ಹಣಕಾಸು ಸಚಿವಾಲಯ

ಪ್ರಬಲ ಉತ್ಪಾದನೆ ಬೆಳವಣಿಗೆಯಿಂದ ಸರ್ಕಾರದ ವಿವೇಕಯುತ ವಿತ್ತೀಯ ಮತ್ತು ವ್ಯಾಪಾರ ನೀತಿ 2024ರ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವನ್ನು ನಾಲ್ಕು ವರ್ಷಗಳ ಕನಿಷ್ಠ ಶೇ.5.4ಕ್ಕೆ ತಗ್ಗಿಸಿದೆ


ಹಣಕಾಸು ವರ್ಷ 2024ರಲ್ಲಿ ಪ್ರಮುಖ ಸೇವೆಗಳ ಹಣದುಬ್ಬರ ಒಂಬತ್ತು ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಕೆ

ಆರ್ಥಿಕ ವರ್ಷ 2025ರಲ್ಲಿ ಮುಖ್ಯಾಂಶ ಹಣದುಬ್ಬರ ಶೇಕಡಾ 4.5 ಮತ್ತು ಆರ್ಥಿಕ ವರ್ಷ 2026 ರಲ್ಲಿ ಶೇ.4.1ರಷ್ಟು ಆರ್ ಬಿ ಐ ನಿರೀಕ್ಷೆ 

ತಾಜಾ ತೂಕಗಳು ಮತ್ತು ಐಟಂ ಬಾಸ್ಕೆಟ್ ಗಳೊಂದಿಗೆ ಗ್ರಾಹಕ ಬೆಲೆ ಸೂಚ್ಯಂಕವನ್ನು ಪರಿಷ್ಕರಿಸಲು ಆರ್ಥಿಕ ಸಮೀಕ್ಷೆ ಶಿಫಾರಸು 

ಹಣದುಬ್ಬರ ಒತ್ತಡವನ್ನು ಕಡಿಮೆ ಮಾಡಲು ಆಧುನಿಕ ಸಂಗ್ರಹಣೆ ಮತ್ತು ಸಂಸ್ಕರಣಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವಾಗ ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಬೀಜಗಳ ಕೃಷಿಯನ್ನು ವಿಸ್ತರಿಸಲು ಆರ್ಥಿಕ ಸಮೀಕ್ಷೆಯಲ್ಲಿ ಸಲಹೆ 

Posted On: 22 JUL 2024 3:05PM by PIB Bengaluru

ಕಡಿಮೆ ಮತ್ತು ಸ್ಥಿರವಾದ ಹಣದುಬ್ಬರವು ಆರ್ಥಿಕ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಪ್ರಮುಖವಾಗಿರುವುದರಿಂದ ಇಂದು ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆ 2023-24, ಬೆಲೆಗಳು ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ವಿಶೇಷ ಒತ್ತು ನೀಡಿದೆ. ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸಿಕೊಳ್ಳುವಾಗ ಹಣದುಬ್ಬರವನ್ನು ಮಧ್ಯಮ ಮಟ್ಟದಲ್ಲಿ ಇಡುವ ಸವಾಲನ್ನು ಸರ್ಕಾರಗಳು ಮತ್ತು ಕೇಂದ್ರ ಬ್ಯಾಂಕ್‌ಗಳು ಎದುರಿಸುತ್ತವೆ ಎಂದು ಸಮೀಕ್ಷೆ ಹೇಳುತ್ತದೆ. ಈ ಸೂಕ್ಷ್ಮ ಸಮತೋಲನವನ್ನು ಸಾಧಿಸಲು ಆರ್ಥಿಕ ಸೂಚಕಗಳ ಎಚ್ಚರಿಕೆಯ ಮೇಲ್ವಿಚಾರಣೆ, ಸೂಕ್ತ ಮತ್ತು ಸಮಯೋಚಿತ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಬೆಲೆ ಸ್ಥಿರತೆಯ ಗುರಿ ಮತ್ತು ಕೇಂದ್ರ ಸರ್ಕಾರದ ನೀತಿ ಕ್ರಮಗಳ ಬದ್ಧತೆಯಿಂದಾಗಿ ಭಾರತವು ಆರ್ಥಿಕ ವರ್ಷ 2024ರಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 5.4 ಕ್ಕೆ ಯಶಸ್ವಿಯಾಗಿ ಇರಿಸಿಕೊಳ್ಳಲು ಯಶಸ್ವಿಯಾಗಿದ್ದು, ಇದು ಕೋವಿಡ್ ಸಾಂಕ್ರಾಮಿಕ ನಂತರ 4 ವರ್ಷಗಳಲ್ಲಿ ಕಡಿಮೆ ಮಟ್ಟವಾಗಿದೆ. 

ಭಾರತದ ಚಿಲ್ಲರೆ ಹಣದುಬ್ಬರವು ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳಿಗಿಂತ (EMDES) ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಅಂಕಿಅಂಶ ಪ್ರಕಾರ 2022 ಮತ್ತು 2023 ರಲ್ಲಿ ವಿಶ್ವದ ಸರಾಸರಿಗಿಂತ ಕಡಿಮೆಯಾಗಿದೆ ಎಂಬ ಅಂಶವನ್ನು ಆರ್ಥಿಕ ಸಮೀಕ್ಷೆ ಎತ್ತಿ ತೋರಿಸುತ್ತದೆ. ಸ್ಥಾಪಿತ ವಿತ್ತೀಯ ನೀತಿಗಳು, ಆರ್ಥಿಕ ಸ್ಥಿರತೆ, ಪೂರೈಕೆ ಮತ್ತು ಬೇಡಿಕೆಯ ಪರಿಸ್ಥಿತಿಗಳನ್ನು ಸಮತೋಲನಗೊಳಿಸುವ ಉತ್ತಮ ಅಭಿವೃದ್ಧಿ ಹೊಂದಿದ ಮತ್ತು ಸಮರ್ಥ ಮಾರುಕಟ್ಟೆಗಳು ಮತ್ತು ಸ್ಥಿರ ಕರೆನ್ಸಿಗಳಂತಹ ಅಂಶಗಳು ಹಣದುಬ್ಬರದ ಪರಿಣಾಮಕಾರಿ ನಿರ್ವಹಣೆಗೆ ಕೊಡುಗೆ ನೀಡುತ್ತವೆ ಎಂದು ಸಮೀಕ್ಷೆ ಹೇಳುತ್ತದೆ. ಐತಿಹಾಸಿಕವಾಗಿ, ಮುಂದುವರಿದ ಆರ್ಥಿಕತೆಗಳಲ್ಲಿನ ಹಣದುಬ್ಬರವು ಸಾಮಾನ್ಯವಾಗಿ ಇಎಂಡಿಇಗಳಿಗಿಂತ ಕಡಿಮೆಯಾಗಿದೆ.

ಹಣದುಬ್ಬರ ನಿರ್ವಹಣೆ

ಬೆಲೆ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಗುರಿಯೊಂದಿಗೆ, ಅನೇಕ ದೇಶಗಳು ತಮ್ಮ ಆರ್ಥಿಕ ಉದ್ದೇಶಗಳನ್ನು ಉತ್ತಮವಾಗಿ ಪೂರೈಸುವ ವಿವಿಧ ಅಂಶಗಳ ಆಧಾರದ ಮೇಲೆ ತಮ್ಮದೇ ಆದ ಹಣದುಬ್ಬರ ಗುರಿಗಳನ್ನು ಸ್ಥಾಪಿಸಿವೆ. ಭಾರತದ ಹಣದುಬ್ಬರ ನಿರ್ವಹಣೆ, ಹಣದುಬ್ಬರ ಗುರಿಗೆ ಸಂಬಂಧಿಸಿದಂತೆ ವಿವಿಧ ಅಭಿವೃದ್ಧಿ ಹೊಂದಿದ ಮತ್ತು ಉದಯೋನ್ಮುಖ ಆರ್ಥಿಕತೆಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಮೀಕ್ಷೆ ಹೇಳುತ್ತದೆ. 2023 ರಲ್ಲಿ, ಭಾರತದ ಹಣದುಬ್ಬರ ದರವು ಅದರ ಗುರಿ ವ್ಯಾಪ್ತಿಯ ಶೇಕಡಾ 2 ರಿಂದ ಶೇಕಡಾ 6ರೊಳಗೆ ಇತ್ತು. ಅಮೆರಿಕ, ಜರ್ಮನಿ ಮತ್ತು ಫ್ರಾನ್ಸ್‌ನಂತಹ ಮುಂದುವರಿದ ಆರ್ಥಿಕತೆಗಳಿಗೆ ಹೋಲಿಸಿದರೆ, 2021-2023 ರವರೆಗಿನ ತ್ರೈವಾರ್ಷಿಕ ಸರಾಸರಿ ಹಣದುಬ್ಬರದಲ್ಲಿ ಭಾರತವು ತನ್ನ ಹಣದುಬ್ಬರದ ಗುರಿಯಿಂದ ಕಡಿಮೆ ವ್ಯತ್ಯಾಸವನ್ನು ಹೊಂದಿದೆ. ಈಗ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದಾಗಿ ಜಾಗತಿಕ ಬೇಡಿಕೆ-ಪೂರೈಕೆ ಅಸಮತೋಲನದ ಸವಾಲುಗಳ ಹೊರತಾಗಿಯೂ, ಭಾರತದ ಹಣದುಬ್ಬರ ದರವು 2023 ರಲ್ಲಿ ಜಾಗತಿಕ ಸರಾಸರಿಗಿಂತ ಶೇಕಡಾ 1.4ರಷ್ಟು ಕಡಿಮೆಯಾಗಿದೆ.

2020 ರಿಂದ, ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ದೇಶಗಳು ಸವಾಲುಗಳನ್ನು ಎದುರಿಸುತ್ತಿವೆ. ಭಾರತವು ತನ್ನ ವಿವೇಕಯುತ ಆಡಳಿತಾತ್ಮಕ ಕ್ರಮಗಳು ಮತ್ತು ವಿತ್ತೀಯ ನೀತಿಯ ಮೂಲಕ ಪ್ರಮುಖ ಹಣದುಬ್ಬರದಲ್ಲಿ ಇಳಿಕೆಯ ಪ್ರವೃತ್ತಿಯನ್ನು ತರಲು ಸಮರ್ಥವಾಗಿದೆ. ಆರ್ಥಿಕ ಸಮೀಕ್ಷೆಯ ಪ್ರಕಾರ, ಮೇ 2022 ರಿಂದ, ವಿತ್ತೀಯ ನೀತಿಯು ಶೇಕಡಾ 4ರಿಂದ 2023 ರ ಫೆಬ್ರುವರಿಯಲ್ಲಿ ಶೇಕಡಾ 6.5 ಕ್ಕೆ 250 ಬೇಸಿಸ್ ಪಾಯಿಂಟ್‌ಗಳಿಂದ ಪಾಲಿಸಿ ರೆಪೊ ದರವನ್ನು ಹೆಚ್ಚಿಸುವ ಮೂಲಕ ವ್ಯವಸ್ಥೆಯಲ್ಲಿ ಹೆಚ್ಚುವರಿ ದ್ರವ್ಯತೆಯನ್ನು ಸೆಳೆಯುವತ್ತ ಗಮನಹರಿಸಿದೆ. ಅದರ ನಂತರ, ವ್ಯವಸ್ಥೆಯನ್ನು ಕ್ರಮೇಣ ಹಿಂತೆಗೆದುಕೊಳ್ಳುವುದರ ಮೇಲೆ ಕೇಂದ್ರೀಕರಿಸುವ ಮೂಲಕ ನೀತಿ ದರವನ್ನು ಬದಲಾಗದೆ ಇರಿಸಲಾಯಿತು, ಗುರಿಯೊಂದಿಗೆ ಹಣದುಬ್ಬರವನ್ನು ಹೊಂದಿಸುವ ಗುರಿಯನ್ನು ಹೊಂದಿತ್ತು, ಅದೇ ಸಮಯದಲ್ಲಿ ಬೆಳವಣಿಗೆಯನ್ನು ಉತ್ತೇಜಿಸಿದೆ. ಪರಿಣಾಮವಾಗಿ, ಆರ್ಥಿಕ ವರ್ಷ 2023ರಲ್ಲಿ ನಿರಂತರ ಮತ್ತು ಜಿಗುಟು ಪ್ರಮುಖ ಹಣದುಬ್ಬರವು ಕಳೆದ ತಿಂಗಳು ಶೇಕಡಾ 3.1 ಕ್ಕೆ ಇಳಿದಿದೆ,

ಎಲ್ ಪಿ ಜಿ, ಪೆಟ್ರೋಲ್ ಮತ್ತು ಡೀಸೆಲ್‌ಗಳ ಬೆಲೆ ಕಡಿತದಂತಹ ಆಡಳಿತಾತ್ಮಕ ಕ್ರಮಗಳು ಎಲ್ ಪಿಜಿ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕಡಿಮೆ ಹಣದುಬ್ಬರಕ್ಕೆ ಕಾರಣವಾಯಿತು ಎಂದು ಸಮೀಕ್ಷೆ ಪ್ರತಿಪಾದಿಸುತ್ತದೆ. ಎಲ್ ಪಿಜಿ ಹಣದುಬ್ಬರ ದರವು ಸೆಪ್ಟೆಂಬರ್ 2023 ರಿಂದ ಹಣದುಬ್ಬರವಿಳಿತದ ವಲಯದಲ್ಲಿದೆ ಆದರೆ ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿನ ಚಿಲ್ಲರೆ ಹಣದುಬ್ಬರವು ಮಾರ್ಚ್ 2024 ರಲ್ಲಿ ಹಣದುಬ್ಬರವಿಳಿತದ ವಲಯಕ್ಕೆ ಸ್ಥಳಾಂತರಗೊಂಡಿತು. ಹೆಚ್ಚುವರಿಯಾಗಿ, ಜಾಗತಿಕ ಸರಕುಗಳ ಬೆಲೆಗಳು 2023 ರಲ್ಲಿ ಕುಸಿದವು, ಇಂಧನ, ಲೋಹಗಳು, ಖನಿಜಗಳು ಮತ್ತು ಕೃಷಿ ಸರಕುಗಳಲ್ಲಿನ ಬೆಲೆ ಒತ್ತಡವನ್ನು ಆಮದು ಮಾಡಿದ ಹಣದುಬ್ಬರ ಮಾರ್ಗಗಳ ಮೂಲಕ ಕಡಿಮೆ ಮಾಡಿತು. ಕಡಿಮೆ ಇಂಧನ ಮತ್ತು ಪ್ರಮುಖ ಹಣದುಬ್ಬರವು ಆರ್ಥಿಕ ವರ್ಷ 2024ರಲ್ಲಿ ಆಹಾರದ ಬೆಲೆಗಳಲ್ಲಿನ ಚಂಚಲತೆಯ ಹೊರತಾಗಿಯೂ, ಮುಖ್ಯ ಹಣದುಬ್ಬರ ಕೆಳಮುಖ ಹಾದಿಯನ್ನು ತೋರಿಸಿದೆ. ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ(MoSPI)ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ಜೂನ್ 2024 ರಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇಕಡಾ 5.1 ರಷ್ಟಿತ್ತು.

ಗ್ರಾಹಕ ದರ ಸೂಚ್ಯಂಕ(CPI) ಪ್ರಮುಖ ಹಣದುಬ್ಬರದಿಂದ ಆಹಾರ ಮತ್ತು ಶಕ್ತಿಯ ವಸ್ತುಗಳನ್ನು ಹೊರತುಪಡಿಸಿ ಮಾಪನ ಮಾಡಲಾದ ಪ್ರಮುಖ ಹಣದುಬ್ಬರವು ಆರ್ಥಿಕ ವರ್ಷ 2024ರಲ್ಲಿ ನಾಲ್ಕು ವರ್ಷಗಳ ಕನಿಷ್ಠ ಮಟ್ಟಕ್ಕೆ ಸಾಕ್ಷಿಯಾಗಿದೆ. ಕೋವಿಡ್ ಸಾಂಕ್ರಾಮಿಕ ನಂತರ ಗರಿಷ್ಠ ಮಟ್ಟದಿಂದ, ಆಹಾರ ಹಣದುಬ್ಬರವನ್ನು ಮೃದುಗೊಳಿಸುವ ಮೂಲಕ ಭಾರತದಲ್ಲಿ ಹಣದುಬ್ಬರದ ಒತ್ತಡವು ಆರ್ಥಿಕ ವರ್ಷ 2022ರಲ್ಲಿ ಕಡಿಮೆಯಾಗಿದೆ. ಆರ್ಥಿಕ ವರ್ಷ 2023ರಲ್ಲಿ ಹಣದುಬ್ಬರದ ಒತ್ತಡವು ಮತ್ತೊಮ್ಮೆ ರಷ್ಯಾ-ಉಕ್ರೇನ್ ಯುದ್ಧದಿಂದ ಪರಿಣಾಮ ಬೀರಿತು, ಇದು ಆಹಾರ ಮತ್ತು ಇಂಧನ ಬೆಲೆಗಳ ಏರಿಕೆಗೆ ಕಾರಣವಾಗುವ ಮರುಪಾವತಿ ಪೂರೈಕೆ ಸರಪಳಿಯನ್ನು ಅಡ್ಡಿಪಡಿಸಿತು. 2024 ರಲ್ಲಿ, ಬೆಲೆ ಪರಿಸ್ಥಿತಿ ಸುಧಾರಿಸಿತು. ಸರಕು ಮತ್ತು ಸೇವೆಗಳೆರಡರಲ್ಲೂ ಪ್ರಮುಖ ಹಣದುಬ್ಬರದ ಕುಸಿತದಿಂದ ನಡೆಸಲ್ಪಡುವ ಗ್ರಾಹಕ ಬೆಲೆ ಸೂಚ್ಯಂಕ ಹಣದುಬ್ಬರವನ್ನು ಮಧ್ಯಮಗೊಳಿಸಲಾಗಿದೆ. 2024 ರಲ್ಲಿ ಪ್ರಮುಖ ಸೇವೆಗಳ ಹಣದುಬ್ಬರವು ಒಂಬತ್ತು ವರ್ಷಗಳ ಕನಿಷ್ಠ ಮಟ್ಟಕ್ಕೆ ತಗ್ಗಿದೆ; ಅದೇ ಸಮಯದಲ್ಲಿ, ಪ್ರಮುಖ ಸರಕುಗಳ ಹಣದುಬ್ಬರವು ನಾಲ್ಕು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ.

ವಿತ್ತೀಯ ನೀತಿಯ ಬಾಹ್ಯರೇಖೆಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಹಣದುಬ್ಬರದ ಪ್ರವೃತ್ತಿಗಳು ಪ್ರಮುಖವಾಗಿವೆ. ಬೆಲೆಯ ಒತ್ತಡಗಳ ಉದಯೋನ್ಮುಖ ಮಾದರಿಗಳನ್ನು ನಿರ್ಣಯಿಸುತ್ತಾ, ಆರ್ ಬಿಐ ಹಣದುಬ್ಬರದ ಒತ್ತಡವನ್ನು ತಗ್ಗಿಸಲು ಮೇ 2022 ರಿಂದ ರೆಪೊ ದರವನ್ನು ಕ್ರಮೇಣವಾಗಿ 250 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದೆ, ಇದು ಏಪ್ರಿಲ್ 2022 ಮತ್ತು ಜೂನ್ 2024 ರ ನಡುವಿನ ಪ್ರಮುಖ ಹಣದುಬ್ಬರದಲ್ಲಿ ಸುಮಾರು ಶೇಕಡಾ 4 ಪಾಯಿಂಟ್‌ಗಳನ್ನು ಕಡಿಮೆ ಮಾಡಲು ಕಾರಣವಾಯಿತು. ವಸತಿ ಬಾಡಿಗೆ ಹಣದುಬ್ಬರದಲ್ಲಿ, 2023 ರಲ್ಲಿ ಹೊಸ ಮನೆಗಳ ನಿರ್ಮಾಣ ಕೂಡ ಹೆಚ್ಚಾದವು.

ಗ್ರಾಹಕ ಬಾಳ್ವಿಕೆ ಬರುವ ಹಣದುಬ್ಬರವು 2020 ಮತ್ತು 2023 ರ ನಡುವೆ ಹಂತಹಂತವಾಗಿ ಶೇಕಡಾ 5 ಪಾಯಿಂಟ್‌ಗಳಿಂದ ಹೆಚ್ಚಾಯಿತು, ಮುಖ್ಯವಾಗಿ 2021 ರಲ್ಲಿ ಚಿನ್ನದ ಬೆಲೆಗಳು ಮತ್ತು 2022-23 ರಲ್ಲಿನ ಬಟ್ಟೆಗಳ ಹೆಚ್ಚಳದಿಂದಾಗಿ ಆಯಿತು. ಪ್ರಮುಖ ಕಚ್ಚಾ ವಸ್ತುಗಳ ಪೂರೈಕೆಯಲ್ಲಿನ ಸುಧಾರಣೆಯೊಂದಿಗೆ, ಗ್ರಾಹಕ ಬೆಲೆಬಾಳುವ ವಸ್ತುಗಳ ಹಣದುಬ್ಬರ ದರವು 2024 ರಲ್ಲಿ ಕುಸಿಯಿತು. ಆದಾಗ್ಯೂ, ನಿರೀಕ್ಷಿತ ಫೆಡ್ ದರ ಕಡಿತ ಮತ್ತು ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಅನಿಶ್ಚಿತತೆಯಿಂದ ಹೆಚ್ಚಿನ ಚಿನ್ನದ ಬೆಲೆಗಳು ಒಟ್ಟಾರೆ ಬಾಳಿಕೆ ಬರುವ ಹಣದುಬ್ಬರದ ಮೇಲೆ ಮೇಲ್ಮುಖ ಒತ್ತಡವನ್ನು ಬೀರಿವೆ. ಗ್ರಾಹಕ ಬಾಳ್ವಿಕೆ ಬರದ ವಸ್ತುಗಳ(CND) ಹಣದುಬ್ಬರ 2020 ರಲ್ಲಿ ಕುಸಿಯಿತು, ಇದು 2021ರಲ್ಲಿ ಹೆಚ್ಚಾಗಲು ಆರಂಭವಾಯಿತು. ಆರ್ಥಿಕ ವರ್ಷ 2022ರಲ್ಲಿ ಸಾರ್ವಕಾಲಿಕ ಮಟ್ಟಕ್ಕೆ ತಲುಪಿ 2023 ಮತ್ತು 2024 ರಲ್ಲಿ ತೀವ್ರವಾಗಿ ಕುಸಿಯಿತು.

ಆಹಾರ ಹಣದುಬ್ಬರವು ಕಳೆದ ಎರಡು ವರ್ಷಗಳಲ್ಲಿ ಜಾಗತಿಕ ವಿದ್ಯಮಾನವಾಗಿದೆ. ಹವಾಮಾನ ಬದಲಾವಣೆಗೆ ಆಹಾರದ ಬೆಲೆಗಳಲ್ಲಿ ವ್ಯತ್ಯಾಸವನ್ನು ಸಂಶೋಧನೆ ಸೂಚಿಸುತ್ತದೆ. 2023-24ರಲ್ಲಿ, ಹವಾಮಾನ ವೈಪರೀತ್ಯಗಳು, ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ ಮತ್ತು ಹಾನಿಗೊಳಗಾದ ಬೆಳೆಗಳಿಂದ ಕೃಷಿ ವಲಯದ ಮೇಲೆ ಪರಿಣಾಮ ಬೀರಿತು, ಇದು ಕೃಷಿ ಉತ್ಪಾದನೆ ಮತ್ತು ಆಹಾರ ಬೆಲೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಹಾಗಾಗಿ, ಗ್ರಾಹಕ ಆಹಾರ ಬೆಲೆ ಸೂಚ್ಯಂಕ (CFPI) ಆಧಾರಿತ ಆಹಾರ ಹಣದುಬ್ಬರವು 2022 ರಲ್ಲಿ ಶೇಕಡಾ 3.8ರಿಂದ 2023 ರಲ್ಲಿ ಶೇಕಡಾ 6.6  ಮತ್ತು 2024 ರಲ್ಲಿ ಶೇಕಡಾ 7.5ಕ್ಕೆ ಏರಿತು. ಆದಾಗ್ಯೂ, ಅಗತ್ಯ ಆಹಾರ ಪದಾರ್ಥಗಳ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ, ನಿಗದಿತ ಮಳಿಗೆಗಳಲ್ಲಿ ಚಿಲ್ಲರೆ ವ್ಯಾಪಾರ ಮತ್ತು ಸಕಾಲಿಕ ಆಮದು ಸೇರಿದಂತೆ ತ್ವರಿತ ಕ್ರಮಗಳನ್ನು ತೆಗೆದುಕೊಂಡಿತು. ಹೆಚ್ಚುವರಿಯಾಗಿ, ಬಡವರಿಗೆ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, 81 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಕಳೆದ ಜನವರಿ ತಿಂಗಳಲ್ಲಿ ಐದು ವರ್ಷಗಳ ಅವಧಿಗೆ ವಿಸ್ತರಿಸಲಾಯಿತು.

ಜಾಗತಿಕ ಆಹಾರ ಬೆಲೆಗಳು ಮತ್ತು ದೇಶೀಯ ಹಣದುಬ್ಬರ

ಜಾಗತಿಕ ಆಹಾರ ಬೆಲೆಗಳು ದೇಶೀಯ ಹಣದುಬ್ಬರದ ಮೇಲೆ ಪರಿಣಾಮ ಬೀರುತ್ತವೆ. ಭಾರತದಲ್ಲಿ, ಖಾದ್ಯ ತೈಲ ಮಾರುಕಟ್ಟೆಯು ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ, ಒಟ್ಟು ಖಾದ್ಯ ತೈಲದ ಅಗತ್ಯತೆಯ ಶೇಕಡಾ 50 ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ, ಇದು ಜಾಗತಿಕ ಬೆಲೆಗಳಿಗೆ ಸಂವೇದನಾಶೀಲವಾಗಿರುತ್ತದೆ. ಕೈಗೆಟಕುವ ಬೆಲೆಯಲ್ಲಿ ಗ್ರಾಹಕರಿಗೆ ಖಾದ್ಯ ತೈಲಗಳ ಲಭ್ಯತೆಯನ್ನು ಖಾತ್ರಿಪಡಿಸಲು ಸರ್ಕಾರವು ಜಾಗತಿಕ ಮಾರುಕಟ್ಟೆಯ ಪ್ರವೃತ್ತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತದೆ. ಜಾಗತಿಕ ಬೆಲೆ ಏರಿಳಿತಕ್ಕೆ ಸಂಬಂಧಿಸಿದ ಅಪಾಯಗಳನ್ನು ತಗ್ಗಿಸಲು ದೇಶೀಯ ಉತ್ಪಾದನೆಯೊಂದಿಗೆ ಆಮದುಗಳನ್ನು ಸಮತೋಲನಗೊಳಿಸಲು ಸಹ ಪ್ರಯತ್ನಗಳನ್ನು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ, ಖಾದ್ಯ ತೈಲ, ತಾಳೆ ಎಣ್ಣೆಗಳ ರಾಷ್ಟ್ರೀಯ ಮಿಷನ್ ಆಮದು ಹೊರೆಯನ್ನು ಕಡಿಮೆ ಮಾಡಲು ದೇಶೀಯ ಕಚ್ಚಾ ತಾಳೆ ಎಣ್ಣೆ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಸಕ್ಕರೆಯ ವಿಷಯದಲ್ಲಿ, ಸಾಕಷ್ಟು ಸ್ಥಳೀಯ ಸರಬರಾಜುಗಳನ್ನು ಪೂರೈಸಿ ಸಕ್ಕರೆ ಹಣದುಬ್ಬರವನ್ನು ನಿರ್ವಹಿಸಲು ಸರ್ಕಾರವು ಜೂನ್ 2022 ರಲ್ಲಿ ರಫ್ತಿನ ಮೇಲೆ ನಿರ್ಬಂಧಗಳನ್ನು ಘೋಷಿಸಿತು. ಈ ರಫ್ತು ನಿರ್ಬಂಧಗಳು ದೇಶೀಯ ಸಕ್ಕರೆ ಬೆಲೆಗಳನ್ನು ಸ್ಥಿರಗೊಳಿಸುವಲ್ಲಿ ಪಾತ್ರವಹಿಸಿವೆ. ಇದರ ಪರಿಣಾಮವಾಗಿ, ಜಾಗತಿಕ ಸಕ್ಕರೆ ಬೆಲೆ ಸೂಚ್ಯಂಕದಲ್ಲಿ 2023 ಫೆಬ್ರವರಿಯಿಂದ ಏರಿಳಿತ ಕಂಡುಬಂದರೂ, ದೇಶೀಯ ಸಕ್ಕರೆ ಬೆಲೆಗಳು ಕಡಿಮೆ ಸೂಚ್ಯಂಕ ತೋರಿಸಿವೆ. 

ಚಿಲ್ಲರೆ ಹಣದುಬ್ಬರದಲ್ಲಿ ತಾರಾಜ್ಯ ವ್ಯತ್ಯಾಸಗಳನ್ನು ಆರ್ಥಿಕ ಸಮೀಕ್ಷೆ ತೋರಿಸುತ್ತಿದ್ದು, ಒಟ್ಟು 36 ರಾಜ್ಯಗಳ ಪೈಕಿ 29ರಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಣದುಬ್ಬರ ದರವು ಶೇಕಡಾ 6 ಕ್ಕಿಂತ ಕಡಿಮೆಯಿದೆ ಎಂದು ಆರ್ಥಿಕ ಸಮೀಕ್ಷೆಯು ಪ್ರತಿಪಾದಿಸುತ್ತದೆ. ಹಣದುಬ್ಬರದಲ್ಲಿನ ಈ ಅಂತಾರಾಜ್ಯ ವ್ಯತ್ಯಾಸಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತವೆ ಏಕೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ನಾಗರಿಕರ ಬಳಕೆಯು ನಗರಕ್ಕಿಂತ (ಶೇಕಡಾ 29.6) ಆಹಾರ ಪದಾರ್ಥಗಳಲ್ಲಿ (ಶೇಕಡಾ 47.3) ಹೆಚ್ಚಿನ ತೂಕವನ್ನು ಹೊಂದಿದೆ. ಆದ್ದರಿಂದ, ಕಳೆದ ಎರಡು ವರ್ಷಗಳಲ್ಲಿ, ಹೆಚ್ಚಿದ ಆಹಾರ ಬೆಲೆಗಳನ್ನು ಕಂಡ ರಾಜ್ಯಗಳು ಹೆಚ್ಚಿನ ಗ್ರಾಮೀಣ ಹಣದುಬ್ಬರವನ್ನು ಅನುಭವಿಸಿದವು.

ಭವಿಷ್ಯದಲ್ಲಿ ಹಣದುಬ್ಬರ ಸೂಚಕಗಳು

ಆರ್ ಬಿ ಐ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF) ಭಾರತದ ಗ್ರಾಹಕ ಬೆಲೆ ಹಣದುಬ್ಬರವು 2026 ರಲ್ಲಿ ಹಣದುಬ್ಬರ ಗುರಿಯತ್ತ ಹಂತಹಂತವಾಗಿ ಹೊಂದಾಣಿಕೆಯಾಗುತ್ತದೆ ಎಂದು ಅಂದಾಜಿಸಿದೆ. ಸಾಮಾನ್ಯ ಮುಂಗಾರು ಋತು ಮತ್ತು ಹೆಚ್ಚಿನ ಬಾಹ್ಯ ಅಥವಾ ನೀತಿ ಆಘಾತಗಳಿಲ್ಲ ಎಂದು ಭಾವಿಸಿದರೆ, 2025ರಲ್ಲಿ ಶೇಕಡಾ 4.5 ಮತ್ತು 2026 ರಲ್ಲಿ ಶೇಕಡಾ 4.1 ರಷ್ಟು ಹಣದುಬ್ಬರವನ್ನು ನಿರೀಕ್ಷಿಸುತ್ತದೆ. ಐಎಂಎಫ್ ಭಾರತಕ್ಕೆ 2024 ರಲ್ಲಿ 4.6 ಶೇಕಡಾ ಮತ್ತು 2025 ರಲ್ಲಿ 4.2 ಶೇಕಡಾ ಹಣದುಬ್ಬರ ದರವನ್ನು ಅಂದಾಜು ಮಾಡಿದೆ. ಸರಕುಗಳ ಜಾಗತಿಕ ಪೂರೈಕೆಯು ಹೆಚ್ಚಾಗುತ್ತದೆ ಎಂದು ವಿಶ್ವ ಬ್ಯಾಂಕ್ ನಿರೀಕ್ಷಿಸುತ್ತದೆ. ಸುಧಾರಿತ ಕೈಗಾರಿಕಾ ಚಟುವಟಿಕೆ ಮತ್ತು ವ್ಯಾಪಾರ ಬೆಳವಣಿಗೆಯಿಂದಾಗಿ ಅವುಗಳ ಬೇಡಿಕೆಯೂ ಹೆಚ್ಚಾಗುತ್ತದೆ. ಇದು 2024 ರಲ್ಲಿ ಸರಕುಗಳ ಬೆಲೆ ಸೂಚ್ಯಂಕದಲ್ಲಿ 3 ಶೇಕಡಾ ಕುಸಿತವನ್ನು ಮತ್ತು 2025 ರಲ್ಲಿ 4 ಶೇಕಡಾ ಇಳಿಕೆಯನ್ನು ತೋರಿಸಿದ್ದು, ಮುಖ್ಯವಾಗಿ ಕಡಿಮೆ ಇಂಧನ, ಆಹಾರ ಮತ್ತು ರಸಗೊಬ್ಬರ ಬೆಲೆಗಳಿಂದ ನಡೆಸಲ್ಪಡುತ್ತದೆ. ಈ ವರ್ಷ ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲದ ಬೆಲೆಗಳಲ್ಲಿ ಗಮನಾರ್ಹ ಕುಸಿತದಿಂದಾಗಿ ಇಂಧನ ಬೆಲೆ ಸೂಚ್ಯಂಕವು ಕಡಿಮೆಯಾಗುವ ನಿರೀಕ್ಷೆಯಿದೆ. ರಸಗೊಬ್ಬರ ಬೆಲೆಗಳು ದುರ್ಬಲಗೊಳ್ಳುವ ಸಾಧ್ಯತೆಯಿದೆ. ಆದರೆ ಬಲವಾದ ಬೇಡಿಕೆ ಮತ್ತು ರಫ್ತು ನಿರ್ಬಂಧಗಳಿಂದಾಗಿ 2015-2019ರ ಮಟ್ಟಕ್ಕಿಂತ ಹೆಚ್ಚಾಗಿರುತ್ತದೆ. ಹೆಚ್ಚಿದ ಜಾಗತಿಕ ಕೈಗಾರಿಕಾ ಚಟುವಟಿಕೆ ಮತ್ತು ಶುದ್ಧ ಇಂಧನ ಉತ್ಪಾದನೆಯನ್ನು ಪ್ರತಿಬಿಂಬಿಸುವ ಮೂಲ ಲೋಹದ ಬೆಲೆಗಳು ಹೆಚ್ಚಾಗುವ ನಿರೀಕ್ಷೆಯಿದೆ. ಸಾಮಾನ್ಯವಾಗಿ, ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಬೆಲೆಗಳಲ್ಲಿನ ಪ್ರಸ್ತುತ ಹಿಮ್ಮುಖ ಚಲನೆಯು ದೇಶೀಯ ಹಣದುಬ್ಬರ ದೃಷ್ಟಿಕೋನಕ್ಕೆ ಧನಾತ್ಮಕವಾಗಿದೆ.

ಭಾರತಕ್ಕೆ ಅಲ್ಪಾವಧಿಯ ಹಣದುಬ್ಬರ ದೃಷ್ಟಿಕೋನವು ಸೌಮ್ಯ ಪ್ರಮಾಣದಲ್ಲಿದೆ. ಆದಾಗ್ಯೂ, ದೀರ್ಘಾವಧಿಯ ಬೆಲೆ ಸ್ಥಿರತೆಯ ದೃಷ್ಟಿಕೋನದಿಂದ, ಆರ್ಥಿಕ ಸಮೀಕ್ಷೆಯು ಮುಂದಿನ ಮಾರ್ಗವಾಗಿ ಈ ಕೆಳಗಿನ ಆಯ್ಕೆಗಳನ್ನು ಅನ್ವೇಷಿಸಲು ಸೂಚಿಸುತ್ತದೆ:

1. ಪ್ರಮುಖ ಎಣ್ಣೆಕಾಳುಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಖಾದ್ಯ ತೈಲಗಳಿಗೆ ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು, ಅಕ್ಕಿ ಹೊಟ್ಟು ಮತ್ತು ಜೋಳದ ಎಣ್ಣೆಯಂತಹ ಸಾಂಪ್ರದಾಯಿಕವಲ್ಲದ ತೈಲಗಳ ಸಾಮರ್ಥ್ಯವನ್ನು ಅನ್ವೇಷಿಸುವುದು ಮತ್ತು ಖಾದ್ಯ ತೈಲಗಳ ರಾಷ್ಟ್ರೀಯ ಮಿಷನ್ ವ್ಯಾಪ್ತಿಯನ್ನು ವಿಸ್ತರಿಸುವುದು

2. ಬೇಳೆಕಾಳುಗಳ ಅಡಿಯಲ್ಲಿ ನಿರ್ದಿಷ್ಟವಾಗಿ ದ್ವಿದಳ ಧಾನ್ಯ, ತೊಗರಿ ಬೇಳೆ, ಉದ್ದಿನ ಬೇಳೆ ಬೆಳೆಗಳನ್ನು ಇನ್ನಷ್ಟು ಜಿಲ್ಲೆಗಳಲ್ಲಿ  ಮತ್ತು ಭತ್ತದ ಪಾಳು ಪ್ರದೇಶಗಳಲ್ಲಿ ಹೆಚ್ಚಿಸುವುದು.  ಖಚಿತವಾದ ನೀರಾವರಿ ಸೌಲಭ್ಯವಿರುವ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಉದ್ದು ಮತ್ತು ಹೆಸರು ಬೇಳೆ ಕೃಷಿಯನ್ನು ಉತ್ತೇಜಿಸುವುದು.

3. ತರಕಾರಿಗಳಿಗೆ ವಿಶೇಷವಾಗಿ ಟೊಮ್ಯಾಟೊ ಮತ್ತು ಈರುಳ್ಳಿಗಳಿಗೆ ಆಧುನಿಕ ಸಂಗ್ರಹಣೆ ಮತ್ತು ಸಂಸ್ಕರಣಾ ಸೌಲಭ್ಯಗಳನ್ನು ಇನ್ನಷ್ಟು ಸುಧಾರಿಸುವುದು ಮತ್ತು ಅಭಿವೃದ್ಧಿಪಡಿಸುವುದು.

4. ರೈತರಿಂದ ಅಂತಿಮ ಗ್ರಾಹಕರವರೆಗೆ, ಪ್ರಮಾಣೀಕರಿಸಬಹುದಾದ ರೀತಿಯಲ್ಲಿ ಹೆಚ್ಚಿನ ಆವರ್ತನದ ಬೆಲೆ ನಿರ್ವಹಣೆ ಅಂಕಿಅಂಶಗಳನ್ನು ಒಟ್ಟುಗೂಡಿಸುವ ಮೂಲಕ ನಿರ್ದಿಷ್ಟ ವಸ್ತುಗಳ ಬೆಲೆ ಹೆಚ್ಚಳಗಳನ್ನು ಎದುರಿಸಲು ಸರ್ಕಾರದಿಂದ ಆಡಳಿತಾತ್ಮಕ ಕ್ರಮದ ತ್ವರಿತತೆ ಮತ್ತು ಪರಿಣಾಮಕಾರಿತ್ವವನ್ನು ಸುಧಾರಿಸುವುದು. ಸರಕು ಮತ್ತು ಸೇವೆಗಳಿಗೆ ಉತ್ಪಾದಕ ಬೆಲೆ ಸೂಚ್ಯಂಕವನ್ನು ವೇಗಗೊಳಿಸುವುದು ಮತ್ತು

5. ಗೃಹಬಳಕೆಯ ಗ್ರಾಹಕ ವೆಚ್ಚ ಸಮೀಕ್ಷೆ, 2022-23 ನ್ನು ಬಳಸಿಕೊಂಡು ತಾಜಾ ತೂಕ ಮತ್ತು ಐಟಂ ಬಾಸ್ಕೆಟ್ ಗಳೊಂದಿಗೆ ಗ್ರಾಹಕ ಬೆಲೆ ಸೂಚ್ಯಂಕವನ್ನು ಪರಿಷ್ಕರಿಸುವುದು.
 

*****



(Release ID: 2036611) Visitor Counter : 50