ಸಂಪುಟ
azadi ka amrit mahotsav

ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ 2.0 ಯೋಜನೆಗೆ ಸಂಪುಟದ ಅನುಮೋದನೆ


ನಗರ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ 1 ಕೋಟಿ ಮನೆಗಳನ್ನು ನಿರ್ಮಿಸಲಾಗುವುದು

ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ 2.0 ಅಡಿಯಲ್ಲಿ 10 ಲಕ್ಷ ಕೋಟಿ ರೂ.ಹೂಡಿಕೆ ಮತ್ತು 2.30 ಲಕ್ಷ ಕೋಟಿ ರೂ. ಸರ್ಕಾರದ ಸಹಾಯಧನ

Posted On: 09 AUG 2024 10:21PM by PIB Bengaluru

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಇಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (ಪಿಎಂಎವೈ-ನಗರ) 2.0 ಕ್ಕೆ ಅನುಮೋದನೆ ನೀಡಿತು. ಇದರ ಅಡಿಯಲ್ಲಿ ನಗರ ಬಡ ಮತ್ತು ಮಧ್ಯಮ ವರ್ಗದ 1 ಕೋಟಿ ಕುಟುಂಬಗಳಿಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮೂಲಕ 5 ವರ್ಷಗಳಲ್ಲಿ ನಗರ ಪ್ರದೇಶಗಳಲ್ಲಿ ಕೈಗೆಟುಕುವ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಲು, ಖರೀದಿಸಲು ಅಥವಾ ಬಾಡಿಗೆಗಾಗಿ ಆರ್ಥಿಕ ನೆರವು ನೀಡಲಾಗುತ್ತದೆ. ಯೋಜನೆಯಡಿ 2.30 ಲಕ್ಷ ಕೋಟಿ ರೂ. ಸರ್ಕಾರದ ನೆರವು ನೀಡಲಾಗುವುದು.

ಪಿಎಂಎವೈ-ನಗರ ಯೋಜನೆಯು ನಗರ ಪ್ರದೇಶಗಳಲ್ಲಿನ ಎಲ್ಲಾ ಅರ್ಹ ಫಲಾನುಭವಿಗಳಿಗೆ ಸರ್ವಋತು ಪಕ್ಕಾ ಮನೆಗಳನ್ನು ಒದಗಿಸಲು ಭಾರತ ಸರ್ಕಾರವು ಜಾರಿಗೊಳಿಸುತ್ತಿರುವ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಪಿಎಂಎವೈ-ನಗರ ಅಡಿಯಲ್ಲಿ, 1.18 ಕೋಟಿ ಮನೆಗಳನ್ನು ಮಂಜೂರು ಮಾಡಲಾಗಿದ್ದು, 85.5 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಈಗಾಗಲೇ ನಿರ್ಮಿಸಿ ಫಲಾನುಭವಿಗಳಿಗೆ ನೀಡಲಾಗಿದೆ.

ಗೌರವಾನ್ವಿತ ಪ್ರಧಾನ ಮಂತ್ರಿಯವರು 2023 ರ ಆಗಸ್ಟ್ 15 ರಂದು ಕೆಂಪು ಕೋಟೆಯ ಆವರಣದಿಂದ ಮಾಡಿದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ದುರ್ಬಲ ವರ್ಗ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಮನೆ ಮಾಲೀಕತ್ವವನ್ನು ಒದಗಿಸಲು ಭಾರತ ಸರ್ಕಾರವು ಮುಂಬರುವ ವರ್ಷಗಳಲ್ಲಿ ಹೊಸ ಯೋಜನೆಯನ್ನು ತರಲಿದೆ ಎಂದು ಘೋಷಿಸಿದ್ದರು.

10 ಜೂನ್ 2024 ರಂದು ಕೇಂದ್ರ ಸಚಿವ ಸಂಪುಟವು ಅರ್ಹ ಕುಟುಂಬಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದ ಉಂಟಾಗುವ ವಸತಿ ಅವಶ್ಯಕತೆಗಳನ್ನು ಪೂರೈಸಲು 3 ಕೋಟಿ ಹೆಚ್ಚುವರಿ ಗ್ರಾಮೀಣ ಮತ್ತು ನಗರ ಕುಟುಂಬಗಳಿಗೆ ಮನೆಗಳ ನಿರ್ಮಾಣಕ್ಕಾಗಿ ನೆರವು ನೀಡಲು ನಿರ್ಧರಿಸಿತು. ಗೌರವಾನ್ವಿತ ಪ್ರಧಾನ ಮಂತ್ರಿಯವರ ದೃಷ್ಟಿಕೋನದಂತೆ, ಪಿಎಂಎವೈ-ನಗರ 10 ಲಕ್ಷ ಕೋಟಿ ರೂ. ಹೂಡಿಕೆಯೊಂದಿಗೆ, ಒಂದು ಕೋಟಿ ಕುಟುಂಬಗಳ ವಸತಿ ಅಗತ್ಯಗಳನ್ನು ಪರಿಹರಿಸುತ್ತದೆ, ಪ್ರತಿಯೊಬ್ಬ ನಾಗರಿಕನು ಉತ್ತಮ ಗುಣಮಟ್ಟದ ಜೀವನವನ್ನು ನಡೆಸುವುದನ್ನು ಚಿತಪಡಿಸುತ್ತದೆ.

ಹೆಚ್ಚುವರಿಯಾಗಿ, ಬ್ಯಾಂಕ್‌ ಗಳು/ಹೌಸಿಂಗ್ ಫೈನಾನ್ಸ್ ಕಂಪನಿಗಳು (ಎಚ್‌ ಎಫ್‌ ಸಿ)/ಪ್ರಾಥಮಿಕ ಪತ್ತಿನ ಸಂಸ್ಥೆಗಳಿಂದ ಕೈಗೆಟುಕುವ ವಸತಿ ಸಾಲಗಳ ಮೇಲೆ ಸಾಲ ಅಪಾಯ ಖಾತರಿಯ ಲಾಭವನ್ನು ಒದಗಿಸಲು ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯುಎಸ್)/ಕಡಿಮೆ ಆದಾಯದ ಗುಂಪು(LIG) ವಿಭಾಗಗಳಿಗೆ ತಮ್ಮ ಮೊದಲ ಮನೆಯ ನಿರ್ಮಾಣ/ಖರೀದಿಗಾಗಿ ಕ್ರೆಡಿಟ್ ರಿಸ್ಕ್ ಗ್ಯಾರಂಟಿ ಫಂಡ್ ಟ್ರಸ್ಟ್ (ಸಿ ಆರ್‌ ಜಿ ಎಫ್‌ ಟಿ) ನಿಧಿಯನ್ನು 1,000 ಕೋಟಿಯಿಂದ 3,000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಕ್ರೆಡಿಟ್ ರಿಸ್ಕ್ ಗ್ಯಾರಂಟಿ ಫಂಡ್‌ನ ಹೆಚ್ಚಿನ ನಿರ್ವಹಣೆಯನ್ನು ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB) ಯಿಂದ ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಕಂಪನಿ (NCGTC) ಗೆ ವರ್ಗಾಯಿಸಲಾಗುತ್ತದೆ. ಕ್ರೆಡಿಟ್ ರಿಸ್ಕ್ ಗ್ಯಾರಂಟಿ ಫಂಡ್ ಸ್ಕೀಮ್ ಅನ್ನು ಪುನರ್ರಚಿಸಲಾಗುತ್ತಿದೆ ಮತ್ತು ಮಾರ್ಪಡಿಸಿದ ಮಾರ್ಗಸೂಚಿಗಳನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹೊರಡಿಸುತ್ತದೆ.

ಪಿಎಂಎವೈ-ನಗರ 2.0 ಅರ್ಹತಾ ಮಾನದಂಡ

ದೇಶದಲ್ಲಿ ಎಲ್ಲಿಯೂ ಪಕ್ಕಾ ಮನೆಯನ್ನು ಹೊಂದಿರದ ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯುಎಸ್)/ಕಡಿಮೆ ಆದಾಯದ ಗುಂಪು(ಎಲ್‌ ಐ ಜಿ) ಮಧ್ಯಮ ಆದಾಯ ಗುಂಪು (ಎಂ ಐ ಜಿ) ವಿಭಾಗಗಳಿಗೆ ಸೇರಿದ ಕುಟುಂಬಗಳು ಪಿಎಂಎವೈ-ನಗರ 2.0 ಅಡಿಯಲ್ಲಿ ಮನೆಯನ್ನು ಖರೀದಿಸಲು ಅಥವಾ ನಿರ್ಮಿಸಲು ಅರ್ಹವಾಗಿರುತ್ತವೆ.

  • ಇಡಬ್ಲ್ಯುಎಸ್ ಕುಟುಂಬಗಳು ವಾರ್ಷಿಕ ಆದಾಯ 3 ಲಕ್ಷ ರೂ.ವರೆಗಿನ ಕುಟುಂಬಗಳಾಗಿವೆ.
  • ಎಲ್‌ ಐ ಜಿ ಕುಟುಂಬಗಳು 3 ಲಕ್ಷದಿಂದ 6 ಲಕ್ಷ ರೂ.ವರೆಗೆ ವಾರ್ಷಿಕ ಆದಾಯವಿರುವ ಕುಟುಂಬಗಳಾಗಿವೆ.
  • ಎಂ ಐ ಜಿ ಕುಟುಂಬಗಳು ವಾರ್ಷಿಕ ಆದಾಯ 6 ಲಕ್ಷದಿಂದ 9 ಲಕ್ಷ ರೂ.ವರೆಗಿನ ಕುಟುಂಬಗಳಾಗಿವೆ.

ಯೋಜನೆಯ ವ್ಯಾಪ್ತಿ

2011 ರ ಜನಗಣತಿಯ ಪ್ರಕಾರ ಎಲ್ಲಾ ಶಾಸನಬದ್ಧ ಪಟ್ಟಣಗಳು ​​ಮತ್ತು ಅಧಿಸೂಚಿತ ಯೋಜನಾ ಪ್ರದೇಶಗಳು, ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ/ವಿಶೇಷ ಪ್ರದೇಶಾಭಿವೃದ್ಧಿ ಪ್ರಾಧಿಕಾರ/ನಗರಾಭಿವೃದ್ಧಿ ಪ್ರಾಧಿಕಾರ ಅಥವಾ ರಾಜ್ಯ ಶಾಸನದ ಅಡಿಯಲ್ಲಿ ಬರುವ ಅಧಿಸೂಚಿತ ಯೋಜನೆ/ಅಭಿವೃದ್ಧಿ ಪ್ರದೇಶದ ವ್ಯಾಪ್ತಿಯೊಳಗೆ ಬರುವ ಪ್ರದೇಶಗಳು ಸೇರಿದಂತೆ ನಂತರ ಅಧಿಸೂಚಿಸಲಾದ ಪಟ್ಟಣಗಳನ್ನು ಪಿಎಂಎವೈ-ನಗರ 2.0 ಅಡಿಯಲ್ಲಿ ಸೇರಿಸಲಾಗಿದೆ.

ಪಿಎಂಎವೈ-ನಗರ 2.0 ಘಟಕಗಳು

ಈ ಯೋಜನೆಯು ಈ ಕೆಳಗಿನ ಘಟಕಗಳ ಮೂಲಕ ನಗರ ಪ್ರದೇಶಗಳಲ್ಲಿ ಕೈಗೆಟುಕುವ ವಸತಿ ಅವಶ್ಯಕತೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ:

  1. ಫಲಾನುಭವಿ ನೇತೃತ್ವದ ನಿರ್ಮಾಣ (BLC): ಈ ಘಟಕದಲ್ಲಿ, ಇಡಬ್ಲ್ಯುಎಸ್ ವರ್ಗಗಳಿಗೆ ಸೇರಿದ ವೈಯಕ್ತಿಕ ಅರ್ಹ ಕುಟುಂಬಗಳಿಗೆ ತಮ್ಮದೇ ಆದ ಲಭ್ಯವಿರುವ ಖಾಲಿ ಭೂಮಿಯಲ್ಲಿ ಹೊಸ ಮನೆಗಳನ್ನು ನಿರ್ಮಿಸಲು ಹಣಕಾಸಿನ ನೆರವು ನೀಡಲಾಗುತ್ತದೆ. ಭೂರಹಿತ ಫಲಾನುಭವಿಗಳಿಗೆ, ರಾಜ್ಯಗಳು/ಯುಟಿಗಳು ಭೂಮಿ ಹಕ್ಕುಗಳನ್ನು (ಪಟ್ಟಾಗಳು) ಒದಗಿಸಬಹುದು.
  2. ಸಹಭಾಗಿತ್ವದಲ್ಲಿ ಕೈಗೆಟುಕುವ ವಸತಿ (ಎ ಎಚ್‌ ಪಿ): ಎ ಎಚ್‌ ಪಿ ಅಡಿಯಲ್ಲಿ, ರಾಜ್ಯಗಳು/ಯುಟಿಗಳು/ನಗರಗಳು/ಸಾರ್ವಜನಿಕ/ಖಾಸಗಿ ಏಜೆನ್ಸಿಗಳು ವಿವಿಧ ಪಾಲುದಾರಿಕೆಗಳೊಂದಿಗೆ ನಿರ್ಮಿಸುತ್ತಿರುವ ಮನೆಗಳನ್ನು ಹೊಂದಲು ಇಡಬ್ಲ್ಯುಎಸ್ ಫಲಾನುಭವಿಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ.
  • ಖಾಸಗಿ ಯೋಜನೆಗಳಿಂದ ಮನೆ ಖರೀದಿಸುವ ಫಲಾನುಭವಿಗಳಿಗೆ ರಿಡೀಮ್ ಮಾಡಬಹುದಾದ ವಸತಿ ಚೀಟಿಗಳನ್ನು ನೀಡಲಾಗುತ್ತದೆ. ಎಲ್ಲಾ ಅಗತ್ಯ ಮಾನದಂಡಗಳನ್ನು ಅನುಸರಿಸುವ ಖಾಸಗಿ ವಲಯದ ಯೋಜನೆಗಳನ್ನು ರಾಜ್ಯಗಳು/ಯುಟಿಗಳು/ಯು ಎಲ್‌ ಬಿ ಪಟ್ಟಿ ಮಾಡುತ್ತವೆ.
  • ನವೀನ ನಿರ್ಮಾಣ ತಂತ್ರಜ್ಞಾನಗಳನ್ನು ಬಳಸಿಕೊಂಡು ಎ ಎಚ್‌ ಪಿ ಯೋಜನೆಗಳಿಗೆ ಪ್ರತಿ ಚದರ ಮೀಟರ್‌ಗೆ 1000 ರೂ.ನಂತೆ ಟೆಕ್ನಾಲಜಿ ಇನ್ನೋವೇಶನ್ ಗ್ರಾಂಟ್ (TIG) ರೂಪದಲ್ಲಿ ಹೆಚ್ಚುವರಿ ಅನುದಾನವನ್ನು ಒದಗಿಸಲಾಗುತ್ತದೆ.

iii ಕೈಗೆಟುಕುವ ಬಾಡಿಗೆ ವಸತಿ (ಎ ಆರ್‌ ಎಚ್‌): ಈ ಘಟಕವು ಕೆಲಸ ಮಾಡುವ ಮಹಿಳೆಯರು/ಕೈಗಾರಿಕಾಕೆಲಸಗಾರರು/ನಗರದವಲಸಿಗರು/ನಿರಾಶ್ರಿತರು/ನಿರ್ಗತಿಕರು/ವಿದ್ಯಾರ್ಥಿಗಳು ಮತ್ತು ಇತರ ಅರ್ಹ ಫಲಾನುಭವಿಗಳಿಗೆ ಸಾಕಷ್ಟು ಬಾಡಿಗೆ ವಸತಿಗಳನ್ನು ನಿರ್ಮಿಸುತ್ತದೆ. ಮನೆಯನ್ನು ಹೊಂದಲು ಬಯಸದ ಆದರೆ ಅಲ್ಪಾವಧಿಗೆ ವಸತಿ ಅಗತ್ಯವಿರುವ ಅಥವಾ ಮನೆ ನಿರ್ಮಿಸಲು/ಖರೀದಿಸಲು ಆರ್ಥಿಕ ಸಾಮರ್ಥ್ಯವನ್ನು ಹೊಂದಿರದ ನಗರವಾಸಿಗಳಿಗೆ ಕೈಗೆಟುಕುವ ಮತ್ತು ನೈರ್ಮಲ್ಯದ ವಾಸಸ್ಥಳಗಳನ್ನು ಎ ಆರ್‌ ಎಚ್‌ ಖಚಿತಪಡಿಸುತ್ತದೆ.

ಈ ಘಟಕವನ್ನು ಕೆಳಗಿನಂತೆ ಎರಡು ಮಾದರಿಗಳ ಮೂಲಕ ಕಾರ್ಯಗತಗೊಳಿಸಲಾಗುತ್ತದೆ:

  • ಮಾದರಿ-1: ನಗರಗಳಲ್ಲಿ ಅಸ್ತಿತ್ವದಲ್ಲಿರುವ ಸರ್ಕಾರಿ ಅನುದಾನಿತ ಖಾಲಿ ಮನೆಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಕ್ರಮದಲ್ಲಿ ಅಥವಾ ಸಾರ್ವಜನಿಕ ಏಜೆನ್ಸಿಗಳ ಮೂಲಕ ಎ ಆರ್‌ ಎಚ್ ಆಗಿ ಪರಿವರ್ತಿಸುವ ಮೂಲಕ ಬಳಸಿಕೊಳ್ಳುವುದು.
  • ಮಾದರಿ-2: ಖಾಸಗಿ/ಸಾರ್ವಜನಿಕ ಏಜೆನ್ಸಿಗಳಿಂದ ಬಾಡಿಗೆ ಮನೆಗಳನ್ನು ನಿರ್ಮಿಸುವುದು, ಕಾರ್ಯಾಚರಿಸುವುದು ಮತ್ತು ನಿರ್ವಹಿಸುವುದು.

ನವೀನ ತಂತ್ರಜ್ಞಾನಗಳನ್ನು ಬಳಸಿಕೊಂಡು ನಿರ್ಮಿಸಲಾದ ಯೋಜನೆಗಳಿಗೆ, ಪ್ರತಿ ಚದರ ಮೀಟರ್‌ಗೆ 3,000 ದರದಲ್ಲಿ ಟಿ ಐ ಜಿ ಯನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡುತ್ತದೆ ಮತ್ತು ರಾಜ್ಯ/ಯುಟಿ ಸರ್ಕಾರವು ರಾಜ್ಯದ ಪಾಲಿನ ಭಾಗವಾಗಿ ಪ್ರತಿ ಚದರ ಮೀಟರ್‌ ಗೆ 2000 ರೂ. ಅನ್ನು ನೀಡುತ್ತದೆ.

  1. ಬಡ್ಡಿ ಸಬ್ಸಿಡಿ ಯೋಜನೆ (ಐ ಎಸ್ ಎಸ್‌): ಐ ಎಸ್ ಎಸ್‌ ಘಟಕವು EWS/LIG ಮತ್ತು MIG ಕುಟುಂಬಗಳಿಗೆ ಗೃಹ ಸಾಲಗಳ ಮೇಲಿನ ಸಬ್ಸಿಡಿಯ ಪ್ರಯೋಜನಗಳನ್ನು ಒದಗಿಸುತ್ತದೆ. 35 ಲಕ್ಷದವರೆಗಿನ ಮನೆ ಮೌಲ್ಯದೊಂದಿಗೆ 25 ಲಕ್ಷ ರೂ.ವರೆಗಿನ ಸಾಲವನ್ನು ಪಡೆಯುವ ಫಲಾನುಭವಿಗಳು 12 ವರ್ಷಗಳ ಅವಧಿಯವರೆಗೆ ಮೊದಲ 8 ಲಕ್ಷ ರೂ. ಸಾಲದ ಮೇಲೆ 4% ಬಡ್ಡಿ ಸಬ್ಸಿಡಿಗೆ ಅರ್ಹರಾಗಿರುತ್ತಾರೆ. ಪುಶ್ ಬಟನ್ ಮೂಲಕ 5-ವಾರ್ಷಿಕ ಕಂತುಗಳಲ್ಲಿ ಅರ್ಹ ಫಲಾನುಭವಿಗಳಿಗೆ ಗರಿಷ್ಠ 1.80 ಲಕ್ಷ ರೂ. ಸಹಾಯಧನವನ್ನು ನೀಡಲಾಗುತ್ತದೆ. ಫಲಾನುಭವಿಗಳು ತಮ್ಮ ಖಾತೆಗಳನ್ನು ವೆಬ್‌ ಸೈಟ್, ಒಟಿಪಿ ಅಥವಾ ಸ್ಮಾರ್ಟ್ ಕಾರ್ಡ್‌ಗಳ ಮೂಲಕ ಪ್ರವೇಶಿಸಬಹುದು.

ಪಿಎಂಎವೈ-ನಗರ 2.0 ಅನ್ನು ಕೇಂದ್ರ ಪ್ರಾಯೋಜಿತ ಯೋಜನೆಯಾಗಿ (ಸಿ ಎಸ್‌ ಎಸ್) ಜಾರಿಗೊಳಿಸಲಾಗುವುದು, ಬಡ್ಡಿ ಸಬ್ಸಿಡಿ ಯೋಜನೆ (ಐ ಎಸ್‌ ಎಸ್) ಘಟಕವನ್ನು ಹೊರತುಪಡಿಸಿ, ಇದನ್ನು ಕೇಂದ್ರ ವಲಯದ ಯೋಜನೆಯಾಗಿ ಜಾರಿಗೊಳಿಸಲಾಗುತ್ತದೆ.

ಹಣಕಾಸು ವ್ಯವಸ್ಥೆ

ಐ ಎಸ್‌ ಎಸ್ ಹೊರತುಪಡಿಸಿ ವಿವಿಧ ಘಟಕಗಳ ಅಡಿಯಲ್ಲಿ ಮನೆ ನಿರ್ಮಾಣದ ವೆಚ್ಚವನ್ನು ಸಚಿವಾಲಯ, ರಾಜ್ಯ/ಯುಟಿ/ಯು ಎಲ್‌ ಬಿ ಮತ್ತು ಗುರುತಿಸಲಾದ ಅರ್ಹ ಫಲಾನುಭವಿಗಳ ನಡುವೆ ಹಂಚಲಾಗುತ್ತದೆ. ಪಿಎಂಎವೈ-ನಗರ 2.0 ಅಡಿಯಲ್ಲಿ AHP/BLC ಘಟಕಗಳಲ್ಲಿ ಸರ್ಕಾರದ ಸಹಾಯವು ಪ್ರತಿ ಯೂನಿಟ್‌ ಗೆ 2.50 ಲಕ್ಷ ರೂ. ಆಗಿರುತ್ತದೆ. ಯೋಜನೆಯ ಅಡಿಯಲ್ಲಿ ರಾಜ್ಯ/ಯುಟಿ ಪಾಲು ಕಡ್ಡಾಯವಾಗಿರುತ್ತದೆ. ಶಾಸಕಾಂಗ ಇಲ್ಲದ ಯುಟಿಗಳಿಗೆ, ಕೇಂದ್ರ: ರಾಜ್ಯ ಹಂಚಿಕೆ ಮಾದರಿಯು 100:0 ಆಗಿರುತ್ತದೆ, ಶಾಸಕಾಂಗವನ್ನು ಹೊಂದಿರುವ ಯುಟಿಗಳಿಗೆ (ದೆಹಲಿ, ಜೆ&ಕೆ ಮತ್ತು ಪುದುಚೇರಿ), ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯನ್ ರಾಜ್ಯಗಳು (ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ) ಹಂಚಿಕೆಯ ಮಾದರಿ 90:10 ಆಗಿರುತ್ತದೆ ಮತ್ತು ಇತರ ರಾಜ್ಯಗಳಿಗೆ ಹಂಚಿಕೆ ಮಾದರಿಯು 60:40 ಆಗಿರುತ್ತದೆ. ಮನೆಗಳ ಕೈಗೆಟುಕುವಿಕೆಯನ್ನು ಸುಧಾರಿಸಲು, ರಾಜ್ಯಗಳು/ಯುಟಿಗಳು ಮತ್ತು ಯು ಎಲ್‌ ಬಿ ಗಳು ಫಲಾನುಭವಿಗಳಿಗೆ ಹೆಚ್ಚುವರಿ ಸಹಾಯವನ್ನು ನೀಡಬಹುದು.

ಐ ಎಸ್‌ ಎಸ್‌ ಘಟಕದ ಅಡಿಯಲ್ಲಿ, ಅರ್ಹ ಫಲಾನುಭವಿಗಳಿಗೆ 5-ವಾರ್ಷಿಕ ಕಂತುಗಳಲ್ಲಿ 1.80 ಲಕ್ಷ ರೂ.ವರೆಗೆ ಕೇಂದ್ರ ಸಹಾಯವನ್ನು ನೀಡಲಾಗುತ್ತದೆ.

ವಿವರವಾದ ಹಂಚಿಕೆ ಮಾದರಿಯು ಈ ಕೆಳಗಿನಂತಿದೆ.

ಕ್ರ.ಸಂ.

ರಾಜ್ಯಗಳು/ಯುಟಿಗಳು

ಬಿ ಎಲ್‌ ಸಿ/ಎ ಎಚ್‌ ಪಿ

ಎ ಆರ್‌ ಎಚ್‌

ಐ ಎಸ್‌ ಎಸ್

1

ಈಶಾನ್ಯ ಪ್ರದೇಶ ರಾಜ್ಯಗಳು, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜೆ&ಕೆ, ಪುದುಚೇರಿ ಮತ್ತು ದೆಹಲಿ ಕೇಂದ್ರಾಡಳಿತ ಪ್ರದೇಶ (ಯುಟಿ)

ಕೇಂದ್ರ ಸರ್ಕಾರ - ಪ್ರತಿ ಘಟಕಕ್ಕೆ 2.25 ಲಕ್ಷ ರೂ.

ರಾಜ್ಯ ಸರ್ಕಾರ - ಕನಿಷ್ಠ ಪ್ರತಿ ಘಟಕಕ್ಕೆ 0.25 ಲಕ್ಷ ರೂ.

ತಂತ್ರಜ್ಞಾನ ನಾವೀನ್ಯತೆ ಅನುದಾನ

ಭಾರತ ಸರ್ಕಾರ: ಪ್ರತಿ ಘಟಕಕ್ಕೆ 3,000 ರೂ./ಚ.ಮೀ

 

ರಾಜ್ಯದ ಪಾಲು: ಪ್ರತಿ ಘಟಕಕ್ಕೆ 2,000 ರೂ./ಚ.ಮೀ

ಗೃಹ ಸಾಲ ಸಬ್ಸಿಡಿ - ಕೇಂದ್ರ ವಲಯದ ಯೋಜನೆಯಾಗಿ ಭಾರತ ಸರ್ಕಾರದಿಂದ ಪ್ರತಿ ಘಟಕಕ್ಕೆ 1.80 ಲಕ್ಷ ರೂ.ವರೆಗೆ (ವಾಸ್ತವ ಬಿಡುಗಡೆ)

2

ಎಲ್ಲಾ ಇತರ ಯುಟಿಗಳು

ಕೇಂದ್ರ ಸರ್ಕಾರ - ಪ್ರತಿ ಘಟಕಕ್ಕೆ 2.50 ಲಕ್ಷ ರೂ.

3

ಉಳಿದ ರಾಜ್ಯಗಳು

ಕೇಂದ್ರ ಸರ್ಕಾರ - ಪ್ರತಿ ಘಟಕಕ್ಕೆ 1.50 ಲಕ್ಷ ರೂ.

ರಾಜ್ಯ ಸರ್ಕಾರ - ಪ್ರತಿ ಘಟಕಕ್ಕೆ ಕನಿಷ್ಠ 1.00 ಲಕ್ಷ ರೂ.

ಟಿಪ್ಪಣಿಗಳು:

ಎ. ಪಿಎಂಎವೈ-ನಗರ 2.0 ಅಡಿಯಲ್ಲಿ ರಾಜ್ಯ/ಯುಟಿ ಪಾಲು ಕಡ್ಡಾಯವಾಗಿರುತ್ತದೆ. ಕನಿಷ್ಠ ರಾಜ್ಯ ಪಾಲನ್ನು ಹೊರತುಪಡಿಸಿ, ರಾಜ್ಯ ಸರ್ಕಾರಗಳು ಕೈಗೆಟುಕುವಿಕೆಯನ್ನು ಹೆಚ್ಚಿಸಲು ಹೆಚ್ಚುವರಿ ಟಾಪ್-ಅಪ್ ಪಾಲನ್ನು ಸಹ ಒದಗಿಸಬಹುದು.

ಬಿ. ಕೇಂದ್ರ ಸಹಾಯದ ಜೊತೆಗೆ, ಕೇಂದ್ರ MoHUA ನವೀನ ಕಟ್ಟಡ ಸಾಮಗ್ರಿಗಳು, ತಂತ್ರಜ್ಞಾನಗಳು ಮತ್ತು ಪ್ರಕ್ರಿಯೆಗಳನ್ನು ಬಳಸಿಕೊಂಡು ಎ ಎಚ್‌ ಪಿ ಯೋಜನೆಗಳಿಗೆ ಮಾತ್ರ ಟೆಕ್ನಾಲಜಿ ಇನ್ನೋವೇಶನ್ ಗ್ರಾಂಟ್ (TIG) ಅನ್ನು ಒದಗಿಸುತ್ತದೆ, ಯಾವುದೇ ಹೆಚ್ಚುವರಿ ಪರಿಣಾಮವನ್ನು ಸರಿದೂಗಿಸಲು ಅನುಷ್ಠಾನ ಸಂಸ್ಥೆಗಳಿಗೆ 30 ಚದರ ಮೀಟರ್ ವರೆಗೆ ಪ್ರತಿ ಚದರ ಮೀಟರ್‌ಗೆ 1,000 ರೂ. ನೀಡುತ್ತದೆ.

ತಂತ್ರಜ್ಞಾನ ಮತ್ತು ನಾವೀನ್ಯತೆ ಉಪ-ಮಿಷನ್ (ಟಿ ಐ ಎಸ್‌ ಎಂ)

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಇತರ ಭಾಗೀದಾರರಿಗೆ ಆಧುನಿಕ, ನವೀನ ಮತ್ತು ಹಸಿರು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಮತ್ತು ಮನೆಗಳ ವೇಗದ ಮತ್ತು ಗುಣಮಟ್ಟದ ನಿರ್ಮಾಣಕ್ಕಾಗಿ ಕಟ್ಟಡ ಸಾಮಗ್ರಿಗಳಿಗೆ ಮಾರ್ಗದರ್ಶನ ನೀಡಲು ಮತ್ತು ಸುಗಮಗೊಳಿಸಲು ಪಿಎಂಎವೈ-ನಗರ 2.0 ಅಡಿಯಲ್ಲಿ ಟಿ ಐ ಎಸ್‌ ಎಂ ಅನ್ನು ಸ್ಥಾಪಿಸಲಾಗುವುದು. ಟಿ ಐ ಎಸ್‌ ಎಂ ಅಡಿಯಲ್ಲಿ, ಹವಾಮಾನ ಸ್ನೇಹಿ ಕಟ್ಟಡಗಳು ಮತ್ತು ಸ್ಥಿತಿಸ್ಥಾಪಕ ವಸತಿಗಾಗಿ ವಿಪತ್ತು ನಿರೋಧಕ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಿದ ನವೀನ ಅಭ್ಯಾಸಗಳು ಮತ್ತು ಯೋಜನೆಗಳ ಮೂಲಕ ರಾಜ್ಯಗಳು/ಯುಟಿಗಳು/ನಗರಗಳಿಗೆ ಸಹಾಯ ಮಾಡಲಾಗುವುದು.

ಕೈಗೆಟುಕುವ ವಸತಿ ನೀತಿ

ಪಿಎಂಎವೈ-ನಗರ 2.0 ಅಡಿಯಲ್ಲಿ ಪ್ರಯೋಜನವನ್ನು ಪಡೆಯಲು, ರಾಜ್ಯಗಳು/ಯುಟಿಗಳು ಸಾರ್ವಜನಿಕ/ಖಾಸಗಿ ಘಟಕಗಳ ಸಕ್ರಿಯ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಕೈಗೆಟುಕುವ ವಸತಿ ವ್ಯವಸ್ಥೆಯನ್ನು ಉತ್ತೇಜಿಸಲು ವಿವಿಧ ಸುಧಾರಣೆಗಳು ಮತ್ತು ಪ್ರೋತ್ಸಾಹಗಳನ್ನು ಒಳಗೊಂಡಿರುವ "ಕೈಗೆಟುಕುವ ವಸತಿ ನೀತಿಯನ್ನು" ರೂಪಿಸಬೇಕಾಗುತ್ತದೆ. ಕೈಗೆಟುಕುವ ವಸತಿ ನೀತಿಯು ಅಂತಹ ಸುಧಾರಣೆಗಳನ್ನು ಒಳಗೊಂಡಿರುತ್ತದೆ, ಇದು 'ಕೈಗೆಟುಕುವ ವಸತಿ' ಕೈಗೆಟುಕುವಿಕೆಯನ್ನು ಸುಧಾರಿಸುತ್ತದೆ.

ಪರಿಣಾಮ:

ಪಿಎಂಎವೈ ನಗರ 2.0 EWS/LIG ಮತ್ತು MIG ವಿಭಾಗಗಳ ವಸತಿ ಕನಸುಗಳನ್ನು ಈಡೇರಿಸುವ ಮೂಲಕ 'ಎಲ್ಲರಿಗೂ ವಸತಿ' ಎಂಬ ದೃಷ್ಟಿಕೋನವನ್ನು ಸಾಧಿಸುತ್ತದೆ. ಈ ಯೋಜನೆಯು ಕೊಳೆಗೇರಿ ನಿವಾಸಿಗಳು, ಎಸ್‌ ಸಿ/ಎಸ್‌ ಟಿಗಳು, ಅಲ್ಪಸಂಖ್ಯಾತರು, ವಿಧವೆಯರು, ವಿಕಲಚೇತನರು ಮತ್ತು ಸಮಾಜದ ಇತರ ಹಿಂದುಳಿದ ವರ್ಗಗಳ ಅಗತ್ಯತೆಗಳನ್ನು ಪರಿಹರಿಸುವ ಮೂಲಕ ಜನಸಂಖ್ಯೆಯ ವಿವಿಧ ಭಾಗಗಳಲ್ಲಿ ಸಮಾನತೆಯನ್ನು ಖಚಿತಪಡಿಸುತ್ತದೆ. ಸಫಾಯಿ ಕರ್ಮಚಾರಿಗಳು, ಪಿಎಂ ಸ್ವನಿಧಿ ಯೋಜನೆಯಡಿ ಗುರುತಿಸಲಾದ ಬೀದಿಬದಿ ವ್ಯಾಪಾರಿಗಳು ಮತ್ತು ಪ್ರಧಾನ ಮಂತ್ರಿ-ವಿಶ್ವಕರ್ಮ ಯೋಜನೆಯಡಿಯಲ್ಲಿ ಗುರುತಿಸಲಾದ ವಿವಿಧ ಕುಶಲಕರ್ಮಿಗಳು, ಅಂಗನವಾಡಿ ಕಾರ್ಯಕರ್ತೆಯರು, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು, ಪಿಎಂಎವೈ-ಯು 2.0 ಕಾರ್ಯಾಚರಣೆಯ ಸಮಯದಲ್ಲಿ ಗುರುತಿಸಲಾದ ಕೊಳಗೇರಿಗಳು/ವಠಾರಗಳ ನಿವಾಸಿಗಳು ಮತ್ತು ಇತರ ಗುಂಪುಗಳಿಗೆ ವಿಶೇಷ ಗಮನ ನೀಡಲಾಗುವುದು.

 

*****


(Release ID: 2043950) Visitor Counter : 85