ್ಮ ಹೃದಯವನ್ನು ರೋಮಾಂಚನಗೊಳಿಸುತ್ತದೆ. ಇದು ನಮ್ಮ ಮಹಾನ್ ರಾಷ್ಟ್ರದ ಭಾಗವಾಗಿರುವ 140 ಕೋಟಿ ಸಹ ಭಾರತೀಯರ ಸಂತೋಷದ ಅಭಿವ್ಯಕ್ತಿಯಾಗಿದೆ. ನಾವು ನಮ್ಮ ಕುಟುಂಬಗಳೊಂದಿಗೆ ವಿವಿಧ ಹಬ್ಬಗಳನ್ನು ಆಚರಿಸುವಂತೆಯೇ, ನಾವು ನಮ್ಮ ಸಹ ನಾಗರಿಕರನ್ನು ಒಳಗೊಂಡ ನಮ್ಮ ಕುಟುಂಬಗಳೊಂದಿಗೆ ನಮ್ಮ ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ.
ಆಗಸ್ಟ್ 15 ರಂದು, ದೇಶದ ಎಲ್ಲಾ ಭಾಗಗಳಲ್ಲಿ ಮತ್ತು ವಿದೇಶಗಳಲ್ಲಿ, ಭಾರತೀಯರು ಧ್ವಜಾರೋಹಣ ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ, ದೇಶಭಕ್ತಿ ಗೀತೆಗಳನ್ನು ಹಾಡುತ್ತಾರೆ ಮತ್ತು ಸಿಹಿ ಹಂಚುತ್ತಾರೆ. ಚಿಕ್ಕ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಅವರು ನಮ್ಮ ಮಹಾನ್ ರಾಷ್ಟ್ರದ ಬಗ್ಗೆ ಮತ್ತು ಅದರ ಪ್ರಜೆಯಾಗುವ ವಿಶೇಷತೆಯ ಬಗ್ಗೆ ಮಾತನಾಡುವುದನ್ನು ಕೇಳಿದಾಗ, ಅವರ ಮಾತಿನಲ್ಲಿ ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಮಾತುಗಳು ಪ್ರತಿಧ್ವನಿಸುವುದನ್ನು ನೋಡಬಹುದು. ಆಗ ನಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರ ಕನಸುಗಳನ್ನು ಮತ್ತು ಮುಂಬರುವ ವರ್ಷಗಳಲ್ಲಿ ರಾಷ್ಟ್ರವು ತನ್ನ ಸಂಪೂರ್ಣ ವೈಭವವನ್ನು ಮರಳಿ ಪಡೆಯುವುದಕ್ಕೆ ಸಾಕ್ಷಿಯಾಗುವವರ ಆಕಾಂಕ್ಷೆಗಳನ್ನು ಸಂಪರ್ಕಿಸುವ ಸರಪಳಿಯ ಭಾಗವಾಗಿದ್ದೇವೆ ಎಂಬುದು ಅರಿವಾಗುತ್ತದೆ.
ನಾವು ಈ ಇತಿಹಾಸದ ಸರಪಳಿಯ ಕೊಂಡಿಗಳೆಂದು ಅರಿತುಕೊಳ್ಳುವುದು ನಮ್ಮನ್ನು ವಿನಮ್ರಗೊಳಿಸುತ್ತದೆ. ದೇಶವು ಪರಕೀಯರ ಆಳ್ವಿಕೆಯಲ್ಲಿದ್ದ ದಿನಗಳನ್ನು ನೆನಪಿಸಿಕೊಳ್ಳುವಂತೆ ಮಾಡುತ್ತದೆ. ದೇಶಪ್ರೇಮದ ಮತ್ತು ಕೆಚ್ಚೆದೆಯ ಚೇತನಗಳು ಅಪಾರ ಅಪಾಯಗಳನ್ನು ತೆಗೆದುಕೊಂಡು ಸರ್ವೋಚ್ಚ ತ್ಯಾಗ ಮಾಡಿದರು. ಅವರ ಸ್ಮರಣೆಗೆ ನಮ್ಮ ನಮನಗಳು. ಅವರ ಅವಿರತ ಶ್ರಮದಿಂದಾಗಿಯೇ ಭಾರತದ ಚೈತನ್ಯವು ಶತಮಾನಗಳ ಆಲಸ್ಯದಿಂದ ಎಚ್ಚರವಾಯಿತು. ವಿವಿಧ ಸಂಪ್ರದಾಯಗಳು ಮತ್ತು ಮೌಲ್ಯಗಳು ಹಲವಾರು ತಲೆಮಾರುಗಳ ಮಹಾನ್ ನಾಯಕರಲ್ಲಿ ಹೊಸ ಅಭಿವ್ಯಕ್ತಿಯನ್ನು ಕಂಡುಕೊಂಡವು. ಸಂಪ್ರದಾಯಗಳ ವೈವಿಧ್ಯತೆ ಮತ್ತು ಅವುಗಳ ಅಭಿವ್ಯಕ್ತಿಗಳನ್ನು ಒಂದುಗೂಡಿಸಿದವರು ನಮ್ಮ ರಾಷ್ಟ್ರಪಿತ ಹಾಗೂ ಧೃವತಾರೆ ಮಹಾತ್ಮಾ ಗಾಂಧಿ.
ಸರ್ದಾರ್ ಪಟೇಲ್, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮತ್ತು ಇನ್ನೂ ಅನೇಕ ಮಹಾನ್ ನಾಯಕರು ಜೊತೆಗಿದ್ದರು. ಇದು ರಾಷ್ಟ್ರವ್ಯಾಪಿ ಚಳವಳಿಯಾಗಿದ್ದು, ಇದರಲ್ಲಿ ಎಲ್ಲಾ ಸಮುದಾಯಗಳು ಭಾಗವಹಿಸಿದ್ದವು. ಬುಡಕಟ್ಟು ಜನಾಂಗದವರಲ್ಲಿ, ತಿಲ್ಕಾ ಮಾಂಝಿ, ಬಿರ್ಸಾ ಮುಂಡಾ, ಲಕ್ಷ್ಮಣ್ ನಾಯ್ಕ್ ಮತ್ತು ಫುಲೋ-ಜಾನೋ ಅವರಂತಹ ಅನೇಕರು ಇದ್ದರು. ಅವರ ತ್ಯಾಗವನ್ನು ಈಗ ಪ್ರಶಂಸಿಸಲಾಗುತ್ತಿದೆ. ನಾವು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಬುಡಕಟ್ಟು ಗೌರವ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿದ್ದೇವೆ. ಮುಂದಿನ ವರ್ಷ ಅವರ 150ನೇ ಜನ್ಮ ವಾರ್ಷಿಕೋತ್ಸವದ ಆಚರಣೆಯು ರಾಷ್ಟ್ರೀಯ ಪುನರುಜ್ಜೀವನಕ್ಕೆ ಅವರ ಕೊಡುಗೆಯನ್ನು ಮತ್ತಷ್ಟು ಗೌರವಿಸುವ ಅವಕಾಶ ಲಭಿಸಲಿದೆ.
ನನ್ನ ಪ್ರೀತಿಯ ಸಹ ನಾಗರಿಕರೇ,
ಇಂದು, ಆಗಸ್ಟ್ 14 ರಂದು, ದೇಶವು ವಿಭಜನೆಯ ಭೀಕರತೆಯನ್ನು ನೆನಪಿಸುವ ದಿನವಾದ ವಿಭಜನ್ ವಿಭಿಷಿಕಾ ಸ್ಮೃತಿ ದಿವಸ್ ಅನ್ನು ಆಚರಿಸುತ್ತಿದೆ. ಮಹಾನ್ ರಾಷ್ಟ್ರವು ವಿಭಜನೆಯಾಗಿ, ಲಕ್ಷಾಂತರ ಜನರು ಬಲವಂತವಾಗಿ ವಲಸೆ ಹೋಗಬೇಕಾಯಿತು, ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು. ನಾವು ಸ್ವಾತಂತ್ರ್ಯ ದಿನವನ್ನು ಆಚರಿಸುವ ಒಂದು ದಿನ ಮೊದಲು, ನಾವು ಆ ಅಸಾಧಾರಣ ಮಾನವ ದುರಂತವನ್ನು ನೆನಪಿಸಿಕೊಳ್ಳುತ್ತೇವೆ ಮತ್ತು ಛಿದ್ರಗೊಂಡ ಕುಟುಂಬಗಳೊಂದಿಗೆ ನಿಲ್ಲುತ್ತೇವೆ.
ನಾವು ಸಂವಿಧಾನದ 75ನೇ ವರ್ಷವನ್ನು ಆಚರಿಸುತ್ತಿದ್ದೇವೆ. ನೂತನ ಸ್ವತಂತ್ರ ರಾಷ್ಟ್ರದ ಪ್ರಯಾಣವು ಅಡೆತಡೆಗಳಿಂದ ಮುಕ್ತವಾಗಿರಲಿಲ್ಲ. ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಸಾಂವಿಧಾನಿಕ ಆದರ್ಶಗಳ ಮೇಲೆ ದೃಢವಾಗಿ ನಿಂತಿರುವ ನಾವು ಜಾಗತಿಕ ವೇದಿಕೆಯಲ್ಲಿ ಭಾರತವು ತನ್ನ ಸೂಕ್ತ ಸ್ಥಾನವನ್ನು ಮರಳಿ ಪಡೆಯಲು ಅನುವು ಮಾಡಿಕೊಡುವ ಉದ್ದೇಶವನ್ನು ಹೊಂದಿದ್ದೇವೆ.
ಈ ವರ್ಷ ನಮ್ಮ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದವು, ಇದರಲ್ಲಿ ಅರ್ಹ ಮತದಾರರ ಸಂಖ್ಯೆ ಸುಮಾರು 97 ಕೋಟಿಯಷ್ಟಿತ್ತು. ಇದೊಂದು ಐತಿಹಾಸಿಕ ದಾಖಲೆಯಾಗಿದ್ದು, ಇದು ಮನುಕುಲ ಇದುವರೆಗೆ ಕಂಡಿರುವ ಅತಿದೊಡ್ಡ ಚುನಾವಣಾ ಕಸರತ್ತಾಗಿತ್ತು. ಇಂತಹ ಬೃಹತ್ ಚುನಾವಣೆಯನ್ನು ಸುಗಮವಾಗಿ ಮತ್ತು ದೋಷರಹಿತವಾಗಿ ನಡೆಸಿದ್ದಕ್ಕಾಗಿ ಭಾರತದ ಚುನಾವಣಾ ಆಯೋಗವನ್ನು ಅಭಿನಂದಿಸಬೇಕು. ಬಿಸಿಲ ಧಗೆಯನ್ನು ಎದುರಿಸಿ ಮತದಾರರಿಗೆ ಸಹಾಯ ಮಾಡಿದ ಎಲ್ಲಾ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಇಷ್ಟು ದೊಡ್ಡ ಸಂಖ್ಯೆಯ ಜನರು ತಮ್ಮ ಹಕ್ಕು ಚಲಾಯಿಸಿದ್ದು, ಪ್ರಜಾಪ್ರಭುತ್ವದ ಕಲ್ಪನೆಯನ್ನು ಬಲಗೊಳಿಸುವ ಮತವಾಗಿತ್ತು. ಭಾರತದ ಚುನಾವಣೆಗಳ ಯಶಸ್ವಿ ಆಯೋಜನೆಯು ಪ್ರಪಂಚದಾದ್ಯಂತದ ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಬಲಪಡಿಸುತ್ತದೆ.
ಆತ್ಮೀಯ ಸಹ ನಾಗರಿಕರೇ,
2021 ರಿಂದ 2024 ರವರೆಗೆ, ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ, ವಾರ್ಷಿಕ ಸರಾಸರಿ ಬೆಳವಣಿಗೆ ದರ 8 ಪ್ರತಿಶತ. ಇದು ಜನರ ಕೈಗೆ ಹೆಚ್ಚು ಹಣವನ್ನು ನೀಡಿರುವುದಲ್ಲದೆ, ಬಡತನ ರೇಖೆಗಿಂತ ಕೆಳಗಿರುವ ಜನರ ಸಂಖ್ಯೆಯನ್ನು ತೀವ್ರವಾಗಿ ಕಡಿಮೆ ಮಾಡಿದೆ. ಬಡತನದಿಂದ ಬಳಲುತ್ತಿರುವವರಿಗೆ ಸಹಾಯಹಸ್ತ ನೀಡುವುದು ಮಾತ್ರವಲ್ಲದೆ, ಅವರನ್ನು ಅದರಿಂದ ಹೊರತರಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಉದಾಹರಣೆಗೆ, ಕೋವಿಡ್-19 ರ ಆರಂಭಿಕ ಹಂತದಲ್ಲಿ ಪ್ರಾರಂಭಿಸಲಾದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯು ಸುಮಾರು 80 ಕೋಟಿ ಜನರಿಗೆ ಉಚಿತ ಪಡಿತರ ನೀಡುವುದನ್ನು ಮುಂದುವರೆಸಿದೆ, ಇದು ಇತ್ತೀಚೆಗೆ ಬಡತನದಿಂದ ಹೊರಬಂದವರು ಮತ್ತೆ ಬಡತನಕ್ಕೆ ಮರಳದಂತೆ ಖಚಿತಪಡಿಸಿದೆ.
ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿರುವುದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಮತ್ತು ನಾವು ಶೀಘ್ರದಲ್ಲೇ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲು ಸಜ್ಜಾಗಿದ್ದೇವೆ. ರೈತರು ಮತ್ತು ಕಾರ್ಮಿಕರ ದಣಿವರಿಯದ ಪರಿಶ್ರಮ, ಯೋಜಕರು ಮತ್ತು ಸಂಪತ್ತು ಸೃಷ್ಟಿಕರ್ತರ ದೂರದೃಷ್ಟಿ ಮತ್ತು ದೂರದರ್ಶಿ ನಾಯಕತ್ವದಿಂದ ಮಾತ್ರ ಇದು ಸಾಧ್ಯವಾಗಿದೆ.
ನಮ್ಮ ಅನ್ನದಾತರಾದ ರೈತರು ನಿರೀಕ್ಷೆಗೂ ಮೀರಿ ಕೃಷಿ ಉತ್ಪಾದನೆಯಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಭಾರತವನ್ನು ಕೃಷಿಯಲ್ಲಿ ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಮತ್ತು ನಮ್ಮ ಜನರಿಗೆ ಆಹಾರವನ್ನು ಒದಗಿಸುವಲ್ಲಿ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮೂಲಸೌಕರ್ಯವು ಉತ್ತೇಜನವನ್ನು ಪಡೆದಿದೆ. ಕಾರ್ಯತಂತ್ರದ ಯೋಜನೆ ಮತ್ತು ಪರಿಣಾಮಕಾರಿ ಸಂಸ್ಥೆಗಳು ರಸ್ತೆ ಮತ್ತು ಹೆದ್ದಾರಿಗಳು, ರೈಲ್ವೆ ಮತ್ತು ಬಂದರುಗಳ ಜಾಲವನ್ನು ವಿಸ್ತರಿಸಲು ಸಹಾಯ ಮಾಡಿವೆ. ಭವಿಷ್ಯದ ತಂತ್ರಜ್ಞಾನದ ಮಹಾನ್ ಸಾಮರ್ಥ್ಯವನ್ನು ಗುರುತಿಸಿ, ಸರ್ಕಾರವು ಸೆಮಿಕಂಡಕ್ಟರ್ ಮತ್ತು ಕೃತಕ ಬುದ್ಧಿಮತ್ತೆಯಂತಹ ಹಲವಾರು ಕ್ಷೇತ್ರಗಳಿಗೆ ಹೆಚ್ಚಿನ ಉತ್ತೇಜನ ನೀಡಿದೆ, ಹಾಗೆಯೇ ಸ್ಟಾರ್ಟ್‌ಅಪ್‌ಗಳಿಗೆ ಅವುಗಳ ಬೆಳವಣಿಗೆಯನ್ನು ವೇಗಗೊಳಿಸುವ ಸೂಕ್ತ ಪೂರಕ ವ್ಯವಸ್ಥೆಯನ್ನು ಸಹ ನಿರ್ಮಿಸಿದೆ. ಇದು ಭಾರತವನ್ನು ಇನ್ನಷ್ಟು ಆಕರ್ಷಕ ಹೂಡಿಕೆಯ ತಾಣವನ್ನಾಗಿ ಮಾಡಿದೆ. ಹೆಚ್ಚಿನ ಪಾರದರ್ಶಕತೆಯೊಂದಿಗೆ, ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಈ ಎಲ್ಲಾ ಅಂಶಗಳು ಮುಂದಿನ ತಲೆಮಾರಿನ ಆರ್ಥಿಕ ಸುಧಾರಣೆಗಳು ಮತ್ತು ಆರ್ಥಿಕ ಬೆಳವಣಿಗೆಗೆ ವೇದಿಕೆಯನ್ನು ಸಿದ್ಧಪಡಿಸಿದ್ದು ಅದು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ತರುತ್ತದೆ.
ಈ ತ್ವರಿತ ಆದರೆ ಸಮಾನ ಪ್ರಗತಿಯು ಜಾಗತಿಕ ವಿದ್ಯಮಾನಗಳಲ್ಲಿ ಭಾರತಕ್ಕೆ ಉನ್ನತ ಸ್ಥಾನವನ್ನು ನೀಡಿದೆ. ಜಿ-20 ಅಧ್ಯಕ್ಷ ಸ್ಥಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಭಾರತವು ಜಾಗತಿಕ ದಕ್ಷಿಣದ ಧ್ವನಿಯಾಗಿ ತನ್ನ ಪಾತ್ರವನ್ನು ಬಲಪಡಿಸಿಕೊಂಡಿದೆ. ವಿಶ್ವ ಶಾಂತಿ ಮತ್ತು ಸಮೃದ್ಧಿಯ ವ್ಯಾಪ್ತಿಯನ್ನು ವಿಸ್ತರಿಸಲು ಭಾರತವು ತನ್ನ ಪ್ರಭಾವಶಾಲಿ ಸ್ಥಾನವನ್ನು ಬಳಸಲು ಬಯಸುತ್ತದೆ.
ನನ್ನ ಪ್ರೀತಿಯ ದೇಶಬಾಂಧವರೇ,
ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತುಗಳನ್ನು ನೆನಪಿಸಿಕೊಳ್ಳಬೇಕು. ಅವರು ಸರಿಯಾಗಿಯೇ ಹೇಳಿದ್ದಾರೆ ಮತ್ತು ನಾನು ಅದನ್ನು ಇಲ್ಲಿ ಉಲ್ಲೇಖಿಸುತ್ತೇನೆ, “ನಾವು ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾಪ್ರಭುತ್ವವನ್ನಾಗಿ ಮಾಡಬೇಕು. ಸಾಮಾಜಿಕ ಪ್ರಜಾಪ್ರಭುತ್ವವು ತಳಹದಿಯಾಗದ ಹೊರತು ರಾಜಕೀಯ ಪ್ರಜಾಪ್ರಭುತ್ವವು ಉಳಿಯುವುದಿಲ್ಲ.” ರಾಜಕೀಯ ಪ್ರಜಾಪ್ರಭುತ್ವದ ಸ್ಥಿರ ಪ್ರಗತಿಯು ಸಾಮಾಜಿಕ ಪ್ರಜಾಪ್ರಭುತ್ವದ ಬಲವರ್ಧನೆಯ ಪ್ರಗತಿಗೆ ಸಾಕ್ಷಿಯಾಗಿದೆ. ಒಳಗೊಳ್ಳುವಿಕೆಯ ಮನೋಭಾವವು ನಮ್ಮ ಸಾಮಾಜಿಕ ಜೀವನದ ಪ್ರತಿಯೊಂದು ಅಂಶವನ್ನು ವ್ಯಾಪಿಸುತ್ತದೆ. ನಾವು ನಮ್ಮ ವೈವಿಧ್ಯತೆ ಮತ್ತು ಬಹುತ್ವದೊಂದಿಗೆ ಒಂದು ಸುಸಂಘಟಿತ ರಾಷ್ಟ್ರವಾಗಿ ಒಟ್ಟಿಗೆ ಸಾಗುತ್ತೇವೆ. ಒಳಗೊಳ್ಳುವಿಕೆಯ ಸಾಧನವಾಗಿ ಸಕಾರಾತ್ಮಕ ಕ್ರಿಯೆಯನ್ನು ಬಲಪಡಿಸಬೇಕು. ನಮ್ಮಂತಹ ವಿಶಾಲವಾದ ದೇಶದಲ್ಲಿ, ಸಾಮಾಜಿಕ ಶ್ರೇಣಿಗಳ ಆಧಾರದ ಮೇಲೆ ತಾರತಮ್ಯವನ್ನು ಹುಟ್ಟುಹಾಕುವ ಪ್ರವೃತ್ತಿಗಳನ್ನು ತಿರಸ್ಕರಿಸಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ.
ಸಾಮಾಜಿಕ ನ್ಯಾಯವು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಮತ್ತು ಇದು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಸಮಾಜದ ಇತರ ವಂಚಿತ ವರ್ಗಗಳ ಕಲ್ಯಾಣಕ್ಕಾಗಿ ಹಲವಾರು ಅಭೂತಪೂರ್ವ ಉಪಕ್ರಮಗಳನ್ನು ತೆಗೆದುಕೊಂಡಿದೆ. ಉದಾಹರಣೆಗೆ, ಪ್ರಧಾನ ಮಂತ್ರಿ ಸಾಮಾಜಿಕ್ ಉತ್ಥಾನ್ ಏವಂ ರೋಜ್ಗಾರ್ ಅಧಾರಿತ್ ಜನಕಲ್ಯಾಣ್, ಅಂದರೆ, PM-SURAJ ಯೋಜನೆಯು ವಂಚಿತ ಸಮುದಾಯಗಳ ಜನರಿಗೆ ನೇರ ಹಣಕಾಸಿನ ನೆರವು ನೀಡುವ ಗುರಿಯನ್ನು ಹೊಂದಿದೆ. ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಅಥವಾ PM-JANMAN ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪುಗಳ ಅಂದರೆ, PVTGಯ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು ನಿರ್ಣಾಯಕ ಮಧ್ಯಸ್ಥಿಕೆಗಳಿಗಾಗಿ ಸಾಮೂಹಿಕ ಅಭಿಯಾನದ ರೂಪವನ್ನು ಪಡೆದುಕೊಂಡಿದೆ, ಯಾಂತ್ರಿಕೃತ ನೈರ್ಮಲ್ಯ ಪರಿಸರ ವ್ಯವಸ್ಥೆಗಾಗಿ ರಾಷ್ಟ್ರೀಯ ಕ್ರಮ ಅಥವಾ ನಮಸ್ತೆ ಯೋಜನೆಯು ಯಾವುದೇ ನೈರ್ಮಲ್ಯ ಕಾರ್ಮಿಕರು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ಅಪಾಯಕಾರಿ ಕೆಲಸವನ್ನು ಕೈಯಾರೆ ಮಾಡುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.
'ನ್ಯಾಯ' ಎಂಬ ಪದವನ್ನು ಅದರ ವಿಶಾಲ ಅರ್ಥದಲ್ಲಿ ತೆಗೆದುಕೊಂಡರೆ, ಅದು ಅನೇಕ ಸಾಮಾಜಿಕ ಅಂಶಗಳನ್ನು ಒಳಗೊಂಡಿದೆ. ಇವುಗಳಲ್ಲಿ ನಿರ್ದಿಷ್ಟವಾಗಿ ಲಿಂಗ ನ್ಯಾಯ ಮತ್ತು ಹವಾಮಾನ ನ್ಯಾಯ ಎಂಬ ಎರಡಕ್ಕೆ ನಾನು ಒತ್ತು ನೀಡಲು ಬಯಸುತ್ತೇನೆ.
ನಮ್ಮ ಸಮಾಜದಲ್ಲಿ, ಮಹಿಳೆಯನ್ನು ಸಮಾನವಾಗಿ ಪರಿಗಣಿಸಿರುವುದು ಮಾತ್ರವಲ್ಲ, ಅದಕ್ಕಿಂತಲೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಆದಾಗ್ಯೂ, ಮಹಿಳೆಯರು ಸಾಂಪ್ರದಾಯಿಕ ಪೂರ್ವಾಗ್ರಹಗಳಿಂದ ಬಳಲುತ್ತಿದ್ದಾರೆ. ಆದರೆ ಸರ್ಕಾರವು ಮಹಿಳಾ ಕಲ್ಯಾಣ ಮತ್ತು ಮಹಿಳಾ ಸಬಲೀಕರಣಕ್ಕೆ ಸಮಾನ ಪ್ರಾಮುಖ್ಯತೆಯನ್ನು ನೀಡಿರುವುದು ನನಗೆ ಸಂತೋಷ ನೀಡಿದೆ. ಕಳೆದ ದಶಕದಲ್ಲಿ ಈ ಉದ್ದೇಶಕ್ಕಾಗಿ ಬಜೆಟ್ ಹಂಚಿಕೆ ಮೂರು ಪಟ್ಟು ಹೆಚ್ಚಾಗಿದೆ. ಕಾರ್ಮಿಕ ಶಕ್ತಿಯಲ್ಲಿ ಅವರ ಭಾಗವಹಿಸುವಿಕೆ ಹೆಚ್ಚಾಗಿದೆ. ಈ ವಿಷಯದಲ್ಲಿ ಅತ್ಯಂತ ಉತ್ತೇಜಕ ಬೆಳವಣಿಗೆಯೆಂದರೆ ಜನನ ಸಂದರ್ಭದ ಲಿಂಗ ಅನುಪಾತದಲ್ಲಿ ಗಮನಾರ್ಹ ಸುಧಾರಣೆಯಾಗಿದೆ. ಮಹಿಳೆಯರನ್ನು ಕೇಂದ್ರವಾಗಿಟ್ಟುಕೊಂಡು ವಿವಿಧ ವಿಶೇಷ ಸರ್ಕಾರಿ ಯೋಜನೆಗಳನ್ನು ಸಹ ವಿನ್ಯಾಸಗೊಳಿಸಲಾಗಿದೆ. ನಾರಿ ಶಕ್ತಿ ವಂದನಾ ಅಧಿನಿಯಮವು ಮಹಿಳೆಯರ ನಿಜವಾದ ಸಬಲೀಕರಣವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ.
ಹವಾಮಾನ ಬದಲಾವಣೆಯು ವಾಸ್ತವವಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಮ್ಮ ಆರ್ಥಿಕ ಮಾದರಿಯನ್ನು ಬದಲಾಯಿಸುವುದು ಹೆಚ್ಚು ಸವಾಲಿನ ಸಂಗತಿಯಾಗಿದೆ. ಆದರೂ, ನಾವು ಈಗಾಗಲೇ ಆ ದಿಕ್ಕಿನಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಗತಿ ಸಾಧಿಸಿದ್ದೇವೆ. ಜಾಗತಿಕ ತಾಪಮಾನದ ಕೆಟ್ಟ ಪರಿಣಾಮಗಳಿಂದ ಗ್ರಹವನ್ನು ರಕ್ಷಿಸಲು ಮಾನವಕುಲದ ಹೋರಾಟದಲ್ಲಿ ಭಾರತವು ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಷಯವಾಗಿದೆ. ನಿಮ್ಮ ಜೀವನಶೈಲಿಯಲ್ಲಿ ಸಣ್ಣ ಆದರೆ ಪರಿಣಾಮಕಾರಿ ಬದಲಾವಣೆಗಳನ್ನು ಮಾಡಲು ಮತ್ತು ಹವಾಮಾನ ಬದಲಾವಣೆಯ ಸವಾಲನ್ನು ನಿಭಾಯಿಸಲು ಕೊಡುಗೆ ನೀಡುವಂತೆ ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ.
ನ್ಯಾಯದ ಬಗ್ಗೆ ಹೇಳುವುದಾದರೆ, ಈ ವರ್ಷ ಜುಲೈನಿಂದ ಭಾರತೀಯ ನ್ಯಾಯ ಸಂಹಿತೆಯನ್ನು ಅಳವಡಿಸಿಕೊಳ್ಳುವ ಮೂಲಕ ನಾವು ವಸಾಹತುಶಾಹಿ ಅವಧಿಯ ಮತ್ತೊಂದು ಕುರುಹನ್ನು ತೆಗೆದುಹಾಕಿದ್ದೇವೆ ಎಂದು ನಾನು ಇಲ್ಲಿ ಹೇಳಲು ಬಯಸುತ್ತೇನೆ. ಹೊಸ ಸಂಹಿತೆಯು ಕೇವಲ ಶಿಕ್ಷೆಯ ಮೇಲೆ ಕೇಂದ್ರೀಕರಿಸುವ ಬದಲು ಅಪರಾಧದ ಸಂತ್ರಸ್ತರಿಗೆ ನ್ಯಾಯವನ್ನು ಖಾತ್ರಿಪಡಿಸುವುದನ್ನು ಆಧರಿಸಿದೆ. ಈ ಬದಲಾವಣೆಯನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಸಲ್ಲಿಸುವ ಗೌರವವಾಗಿ ನಾನು ನೋಡುತ್ತೇನೆ.
ನನ್ನ ಪ್ರೀತಿಯ ಸಹ ನಾಗರಿಕರೇ,
ನಮ್ಮ ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ಉಳಿದಿರುವ ಕಾಲು ಶತಮಾನದ ಈಗಿನ ಅಮೃತ ಕಾಲವನ್ನು ಇಂದಿನ ಯುವಕರು ರೂಪಿಸಲಿದ್ದಾರೆ. ಅವರ ಶಕ್ತಿ ಮತ್ತು ಉತ್ಸಾಹವೇ ರಾಷ್ಟ್ರವು ಹೊಸ ಎತ್ತರಕ್ಕೆ ತಲುಪಲು ಸಹಾಯ ಮಾಡುತ್ತದೆ. ಯುವ ಮನಸ್ಸುಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸಂಪ್ರದಾಯಗಳು ಮತ್ತು ಸಮಕಾಲೀನ ಜ್ಞಾನವನ್ನು ಉತ್ತಮವಾಗಿ ಬಳಸಿಕೊಳ್ಳುವ ಹೊಸ ಮನಸ್ಥಿತಿಯನ್ನು ಸೃಷ್ಟಿಸುವುದು ನಮ್ಮ ಆದ್ಯತೆಯಾಗಿದೆ. ಈ ಉದ್ದೇಶದೊಂದಿಗೆ, 2020 ರಿಂದ ಪ್ರಾರಂಭಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿಯು ಈಗಾಗಲೇ ಫಲಿತಾಂಶಗಳನ್ನು ತೋರಿಸಲು ಪ್ರಾರಂಭಿಸಿದೆ.
ಯುವಜನರ ಪ್ರತಿಭೆಯನ್ನು ಬಳಸಿಕೊಳ್ಳಲು, ಅವರಿಗೆ ಕೌಶಲ್ಯ, ಉದ್ಯೋಗ ಮತ್ತು ಇತರ ಅವಕಾಶಗಳನ್ನು ಕಲ್ಪಿಸಲು ಸರ್ಕಾರವು ಉಪಕ್ರಮಗಳನ್ನು ಕೈಗೊಂಡಿದೆ. ಉದ್ಯೋಗ ಮತ್ತು ಕೌಶಲ್ಯಕ್ಕಾಗಿ ಪ್ರಧಾನ ಮಂತ್ರಿಯವರ ಐದು ಯೋಜನೆಗಳ ಪ್ಯಾಕೇಜ್ ಐದು ವರ್ಷಗಳಲ್ಲಿ 4.1 ಕೋಟಿ ಯುವಜನರಿಗೆ ಪ್ರಯೋಜನವನ್ನು ನೀಡುತ್ತದೆ. ಸರ್ಕಾರದ ಹೊಸ ಉಪಕ್ರಮದ ಅಡಿಯಲ್ಲಿ, ಐದು ವರ್ಷಗಳಲ್ಲಿ ಒಂದು ಕೋಟಿ ಯುವಕರು ಪ್ರಮುಖ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಮಾಡಲಿದ್ದಾರೆ. ಇವೆಲ್ಲವೂ ವಿಕಸಿತ ಭಾರತ ನಿರ್ಮಾಣಕ್ಕೆ ಅಡಿಪಾಯದ ಕೊಡುಗೆಯಾಗಲಿದೆ.
ಭಾರತದಲ್ಲಿ ನಾವು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜ್ಞಾನ ಮತ್ತು ಮಾನವ ಪ್ರಗತಿಯ ಅನ್ವೇಷಣೆಯ ಸಾಧನವಾಗಿ ನೋಡುತ್ತೇವೆ. ಉದಾಹರಣೆಗೆ, ಡಿಜಿಟಲ್ ಅಪ್ಲಿಕೇಶನ್ ಕ್ಷೇತ್ರದಲ್ಲಿನ ನಮ್ಮ ಸಾಧನೆಗಳನ್ನು ಇತರ ದೇಶಗಳಲ್ಲಿ ಮಾದರಿಗಳಾಗಿ ಬಳಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ, ಭಾರತವು ಬಾಹ್ಯಾಕಾಶ ಪರಿಶೋಧನೆಯಲ್ಲಿ ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ. ನಿಮ್ಮೆಲ್ಲರಂತೆಯೇ, ಮುಂದಿನ ವರ್ಷ ಗಗನಯಾನ ಮಿಷನ್ ನ ಉಡಾವಣೆಗೆ ನಾನು ಸಹ ಕುತೂಹಲದಿಂದ ಕಾಯುತ್ತಿದ್ದೇನೆ, ಇದು ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ನೌಕೆಯಲ್ಲಿ ಭಾರತೀಯ ಗಗನಯಾತ್ರಿಗಳ ತಂಡವನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುತ್ತದೆ.
ಕಳೆದ ದಶಕದಲ್ಲಿ ದೇಶವು ಉತ್ತಮ ಪ್ರಗತಿಯನ್ನು ಸಾಧಿಸಿದ ಮತ್ತೊಂದು ಕ್ಷೇತ್ರವೆಂದರೆ ಕ್ರೀಡಾ ಜಗತ್ತು. ಸರ್ಕಾರವು ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿಗೆ ಸೂಕ್ತ ಆದ್ಯತೆ ನೀಡಿದೆ ಮತ್ತು ಅದು ಫಲಿತಾಂಶಗಳನ್ನು ತೋರಿಸುತ್ತಿದೆ. ಇತ್ತೀಚಿಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ತಂಡವು ತನ್ನ ಅತ್ಯುತ್ತಮ ಪ್ರಯತ್ನಗಳನ್ನು ಮಾಡಿದೆ. ಆಟಗಾರರ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ನಾನು ಪ್ರಶಂಸಿಸುತ್ತೇನೆ. ಅವರು ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಕ್ರಿಕೆಟ್ ನಲ್ಲಿ, ಭಾರತವು ಟಿ-20 ವಿಶ್ವಕಪ್ ಅನ್ನು ಗೆದ್ದುಕೊಂಡಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಚದುರಂಗ ಆಟದಲ್ಲಿ ನಮ್ಮ ಸಾಧಕರು ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಇದು ಚೆಸ್ ನಲ್ಲಿ ಭಾರತೀಯ ಯುಗದ ಆರಂಭ ಎಂದು ಹೇಳಲಾಗುತ್ತಿದೆ. ಬ್ಯಾಡ್ಮಿಂಟನ್, ಟೆನಿಸ್ ಮತ್ತು ಇತರ ಕ್ರೀಡೆಗಳಲ್ಲಿ ನಮ್ಮ ಯುವಕರು ವಿಶ್ವ ವೇದಿಕೆಯಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅವರ ಸಾಧನೆ ಮುಂದಿನ ಪೀಳಿಗೆಗೂ ಪ್ರೇರಣೆಯಾಗಿದೆ.
ನನ್ನ ಪ್ರೀತಿಯ ಸಹ ನಾಗರಿಕರೇ,
ಇಡೀ ರಾಷ್ಟ್ರವು ಸ್ವಾತಂತ್ರ್ಯ ದಿನವನ್ನು ಆಚರಿಸಲು ಸಜ್ಜಾಗುತ್ತಿರುವಾಗ, ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ, ವಿಶೇಷವಾಗಿ ನಮ್ಮ ಸ್ವಾತಂತ್ರ್ಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಡುವ ನಮ್ಮ ಸಶಸ್ತ್ರ ಪಡೆಗಳ ವೀರ ಯೋಧರನ್ನು ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ. ದೇಶಾದ್ಯಂತ ಕಟ್ಟೆಚ್ಚರ ವಹಿಸುತ್ತಿರುವ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ. ನ್ಯಾಯಾಂಗ ಮತ್ತು ನಾಗರಿಕ ಸೇವೆಗಳ ಸದಸ್ಯರು ಮತ್ತು ವಿದೇಶದಲ್ಲಿರುವ ನಮ್ಮ ರಾಯಭಾರ ಅಧಿಕಾರಿಗಳಿಗೂ ನನ್ನ ಅಭಿನಂದನೆಗಳು. ನಮ್ಮ ವಲಸಿಗ ಸಮುದಾಯಕ್ಕೂ ನನ್ನ ಶುಭಾಶಯಗಳು: ನೀವು ನಮ್ಮ ಕುಟುಂಬದ ಭಾಗವಾಗಿದ್ದೀರಿ, ನಿಮ್ಮ ಸಾಧನೆಗಳಿಂದ ನಮಗೆ ಹೆಮ್ಮೆಯಾಗುತ್ತಿದೆ. ನೀವು ಭಾರತದ ಸಂಸ್ಕೃತಿ ಮತ್ತು ಪರಂಪರೆಯ ಮಹಾನ್ ಪ್ರತಿನಿಧಿಗಳು.
ಮತ್ತೊಮ್ಮೆ, ನಾನು ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರುತ್ತೇನೆ!
ಧನ್ಯವಾದಗಳು.
ಜೈ ಹಿಂದ್!
ಜೈ ಭಾರತ್!
(Release ID: 2045431)
Visitor Counter : 113
Read this release in:
Marathi
,
Tamil
,
Telugu
,
Malayalam
,
Bengali
,
Odia
,
English
,
Khasi
,
Urdu
,
Hindi
,
Hindi_MP
,
Nepali
,
Manipuri
,
Assamese
,
Punjabi
,
Gujarati