ಹಣಕಾಸು ಸಚಿವಾಲಯ
21ನೇ ಶತಮಾನದ ಜ್ಞಾನ-ಆಧರಿತ ಆರ್ಥಿಕತೆಯಿಂದ ಹೊರಹೊಮ್ಮುವ ಸವಾಲುಗಳು ಮತ್ತು ಅವಕಾಶಗಳನ್ನು ಸ್ವೀಕರಿಸಲು ಯುವಕರನ್ನು ʻಎನ್ಇಪಿ 2020ʼ ಸಜ್ಜುಗೊಳಿಸುತ್ತದೆ
ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳನ್ನು ಒಳಗೊಂಡಂತೆ ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯು ವಿವಿಧ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಸುಮಾರು 26 ಕೋಟಿ ವಿದ್ಯಾರ್ಥಿಗಳನ್ನು ಶಿಕ್ಷಣದ ಅಗತ್ಯವನ್ನು ಪೂರೈಸುತ್ತದೆ
ಕ್ರಾಂತಿಕಾರ ರಾಷ್ಟ್ರೀಯ ಶಿಶು ಪೋಷಣಾ ಮತ್ತು ಮಕ್ಕಳ ಶಿಕ್ಷಣ ಕಾರ್ಯಕ್ರಮವಾದ 'ಪೋಷಣ್ ಭಿ ಪಡಾಯಿ ಭಿ'ಗೆ ಚಾಲನೆ
ಮುಂದಿನ ಐದು ವರ್ಷಗಳಲ್ಲಿ ಎಲ್ಲಾ 613 ಸಕ್ರಿಯ ʻಡಯೆಟ್ʼಗಳನ್ನು ಉತ್ಕೃಷ್ಟ ʻಡಯೆಟ್ʼಗಳಾಗಿ ನವೀಕರಿಸಲಾಗುವುದು
ಪ್ರಸ್ತುತ ದೇಶಾದ್ಯಂತ 5116 ʻಕೆಜಿಬಿವಿʼಗಳಲ್ಲಿ 7.07 ಲಕ್ಷ ಬಾಲಕಿಯರು ದಾಖಲಾಗಿದ್ದಾರೆ
ಶಾಲಾ ಮಂಡಳಿಗಳಾದ್ಯಂತ ಸಮಾನತೆಗಾಗಿ ನೀತಿ ಶಿಫಾರಸುಗಳನ್ನು ರೂಪಿಸಲಾಗುತ್ತಿದೆ
2025ನೇ ಸಾಲಿನ ಹಣಕಾಸು ವರ್ಷಕ್ಕೆ ಒಟ್ಟು 10,080 ʻಪಿಎಂಎಸ್ಎಚ್ಆರ್‌ಐʼ ಶಾಲೆಗಳಿಗಾಗಿ 5942.21 ಕೋಟಿ ರೂ. ಅನುದಾನ
ʻಪಿಎಂ ಪೋಷಣ್ʼ ಯೋಜನೆಯು 2024ರ ಹಣಕಾಸು ವರ್ಷದಲ್ಲಿ (ಡಿಸೆಂಬರ್ 2023 ರವರೆಗೆ) 10.67 ಲಕ್ಷ ಶಾಲೆಗಳ 11.63 ಕೋಟಿ ಮಕ್ಕಳಿಗೆ ಪ್ರಯೋಜನವನ್ನು ನೀಡಿದೆ
2019ರಿಂದ 2024ರವರೆಗೆ (ಮಾರ್ಚ್ 2024ರವರೆಗೆ) 29,342 ಶಾಲೆಗಳು ಕೌಶಲ್ಯ ಶಿಕ್ಷಣದ ವ್ಯಾಪ್ತಿಗೆ ಒಳಪಟ್ಟಿವೆ
Posted On:
22 JUL 2024 2:39PM by PIB Bengaluru
2020ರಲ್ಲಿ ಪ್ರಾರಂಭಿಸಲಾದ ʻರಾಷ್ಟ್ರೀಯ ಶಿಕ್ಷಣ ನೀತಿ’ಯು(ಎನ್ಇಪಿ) ಶಿಕ್ಷಣದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್‌ಡಿಜಿ) ಒಳಗೊಂಡಿರುವುದಲ್ಲದೆ, 21ನೇ ಶತಮಾನದ ಜ್ಞಾನ-ಆಧರಿತ ಆರ್ಥಿಕತೆಯಿಂದ ಹೊರಹೊಮ್ಮುವ ಸವಾಲುಗಳು ಮತ್ತು ಅವಕಾಶಗಳನ್ನು ಸ್ವೀಕರಿಸಲು ಭಾರತದ ಯುವಕರನ್ನು ಸಜ್ಜುಗೊಳಿಸುತ್ತದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ 2023-24 ಹೇಳಿದೆ.
ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳು ಒಳಗೊಂಡಂತೆ ಭಾರತದಲ್ಲಿನ ಶಾಲಾ ಶಿಕ್ಷಣ ವ್ಯವಸ್ಥೆಯು ವಿವಿಧ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಸುಮಾರು 26 ಕೋಟಿ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುತ್ತದೆ. ಜೊತೆಗೆ, 3-18 ವರ್ಷ ವಯಸ್ಸಿನ ಎಲ್ಲಾ ಕಲಿಕಾರ್ಥಿಗಳಿಗಾಗಿ ಭಾರತೀಯ ಸಂಸ್ಕೃತಿಯಲ್ಲಿ ಬೇರೂರಿರುವ ಮತ್ತು ಭಾರತವನ್ನು ಜಾಗತಿಕ ಜ್ಞಾನದ ಸೂಪರ್ ಪವರ್ ಆಗಿ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣಕ್ಕೆ ಪ್ರವೇಶವನ್ನು ಒದಗಿಸಲು ʻಎನ್ಇಪಿ-2020ʼ ಪ್ರಯತ್ನಿಸುತ್ತದೆ ಎಂದು ಸಮೀಕ್ಷೆ ಹೇಳುತ್ತದೆ.
ʻಪೌಷ್ಟಿಕಾಂಶವೂ ಇರಲಿ, ಕಲಿಕೆಯೂ ಇರಲಿʼ
ʻರಾಷ್ಟ್ರೀಯ ಶಿಕ್ಷಣ ನೀತಿ-2020ʼರ ಮಾರ್ಗಸೂಚಿಗಳಿಗೆ ಅನುಗುಣವಾಗಿ, 'ಪೋಷಣ್ ಭಿ ಪಢಾಯಿ ಭಿ' (ಪಿಬಿಪಿಬಿ) ಅನ್ನು ಮೇ 2023ರಲ್ಲಿ ಪ್ರಾರಂಭಿಸಲಾಯಿತು ಎಂದು ಸಮೀಕ್ಷೆ ಉಲ್ಲೇಖಿಸಿದೆ. ಇದು ಅಂಗನವಾಡಿ ಕೇಂದ್ರಗಳಲ್ಲಿ ವಿಶ್ವದ ಅತಿದೊಡ್ಡ, ಸಾರ್ವತ್ರಿಕ, ಉತ್ತಮ-ಗುಣಮಟ್ಟದ ಶಾಲಾಪೂರ್ವ ಜಾಲವನ್ನು ಅಭಿವೃದ್ಧಿಪಡಿಸಲು ಭಾರತಕ್ಕೆ ಸಹಾಯ ಮಾಡುವ ಆರಂಭಿಕ ʻಶಶು ಪಾಲನೆ ಮತ್ತು ಶಿಕ್ಷಣʼ (ಇಸಿಸಿಇ) ಕಾರ್ಯಕ್ರಮವಾಗಿದೆ.
ಮೊದಲ ಬಾರಿಗೆ, ಸರ್ಕಾರಿ ಕಾರ್ಯಕ್ರಮದ ವ್ಯಾಪ್ತಿಗೆ 0-3 ವರ್ಷಗಳ ವಯೋಮಾನದವರ ಆರಂಭಿಕ ಶಿಕ್ಷಣ ಉತ್ತೇಜನವನ್ನು ಸೇರಿಸಲಾಗಿದೆ ಎಂದು ಸಮೀಕ್ಷೆಯು ಎತ್ತಿ ತೋರಿಸಿದೆ. ಕಾರ್ಯಕ್ರಮದ ಮೂಲಕ, ಪ್ರತಿ ಮಗುವಿಗೆ ಪ್ರತಿದಿನ ಕನಿಷ್ಠ ಎರಡು ಗಂಟೆಗಳ ಉತ್ತಮ ಗುಣಮಟ್ಟದ ಶಾಲಾಪೂರ್ವ ಶಿಕ್ಷಣವನ್ನು ನೀಡಲಾಗುವುದು. ದಿವ್ಯಾಂಗ ಮಕ್ಕಳಿಗೆ ವಿಶೇಷ ಬೆಂಬಲ ಸೇರಿದಂತೆ 0-3 ವರ್ಷ ಮತ್ತು 3-6 ವರ್ಷದ ಮಕ್ಕಳ ಅಭಿವೃದ್ಧಿಯ ಮೈಲುಗಲ್ಲುಗಳನ್ನು ಸ್ಪಷ್ಟವಾಗಿ ಗುರಿಯಾಗಿಸಿಕೊಂಡು ಆಟ ಆಧಾರಿತ, ಚಟುವಟಿಕೆ ಆಧಾರಿತ ಕಲಿಕೆಯ ಶಿಕ್ಷಣಕ್ಕಾಗಿ ಎಲ್ಲಾ ರಾಜ್ಯಗಳು ರಾಷ್ಟ್ರೀಯ ʻಇಸಿಸಿಇʼ ಕಾರ್ಯಪಡೆಯ ಶಿಫಾರಸುಗಳನ್ನು ಅನುಸರಿಸುತ್ತವೆ ಎಂದು ಸಮೀಕ್ಷೆ ಹೇಳಿದೆ.
ಅಂಗನವಾಡಿಗಳ ರಾಷ್ಟ್ರವ್ಯಾಪಿ ಜಾಲವನ್ನು ಬಲಪಡಿಸುವುದು
ಮೆದುಳಿನ ಬೆಳವಣಿಗೆಯ ಶೇಕಡಾ 85 ರಷ್ಟು 6 ವರ್ಷ ವಯಸ್ಸಿನಲ್ಲಿ ಸಾಧಿಸಲಾಗುತ್ತದೆ ಎಂಬ ಜಾಗತಿಕ ಪುರಾವೆಗಳನ್ನು ಪರಿಗಣಿಸಿ, ಅಂಗನವಾಡಿ ಪರಿಸರ ವ್ಯವಸ್ಥೆಯು ನಮ್ಮ ಮಕ್ಕಳ ಭವಿಷ್ಯವನ್ನು ಭದ್ರಪಡಿಸಲು ನಿರ್ಣಾಯಕ ಪ್ರವೇಶ ಬಿಂದುವಾಗುತ್ತದೆ ಎಂದು ಸಮೀಕ್ಷೆ ಒತ್ತಿಹೇಳಿದೆ. ಅಂಗನವಾಡಿಗಳ ಮೂಲಕ ʻಪಿಬಿಪಿಬಿʼಯನ್ನು ಸಾಕಾರಗೊಳಿಸಲು, ʻಪಿಬಿಪಿಬಿʼಯನ್ನು ಉತ್ತಮ ಗುಣಮಟ್ಟದ ಮೂಲಸೌಕರ್ಯ, ಆಟದ ಉಪಕರಣಗಳು ಮತ್ತು ಉತ್ತಮ ತರಬೇತಿ ಪಡೆದ ಅಂಗನವಾಡಿ ಕಾರ್ಯಕರ್ತರು/ಶಿಕ್ಷಕರೊಂದಿಗೆ ಬಲಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ, ಎಲ್ಲಾ ಅಂಗನವಾಡಿ ಕಾರ್ಯಕರ್ತರಿಗೆ 40,000 ಮಾಸ್ಟರ್ ತರಬೇತುದಾರರ ಮೂಲಕ ಚಟುವಟಿಕೆಗಳು, ಆಟ ಮತ್ತು ದೇಶೀಯ ಮತ್ತು ʻಡಿಐವೈʼ ಆಟಿಕೆಗಳನ್ನು ಬಳಸುವುದು ಸೇರಿದಂತೆ ʻಇಸಿಸಿಇʼ ತತ್ವಗಳ ಬಗ್ಗೆ ತರಬೇತಿ ನೀಡಲಾಗುವುದು. ಜನವರಿ 2024ರ ಹೊತ್ತಿಗೆ, 25 ರಾಜ್ಯಗಳು ಮತ್ತು 182 ಜಿಲ್ಲೆಗಳನ್ನು ಒಳಗೊಂಡ 95 ತರಬೇತಿ ಕಾರ್ಯಕ್ರಮಗಳ ಮೂಲಕ 3735 ರಾಜ್ಯ ಮಟ್ಟದ ʻಮಾಸ್ಟರ್ ತರಬೇತುದಾರʼರಿಗೆ ತರಬೇತಿ ನೀಡಲಾಗಿದೆ.
ʻಎನ್ಇಪಿ-2020ʼ ಗುರಿಗಳು ಮತ್ತು ನೀತಿಗಳನ್ನು ಕಾರ್ಯರೂಪಕ್ಕೆ ತರುತ್ತಿರುವ ಶಾಲಾ ಶಿಕ್ಷಣದಲ್ಲಿ ಸರ್ಕಾರದ ಕೆಲವು ಪ್ರಮುಖ ಯೋಜನೆಗಳು / ಉಪಕ್ರಮಗಳು ಮತ್ತು ಅವುಗಳ ಪ್ರಗತಿ:
- ಸಮಗ್ರ ಶಿಕ್ಷಣ ಅಭಿಯಾನ
- ʻಇಸಿಸಿಇʼಯಲ್ಲಿ ಪ್ರಮಾಣೀಕರಿಸಿದ ಸಮಗ್ರ ಶಿಕ್ಷಕರ ತರಬೇತಿ ಕಾರ್ಯಕ್ರಮ ʻನಿಷ್ಠಾʼ. 1,26,208 ಮಾಸ್ಟರ್ ತರಬೇತುದಾರರರಿಗೆ ʻನಿಷ್ಠಾ ಇಸಿಸಿಇʼ ಪ್ರಮಾಣೀಕರಣ.
- ಶಾಲಾ ಶಿಕ್ಷಣ ಮತ್ತು ಶಿಕ್ಷಕರ ತರಬೇತಿಗೆ ಮಾರ್ಗದರ್ಶನ ನೀಡುವ ಜಿಲ್ಲಾ ಮಟ್ಟದ ಸಂಸ್ಥೆಗಳಾದ ಎಲ್ಲಾ 613 ಸಕ್ರಿಯ ʻಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆʼಗಳನ್ನು(ಡಯೆಟ್) ಮುಂದಿನ ಐದು ವರ್ಷಗಳಲ್ಲಿ ಉತ್ಕೃಷ್ಟ ʻಡಯೆಟ್ʼಗಳಾಗಿ ಮೇಲ್ದರ್ಜೆಗೇರಿಸಲಾಗುವುದು. ಉನ್ನತೀಕರಣದ ಈ ಮೊದಲ ಸುತ್ತಿನಲ್ಲಿ (ಹಣಕಾಸು ವರ್ಷ-24), ದೇಶಾದ್ಯಂತ 125 ʻಡಯೆಟ್ʼಗಳಿಗೆ 92,320.18 ಲಕ್ಷ ರೂ. ಅನುದಾನ ಒದಗಿಸಲಾಗಿದೆ.
- ಶಾಲಾಪೂರ್ವ ಶಿಕ್ಷಣ ಹೊಂದಿರುವ ಮತ್ತು ಶಾಲಾ ಪೂರ್ವ ಶಿಕ್ಷಣ ಪಡೆಯದ ಎಲ್ಲಾ 1ನೇ ತರಗತಿ ವಿದ್ಯಾರ್ಥಿಗಳಿಗೆ 3 ತಿಂಗಳ ಆಟ ಆಧಾರಿತ 'ಶಾಲಾ ಸಿದ್ಧತೆ ಮಾಡ್ಯೂಲ್' ಆಗಿರುವ ʻವಿದ್ಯಾ ಪ್ರವೇಶʼವನ್ನು 36 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಜಾರಿಗೆ ತಂದಿವೆ. 2023-24ನೇ ಸಾಲಿನಲ್ಲಿ 8.46 ಲಕ್ಷ ಶಾಲೆಗಳ 1.13 ಕೋಟಿ ವಿದ್ಯಾರ್ಥಿಗಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದೆ.
- ಪ್ರಸ್ತುತ ದೇಶಾದ್ಯಂತ 5116 ʻಕಸ್ತೂರ್‌ಬಾ ಗಾಂಧಿ ಬಾಲಿಕಾ ವಿದ್ಯಾಲಯʼದಲ್ಲಿ (ಕೆಜಿಬಿವಿ) 7.07 ಲಕ್ಷ ಬಾಲಕಿಯರು ದಾಖಲಾಗಿದ್ದಾರೆ.
- ʻವಿಶೇಷ ಅಗತ್ಯವುಳ್ಳ ಮಕ್ಕಳ ಅಂತರ್ಗತ ಶಿಕ್ಷಣʼ(ಸಿಡಬ್ಲ್ಯೂಎಸ್ಎನ್) ಅಡಿಯಲ್ಲಿ, ವಿಶೇಷ ಅಗತ್ಯವಿರುವ 18.50 ಲಕ್ಷ ಮಕ್ಕಳು ಪೂರ್ವ ಪ್ರಾಥಮಿಕದಿಂದ ಹನ್ನೆರಡನೇ ತರಗತಿಯವರೆಗೆ ಪ್ರಯೋಜನ ಪಡೆಯುತ್ತಾರೆ.
- ಮಧ್ಯಸ್ಥಗಾರರ ಜೊತೆ ಸಮಾಲೋಚನೆ ಬಳಿಕ ರಾಷ್ಟ್ರೀಯ ಮೌಲ್ಯಮಾಪನ ಕೇಂದ್ರ-ʻಪರಾಖ್ʼ ಅಡಿಯಲ್ಲಿ, ಶಾಲಾ ಮಂಡಳಿಗಳಲ್ಲಿ ಸಮಾನತೆಗಾಗಿ ನೀತಿ ಶಿಫಾರಸುಗಳನ್ನು ರೂಪಿಸಲಾಗುತ್ತಿದೆ.
- ʻದೀಕ್ಷಾʼ ಉಪಕ್ರಮದ ಅಡಿಯಲ್ಲಿ, ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮುಂತಾದವರಿಗೆ ಉಚಿತ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್ ಪೋರ್ಟಲ್ ಅನ್ನು 36 ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಪ್ರಾರಂಭಿಸಲಾಗಿದೆ. ʻದೀಕ್ಷಾʼ ಅಡಿಯಲ್ಲಿ 1.71 ಕೋಟಿ ನೋಂದಾಯಿತ ಬಳಕೆದಾರರಿಗೆ 3.53 ಲಕ್ಷ
ಇ-ಪಠ್ಯಗಳು ಲಭ್ಯವಿವೆ.
- ʻಪಿಎಂ-ಶ್ರೀʼ ಅಡಿಯಲ್ಲಿ, 3 ಹಂತಗಳ ಶಾಲಾ ಆಯ್ಕೆ ಪೂರ್ಣಗೊಂಡಿದೆ, ಇದರಲ್ಲಿ 32 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು / ಕೆವಿಎಸ್ / ʻಎನ್‌ವಿಎಸ್ʼನಿಂದ 10,858 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. 2025ರ ಹಣಕಾಸು ವರ್ಷದಲ್ಲಿ 10,080 ʻಪಿ.ಎಂ.ಎಸ್.ಎಚ್.ಆರ್.ಐʼ ಶಾಲೆಗಳಿಗೆ 5942.21 ಕೋಟಿ ರೂ.ಗಳನ್ನು ಅನುಮೋದಿಸಲಾಗಿದೆ.
- ʻಪಿಎಂ ಪೋಷಣ್ʼ ಯೋಜನೆಯು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ದಿನಕ್ಕೆ ಒಂದು ಬಾರಿ ಬಿಸಿ ಊಟವನ್ನು ಒದಗಿಸುತ್ತದೆ. ಈ ಯೋಜನೆಯು 2024ರ ಹಣಕಾಸು ವರ್ಷದಲ್ಲಿ (ಡಿಸೆಂಬರ್ 2023 ರವರೆಗೆ) 10.67 ಲಕ್ಷ ಶಾಲೆಗಳ 11.63 ಕೋಟಿ ಮಕ್ಕಳಿಗೆ ಪ್ರಯೋಜನವನ್ನು ನೀಡಿದೆ.
- ʻನ್ಯಾಷನಲ್ ಮೀನ್ಸ್ ಕಮ್-ಮೆರಿಟ್ ಸ್ಕಾಲರ್ಶಿಪ್ʼ ಯೋಜನೆಯು ಆರ್ಥಿಕವಾಗಿ ದುರ್ಬಲ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಶಾಲೆಯಿಂದ ಹೊರಗುಳಿಯುವುದನ್ನು ತಡೆಯಲು ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ. 2023-24ನೇ ಸಾಲಿನಲ್ಲಿ 2,50,089 ವಿದ್ಯಾರ್ಥಿಗಳಿಗೆ ಒಟ್ಟು 300.10 ಕೋಟಿ ರೂ. ಒದಗಿಸಲಾಗಿದೆ.
ವಿದ್ಯಾಂಜಲಿ: ಶಾಲಾ ಸ್ವಯಂಸೇವಕ ಕಾರ್ಯಕ್ರಮ
ʻವಿದ್ಯಾಂಜಲಿʼ ಉಪಕ್ರಮವು ಸಮಗ್ರ ಸಮುದಾಯ ತೊಡಗಿಸಿಕೊಳ್ಳುವಿಕೆಯನ್ನು ಸುಗಮಗೊಳಿಸುವ ಮೂಲಕ ಮತ್ತು ವಿಷಯಾಧಾರಿತ ನೆರವು ಮತ್ತು ಮಾರ್ಗದರ್ಶನ ಹಾಗೂ ಆಧುನಿಕ ಎಲೆಕ್ಟ್ರಾನಿಕ್ಸ್ ಮತ್ತು ಡಿಜಿಟಲ್ ಸಾಧನಗಳನ್ನು ಒದಗಿಸುವುದು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸ್ವಯಂಸೇವಕ ಕೊಡುಗೆಗಳನ್ನು ಹೆಚ್ಚಿಸುವ ಮೂಲಕ 1.44 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳ ಶೈಕ್ಷಣಿಕ ಅನುಭವಗಳನ್ನು ಸುಧಾರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.
ಶಾಲಾ ಮೂಲಸೌಕರ್ಯದಲ್ಲಿ ಪ್ರಗತಿ
2012-13ರಲ್ಲಿ ಶೇ.88.1ರಷ್ಟಿದ್ದ ಬಾಲಕಿಯರ ಶೌಚಾಲಯಗಳ ಸಂಖ್ಯೆ 2022-23ರಲ್ಲಿ ಶೇ.97ಕ್ಕೆ ಏರಿಕೆಯಾಗಿದೆ. 2012-13ರಲ್ಲಿ ಶೇ.67.2ರಷ್ಟಿದ್ದ ಬಾಲಕರ ಶೌಚಾಲಯಗಳ ಸಂಖ್ಯೆ 2022-23ರಲ್ಲಿ ಶೇ.95.6ಕ್ಕೆ ಏರಿಕೆಯಾಗಿದೆ. 2012-13ರಲ್ಲಿ ಶೇ. 36.3% ಇದ್ದ ಶಾಲೆಗಳಲ್ಲಿ ಕೈ ತೊಳೆಯುವ ಸೌಲಭ್ಯದ ಪ್ರಮಾಣ 2022-23ರಲ್ಲಿ ಶೇ. 94ಕ್ಕೆ ಏರಿದೆ. 2012-13ರಲ್ಲಿ ಶೇ.54.6ರಷ್ಟಿದ್ದ ವಿದ್ಯುತ್ ಸಂಪರ್ಕವುಳ್ಳ ಶಾಲೆಗಳ ಸಂಖ್ಯೆ 2022-23ರಲ್ಲಿ ಶೇ.91.7ಕ್ಕೆ ಏರಿಕೆಯಾಗಿದೆ. ಎಲ್ಲಾ ಶಾಲೆಗಳಲ್ಲಿ ಇಂಟರ್ನೆಟ್ ಸೌಲಭ್ಯವು 2012-13ರಲ್ಲಿ 6.2% ರಿಂದ 2022-23 ರಲ್ಲಿ 49.7% ಕ್ಕೆ ಗಮನಾರ್ಹವಾಗಿ ಹೆಚ್ಚಾಗಿದೆ ಮತ್ತು ಕಂಪ್ಯೂಟರ್ ಹೊಂದಿರುವ ಶಾಲೆಗಳ ಪ್ರಮಾಣ 2012-13 ರಲ್ಲಿ 22.2% ರಿಂದ 2022-23 ರಲ್ಲಿ 47.7% ಕ್ಕೆ ಏರಿದೆ.
ವೃತ್ತಿಪರ ಶಿಕ್ಷಣ
ಸಾಧಿಸಲಾದ ಪ್ರಗತಿಯ ದೃಷ್ಟಿಯಿಂದ, 2019 ರಿಂದ 2024 ರವರೆಗೆ (ಮಾರ್ಚ್ 2024 ರವರೆಗೆ) 29,342 ಶಾಲೆಗಳನ್ನು ʻಕೌಶಲ್ಯ ಶಿಕ್ಷಣʼದ ವ್ಯಾಪ್ತಿಗೆ ತರಲಾಗಿದೆ. ಹಣಕಾಸು ವರ್ಷ-24ರವರೆಗೆ 88 ಬಗೆಯ ಉದ್ಯೋಗಗಳನ್ನು ಹೊಂದಿರುವ 22 ವಲಯಗಳನ್ನು ಕೌಶಲ್ಯ ಶಿಕ್ಷಣದ ವ್ಯಾಪ್ತಿಗೆ ತರಲಾಗಿದೆ.
*****
(Release ID: 2035538)
Visitor Counter : 75
Read this release in:
Tamil
,
Malayalam
,
English
,
Gujarati
,
Urdu
,
Marathi
,
Hindi
,
Hindi_MP
,
Manipuri
,
Punjabi
,
Telugu