ಹಣಕಾಸು ಸಚಿವಾಲಯ
2022-23ರಲ್ಲಿ ನಿರುದ್ಯೋಗ ದರವು ಶೇಕಡಾ 3.2 ಕ್ಕೆ ಇಳಿಕೆಯಾಗುವುದರೊಂದಿಗೆ ಕಳೆದ ಆರು ವರ್ಷಗಳಲ್ಲಿ ಭಾರತೀಯ ಕಾರ್ಮಿಕ ಮಾರುಕಟ್ಟೆಯ ಸುಧಾರಣೆಗೆ ಸಾಕ್ಷಿಯಾಗಿದೆ
ಉದಯೋನ್ಮುಖ ಯುವಕರು ಮತ್ತು ಮಹಿಳಾ ಕಾರ್ಯಪಡೆಯ ಭಾಗವಹಿಸುವಿಕೆ ದೇಶದ ಜನಸಂಖ್ಯೆ ಮತ್ತು ಲಿಂಗದ ಲಾಭಾಂಶವನ್ನು ಟ್ಯಾಪ್ ಮಾಡಲು ಒಂದು ಅವಕಾಶ
ಸಂಘಟಿತ ಉತ್ಪಾದನಾ ವಲಯವು ಪೂರ್ವ-ಸಾಂಕ್ರಾಮಿಕ ಮಟ್ಟಕ್ಕೆ ಹೋಲಿಸಿದರೆ ಸಾಕಷ್ಟು ಚೇತರಿಕೆ ಕಂಡಿದೆ; ಕಳೆದ ಐದು ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವೇತನದಲ್ಲಿ ಹೆಚ್ಚಳ ಕಂಡುಬಂದಿದೆ
EPFO ನಿವ್ವಳ ವೇತನದ ಖಾತೆಗಳು ಕಳೆದ ಐದು ವರ್ಷಗಳಲ್ಲಿ ಎರಡು ಪಟ್ಟು ಹೆಚ್ಛಾಗಿದ್ದು, ಅವುಗಳ ಸಂಖ್ಯೆ 131.5 ಲಕ್ಷಕ್ಕೆ ಏರಿದೆ. ಇದು ಔಪಚಾರಿಕ ಉದ್ಯೋಗದಲ್ಲಿ ಆರೋಗ್ಯಕರ ಬೆಳವಣಿಗೆಯನ್ನು ಸೂಚಿಸುತ್ತದೆ
Posted On:
22 JUL 2024 3:17PM by PIB Bengaluru
2022-23ರಲ್ಲಿ ನಿರುದ್ಯೋಗ ದರವು ಶೇಕಡಾ 3.2 ಕ್ಕೆ ಇಳಿಕೆಯಾಗುವುದರೊಂದಿಗೆ ಕಳೆದ ಆರು ವರ್ಷಗಳಲ್ಲಿ ಭಾರತವು ಕಾರ್ಮಿಕ ಮಾರುಕಟ್ಟೆ ಸೂಚಕಗಳಲ್ಲಿ ಸುಧಾರಣೆಯನ್ನು ಕಂಡಿದೆ ಎಂದು ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLFS) ಹೇಳಿದೆ. ಇಂದು ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆಯಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ಮಂಡಿಸಿದ 2023-24 ನೇ ಸಾಲಿನ ಆರ್ಥಿಕ ಸಮೀಕ್ಷೆಯು ದೇಶದ ಯುವಕರ ನ್ಯಾಯಸಮ್ಮತ ಆಕಾಂಕ್ಷೆಗಳಿಗೆ ಅನುಗುಣವಾಗಿ ಸೂಕ್ತವಾದ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಭಾರತ ಸರ್ಕಾರದ ಕೈಗೊಂಡಿರುವ ಕ್ರಮಗಳ ಬಗ್ಗೆ ಒತ್ತಿ ಹೇಳಿದ್ದು, ಇವು ದೇಶದ ಜನಸಂಖ್ಯೆಯ ಲಾಭವನ್ನು ಪಡೆದುಕೊಳ್ಳಲು ಅವಶ್ಯಕವಾಗಿವೆ.
ಉದ್ಯೋಗ ಮಾರುಕಟ್ಟೆಯ ಪ್ರಸ್ತುತ ಸನ್ನಿವೇಶ
ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಹಲವಾರು ಸಕಾರಾತ್ಮಕ ಪ್ರವೃತ್ತಿಗಳಿಂದ ಕೂಡಿದ ಭಾರತದ ಉದ್ಯೋಗ ಮಾರುಕಟ್ಟೆಯು ಹಲವಾರು ಗಮನಾರ್ಹ ಬದಲಾವಣೆಗಳನ್ನು ಕಂಡಿದ್ದು, ಸರಕಾರ ಕೈಗೊಂಡಿರುವ ಆರ್ಥಿಕ ಸುಧಾರಣೆ ಕ್ರಮಗಳು, ತಾಂತ್ರಿಕ ಪ್ರಗತಿಗಳು ಮತ್ತು ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡುವುದು ಸೇರಿದಂತೆ ವಿವಿಧ ಅಂಶಗಳು ಇದಕ್ಕೆ ಕಾರಣವಾಗಿವೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.
PLFS ಪ್ರಕಾರ, ಅಖಿಲ ಭಾರತ ವಾರ್ಷಿಕ ನಿರುದ್ಯೋಗ ದರ (ಸಾಮಾನ್ಯ ಸ್ಥಿತಿಯ ಪ್ರಕಾರ 15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳು) COVID-19 ಸಾಂಕ್ರಾಮಿಕ ನಂತರ ದಿನಗಳಿಂದ ಇಳಿಮುಖವಾಗಿದ್ದು ಕಾರ್ಮಿಕರ ಭಾಗವಹಿಸುವಿಕೆಯ ದರ ಮತ್ತು ಕೆಲಸಗಾರ-ಜನಸಂಖ್ಯೆಯ ಅನುಪಾತ (WPR) ಗಳಲ್ಲಿ ಏರಿಕೆ ಪ್ರವೃತ್ತಿ ಕಂಡುಬಂದಿದೆ.
ಕಾರ್ಮಿಕರ ಉದ್ಯೋಗದ ಸ್ಥಿತಿಗತಿಯ ಬಗ್ಗೆ ವಿವರಿಸುತ್ತಾ ಸಮೀಕ್ಷೆಯು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸ್ವಯಂ ಉದ್ಯೋಗಿಗಳಾಗಿ ಬದಲಾಗುತ್ತಿದ್ದಾರೆ. ಕಳೆದ ಆರು ವರ್ಷಗಳಲ್ಲಿ ಉದ್ಯೋಗ ವಲಯದಲ್ಲಿ ಮಹಿಳೆಯರ ಪಾಲುದಾರಿಕೆ ದರದಲ್ಲಿ ಕಂಡು ಬಂದ ತೀವ್ರ ಏರಿಕೆಯಿಂದ ಇದು ಸಾಬೀತಾಗಿದೆ. ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ಗ್ರಾಮೀಣ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆ ಇದಕ್ಕೆ ಕಾರಣ.
ಯುವಕರು ಮತ್ತು ಮಹಿಳೆಯರಿಗೆ ಉದ್ಯೋಗ
ಯುವ ಜನರ ಉದ್ಯೋಗಗಳಲ್ಲಿನ ಹೆಚ್ಚಳವು ಯುವಜನರ ಜನಸಂಖ್ಯೆ ಅನುಗುಣವಾಗಿದೆ ಎಂದಿರುವ ಆರ್ಥಿಕ ಸಮೀಕ್ಷೆಯು, PLFS ದತ್ತಾಂಶದ ಪ್ರಕಾರ 2017-18 ರಲ್ಲಿ ಶೇಕಡಾ 17.8 ರಷ್ಟಿದ್ದ ಯುವಜನರ (15-29 ವರ್ಷ ವಯಸ್ಸಿನ) ನಿರುದ್ಯೋಗ ದರವು 2022-23 ರಲ್ಲಿ ಶೇಕಡಾ 10 ಕ್ಕೆ ಇಳಿದಿದೆ ಎಂದು ವಿವರಿಸಿದೆ. EPFO ವೇತನದಾರರ ಹೊಸ ಚಂದಾದಾರರಲ್ಲಿ ಸುಮಾರು ಮೂರನೇ ಎರಡರಷ್ಟು ಜನರು 18-28 ವರ್ಷ ವಯಸ್ಸಿನವರಾಗಿದ್ದಾರೆ.
ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯ ದರದಲ್ಲಿ (ಎಫ್‌ಎಲ್‌ಎಫ್‌ಪಿಆರ್) ಕಳೆದ ಆರು ವರ್ಷಗಳಿಂದ ಆಗಿರುವ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿರುವ ಸಮೀಕ್ಷೆಯು, ಇದಕ್ಕೆ ಕಾರಣವಾದ ಹಲವಾರು ಅಂಶಗಳನ್ನು ಗುರುತಿಸಿದೆ. ಕೃಷಿ ಉತ್ಪಾದನೆಯಲ್ಲಿನ ನಿರಂತರ ಬೆಳವಣಿಗೆ ಮತ್ತು ಪೈಪ್ ಮೂಲಕ ದೊರಕುತ್ತಿರುವ ಕುಡಿಯುವ ನೀರು ಮತ್ತು ಶುದ್ಧ ಅಡುಗೆ ಅನಿಲ ಮುಂತಾದ ಮೂಲಭೂತ ಸೌಕರ್ಯಗಳ ಲಭ್ಯತೆಯಿಂದಾಗಿ ಮಹಿಳೆಯರಿಗೆ ತಾವು ಬೇರೆ ಉದ್ಯೋಗಗಳತ್ತ ಗಮನ ಹರಿಸಲು ಸಾಕಷ್ಟು ಸಮಯಾವಕಾಶ ದೊರಕುವಂತಾಗಿದ್ದು ಅವುಗಳಲ್ಲಿ ಪ್ರಮುಖವಾದವು.
ಕಾರ್ಖಾನೆ ಉದ್ಯೋಗದಲ್ಲಿ ಬದಲಾವಣೆ
ದೇಶದ ಸಂಘಟಿತ ಉತ್ಪಾದನಾ ವಲಯದ ಬೆಳವಣಿಗೆಯು ಕೋವಿಡ್ ಸಾಂಕ್ರಾಮಿಕ ಪೂರ್ವದ ಮಟ್ಟಕ್ಕೆ ಚೇತರಿಸಿಕೊಂಡಿದ್ದು, ಕಳೆದ ಐದು ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಮಿಕರ ವೇತನದಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಗ್ರಾಮಾಂತರದಲ್ಲಿ ಬೇಡಿಕೆ ಸೃಷ್ಟಿಗೆ ಇದು ಉತ್ತಮ ಬೆಳವಣಿಗೆಯಾಗಿದೆ. ವಿತ್ತ ವರ್ಷ 15-22 ರ ಅವಧಿಯಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಕೆಲಸಗಾರನ ವೇತನವು ಶೇಕಡಾ 6.9 ರ ಸಂಯೋಜಿತ ವಾರ್ಷಿಕ ಬೆಳವಣಿಗೆ ದರದಲ್ಲಿ ಬೆಳೆದರೆ, ನಗರ ಪ್ರದೇಶಗಳಲ್ಲಿ ಇದರ ಬೆಳವಣಿಗೆ ಶೇಕಡಾ 6.1 ರಷ್ಟಾಗಿತ್ತು.
ರಾಜ್ಯವಾರು ಗಣನೆಗೆ ತೆಗೆದುಕೊಂಡರೆ, ಅತೀ ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವ ಮೊದಲ ಆರು ರಾಜ್ಯಗಳೇ ಹೆಚ್ಚಿನ ಸಂಖ್ಯೆಯ ಕಾರ್ಖಾನೆ ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದವು. 40% ಕ್ಕಿಂತ ಹೆಚ್ಚು ಕಾರ್ಖಾನೆ ಉದ್ಯೋಗಗಳು ತಮಿಳುನಾಡು, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿದ್ದವು. ಇದಕ್ಕೆ ವ್ಯತಿರಿಕ್ತವಾಗಿ, FY18 ಮತ್ತು FY22 ರ ನಡುವೆ ಛತ್ತೀಸ್‌ಗಢ, ಹರಿಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ಯುವ ಜನಸಂಖ್ಯೆಯ ಹೆಚ್ಚಿನ ಪಾಲನ್ನು ಹೊಂದಿರುವ ರಾಜ್ಯಗಳು ಹೆಚ್ಚಿನ ಉದ್ಯೋಗ ಬೆಳವಣಿಗೆಯನ್ನು ದಾಖಲಿಸಿವೆ.
ಭಾರತದ ಉತ್ಪಾದನಾ ವಲಯದ ಏರು ದಾರಿಯನ್ನು ಸೂಚಿಸುವ ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ಸ್, ರಬ್ಬರ್ ಮತ್ತು ಪ್ಲಾಸ್ಟಿಕ್ ಉತ್ಪನ್ನಗಳು ಮತ್ತು ರಾಸಾಯನಿಕಗಳ ಮುಂದುವರೆದ ಬೇಡಿಕೆ ಬಗ್ಗೆ ಉಲ್ಲೇಖಿಸಿರುವ ಸಮೀಕ್ಷೆಯು ಇವು ಉತ್ಪಾದನಾ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಹೊಸ ಮೂಲಗಳಾಗಿ ಹೊರಹೊಮ್ಮಿವೆ ಎಂದು ಹೇಳಿದೆ.
EPFO ದಾಖಲಾತಿಯಲ್ಲಿ ಹೆಚ್ಚಳ
ಸಂಘಟಿತ ವಲಯದ ಉದ್ಯೋಗ ಮಾರುಕಟ್ಟೆ ಸ್ಥಿತಿಗತಿಯ ಕುರಿತು EPFO ವೇತನದಾರರ ದತ್ತಾಂಶದಿಂದ ಮಾಡಲಾದ ಮಾಪನದಿಂದ, ವಿತ್ತ ವರ್ಷ 19 ರಿಂದ ವೇತನದಾರರ ಸೇರ್ಪಡೆಯಲ್ಲಿ ವರ್ಷದಿಂದ ವರ್ಷಕ್ಕೆ ಸ್ಥಿರವಾದ ಹೆಚ್ಚಳ ಕಂಡುಬಂದಿದೆ. ಕಳೆದ ಐದು ವರ್ಷಗಳಲ್ಲಿ ವಾರ್ಷಿಕವಾಗಿ ಇಪಿಎಫ್‌ಒಗೆ ಸೇರ್ಪಡೆಯಾಗುವ ನಿವ್ವಳ ವೇತನದಾರರ ಸಂಖ್ಯೆಯು ದ್ವಿಗುಣಗೊಂಡಿದೆ. FY19 ರಲ್ಲಿ 61.1 ಲಕ್ಷದಷ್ಟಿದ್ದ ವೇತನದಾರರ ಸೇರ್ಪಡೆಯು FY24 ರಲ್ಲಿ 131.5 ಲಕ್ಷಕ್ಕೆ ಹೆಚ್ಚಳವಾಗಿದೆ. ಆತ್ಮನಿರ್ಭರ್ ಭಾರತ್ ರೋಜ್‌ಗರ್ ಯೋಜನೆ (ಎಬಿಆರ್‌ವೈ) ಈ ಹೆಚ್ಚಳಕ್ಕೆ ಗಣನೀಯ ಕೊಡುಗೆ ನೀಡಿದೆ. EPFO ಸದಸ್ಯತ್ವ ಸಂಖ್ಯೆಗಳಲ್ಲಿಯೂ ಗಣನೀಯ ಪ್ರಮಾಣದ ಬೆಳವಣಿಗೆ ಕಂಡು ಬಂದಿದ್ದು, FY15 ಮತ್ತು FY24 ರ ನಡುವೆ ಶೇಕಡಾ 8.4 ರಷ್ಟು (CAGR) ಬೆಳವಣಿಗೆ ದಾಖಲಿಸಿದೆ.
ಉದ್ಯೋಗ ಸೃಷ್ಟಿಗೆ ಪ್ರಚೋದನೆ
ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲು ಭಾರತ ಸರ್ಕಾರವು ಹಲವಾರು ಕ್ರಮಗಳನ್ನು ಜಾರಿಗೆ ತಂದಿದೆ. ಉದಾಹರಣೆಗೆ ದೇಶದ ಉತ್ಪಾದನಾ ಸಾಮರ್ಥ್ಯ, ಬಂಡವಾಳ ವೆಚ್ಚದಲ್ಲಿ ಹೆಚ್ಚಳ ಮತ್ತು ಕಾರ್ಮಿಕರ ಕಲ್ಯಾಣಕ್ಕೆ ಉತ್ತೇಜನೆ ನೀಡಲು ಉತ್ಪಾದನೆ- ಆಧಾರಿತ ಪ್ರೋತ್ಸಾಹದ (PLI) ಯೋಜನೆಯ ಅನುಷ್ಠಾನ. ಇದರ ಜೊತೆಗೆ ಸುಲಭ ಸಾಲದ ಅವಕಾಶ ಮತ್ತು ಹಲವು ಸುಧಾರಣೆಗಳ ಮೂಲಕ ಸ್ವಯಂ ಉದ್ಯೋಗಕ್ಕೆ ಉತ್ತೇಜನವನ್ನು ನೀಡಲಾಗುತ್ತಿದೆ. ಉದ್ಯೋಗ ಸೃಷ್ಟಿ ಮತ್ತು ಕಾರ್ಮಿಕರ ಕಲ್ಯಾಣವನ್ನು ಉತ್ತೇಜಿಸಲು ಆರಂಭಿಸಿರುವ ರಾಷ್ಟ್ರೀಯ ವೃತ್ತಿ ಸೇವೆ (NCS) ಪೋರ್ಟಲ್, ಇ-ಶ್ರಮ ಪೋರ್ಟಲ್ ಮತ್ತು ಕೋವಿಡ್ ನಂತರದ ದಿನಗಳಲ್ಲಿ ಉದ್ಯೋಗದ ಜೊತೆಗೆ ಸಾಮಾಜಿಕ ಭದ್ರತೆಯ ಲಾಭಗಳನ್ನು ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾದ ಆತ್ಮನಿರ್ಭರ್ ಭಾರತ್ ರೋಜ್ಗಾರ್ ಯೋಜನೆ (ABRY) ಮುಂತಾದ ಕ್ರಮಗಳನ್ನು ಸಮೀಕ್ಷೆ ಉಲ್ಲೇಖಿಸಿದೆ.
ಗ್ರಾಮೀಣ ಭಾಗಗಳಲ್ಲಿ ವೇತನದ ಟ್ರೆಂಡ್
2023-24 ರ ಆರ್ಥಿಕ ಸಮೀಕ್ಷೆ ಪ್ರಕಾರ, ವಿತ್ತ ವರ್ಷ ೨೦೨೪ರಲ್ಲಿ ಗ್ರಾಮೀಣ ಪ್ರದೇಶದ ವೇತನಗಳಲ್ಲಿ ಪ್ರತಿ ತಿಂಗಳು ಶೇಕಡಾ 5%ರಷ್ಟು ಬೆಳವಣಿಗೆ ಕಂಡು ಬಂದಿದೆ. ಅದೇ ರೀತಿ ಕೃಷಿ ಕ್ಷೇತ್ರದ್ಲಲಿ ಪುರುಷರ ವೇತನ ದರಗಳಲ್ಲಿ ಶೇಕಡಾ 7.4% ರಷ್ಟು ಮತ್ತು ಮಹಿಳೆಯರ ವೇತನ ದರಗಳಲ್ಲಿ ಶೇಕಡಾ 7.7 ರಷ್ಟು ಬೆಳೆವಣಿಗೆ ಕಂಡುಬಂದಿದೆ. ಈ ಅವಧಿಯಲ್ಲಿ ಆದ ಕೃಷಿ ಕ್ಷೇತ್ರದ ಬಲವಾದ ಬೆಳವಣಿಗೆ ಇದಕ್ಕೆ ಕಾರಣ. ಇದೇ ಅವಧಿಯಲ್ಲಿ ಕೃಷಿಯೇತರ ಚಟುವಟಿಕೆಗಳಲ್ಲಿನ ವೇತನ ಬೆಳವಣಿಗೆಯು ಪುರುಷರಿಗೆ ಶೇಕಡಾ 6ರಷ್ಟು ಮತ್ತು ಮಹಿಳೆಯರಿಗೆ ಶೇಕಡಾ 7.4 ರಷ್ಟಿದೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಸರಕುಗಳ ಬೆಲೆಗಳು ಮತ್ತು ದೇಶೀಯ ಆಹಾರದ ಬೆಲೆಗಳ ಇಳಿಮುಖವಾಗುವುದರೊಂದಿಗೆ ಹಣದುಬ್ಬರವು ಕಡಿಮೆಯಾಗುವ ನಿರೀಕ್ಷೆಯಿರುವುದರಿಂದ, ನೈಜ ವೇತನದಲ್ಲಿ ನಿರಂತರ ಏರಿಕೆಗೆ ಕಾರಣವಾಗುವ ನಿರೀಕ್ಷೆ ಇದೆ ಎಂದು ಸಮೀಕ್ಷೆ ಹೇಳಿದೆ.
*****
(Release ID: 2035524)
Visitor Counter : 89