ಹಣಕಾಸು ಸಚಿವಾಲಯ
azadi ka amrit mahotsav

ಸರ್ಕಾರಗಳು, ಖಾಸಗಿ ವಲಯ ಮತ್ತು ಶಿಕ್ಷಣ ಕ್ಷೇತ್ರದೊಂದಿಗೆ ನಾನಾ ಒಪ್ಪಂದಗಳು ಮತ್ತು ಒಮ್ಮತದ ಮೂಲಕ ದೇಶವನ್ನು ಮುನ್ನಡೆಸಲು ʻ2023-24ರ ಆರ್ಥಿಕ ಸಮೀಕ್ಷೆʼಯ ಮುನ್ನುಡಿಯಲ್ಲಿ ಕರೆ ನೀಡಲಾಗಿದೆ


ಭಾರತೀಯ ಆರ್ಥಿಕತೆಯು ಅನುಕೂಲಕರವಾದ ಮತ್ತು ಸ್ಥಿರವಾದ ನೆಲೆಯಲ್ಲಿದೆ, ಭೌಗೋಳಿಕ ರಾಜಕೀಯ ಸವಾಲುಗಳನ್ನು ಎದುರಿಸುವಲ್ಲಿ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸುತ್ತದೆ: ಆರ್ಥಿಕ ಸಮೀಕ್ಷೆ 2023-24

ಹಿಂದಿನ ಮತ್ತು ವರ್ತಮಾನದ ಸ್ಥಿತಿಗತಿಯನ್ನು ಪರಿಶೀಲಿಸುವ ಸಮೀಕ್ಷೆಯ ಮುನ್ನುಡಿಉಯು ಭಾರತೀಯ ಆರ್ಥಿಕತೆಯನ್ನು ಭವಿಷ್ಯದ ಕಡೆಗೆ ಬಲವಾಗಿ ಮುನ್ನಡೆಸಲು ವಿವಿಧ ಕ್ರಮಗಳನ್ನು ಸೂಚಿಸಿದೆ

Posted On: 22 JUL 2024 3:25PM by PIB Bengaluru

ಅಭೂತಪೂರ್ವ ಜಾಗತಿಕ ಸವಾಲುಗಳ ನಡುವೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ, ಅದಕ್ಕೆ ತ್ರಿಪಕ್ಷೀಯ ಒಪ್ಪಂದವು ಅಗತ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗಿ ವಲಯದ ಮೇಲೆ ವಿಶ್ವಾಸ ಇರಿಸಿ ಖಾಸಗಿ ವಲಯಕ್ಕೆ ಮುಕ್ತ ಅವಕಾಶ ಕಲ್ಪಿಸಬೇಕು. ಖಾಸಗಿ ವಲಯವು ತನ್ನ ದೀರ್ಘಕಾಲೀನ ಚಿಂತನೆ ಮತ್ತು ನ್ಯಾಯಯುತ ನಡವಳಿಕೆಯೊಂದಿಗೆ ವಿಶ್ವಾಸವನ್ನು ಪ್ರದರ್ಶಿಸಬೇಕು. ಮತ್ತೊಂದೆಡೆ, ಸಾರ್ವಜನಿಕರು ತಮ್ಮ ಹಣಕಾಸು ಮತ್ತು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಜವಾಬ್ದಾರಿಯನ್ನು ವಹಸಿಕೊಳ್ಳಬೇಕು ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ 2023-24ರ ಆರ್ಥಿಕ ಸಮೀಕ್ಷೆ ಕರೆ ನೀಡಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮೂರನೇ ಅವಧಿಗೆ ಐತಿಹಾಸಿಕ ಜನಾದೇಶದೊಂದಿಗೆ ಅಧಿಕಾರಕ್ಕೆ ಮರಳಿರುವುದು ರಾಜಕೀಯ ಮತ್ತು ನೀತಿಗಳ ಮುಂದುವರಿಕೆಯನ್ನು ಸೂಚಿಸುತ್ತದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಂಡ ನಂತರ, ಭಾರತೀಯ ಆರ್ಥಿಕತೆಯು ಅನುಕೂಲಕರವಾದ ಮತ್ತು ಸ್ಥಿರವಾದ ನೆಲೆಯಲ್ಲಿದೆ, ಭೌಗೋಳಿಕ ರಾಜಕೀಯ ಸವಾಲುಗಳನ್ನು ಎದುರಿಸುವಲ್ಲಿ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸುತ್ತಿದೆ ಎಂದು ಸಮೀಕ್ಷೆ ಉಲ್ಲೇಖಿಸಿದೆ. ಆದಾಗ್ಯೂ, ಚೇತರಿಕೆಯನ್ನು ಉಳಿಸಿಕೊಳ್ಳಲು, ದೇಶೀಯ ರಂಗದಲ್ಲಿ ಭಾರಿ ಉತ್ತೇಜನ ಅಗತ್ಯವಾಗಿದೆ. ಏಕೆಂದರೆ ವ್ಯಾಪಾರ, ಹೂಡಿಕೆ ಮತ್ತು ಹವಾಮಾನದಂತಹ ಪ್ರಮುಖ ಜಾಗತಿಕ ವಿಷಯಗಳ ಬಗ್ಗೆ ಒಪ್ಪಂದಗಳನ್ನು ಮಾಡಿಕೊಳ್ಳಲು ಕಷ್ಟಕರ ಪರಿಸ್ಥಿತಿಯಿದೆ.

ಸದೃಢ ಭಾರತೀಯ ಆರ್ಥಿಕತೆ

ಭಾರತೀಯ ಆರ್ಥಿಕತೆಗೆ ಸಂಬಂಧಿಸಿದಂತೆ ಅನೇಕ ಉತ್ತೇಜನಕಾರಿ ಚಿಹ್ನೆಗಳಿವೆ ಎಂದು ಸಮೀಕ್ಷೆಯು ಹೇಳಿದೆ:

  • ಹಣಕಾಸು ವರ್ಷ-2022 (FY22) ಮತ್ತು ಹಣಕಾಸು ವರ್ಷ-2023ರಲ್ಲಿ (FY23) ಅನುಕ್ರಮವಾಗಿ 7% ಇದ್ದ ಬೆಳವಣಿಗೆಯ ದರಕ್ಕೆ ಹೋಲಿಸಿದರೆ ಹಣಕಾಸು ವರ್ಷ 2024ರಲ್ಲಿ (FY24) 9.7% ಮತ್ತು ಹೆಚ್ಚಿನ ಆರ್ಥಿಕ ಬೆಳವಣಿಗೆ
  • ಕೆಲವು ನಿರ್ದಿಷ್ಟ ಆಹಾರ ಪದಾರ್ಥಗಳ ಹಣದುಬ್ಬರ ಹೆಚ್ಚಾಗಿದ್ದರೂ, ಮುಖ್ಯ ಹಣದುಬ್ಬರ ದರವು ಉತ್ತಮ ನಿಯಂತ್ರಣದಲ್ಲಿದೆ
  • 2023ಕ್ಕೆ ಹೋಲಿಸಿದರೆ 2024ರಲ್ಲಿ ವ್ಯಾಪಾರ ಕೊರತೆ ಕಡಿಮೆ
  • 2024ರ ಹಣಕಾಸು ವರ್ಷದಲ್ಲಿ ಚಾಲ್ತಿ ಖಾತೆ ಕೊರತೆ ಜಿಡಿಪಿಯ ಶೇ.0.7ರಷ್ಟಿದ್ದು, ಚಾಲ್ತಿ ಖಾತೆಯು 2024ರ ನಾಲ್ಕನೇ ತ್ರೈಮಾಸಿಕದಲ್ಲಿ ಹೆಚ್ಚುವರಿ ಮೊತ್ತವನ್ನು ದಾಖಲಿಸಿದೆ.
  • ಸಾಕಷ್ಟು ವಿದೇಶಿ ವಿನಿಮಯ ಮೀಸಲು ಲಭ್ಯತೆ
  • ಖಾಸಗಿ ವಲಯವು ತನ್ನ ಪಾವತಿ ಶುಲ್ಕು ಸಂಕಷ್ಟಗಳಿಂದ ಹೊರಬಂದು ಹಣಕಾಸು ವರ್ಷ-22ರಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದೆ, ಸಾರ್ವಜನಿಕ ಹೂಡಿಕೆಯು ಕಳೆದ ಹಲವಾರು ವರ್ಷಗಳಲ್ಲಿ ಸಾಕಷ್ಟು ಹೆಚ್ಚಾಗಿದೆ.
  • ಹಾಲಿ ಬೆಲೆಗಳಲ್ಲಿ ಅಳೆಯಲಾಗುವ ಹಣಕಾಸೇತರ ಖಾಸಗಿ ವಲಯದ ಬಂಡವಾಳ ಸೃಷ್ಟಿಯು ಹಣಕಾಸು ವರ್ಷ-2021ರಲ್ಲಿ ಕುಸಿತಕ್ಕೆ ಸಾಕ್ಷಿಯಾಗಿತ್ತು, ಆದರೆ ಹಣಕಾಸು ವರ್ಷ-2022 ಮತ್ತು 2023ರಲ್ಲಿ ಉತ್ತಮ ವಿಸ್ತರಣೆ ಕಂಡಿದೆ ಎಂದು ರಾಷ್ಟ್ರೀಯ ಆದಾಯ ದತ್ತಾಂಶವು ತೋರಿಸುತ್ತದೆ.
  • ಹಣಕಾಸು ವರ್ಷ-2020 ಮತ್ತು ಹಣಕಾಸು ವರ್ಷ-2021ರಲ್ಲಿ ಕುಸಿತದ ನಂತರ ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಮೇಲಿನ ಹೂಡಿಕೆ ಉತ್ತಮವಾಗಿ ಚೇತರಿಕೆ ಕಂಡಿದೆ.
  • ಖಾಸಗಿ ವಲಯದಲ್ಲಿ ಬಂಡವಾಳ ಸೃಷ್ಟಿಯು ನಿಧಾನಗತಿಯಲ್ಲಾದರೂ ವಿಸ್ತರಿಸುತ್ತಲೇ ಇದೆ ಎಂದು ಹಣಕಾಸು ವರ್ಷ 2024ರ ಆರಂಭಿಕ ಕಾರ್ಪೊರೇಟ್ ವಲಯದ ದತ್ತಾಂಶವು ಸೂಚಿಸುತ್ತದೆ.

ಬಾಹ್ಯ ಹೂಡಿಕೆದಾರರ ಹೂಡಿಕೆ ಆಸಕ್ತಿ

ಡಾಲರ್ ಒಳಹರಿವಿನ ಆಧಾರದ ಮೇಲೆ ಅಳೆಯಲಾಗುವ ಬಾಹ್ಯ ಹೂಡಿಕೆದಾರರ ಹೂಡಿಕೆ ಆಸಕ್ತಿಯು 2023ರ ಹಣಕಾಸು ವರ್ಷದಲ್ಲಿ ಇದ್ದ 47.6 ಶತಕೋಟಿ ಡಾಲರ್‌ಗೆ ಹೋಲಿಸಿದರೆ, 2024ರ ಹಣಕಾಸು ವರ್ಷದಲ್ಲಿ 45.8 ಶತಕೋಟಿ ಡಾಲರ್‌ಗೆ ಕೊಂಚ ಇಳಿಕೆಯಾಗಿರುವುದನ್ನು ಪಾವತಿ ಶುಲ್ಕು ತೋರಿಸುತ್ತದೆ ಎಂದು ಆರ್‌ಬಿಐ ಅಂಕಿ-ಅಂಶಗಳನ್ನು ಉಲ್ಲೇಖಿಸಿ ಸಮೀಕ್ಷೆಯು ತಿಳಿಸಿದೆ. ಈ ಬೆಳವಣಿಗೆಯು ಭಾರತದಲ್ಲಿ ವಿದೇಶಿ ನೇರ ಹೂಡಿಕೆ ಸ್ಥಗಿತಗೊಂಡಿರುವುದನ್ನು ಸೂಚಿಸುತ್ತದೆ. ಆದರೆ, ಈ ಸಣ್ಣ ಇಳಿಕೆಯು ಜಾಗತಿಕ ಪ್ರವೃತ್ತಿಗಳಿಗೆ ಅನುಗುಣವಾಗಿದೆ. 2023ರ ಹಣಕಾಸು ವರ್ಷದಲ್ಲಿ 29.3 ಶತಕೋಟಿ ಡಾಲರ್ ಮತ್ತು 2024ರಲ್ಲಿ 44.5 ಶತಕೋಟಿ ಡಾಲರ್‌ನಷ್ಟು ಹೂಡಿಕೆ ಲಾಭವನ್ನು ಆಯಾ ದೇಶಗಳಿಗೆ ಹಿಂದಿರುಗಿಸಲಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಅನೇಕ ಖಾಸಗಿ ಈಕ್ವಿಟಿ ಹೂಡಿಕೆದಾರರು ಭಾರತದಲ್ಲಿನ ಈಕ್ವಿಟಿ ಮಾರುಕಟ್ಟೆಗಳ ಲಾಭವನ್ನು ಪಡೆದುಕೊಂಡಿದ್ದಾರೆ ಮತ್ತು ಲಾಭದಾಯಕವಾಗಿ ನಿರ್ಗಮಿಸಿದ್ದಾರೆ ಎಂದು ಸಮೀಕ್ಷೆ ಹೇಳುತ್ತದೆ. ಇದು ಹೂಡಿಕೆದಾರರಿಗೆ ಲಾಭದಾಯಕ ನಿರ್ಗಮನವನ್ನು ನೀಡುವ ಆರೋಗ್ಯಕರ ಮಾರುಕಟ್ಟೆ ವಾತಾವರಣದ ಸಂಕೇತವಾಗಿದೆ, ಇದು ಮುಂಬರುವ ವರ್ಷಗಳಲ್ಲಿ ಹೊಸ ಹೂಡಿಕೆಗಳನ್ನು ತರತುತ್ತದೆ ಎಂದು ಸಮೀಕ್ಷೆ ವಿಶ್ವಾಸ ವ್ಯಕ್ತಪಡಿಸಿದೆ.

ಮುಂಬರುವ ವರ್ಷಗಳಲ್ಲಿ ವಿದೇಶಿ ನೇರ ಹೂಡಿಕೆ ಬೆಳೆಯಲು ಪ್ರಸ್ತುತ ವಾತಾವರಣವು ಈ ಕಾರಣದಿಂದಾಗಿ ಹೆಚ್ಚು ಅನುಕೂಲಕರವಾಗಿಲ್ಲ ಎಂದು ಸಮೀಕ್ಷೆ ಹೇಳುತ್ತದೆ:

  • ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಬಡ್ಡಿದರಗಳು ಕೋವಿಡ್ ವರ್ಷಗಳಲ್ಲಿ ಮತ್ತು ಅದಕ್ಕೂ ಮೊದಲು ಇದ್ದಕ್ಕಿಂತ ಹೆಚ್ಚಾಗಿದೆ
  • ಭಾರಿ ಮಟ್ಟದ ಸಬ್ಸಿಡಿಗಳು ಸೇರಿದಂತೆ ದೇಶೀಯ ಹೂಡಿಕೆಯನ್ನು ಉತ್ತೇಜಿಸಲು ಅಭಿವೃದ್ಧಿ ಹೊಂದಿದ ಆರ್ಥಿಕತೆಗಳು  ರೂಪಿಸುವ ಸಕ್ರಿಯ ಕೈಗಾರಿಕಾ ನೀತಿಗಳೊಂದಿಗೆ ಉದಯೋನ್ಮುಖ ಆರ್ಥಿಕತೆಗಳು ಸ್ಪರ್ಧಿಸಬೇಕಾಗಿದೆ.
  • ವರ್ಗಾವಣೆ ದರ, ತೆರಿಗೆಗಳು, ಆಮದು ಸುಂಕಗಳು ಮತ್ತು ತೆರಿಗೆಯೇತರ ನೀತಿಗಳಿಗೆ ಸಂಬಂಧಿಸಿದ ಅನಿಶ್ಚಿತತೆಗಳನ್ನು ಮತ್ತು ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ.
  • ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು ಬಂಡವಾಳ ಹರಿವಿನ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುತ್ತವೆ.

ಉದ್ಯೋಗದ ಮೇಲೆ ಆಘಾತಗಳ ಪ್ರಭಾವ

ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ʻಆವರ್ತಕ ಕಾರ್ಮಿಕ ಶಕ್ತಿ ಸಮೀಕ್ಷೆʼಯ ವರದಿಯನ್ನು ಉಲ್ಲೇಖಿಸಿರುವ ಆರ್ಥಿಕ ಸಮೀಕ್ಷೆಯು, ಭಾಗಶಃ ಹಿಮ್ಮುಖ ವಲಸೆ ಮತ್ತು ಗ್ರಾಮೀಣ ಭಾರತದಲ್ಲಿ ಕಾರ್ಮಿಕ ರಂಗಕ್ಕೆ ಹೆಚ್ಚಿನ ಮಹಿಳೆಯರ ಪ್ರವೇಶದಿಂದ ಕೃಷಿ ಉದ್ಯೋಗದಲ್ಲಿ ಏರಿಕೆಯಾಗಿದೆ ಎಂದು ಹೇಳಿದೆ.

ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆಯನ್ನು ಉಲ್ಲೇಖಿಸಿ, 2013-14 ಮತ್ತು 2021-22ರ ನಡುವೆ ಒಟ್ಟು ಕಾರ್ಖಾನೆ ಉದ್ಯೋಗಗಳ ಸಂಖ್ಯೆ ವಾರ್ಷಿಕವಾಗಿ 3.6% ರಷ್ಟು ಹೆಚ್ಚಾಗಿದೆ ಮತ್ತು ಸಣ್ಣ ಕಾರ್ಖಾನೆಗಳಿಗಿಂತ (ನೂರಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವವು) ನೂರಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕಾರ್ಖಾನೆಗಳಲ್ಲಿ ಉದ್ಯೋಗಗಳ ಸಂಖ್ಯೆ 4.0% ರಷ್ಟು ವೇಗವಾಗಿ ಬೆಳೆದಿದೆ ಎಂದು ಸಮೀಕ್ಷೆ ಹೇಳುತ್ತದೆ. ಈ ಅವಧಿಯಲ್ಲಿ ಭಾರತೀಯ ಕಾರ್ಖಾನೆಗಳಲ್ಲಿ ಉದ್ಯೋಗವು 1.04 ಕೋಟಿಯಿಂದ 1.36 ಕೋಟಿಗೆ ಏರಿದೆ ಎಂದು ಸಮೀಕ್ಷೆ ಹೇಳುತ್ತದೆ.

'ಭಾರತದಲ್ಲಿ ಅಸಂಘಟಿತ ಕೃಷಿಯೇತರ ಉದ್ಯಮಗಳ(ನಿರ್ಮಾಣವನ್ನು ಹೊರತುಪಡಿಸಿ) ಪ್ರಮುಖ ಸೂಚ್ಯಂಕಗಳ' ಕುರಿತಾದ 73ನೇ ಸುತ್ತಿನ ಎನ್‌ಎಸ್‌ಎಸ್‌ ಫಲಿತಾಂಶಳು ಹಾಗೂ 2022-23ನೇ ಸಾಲಿನ ʻಅಸಂಘಟಿತ ಉದ್ಯಮಗಳ ವಾರ್ಷಿಕ ಸಮೀಕ್ಷೆʼಯನ್ನು ಹೋಲಿಕೆ ಮಾಡಲಾಗಿದ್ದು, ಇದರಲ್ಲಿ ಈ ಉದ್ಯಮಗಳಲ್ಲಿ ಒಟ್ಟಾರೆ ಉದ್ಯೋಗವು 2015-16 ರಲ್ಲಿ 11.1 ಕೋಟಿಯಿಂದ 10.96 ಕೋಟಿಗೆ ಇಳಿದಿದೆ ಎಂದು ಸಮೀಕ್ಷೆ ಹೇಳಿದೆ. ಉತ್ಪಾದನೆಯಲ್ಲಿ 54 ಲಕ್ಷ ಕಾರ್ಮಿಕರ ಇಳಿಕೆ ಕಂಡುಬಂದಿದೆ. ಆದರೆ ವ್ಯಾಪಾರ ಮತ್ತು ಸೇವೆಗಳಲ್ಲಿನ ಉದ್ಯೋಗಾವಕಾಶಗಳ ಸಂಖ್ಯೆ ಹೆಚ್ಚಾಗಿದೆ. ಇದು ಒಟ್ಟಾರೆ ಕಾರ್ಮಿಕರ ಇಳಿಕೆ ಪ್ರಮಾಣವನ್ನು ಮಿತಿಗೊಳಿಸಿದೆ. ಈ ಎರಡು ಅವಧಿಗಳ ನಡುವೆ ಅಸಂಘಟಿತ ಉದ್ಯಮಗಳಲ್ಲಿ ಕಾರ್ಮಿಕರ ಸಂಖ್ಯೆಯಲ್ಲಿ ಒಟ್ಟಾರೆ ಕಡಿತವು ಸುಮಾರು 16.45 ಲಕ್ಷಕ್ಕೆ ಸೀಮಿತಗೊಂಡಿದೆ. ಈ ಹೋಲಿಕೆ 2021-22 (ಏಪ್ರಿಲ್ 2021 ರಿಂದ ಮಾರ್ಚ್ 2022) ಮತ್ತು 2022-23 (ಅಕ್ಟೋಬರ್ 2022 ರಿಂದ ಸೆಪ್ಟೆಂಬರ್ 2023) ನಡುವೆ ಸಂಭವಿಸಿದ ಉತ್ಪಾದನಾ ಕ್ಷೇತ್ರದ ಉದ್ಯೋಗಗಳಲ್ಲಿ ದೊಡ್ಡ ಜಿಗಿತವನ್ನು ಮರೆಮಾಚುತ್ತದೆ ಎಂದು ಸಮೀಕ್ಷೆಯು ಪ್ರತಿಪಾದಿಸಿದೆ.

ಕೋವಿಡ್-19 ಸಾಂಕ್ರಾಮಿಕದ ಎರಡು ದೊಡ್ಡ ಆರ್ಥಿಕ ಆಘಾತಗಳಾದ -  ಬ್ಯಾಂಕಿಂಗ್‌ನಲ್ಲಿನ ಅನುತ್ಪಾದಕ ಆಸ್ತಿಗಳು(ಎನ್‌ಪಿಎ) ಮತ್ತು ಹೆಚ್ಚಿದ ಕಾರ್ಪೊರೇಟ್ ಸಾಲ ಸುಸ್ತಿಯ ಬಗ್ಗೆ ಪರಿಶೀಲಿಸಿರುವ ಸಮೀಕ್ಷೆಯು,  2047ರ ವೇಳೆಗೆ ʻವಿಕಿಸಿತ ಭಾರತʼವಾಗುವತ್ತ ಭಾರತದ ಪ್ರಯಾಣಕ್ಕೆ ಇರುವ ಜಾಗತಿಕ ಪರಿಸರವು 1980 ಮತ್ತು 2015ರ ನಡುವೆ ಚೀನಾದ ಉದಯದ ಸಮಯದಲ್ಲಿದ್ದಕ್ಕಿಂತ ಹೆಚ್ಚು ಭಿನ್ನವಾಗಿರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಆಧುನಿಕ ಜಗತ್ತಿನಲ್ಲಿ ದೇಶೀಕರಣ, ಭೌಗೋಳಿಕ ರಾಜಕೀಯ, ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆ ಹಾಗೂ ಕೃತಕ ಬುದ್ಧಿಮತ್ತೆಯ(ಎಐ) ಭಾರತದ ಪಾಲಿಗೆ ದೊಡ್ಡ ಸವಾಲನ್ನು ಎಸೆದಿದೆ. ಏಕೆಂದರೆ ಈ ಬೆಳವಣಿಗೆಯು ಎಲ್ಲಾ ವರ್ಗದ ಕೌಶಲ ಕಾರ್ಮಿಕರ ಮೇಲೆ– ಅರೆ, ಮಧ್ಯಮ ಮತ್ತು ಅತ್ಯಧಿಕ ಕೌಶಲ್ಯದ ಕಾರ್ಮಿಕರ ಮೇಲೆ ಪರಿಣಾಮ ಬೀರಿದ್ದು, ಭಾರತಕ್ಕೆ ಭಾರಿ ಅನಿಶ್ಚಿತತೆಯನ್ನು ತಂದಿಟ್ಟಿದೆ ಎಂದು ಸಮೀಕ್ಷೆ ಹೇಳುತ್ತದೆ. ಇದು ಮುಂಬರುವ ವರ್ಷಗಳಲ್ಲಿ ಮತ್ತು ದಶಕಗಳಲ್ಲಿ ಭಾರತಕ್ಕೆ ಸುಸ್ಥಿರವಾಗಿ  ಉತ್ತಮ ಬೆಳವಣಿಗೆಯ ದರಗಳನ್ನು ಕಾಯ್ದುಕೊಳ್ಳಲು ಅಡೆತಡೆಗಳು ಮತ್ತು ಅಡೆತಡೆಗಳನ್ನು ಸೃಷ್ಟಿಸುತ್ತದೆ. ಈ ಸವಾಲುಗಳನ್ನು ನಿವಾರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯದ ʻಮಹಾ ಮೈತ್ರಿಕೂಟʼ ಅಗತ್ಯವಿದೆ ಎಂದು ಸಮೀಕ್ಷೆಯು ಪ್ರತಿಪಾದಿಸಿದೆ.

ಉದ್ಯೋಗ ಸೃಷ್ಟಿ: ಖಾಸಗಿ ವಲಯದ ಮಹತ್ವದ ಪಾತ್ರ

ಭಾರತೀಯರ ಉನ್ನತ ಮತ್ತು ಹೆಚ್ಚುತ್ತಿರುವ ಆಕಾಂಕ್ಷೆಗಳನ್ನು ಪೂರೈಸಲು ಮತ್ತು 2047ರ ವೇಳೆಗೆ ʻವಿಕಸಿತ ಭಾರತʼ ಸಾಧಿಸುವತ್ತ ಪ್ರಯಾಣವನ್ನು ಪೂರ್ಣಗೊಳಿಸಲು ಖಾಸಗಿ ವಲಯ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ತ್ರಿಪಕ್ಷೀಯ ಒಪ್ಪಂದವನ್ನು ಸಮೀಕ್ಷೆ ಪ್ರತಿಪಾದಿಸಿದೆ. ಏಕೆಂದರೆ, ಉದ್ಯೋಗ ಸೃಷ್ಟಿಯು ಮುಖ್ಯವಾಗಿ ಖಾಸಗಿ ವಲಯದಲ್ಲಿ ನಡೆಯುತ್ತದೆ. ಆದರೆ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಉತ್ಪಾದಕತೆಯ ಮೇಲೆ ಪ್ರಭಾವ ಬೀರುವ ಅನೇಕ ವಿಷಯಗಳು ಮತ್ತು ಅದಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳು ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿ ಬರುತ್ತವೆ. ಹಾಗಾಗಿ ಖಾಸಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡವೆ ಸಹಕಾರ-ಸಮನ್ವಯವನ್ನು ಸಮೀಕ್ಷೆಯು ಒತ್ತಿ ಹೇಳಿದೆ.

33,000ಕ್ಕೂ ಹೆಚ್ಚು ಕಂಪನಿಗಳ ಮಾದರಿ ಫಲಿತಾಂಶಗಳನ್ನು ಉಲ್ಲೇಖಿಸಿರುವ ಸಮೀಕ್ಷೆಯು, ಹಣಕಾಸು ವರ್ಷ 2020 ಮತ್ತು ಹಣಕಾಸು ವರ್ಷ 2023ರ ನಡುವಿನ ಮೂರು ವರ್ಷಗಳಲ್ಲಿ, ಭಾರತೀಯ ಕಾರ್ಪೊರೇಟ್ ವಲಯದ ತೆರಿಗೆಗೆ ಮುಂಚಿನ ಲಾಭವು ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ಆದ್ದರಿಂದ, ಹಣಕಾಸಿನ ಕಾರ್ಯಕ್ಷಮತೆಯ ದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮವು ಖಾಸಗಿ ವಲಯದ ಕೈಯಲ್ಲಿದೆ ಎಂದು ಹೇಳಿದೆ.

ಭಾರಿ ಮಟ್ಟದ ಹೆಚ್ಚುವರಿ ಲಾಭದ ಅಲೆಯಲ್ಲಿ ತೇಲುತ್ತಿರುವ ಭಾರತೀಯ ಕಾರ್ಪೊರೇಟ್ ವಲಯವು ತನ್ನ ಸ್ವಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು, ಉದ್ಯೋಗಗಳನ್ನು ಸೃಷ್ಟಿಸುವ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಮತ್ತು ಸರಿಯಾದ ಮನೋಭಾವ ಮತ್ತು ಕೌಶಲ್ಯಗಳನ್ನು ಹೊಂದಿರುವ ಜನರನ್ನು ನೇಮಿಸಿಕೊಳ್ಳಬೇಕಿದೆ ಎಂದು ಆರ್ಥಿಕ ಸಮೀಕ್ಷೆಯು ವಾದಿಸಿದೆ.

ಖಾಸಗಿ ವಲಯ, ಸರ್ಕಾರ ಮತ್ತು ಶಿಕ್ಷಣ ರಂಗದ ನಡುವಿನ ಒಪ್ಪಂದ

ಸರ್ಕಾರ, ಖಾಸಗಿ ವಲಯ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ಮತ್ತೊಂದು ತ್ರಿಪಕ್ಷೀಯ ಒಪ್ಪಂದದ ಕಲ್ಪನೆಯನ್ನು ಸಮೀಕ್ಷೆಯು ಮುಂದಿಟ್ಟಿದೆ. ಭಾರತೀಯರನ್ನು ಕೌಶಲ್ಯಗೊಳಿಸುವ ಧ್ಯೇಯವನ್ನು ಪುನರಾರಂಭಿಸುವ ಮೂಲಕ ಅವರನ್ನು ಸಮಕಾಲೀನ ಕೌಶಲ್ಯಸನ್ನದ್ಧರನ್ನಾಗಿಸಿ, ತಾಂತ್ರಿಕವಾಗಿ ವಿಕಸಿನಗೊಳಿಸುವುದು ಈ ಒಪ್ಪಂದದ ಉದ್ದೇಶವಾಗಿರಬೇಕು. ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಬೇಕೆಂದರೆ, ಸರ್ಕಾರಗಳು ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ನಿರ್ಬಂಧಮುಕ್ತಗೊಳಿಸಿ, ಆ ಬೃಹತ್ ಕಾರ್ಯದಲ್ಲಿ ತಮ್ಮ ಪಾತ್ರಗಳನ್ನು ನಿರ್ವಹಿಸಲು ಅವಕಾಶ ನಿಡಬೇಕು ಎಂದು ಸಮೀಕ್ಷೆಯು ಪ್ರತಿಪಾದಿಸಿದೆ.

ನೈಜ ʻಸಾಂಸ್ಥಿಕ ಸಾಮಾಜಿಕ ಜವಾಬ್ದಾರಿʼ

ದೀರ್ಘಾವಧಿಗೆ ಹೂಡಿಕೆ ಮಾಡುವ ಸಂಸ್ಕೃತಿಯನ್ನು ಪೋಷಿಸುವ ಮತ್ತು ಉಳಿಸಿಕೊಳ್ಳುವ ಮೂಲಕ ಕಾರ್ಪೊರೇಟ್ ವಲಯ ವಹಿಸಬಹುದಾದ ಮಹತ್ವದ ಪಾತ್ರವನ್ನು ಸಮೀಕ್ಷೆ ಪ್ರತಿಪಾದಿಸಿದೆ. ಎರಡನೆಯದಾಗಿ, ಕಾರ್ಪೊರೇಟ್ ಲಾಭಗಳು ಪ್ರವರ್ಧಮಾನಕ್ಕೆ ಬರುತ್ತಿರುವಂತೆಯೇ, ಭಾರತೀಯ ಬ್ಯಾಂಕುಗಳ ನಿವ್ವಳ ಬಡ್ಡಿಯ ಅಂತರವು ಅನೇಕ ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿದೆ. ಇದು ಒಳ್ಳೆಯ ವಿಷಯ. ಲಾಭದಾಯಕ ಬ್ಯಾಂಕುಗಳು ಹೆಚ್ಚು ಸಾಲ ನೀಡುತ್ತವೆ ಎಂದು ಸಮೀಕ್ಷೆ ಹೇಳಿದೆ.

ಉತ್ತಮ, ಅನುಕೂಲಕರ ಸಮಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಹಿಂದಿನ ಹಣಕಾಸು ವಿಷಮ ಚಕ್ರಗಳಿಂದ ಕಲಿತ ಪಾಠಗಳನ್ನು ಮರೆಯದಿರುವುದು ಮುಖ್ಯ ಎಂದು ಸಮೀಕ್ಷೆ ಗಮನ ಸೆಳೆದಿದೆ. ಬ್ಯಾಂಕಿಂಗ್ ಉದ್ಯಮವು ಎರಡು ʻಎನ್‌ಪಿಎʼ ಚಕ್ರಗಳ ನಡುವಿನ ಅಂತರವನ್ನು ವಿಸ್ತರಿಸುವ ಗುರಿಯನ್ನು ಹೊಂದಿರಬೇಕು. ಉದ್ಯೋಗ ಮತ್ತು ಆದಾಯದ ಬೆಳವಣಿಗೆಯಿಂದ ಸೃಷ್ಟಿಯಾಗುವ ಹೆಚ್ಚಿನ ಬೇಡಿಕೆಯಿಂದ ಖಾಸಗಿ ಸಂಸ್ಥೆಗಳು ಪ್ರಯೋಜನ ಪಡೆಯುತ್ತವೆ ಎಂದು ಸಮೀಕ್ಷೆಯು ಹೇಳಿದೆ. ಗೃಹ ಉಳಿತಾಯವನ್ನು ಹೂಡಿಕೆ ಉದ್ದೇಶಗಳಿಗಾಗಿ ಹರಿಸುವುದರಿಂದ ಹಣಕಾಸು ವಲಯವು ಪ್ರಯೋಜನ ಪಡೆಯುತ್ತದೆ. ಮುಂಬರುವ ದಶಕಗಳಲ್ಲಿ ಮೂಲಸೌಕರ್ಯ ಮತ್ತು ಇಂಧನ ಪರಿವರ್ತನೆ ಹೂಡಿಕೆಗಳನ್ನು ಪೂರೈಸಲು ಈ ಸಂಪರ್ಕಗಳು ಬಲವಾಗಿ ಬೆಳೆಯಬೇಕು ಮತ್ತು ದೀರ್ಘಕಾಲ ಉಳಿಯಬೇಕು ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ಭಾರತದ ದುಡಿಯುವ ವಯಸ್ಸಿನ ಜನಸಂಖ್ಯೆಯು ಲಾಭದಾಯಕ ಉದ್ಯೋಗ ಪಡೆಯಬೇಕು, ಇದಕ್ಕಾಗಿ ಅವರಿಗೆ ಕೌಶಲ್ಯಗಳು ಮತ್ತು ಉತ್ತಮ ಆರೋಗ್ಯ ಬೇಕು ಎಂದು ಸಮೀಕ್ಷೆ ಪ್ರತಿಪಾದಿಸಿದೆ. ಸಾಮಾಜಿಕ ಮಾಧ್ಯಮಗಳು, ಮೊಬೈಲ್‌ ಸೇರಿದಂತೆ ಡಿಜಿಟಲ್‌ ಸಲಕರಣೆಗಳ ಬಳಕೆಯ ಸಮಯ, ಜಡ ಅಭ್ಯಾಸಗಳು ಮತ್ತು ಅನಾರೋಗ್ಯಕರ ಆಹಾರವು ಅತ್ಯಂತ ಅಪಾಯಕಾರಿ ಸಂಯೋಜನೆ. ಇದು ಸಾರ್ವಜನಿಕ ಆರೋಗ್ಯ ಮತ್ತು ಉತ್ಪಾದಕತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಭಾರತದ ಆರ್ಥಿಕ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂದು ಸಮೀಕ್ಷೆ ಹೇಳಿದೆ.

ಭಾರತದ ಸಾಂಪ್ರದಾಯಿಕ ಜೀವನಶೈಲಿ, ಆಹಾರ ಮತ್ತು ಪಾಕವಿಧಾನಗಳು ಹಲವು ಶತಮಾನಗಳಿಂದಲೂ ಪ್ರಕೃತಿ ಮತ್ತು ಪರಿಸರದೊಂದಿಗೆ ಆರೋಗ್ಯಕರವಾಗಿ ಮತ್ತು ಸಾಮರಸ್ಯದಿಂದ ಹೇಗೆ ಬದುಕಬೇಕು ಎಂಬುದನ್ನು ತೋರಿಸಿದೆ ಎಂದು ಸಮೀಕ್ಷೆ ವಾದಿಸಿದೆ. ಭಾರತೀಯ ಉದ್ಯಮಗಳು ಅವುಗಳ ಬಗ್ಗೆ ಕಲಿಯುವುದು ಮತ್ತು ಅಳವಡಿಸಿಕೊಳ್ಳುವುದು ವಾಣಿಜ್ಯ ದೃಷ್ಟಿಯಿಂದಲೂ ಮುಖ್ಯ.  ಏಕೆಂದರೆ ಅವುಗಳು ಜಾಗತಿಕ ಮಾರುಕಟ್ಟೆಯನ್ನು ಹೊಂದಿದ್ದು, ಮುನ್ನಡೆಸಲು ಕಾಯುತ್ತಿವೆ.

ಚುನಾಯಿತರೇ ಇರಲಿ ಅಥವಾ ನೇಮಕಗೊಂಡವರೇ ಆಗಿರಲಿ ಎಲ್ಲಾ ನೀತಿ ನಿರೂಪಕರು ಸವಾಲನ್ನು ಎದುರಿಸಲು ಸಜ್ಜಾಗಬೇಕಿದೆ ಎಂದು ಸಮೀಕ್ಷೆ ಹೇಳಿದೆ. ಸಚಿವಾಲಯಗಳು, ರಾಜ್ಯಗಳು, ಕೇಂದ್ರ ಮತ್ತು ರಾಜ್ಯಗಳ ಸರ್ಕಾರಗಳ ನಡುವೆ ಸಮಾಲೋಚನೆ, ಸಹಕಾರ, ಸಹಯೋಗ ಮತ್ತು ಸಮನ್ವಯ ಇರಬೇಕು. ಈ ಸವಾಲು ಹೇಳುವುದು ಸುಲಭ ಆದರೆ, ಮಾಡುವುದು ಕಷ್ಟ. ಅದನ್ನು ಈ ಪ್ರಮಾಣದಲ್ಲಿ, ಇಷ್ಟು ಕಾಲಮಿತಿಯಲ್ಲಿ ಮತ್ತು ಈಗಿನಷ್ಟು ಪ್ರಕ್ಷುಬ್ಧ ಜಾಗತಿಕ ವಾತಾವರಣದ ನಡುವೆ ಮಾಡುವುದು ಸುಲಭವಲ್ಲ ಅಲ್ಲ ಸಮೀಕ್ಷೆಯು ಗಮನ ಸೆಳೆದಿದೆ. ಈ ಪ್ರಯತ್ನದಲ್ಲಿ ಯಶಸ್ವಿಯಾಗಲು ಸರ್ಕಾರಗಳು, ಉದ್ಯಮಗಳು ಮತ್ತು ಸಾಮಾಜಿಕ ವಲಯಗಳ ನಡುವೆ ಒಮ್ಮತವನ್ನು ರೂಪಿಸಲು ಮತ್ತು ಕಾಯ್ದುಕೊಳ್ಳಲು ಸಮೀಕ್ಷೆಯು ಕರೆ ನೀಡಿದೆ.

ಕೃಷಿಯು ಬೆಳವಣಿಗೆಯ ಎಂಜಿನ್ ಆಗಬಹುದು...

ಅಸ್ತಿತ್ವದಲ್ಲಿರುವ ನೀತಿಗಳ ಪರಿಷ್ಕರಣೆ ಮತ್ತು ಹೊಸ ನೀತಿಗಳ ಮೂಲಕ ಕೃಷಿ ಕ್ಷೇತ್ರಕ್ಕೆ ಉತ್ತಮ ಸೇವೆ ಸಲ್ಲಿಸಬಹುದಾಗಿದೆ ಎಂದು ಸಮೀಕ್ಷೆಯು ಹೇಳಿದೆ. ಇಡೀ ಭಾರತದ ಮಟ್ಟದಲ್ಲಿ ಸಮಾಲೋಚನೆ ಅಗತ್ಯವಿರುವ ಕ್ಷೇತ್ರ ಇದಾಗಿದೆ. ಕೃಷಿ ಕ್ಷೇತ್ರದ ನೀತಿಗಳನ್ನು ದುರ್ಬಲಗೊಳಿಸುವ ಸಮಸ್ಯೆಗಳನ್ನು ಭಾರತ ಪರಿಹರಿಸಿದರೆ, ಅದರ ಫಲಿತಾಂಶವು ಅಗಾಧವಾಗಿರುತ್ತದೆ ಎಂದು ಸಮೀಕ್ಷೆ ಹೇಳಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಇದು ಸಾಮಾಜಿಕ-ಆರ್ಥಿಕ ಪ್ರಯೋಜನಗಳನ್ನು ಜನರಿಗೆ ತಲುಪಿಸುವುದಲ್ಲದೆ, ಜನರ ಆತ್ಮವಿಶ್ವಾಸವನ್ನು ಪುನಸ್ಥಾಪಿಸುತ್ತದೆ ಜೊತೆಗೆ ರಾಷ್ಟ್ರವನ್ನು ಉತ್ತಮ ಭವಿಷ್ಯದತ್ತ ಕೊಂಡೊಯ್ಯುವ ಸರ್ಕಾರದ ಸಾಮರ್ಥ್ಯದ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸುತ್ತದೆ ಎಂದು ಸಮೀಕ್ಷೆ ಹೇಳಿದೆ.

ತಾಂತ್ರಿಕ ಪ್ರಗತಿಗಳು ಮತ್ತು ಭೌಗೋಳಿಕ ರಾಜಕೀಯ ಪರಿಸರವು ಸಾಂಪ್ರದಾಯಿಕ ಬುದ್ಧಿವಂತಿಕೆಗೆ ಸವಾಲೊಡ್ಡುತ್ತಿದೆ. ವ್ಯಾಪಾರ ಸಂರಕ್ಷಣಾವಾದ, ಸಂಪನ್ಮೂಲ-ಸಂಗ್ರಹಣೆ, ಹೆಚ್ಚುವರಿ ಸಾಮರ್ಥ್ಯ ಮತ್ತು ಡಂಪಿಂಗ್, ಉತ್ಪಾದನೆ ಮತ್ತು ಕೃತಕ ಬುದ್ಧಿಮತ್ತೆಯ ಆಗಮನವು ಉತ್ಪಾದನೆ ಮತ್ತು ಸೇವೆಗಳ ಬೆಳವಣಿಗೆಯಿಂದ  ಲಾಭ ಪಡೆಯುವ ದೇಶಗಳ ಅವಕಾಶವನ್ನು ಸಂಕುಚಿತಗೊಳಿಸುತ್ತಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ಕೃಷಿ ಪದ್ಧತಿಗಳು ಮತ್ತು ನೀತಿ ನಿರೂಪಣೆಯ ದೃಷ್ಟಿಯಿಂದ ಮೂಲದತ್ತ ಮರಳಲು ಸಮೀಕ್ಷೆ ಕರೆ ನೀಡಿದೆ. ಕೃಷಿಯಿಂದ ಹೆಚ್ಚಿನ ಮೌಲ್ಯವರ್ಧನೆಯನ್ನು ಸೃಷ್ಟಿಸಬಹುದು, ರೈತರ ಆದಾಯವನ್ನು ಹೆಚ್ಚಿಸಬಹುದು, ಆಹಾರ ಸಂಸ್ಕರಣೆ ಮತ್ತು ರಫ್ತುಗಳಿಗೆ ಅವಕಾಶಗಳನ್ನು ಸೃಷ್ಟಿಸಬಹುದು ಹಾಘೂ ಭಾರತದ ನಗರ ಯುವಕರಿಗೆ ಕೃಷಿ ಕ್ಷೇತ್ರವನ್ನು ಫ್ಯಾಶನ್ ಮತ್ತು ಉತ್ಪಾದಕವಾಗಿಸಬಹುದು ಎಂದು ಸಮೀಕ್ಷೆ ಹೇಳಿದೆ. ಈ ಪರಿಹಾರವು ಭಾರತದ ಶಕ್ತಿಯ ಮೂಲವಾಗಬಹುದು ಮತ್ತು ವಿಶ್ವದ ಉಳಿದ ಭಾಗಗಳಿಗೆ – ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ದೇಶಗಳಿಗೆ ಮಾದರಿಯಾಗಬಹುದು ಎಂದು ಸಮೀಕ್ಷೆ ಹೇಳಿದೆ.

ಯಶಸ್ವಿ ಶಕ್ತಿ ಪರಿವರ್ತನೆಯ ಕಸರತ್ತು

ಕೃಷಿ ವಲಯದ ನೀತಿಗಳನ್ನು ಸರಿಪಡಿಸುವ ಸಂಕೀರ್ಣತೆಗೆ ಹೋಲಿಸಿದರೆ ಇಂಧನ ಪರಿವರ್ತನೆ ಮತ್ತು ವಾಹನ ಕ್ಷೇತ್ರದಂತಹ ಇತರ ಆದ್ಯತೆಗಳು ಪೇಲವವೆನಿಸಬಹುದು. ಆದರೂ, ಇವೆರಡರ ನಡುವೆ ಒಂದು ಸಾಮಾನ್ಯ ಅಂಶವಿದೆ.

ಇಂಧನ ಪರಿವರ್ತನೆ ಮತ್ತು ವಾಹನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಸಚಿವಾಲಯಗಳು ಮತ್ತು ರಾಜ್ಯಗಳ ನಡುವೆ ಅನೇಕ ವಿಚಾರಗಳಲ್ಲಿ ಹೊಂದಾಣಿಕೆ ಅಗತ್ಯವಿದೆ ಮತ್ತು ಈ ವಲಯಕ್ಕೆ ಈ ಕೆಳಗಿನ ಕ್ಷೇತ್ರಗಳಲ್ಲಿ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಸಮೀಕ್ಷೆ ಹೇಳಿದೆ:

  1. ಸಂಪನ್ಮೂಲಕ್ಕಾಗಿ ಶತ್ರು ರಾಷ್ಟ್ರಗಳ ಮೇಲೆ ಅವಲಂಬನೆ;
  2. ವಿದ್ಯುತ್ ಉತ್ಪಾದನೆಯ ವಿರಾಮ-ಪುನರಾರಂಭ, ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್‌ ಉತ್ಪಾದನೆ ಹೆಚ್ಚಳ ಮತ್ತು ಕುಸಿತದ ನಡುವೆ ಗ್ರಿಡ್ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಬ್ಯಾಟರಿಯಲ್ಲಿ ವಿದ್ಯುತ್‌ ಸಂಗ್ರಹಣೆ ಮುಂತಾದ ತಾಂತ್ರಿಕ ಸವಾಲುಗಳು
  3. ಭೂ ಪ್ರದೇಶ ಕೊರತೆಯ ದೇಶದಲ್ಲಿ ಭೂಮಿಯ ಬಳಕೆಯ ಮೇಲಿನ ಅವಕಾಶದ ವೆಚ್ಚವನ್ನು ಗುರುತಿಸುವುದು;
  4. ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ಇ-ಮೊಬಿಲಿಟಿ ಪರಿಹಾರಗಳಿಗೆ ಸಬ್ಸಿಡಿ ನೀಡುವುದರಿಂದ ಬರುವ ಹೆಚ್ಚುವರಿ ವೆಚ್ಚಗಳು; ಪಳೆಯುಳಿಕೆ ಇಂಧನಗಳ ಮಾರಾಟ ಮತ್ತು ಸಾಗಣೆಯಿಂದ ಪ್ರಸ್ತುತ ದೊರೆಯುತ್ತಿರುವ ತೆರಿಗೆ ಮತ್ತು ಸರಕು ಆದಾಯದ ನಷ್ಟ ಸೇರಿದಂತೆ ಹಣಕಾಸಿನ ಪರಿಣಾಮಗಳು;
  5. 'ಸ್ಟ್ರಾಂಡೆಡ್ ಸ್ವತ್ತುಗಳು'ಗಳಿಂದ ಬ್ಯಾಂಕ್‌ಗಳ ಮೇಲೆ ಆರ್ಥಿಕ ಪರಿಣಾಮ
  6. ಸಾರ್ವಜನಿಕ ಸಾರಿಗೆ ಮಾದರಿಗಳು ಮುಂತಾದ ಪರ್ಯಾಯ ವಾಹನ ಪರಿಹಾರಗಳ ಅರ್ಹತೆಗಳ ಪರಿಶೀಲನೆ.

ಈ ವಿಚಾರಗಳಲ್ಲಿ ಇತರ ರಾಷ್ಟ್ರಗಳನ್ನು ಅನುಕರಿಸುವ ಬದಲು ಮೂಲ ನೀತಿ ಮತ್ತು ಅಭ್ಯಾಸಗಳನ್ನು ರೂಪಿಸಲು ವಾದಿಸಿದೆ. ಇತರೆ ದೇಶಗಳ ಅನುಕರಣೆ ಕಾರ್ಯಸಾಧ್ಯವೂ ಅಲ್ಲ ಅಥವಾ ಅಪೇಕ್ಷಣೀಯವೂ ಅಲ್ಲ ಎಂದು ಸಮೀಕ್ಷೆಯು ಅಭಿಪ್ರಾಯಪಟ್ಟಿದೆ.

ಸಣ್ಣ ಉದ್ಯಮಗಳ ಶಕ್ತಿ ಅನಾವರಣ

ಸಣ್ಣ ಪ್ರಮಾಣದ ಉದ್ಯಮಗಳಿಗೆ ಅವುಗಳು ಎದುರಿಸುತ್ತಿರುವ ಅನುಸರಣೆ ಹೊರೆಗಳಿಂದ ಗರಿಷ್ಠ ಮಟ್ಟದಲ್ಲಿ ಪರಿಹಾರ ಒದಗಿಸಲು ಸಮೀಕ್ಷೆ ಪ್ರತಿಪಾದಿಸಿದೆ. ಕಾನೂನುಗಳು, ನಿಯಮಗಳು ಮತ್ತು ನಿಬಂಧನೆಗಳು ಈ ಉದ್ಯಮಗಳ ಹಣಕಾಸು ಮತ್ತು ಸಾಮರ್ಥ್ಯಗಳನ್ನು ಕುಂಠಿತಗೊಳಿಸುತ್ತವೆ, ಅವುಗಳು ಬೆಳೆಯುವ ಇಚ್ಛಾಶಕ್ತಿಯನ್ನೇ ಕಸಿದುಕೊಳ್ಳುತ್ತವೆ ಎಂದು ಸಮೀಕ್ಷೆ ಹೇಳಿದೆ.

ಮುಕ್ತತೆ ಆಡಳಿತದ ಭಾಗವಾಗಿರಲಿ

ಮುಂದಿರುವ ಸವಾಲುಗಳ ಬಗ್ಗೆ ಆಲೋಚನೆಯ ನಡುವೆ, ಪ್ರಜಾಸತಾತ್ಮಕ ಭಾರತದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯು ಅತಿದೊಡ್ಡ ಸವಾಲು ಎಂದು ಯಾರೂ ಎದೆಗುಂದುವ ಅಗತ್ಯವಿಲ್ಲ ಎಂದು ಸಮೀಕ್ಷೆ ಹೇಳಿದೆ. ಭಾರತ ಸುದೀರ್ಘ ಹಾದಿಯನ್ನು ಕ್ರಮಿಸಿದೆ. ಹಣಕಾಸು ವರ್ಷ-1993 ರಲ್ಲಿ ಸುಮಾರು 288 ಶಲಕೋಟಿ ಡಾಲರ್ ಇದ್ದ ಆರ್ಥಿಕತೆಯು 2023ರಲ್ಲಿ 3.6 ಟ್ರಿಲಿಯನ್ ಡಾಲರ್‌ ಮಟ್ಟಕ್ಕೆ ಬೆಳೆದಿದೆ. ಜೊತೆಗೆ ಭಾರತವು ಇತರ ಹೋಲಿಸಬಹುದಾದ ದೇಶಗಳಿಗಿಂತ ಪ್ರತಿ ಡಾಲರ್ ಸಾಲಕ್ಕೆ ಹೆಚ್ಚಿನ ಬೆಳವಣಿಗೆಯನ್ನು ಸೃಷ್ಟಿಸಿದೆ ಎಂದು ಸಮೀಕ್ಷೆಯು ಪ್ರತಿಪಾದಿಸಿದೆ.

ಭಾರತ ಸರ್ಕಾರವು ತನ್ನ ಸಾಮರ್ಥ್ಯವನ್ನು ಮುಕ್ತಗೊಳಿಸಬೇಕು ಮತ್ತು ಅದು ಅಗತ್ಯವಿಲ್ಲದ ಪ್ರದೇಶಗಳಲ್ಲಿ ತನ್ನ ಹಿಡಿತವನ್ನು ಬಿಡಬೇಕು. ಆ ಮೂಲಕ ತಾನು ಗಮನ ಹರಿಸಬೇಕಾದ ಪ್ರದೇಶಗಳ ಮೇಲಷ್ಟೇ ಗಮನ ಕೇಂದ್ರೀಕರಿಸುವ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ಸಮೀಕ್ಷೆಯು ವಾದಿಸಿದೆ. ಸರ್ಕಾರ ಎಲ್ಲಾ ಹಂತಗಳಲ್ಲಿ ಹೇರುತ್ತಿರುವ ಪರವಾನಗಿ, ತಪಾಸಣೆ ಮತ್ತು ಕಡ್ಡಾಯ ಅನುಸರಣೆಗಳು ಉದ್ದಿಮೆ-ವ್ಯವಹಾರಗಳ ಪಾಲಿಗೆ ಕಠಿಣ ಹೊರೆಯಾಗಿವೆ. ಆದರೆ, ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ  ಈಗ ಈ ಹೊರೆಯು ಕಡಿಮೆಯಾಗಿದೆ ಎಂದು ಸಮೀಕ್ಷೆ ಹೇಳಿದೆ. ಆದರೆ, ಈ ನಿಟ್ಟಿನಲ್ಲಿ ಇನ್ನೂ ಸಾಕಷ್ಟು ಸುಧಾರಣೆ ಆಗಬೇಕಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ಈ ಹೊರೆಯ ಪರಿಣಾಮ ತೀವ್ರವಾಗಿದೆ ಎಂದು ಸಮೀಕ್ಷೆ ಹೇಳಿದೆ. ನಮ್ಮೆಲ್ಲರಿಗೂ ನಮ್ಮ ಆಸ್ತಿಗಳನ್ನು ತ್ಯಜಿಸಲು, ಸ್ವತಂತ್ರರಾಗಲು ಮತ್ತು ಆ ಸ್ವಾತಂತ್ರ್ಯವನ್ನು ಆನಂದಿಸಲು ಸೂಚಿಸುವ ʻಈಶೋಪನಿಷತ್‌ʼ ಉಕ್ತಿಯೊಂದನ್ನು ಸಮೀಕ್ಷೆಯು ಉಲ್ಲೇಸಿದೆ:

ईशा वास्यमिदं सर्वं यत्किञ्च जगत्यां जगत्।

तेन त्यक्तेन भुञ्जीथा मा गृधः कस्यस्विद्धनम्॥

ಅಧಿಕಾರವು ಸರ್ಕಾರಗಳ ಅಮೂಲ್ಯವಾದ ಆಸ್ತಿಯಾಗಿದೆ. ಸರ್ಕಾರಗಳು ಅದರಲ್ಲಿ ಸ್ವಲ್ಪವಾದರೂ ಬಿಟ್ಟುಕೊಡಬಹುದು, ಆ ಮೂಲಕ ಆಳುವವರು ಮತ್ತು ಆಳ್ವಿಕೆಗೆ ಒಳಪಡುವವರು ಅದು ಸೃಷ್ಟಿಸುವ ಹಗುರತೆಯನ್ನು ಆನಂದಿಸಬಹುದು.

 

*****

 


(Release ID: 2036760) Visitor Counter : 98