ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಾಜಿ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರ ಜೀವನ ಮತ್ತು ಪಯಣ ಕುರಿತ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಿದ ಪ್ರಧಾನಮಂತ್ರಿ 


"ಶ್ರೀ ಎಂ.ವೆಂಕಯ್ಯ ನಾಯ್ಡು ಗಾರು ಅವರ ಜ್ಞಾನ, ಬುದ್ಧಿವಂತಿಕೆ ಮತ್ತು ದೇಶದ ಪ್ರಗತಿಗೆ ಸಂಬಂಧಿಸಿದ  ಉತ್ಸಾಹವನ್ನು ವ್ಯಾಪಕವಾಗಿ ಪ್ರಶಂಸಿಸಲಾಗಿದೆ"

"ಈ 75 ವರ್ಷಗಳು ಅಸಾಧಾರಣವಾಗಿವೆ ಮತ್ತು ಇದು ಭವ್ಯವಾದ ನಿಲುಗಡೆಗಳನ್ನು ಒಳಗೊಂಡಿದೆ"

"ವೆಂಕಯ್ಯ ನಾಯ್ಡು ಜೀ ಅವರ ಜೀವನವು ಆಲೋಚನೆಗಳು, ದೃಷ್ಟಿ ಮತ್ತು ವ್ಯಕ್ತಿತ್ವದ ಸಂಯೋಜನೆಯ ಪರಿಪೂರ್ಣ ನೋಟವಾಗಿದೆ"

"ನಾಯ್ಡು ಜೀ ಅವರ ಹಾಸ್ಯಪ್ರವೃತ್ತಿ, ತಕ್ಷಣ ಪ್ರತಿಕ್ರಿಯಿಸುವ ಸ್ವಾಭಾವಿಕತೆ, ತ್ವರಿತ ಪ್ರತಿಕ್ರಿಯೆಗಳು ಮತ್ತು ಏಕ ಸಾಲುಗಳ (ಒನ್ ಲೈನರ್)  ಮಟ್ಟವನ್ನು ಯಾರೂ ಸರಿಗಟ್ಟಲು ಸಾಧ್ಯವಿಲ್ಲ"

"ನಾಯ್ಡು ಅವರು ಹಳ್ಳಿಗಳು, ಬಡವರು ಮತ್ತು ರೈತರಿಗೆ ಸೇವೆ ಸಲ್ಲಿಸಲು ಬಯಸಿದ್ದರು"

"ವೆಂಕಯ್ಯ ಜೀ ಅವರ ಜೀವನದ ಪ್ರಯಾಣವು ಯುವ ಪೀಳಿಗೆಗೆ ಸ್ಫೂರ್ತಿಯ ಮೂಲವಾಗಿದೆ"

Posted On: 30 JUN 2024 1:59PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತದ ಮಾಜಿ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರ 75ನೇ ಜನ್ಮದಿನದ ಮುನ್ನಾ ದಿನವಾದ  ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಅವರ ಜೀವನ ಮತ್ತು ಪ್ರಯಾಣ ಕುರಿತ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಪ್ರಧಾನಮಂತ್ರಿಯವರು ಬಿಡುಗಡೆ ಮಾಡಿದ ಪುಸ್ತಕಗಳಲ್ಲಿ (i) ದಿ ಹಿಂದೂ, ಹೈದರಾಬಾದ್ ಆವೃತ್ತಿಯ ಮಾಜಿ ಸ್ಥಾನಿಕ ಸಂಪಾದಕ ಶ್ರೀ ಎಸ್.ನಾಗೇಶ್ ಕುಮಾರ್ ಅವರು ಬರೆದಿರುವ "ವೆಂಕಯ್ಯ ನಾಯ್ಡು - ಸೇವೆಯಲ್ಲಿ ಜೀವನ" (ವೆಂಕಯ್ಯ ನಾಯ್ಡು –ಲೈಫ್ ಇನ್ ಸರ್ವಿಸ್)ಎಂಬ ಶೀರ್ಷಿಕೆಯ ಮಾಜಿ ಉಪರಾಷ್ಟ್ರಪತಿಯವರ ಜೀವನಚರಿತ್ರೆ; (ii) "ಭಾರತವನ್ನು ಸಂಭ್ರಮಿಸುವುದು/ಆಚರಿಸುವುದು - ಭಾರತದ 13 ನೇ ಉಪರಾಷ್ಟ್ರಪತಿಯಾಗಿ ಶ್ರೀ ಎಂ.ವೆಂಕಯ್ಯ ನಾಯ್ಡು ಅವರ ಧ್ಯೇಯ ಮತ್ತು ಸಂದೇಶ" (ಸಿಲೆಬ್ರೇಟಿಂಗ್ ಭಾರತ್-ದ ಮಿಶನ್ ಆಂಡ್ ಮೆಸ್ಸೇಜ್)  ಎಂಬ ಶೀರ್ಷಿಕೆಯಲ್ಲಿ  ಭಾರತದ ಉಪರಾಷ್ಟ್ರಪತಿಗಳ ಮಾಜಿ ಕಾರ್ಯದರ್ಶಿ ಡಾ.ಐ.ವಿ.ಸುಬ್ಬರಾವ್ ಅವರು ಸಂಗ್ರಹಿಸಿದ ಫೋಟೋ ಕ್ರಾನಿಕಲ್; ಮತ್ತು (iii) ಶ್ರೀ ಸಂಜಯ್ ಕಿಶೋರ್ ಅವರು ಬರೆದ "ಮಹಾನೇತಾ - ಶ್ರೀ ಎಂ. ವೆಂಕಯ್ಯ ನಾಯ್ಡು ಅವರ ಜೀವನ ಮತ್ತು ಪ್ರಯಾಣ" (ಮಹಾನೇತಾ-ಲೈಫ್ ಆಂಡ್ ಜರ್ನಿ ಆಫ್ ಶ್ರೀ ಎಂ. ವೆಂಕಯ್ಯ ನಾಯ್ಡು) ಎಂಬ ಶೀರ್ಷಿಕೆಯ ತೆಲುಗಿನ ಚಿತ್ರಾತ್ಮಕ ಜೀವನಚರಿತ್ರೆಗಳು ಸೇರಿವೆ. 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ನಾಳೆ ಜುಲೈ 1ರಂದು ಶ್ರೀ ಎಂ. ವೆಂಕಯ್ಯ ನಾಯ್ಡು ಅವರು 75ನೇ ವರ್ಷಕ್ಕೆ ಕಾಲಿಡಲಿದ್ದಾರೆ ಮತ್ತು "ಈ 75 ವರ್ಷಗಳು ಅಸಾಧಾರಣವಾಗಿವೆ ಹಾಗು ಇದು ಅದ್ಭುತವಾದ ಕಿರು ನಿಲುಗಡೆಗಳನ್ನು ಒಳಗೊಂಡಿದೆ" ಎಂದರು. ಶ್ರೀ ಎಂ. ವೆಂಕಯ್ಯ ನಾಯ್ಡು ಅವರ ಜೀವನಚರಿತ್ರೆ ಮತ್ತು ಅವರ ಜೀವನ ಆಧಾರಿತ ಇತರ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲು ಪ್ರಧಾನಮಂತ್ರಿಯವರು ಹರ್ಷ ವ್ಯಕ್ತಪಡಿಸಿದರು. ಈ ಪುಸ್ತಕಗಳು ಜನರಿಗೆ ಸ್ಫೂರ್ತಿಯ ಮೂಲವಾಗುತ್ತವೆ ಮತ್ತು ರಾಷ್ಟ್ರದ ಸೇವೆಗೆ ಸರಿಯಾದ ಮಾರ್ಗವನ್ನು ಬೆಳಗಿಸಿ ತೋರಿಸುತ್ತವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಮಾಜಿ ಉಪರಾಷ್ಟ್ರಪತಿಯವರೊಂದಿಗಿನ ತಮ್ಮ ದೀರ್ಘಕಾಲದ ಒಡನಾಟವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಶ್ರೀ ವೆಂಕಯ್ಯ ನಾಯ್ಡು ಅವರೊಂದಿಗೆ ದೀರ್ಘಕಾಲ ಕೆಲಸ ಮಾಡುವ ಅವಕಾಶ ತಮಗೆ ದೊರೆತಿತ್ತು ಎಂದರು. ಈ ಸಹಯೋಗವು ವೆಂಕಯ್ಯ ಜೀ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪ್ರಾರಂಭವಾಯಿತು, ನಂತರ ಸಂಪುಟದಲ್ಲಿಅವರ ಹಿರಿಯ ಪಾತ್ರ, ದೇಶದ ಉಪರಾಷ್ಟ್ರಪತಿಯಾಗಿ ಅವರ ಅಧಿಕಾರಾವಧಿ ಮತ್ತು ನಂತರ ರಾಜ್ಯಸಭೆಯ ಸ್ಪೀಕರ್ ಆಗಿದ್ದ ಅವಧಿಯಲ್ಲಿ  ಮುಂದುವರಿಯಿತು. "ಸಣ್ಣ ಹಳ್ಳಿಯಿಂದ ಬಂದ ವ್ಯಕ್ತಿಯು ಇಂತಹ ಮಹತ್ವದ ಹುದ್ದೆಗಳನ್ನು ಅಲಂಕರಿಸುವಾಗ ಸಂಗ್ರಹಿಸಿದ ಅನುಭವದ ಸಂಪತ್ತನ್ನು ಯಾರೊಬ್ಬರೂ ಊಹಿಸಬಹುದು. ನಾನು ಕೂಡ ವೆಂಕಯ್ಯ ಅವರಿಂದ ಬಹಳಷ್ಟು ಕಲಿತಿದ್ದೇನೆ" ಎಂದು ಅವರು ಹೇಳಿದರು.

ವೆಂಕಯ್ಯ ನಾಯ್ಡು ಅವರ ಜೀವನವು ಚಿಂತನೆಗಳು-ವಿಚಾರಗಳು, ದೂರದೃಷ್ಟಿ ಮತ್ತು ವ್ಯಕ್ತಿತ್ವದ ಸಮ್ಮಿಲನದ ಪರಿಪೂರ್ಣ ನೋಟವಾಗಿದೆ ಎಂದು ಶ್ರೀ ಮೋದಿ ಹೇಳಿದರು. ದಶಕಗಳ ಹಿಂದೆ ಯಾವುದೇ ಬಲವಾದ ಅಡಿಪಾಯವಿಲ್ಲದೆ ಹೇಗಿತ್ತೋ ಅದಕ್ಕೆ ಹೋಲಿಸಿದರೆ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬಿಜೆಪಿ ಮತ್ತು ಜನಸಂಘದ ಪ್ರಸ್ತುತ ಸ್ಥಿತಿಯ ಬಗ್ಗೆ ಪ್ರಧಾನಿ ಸಂತೋಷ ವ್ಯಕ್ತಪಡಿಸಿದರು. ಇಂತಹ ಲೋಪದೋಷಗಳ ಹೊರತಾಗಿಯೂ, ಶ್ರೀ ನಾಯ್ಡು ಅವರು ಎಬಿವಿಪಿ ಕಾರ್ಯಕರ್ತರಾಗಿ "ರಾಷ್ಟ್ರ ಮೊದಲು" ಸಿದ್ಧಾಂತದೊಂದಿಗೆ ತಮ್ಮ ಪಾತ್ರದಲ್ಲಿ ಶ್ರಮಿಸಿದರು ಮತ್ತು ರಾಷ್ಟ್ರಕ್ಕಾಗಿ ಏನನ್ನಾದರೂ ಸಾಧಿಸಲು ಮನಸ್ಸು ಮಾಡಿದ್ದರು ಎಂದು ಅವರು ಹೇಳಿದರು. ಸುಮಾರು 17 ತಿಂಗಳುಗಳ ಕಾಲ ಜೈಲಿನಲ್ಲಿದ್ದು, 50 ವರ್ಷಗಳ ಹಿಂದೆ ದೇಶದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿದ್ದಕ್ಕಾಗಿ ಶ್ರೀ ನಾಯ್ಡು ಅವರನ್ನು ಪ್ರಧಾನಿ ಶ್ಲಾಘಿಸಿದರು. ಶ್ರೀ ನಾಯ್ಡು ಅವರು ತುರ್ತು ಪರಿಸ್ಥಿತಿಯ ಕ್ಷೋಭೆಯನ್ನು ಅನುಭವಿಸಿದ  ಮತ್ತು ಅದನ್ನು ಎದುರಿಸಿದಂತಹ ಧೈರ್ಯಶಾಲಿಗಳಲ್ಲಿ ಒಬ್ಬರು ಎಂಬುದರತ್ತ  ಶ್ರೀ ಮೋದಿ ಅವರು ಬೆಟ್ಟು ಮಾಡಿದರು ಮತ್ತು ಅದಕ್ಕಾಗಿಯೇ ತಾವು  ನಾಯ್ಡು ಜೀ ಅವರನ್ನು ನಿಜವಾದ ಸ್ನೇಹಿತ ಎಂದು ಪರಿಗಣಿಸುತ್ತಿರುವುದಾಗಿಯೂ ನುಡಿದರು. 

ಅಧಿಕಾರವು ಜೀವನದ ಸೌಕರ್ಯಗಳನ್ನು/ಅನುಕೂಲತೆಗಳನ್ನು ಪ್ರತಿಬಿಂಬಿಸುವುದಿಲ್ಲ ಆದರೆ ಅದು ಸೇವೆಯ ಮೂಲಕ ಸಂಕಲ್ಪಗಳನ್ನು ಸಾಧಿಸುವ ಮಾಧ್ಯಮವಾಗಿದೆ ಎಂಬುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಶ್ರೀ ನಾಯ್ಡು ಅವರು ವಾಜಪೇಯಿ ಸರ್ಕಾರದ ಭಾಗವಾಗಲು ಅವಕಾಶ ಸಿಕ್ಕಾಗ ಇದನ್ನು ಸಾಬೀತುಪಡಿಸಿದರು, ಅಲ್ಲಿ ಅವರು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಲು ನಿರ್ಧರಿಸಿದರು ಎಂದು ಹೇಳಿದರು. "ನಾಯ್ಡು ಅವರು ಹಳ್ಳಿಗಳು, ಬಡವರು ಮತ್ತು ರೈತರ ಸೇವೆ ಮಾಡಲು ಬಯಸಿದ್ದರು" ಎಂದು ಶ್ರೀ ಮೋದಿ ಹೇಳಿದರು. ಶ್ರೀ ನಾಯ್ಡು ಅವರು ಮೋದಿ ಸರ್ಕಾರದಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದಾರೆ ಎಂಬುದನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಅವರು  ಆಧುನಿಕ ಭಾರತೀಯ ನಗರಗಳ ಬಗ್ಗೆ ನಾಯ್ಡು ಅವರ ಬದ್ಧತೆ ಮತ್ತು ದೃಷ್ಟಿಕೋನವನ್ನು ಶ್ಲಾಘಿಸಿದರು. ಶ್ರೀ ವೆಂಕಯ್ಯ ನಾಯ್ಡು ಅವರು ಪ್ರಾರಂಭಿಸಿದ ಸ್ವಚ್ಛ ಭಾರತ ಅಭಿಯಾನ, ಸ್ಮಾರ್ಟ್ ಸಿಟಿ ಮಿಷನ್ ಮತ್ತು ಅಮೃತ್ ಯೋಜನೆಯನ್ನು ಅವರು ಉಲ್ಲೇಖಿಸಿದರು.

ಮಾಜಿ ಉಪರಾಷ್ಟ್ರಪತಿಗಳ ಮೃದು ಸೌಮ್ಯ ನಡವಳಿಕೆ, ವಾಕ್ಚಾತುರ್ಯ ಮತ್ತು ಹಾಸ್ಯಪ್ರವೃತ್ತಿಯ ಬುದ್ಧಿವಂತಿಕೆಯನ್ನು ಶ್ಲಾಘಿಸಿದ ಪ್ರಧಾನಿ, ವೆಂಕಯ್ಯ ನಾಯ್ಡು ಅವರ ಹಾಸ್ಯಪ್ರವೃತ್ತಿ, ತಕ್ಷಣವೇ ಉತ್ತರಿಸುವ ಚಾಕಚಕ್ಯತೆಯ ಸ್ವಾಭಾವಿಕತೆ, ತ್ವರಿತ ಪ್ರತಿಕ್ರಿಯೆಗಳು ಮತ್ತು ಒನ್ ಲೈನರ್ ಗಳಿಗೆ ಯಾರೂ ಸರಿಸಾಟಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು. ಅಟಲ್ ಬಿಹಾರಿ ವಾಜಪೇಯಿ ಅವರ ಸಮ್ಮಿಶ್ರ ಸರ್ಕಾರದ ರಚನೆಯ ಸಮಯದಲ್ಲಿ ನಾಯ್ಡು ಅವರು ರಚಿಸಿದ "ಏಕ್ ಹಾತ್ ಮೇ ಬಿಜೆಪಿ ಕಾ ಜಂಡಾ, ಔರ್ ದುಸ್ರೆ ಹಾತ್ ಮೇ ಎನ್ಡಿಎ ಕಾ ಅಜೆಂಡಾ" ಎಂಬ ಘೋಷಣೆಯನ್ನು ಶ್ರೀ ಮೋದಿ ಆತ್ಮೀಯವಾಗಿ ನೆನಪಿಸಿಕೊಂಡರು, ಇದು ಒಂದು ಕೈಯಲ್ಲಿ ಪಕ್ಷದ ಧ್ವಜ ಮತ್ತು ಇನ್ನೊಂದು ಕೈಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಕಾರ್ಯಸೂಚಿ ಎಂದು ಹೇಳುತ್ತದೆ. 2014 ರಲ್ಲಿ, ಅವರು ಎಂ.ಒ.ಡಿ.ಐ.ಗೆ 'ಮೇಕಿಂಗ್ ಆಫ್ ಡೆವಲಪ್ಡ್ ಇಂಡಿಯಾ' ಎಂಬ ಸಂಕ್ಷಿಪ್ತ ರೂಪವನ್ನು ಪರಿಚಯಿಸಿದರು. ಮಾಜಿ ಉಪರಾಷ್ಟ್ರಪತಿಯವರ ಚಿಂತನೆ ಮತ್ತು ಮಾತುಗಳನ್ನು ಮೆಲುಕು ಹಾಕುವ ಕ್ರಮದಿಂದ ಆಚ್ಚರಿಗೊಂಡು  ತಾವು ರಾಜ್ಯ ಸಭೆಯಲ್ಲಿ ಅವರ ಮಾತುಗಳಲ್ಲಿ  ಆಳ, ಗಂಭೀರತೆ, ದೃಷ್ಟಿ, ಮಾತಿನ ಪೆಟ್ಟು, ಬೌನ್ಸ್ ಮತ್ತು ಬುದ್ಧಿವಂತಿಕೆ ಇದೆ ಎಂದು ಹೇಳಿ ಅವರ ಕಾರ್ಯಶೈಲಿಯನ್ನು ಹೊಗಳಿದ್ದನ್ನೂ ಸ್ಮರಿಸಿಕೊಂಡರು.

ಶ್ರೀ ನಾಯ್ಡು ಅವರು ರಾಜ್ಯಸಭೆಯ ಸ್ಪೀಕರ್ ಆಗಿದ್ದ ಅವಧಿಯಲ್ಲಿ ಸೃಷ್ಟಿಸಿದ ಸಕಾರಾತ್ಮಕ ವಾತಾವರಣವನ್ನು ಪ್ರಧಾನಿ ಶ್ಲಾಘಿಸಿದರು ಮತ್ತು ಸದನವು ಕೈಗೊಂಡ ವಿವಿಧ ಪ್ರಮುಖ ನಿರ್ಧಾರಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಲೋಕಸಭೆಯಲ್ಲಿ ಮಂಡಿಸುವ ಮೊದಲು ರಾಜ್ಯಸಭೆಯಲ್ಲಿ 370 ನೇ ವಿಧಿಯನ್ನು ರದ್ದು ಮಾಡುವ/ ಹಿಂತೆಗೆದುಕೊಳ್ಳುವ ಮಸೂದೆಯನ್ನು ಪರಿಚಯಿಸಿದ್ದನ್ನು ನೆನಪಿಸಿಕೊಂಡ ಪ್ರಧಾನಿ, ಸದನದ ಘನತೆಯನ್ನು ಕಾಪಾಡಿಕೊಳ್ಳುವಾಗ ಇಂತಹ ಸೂಕ್ಷ್ಮ ಮಸೂದೆಯನ್ನು ಅಂಗೀಕರಿಸುವಲ್ಲಿ ಶ್ರೀ ನಾಯ್ಡು ಅವರ ಅನುಭವಿ ನಾಯಕತ್ವವನ್ನು ಶ್ಲಾಘಿಸಿದರು. ಶ್ರೀ ನಾಯ್ಡು ಅವರಿಗೆ ದೀರ್ಘ, ಸಕ್ರಿಯ ಮತ್ತು ಆರೋಗ್ಯಕರ ಜೀವನವನ್ನು ಪ್ರಧಾನಿ ಹಾರೈಸಿದರು.

ಶ್ರೀ ಮೋದಿ ಅವರು ವೆಂಕಯ್ಯ ಜೀ  ಅವರ ಸ್ವಭಾವದ ಭಾವನಾತ್ಮಕ ಅಂಶದ ಬಗ್ಗೆಯೂ ಬೆಳಕು ಚೆಲ್ಲಿದರು ಮತ್ತು ಅವರು ತಮ್ಮ  ನಿರ್ಧಾರ ತೆಗೆದುಕೊಳ್ಳುವಿಕೆಯ ಮೇಲೆ ಪ್ರತಿಕೂಲ ಪರಿಸ್ಥಿತಿಗಳು ಪರಿಣಾಮ ಬೀರುವುದಕ್ಕೆ ಅವಕಾಶ ನೀಡುತ್ತಿರಲಿಲ್ಲ  ಎಂದೂ  ಹೇಳಿದರು. ಅವರ ಸರಳ ಜೀವನ ವಿಧಾನ ವನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ,  ಜನರೊಂದಿಗೆ ಸಂಪರ್ಕದಲ್ಲಿರಲು ನಾಯ್ಡು ಅವರು ಅನುಸರಿಸುತ್ತಿದ್ದ ವಿಶೇಷ ವಿಧಾನಗಳನ್ನೂ ಪ್ರಸ್ತಾಪಿಸಿದರು. ಹಬ್ಬಗಳ ಸಮಯದಲ್ಲಿ ವೆಂಕಯ್ಯ ಜೀ ಅವರ ನಿವಾಸದಲ್ಲಿ ಸಮಯ ಕಳೆದಿದ್ದನ್ನು ಪಿಎಂ ಮೋದಿ ನೆನಪಿಸಿಕೊಂಡರು. ಶ್ರೀ ನಾಯ್ಡು ಅವರಂತಹ ವ್ಯಕ್ತಿಗಳು ಭಾರತೀಯ ರಾಜಕೀಯಕ್ಕೆ ನೀಡಿದ ಕೊಡುಗೆಗಳನ್ನು ಪ್ರಧಾನಿ ಪ್ರಸ್ತಾಪಿಸಿದರು. ಇಂದು ಬಿಡುಗಡೆಯಾದ ಮೂರು ಪುಸ್ತಕಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಅವು ವೆಂಕಯ್ಯ ಜೀ ಅವರ ಜೀವನದ ಪಯಣವನ್ನು ಪ್ರಸ್ತುತಪಡಿಸುತ್ತವೆ, ಇದು ಯುವ ಪೀಳಿಗೆಗೆ ಸ್ಫೂರ್ತಿಯ ಮೂಲವಾಗಿದೆ ಎಂದರು.    

ಒಮ್ಮೆ ರಾಜ್ಯಸಭೆಯಲ್ಲಿ ಶ್ರೀ ನಾಯ್ಡು ಅವರಿಗೆ ಸಮರ್ಪಿಸಿದ ಕವಿತೆಯ ಕೆಲವು ಸಾಲುಗಳನ್ನು ಸ್ಮರಿಸುವ ಮೂಲಕ ಪ್ರಧಾನ ಮಂತ್ರಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ತಮ್ಮ ಜೀವನದ 75 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಶ್ರೀ ವೆಂಕಯ್ಯ ನಾಯ್ಡು ಜೀ ಅವರನ್ನು ಶ್ರೀ ನರೇಂದ್ರ ಮೋದಿ ಮತ್ತೊಮ್ಮೆ ಅಭಿನಂದಿಸಿದರು ಮತ್ತು ಶುಭ ಹಾರೈಸಿದರು. ಅಭಿವೃದ್ಧಿ ಹೊಂದಿದ ಭಾರತ (ವಿಕಸಿತ ಭಾರತ) 2047 ರಲ್ಲಿ ತನ್ನ "ಸ್ವಾತಂತ್ರ್ಯದ ಶತಮಾನ"ವನ್ನು ಆಚರಿಸಲಿದೆ ಮತ್ತು ನಾಯ್ಡು ಜೀ ಅವರು ಆಗ ತಮ್ಮ ಶತಮಾನೋತ್ಸವವನ್ನು ಆಚರಿಸಲಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದು  ಶ್ರೀ ಮೋದಿ ಭರವಸೆ ವ್ಯಕ್ತಪಡಿಸಿದರು.

 

 

*****


(Release ID: 2029823) Visitor Counter : 83