ಹಣಕಾಸು ಸಚಿವಾಲಯ
azadi ka amrit mahotsav

ಕಳೆದ ಐದು ವರ್ಷಗಳಲ್ಲಿ ಕೃಷಿ ವಲಯದ ಸರಾಸರಿ ವಾರ್ಷಿಕ ಬೆಳವಣಿಗೆ ದರ ಶೇಕಡ 4.18 : ಆರ್ಥಿಕ ಸಮೀಕ್ಷೆ


ಸಣ್ಣ ಹಿಡುವಳಿದಾರ ರೈತರು ಹೆಚ್ಚಿನ ಮೌಲ್ಯದ ಕೃಷಿಯತ್ತ ಹೊರಳಬೇಕು

ಎಲ್ಲಾ ತೈಲಬೀಜಗಳ ಒಟ್ಟು ಪ್ರದೇಶ ವ್ಯಾಪ್ತಿ 2014-15ರ 25.6 ದಶಲಕ್ಷ ಹೆಕ್ಟೇರ್‌ ನಿಂದ 2023-24 ರ ವೇಳೆಗೆ 30.08 ದಶಲಕ್ಷ ಹೆಕ್ಟೇರ್‌ ಗೆ ವಿಸ್ತರಣೆ (ಶೇ.17.5 ರಷ್ಟು ಬೆಳವಣಿಗೆ)

ಕೃಷಿ ವಲಯಕ್ಕೆ ಉತ್ತೇಜನ ನೀಡಲು ಖಾಸಗಿ ವಲಯ ಹೂಡಿಕೆ ವೃದ್ಧಿಸುವುದು ಮುಖ್ಯ 

Posted On: 22 JUL 2024 2:59PM by PIB Bengaluru

ಸಣ್ಣ ಹಿಡುವಳಿದಾರ ರೈತರು ಹೆಚ್ಚಿನ ಮೌಲ್ಯದ ಕೃಷಿಯತ್ತ ವಾಲಬೇಕು ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವೆ ಶ್ರೀಮತಿ. ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿಂದು ಮಂಡಿಸಿದ ಆರ್ಥಿಕ ಸಮೀಕ್ಷೆ 2023-24 ತಿಳಿಸುತ್ತದೆ. ಸಣ್ಣ ಹಿಡುವಳಿದಾರರ ಆದಾಯ ಹೆಚ್ಚಾದರೆ, ಅವರು ಉತ್ಪಾದನಾ ಸರಕುಗಳಿಗೆ ಬೇಡಿಕೆ ಇಡಲಿದ್ದು, ಇದರಿಂದ ತಯಾರಿಕಾ ಕ್ರಾಂತಿಯಾಗಲಿದೆ ಎಂದು ಸಮೀಕ್ಷೆ ಹೇಳಿದೆ.

ಭಾರತೀಯ ಕೃಷಿ ವಲಯವು ಒಟ್ಟು ಜನಸಂಖ್ಯೆಯ ಸುಮಾರು ಶೇಕಡ 42.3 ರಷ್ಟು ಜನರಿಗೆ ಜೀವನೋಪಾಯಕ್ಕೆ ಬೆಂಬಲ ನೀಡಿದ್ದು ಪ್ರಸ್ತುತದ ದರಗಳಲ್ಲಿ ದೇಶದ ಜಿಡಿಪಿಯ ಶೇಕಡ 18.2 ರಷ್ಟು ಪಾಲನ್ನು ಹೊಂದಿದೆ. ಈ ವಲಯವು ಕಳೆದ ಐದು ವರ್ಷಗಳಲ್ಲಿ ಸ್ಥಿರ ಬೆಲೆಗಳಲ್ಲಿ ಶೇಕಡ 4.18 ರಷ್ಟು ಸರಾಸರಿ ವಾರ್ಷಿಕ ಪ್ರಗತಿ ದಾಖಲಿಸಿದ್ದು 2023-24ರ ತಾತ್ಕಾಲಿಕ ಅಂದಾಜಿನ ಪ್ರಕಾರ ಕೃಷಿ ವಲಯದ ಪ್ರಗತಿ ದರ ಶೇಕಡ 1.4 ರಷ್ಟಿದ್ದು ಈ ವಲಯ ಆಶಾದಾಯಕವಾಗಿದೆ ಎಂಬುದನ್ನು ಸೂಚಿಸುತ್ತದೆ. 

ಕೃಷಿ ಸಂಶೋಧನೆಯಲ್ಲಿ ಹೂಡಿಕೆ ಮತ್ತು ನೀತಿ ನಿರೂಪಣೆಗಳ ಅನುಷ್ಠಾನವು ಆಹಾರ ಭದ್ರತೆಗೆ ಗಣನೀಯ ಕೊಡುಗೆ ನೀಡಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸುತ್ತದೆ. ಕೃಷಿ ವಲಯದಲ್ಲಿ ಹೂಡಿಕೆಯಾಗುವ ಪ್ರತಿ ಒಂದು ರೂಪಾಯಿಗೆ (ಶಿಕ್ಷಣ ಸೇರಿ) ₹13.85 ಗಳಿಕೆ ಸಿಗಲಿದೆ ಎಂದು ಅಂದಾಜಿಸಲಾಗಿದೆ. 2022-23 ರಲ್ಲಿ ಕೃಷಿ ಸಂಶೋಧನೆಗಾಗಿ ₹19.65 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.

ಕೃಷಿ ವಲಯದಲ್ಲಿ ಖಾಸಗಿ ಹೂಡಿಕೆಯು ಅದರ ಪ್ರಗತಿಗೆ ಅತಿ ಮುಖ್ಯ ಎಂದು ಹೇಳುತ್ತಾ, ಕೃಷಿಯಲ್ಲಿ ಖಾಸಗಿ ವಲಯದ ಹೂಡಿಕೆ ವರ್ಧನೆಗೆ ಆರ್ಥಿಕ ಸಮೀಕ್ಷೆ ಕರೆ ನೀಡಿದೆ. ತಂತ್ರಜ್ಞಾನ, ತಯಾರಿಕಾ ವಿಧಾನಗಳು, ಮಾರುಕಟ್ಟೆ ಮೂಲಸೌಕರ್ಯಗಳಲ್ಲಿ ಹೂಡಿಕೆ ಹೆಚ್ಚಿಸಲು ಮತ್ತು ಬೆಳೆ ಕಟಾವಿನ ನಂತರದ ನಷ್ಟಗಳನ್ನು ತಗ್ಗಿಸುವ ಕಾರ್ಯಗಳಿಗೆ ಚುರುಕು ನೀಡಬೇಕಿದೆ. ಕಟಾವು ನಂತರದ ಮೂಲಸೌಕರ್ಯಕ್ಕೆ ಮತ್ತು ಆಹಾರ ಸಂಸ್ಕರಣಾ ವಲಯದ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಿದಲ್ಲಿ ತ್ಯಾಜ್ಯ/ನಷ್ಟ ತಗ್ಗಿಸಬಹುದಾಗಿದೆ ಮತ್ತು ಸಂಗ್ರಹ ಅವಧಿಯನ್ನು ಹೆಚ್ಚಿಸಬಹುದಾಗಿದ್ದು, ರೈತರಿಗೆ ಉತ್ತಮ ಬೆಲೆ ಖಾತರಿಪಡಿಸಬಹುದಾಗಿದೆ.

ಆಹಾರ ಧಾನ್ಯಗಳ ಉತ್ಪಾದನೆ 2022-23 ರಲ್ಲಿ ದಾಖಲೆಯ ಅತಿ ಹೆಚ್ಚಿನ ಮಟ್ಟವಾದ 329.7 ದಶಲಕ್ಷ ಟನ್‌ ಗಳಷ್ಟಾಗಿದ್ದು, ತೈಲಬೀಜಗಳ ಉತ್ಪಾದನೆ 41.4 ದಶಲಕ್ಷ ಟನ್‌ ಗೆ ತಲುಪಿತ್ತು. 2023-24 ರಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಅತ್ಯಲ್ಪ ಇಳಿಕೆಯಾಗಿದ್ದು 328.8 ದಶಲಕ್ಷ ಟನ್‌ ಗಳಷ್ಟಿದೆ. ಇದಕ್ಕೆ ಪ್ರಮುಖ ಕಾರಣ ದುರ್ಬಲ ಮತ್ತು ವಿಳಂಬ ಮುಂಗಾರು ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. 2015-16 ರಲ್ಲಿ 86.3 ಲಕ್ಷ ಟನ್‌ ಗಳಷ್ಟಿದ್ದ ಖಾದ್ಯ ತೈಲದ ಸ್ಥಳೀಯ ಲಭ್ಯತೆಯು 2023-24 ರಲ್ಲಿ 121.33 ಲಕ್ಷ ಟನ್‌ ಗಳಿಗೆ ಏರಿಕೆಯಾಗಿದೆ. ಎಲ್ಲಾ ತೈಲಬೀಜಗಳ ಪ್ರದೇಶ ವ್ಯಾಪ್ತಿಯು 2014-15 ರಲ್ಲಿ 25.6 ದಶಲಕ್ಷ ಹೆಕ್ಟೇರ್‌ ನಷ್ಟಿದ್ದು 2023-24 ರ ವೇಳೆಗೆ 30.08 ದಶಲಕ್ಷ ಹೆಕ್ಟೇರ್‌ ಗೆ ವಿಸ್ತರಣೆಯಾಗಿದೆ (ಶೇಕಡ 17.5 ರಷ್ಟು ಬೆಳವಣಿಗೆ). ಇದು ಆಮದು ಮಾಡುವ ಖಾದ್ಯ ತೈಲದ ಪ್ರಮಾಣವನ್ನು ತಗ್ಗಿಸಿದೆ. ಸ್ಥಳೀಯ ಬೇಡಿಕೆ ಮತ್ತು ಬಳಕೆ ಹೆಚ್ಚಿದ್ದಾಗ್ಯೂ 2015-16 ರಲ್ಲಿ ಶೇಕಡ 63.2 ರಷ್ಟಿದ್ದ ಆಮದು ಪ್ರಮಾಣ 2022-23 ರಲ್ಲಿ ಶೇಕಡ 57.3 ಕ್ಕೆ ಇಳಿಕೆಯಾಗಿದೆ. 

ಕೃಷಿ ಮಾರುಕಟ್ಟೆಯಲ್ಲಿ ಸಾಮರ್ಥ್ಯ ಉತ್ತೇಜನಕ್ಕೆ ಮತ್ತು ಬೆಲೆ ಅನ್ವೇಷಣೆ ಸುಧಾರಣೆಗೆ, ಸರ್ಕಾರವು ಇ-ನ್ಯಾಮ್‌ ಯೋಜನೆಯನ್ನು ಜಾರಿಗೆ ತಂದಿದ್ದು 2024ರ ಮಾರ್ಚ್‌ 14 ರ ವೇಳೆಗೆ ಈ ಇ-ನ್ಯಾಮ್‌ ಪೋರ್ಟಲ್‌ ನಲ್ಲಿ 1.77 ಕೋಟಿಗೂ ಹೆಚ್ಚಿನ ರೈತರು ಮತ್ತು 2.56 ಲಕ್ಷಕ್ಕೂ ಹೆಚ್ಚು ವರ್ತಕರು ನೋಂದಾಯಿತರಾಗಿದ್ದಾರೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. 10,000 ಎಫ್‌ ಪಿ ಒ ಗಳನ್ನು ರೂಪಿಸಲು ಮತ್ತು ಅವುಗಳಿಗೆ ಉತ್ತೇಜನ ನೀಡಲು ಈ ಯೋಜನೆಯನ್ನು ಸರ್ಕಾರ 2027-28 ರವರೆಗೆ ₹6.86 ಸಾವಿರ ಕೋಟಿ ಬಜೆಟ್‌ ವೆಚ್ಚದೊಂದಿಗೆ 2020 ರಲ್ಲಿ ಜಾರಿಗೆ ತಂದಿತ್ತು. 2024ರ ಫೆಬ್ರವರಿ 29ರ ವೇಳೆಗೆ ಈ ಹೊಸ ಎಫ್‌ ಪಿ ಒ ಯೋಜನೆಯಡಿ 8,195 ಎಫ್‌ ಪಿ ಒ ಗಳು ನೋಂದಾಯಿಸಿಕೊಂಡಿದ್ದು, 3,325 ಎಫ್‌ ಪಿ ಒ ಗಳಿಗೆ ₹157.4 ಕೋಟಿ ಈಕ್ವಿಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ₹278.2 ಕೋಟಿ ಮೌಲ್ಯದ ಸಾಲ ಖಾತರಿಯನ್ನು 1,185 ಎಫ್‌ ಪಿ ಒ ಗಳಿಗೆ ನೀಡಲಾಗಿದೆ.

ಕೃಷಿ ಬೆಂಬಲ ಬೆಲೆಯು ರೈತರಿಗೆ ಆಕರ್ಷಿಕ ಗಳಿಕೆಗಳನ್ನು ಖಾತರಿಪಡಿಸುತ್ತಾ, ಆದಾಯ ಹೆಚ್ಚಿಸುತ್ತಾ, ಸರ್ಕಾರವು ಪ್ರಮುಖ ಆಹಾರ ಪದಾರ್ಥಗಳನ್ನು ನ್ಯಾಯೋಚಿತ ಬೆಲೆಯಲ್ಲಿ ದೊರಕಿಸಿ ಕೊಡಲು ಅನುವು ಮಾಡಿಕೊಡುತ್ತದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸುತ್ತದೆ. ಅದರಂತೆ, ಸರ್ಕಾರವು ಕೂಡ ಕೃಷಿ ವರ್ಷ 2018-19 ರಿಂದ ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ ಶೇಕಡ 50 ರಷ್ಟು ಪ್ರಮಾಣದೊಂದಿಗೆ ಎಲ್ಲಾ ಮುಂಗಾರು, ಹಿಂಗಾರು ಮತ್ತು ಇತರ ವಾಣಿಜ್ಯ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂ ಎಸ್‌ ಪಿ) ಯನ್ನು ಹೆಚ್ಚಿಸುತ್ತಿದೆ. 

ಅತಿ ದುರ್ಬಲ ಕೃಷಿ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ಒದಗಿಸಲು, ಸರ್ಕಾರವು ಪ್ರಧಾನಮಂತ್ರಿ ಕಿಸಾನ್‌ ಮಾನ್‌ ಧನ್‌ ಯೋಜನೆ (ಪಿಎಂಕೆಎಂವೈ) ಅನುಷ್ಠಾನಕ್ಕೆ ತಂದಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. 60 ವರ್ಷ ವಯಸ್ಸು ತುಂಬಿದ ನೋಂದಾಯಿತ ರೈತರಿಗೆ ಈ ಯೋಜನೆಯಡಿ ಮಾಸಿಕ ರೂ.3,000/- ಪಿಂಚಣಿ ನೀಡಲಾಗುತ್ತದೆ. ಈ ಪಿಂಚಣಿ ಪಡೆಯಲು ಹೊರಗುಳಿಯುವಿಕೆ ಮಾನದಂಡ ಹೊರತುಪಡಿಸಿ ರೈತರು ಪ್ರತಿ ತಿಂಗಳು ರೂ.55 ರಿಂದ ರೂ.200ರವರೆಗೆ ಸಾಧಾರಣ ಪ್ರೀಮಿಯಂ ಮೊತ್ತವನ್ನು ಪಾವತಿಸಬೇಕಾಗುತ್ತದೆ. 2024ರ ಜುಲೈ 7 ರಂದು ಈ ಯೋಜನೆಯಡಿ 23.41 ಲಕ್ಷ ರೈತರು ನೋಂದಾಯಿಸಿಕೊಂಡಿದ್ದಾರೆ. 
ರಾಸಾಯನಿಕ ರಸಗೊಬ್ಬರಗಳ ಬಳಕೆ ಕಡಿಮೆ ಮಾಡಲು ಗಮನ ಹರಿಸುತ್ತಾ, ಭೂಮಿ ತಾಯಿಯ ಪುನರ್ಸ್ಥಾಪನೆ, ಜಾಗೃತಿ ಸೃಷ್ಟಿ, ಪೋಷಣೆ ಮತ್ತು ಸುಧಾರಣೆಗಾಗಿನ ಪಿ ಎಂ ಕಾರ್ಯಕ್ರಮ (ಪಿಎಂ – ಪ್ರಣಾಮ್)‌ ಉಪಕ್ರಮವು ರಾಸಾಯನಿಕ ರಸಗೊಬ್ಬರ ಬಳಕೆ ಕಡಿತಕ್ಕೆ ಪ್ರೋತ್ಸಾಹಕ ನೀಡುತ್ತದೆ. ನ್ಯಾನೋ ಯೂರಿಯಾ, ನ್ಯಾನೋ ಡಿಎಪಿ ಮತ್ತು ಸಾವಯವ ರಸಗೊಬ್ಬರದಂತಹ ಪರ್ಯಾಯ ರಸಗೊಬ್ಬರಗಳ ಬಳಕೆಗೆ ಸುಸ್ಥಿರ ವಿಧಾನಗಳನ್ನು ಇದು ಉತ್ತೇಜಿಸುತ್ತದೆ. 

ರೈತರ ಬೆಳೆಗಳ ಭದ್ರತೆಗೆ ಗಮನಹರಿಸುತ್ತಾ, ರೈತರಿಗೆ ಹಣಕಾಸಿನ ಭದ್ರತೆ ಖಾತರಿಪಡಿಸುತ್ತಾ, ಪ್ರಾಕೃತಿಕ ವಿಕೋಪ, ಕೀಟಗಳು ಅಥವಾ ರೋಗಗಳಿಂದ ಬೆಳೆ ನಷ್ಟದ ವಿರುದ್ಧ ಸುರಕ್ಷತೆ ನೀಡುವ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ (ಪಿ ಎಂ ಎಫ್‌ ಜಿ ವೈ) ಬಗ್ಗೆ ಆರ್ಥಿಕ ಸಮೀಕ್ಷೆ ಬೆಳಕು ಚೆಲ್ಲುತ್ತದೆ. ಈ ಯೋಜನೆಯು ಕೃಷಿಕರ ಜೀವನೋಪಾಯಕ್ಕೆ ರಕ್ಷಣೆ ಒದಗಿಸುವ ಜೊತೆಗೆ ಅವರು ಆಧುನಿಕ ಕೃಷಿ ಪದ್ಧತಿಗಳನ್ನು ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಉತ್ತೇಜನ ನೀಡುತ್ತದೆ. ಪಿಎಂಎಫ್‌ಬಿವೈ ಯೋಜನೆಯಡಿ ನೋಂದಾಯಿಸಲ್ಪಟ್ಟ ರೈತರ ಸಂಖ್ಯೆ ಆಧರಿಸಿದರೆ ಇದು ವಿಶ್ವದ ಅತಿದೊಡ್ಡ ಬೆಳೆ ವಿಮಾ ಯೋಜನೆಯಾಗಿದೆ ಮತ್ತು ವಿಮಾ ಪ್ರೀಮಿಯಂ ಪ್ರಮಾಣದಲ್ಲೂ ಮೂರನೇ ಅತಿ ದೊಡ್ಡ ಯೋಜನೆಯಾಗಿದೆ. ಬಿತ್ತನೆ ಪೂರ್ವ ಹಂತದಿಂದ ಹಿಡಿದು ಕಟಾವಿನ ನಂತರದವರೆಗೂ ತಡೆಯಲು ಸಾಧ್ಯವಿಲ್ಲದ ಎಲ್ಲಾ ಬಗೆಯ ನೈಸರ್ಗಿಕ ಅಪಾಯಗಳಿಂದ ರೈತರಿಗೆ ಸಮಗ್ರ ರಿಸ್ಕ್‌ ಕವರೇಜ್ ಅನ್ನು ಈ ಯೋಜನೆಯು ಖಾತರಿಪಡಿಸಿದೆ. 2023-24ರಲ್ಲಿ ಒಟ್ಟು ವಿಮಾ ಪ್ರದೇಶ 610 ಲಕ್ಷ ಹೆಕ್ಟೇರ್ ನಷ್ಟಿದ್ದು 2022-23 ರಲ್ಲಿ ಈ ಪ್ರಮಾಣ 500.2 ಲಕ್ಷ ಹೆಕ್ಟೇರ್‌ ನಷ್ಟಿದೆ. 2016-17 ರಿಂದ ಒಟ್ಟು 5549.40 ಲಕ್ಷ ರೈತರ ವಿಮಾ ಅರ್ಜಿಗಳನ್ನು ನೋಂದಾಯಿಸಲಾಗಿದ್ದು ರೂ.1,50,589.10 ಕೋಟಿ ರೂಪಾಯಿಗಳ ಕ್ಲೇಮನ್ನು ಪಾವತಿಸಲಾಗಿದೆ.

 

*****
 


(Release ID: 2035590) Visitor Counter : 104