ಹಣಕಾಸು ಸಚಿವಾಲಯ
azadi ka amrit mahotsav

ಯಶಸ್ಸಿನ ಕಥೆಯಾದ ಭಾರತೀಯ ಕೃಷಿ ಕ್ಷೇತ್ರ: ಆರ್ಥಿಕ ಸಮೀಕ್ಷೆ 2023-24


ಆರ್ಥಿಕ ಸಮೀಕ್ಷೆಯು ಕೃಷಿ ಕ್ಷೇತ್ರಕ್ಕೆ ಐದು ನೀತಿ ಶಿಫಾರಸುಗಳನ್ನು ಹೈಲೈಟ್ ಮಾಡಿದೆ

ಮೂಲಭೂತ ಆಹಾರ ಭದ್ರತೆಯಿಂದ ಪೌಷ್ಠಿಕಾಂಶದ ಭದ್ರತೆಯತ್ತ ಸಾಗುವುದು ಸಮಯದ ಅಗತ್ಯತೆಯಾಗಿದೆ

ಬೆಳೆ-ತಟಸ್ಥ ಪ್ರೋತ್ಸಾಹಕ ರಚನೆಗಳನ್ನು ಉತ್ತೇಜಿಸುವ ಸಮಯ ಬಂದಿದೆ: ಆರ್ಥಿಕ ಸಮೀಕ್ಷೆ 2023-24

ಕೃಷಿ ಕ್ಷೇತ್ರವು 3 ದೊಡ್ಡ ಸವಾಲುಗಳ ಸಂಗಮದಲ್ಲಿದೆ: ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆ, ಹವಾಮಾನ ಬದಲಾವಣೆ ಮತ್ತು ನಿರ್ಣಾಯಕ ಸಂಪನ್ಮೂಲಗಳ ಸುಸ್ಥಿರ ಬಳಕೆ

Posted On: 22 JUL 2024 3:03PM by PIB Bengaluru

ಭಾರತೀಯ ಕೃಷಿ ಕ್ಷೇತ್ರವು ಒಂದು ಯಶೋಗಾಥೆಯಾಗಿದೆ. 1960ರ ದಶಕದಲ್ಲಿ ಆಹಾರದ ಕೊರತೆಯಿದ್ದು, ಆಹಾರವನ್ನು ಆಮದು ಮಾಡಿಕೊಳ್ಳುವ ದೇಶವಾಗಿದ್ದ ನಮ್ಮ ಭಾರತ ದೇಶವು, ಈಗ ಕೃಷಿ ಉತ್ಪನ್ನಗಳ ನಿವ್ವಳ ರಫ್ತುದಾರನಾಗಿ ಬಹು ದೂರ ಸಾಗಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ 2023-24ರ ಮೂಲಕ ಎತ್ತಿ ತೋರಿಸಿದರು.

ಮೂಲಭೂತ ಆಹಾರ ಭದ್ರತೆಯಿಂದ ಪೌಷ್ಠಿಕಾಂಶದ ಭದ್ರತೆಯತ್ತ ಸಾಗುವುದು ಪ್ರಸ್ತುತದ ಅಗತ್ಯವಾಗಿದೆ ಎಂದು ಸಮೀಕ್ಷೆಯು ಗಮನಸೆಳೆದಿದೆ. ನಮಗೆ ಹೆಚ್ಚಿನ ಬೇಳೆಕಾಳುಗಳು, ರಾಗಿ, ಹಣ್ಣುಗಳು ಮತ್ತು ತರಕಾರಿಗಳು, ಹಾಲು, ಮಾಂಸದ ಅಗತ್ಯವಿದ್ದು, ಅವುಗಳ ಬೇಡಿಕೆಯು ಮೂಲ ಆಹಾರಗಳಿಗಿಂತ ವೇಗವಾಗಿ ಬೆಳೆಯುತ್ತಿದೆ ಎಂದು ಸಮೀಕ್ಷೆಯು ಹೇಳುತ್ತದೆ. ಆದ್ದರಿಂದ, ಕೃಷಿ ವಲಯದ ನೀತಿಗಳು ಹೆಚ್ಚು ಪೌಷ್ಟಿಕಾಂಶ ಮತ್ತು ಪ್ರಕೃತಿಯ ಸಂಪನ್ಮೂಲ ದತ್ತಿಗಳೊಂದಿಗೆ ಹೊಂದಿಕೆಯಾಗುವ 'ಬೇಡಿಕೆ-ಚಾಲಿತ ಆಹಾರ ವ್ಯವಸ್ಥೆ' ಯೊಂದಿಗೆ ಹೆಚ್ಚು ಹೊಂದಿಕೊಳ್ಳಬೇಕು ಎಂದು ಸಮೀಕ್ಷೆಯು ಸೂಚಿಸುತ್ತದೆ.

ಮಾರುಕಟ್ಟೆಗಳು ರೈತರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರಗಳು ತೆಗೆದುಕೊಳ್ಳಬಹುದಾದ ಐದು ನೀತಿ ಶಿಫಾರಸುಗಳನ್ನು ಆರ್ಥಿಕ ಸಮೀಕ್ಷೆ ವಿವರಿಸುತ್ತದೆ. ಮೊದಲ ಹಂತವು ಬೆಲೆ ಏರಿಕೆಯ ಮೊದಲ ಸಂಕೇತವಾಗಿ ಭವಿಷ್ಯ ಅಥವಾ ಭವಿಷ್ಯದ ಆಯ್ಕೆಗಳನ್ನು ಉತ್ತೇಜಿಸುವ ಬಗ್ಗೆ ಮಾತನಾಡುತ್ತದೆ. ಅಂತಹ ಮಾರುಕಟ್ಟೆಗಳ ಅರಿವುಳ್ಳ ನಿಯಂತ್ರಕ ವಿನ್ಯಾಸವು ಕೃಷಿ ಸರಕುಗಳ ಭವಿಷ್ಯದ ಮಾರುಕಟ್ಟೆಯಲ್ಲಿ ಅಧಿಕಾರಶಾಹಿ ಹಸ್ತಕ್ಷೇಪದ ಅಗತ್ಯವನ್ನು ನಿವಾರಿಸುತ್ತದೆ ಎಂದು ಸಮೀಕ್ಷೆಯು ವಿವರಿಸುತ್ತದೆ.

ಆರ್ಥಿಕ ಸಮೀಕ್ಷೆಯು ಎರಡನೇ ಶಿಫಾರಸ್ಸಾಗಿ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ರಫ್ತು ನಿಷೇಧವನ್ನು ಜಾರಿಗೊಳಿಸಿ, ವಿಶೇಷವಾಗಿ ಪ್ರಶ್ನಾರ್ಹ ಕೃಷಿ ಸರಕುಗಳು ಆಹಾರ ಧಾನ್ಯಗಳಂತಹ ಅಗತ್ಯ ಬಳಕೆಯ ವಸ್ತುಗಳಲ್ಲದಿದ್ದರೆ, ದೇಶೀಯ ಗ್ರಾಹಕರಿಗೆ ಪರ್ಯಾಯವಾಗಿ ಅವಕಾಶ ನೀಡುವ ಬಗ್ಗೆ ಮಾತನಾಡುತ್ತದೆ. "ಹೆಚ್ಚಿನ ಅಂತರರಾಷ್ಟ್ರೀಯ ಬೆಲೆಗಳಿಂದ ರೈತರಿಗೆ ಲಾಭ ಪಡೆಯಲು ಅವಕಾಶ ನೀಡಬೇಕು" ಎಂದು ಸಮೀಕ್ಷೆಯು ವಿವರಿಸುತ್ತದೆ.

ಮೂರನೇ ಹಂತವಾಗಿ, ಸಮೀಕ್ಷೆಯು ಹಣದುಬ್ಬರ-ಗುರಿ ಚೌಕಟ್ಟನ್ನು ಮರುಪರಿಶೀಲಿಸುವತ್ತ ಒಲವು ಹರಿಸುತ್ತದೆ. ಭಾರತದ ಹಣದುಬ್ಬರ-ಗುರಿ ಚೌಕಟ್ಟು ಆಹಾರವನ್ನು ಹೊರತುಪಡಿಸಿ ಹಣದುಬ್ಬರವನ್ನು ಗುರಿಯಾಗಿಸುವುದನ್ನು ಪರಿಗಣಿಸಬೇಕು ಎಂದು ಅದು ಹೇಳುತ್ತದೆ. "ಹೆಚ್ಚಿನ ಆಹಾರ ಬೆಲೆಗಳು ಹೆಚ್ಚಾಗಿ ಬೇಡಿಕೆ-ಪ್ರೇರಿತವಲ್ಲದೆ ಪೂರೈಕೆ-ಪ್ರೇರಿತವಾಗಿವೆ. ಭಾರತದ ಹಣದುಬ್ಬರ-ಗುರಿ ಚೌಕಟ್ಟು ಆಹಾರವನ್ನು ಹೊರತುಪಡಿಸಿ ಹಣದುಬ್ಬರ ದರವನ್ನು ಗುರಿಯಾಗಿಸಬಹುದಲ್ಲವೇ ಎಂದು ಅನ್ವೇಷಿಸುವುದು ಸೂಕ್ತವಾಗಿದೆ "ಎಂದು ಸಮೀಕ್ಷೆಯು ಒತ್ತಿ ಹೇಳುತ್ತದೆ. ಬಡ ಮತ್ತು ಕಡಿಮೆ ಆದಾಯದ ಗ್ರಾಹಕರಿಗೆ ಹೆಚ್ಚಿನ ಆಹಾರ ಬೆಲೆಗಳಿಂದ ಉಂಟಾಗುವ ತೊಂದರೆಗಳನ್ನು ಸೂಕ್ತ ಅವಧಿಗೆ ಮಾನ್ಯವಾಗಿರುವ ನಿರ್ದಿಷ್ಟ ಖರೀದಿಗಳಿಗೆ ನೇರ ಲಾಭ ವರ್ಗಾವಣೆ ಅಥವಾ ಕೂಪನ್ ಗಳ ಮೂಲಕ ನಿಭಾಯಿಸಬಹುದು ಎಂದು ಸಮೀಕ್ಷೆಯು ಹೇಳುತ್ತದೆ.

ನಾಲ್ಕನೆಯ ಶಿಫಾರಸು ಒಟ್ಟು ನಿವ್ವಳ ನೀರಾವರಿ ಪ್ರದೇಶವನ್ನು ಹೆಚ್ಚಿಸುವ ಅಗತ್ಯದ ಬಗ್ಗೆ ಮಾತನಾಡುತ್ತದೆ. ಹಲವಾರು ರಾಜ್ಯಗಳು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದ್ದು, ಭಾರತದ ನೀರಾವರಿ ದಕ್ಷತೆಯು ಮೇಲ್ಮೈ ನೀರಿಗೆ ಕೇವಲ 30-40 ಪ್ರತಿಶತ ಮತ್ತು ಅಂತರ್ಜಲಕ್ಕೆ ಕೇವಲ 50-60 ಪ್ರತಿಶತ ಮಾತ್ರ ಎಂದು ಸಮೀಕ್ಷೆಯು ತಿಳಿಸುತ್ತದೆ. ಈ ಸಮೀಕ್ಷೆಯು ಉತ್ತಮ ನೀರಿನ ಬಳಕೆಯ ಅಗತ್ಯ, ಉತ್ತಮ ಕೃಷಿ ಪದ್ಧತಿಗಳು ಮತ್ತು ಹನಿನೀರು ಮತ್ತು ಉತ್ತಮ ಗೊಬ್ಬರದಂತಹ ತಂತ್ರಜ್ಞಾನಗಳ ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಸಮೀಕ್ಷೆಯ ಐದನೇ ಮತ್ತು ಅಂತಿಮ ಸಲಹೆಯೆಂದರೆ ಕೃಷಿಯನ್ನು ಹವಾಮಾನ ಪರಿಗಣನೆಗಳಿಗೆ ಅನುಗುಣವಾಗಿ ಮಾಡುವುದು. ಭತ್ತ ಮತ್ತು ಕಬ್ಬಿನಂತಹ ಧಾನ್ಯಗಳು ಅತ್ಯಧಿಕ ನೀರಿನ ಅವಶ್ಯಕತೆಯ ಬೆಳೆಗಳಾಗಿದ್ದು, ಭತ್ತದ ಕೃಷಿಯು ಮೀಥೇನ್ ಹೊರಸೂಸುವಿಕೆಗೆ ಕಾರಣವಾಗುತ್ತದೆ. ಬೆಳೆ-ತಟಸ್ಥ ಪ್ರೋತ್ಸಾಹಕ ರಚನೆಗಳನ್ನು ಉತ್ತೇಜಿಸುವ ಸಮಯ ಬಂದಿದೆ ಎಂದು ಸಮೀಕ್ಷೆಯು ಹೇಳುತ್ತದೆ.

ಕೃಷಿಯು 21ನೇ ಶತಮಾನದ ಮೂರು ದೊಡ್ಡ ಸವಾಲುಗಳ ಸಂಗಮದಲ್ಲಿದೆ. ಆ ಮೂರು ದೊಡ್ಡ ಸವಾಲುಗಳೆಂದರೆ - ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆಯನ್ನು ಉಳಿಸಿಕೊಳ್ಳುವುದು; ಹವಾಮಾನ ಬದಲಾವಣೆಯ ಹೊಂದಾಣಿಕೆ; ಮತ್ತು ನೀರು, ಇಂಧನ ಹಾಗೂ ಭೂಮಿಯಂತಹ ನಿರ್ಣಾಯಕ ಸಂಪನ್ಮೂಲಗಳ ಸುಸ್ಥಿರ ಬಳಕೆ ಎಂದು ಸಮೀಕ್ಷೆಯು ಎತ್ತಿ ತೋರಿಸುತ್ತದೆ. ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು ಲಾಭದಾಯಕ ಉದ್ಯೋಗಕ್ಕೆ ಗಮನಾರ್ಹ ಸಾಮರ್ಥ್ಯವನ್ನು ಹೊಂದಿದ್ದರೂ, ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡಲು ಕೃಷಿಯ ಸಾಮರ್ಥ್ಯವನ್ನು ಭಾರತ ಇನ್ನೂ ಸಂಪೂರ್ಣವಾಗಿ ಬಳಸಿಕೊಳ್ಳಬೇಕಾಗಿದೆ ಎಂದು ಸಮೀಕ್ಷೆಯು ಹೇಳುತ್ತದೆ.

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯಿಂದ ಉಂಟಾಗುವ ಸವಾಲುಗಳಿಂದಾಗಿ ಕೃಷಿ ಕ್ಷೇತ್ರಕ್ಕೆ ಗಂಭೀರವಾದ ರಚನಾತ್ಮಕ ರೂಪಾಂತರದ ಅಗತ್ಯವಿದೆ ಎಂದು ಸಮೀಕ್ಷೆಯು ಉಲ್ಲೇಖಿಸುತ್ತದೆ. ಹಿಮ್ಮುಖ ವಲಸೆಯಿಂದಾಗಿ ಕೋವಿಡ್ ವರ್ಷಗಳಲ್ಲಿ ಕೃಷಿ ಉದ್ಯೋಗದಲ್ಲಿನ ಏರಿಕೆ, ಹಣಕಾಸು ವರ್ಷ '24ರಲ್ಲಿ ಕೃಷಿಯಲ್ಲಿ ಮೌಲ್ಯವರ್ಧನೆಯ ಬೆಳವಣಿಗೆಯ ದರದಲ್ಲಿನ ಕುಸಿತ ಮತ್ತು 2024ರ ಬೇಸಿಗೆಯಲ್ಲಿ ದೇಶದ ವಾಯುವ್ಯ ಮತ್ತು ಮಧ್ಯ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ನೀರಿನ ಕೊರತೆ ಮತ್ತು ಇಂಧನ ಬಳಕೆಯೊಂದಿಗೆ ತೀವ್ರ ಬೇಸಿಗೆಯು ಭಾರತದ ಕೃಷಿ ವಲಯದ ನೀತಿಗಳನ್ನು ಗಂಭೀರ ಮತ್ತು ಪ್ರಾಮಾಣಿಕವಾಗಿ ಪರಿಗಣಿಸುವುದನ್ನು ಕಡ್ಡಾಯಗೊಳಿಸುತ್ತದೆ ಎಂದು  ಸಮೀಕ್ಷೆಯನ್ನು ಮುಕ್ತಾಯಗೊಳಿಸಲಾಗಿದೆ.

 

*****
 


(Release ID: 2036742) Visitor Counter : 87