ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಸಂಸತ್ತು ಉದ್ದೇಶಿಸಿ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಭಾಷಣ

Posted On: 27 JUN 2024 12:13PM by PIB Bengaluru

ಗೌರವಾನ್ವಿತ ಸದಸ್ಯರೆ,

1. 18ನೇ ಲೋಕಸಭೆಗೆ ಹೊಸದಾಗಿ ಚುನಾಯಿತರಾದ ಎಲ್ಲ ಸದಸ್ಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸುತ್ತೇನೆ.

ದೇಶದ ಮತದಾರರ ವಿಶ್ವಾಸಗಳಿಸಿದ ನಂತರ ನೀವೆಲ್ಲರೂ ಇಲ್ಲಿದ್ದೀರಿ.

ಕೆಲವೇ ಕೆಲವರು ಮಾತ್ರ ರಾಷ್ಟ್ರ ಮತ್ತು ಜನರ ಸೇವೆ ಮಾಡಲು ಈ ಸವಲತ್ತು ಪಡೆಯುತ್ತಾರೆ.

“ದೇಶವೇ ಮೊದಲು (ನೇಷನ್ ಫಸ್ಟ್)” ಎಂಬ ಸ್ಫೂರ್ತಿಯೊಂದಿಗೆ ನಿಮ್ಮ ಜವಾಬ್ದಾರಿಗಳನ್ನು ನೀವು ಪೂರೈಸುತ್ತೀರಿ, 140 ಕೋಟಿ ಭಾರತೀಯರ ಸಕಲ ಆಕಾಂಕ್ಷೆಗಳನ್ನು ಈಡೇರಿಸುವ ಮಾಧ್ಯಮವಾಗುತ್ತೀರಿ ಎಂಬ ವಿಶ್ವಾಸ ನನಗಿದೆ.

ಲೋಕಸಭೆಯ ಸ್ಪೀಕರ್ ಆಗಿ ತಮ್ಮ ಉನ್ನತ ಪಾತ್ರ ನಿರ್ವಹಿಸಿದ್ದಕ್ಕಾಗಿ ಶ್ರೀ ಓಂ ಬಿರ್ಲಾ ಜಿ ಅವರಿಗೆ ನಾನು ಶುಭ ಹಾರೈಸುತ್ತೇನೆ.

ಸಾರ್ವಜನಿಕ ಜೀವನದಲ್ಲಿ ಅವರು ಅಪಾರ ಅನುಭವ ಹೊಂದಿದ್ದಾರೆ.

ಅವರು ತಮ್ಮ ಕೌಶಲ್ಯದಿಂದ ಪ್ರಜಾಪ್ರಭುತ್ವ ಸತ್ಸಂಪ್ರದಾಯಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸ ನನಗಿದೆ.

ಗೌರವಾನ್ವಿತ ಸದಸ್ಯರೆ,

2. ಇಂದು ಕೋಟ್ಯಂತರ ಭಾರತೀಯರ ಪರವಾಗಿ ನಾನು ಭಾರತದ ಚುನಾವಣಾ ಆಯೋಗಕ್ಕೆ ನನ್ನ ಮನಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಇದು ವಿಶ್ವದಲ್ಲೇ ಅತಿ ದೊಡ್ಡ ಚುನಾವಣೆಯಾಗಿತ್ತು.

ಸುಮಾರು 64 ಕೋಟಿ ಮತದಾರರು ತಮ್ಮ ಕರ್ತವ್ಯವನ್ನು ಉತ್ಸಾಹ ಮತ್ತು ಚೈತನ್ಯದಿಂದ ನಿರ್ವಹಿಸಿದ್ದಾರೆ.

ಈ ಬಾರಿಯೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದರು. ಈ ಚುನಾವಣೆಯ ಒಂದು ಹೃದಯಸ್ಪರ್ಶಿ ಅಂಶ ಜಮ್ಮು-ಕಾಶ್ಮೀರದಿಂದ ಹೊರಹೊಮ್ಮಿದೆ.

ಕಾಶ್ಮೀರ ಕಣಿವೆಯು ಹಲವು ದಶಕಗಳ ಮತದಾನದ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿದೆ.

ಕಳೆದ 4 ದಶಕಗಳಲ್ಲಿ ಕಾಶ್ಮೀರದಲ್ಲಿ ನಿರಂತರ ಬಂದ್‌ಗಳು ಮತ್ತು ಮುಷ್ಕರಗಳ ನಡುವೆ ಮತದಾನದ ಪ್ರಮಾಣ ತಗ್ಗಿದ್ದನ್ನು ನಾವು ನೋಡಿದ್ದೇವೆ.

ಭಾರತದ ಶತ್ರುಗಳು ಜಾಗತಿಕ ವೇದಿಕೆಗಳಲ್ಲಿ ಸುಳ್ಳು ಪ್ರಚಾರ ಹರಡುವುದನ್ನು ಮುಂದುವರೆಸಿದರು, ಅದನ್ನು ಜಮ್ಮು-ಕಾಶ್ಮೀರದ ಅಭಿಪ್ರಾಯವೆಂದು ಬಿಂಬಿಸಿದರು.

ಆದರೆ ಈ ಬಾರಿ ಕಾಶ್ಮೀರ ಕಣಿವೆ ದೇಶದ ಒಳಗೆ ಮತ್ತು ಹೊರಗೆ ಇಂತಹ ಪ್ರತಿಯೊಂದು ಅಂಶಗಳಿಗೆ ತಕ್ಕ ಉತ್ತರ ನೀಡಿದೆ.

ಮೊಟ್ಟಮೊದಲ ಬಾರಿಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮನೆಯಲ್ಲೇ ಮತದಾನ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಸಿಬ್ಬಂದಿ ಮಾಡಿದ ಕೆಲಸಕ್ಕೆ ನನ್ನ ಮೆಚ್ಚುಗೆಯನ್ನು ತಿಳಿಸುತ್ತೇನೆ, ಅವರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಗೌರವಾನ್ವಿತ ಸದಸ್ಯರೆ,

3. ಇಡೀ ಜಗತ್ತು 2024ರ ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡುತ್ತಿದೆ.

ಭಾರತದ ಜನರು ಸತತವಾಗಿ 3ನೇ ಅವಧಿಗೆ ಸ್ಪಷ್ಟ ಬಹುಮತದೊಂದಿಗೆ ಸ್ಥಿರ ಸರ್ಕಾರ ಆಯ್ಕೆ ಮಾಡಿದ್ದಾರೆ ಎಂಬುದು ಇಡೀ ಜಗತ್ತಿಗೆ ಸಾಕ್ಷಿಯಾಗಿದೆ.

6 ದಶಕಗಳ ನಂತರ ಇದು ನಡೆದಿದೆ.

ಭಾರತದ ಜನರ ಆಕಾಂಕ್ಷೆಗಳು ಅತ್ಯಧಿಕವಾಗಿರುವ ಸಮಯದಲ್ಲಿ, ಜನರು ಸತತ 3ನೇ ಅವಧಿಗೆ ನನ್ನ ಸರ್ಕಾರದ ಮೇಲೆ ನಂಬಿಕೆ ಇಟ್ಟಿದ್ದಾರೆ.

ನನ್ನ ಸರ್ಕಾರ ಮಾತ್ರ ತಮ್ಮ ಆಕಾಂಕ್ಷೆಗಳನ್ನು ಈಡೇರಿಸಬಲ್ಲದು ಎಂಬ ಸಂಪೂರ್ಣ ನಂಬಿಕೆ ಭಾರತದ ಜನತೆಗಿದೆ.

ಆದ್ದರಿಂದ, 2024ರ ಈ ಚುನಾವಣೆಯು ನೀತಿ, ಉದ್ದೇಶ, ಸಮರ್ಪಣೆ ಮತ್ತು ನಿರ್ಧಾರಗಳ ವಿಷಯದಲ್ಲಿ ನಂಬಿಕೆಯ ಚುನಾವಣೆಯಾಗಿದೆ:

• ಬಲವಾದ ಮತ್ತು ನಿರ್ಣಾಯಕ ಸರ್ಕಾರದಲ್ಲಿ ನಂಬಿಕೆ

• ಉತ್ತಮ ಆಡಳಿತ, ಸ್ಥಿರತೆ ಮತ್ತು ನಿರಂತರತೆಯಲ್ಲಿ ನಂಬಿಕೆ

• ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಲ್ಲಿ ನಂಬಿಕೆ

• ಭದ್ರತೆ ಮತ್ತು ಸಮೃದ್ಧಿಯಲ್ಲಿ ನಂಬಿಕೆ

• ಸರ್ಕಾರದ ಖಾತರಿಗಳು ಮತ್ತು ವಿತರಣೆಯಲ್ಲಿ ನಂಬಿಕೆ

• ವಿಕಸಿತ ಭಾರತ ಎಂಬ ಭಾರತದ ದೃಢ ಸಂಕಲ್ಪದಲ್ಲಿ ನಂಬಿಕೆ

ಇದು ಕಳೆದ 10 ವರ್ಷಗಳಲ್ಲಿ ನನ್ನ ಸರ್ಕಾರದ ಸೇವೆ ಮತ್ತು ಉತ್ತಮ ಆಡಳಿತದ ಧ್ಯೇಯಕ್ಕೆ ಅನುಮೋದನೆಯ ಮುದ್ರೆಯಾಗಿದೆ.

ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಕೆಲಸವು ಅಡೆತಡೆಯಿಲ್ಲದೆ ಮುಂದುವರಿಯುತ್ತದೆ ಮತ್ತು ಭಾರತವು ತನ್ನ ಗುರಿಗಳನ್ನು ಸಾಧಿಸುತ್ತದೆ ಎಂಬುದೇ ಆದೇಶವಾಗಿದೆ.

ಗೌರವಾನ್ವಿತ ಸದಸ್ಯರೆ,

4. 18ನೇ ಲೋಕಸಭೆ ಹಲವು ರೀತಿಯಲ್ಲಿ ಐತಿಹಾಸಿಕವಾಗಿದೆ.

ಈ ಲೋಕಸಭೆ ಅಮೃತ ಕಾಲದ ಆರಂಭಿಕ ವರ್ಷಗಳಲ್ಲಿ ರಚನೆಯಾಗಿದೆ.

ಈ ಲೋಕಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ 75ನೇ ವರ್ಷಕ್ಕೆ ಸಾಕ್ಷಿಯಾಗಲಿದೆ.

ಈ ಲೋಕಸಭೆಯು ಸಾರ್ವಜನಿಕ ಕಲ್ಯಾಣ ನಿರ್ಧಾರಗಳ ಕುರಿತು ಹೊಸ ಅಧ್ಯಾಯ ಬರೆಯಲಿದೆ ಎಂಬ ವಿಶ್ವಾಸ ನನಗಿದೆ.

ಮುಂಬರುವ ಅಧಿವೇಶನದಲ್ಲಿ ನನ್ನ ಸರ್ಕಾರ ತನ್ನ ಮೊದಲ ಬಜೆಟ್ ಮಂಡಿಸಲಿದೆ. ಈ ಬಜೆಟ್ ಸರ್ಕಾರದ ದೂರಗಾಮಿ ನೀತಿಗಳು ಮತ್ತು ಭವಿಷ್ಯದ ದೃಷ್ಟಿಯ ಪರಿಣಾಮಕಾರಿ ದಾಖಲೆಯಾಗಲಿದೆ.

ಪ್ರಮುಖ ಆರ್ಥಿಕ ಮತ್ತು ಸಾಮಾಜಿಕ ನಿರ್ಧಾರಗಳ ಜೊತೆಗೆ ಹಲವು ಐತಿಹಾಸಿಕ ಹೆಜ್ಜೆಗಳನ್ನೂ ಈ ಬಜೆಟ್ ನಲ್ಲಿ ಕಾಣಬಹುದು.

ಕ್ಷಿಪ್ರ ಗತಿಯ ಅಭಿವೃದ್ಧಿಗಾಗಿ ಭಾರತದ ಜನರ ಆಕಾಂಕ್ಷೆಗಳಿಗೆ ಅನುಗುಣವಾಗಿ ಸುಧಾರಣೆಗಳ ವೇಗವನ್ನು ಇನ್ನಷ್ಟು ವೇಗಗೊಳಿಸಲಾಗುತ್ತದೆ.

ವಿಶ್ವಾದ್ಯಂತ ಹೂಡಿಕೆದಾರರನ್ನು ಆಕರ್ಷಿಸಲು ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆ ಇರಬೇಕು ಎಂದು ನನ್ನ ಸರ್ಕಾರ ನಂಬುತ್ತದೆ.

ಇದು ಸ್ಪರ್ಧಾತ್ಮಕ ಸಹಕಾರಿ ಒಕ್ಕೂಟ ವ್ಯವಸ್ಥೆಯ ನಿಜವಾದ ಮನೋಭಾವವಾಗಿದೆ.

ರಾಜ್ಯಗಳ ಅಭಿವೃದ್ಧಿಯಲ್ಲಿ ದೇಶದ ಅಭಿವೃದ್ಧಿ ಅಡಗಿದೆ ಎಂಬ ನಂಬಿಕೆಯೊಂದಿಗೆ ನಾವು ಮುಂದುವರಿಯುತ್ತೇವೆ.

ಗೌರವಾನ್ವಿತ ಸದಸ್ಯರೆ,

5. ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ ಅಥವಾ ರೂಪಾಂತರದ ದೃಢ ಸಂಕಲ್ಪವು ಭಾರತವನ್ನು ಇಂದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನಾಗಿ ಮಾಡಿದೆ.

10 ವರ್ಷಗಳಲ್ಲಿ, ಭಾರತವು 11ನೇ ಶ್ರೇಯಾಂಕದ ಆರ್ಥಿಕತೆಯಿಂದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ.

2021ರಿಂದ 2024ರ ವರೆಗೆ, ಭಾರತವು ವಾರ್ಷಿಕವಾಗಿ ಸರಾಸರಿ 8% ಜಿಡಿಪಿ ಬೆಳವಣಿಗೆ ಸಾಧಿಸಿದೆ.

ಮತ್ತು ಸಾಮಾನ್ಯ ಸಂದರ್ಭಗಳಲ್ಲಿ ಈ ಬೆಳವಣಿಗೆ ಸಾಧಿಸಲಾಗಿಲ್ಲ.

ಇತ್ತೀಚಿನ ವರ್ಷಗಳಲ್ಲಿ, ನಾವು 100 ವರ್ಷಗಳಲ್ಲಿ ಅತಿದೊಡ್ಡ ಸಾಂಕ್ರಾಮಿಕ ರೋಗ ಕೋವಿಡ್-19 ನೋಡಿದ್ದೇವೆ.

ಜಾಗತಿಕ ಸಾಂಕ್ರಾಮಿಕದ ನಡುವೆ ಮತ್ತು ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಸಂಘರ್ಷಗಳ ನಡುವೆಯೂ ಭಾರತ ಈ ಆರ್ಥಿಕ ಬೆಳವಣಿಗೆ ಸಾಧಿಸಿದೆ.

ಕಳೆದ 10 ವರ್ಷಗಳಲ್ಲಿ ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ಕೈಗೊಂಡ ಸುಧಾರಣೆಗಳು ಮತ್ತು ಪ್ರಮುಖ ನಿರ್ಧಾರಗಳಿಂದ ಇದು ಸಾಧ್ಯವಾಗಿದೆ.

ಇಂದು ಜಾಗತಿಕ ಬೆಳವಣಿಗೆಯಲ್ಲಿ ಭಾರತವೇ ಶೇ.15ರಷ್ಟು ಕೊಡುಗೆ ನೀಡುತ್ತಿದೆ.

ಈಗ, ನನ್ನ ಸರ್ಕಾರವು ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಶ್ರಮಿಸುತ್ತಿದೆ.

ಈ ಗುರಿ ಸಾಧಿಸುವುದು ಅಭಿವೃದ್ಧಿ ಹೊಂದಿದ ಭಾರತದ ಬುನಾದಿಯನ್ನು ಭದ್ರಪಡಿಸಲಿದೆ.

ಗೌರವಾನ್ವಿತ ಸದಸ್ಯರೆ,

6. ನನ್ನ ಸರ್ಕಾರವು ಆರ್ಥಿಕತೆಯ ಎಲ್ಲಾ 3 ಆಧಾರಸ್ತಂಭಗಳಿಗೆ ಸಮಾನ ಪ್ರಾಮುಖ್ಯತೆ ನೀಡುತ್ತಿದೆ- ಅವೆಂದರೆ, ಉತ್ಪಾದನೆ, ಸೇವೆಗಳು ಮತ್ತು ಕೃಷಿ.

ಪಿಎಲ್‌ಐ ಯೋಜನೆಗಳು ಮತ್ತು ಸುಲಭವಾಗಿ ಉದ್ಯಮ ವ್ಯವಹಾರ ನಡೆಸಲು ಮತ್ತು ಹೂಡಿಕೆ, ಉದ್ಯೋಗಾವಕಾಶಗಳನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲು ಕೊಡುಗೆ ನೀಡಿವೆ.

ಸಾಂಪ್ರದಾಯಿಕ ವಲಯಗಳ ಜತೆಗೆ, ಉದಯೋನ್ಮುಖ ವಲಯಗಳಿಗೆ ಕಾರ್ಯಾಚರಣೆ ಮಾದರಿ(ಮಿಷನ್ ಮೋಡ್‌)ಯಲ್ಲಿ ಉತ್ತೇಜನ ನೀಡಲಾಗುತ್ತಿದೆ.

ಅದು ಸೆಮಿಕಂಡಕ್ಟರ್ (ಅರೆವಾಹಕ) ಆಗಿರಲಿ ಅಥವಾ ಸೌರಶಕ್ತಿಯಾಗಿರಲಿ,

ಅದು ಎಲೆಕ್ಟ್ರಿಕ್ (ವಿದ್ಯುತ್‌ ಚಾಲಿತ) ವಾಹನಗಳಾಗಿರಲಿ ಅಥವಾ ಎಲೆಕ್ಟ್ರಾನಿಕ್ ಸರಕುಗಳಾಗಿರಲಿ,

ಅದು ಹಸಿರು ಹೈಡ್ರೋಜನ್ ಅಥವಾ ಬ್ಯಾಟರಿಗಳಾಗಿರಲಿ,

ವಿಮಾನವಾಹಕ ನೌಕೆಗಳು ಅಥವಾ ಯುದ್ಧ ವಿಮಾನಗಳಾಗಿರಲಿ,

ಈ ಎಲ್ಲ ಕ್ಷೇತ್ರಗಳಲ್ಲೂ ಭಾರತ ವಿಸ್ತಾರಗೊಳ್ಳುತ್ತಿದೆ. ನನ್ನ ಸರ್ಕಾರವು ಸರಕು ಸಾಗಣೆ ವೆಚ್ಚ ಕಡಿಮೆ ಮಾಡಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ.

ಅಲ್ಲದೆ, ಸರ್ಕಾರವು ಸೇವಾ ವಲಯವನ್ನು ಬಲಪಡಿಸುತ್ತಿದೆ.

ಇಂದು ಭಾರತವು ಐಟಿಯಿಂದ ಪ್ರವಾಸೋದ್ಯಮದವರೆಗೆ, ಆರೋಗ್ಯದಿಂದ ಸ್ವಾಸ್ಥ್ಯದವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ನಾಯಕ(ಸರದಾರ)ನಾಗಿ ಹೊರಹೊಮ್ಮುತ್ತಿದೆ.

ಇದು ಉದ್ಯೋಗ ಮತ್ತು ಸ್ವಯಂ-ಉದ್ಯೋಗಕ್ಕಾಗಿ ಹೆಚ್ಚಿನ ಸಂಖ್ಯೆಯ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ.

ಗೌರವಾನ್ವಿತ ಸದಸ್ಯರೆ,

7. ಕಳೆದ 10 ವರ್ಷಗಳಲ್ಲಿ ನನ್ನ ಸರ್ಕಾರವು ಗ್ರಾಮೀಣ ಆರ್ಥಿಕತೆಯ ಪ್ರತಿಯೊಂದು ಕಾರ್ಯಕ್ರಮಕ್ಕೂ ಹೆಚ್ಚಿನ ಒತ್ತು ನೀಡಿದೆ.

ಕೃಷಿ ಆಧಾರಿತ ಕೈಗಾರಿಕೆಗಳು, ಹೈನುಗಾರಿಕೆ ಮತ್ತು ಮೀನುಗಾರಿಕೆ ಆಧಾರಿತ ಕೈಗಾರಿಕೆಗಳನ್ನು ಗ್ರಾಮೀಣ ಭಾಗಗಳಲ್ಲಿ ವಿಸ್ತರಿಸಲಾಗುತ್ತಿದೆ.

ಅದರಲ್ಲೂ ವಿಶೇಷವಾಗಿ, ಸಹಕಾರಿ ಸಂಸ್ಥೆಗಳಿಗೆ ಆದ್ಯತೆ ನೀಡಲಾಗಿದೆ.

ಸರ್ಕಾರವು ರೈತ ಉತ್ಪಾದಕ ಸಂಸ್ಥೆಗಳ (ಎಫ್ ಪಿ ಒ) ಮತ್ತು ಪ್ರಾಥಮಿಕ ಕೃಷಿ ಸಾಲ ಸೊಸೈಟಿ(ಪಿಎಸಿ)ಯಂತಹ ಸಹಕಾರಿ ಸಂಸ್ಥೆಗಳ ದೊಡ್ಡ ಜಾಲವನ್ನು ನಿರ್ಮಿಸುತ್ತಿದೆ.

ಸಣ್ಣ ರೈತರ ಪ್ರಮುಖ ಸಮಸ್ಯೆ ಸಂಗ್ರಹಾಗಾರ ಅಥವಾ ಉಗ್ರಾಣಗಳಿಗೆ ಸಂಬಂಧಿಸಿದೆ. ಆದ್ದರಿಂದ, ನನ್ನ ಸರ್ಕಾರವು ಸಹಕಾರಿ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ಶೇಖರಣಾ (ಗೋದಾಮು) ಸಾಮರ್ಥ್ಯವನ್ನು ಸೃಷ್ಟಿಸುವ ಕೆಲಸ ಪ್ರಾರಂಭಿಸಿದೆ.

ರೈತರ ಸಣ್ಣ ವೆಚ್ಚಗಳನ್ನು ಪೂರೈಸಲು, ಪ್ರಧಾನ ಮಂತ್ರಿ-ಕಿಸಾನ್ ಸಮ್ಮಾನ್ ನಿಧಿ ಅಡಿ, 3,20,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ವಿತರಿಸಲಾಗಿದೆ.

ಹೊಸ ಅವಧಿಯ ಆರಂಭಿಕ ದಿನಗಳಲ್ಲೇ ನನ್ನ ಸರ್ಕಾರವು 20,000 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತವನ್ನು ರೈತರಿಗೆ ವರ್ಗಾಯಿಸಿದೆ(ಡಿಬಿಟಿ).

ಸರ್ಕಾರವು ಮುಂಗಾರು (ಖಾರಿಫ್) ಹಂಗಾಮಿನ ಬೆಳೆಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಯಲ್ಲಿ ದಾಖಲೆಯ ಹೆಚ್ಚಳ ಮಾಡಿದೆ.

ಗೌರವಾನ್ವಿತ ಸದಸ್ಯರೆ,

8. ಇಂದಿನ ಭಾರತವು ಪ್ರಸ್ತುತ ಅಗತ್ಯಗಳಿಗೆ ಅನುಗುಣವಾಗಿ ತನ್ನ ಕೃಷಿ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ.

ನಾವು ಹೆಚ್ಚು ಸ್ವಾವಲಂಬಿಗಳಾಗಬೇಕು ಮತ್ತು ರಫ್ತು ಹೆಚ್ಚಳದ ಮೂಲಕ ರೈತರ ಆದಾಯ ಹೆಚ್ಚಿಸಬೇಕು ಎಂಬ ಚಿಂತನೆಯಿಂದ ಕೃಷಿ ನೀತಿಗಳನ್ನು ರೂಪಿಸಲಾಗಿದೆ, ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಉದಾಹರಣೆಗೆ, ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳಿಗಾಗಿ ಇತರ ದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಸರ್ಕಾರವು ರೈತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಯಾವ ರೀತಿಯ ಆಹಾರ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಇದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಹೊಸ ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ, ಸಾವಯವ ಉತ್ಪನ್ನಗಳ ಬೇಡಿಕೆಯು ಪ್ರಪಂಚದಲ್ಲಿ ವೇಗವಾಗಿ ಹೆಚ್ಚುತ್ತಿದೆ.

ಈ ಬೇಡಿಕೆ ಪೂರೈಸಲು ಭಾರತೀಯ ರೈತರಿಗೆ ಸಾಕಷ್ಟು ಸಾಮರ್ಥ್ಯವಿದೆ.

ಆದ್ದರಿಂದ, ಸರ್ಕಾರವು ನೈಸರ್ಗಿಕ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳ ಪೂರೈಕೆ ಸರಪಳಿಯನ್ನು ಬಲಪಡಿಸುತ್ತಿದೆ.

ಈ ಪ್ರಯತ್ನಗಳಿಂದ, ಕೃಷಿ ಚಟುವಟಿಕೆಗಳಿಗೆ ರೈತರು ಮಾಡುವ ಖರ್ಚು ಕಡಿಮೆಯಾಗುತ್ತದೆ ಮತ್ತು ಅವರ ಆದಾಯವೂ ಹೆಚ್ಚಾಗುತ್ತದೆ.

ಗೌರವಾನ್ವಿತ ಸದಸ್ಯರೆ,

9. ಇಂದಿನ ಭಾರತವು ಜಗತ್ತು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸುವುದಕ್ಕಾಗಿ ಅಲ್ಲ, ಬದಲಿಗೆ ಜಗತ್ತಿಗೆ ಪರಿಹಾರಗಳನ್ನು ಒದಗಿಸುವುದಕ್ಕಾಗಿ ಹೆಸರುವಾಸಿಯಾಗಿದೆ.

ವಿಶ್ವ-ಬಂಧುವಾಗಿ, ಭಾರತವು ಅನೇಕ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ.

ಹವಾಮಾನ ಬದಲಾವಣೆಯಿಂದ ಆಹಾರ ಭದ್ರತೆ ಮತ್ತು ಪೋಷಣೆಯಿಂದ ಸುಸ್ಥಿರ ಕೃಷಿಯವರೆಗಿನ ಸಮಸ್ಯೆಗಳಿಗೆ ನಾವು ವಿವಿಧ ಪರಿಹಾರಗಳನ್ನು ಒದಗಿಸುತ್ತಿದ್ದೇವೆ.

ನಮ್ಮ ಸಿರಿಧಾನ್ಯ (ಶ್ರೀ ಅನ್ನ)ಗಳನ್ನು ಉತ್ಕೃಷ್ಟ ಆಹಾರ(ಸೂಪರ್ ಫುಡ್)ವಾಗಿ ವಿಶ್ವಾದ್ಯಂತ ಜನಪ್ರಿಯಗೊಳಿಸಲು ನಾವು ಅಭಿಯಾನ ಮುನ್ನಡೆಸುತ್ತಿದ್ದೇವೆ.

ಭಾರತದ ಉಪಕ್ರಮದಲ್ಲಿ, 2023ರ ವರ್ಷವನ್ನು ಇಡೀ ವಿಶ್ವಾದ್ಯಂತ ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವರ್ಷವಾಗಿ ಆಚರಿಸಲಾಯಿತು. ಅಂತಾರಾಷ್ಟ್ರೀಯ ಯೋಗ ದಿನವನ್ನು ಇತ್ತೀಚೆಗೆ ಜಾಗತಿಕ ಕಾರ್ಯಕ್ರಮವಾಗಿ ಆಚರಿಸಿರುವುದನ್ನು ನೀವೇ ನೋಡಿದ್ದೀರಿ.

ಭಾರತದ ಈ ಮಹಾನ್ ಪರಂಪರೆಯ ಪ್ರತಿಷ್ಠೆ ವಿಶ್ವದಲ್ಲಿ ನಿರಂತರವಾಗಿ ಹೆಚ್ಚಾಗುತ್ತಿದೆ.

ಯೋಗ ಮತ್ತು ಆಯುಷ್ ಉತ್ತೇಜಿಸುವ ಮೂಲಕ, ಭಾರತವು ಆರೋಗ್ಯಕರ ಜಗತ್ತನ್ನು ರೂಪಿಸಲು ಸಹಾಯ ಮಾಡುತ್ತಿದೆ.

ನನ್ನ ಸರ್ಕಾರವು ನವೀಕರಿಸಬಹುದಾದ ಇಂಧನ ಸಾಮರ್ಥ್ಯಗಳನ್ನು ಬಹುಪಟ್ಟು ಹೆಚ್ಚಿಸಿದೆ. ನಾವು ನಮ್ಮ ಹವಾಮಾನ ಸಂಬಂಧಿತ ಗುರಿಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಸಾಧಿಸುತ್ತಿದ್ದೇವೆ.

ನಿವ್ವಳ ಶೂನ್ಯ ಇಂಗಾಲ (ನೆಟ್ ಝೀರೋ) ಕಡೆಗೆ ನಮ್ಮ ಉಪಕ್ರಮಗಳು ಅನೇಕ ದೇಶಗಳಿಗೆ ಸ್ಫೂರ್ತಿಯಾಗಿದೆ.

ಅಂತಾರಾಷ್ಟ್ರೀಯ ಸೌರ ಒಕ್ಕೂಟದಂತಹ ನಮ್ಮ ಉಪಕ್ರಮಗಳಲ್ಲಿ ದಾಖಲೆ ಸಂಖ್ಯೆಯ ದೇಶಗಳು ನಮ್ಮೊಂದಿಗೆ ಸಂಬಂಧ ಹೊಂದಿವೆ.

ಗೌರವಾನ್ವಿತ ಸದಸ್ಯರೆ,

10. ಭವಿಷ್ಯವು ಹರಿತ್ ಯುಗ್ ಅಥವಾ ಹಸಿರು ಯುಗ(ಗ್ರೀನ್ ಎರಾ) ಆಗಲಿದೆ.

ಈ ನಿಟ್ಟಿನಲ್ಲಿ ನನ್ನ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ನಾವು ಗ್ರೀನ್ ಇಂಡಸ್ಟ್ರೀಸ್‌ನಲ್ಲಿ ಹೂಡಿಕೆಗಳನ್ನು ಹೆಚ್ಚಿಸುತ್ತಿದ್ದೇವೆ, ಇದು ಹಸಿರು ಉದ್ಯೋಗಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಅದು ಗ್ರೀನ್ ಎನರ್ಜಿ ಅಥವಾ ಗ್ರೀನ್ ಮೊಬಿಲಿಟಿ ಆಗಿರಲಿ, ನಾವು ಎಲ್ಲಾ ರಂಗಗಳಲ್ಲಿ ಮಹತ್ವಾಕಾಂಕ್ಷೆಯ ಗುರಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ.

ನಮ್ಮ ನಗರಗಳನ್ನು ವಿಶ್ವದ ಅತ್ಯುತ್ತಮ ವಾಸದ ಸ್ಥಳವನ್ನಾಗಿ ಮಾಡಲು ನನ್ನ ಸರ್ಕಾರವೂ ಬದ್ಧವಾಗಿದೆ.

ಮಾಲಿನ್ಯ ಮುಕ್ತ, ಸ್ವಚ್ಛ ಮತ್ತು ಸೌಕರ್ಯಗಳಿರುವ ನಗರಗಳಲ್ಲಿ ವಾಸಿಸುವುದು ಭಾರತೀಯ ನಾಗರಿಕರ ಹಕ್ಕಾಗಿದೆ.

ಕಳೆದ 10 ವರ್ಷಗಳಲ್ಲಿ ವಿಶೇಷವಾಗಿ ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ಅಭೂತಪೂರ್ವ ಪ್ರಮಾಣದಲ್ಲಿ ಹೂಡಿಕೆಗಳನ್ನು ಮಾಡಲಾಗಿದೆ.

ಭಾರತವು ವಿಶ್ವದ 3ನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿದೆ.

2014 ಏಪ್ರಿಲ್ ನಲ್ಲಿ ಭಾರತವು ಕೇವಲ 209 ವಿಮಾನಯಾನ ಮಾರ್ಗಗಳನ್ನು ಹೊಂದಿತ್ತು.

ಆದರೆ 2024 ಏಪ್ರಿಲ್ ವೇಳೆಗೆ ಈ ಸಂಖ್ಯೆ 605ಕ್ಕೆ ಏರಿಕೆ ಕಂಡಿದೆ.

ವಾಯುಯಾನ ಮಾರ್ಗಗಳಲ್ಲಿನ ಈ ಹೆಚ್ಚಳವು ನೇರವಾಗಿ ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಿಗೆ ನೇರ ಪ್ರಯೋಜನ ನೀಡಿದೆ.

ಕೇವಲ 10 ವರ್ಷಗಳಲ್ಲಿ ಮೆಟ್ರೋ ರೈಲು ಜಾಲವು ದೇಶದ 21 ನಗರಗಳನ್ನು ತಲುಪಿದೆ.

ವಂದೇ ಭಾರತ್, ಮೆಟ್ರೋದಂತಹ ಹಲವು ಯೋಜನೆಗಳಲ್ಲಿ ಕೆಲಸ ನಡೆಯುತ್ತಿದೆ.

ನನ್ನ ಸರ್ಕಾರವು ಭಾರತದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ವಿಶ್ವದಲ್ಲೇ ಅತ್ಯುತ್ತಮವಾಗಿಸಲು ನಿರಂತರ ಕೆಲಸ ಮಾಡುತ್ತಿದೆ.

ಗೌರವಾನ್ವಿತ ಸದಸ್ಯರೆ,

11. ನನ್ನ ಸರ್ಕಾರವು ಆ ಆಧುನಿಕ ನಿಯತಾಂಕಗಳ ಮೇಲೆ ಕೆಲಸ ಮಾಡುತ್ತಿದೆ. ಅದು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಸಮಾನವಾಗಿ ನಿಲ್ಲಲು ಅನುವು ಮಾಡಿಕೊಡುತ್ತದೆ.

ಈ ದಿಸೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಯು ಬದಲಾಗುತ್ತಿರುವ ಭಾರತದ ಹೊಸ ಮುಖವಾಗಿ ಹೊರಹೊಮ್ಮಿದೆ. ನನ್ನ ಸರ್ಕಾರವು 10 ವರ್ಷಗಳಲ್ಲಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ, 3,80,000 ಕಿಲೋಮೀಟರ್‌ಗಳಿಗಿಂತ ಹೆಚ್ಚಿನ ಹಳ್ಳಿ ರಸ್ತೆಗಳನ್ನು ನಿರ್ಮಿಸಿದೆ.

ಇಂದು, ನಾವು ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ವಿಸ್ತರಿಸುತ್ತಿರುವ ಜಾಲವನ್ನು ಹೊಂದಿದ್ದೇವೆ.

ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ವೇಗ ದುಪ್ಪಟ್ಟಾಗಿದೆ.

ಅಹಮದಾಬಾದ್ ಮತ್ತು ಮುಂಬೈ ನಡುವಿನ ಹೈ-ಸ್ಪೀಡ್ ರೈಲು ವ್ಯವಸ್ಥೆ ಅಥವಾ ಜಾಲದ ಕೆಲಸವೂ ತ್ವರಿತ ಗತಿಯಲ್ಲಿ ಪ್ರಗತಿಯಲ್ಲಿದೆ.

ದೇಶದ ಉತ್ತರ, ದಕ್ಷಿಣ ಮತ್ತು ಪೂರ್ವದಲ್ಲಿ ಬುಲೆಟ್ ರೈಲು ಕಾರಿಡಾರ್‌ಗಳ ಕಾರ್ಯಸಾಧ್ಯತೆಯ ಅಧ್ಯಯನ ನಡೆಸಲು ನನ್ನ ಸರ್ಕಾರ ನಿರ್ಧರಿಸಿದೆ.

ಮೊಟ್ಟಮೊದಲ ಬಾರಿಗೆ ಒಳನಾಡು ಜಲಮಾರ್ಗಗಳ ಕಾಮಗಾರಿ ಬೃಹತ್ ಪ್ರಮಾಣದಲ್ಲಿ ಆರಂಭವಾಗಿದೆ.

ಈ ಉಪಕ್ರಮದಿಂದ ಈಶಾನ್ಯ ಭಾಗಕ್ಕೆ ಹೆಚ್ಚಿನ ಲಾಭವಾಗಲಿದೆ.

ನನ್ನ ಸರ್ಕಾರವು ಕಳೆದ 10 ವರ್ಷಗಳಲ್ಲಿ ಈಶಾನ್ಯ ಪ್ರದೇಶದ ಅಭಿವೃದ್ಧಿಗೆ 4 ಪಟ್ಟು ಹೆಚ್ಚು ಅನುದಾನ ಹಂಚಿಕೆ ಮಾಡಿದೆ.

ಸರ್ಕಾರವು ತನ್ನ ಕಾಯಿದೆ ಪೂರ್ವ ನೀತಿ ಅಡಿ, ಈ ಪ್ರದೇಶವನ್ನು ಕಾರ್ಯತಂತ್ರದ ಹೆಬ್ಬಾಗಿಲು ಮಾಡಲು ಕೆಲಸ ಮಾಡುತ್ತಿದೆ.

ಈಶಾನ್ಯದಲ್ಲಿ ಎಲ್ಲಾ ರೀತಿಯ ಸಂಪರ್ಕವನ್ನು ವಿಸ್ತರಿಸಲಾಗುತ್ತಿದೆ. ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ಉದ್ಯೋಗ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

ಅಸ್ಸಾಂನಲ್ಲಿ 27,000 ಕೋಟಿ ರೂಪಾಯಿ ವೆಚ್ಚದಲ್ಲಿ ಸೆಮಿಕಂಡಕ್ಟರ್(ಅರೆವಾಹಕ) ಘಟಕ ಸ್ಥಾಪಿಸಲಾಗುತ್ತಿದೆ.

ಈಶಾನ್ಯವು ಮೇಡ್ ಇನ್ ಇಂಡಿಯಾ ಚಿಪ್ಸ್‌ನ ಕೇಂದ್ರವಾಗಲಿದೆ.

ಈಶಾನ್ಯದಲ್ಲಿ ಶಾಶ್ವತ ಶಾಂತಿ ನೆಲೆಸಲು ನನ್ನ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. 

ಕಳೆದ 10 ವರ್ಷಗಳಲ್ಲಿ ಹಲವು ಹಳೆಯ ವಿವಾದಗಳು ಬಗೆಹರಿದಿವೆ, ಹಲವು ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.

ಈಶಾನ್ಯ ಭಾಗದ ತೊಂದರೆಗೊಳಗಾದ ಪ್ರದೇಶಗಳಿಂದ ಸಶಸ್ತ್ರ ಪಡೆಗಳ ವಿಶೇಷ ಸಂರಕ್ಷಣಾ ಕಾಯಿದೆ(ಎಎಫ್‌ಎಸ್‌ಪಿಎ) ಹಿಂತೆಗೆದುಕೊಳ್ಳುವ ಕೆಲಸವು ಆ ಪ್ರದೇಶಗಳಲ್ಲಿ ಅಭಿವೃದ್ಧಿಯನ್ನು ವೇಗಗೊಳಿಸುವ ಮೂಲಕ ಹಂತ ಹಂತವಾಗಿ ನಡೆಯುತ್ತಿದೆ.

ದೇಶದ ಅಭಿವೃದ್ಧಿಯ ಪ್ರತಿಯೊಂದು ಅಂಶದಲ್ಲೂ ಈ ಹೊಸ ಉಪಕ್ರಮಗಳು ಭಾರತದ ಉಜ್ವಲ ಭವಿಷ್ಯವನ್ನು ಸಾರುತ್ತಿವೆ.

ಗೌರವಾನ್ವಿತ ಸದಸ್ಯರೆ,

12. ಮಹಿಳಾ ನೇತೃತ್ವದ ಅಭಿವೃದ್ಧಿಗೆ ಬದ್ಧವಾಗಿರುವ ನನ್ನ ಸರ್ಕಾರ, ಮಹಿಳಾ ಸಬಲೀಕರಣದ ಹೊಸ ಯುಗ ಪ್ರಾರಂಭಿಸಿದೆ.

ನಮ್ಮ ದೇಶದಲ್ಲಿ ಮಹಿಳೆಯರು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯಕ್ಕಾಗಿ ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದರು.

ಇಂದು ಅವರು ನಾರಿ ಶಕ್ತಿ ವಂದನ್ ಅಧಿನಿಯಮ ಜಾರಿಯಿಂದ ಸಬಲರಾಗಿದ್ದಾರೆ. ಕಳೆದ ದಶಕದಲ್ಲಿ ಸರ್ಕಾರದ ವಿವಿಧ ಯೋಜನೆಗಳು ಮಹಿಳೆಯರ ಹೆಚ್ಚಿನ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿವೆ.

ನಿಮಗೆ ತಿಳಿದಿರುವಂತೆ, ಕಳೆದ 10 ವರ್ಷಗಳಲ್ಲಿ 4 ಕೋಟಿ ಪ್ರಧಾನ ಮಂತ್ರಿ ಆವಾಸ್ ಮನೆಗಳನ್ನು ಬಹುಪಾಲು ಮಹಿಳಾ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ.

ಈಗ ನನ್ನ ಸರ್ಕಾರದ 3ನೇ ಅವಧಿಯ ಪ್ರಾರಂಭದಲ್ಲೇ 3 ಕೋಟಿ ಹೊಸ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ.

ಇದರಲ್ಲಿ ಹೆಚ್ಚಿನ ಮನೆಗಳನ್ನು ಮಹಿಳಾ ಫಲಾನುಭವಿಗಳಿಗೆ ಮಂಜೂರು ಮಾಡಲಾಗುವುದು.

ಕಳೆದ 10 ವರ್ಷಗಳಲ್ಲಿ 10 ಕೋಟಿ ಮಹಿಳೆಯರನ್ನು ಸ್ವಸಹಾಯ ಗುಂಪುಗಳಾಗಿ ಸಜ್ಜುಗೊಳಿಸಲಾಗಿದೆ.

ನನ್ನ ಸರ್ಕಾರವು 3 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿ ದೀದಿಗಳನ್ನಾಗಿ ಮಾಡಲು ಸಮಗ್ರ ಅಭಿಯಾನ ಪ್ರಾರಂಭಿಸಿದೆ.

ಇದಕ್ಕಾಗಿ ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು ಹೆಚ್ಚಿಸಲಾಗುತ್ತಿದೆ.

ಕೌಶಲ್ಯ ಮತ್ತು ಆದಾಯ ಮೂಲಗಳನ್ನು ಸುಧಾರಿಸುವುದು ಮತ್ತು ಮಹಿಳೆಯರಿಗೆ ಗೌರವ ಹೆಚ್ಚಿಸುವುದು ಸರ್ಕಾರದ ಪ್ರಯತ್ನವಾಗಿದೆ.

ನಮೋ ಡ್ರೋನ್ ದೀದಿ ಯೋಜನೆಯು ಈ ಗುರಿ ಸಾಧಿಸಲು ಕೊಡುಗೆ ನೀಡುತ್ತಿದೆ. ಈ ಯೋಜನೆಯಡಿ, ಸಾವಿರಾರು ಸ್ವಸಹಾಯ ಗುಂಪುಗಳಿಗೆ ಸೇರಿದ ಮಹಿಳೆಯರಿಗೆ ಡ್ರೋನ್‌ಗಳನ್ನು ಒದಗಿಸಲಾಗುತ್ತಿದೆ, ಅವರಿಗೆ ಡ್ರೋನ್ ಪೈಲಟ್‌ ತರಬೇತಿ ನೀಡಲಾಗುತ್ತಿದೆ.

ನನ್ನ ಸರ್ಕಾರವು ಇತ್ತೀಚೆಗೆ ಕೃಷಿ ಸಖಿ ಉಪಕ್ರಮ ಪ್ರಾರಂಭಿಸಿದೆ.

ಈ ಉಪಕ್ರಮದ ಅಡಿ, ಇಲ್ಲಿಯವರೆಗೆ ಸ್ವಸಹಾಯ ಗುಂಪುಗಳಿಗೆ ಸೇರಿದ 30 ಸಾವಿರ ಮಹಿಳೆಯರಿಗೆ ಕೃಷಿ ಸಖಿ ಪ್ರಮಾಣಪತ್ರಗಳನ್ನು ಒದಗಿಸಲಾಗಿದೆ.

ಕೃಷಿ ಸಖಿಗಳಿಗೆ ಆಧುನಿಕ ಕೃಷಿ ಪದ್ಧತಿಯಲ್ಲಿ ತರಬೇತಿ ನೀಡಲಾಗುತ್ತಿದ್ದು, ಇದರಿಂದ ಅವರು ಕೃಷಿಯನ್ನು ಮತ್ತಷ್ಟು ಆಧುನೀಕರಣಗೊಳಿಸಲು ರೈತರಿಗೆ ಸಹಾಯ ಮಾಡಬಹುದು.

ಗೌರವಾನ್ವಿತ ಸದಸ್ಯರೆ,

13. ಮಹಿಳೆಯರ ಉಳಿತಾಯ ಗರಿಷ್ಠಗೊಳಿಸುವುದು ನನ್ನ ಸರ್ಕಾರದ ಪ್ರಯತ್ನವಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆಯ ಜನಪ್ರಿಯತೆಯ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ.  

ಅದರಡಿ, ಹೆಣ್ಣು ಮಕ್ಕಳಿಗೆ ಅವರ ಬ್ಯಾಂಕ್ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರ ಒದಗಿಸಲಾಗುತ್ತಿದೆ.

ಉಚಿತ ಪಡಿತರ ಮತ್ತು ಕೈಗೆಟಕುವ ದರದಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಒದಗಿಸುವ ಯೋಜನೆಗಳಿಂದ ಮಹಿಳೆಯರು ಅಪಾರ ಪ್ರಯೋಜನ ಪಡೆಯುತ್ತಿದ್ದಾರೆ.

ಈಗ ನನ್ನ ಸರ್ಕಾರವು ವಿದ್ಯುತ್ ಬಿಲ್ ಶೂನ್ಯಕ್ಕೆ ಇಳಿಸುವ ಮತ್ತು ವಿದ್ಯುತ್ ಮಾರಾಟದ ಮೂಲಕ ಆದಾಯ ಗಳಿಸುವ ಯೋಜನೆ ತಂದಿದೆ.

ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಮನೆಗಳ ಮೇಲ್ಛಾವಣಿಯಲ್ಲಿ ಸೌರಫಲಕಗಳನ್ನು ಅಳವಡಿಸಲಾಗುತ್ತಿದೆ.

ಇದಕ್ಕಾಗಿ ನನ್ನ ಸರ್ಕಾರವು ಪ್ರತಿ ಕುಟುಂಬಕ್ಕೆ 78,000 ರೂಪಾಯಿ ತನಕ ನೆರವು ನೀಡುತ್ತಿದೆ.

ಈ ಯೋಜನೆಯಡಿ ಈಗಾಗಲೇ 1 ಕೋಟಿಗೂ ಹೆಚ್ಚು ಕುಟುಂಬಗಳು ಅತಿ ಕಡಿಮೆ ಅವಧಿಯಲ್ಲಿ ನೋಂದಣಿಯಾಗಿವೆ.

ಮೇಲ್ಛಾವಣಿ ಸೋಲಾರ್ ಅಳವಡಿಸಿದ ಮನೆಗಳ ವಿದ್ಯುತ್ ಬಿಲ್ ಶೂನ್ಯಕ್ಕೆ ಇಳಿದಿದೆ.

ಗೌರವಾನ್ವಿತ ಸದಸ್ಯರೆ,

14. ಈ ದೇಶದ ಬಡವರು, ಯುವಕರು, ಮಹಿಳೆಯರು ಮತ್ತು ರೈತರು ಸಬಲರಾದಾಗ ಮಾತ್ರ ವಿಕಸಿತ ಭಾರತ ಗುರಿ ಸಾಧಿಸಲು ಸಾಧ್ಯವಾಗುತ್ತದೆ.

ಆದ್ದರಿಂದ, ನನ್ನ ಸರ್ಕಾರದ ಯೋಜನೆಗಳಲ್ಲಿ ಈ 4 ಆಧಾರಸ್ತಂಭಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಸರ್ಕಾರದ ಪ್ರತಿಯೊಂದು ಯೋಜನೆಗಳ ಪ್ರಯೋಜನ ಅವರಿಗೆ ತಲುಪುವಂತೆ ಮಾಡುವುದು ನಮ್ಮ ಪ್ರಯತ್ನ.

ಇದು ಪರಿಪೂರ್ಣ ಅಥವಾ ಸಂತೃಪ್ತ (ಸ್ಯಾಚುರೇಶನ್) ವಿಧಾನವಾಗಿದೆ.

ಸರ್ಕಾರದ ಯೋಜನೆಗಳಿಂದ ಒಬ್ಬ ವ್ಯಕ್ತಿಯೂ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಸರ್ಕಾರ ಕೆಲಸ ಮಾಡಿದಾಗ ಎಲ್ಲರಿಗೂ ಅನುಕೂಲವಾಗುತ್ತದೆ.

ಕಳೆದ 10 ವರ್ಷಗಳಲ್ಲಿ 25 ಕೋಟಿ ಭಾರತೀಯರನ್ನು ಬಡತನದಿಂದ ಹೊರತರಲು ಸರ್ಕಾರದ ಯೋಜನೆಗಳನ್ನು ಪರಿಪೂರ್ಣ ವಿಧಾನದೊಂದಿಗೆ ಅನುಷ್ಠಾನಗೊಳಿಸಲಾಗಿದೆ.

ಇದು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು ಮತ್ತು ಎಲ್ಲಾ ಇತರ ಸಾಮಾಜಿಕ ಮತ್ತು ಪ್ರಾದೇಶಿಕ ಗುಂಪುಗಳ ಕುಟುಂಬಗಳನ್ನು ಒಳಗೊಂಡಿದೆ.

ಕಳೆದ 10 ವರ್ಷಗಳಲ್ಲಿ, ಕೊನೆಯ ಮೈಲಿ ಅಥವಾ ಅನಂತ ದೂರದ ಸೌಲಭ್ಯವಂಚಿತರಿಗೆ ಸವಲತ್ತು ವಿತರಣೆಯ ಮೇಲೆ ಗಮನ ಕೇಂದ್ರೀಕರಿಸಿರುವುದರಿಂದ ಈ ವರ್ಗಗಳ ಜೀವನ ಮಟ್ಟವನ್ನು ಬದಲಾಯಿಸಿದೆ.

ವಿಶೇಷವಾಗಿ ಬುಡಕಟ್ಟು ಸಮುದಾಯಗಳಲ್ಲಿ ಬದಲಾವಣೆ ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತದೆ.

24,000 ಕೋಟಿ ರೂಪಾಯಿಗಿಂತ ಹೆಚ್ಚಿನ ಅನುದಾನ ಹೊಂದಿರುವ ಪಿಎಂ ಜನ್ಮನ್‌ನಂತಹ ಯೋಜನೆಯು ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಯ ಸಾಧನವಾಗಿದೆ ಎಂಬುದು ಸಾಬೀತಾಗಿದೆ.

ಜೀವನೋಪಾಯದ ಅವಕಾಶಗಳನ್ನು ಲಭ್ಯವಾಗುವಂತೆ ಮಾಡಲು ಸರ್ಕಾರವು ಪಿಎಂ-ಸೂರಜ್ ಪೋರ್ಟಲ್ ಮೂಲಕ ಹಿಂದುಳಿದ ಗುಂಪುಗಳಿಗೆ ಸುಲಭ ಸಾಲ ಸೌಲಭ್ಯ ಒದಗಿಸುತ್ತಿದೆ.

ನನ್ನ ಸರ್ಕಾರವು ದಿವ್ಯಾಂಗ ಸಹೋದರರು ಮತ್ತು ಸಹೋದರಿಯರಿಗಾಗಿ ಕೈಗೆಟುಕುವ ಸ್ಥಳೀಯ ಸಹಾಯಕ ಸಾಧನಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಪ್ರಧಾನಮಂತ್ರಿ ದಿವ್ಯಶಾ ಕೇಂದ್ರಗಳನ್ನು ದೇಶದ ಎಲ್ಲಾ ಭಾಗಗಳಿಗೂ ವಿಸ್ತರಿಸಲಾಗುತ್ತಿದೆ.

ವಂಚಿತರಿಗೆ ಸೇವೆ ಸಲ್ಲಿಸುವ ಈ ಬದ್ಧತೆ ನಿಜವಾದ ಸಾಮಾಜಿಕ ನ್ಯಾಯವಾಗಿದೆ.

ಗೌರವಾನ್ವಿತ ಸದಸ್ಯರೆ,

15. ದೇಶದ ಕಾರ್ಮಿಕ ಬಲದ ಗೌರವದ ಸಂಕೇತವಾಗಿ, ಕಾರ್ಮಿಕರ ಕಲ್ಯಾಣ ಮತ್ತು ಸಬಲೀಕರಣವು ನನ್ನ ಸರ್ಕಾರದ ಆದ್ಯತೆಯಾಗಿದೆ.

ನನ್ನ ಸರ್ಕಾರವು ಕಾರ್ಮಿಕರ ಎಲ್ಲಾ ಸಾಮಾಜಿಕ ಭದ್ರತಾ ಯೋಜನೆಗಳನ್ನು ಸಂಯೋಜಿಸುತ್ತಿದೆ.

ಡಿಜಿಟಲ್ ಇಂಡಿಯಾ ಮತ್ತು ಅಂಚೆ ಕಚೇರಿ ಜಾಲಗಳನ್ನು ಬಳಸಿಕೊಳ್ಳುವ ಮೂಲಕ ಅಪಘಾತ ಮತ್ತು ಜೀವ ವಿಮೆಯ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತಿದೆ.

ಪಿಎಂ ಸ್ವನಿಧಿಯ ವ್ಯಾಪ್ತಿ ವಿಸ್ತರಿಸಲಾಗುವುದು, ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿನ ಬೀದಿ ವ್ಯಾಪಾರಿಗಳನ್ನು ಸಹ ಅದರ ವ್ಯಾಪ್ತಿಗೆ ತರಲಾಗುವುದು.

ಗೌರವಾನ್ವಿತ ಸದಸ್ಯರೆ,

16. ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು ಯಾವುದೇ ಸಮಾಜದ ಪ್ರಗತಿಯು ಸಮಾಜದ ಕೆಳಸ್ತರದ ಪ್ರಗತಿಯ ಮೇಲೆ ಅವಲಂಬಿತವಾಗಿದೆ ಎಂದು ನಂಬಿದ್ದರು.

ಬಡವರ ಸಬಲೀಕರಣವು ಕಳೆದ 10 ವರ್ಷಗಳಲ್ಲಿ ರಾಷ್ಟ್ರದ ಸಾಧನೆಗಳು ಮತ್ತು ಪ್ರಗತಿಯ ಅಡಿಪಾಯವಾಗಿದೆ.

ಮೊದಲ ಬಾರಿಗೆ ನನ್ನ ಸರ್ಕಾರವು “ಬಡವರ ಸೇವೆಯಲ್ಲಿ ಸರ್ಕಾರವಿದೆ” ಎಂಬುದನ್ನು ಅರಿತುಕೊಂಡಿದೆ.

ಕೊರೊನಾ ಸಾಂಕ್ರಾಮಿಕ ಸಂಕಷ್ಟ ಸಮಯದಲ್ಲಿ, ಸರ್ಕಾರವು 80 ಕೋಟಿ ಜನರಿಗೆ ಉಚಿತ ಪಡಿತರ ಒದಗಿಸಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಪ್ರಾರಂಭಿಸಿತು.

ಬಡತನದಿಂದ ಹೊರಬಂದ ಕುಟುಂಬಗಳು ಮತ್ತೆ ಬಡತನಕ್ಕೆ ಜಾರದಂತೆ ಈ ಯೋಜನೆಯ ಲಾಭ ನೀಡಲಾಗುತ್ತಿದೆ.

ಸ್ವಚ್ಛ ಭಾರತ್ ಮಿಷನ್ ಬಡವರ ಘನತೆ ಮತ್ತು ಅವರ ಆರೋಗ್ಯವನ್ನು ರಾಷ್ಟ್ರೀಯ ಮಹತ್ವದ ವಿಷಯವನ್ನಾಗಿ ಮಾಡಿದೆ.

ದೇಶದ ಕೋಟ್ಯಂತರ ಬಡವರಿಗೆ ಮೊದಲ ಬಾರಿಗೆ ಶೌಚಾಲಯ ನಿರ್ಮಿಸಲಾಗಿದೆ.

ಈ ಪ್ರಯತ್ನಗಳಿಂದ ಇಂದು ರಾಷ್ಟ್ರವು ಮಹಾತ್ಮ ಗಾಂಧಿಯವರ ಆದರ್ಶಗಳನ್ನು ನಿಜವಾದ ಮನೋಭಾವದಲ್ಲಿ ಅನುಸರಿಸುತ್ತಿದೆ ಎಂಬ ವಿಶ್ವಾಸ ನೀಡುತ್ತಿದೆ.

ನನ್ನ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯಡಿ 55 ಕೋಟಿ ಫಲಾನುಭವಿಗಳಿಗೆ ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ.

ದೇಶದಲ್ಲಿ 25,000 ಜನೌಷಧಿ ಕೇಂದ್ರಗಳ ತೆರೆಯುವಿಕೆಯೂ ತ್ವರಿತ ಗತಿಯಲ್ಲಿ ಸಾಗುತ್ತಿದೆ.

 ಈ ನಿಟ್ಟಿನಲ್ಲಿ ಸರ್ಕಾರ ಮತ್ತೊಂದು ನಿರ್ಧಾರ ಕೈಗೊಳ್ಳಲಿದೆ.

ಈಗ 70 ವರ್ಷ ಮೇಲ್ಪಟ್ಟ ಎಲ್ಲಾ ವೃದ್ಧರೂ ಆಯುಷ್ಮಾನ್ ಭಾರತ್ ಯೋಜನೆ ಅಡಿ, ಉಚಿತ ಚಿಕಿತ್ಸೆಯ ಪ್ರಯೋಜನ ಪಡೆಯುತ್ತಾರೆ.

ಗೌರವಾನ್ವಿತ ಸದಸ್ಯರೆ,

17. ಆಗಾಗ್ಗೆ ವಿರೋಧಿ ಮನಸ್ಥಿತಿ ಮತ್ತು ಸಂಕುಚಿತ ಸ್ವಾರ್ಥದಿಂದಾಗಿ, ಪ್ರಜಾಪ್ರಭುತ್ವದ ಮೂಲ ಮನೋಭಾವವು ಬಹಳವಾಗಿ ದುರ್ಬಲಗೊಂಡಿದೆ.

ಇದು ಸಂಸದೀಯ ವ್ಯವಸ್ಥೆ ಹಾಗೂ ರಾಷ್ಟ್ರದ ಅಭಿವೃದ್ಧಿ ಪಯಣದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಹಲವಾರು ದಶಕಗಳ ಕಾಲ ದೇಶದಲ್ಲಿ ಅಸ್ಥಿರ ಸರ್ಕಾರಗಳ ಅವಧಿಯಲ್ಲಿ, ಅನೇಕ ಸರ್ಕಾರಗಳು ಸಿದ್ಧವಿದ್ದರೂ ಸಹ, ಸುಧಾರಣೆಗಳನ್ನು ತರಲು ಅಥವಾ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.

ಭಾರತದ ಜನರು ಈಗ ತಮ್ಮ ನಿರ್ಣಾಯಕ ಜನಾದೇಶದಿಂದ ಈ ಪರಿಸ್ಥಿತಿ ಬದಲಾಯಿಸಿದ್ದಾರೆ.

ಕಳೆದ 10 ವರ್ಷಗಳಲ್ಲಿ ಇಂತಹ ಅನೇಕ ಸುಧಾರಣೆಗಳು ನಡೆದಿವೆ, ಅದು ಇಂದು ರಾಷ್ಟ್ರಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಈ ಸುಧಾರಣೆಗಳನ್ನು ಕೈಗೆತ್ತಿಕೊಂಡಾಗಲೂ, ಪ್ರತಿಪಕ್ಷಗಳು ವಿರೋಧಿಸಿದರು, ನಕಾರಾತ್ಮಕತೆ ಹರಡಲು ಪ್ರಯತ್ನಿಸಿದರು.

ಆದರೆ ಈ ಎಲ್ಲಾ ಸುಧಾರಣೆಗಳು ಸಮಯದ ಪರೀಕ್ಷೆಯಾಗಿ ನಿಂತಿವೆ. 10 ವರ್ಷಗಳ ಹಿಂದೆ, ಭಾರತದ ಬ್ಯಾಂಕಿಂಗ್ ಕ್ಷೇತ್ರವನ್ನು ಕುಸಿಯದಂತೆ ಉಳಿಸಲು, ಸರ್ಕಾರವು ಬ್ಯಾಂಕಿಂಗ್ ಸುಧಾರಣೆಗಳನ್ನು ತಂದಿತು ಮತ್ತು ಐಬಿಸಿಯಂತಹ ಕಾನೂನುಗಳನ್ನು ಮಾಡಿತು.

ಇಂದು ಈ ಸುಧಾರಣೆಗಳು ಭಾರತದ ಬ್ಯಾಂಕಿಂಗ್ ಕ್ಷೇತ್ರವನ್ನು ವಿಶ್ವದ ಪ್ರಬಲ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಒಂದನ್ನಾಗಿ ಮಾಡಿದೆ.

ನಮ್ಮ ಸಾರ್ವಜನಿಕ ವಲಯದ ಬ್ಯಾಂಕುಗಳು ಇಂದು ಸದೃಢ ಮತ್ತು ಲಾಭದಾಯಕವಾಗಿವೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಲಾಭವು 2023-24ರಲ್ಲಿ 1.4 ಲಕ್ಷ ಕೋಟಿ ರೂಪಾಯಿ ದಾಟಿದೆ, ಇದು ಕಳೆದ ವರ್ಷಕ್ಕಿಂತ 35% ಹೆಚ್ಚಾಗಿದೆ. ನಮ್ಮ ಬ್ಯಾಂಕ್‌ಗಳ ಸಾಮರ್ಥ್ಯವು ಅವರ ಸಾಲದ ಮೂಲ ವಿಸ್ತರಿಸಲು ಮತ್ತು ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲು ಅನುವು ಮಾಡಿಕೊಡುತ್ತಿದೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಪ್ರಮಾಣ(ಎನ್‌ಪಿಎ) ನಿರಂತರವಾಗಿ ಕಡಿಮೆಯಾಗುತ್ತಿವೆ.

ಇಂದು ಎಸ್‌ಬಿಐ ದಾಖಲೆಯ ಲಾಭ ಗಳಿಸುತ್ತಿದೆ.

ಇಂದು ಎಲ್‌ಐಸಿ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ.

ಇಂದು ಎಚ್ಎಎಲ್ ದೇಶದ ರಕ್ಷಣಾ ಉದ್ಯಮಕ್ಕೂ ಬಲ ನೀಡುತ್ತಿದೆ.

ಇಂದು ಜಿ.ಎಸ್‌.ಟಿ ಭಾರತದ ಆರ್ಥಿಕತೆಯನ್ನು ಔಪಚಾರಿಕಗೊಳಿಸುವ ಮಾಧ್ಯಮವಾಗಿದ್ದು, ವ್ಯಾಪಾರ ಮತ್ತು ವ್ಯಾಪಾರವನ್ನು ಮೊದಲಿಗಿಂತ ಸುಲಭಗೊಳಿಸಲು ಸಹಾಯ ಮಾಡುತ್ತಿದೆ.

ಮೊದಲ ಬಾರಿಗೆ, ಏಪ್ರಿಲ್ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹ 2 ಲಕ್ಷ ಕೋಟಿ ರೂಪಾಯಿ ದಾಟಿದೆ.

ಇದರಿಂದ ರಾಜ್ಯಗಳು ಆರ್ಥಿಕವಾಗಿಯೂ ಬಲಗೊಂಡಿವೆ.

ಇಂದು ಇಡೀ ಜಗತ್ತು ಡಿಜಿಟಲ್ ಇಂಡಿಯಾ ಮತ್ತು ಡಿಜಿಟಲ್ ಪಾವತಿಗಳ ಬಗ್ಗೆ ಉತ್ಸುಕವಾಗಿದೆ.

ಗೌರವಾನ್ವಿತ ಸದಸ್ಯರೆ,

18. ಬಲಿಷ್ಠ ಭಾರತಕ್ಕೆ ನಮ್ಮ ಸಶಸ್ತ್ರ ಪಡೆಗಳ ಆಧುನೀಕರಣ ಅತ್ಯಗತ್ಯ.

 ನಮ್ಮ ಸಶಸ್ತ್ರ ಪಡೆಗಳಲ್ಲಿನ ಸುಧಾರಣೆಗಳು ನಿರಂತರ ಪ್ರಕ್ರಿಯೆಯಾಗಿರಬೇಕು.

ಇದರಿಂದ ನಮ್ಮ ಪಡೆಗಳು ಯುದ್ಧ ಸಮಯದಲ್ಲಿ ತಮ್ಮ ಪ್ರಾಬಲ್ಯ ಕಾಪಾಡಿಕೊಳ್ಳುತ್ತವೆ.

ಇದರಿಂದ ಮಾರ್ಗದರ್ಶನ ಪಡೆದ ನನ್ನ ಸರ್ಕಾರ ಕಳೆದ 10 ವರ್ಷಗಳಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ತಂದಿದೆ.

ಸಿಡಿಎಸ್‌ನಂತಹ ಸುಧಾರಣೆಗಳು ನಮ್ಮ ರಕ್ಷಣಾ ಪಡೆಗಳಿಗೆ ಹೊಸ ಬಲ ನೀಡಿವೆ.

ರಕ್ಷಣಾ ಕ್ಷೇತ್ರವನ್ನು ಸ್ವಾವಲಂಬಿಯಾಗಿಸಲು ನನ್ನ ಸರ್ಕಾರ ಹಲವು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ.

ಶಸ್ತ್ರಾಸ್ತ್ರ ಕಾರ್ಖಾನೆಗಳಲ್ಲಿನ ಸುಧಾರಣೆಗಳಿಂದ ರಕ್ಷಣಾ ವಲಯವು ಹೆಚ್ಚು ಪ್ರಯೋಜನ ಪಡೆದಿದೆ.

40ಕ್ಕೂ ಹೆಚ್ಚು ಶಸ್ತ್ರಕೋಠಿ(ಆರ್ಡನೆನ್ಸ್) ಕಾರ್ಖಾನೆಗಳನ್ನು 7 ರಕ್ಷಣಾ ವಲಯದ ಉದ್ಯಮಗಳಾಗಿ ಪುನಾರಚಿಸಲಾಗಿದೆ, ಇದರ ಪರಿಣಾಮವಾಗಿ ಅವುಗಳ ಸಾಮರ್ಥ್ಯ ಮತ್ತು ದಕ್ಷತೆಯ ಸುಧಾರಣೆಯಾಗಿದೆ.

ಇಂತಹ ಸುಧಾರಣೆಗಳಿಂದಾಗಿ ಭಾರತ ಈಗ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ರಕ್ಷಣಾ ಸಾಧನ ಸಲಕರಣೆಗಳನ್ನು ತಯಾರಿಸುತ್ತಿದೆ.

ಕಳೆದ ದಶಕದಲ್ಲಿ ನಮ್ಮ ರಕ್ಷಣಾ ರಫ್ತು 18 ಪಟ್ಟು ಹೆಚ್ಚಾಗಿದ್ದು 21,000 ಕೋಟಿ ರೂಪಾಯಿಗೆ ತಲುಪಿದೆ.

ಫಿಲಿಪ್ಪೀನ್ಸ್ ಜತೆಗಿನ ಬ್ರಹ್ಮೋಸ್ ಕ್ಷಿಪಣಿ ರಕ್ಷಣಾ ಒಪ್ಪಂದವು ರಕ್ಷಣಾ ರಫ್ತು ವಲಯದಲ್ಲಿ ಭಾರತದ ಸ್ಥಾನವನ್ನು ಬಲಪಡಿಸಿದೆ.

ಯುವಕರು ಮತ್ತು ಅವರ ಸ್ಟಾರ್ಟಪ್‌ಗಳಿಗೆ ಉತ್ತೇಜನ ನೀಡುವ ಮೂಲಕ ಸರ್ಕಾರವು ಸ್ವಾವಲಂಬಿ ರಕ್ಷಣಾ ಕ್ಷೇತ್ರಕ್ಕೆ ಬಲವಾದ ಅಡಿಪಾಯ ಹಾಕಲು ಸಮರ್ಥವಾಗಿದೆ.

ನನ್ನ ಸರ್ಕಾರವು ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ 2 ರಕ್ಷಣಾ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಕಳೆದ ವರ್ಷ ರಕ್ಷಣಾ ಪಡೆಗಳ ಒಟ್ಟು ಸಂಗ್ರಹಣೆಯಲ್ಲಿ ಸುಮಾರು 70 ಪ್ರತಿಶತವನ್ನು ಭಾರತೀಯ ತಯಾರಕರು ಅಥವಾ ಉತ್ಪಾದಕರಿಂದಲೇ ಪಡೆಯಲಾಗಿದೆ ಎಂಬುದು ನಮಗೆಲ್ಲರಿಗೂ ಸಂತೋಷದ ವಿಷಯವಾಗಿದೆ.

ನಮ್ಮ ರಕ್ಷಣಾ ಪಡೆಗಳು 500ಕ್ಕೂ ಹೆಚ್ಚು ರಕ್ಷಣಾ ವಸ್ತುಗಳನ್ನು ಆಮದು ಮಾಡಿಕೊಳ್ಳದಿರಲು ನಿರ್ಧರಿಸಿವೆ.

ಈ ಎಲ್ಲಾ ಶಸ್ತ್ರಾಸ್ತ್ರಗಳು ಮತ್ತು ರಕ್ಷಣಾ ಸಂಬಂಧಿತ ಉಪಕರಣಗಳನ್ನು ಭಾರತೀಯ ಕಂಪನಿಗಳಿಂದ ಮಾತ್ರ ಖರೀದಿಸಲಾಗುತ್ತಿದೆ.

ಸಶಸ್ತ್ರ ಪಡೆಗಳಲ್ಲಿನ ಸಿಬ್ಬಂದಿ ಅಗತ್ಯಗಳಿಗೆ ನನ್ನ ಸರ್ಕಾರ ಯಾವಾಗಲೂ ಆದ್ಯತೆ ನೀಡಿದೆ.

ಅದಕ್ಕಾಗಿಯೇ 4 ದಶಕಗಳ ನಂತರ “ಒಂದು ಶ್ರೇಣಿ ಒಂದು ಪಿಂಚಣಿ” ಜಾರಿಗೆ ಬಂದಿದೆ.

ಇದರಡಿ, ಇಲ್ಲಿಯವರೆಗೆ 1,20,000 ಕೋಟಿ ರೂಪಾಯಿ ವಿತರಿಸಲಾಗಿದೆ.

ನಮ್ಮ ಹುತಾತ್ಮರ ಗೌರವಾರ್ಥ, ಸರ್ಕಾರವು ಕರ್ತವ್ಯ ಪಥದ ಒಂದು ತುದಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕ ಸ್ಥಾಪಿಸಿದೆ.

ಈ ಎಲ್ಲಾ ಪ್ರಯತ್ನಗಳು ನಮ್ಮ ಕೆಚ್ಚೆದೆಯ ಸೈನಿಕರಿಗೆ ಕೃತಜ್ಞರಾಗಿರುವ ರಾಷ್ಟ್ರದ ವಂದನೆಗಳನ್ನು ಸಲ್ಲಿಸುವುದು ಮಾತ್ರವಲ್ಲದೆ, ನೇಷನ್ ಫಸ್ಟ್ ಎಂಬ ಆದರ್ಶಕ್ಕೆ ನಿರಂತರ ಸ್ಫೂರ್ತಿಯ ಮೂಲವಾಗಿದೆ.

ಗೌರವಾನ್ವಿತ ಸದಸ್ಯರೆ,

19. ಈ ದೇಶದ ಯುವಕರು ದೊಡ್ಡ ಕನಸುಗಳನ್ನು ಕಾಣಲು ಮತ್ತು ಆ ಕನಸುಗಳನ್ನು ನನಸಾಗಿಸಲು ಅನುವು ಮಾಡಿಕೊಡುವ ವಾತಾವರಣ ನಿರ್ಮಿಸುವಲ್ಲಿ ನನ್ನ ಸರ್ಕಾರ ಸಂಪೂರ್ಣ ತೊಡಗಿಸಿಕೊಂಡಿದೆ.

ಕಳೆದ 10 ವರ್ಷಗಳಲ್ಲಿ ನಮ್ಮ ಯುವಕರಿಗೆ ತೊಂದರೆ ಉಂಟುಮಾಡುತ್ತಿದ್ದ ಪ್ರತಿಯೊಂದು ಅಡೆತಡೆಗಳನ್ನು ತೆಗೆದುಹಾಕಲಾಗಿದೆ.

ಈ ಹಿಂದೆ ಯುವಕರು ತಮ್ಮ ಪ್ರಮಾಣಪತ್ರಗಳನ್ನು ದೃಢೀಕರಿಸಲು ಹರಸಾಹಸ ಪಡಬೇಕಾಗಿತ್ತು. ಈಗ ಅವರ ಸ್ವಯಂ ದೃಢೀಕರಣ ಸಾಕು.

ಕೇಂದ್ರ ಸರ್ಕಾರದ ಗ್ರೂಪ್-ಸಿ ಮತ್ತು ಗ್ರೂಪ್-ಡಿ ಹುದ್ದೆಗಳಿಗೆ ನೇಮಕಾತಿಗಾಗಿ ಸಂದರ್ಶನಗಳನ್ನು ರದ್ದುಗೊಳಿಸಲಾಗಿದೆ.

ಈ ಹಿಂದೆ ಭಾರತೀಯ ಭಾಷೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಅನ್ಯಾಯದ ಪರಿಸ್ಥಿತಿ ಎದುರಿಸುತ್ತಿದ್ದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಿಂದ, ನನ್ನ ಸರ್ಕಾರವು ಈ ಅನ್ಯಾಯವನ್ನು ತೆಗೆದುಹಾಕಲು ಸಾಧ್ಯವಾಗಿದೆ.

ಈಗ ವಿದ್ಯಾರ್ಥಿಗಳು ಭಾರತೀಯ ಯಾವುದೇ ಭಾಷೆಗಳಲ್ಲಿ ಅಥವಾ ಮಾತೃಭಾಷೆಯಲ್ಲೇ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ತೆಗೆದುಕೊಳ್ಳಬಹುದು.

ಕಳೆದ 10 ವರ್ಷಗಳಲ್ಲಿ 7 ಹೊಸ ಐಐಟಿಗಳು, 16 ಐಐಐಟಿಗಳು, 7 ಐಐಎಂಗಳು, 15 ಹೊಸ ಎಐಐಎಂಎಸ್(ಏಮ್ಸ್), 315 ವೈದ್ಯಕೀಯ ಕಾಲೇಜುಗಳು ಮತ್ತು 390 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ.

ಈ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸುವುದು ಮತ್ತು ಅಗತ್ಯಕ್ಕೆ ಅನುಗುಣವಾಗಿ ಅವುಗಳ ಸಂಖ್ಯೆಯನ್ನು ಹೆಚ್ಚಿಸುವುದು ಸರ್ಕಾರದ ಪ್ರಯತ್ನವಾಗಿದೆ.

ಡಿಜಿಟಲ್ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಸರ್ಕಾರ ಶ್ರಮಿಸುತ್ತಿದೆ.

ಅಟಲ್ ಟಿಂಕರಿಂಗ್ ಲ್ಯಾಬ್ಸ್, ಸ್ಟಾರ್ಟಪ್ ಇಂಡಿಯಾ ಮತ್ತು ಸ್ಟ್ಯಾಂಡಪ್ ಇಂಡಿಯಾದಂತಹ ಕಾರ್ಯಕ್ರಮಗಳು ದೇಶದ ಯುವಕರ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡಿದೆ.

ಈ ಎಲ್ಲಾ ಪ್ರಯತ್ನಗಳಿಂದಾಗಿ ಇಂದು ಭಾರತವು ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ಹೊಂದಿರುವ ವ್ಯವಸ್ಥೆಯಾಗಿದೆ.

ಗೌರವಾನ್ವಿತ ಸದಸ್ಯರೆ,

20. ದೇಶದ ಯುವಕರು ತಮ್ಮ ಪ್ರತಿಭೆ ಪ್ರದರ್ಶಿಸಲು ಸರಿಯಾದ ಅವಕಾಶಗಳನ್ನು ಒದಗಿಸುವುದು ಸರ್ಕಾರದ ನಿರಂತರ ಪ್ರಯತ್ನವಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಾಗಲಿ ಅಥವಾ ಸರ್ಕಾರಿ ನೇಮಕಾತಿಯಾಗಲಿ ಯಾವುದೇ ಅಡೆತಡೆಗಳಿಗೆ ಕಾರಣವಾಗಬಾರದು.

ಈ ಪ್ರಕ್ರಿಯೆಗೆ ಸಂಪೂರ್ಣ ಪಾರದರ್ಶಕತೆ ಮತ್ತು ಮುಕ್ತತೆ ಅಗತ್ಯವಿರುತ್ತದೆ.

ಇತ್ತೀಚಿನ ಕೆಲವು ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರಕರಣಗಳ ಬಗ್ಗೆ, ನನ್ನ ಸರ್ಕಾರವು ನ್ಯಾಯಯುತ ತನಿಖೆಗೆ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ.

ಈ ಹಿಂದೆಯೂ ವಿವಿಧ ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಹಲವು ನಿದರ್ಶನಗಳನ್ನು ನಾವು ನೋಡಿದ್ದೇವೆ.

ನಾವು ಪಕ್ಷ-ರಾಜಕೀಯ ದಾಟಿ ರಾಷ್ಟ್ರವ್ಯಾಪಿ ಸಂಕೀರ್ಣ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯವಾಗಿದೆ.

ಪರೀಕ್ಷಾ ಅನ್ಯಾಯ ವಿಧಾನಗಳ ವಿರುದ್ಧ ಸಂಸತ್ತು ಕಠಿಣ ಕಾನೂನು ಜಾರಿಗೊಳಿಸಿದೆ.

ಪರೀಕ್ಷೆಗೆ ಸಂಬಂಧಿಸಿದ ಸಂಸ್ಥೆಗಳು, ಅವುಗಳ ಕಾರ್ಯವೈಖರಿ ಮತ್ತು ಪರೀಕ್ಷಾ ಪ್ರಕ್ರಿಯೆಯ ಎಲ್ಲಾ ಅಂಶಗಳಲ್ಲಿ ಪ್ರಮುಖ ಸುಧಾರಣೆಗಳನ್ನು ಮಾಡಲು ನನ್ನ ಸರ್ಕಾರವು ಕಾರ್ಯ ನಿರ್ವಹಿಸುತ್ತಿದೆ.

ಗೌರವಾನ್ವಿತ ಸದಸ್ಯರೆ,

21. ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಭಾಗವಹಿಸುವಿಕೆಯನ್ನು ಮತ್ತಷ್ಟು ಹೆಚ್ಚಿಸಲು, ನನ್ನ ಸರ್ಕಾರವು 'ಮೇರಾ ಯುವ ಭಾರತ್ (ಮೈ ಭಾರತ್)' ಅಭಿಯಾನ ಪ್ರಾರಂಭಿಸಿದೆ.

ಇಲ್ಲಿಯವರೆಗೆ 1.5 ಕೋಟಿಗೂ ಹೆಚ್ಚು ಯುವಕರು ಇದರಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಉಪಕ್ರಮವು ಯುವಜನರಲ್ಲಿ ನಾಯಕತ್ವ ಕೌಶಲ್ಯ ಮತ್ತು ಸೇವಾ ಮನೋಭಾವ ಬಿತ್ತುತ್ತದೆ.

ಇಂದು ನಮ್ಮ ಯುವಕರು ಕ್ರೀಡೆಯಲ್ಲೂ ಮುಂದುವರಿಯಲು ಹೊಸ ಅವಕಾಶಗಳನ್ನು ಪಡೆಯುತ್ತಿದ್ದಾರೆ.

ನನ್ನ ಸರ್ಕಾರದ ಪರಿಣಾಮಕಾರಿ ಪ್ರಯತ್ನಗಳಿಂದಾಗಿ ಭಾರತದ ಯುವ ಆಟಗಾರರು ಜಾಗತಿಕ ವೇದಿಕೆಗಳಲ್ಲಿ ದಾಖಲೆ ಸಂಖ್ಯೆಯ ಪದಕಗಳನ್ನು ಗೆಲ್ಲುತ್ತಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಸಹ ಆರಂಭವಾಗಲಿದೆ.

ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಅಥ್ಲೀಟ್ ಬಗ್ಗೆ ನಮಗೆ ಹೆಮ್ಮೆ ಇದೆ. ಅವರಿಗೆ ನನ್ನ ಶುಭ ಹಾರೈಕೆಗಳನ್ನು ತಿಳಿಸುತ್ತೇನೆ.

ಈ ಸಾಧನೆಗಳನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​ಕೂಡ 2036ರ ಒಲಿಂಪಿಕ್ ಕ್ರೀಡಾಕೂಟ ಆಯೋಜಿಸಲು ಈಗಿನಿಂದಲೇ ಸಿದ್ಧತೆ ನಡೆಸಿದೆ.

ಗೌರವಾನ್ವಿತ ಸದಸ್ಯರೆ,

22. ಭಾರತೀಯ ನ್ಯಾಯ ಸಂಹಿತೆ ಜುಲೈ 1ರಿಂದ ದೇಶದಲ್ಲಿ ಜಾರಿಗೆ ಬರಲಿದೆ.

ಬ್ರಿಟಿಷರ ಕಾಲದಲ್ಲಿ ಪ್ರಜೆಗಳನ್ನು ಶಿಕ್ಷಿಸುವ ಮನಸ್ಥಿತಿಯ ಕಾಯಿದೆ ಇತ್ತು.

ದುರದೃಷ್ಟವಶಾತ್, ವಸಾಹತುಶಾಹಿ ಯುಗದ ಅದೇ ದಂಡ ವ್ಯವಸ್ಥೆಯು ಸ್ವಾತಂತ್ರ್ಯಾ ನಂತರ ಹಲವು ದಶಕಗಳವರೆಗೆ ಮುಂದುವರೆಯಿತು.

ಇದನ್ನು ಬದಲಾಯಿಸುವ ಆಲೋಚನೆ ಬಗ್ಗೆ ಹಲವು ದಶಕಗಳಿಂದ ಹೆಚ್ಚು ಮಾತುಕತೆ ನಡೆಯಿತು.

ಆದರೆ ಅದನ್ನು ಮಾಡಲು ಧೈರ್ಯ ತೋರಿಸಿದ್ದು ನನ್ನ ಸರ್ಕಾರ ಮಾತ್ರ.

ಈಗ ಶಿಕ್ಷೆಗಿಂತ ನ್ಯಾಯಕ್ಕೆ ಆದ್ಯತೆ ಸಿಗುತ್ತದೆ, ಅದು ನಮ್ಮ ಸಂವಿಧಾನದ ಆಶಯಕ್ಕೂ ಅನುಗುಣವಾಗಿದೆ.

ಈ ಹೊಸ ಕಾನೂನುಗಳು ನ್ಯಾಯಾಂಗ ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆ. ಇಂದು ದೇಶವು ವಿವಿಧ ಆಯಾಮಗಳಲ್ಲಿ ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತವಾಗುತ್ತಿರುವಾಗ, ಆ ದಿಕ್ಕಿನಲ್ಲಿ ಇದು ಒಂದು ದಿಟ್ಟ ಹೆಜ್ಜೆಯಾಗಿದೆ.

ಇದು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಸಲ್ಲಿಸುವ ನಿಜವಾದ ಗೌರವವೂ ಹೌದು.

ನನ್ನ ಸರ್ಕಾರವು ಪೌರತ್ವ ತಿದ್ದುಪಡಿ ಕಾಯಿದೆ(ಸಿಎ) ಅಡಿ, ನಿರಾಶ್ರಿತರಿಗೆ ಪೌರತ್ವ ನೀಡಲು ಪ್ರಾರಂಭಿಸಿದೆ.

ದೇಶ ವಿಭಜನೆಯಿಂದಾಗಿ ನೊಂದ ಅನೇಕ ಕುಟುಂಬಗಳಿಗೆ ಗೌರವಯುತವಾದ ಜೀವನವನ್ನು ಇದು ಖಾತ್ರಿಪಡಿಸಿದೆ.

ಸಿಎಎ ಅಡಿ, ಪೌರತ್ವ ಪಡೆದ ಕುಟುಂಬಗಳಿಗೆ ಉಜ್ವಲ ಭವಿಷ್ಯ ಸಿಗಲಿ ಎಂದು ನಾನು ಬಯಸುತ್ತೇನೆ.

ಗೌರವಾನ್ವಿತ ಸದಸ್ಯರೆ,

23. ಭವಿಷ್ಯವನ್ನು ನಿರ್ಮಿಸುವಾಗ, ನನ್ನ ಸರ್ಕಾರವು ಭಾರತೀಯ ಸಂಸ್ಕೃತಿಯ ವೈಭವ ಮತ್ತು ಪರಂಪರೆಯನ್ನು ಮರುಸ್ಥಾಪಿಸುತ್ತಿದೆ.

ಇತ್ತೀಚೆಗೆ, ನಳಂದ ವಿಶ್ವವಿದ್ಯಾಲಯದ ಭವ್ಯವಾದ ಕ್ಯಾಂಪಸ್ ರೂಪದಲ್ಲಿ ಹೊಸ ಅಧ್ಯಾಯ ಸೇರಿಸಲಾಗಿದೆ.

ನಳಂದವು ಕೇವಲ ವಿಶ್ವವಿದ್ಯಾಲಯವಾಗಿರಲಿಲ್ಲ, ಅದು ಜಾಗತಿಕ ಜ್ಞಾನದ ಕೇಂದ್ರವಾಗಿ ಭಾರತದ ವೈಭವಯುತ ಗತಕಾಲದ ಸಾಕ್ಷಿಯಾಗಿದೆ.

ಹೊಸ ನಳಂದಾ ವಿಶ್ವವಿದ್ಯಾಲಯವು ಭಾರತವನ್ನು ಜಾಗತಿಕ ಜ್ಞಾನದ ಕೇಂದ್ರವನ್ನಾಗಿ ಮಾಡಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸ ನನಗಿದೆ.

ನಮ್ಮ ಸಾವಿರಾರು ವರ್ಷಗಳ ಪರಂಪರೆಯೊಂದಿಗೆ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸುವುದು ನನ್ನ ಸರ್ಕಾರದ ಪ್ರಯತ್ನವಾಗಿದೆ.

ಅದಕ್ಕಾಗಿಯೇ ದೇಶಾದ್ಯಂತ ಯಾತ್ರಾ ಸ್ಥಳಗಳು ಮತ್ತು ನಂಬಿಕೆ ತಾಣಗಳು ಮತ್ತು ಆಧ್ಯಾತ್ಮಿಕತೆಯ ಕೇಂದ್ರಗಳು ಬೆಳೆಯುತ್ತಿವೆ.

ಗೌರವಾನ್ವಿತ ಸದಸ್ಯರೆ,

24. ನನ್ನ ಸರ್ಕಾರವು ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವಂತೆಯೇ ಪರಂಪರೆಯ ಬಗ್ಗೆಯೂ ಅದೇ ಹೆಮ್ಮೆಯಿಂದ ಕೆಲಸ ಮಾಡುತ್ತಿದೆ.

ಪರಂಪರೆಯ ಮೇಲಿನ ಹೆಮ್ಮೆಯ ಈ ಸಂಕಲ್ಪವು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ವಂಚಿತರು ಮತ್ತು ಎಲ್ಲಾ ಸಮುದಾಯಗಳ ಗೌರವದ ಸಂಕೇತವಾಗಿದೆ.

ನನ್ನ ಸರ್ಕಾರವು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಜನಜಾತಿಯ ಗೌರವ್ ದಿವಸ್ ಎಂದು ಆಚರಿಸಲು ಪ್ರಾರಂಭಿಸಿತು.

ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನವನ್ನು ಮುಂದಿನ ವರ್ಷ ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುವುದು.

ರಾಣಿ ದುರ್ಗಾವತಿ ಅವರ 500ನೇ ಜನ್ಮದಿನವನ್ನು ದೇಶವು ದೊಡ್ಡ ಮಟ್ಟದಲ್ಲಿ ಆಚರಿಸುತ್ತಿದೆ.

ಕಳೆದ ತಿಂಗಳು, ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ವಾರ್ಷಿಕೋತ್ಸವ ಗುರುತಿಸಲು ದೇಶವು ವರ್ಷಪೂರ್ತಿ ಆಚರಣೆ ಪ್ರಾರಂಭಿಸಿದೆ.

ಈ ಹಿಂದೆ, ಸರ್ಕಾರವು ಗುರು ನಾನಕ್ ದೇವ್ ಜಿ ಅವರ 550ನೇ ಪ್ರಕಾಶ್ ಪರ್ವ ಮತ್ತು ಗುರು ಗೋಬಿಂದ್ ಸಿಂಗ್ ಜಿ ಅವರ 350ನೇ ಪ್ರಕಾಶ್ ಪರ್ವವನ್ನು ಅತ್ಯಂತ ಉತ್ಸಾಹದಿಂದ ಆಚರಿಸಿತು.

ಕಾಶಿ ತಮಿಳು ಸಂಗಮಂ ಮತ್ತು ಸೌರಾಷ್ಟ್ರ ತಮಿಳು ಸಂಗಮಂ ಮುಂತಾದ ಹಬ್ಬಗಳನ್ನು 'ಏಕ್ ಭಾರತ್ ಶ್ರೇಷ್ಠ ಭಾರತ'ದ ಉತ್ಸಾಹದಲ್ಲಿ ಆಚರಿಸುವ ಸಂಪ್ರದಾಯವನ್ನು ನನ್ನ ಸರ್ಕಾರವೂ ಪ್ರಾರಂಭಿಸಿದೆ.

ಹೊಸ ತಲೆಮಾರುಗಳು ಈ ಘಟನೆಗಳಿಂದ ರಾಷ್ಟ್ರ ನಿರ್ಮಾಣಕ್ಕೆ ಸ್ಫೂರ್ತಿ ಪಡೆಯುತ್ತವೆ.

ಇದರಿಂದ  ರಾಷ್ಟ್ರೀಯ ಹೆಮ್ಮೆಯ ಪ್ರಜ್ಞೆಯೂ ಬಲಗೊಳ್ಳುತ್ತದೆ.

ಗೌರವಾನ್ವಿತ ಸದಸ್ಯರೆ,

25. ನಮ್ಮ ಯಶಸ್ಸುಗಳು ನಮ್ಮ ಹಂಚಿಕೆಯ ಪರಂಪರೆಯಾಗಿದೆ.

ಆದ್ದರಿಂದ, ನಾವು ಹೆಮ್ಮೆ ಪಡಬೇಕು ಮತ್ತು ಅವುಗಳನ್ನು ಅಪ್ಪಿಕೊಳ್ಳಲು ಹಿಂಜರಿಯಬಾರದು.

ಇಂದು ಭಾರತ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದೆ.

ಈ ಸಾಧನೆಗಳು ನಮಗೆ ನಮ್ಮ ಪ್ರಗತಿ ಮತ್ತು ಯಶಸ್ಸಿನ ಬಗ್ಗೆ ಹೆಮ್ಮೆಪಡುವಂತೆ ಮಾಡಲು ಅಪಾರ ಅವಕಾಶಗಳನ್ನು ನೀಡುತ್ತವೆ.

ಜಾಗತಿಕವಾಗಿ ಡಿಜಿಟಲ್ ಪಾವತಿಯಲ್ಲಿ ಭಾರತ ಉತ್ತಮ ಸಾಧನೆ ತೋರಿದಾಗ ನಾವು ಹೆಮ್ಮೆ ಪಡಬೇಕು.

ನಮ್ಮ ವಿಜ್ಞಾನಿಗಳು ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನವನ್ನು ಯಶಸ್ವಿಯಾಗಿ ಇಳಿಸಿದಾಗ ನಾವು ಹೆಮ್ಮೆಪಡಬೇಕು.

ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾದಾಗ ನಾವು ಹೆಮ್ಮೆಪಡಬೇಕು.

ಯಾವುದೇ ದೊಡ್ಡ ಹಿಂಸಾಚಾರ ಮತ್ತು ಅವ್ಯವಸ್ಥೆಯಿಲ್ಲದೆ ಭಾರತವು ಅಂತಹ ದೊಡ್ಡ ಚುನಾವಣಾ ಕಸರತ್ತು ನಡೆಸಿದ್ದಕ್ಕೆ ನಾವು ಹೆಮ್ಮೆಪಡಬೇಕು.

ಇಂದು ಇಡೀ ಜಗತ್ತು ನಮ್ಮನ್ನು ಪ್ರಜಾಪ್ರಭುತ್ವದ ತಾಯಿ ಎಂದು ಗೌರವಿಸುತ್ತಿದೆ.

ಭಾರತದ ಜನರು ಯಾವಾಗಲೂ ಪ್ರಜಾಪ್ರಭುತ್ವದಲ್ಲಿ ಸಂಪೂರ್ಣ ನಂಬಿಕೆ ಪ್ರದರ್ಶಿಸಿದ್ದಾರೆ, ಚುನಾವಣಾ ಸಂಸ್ಥೆಗಳಲ್ಲಿ ಸಂಪೂರ್ಣ ನಂಬಿಕೆ ವ್ಯಕ್ತಪಡಿಸಿದ್ದಾರೆ.

ನಮ್ಮ ಸದೃಢ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ನಾವು ಈ ನಂಬಿಕೆಯನ್ನು ಸಂರಕ್ಷಿಸಬೇಕು.

ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಜನರ ನಂಬಿಕೆಯನ್ನು ಘಾಸಿಗೊಳಿಸುವುದು ನಾವೆಲ್ಲರೂ ಕುಳಿತಿರುವ ಕೊಂಬೆಯನ್ನೇ ಕತ್ತರಿಸಿದಂತೆ ಎಂಬುದನ್ನು ನಾವೆಲ್ಲಾ ಅರಿತುಕೊಳ್ಳಬೇಕು.

ನಮ್ಮ ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆ ದುರ್ಬಲಗೊಳಿಸುವ ಪ್ರತಿಯೊಂದು ಪ್ರಯತ್ನವನ್ನು ನಾವು ಒಟ್ಟಾಗಿ ಖಂಡಿಸಬೇಕು.

ಮತಯಂತ್ರಗಳನ್ನು ಕಿತ್ತುಕೊಂಡು ಲೂಟಿ ಮಾಡಿದ ಆ ಕಾಲವನ್ನು ನಾವೆಲ್ಲರೂ ನೆನಪಿಸಿಕೊಳ್ಳುತ್ತೇವೆ.

ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆ ಖಚಿತಪಡಿಸಿಕೊಳ್ಳಲು, ಇವಿಎಂಗಳನ್ನು ಬಳಸಲು ನಿರ್ಧರಿಸಲಾಯಿತು.

ಆದರೆ, ಕಳೆದ ಕೆಲವು ದಶಕಗಳಲ್ಲಿ ಇವಿಎಂ ಸರ್ವೋಚ್ಚ ನ್ಯಾಯಾಲಯದಿಂದ ಜನತಾ ನ್ಯಾಯಾಲಯದವರೆಗೆ ಪ್ರತಿಯೊಂದು ಪರೀಕ್ಷೆಯಲ್ಲೂ ಪಾಸಾಗಿದೆ.

ಗೌರವಾನ್ವಿತ ಸದಸ್ಯರೆ,

26. ನನ್ನ ಕೆಲವು ಕಾಳಜಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ.

ಈ ವಿಷಯಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಮತ್ತು ದೇಶಕ್ಕೆ ಸಂಕೀರ್ಣ ಮತ್ತು ರಚನಾತ್ಮಕ ಪರಿಹಾರಗಳನ್ನು ನೀಡಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ.

ಸಂವಹನ ಕ್ರಾಂತಿಯ ಈ ಯುಗದಲ್ಲಿ ವಿಚ್ಛಿದ್ರಕಾರಕ ಶಕ್ತಿಗಳು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಮತ್ತು ಸಮಾಜದಲ್ಲಿ ಒಡಕು ಸೃಷ್ಟಿಸಲು ಪಿತೂರಿ ನಡೆಸುತ್ತಿವೆ.

ಈ ಶಕ್ತಿಗಳು ದೇಶದೊಳಗೆ ಇರುತ್ತವೆ ಮತ್ತು ದೇಶದ ಹೊರಗಿನಿಂದಲೂ ಕಾರ್ಯ ನಿರ್ವಹಿಸುತ್ತಿವೆ.

ಈ ಶಕ್ತಿಗಳು ವದಂತಿಗಳನ್ನು ಹರಡಲು, ಜನರ ದಾರಿ ತಪ್ಪಿಸಲು ಮತ್ತು ತಪ್ಪು ಮಾಹಿತಿಗೆ ಆಶ್ರಯಿಸುತ್ತವೆ.

ಈ ಪರಿಸ್ಥಿತಿಯನ್ನು ಪರಿಶೀಲಿಸದೆ ಮುಂದುವರಿಸಲು ಸಾಧ್ಯವೇ ಇಲ್ಲ. ಇಂದು ತಂತ್ರಜ್ಞಾನ ಪ್ರತಿದಿನವೂ ಮುಂದುವರಿಯುತ್ತಿದೆ.

ಅಂತಹ ಪರಿಸ್ಥಿತಿಯಲ್ಲಿ, ಮಾನವೀಯತೆಯ ವಿರುದ್ಧ ಅದರ ದುರುಪಯೋಗವು ಅತ್ಯಂತ ಹಾನಿಕಾರಕವಾಗಿದೆ.

ಭಾರತವು ಈ ಕಳವಳಗಳನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ವ್ಯಕ್ತಪಡಿಸಿ, ಜಾಗತಿಕ ಮಾರ್ಗಸೂಚಿಗಾಗಿ ಪ್ರತಿಪಾದಿಸಿದೆ.

ಈ ಪ್ರವೃತ್ತಿಯನ್ನು ನಿಲ್ಲಿಸುವುದು ಮತ್ತು ಈ ಸವಾಲನ್ನು ಎದುರಿಸಲು ಹೊಸ ಮಾರ್ಗಗಳು ಮತ್ತು ಕಾರ್ಯವಿಧಾನಗಳನ್ನು ಕಂಡುಹಿಡಿಯುವುದು ನಮ್ಮೆಲ್ಲರ ಗುರುತರ ಜವಾಬ್ದಾರಿಯಾಗಿದೆ.

ಗೌರವಾನ್ವಿತ ಸದಸ್ಯರೆ,

27. 21ನೇ ಶತಮಾನದ ಈ 3 ದಶಕದಲ್ಲಿ ಜಾಗತಿಕ ಕ್ರಮವು ಹೊಸ ರೂಪು ಅಥವಾ ಆಕಾರ ಪಡೆಯುತ್ತಿದೆ.

ನನ್ನ ಸರ್ಕಾರದ ಪ್ರಯತ್ನದಿಂದಾಗಿ ಭಾರತವು ವಿಶ್ವಬಂಧುವಾಗಿ ಜಗತ್ತಿಗೆ ಹೊಸ ವಿಶ್ವಾಸ ನೀಡುತ್ತಿದೆ.

ಮಾನವ-ಕೇಂದ್ರಿತ ಕಾರ್ಯವಿಧಾನದಿಂದಾಗಿ, ಭಾರತವು ಇಂದು ಯಾವುದೇ ಬಿಕ್ಕಟ್ಟು ಎದುರಾದರೆ ಮೊದಲ ಪ್ರತಿಸ್ಪಂದಕವಾಗಿದೆ ಮತ್ತು ಜಾಗತಿಕ ದಕ್ಷಿಣದ ಪ್ರಬಲ ಧ್ವನಿಯಾಗಿದೆ.

ಮಾನವತೆ ಕಾಪಾಡುವಲ್ಲಿ ಭಾರತವು ಮುಂಚೂಣಿಯಲ್ಲಿದೆ; ಅದು ಕೊರೊನಾ ಬಿಕ್ಕಟ್ಟೇ ಆಗಿರಲಿ ಅಥವಾ ಭೂಕಂಪ ಅಥವಾ ಯುದ್ಧವೇ ಆಗಿರಲಿ, ಇಟಲಿಯಲ್ಲಿ ನಡೆದ ಜಿ-7 ಶೃಂಗಸಭೆಯ ನಂತರ ಇಡೀ ಜಗತ್ತು ಈಗ ಭಾರತವನ್ನು ನೋಡುವ ರೀತಿ ಸ್ಪಷ್ಟವಾಗಿದೆ.

ಭಾರತವು ತನ್ನ ಜಿ-20 ಅಧ್ಯಕ್ಷತೆ ವಹಿಸಿದ್ದ ಅವಧಿಯಲ್ಲಿ ವಿವಿಧ ವಿಷಯಗಳ ಕುರಿತು ಜಗತ್ತನ್ನು ಒಟ್ಟುಗೂಡಿಸಿತು.

ಭಾರತದ ಜಿ-20 ಅಧ್ಯಕ್ಷತೆಯಲ್ಲಿ ಆಫ್ರಿಕಾ ಒಕ್ಕೂಟವನ್ನು ಜಿ-20 ಕಾಯಂ ಸದಸ್ಯರನ್ನಾಗಿ ಮಾಡಲಾಯಿತು.

ಇದು ಆಫ್ರಿಕಾ ಮತ್ತು ಇಡೀ ಜಾಗತಿಕ ದಕ್ಷಿಣದ ವಿಶ್ವಾಸವನ್ನು ಬಲಪಡಿಸಿದೆ.

ನೆರೆಹೊರೆಯ ಮೊದಲ ನೀತಿ ಅನುಸರಿಸಿ, ಭಾರತವು ನೆರೆಯ ರಾಷ್ಟ್ರಗಳೊಂದಿಗೆ ತನ್ನ ಸಂಬಂಧವನ್ನು ಬಲಪಡಿಸಿದೆ.

ಜೂನ್ 9ರಂದು ಕೇಂದ್ರ ಸಚಿವ ಸಂಪುಟದ ಪ್ರಮಾಣವಚನ ಸಮಾರಂಭದಲ್ಲಿ 7 ನೆರೆಯ ರಾಷ್ಟ್ರಗಳ ನಾಯಕರು ಭಾಗವಹಿಸಿದ್ದು ನನ್ನ ಸರ್ಕಾರದ ಈ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ.

ಸಬ್ಕಾ ಸಾಥ್-ಸಬ್ಕಾ ವಿಕಾಸ್‌ ಉತ್ಸಾಹದಲ್ಲಿ ಭಾರತವು ಇಂಡೋ-ಪೆಸಿಫಿಕ್ ಪ್ರದೇಶದ ದೇಶಗಳೊಂದಿಗೆ ಸಹಕಾರ ಹೆಚ್ಚಿಸುತ್ತಿದೆ.

ಪೂರ್ವ ಏಷ್ಯಾ ಅಥವಾ ಮಧ್ಯಪ್ರಾಚ್ಯ ಮತ್ತು ಯುರೋಪ್ ಆಗಿರಲಿ, ನೆರೆಹೊರೆಯ ದೇಶಗಳೊಂದಿಗೆ ನನ್ನ ಸರ್ಕಾರವು ಸಂಪರ್ಕ ಹೆಚ್ಚಿಸಲು ಒತ್ತು ನೀಡುತ್ತಿದೆ.

ಭಾರತದ ದೂರದೃಷ್ಟಿಯಿಂದಾಗಿ, ಭಾರತ ಮಧ್ಯಪ್ರಾಚ್ಯ ಯುರೋಪ್ ಆರ್ಥಿಕ ಕಾರಿಡಾರ್‌ಗೆ ರೂಪು ನೀಡಿದೆ.

ಈ ಕಾರಿಡಾರ್ 21ನೇ ಶತಮಾನದ ಬೃಹತ್ ಬದಲಾವಣೆಗಳಲ್ಲಿ ಒಂದಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ.

ಗೌರವಾನ್ವಿತ ಸದಸ್ಯರೆ,

28. ಇನ್ನು ಕೆಲವೇ ತಿಂಗಳುಗಳಲ್ಲಿ ಭಾರತ ಗಣರಾಜ್ಯವಾಗಿ 75 ವರ್ಷಗಳನ್ನು ಪೂರೈಸಲಿದೆ.

ಕಳೆದ ದಶಕಗಳಲ್ಲಿ ಭಾರತದ ಸಂವಿಧಾನವು ಪ್ರತಿ ಸವಾಲು ಮತ್ತು ಪ್ರತಿ ಪರೀಕ್ಷೆಯನ್ನು ಎದುರಿಸಿದೆ.

ಸಂವಿಧಾನ ರಚನೆಯಾದಾಗಲೂ ಭಾರತ ಸೋಲಲಿ ಎಂದು ಬಯಸಿದ ಶಕ್ತಿಗಳು ಜಗತ್ತಿನಲ್ಲಿ ಇದ್ದವು.

ಸಂವಿಧಾನ ಜಾರಿಗೆ ಬಂದ ನಂತರವೂ ಹಲವು ಬಾರಿ ದಾಳಿ ನಡೆದಿದೆ.

ಇಂದು ಜೂನ್ 27. 1975 ಜೂನ್ 25ರಂದು ತುರ್ತು ಪರಿಸ್ಥಿತಿ ಹೇರಿದ್ದು ಸಂವಿಧಾನದ ಮೇಲಿನ ನೇರ ದಾಳಿಯ ಅತಿದೊಡ್ಡ ಮತ್ತು ಕರಾಳ ಅಧ್ಯಾಯವಾಗಿದೆ.

ಇದಕ್ಕೆ ಇಡೀ ದೇಶವೇ ಆಕ್ರೋಶಗೊಂಡಿತು. ಆದರೆ ಗಣರಾಜ್ಯದ ಸಂಪ್ರದಾಯಗಳು ಭಾರತದ ಮಧ್ಯಭಾಗದಲ್ಲಿರುವಂತೆ ಅಂತಹ ಅಸಂವಿಧಾನಿಕ ಶಕ್ತಿಗಳ ವಿರುದ್ಧ ದೇಶ ವಿಜಯಶಾಲಿಯಾಯಿತು.

ನನ್ನ ಸರ್ಕಾರವು ಭಾರತ ಸಂವಿಧಾನವನ್ನು ಕೇವಲ ಆಡಳಿತದ ಮಾಧ್ಯಮವೆಂದು ಪರಿಗಣಿಸುವುದಿಲ್ಲ, ಬದಲಿಗೆ ನಮ್ಮ ಸಂವಿಧಾನವು ಸಾರ್ವಜನಿಕ ಪ್ರಜ್ಞೆಯ ಭಾಗವಾಗುವುದನ್ನು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ.

ಈ ಉದ್ದೇಶ ಗಮನದಲ್ಲಿಟ್ಟುಕೊಂಡು, ನನ್ನ ಸರ್ಕಾರವು ನವೆಂಬರ್ 26 ಅನ್ನು ಸಂವಿಧಾನ ದಿನವಾಗಿ ಆಚರಿಸಲು ಪ್ರಾರಂಭಿಸಿದೆ.

370ನೇ ವಿಧಿಯಿಂದಾಗಿ ಪರಿಸ್ಥಿತಿಗಳು ವಿಭಿನ್ನವಾಗಿದ್ದ ನಮ್ಮ ಜಮ್ಮು-ಕಾಶ್ಮೀರದಲ್ಲಿ ಈಗ ಸಂವಿಧಾನ ಸಂಪೂರ್ಣವಾಗಿ ಜಾರಿಗೆ ಬಂದಿದೆ.

ಗೌರವಾನ್ವಿತ ಸದಸ್ಯರೆ,

29. ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವ ನಮ್ಮ ಪ್ರಾಮಾಣಿಕತೆಯಿಂದ ರಾಷ್ಟ್ರದ ಸಾಧನೆಗಳು ನಿರ್ಧರಿಸಲ್ಪಡುತ್ತವೆ.

18ನೇ ಲೋಕಸಭೆಯಲ್ಲಿ ಅನೇಕ ಹೊಸ ಸದಸ್ಯರು ಮೊದಲ ಬಾರಿಗೆ ಸಂಸದೀಯ ವ್ಯವಸ್ಥೆಯ ಭಾಗವಾಗಿದ್ದಾರೆ.

ಹಳೆಯ ಸದಸ್ಯರೂ ಹೊಸ ಉತ್ಸಾಹದಿಂದ ಮರಳಿದ್ದಾರೆ.

ಈಗಿನ ಕಾಲವು ಭಾರತಕ್ಕೆ ಎಲ್ಲ ರೀತಿಯಲ್ಲೂ ಅನುಕೂಲಕರವಾಗಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ.

ಮುಂಬರುವ ವರ್ಷಗಳಲ್ಲಿ ಭಾರತ ಸರ್ಕಾರ ಮತ್ತು ಸಂಸತ್ತು ರೂಪಿಸಿದ ನಿರ್ಧಾರಗಳು ಮತ್ತು ನೀತಿಗಳನ್ನು ಇಡೀ ಜಗತ್ತು ಚಿತ್ತ ನೆಟ್ಟು ವೀಕ್ಷಿಸುತ್ತದೆ.

ಈ ಅನುಕೂಲಕರ ಅವಧಿಯಲ್ಲಿ ದೇಶವು ಹೆಚ್ಚಿನ ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಪ್ರತಿಯೊಬ್ಬ ಸಂಸದರ ಮತ್ತು ಸರ್ಕಾರದ ಜವಾಬ್ದಾರಿಯಾಗಿದೆ.

ಕಳೆದ 10 ವರ್ಷಗಳಲ್ಲಿ ನಡೆದಿರುವ ಸುಧಾರಣೆಗಳು ಮತ್ತು ದೇಶದಲ್ಲಿ ಮೂಡಿರುವ ಹೊಸ ಆತ್ಮವಿಶ್ವಾಸದಿಂದ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ನಾವು ಹೊಸ ವೇಗ ಪಡೆದುಕೊಂಡಿದ್ದೇವೆ.

ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ದೇಶದ ಪ್ರತಿಯೊಬ್ಬ ನಾಗರಿಕನ ಆಕಾಂಕ್ಷೆ ಮತ್ತು ಸಂಕಲ್ಪವಾಗಿದೆ ಎಂಬುದನ್ನು ನಾವೆಲ್ಲರೂ ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು.

ಈ ನಿರ್ಣಯಗಳನ್ನು ಸಾಧಿಸಲು ಯಾವುದೇ ಅಡೆತಡೆಗಳು ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ನೀತಿಗಳನ್ನು ವಿರೋಧಿಸುವುದು ಮತ್ತು ಸಂಸತ್ತಿನ ಕಾರ್ಯ ಚಟುವಟಿಕೆಗೆ ಅಡ್ಡಿ ಉಂಟುಮಾಡುವುದು 2 ವಿಭಿನ್ನ ವಿಷಯಗಳಾಗಿವೆ.

ಸಂಸತ್ತು ತನ್ನ ಕಲಾಪವನ್ನು ಸುಗಮವಾಗಿ ನಡೆಸಿದಾಗ, ಆರೋಗ್ಯಕರ ಚರ್ಚೆಗಳು ಇಲ್ಲಿ ನಡೆದಾಗ, ದೂರಗಾಮಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ಜನರು ಸರ್ಕಾರದಲ್ಲಿ ಮಾತ್ರವಲ್ಲದೆ, ಇಡೀ ವ್ಯವಸ್ಥೆಯ ಮೇಲೆ ವಿಶ್ವಾಸ ಹೊಂದುತ್ತಾರೆ.

ಆದ್ದರಿಂದ, ಸಂಸತ್ತಿನ ಪ್ರತಿ ಕ್ಷಣವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡುವ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ.

ಗೌರವಾನ್ವಿತ ಸದಸ್ಯರೆ,

30. ವೇದಗಳಲ್ಲಿ ನಮ್ಮ ಋಷಿಗಳು "ಸಮಾನೋ ಮಂತ್ರಃ ಸಮಿತಿಃ ಸಮಾನಿ" ಎಂಬ ಸಂದೇಶದೊಂದಿಗೆ ನಮಗೆ ಸ್ಫೂರ್ತಿ ನೀಡಿದ್ದಾರೆ.

ಅಂದರೆ, ನಾವು ಸಾಮಾನ್ಯ ಕಲ್ಪನೆ ಮತ್ತು ಗುರಿಯೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಇದೇ ಈ ಸಂಸತ್ತಿನ ಚೈತನ್ಯ.

ಆದ್ದರಿಂದ, ಭಾರತವು 3ನೇ ಅತಿದೊಡ್ಡ ಆರ್ಥಿಕತೆಯಾಗಿರುವಾಗ, ಈ ಸಾಧನೆಯಲ್ಲಿ ನೀವು ಸಹ ಪಾಲುದಾರರಾಗುತ್ತೀರಿ.

ಅಭಿವೃದ್ಧಿ ಹೊಂದಿದ ಭಾರತ ಎಂದು 2047ರಲ್ಲಿ ಸ್ವಾತಂತ್ರ್ಯದ 100ನೇ ವರ್ಷಾಚರಣೆ ಮಾಡುವಾಗ, ಈ ಪೀಳಿಗೆಗೂ ಅದರ ಲಾಭ ಸಿಗುತ್ತದೆ.

ಇಂದು ನಮ್ಮ ಯುವಜನತೆ ಹೊಂದಿರುವ ಸಾಮರ್ಥ್ಯ, ಇಂದಿನ ನಮ್ಮ ನಿರ್ಣಯಗಳಲ್ಲಿ ನಾವು ಹೊಂದಿರುವ ಸಮರ್ಪಣೆ, ನಮ್ಮ ತೋರಿಕೆಯಲ್ಲಿ ಅಸಾಧ್ಯ ಸಾಧನೆಗಳಾಗಿವೆ.

ಇವೆಲ್ಲವೂ ಮುಂಬರುವ ಯುಗ ಭಾರತದ ಯುಗ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಈ ಶತಮಾನವು ಭಾರತದ ಶತಮಾನ, ಮತ್ತು ಅದರ ಪ್ರಭಾವವು ಇನ್ನೂ ಸಾವಿರ ವರ್ಷಗಳವರೆಗೆ ಇರುತ್ತದೆ.

ನಾವೆಲ್ಲರೂ ಒಟ್ಟಾಗಿ, ನಮ್ಮ ಕರ್ತವ್ಯಗಳಿಗೆ ಸಂಪೂರ್ಣ ಶ್ರದ್ಧೆಯಿಂದ, ರಾಷ್ಟ್ರೀಯ ನಿರ್ಣಯಗಳನ್ನು ಪೂರೈಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳೋಣ, ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡೋಣ.

ನಿಮ್ಮೆಲ್ಲರಿಗೂ ಶುಭ ಹಾರೈಕೆಗಳು!

ಧನ್ಯವಾದಗಳು,

ಜೈ ಹಿಂದ್!

ಜೈ ಭಾರತ್!

 

*****

 

 

 

 


(Release ID: 2029146) Visitor Counter : 147