ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿಇಂದು ನವದೆಹಲಿಯಲ್ಲಿ ಪ್ರವಾಹ ನಿರ್ವಹಣೆಯ ಸನ್ನದ್ಧತೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆ ನಡೆಯಿತು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತದ ವಿಪತ್ತು ನಿರ್ವಹಣೆ ’ಶೂನ್ಯ ಅಪಘಾತ ವಿಧಾನ’ ದೊಂದಿಗೆ ಮುನ್ನಡೆಯುತ್ತಿದೆ
ಕೇಂದ್ರ ಜಲ ಆಯೋಗದ ಪ್ರವಾಹ ಮೇಲ್ವಿಚಾರಣಾ ಕೇಂದ್ರಗಳು ನಮ್ಮ ಅಗತ್ಯತೆಗಳಿಗೆ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರಬೇಕು - ಗೃಹ ಸಚಿವರು
ಬ್ರಹ್ಮಪುತ್ರ ನದಿಯ ನೀರನ್ನು ತಿರುಗಿಸಲು ಈಶಾನ್ಯದಲ್ಲಿಕನಿಷ್ಠ 50 ದೊಡ್ಡ ಕೊಳಗಳನ್ನು ನಿರ್ಮಿಸಬೇಕು, ಇದು ಪ್ರವಾಹವನ್ನು ನಿಭಾಯಿಸಲು ಮತ್ತು ಕೃಷಿ, ನೀರಾವರಿ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ
ಉತ್ತಮ ಪ್ರವಾಹ ನಿರ್ವಹಣೆಗಾಗಿ ನದಿಗಳ ನೀರಿನ ಮಟ್ಟದ ಮುನ್ಸೂಚನೆ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಪ್ರಯತ್ನಗಳನ್ನು ಮಾಡಬೇಕು
ಪ್ರವಾಹದ ಸಂದರ್ಭದಲ್ಲಿ ರಸ್ತೆಗಳು ಮುಳುಗಡೆಯನ್ನು ಎದುರಿಸಲು ನೈಸರ್ಗಿಕ ಒಳಚರಂಡಿ ವ್ಯವಸ್ಥೆಯು ರಸ್ತೆ ನಿರ್ಮಾಣದ ವಿನ್ಯಾಸಗಳ ಅವಿಭಾಜ್ಯ ಅಂಗವಾಗಿರಬೇಕು
ಸಿಕ್ಕಿಂ ಮತ್ತು ಮಣಿಪುರದಲ್ಲಿನ ಪ್ರವಾಹದ ಬಗ್ಗೆ ವಿವರವಾದ ಅಧ್ಯಯನ ನಡೆಸಿ ಎಂಎಚ್‌ಎಗೆ ವರದಿ ಸಲ್ಲಿಸುವಂತೆ ಗೃಹ ಸಚಿವರು ಎನ್‌ಡಿಎಂಎ ಮತ್ತು ಜಲಶಕ್ತಿ ಸಚಿವಾಲಯಕ್ಕೆ ಸೂಚನೆ ನೀಡಿದರು
ಕಾಡಿನ ಬೆಂಕಿಯನ್ನು ತಡೆಗಟ್ಟಲು ನಿಯಮಿತವಾಗಿ ಬೆಂಕಿ ರೇಖೆಗಳನ್ನು ರಚಿಸುವುದು, ಒಣ ಎಲೆಗಳನ್ನು ತೆಗೆದುಹಾಕುವುದು ಮತ್ತು ಸ್ಥಳೀಯರು ಮತ್ತು ಅರಣ್ಯ ಸಿಬ್ಬಂದಿಯೊಂದಿಗೆ ಅಣಕು ಅಭ್ಯಾಸಗಳನ್ನು ನಡೆಸುವ ಅಗತ್ಯವನ್ನ
Posted On:
23 JUN 2024 4:22PM by PIB Bengaluru
ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಪ್ರವಾಹ ನಿರ್ವಹಣೆಯ ಸನ್ನದ್ಧತೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ದೇಶದಲ್ಲಿಪ್ರವಾಹದ ಭೀತಿಯನ್ನು ತಗ್ಗಿಸಲು ಸಮಗ್ರ ಮತ್ತು ದೂರಗಾಮಿ ನೀತಿಯನ್ನು ರೂಪಿಸುವ ದೀರ್ಘಕಾಲೀನ ಕ್ರಮಗಳನ್ನು ಕೇಂದ್ರ ಗೃಹ ಸಚಿವರು ಪರಿಶೀಲಿಸಿದರು.
ಸಭೆಯಲ್ಲಿ, ಕೇಂದ್ರ ಗೃಹ ಸಚಿವರು ಕಳೆದ ವರ್ಷ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು. ಇದರೊಂದಿಗೆ, ಎಲ್ಲಾ ಏಜೆನ್ಸಿಗಳು ಅಳವಡಿಸಿಕೊಳ್ಳುತ್ತಿರುವ ಹೊಸ ತಂತ್ರಜ್ಞಾನಗಳು ಮತ್ತು ಪ್ರವಾಹ ನಿರ್ವಹಣೆಗಾಗಿ ಅವುಗಳ ಜಾಲವನ್ನು ವಿಸ್ತರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಶ್ರೀ ಅಮಿತ್ ಶಾ ಅವರು ಹಿಮನದಿ ಸರೋವರ ಸೊಧೀಟ ಪ್ರವಾಹ (ಜಿಎಲ್‌ಒಎಫ್) ಎದುರಿಸುವ ಸಿದ್ಧತೆಗಳನ್ನು ಪರಿಶೀಲಿಸಿದರು. ಪ್ರವಾಹ ಮತ್ತು ನೀರಿನ ನಿರ್ವಹಣೆಗಾಗಿ ವಿವಿಧ ಏಜೆನ್ಸಿಗಳು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಒದಗಿಸಿದ ಉಪಗ್ರಹ ಚಿತ್ರಗಳನ್ನು ಗರಿಷ್ಠ ಬಳಕೆಗೆ ಅವರು ಒತ್ತಿ ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ವಿಪತ್ತು ನಿರ್ವಹಣೆ ‘ಶೂನ್ಯ ಅಪಘಾತ ವಿಧಾನ’ ದೊಂದಿಗೆ ಮುನ್ನಡೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. ಪ್ರವಾಹ ನಿರ್ವಹಣೆಗಾಗಿ ಎನ್‌ಡಿಎಂಎ ಹೊರಡಿಸಿದ ಸಲಹೆಗಳನ್ನು ಸಮಯೋಚಿತವಾಗಿ ಜಾರಿಗೆ ತರುವಂತೆ ಗೃಹ ಸಚಿವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಿದರು. ಪ್ರವಾಹ ಮುನ್ಸೂಚನೆಯಲ್ಲಿಬಳಸುವ ಎಲ್ಲಾ ಉಪಕರಣಗಳನ್ನು ಮರುಪರಿಶೀಲಿಸುವ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಅವರು ಭಾರತ ಹವಾಮಾನ ಇಲಾಖೆ (ಐಎಂಡಿ) ಮತ್ತು ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಗೆ ನಿರ್ದೇಶನ ನೀಡಿದರು. ಸಿಕ್ಕಿಂ ಮತ್ತು ಮಣಿಪುರದಲ್ಲಿಇತ್ತೀಚೆಗೆ ಸಂಭವಿಸಿದ ಪ್ರವಾಹದ ಬಗ್ಗೆ ವಿವರವಾದ ಅಧ್ಯಯನ ನಡೆಸಿ ಗೃಹ ಸಚಿವಾಲಯಕ್ಕೆ (ಎಂಎಚ್‌ಎ) ವರದಿ ಸಲ್ಲಿಸುವಂತೆ ಶ್ರೀ ಅಮಿತ್ ಶಾ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿದರು. ಎಲ್ಲಾ ಪ್ರಮುಖ ಅಣೆಕಟ್ಟುಗಳ ಫ್ಲಡ್(ಪ್ರವಾಹ) ಗೇಟ್‌ಗಳು ಉತ್ತಮ ಸ್ಥಿತಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಲು ಅವರು ನಿರ್ದೇಶನ ನೀಡಿದರು. ಸಿಡಬ್ಲ್ಯೂಸಿಯ ಪ್ರವಾಹ ಮೇಲ್ವಿಚಾರಣಾ ಕೇಂದ್ರಗಳು ನಮ್ಮ ಅಗತ್ಯತೆಗಳಿಗೆ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು.
ಬಹುವಾರ್ಷಿಕವಲ್ಲದ ನದಿಗಳು ಹೆಚ್ಚು ಮಣ್ಣಿನ ಸವೆತ ಮತ್ತು ಹೂಳಿಗೆ ಒಳಗಾಗುತ್ತವೆ, ಇದರ ಪರಿಣಾಮವಾಗಿ ಪ್ರವಾಹ ಉಂಟಾಗುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಉತ್ತಮ ಪ್ರವಾಹ ನಿರ್ವಹಣೆಗಾಗಿ ನದಿಗಳ ನೀರಿನ ಮಟ್ಟದ ಮುನ್ಸೂಚನೆ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಪ್ರಯತ್ನಿಸಬೇಕು ಎಂದು ಅವರು ನಿರ್ದೇಶನ ನೀಡಿದರು. ಪ್ರವಾಹದ ಸಂದರ್ಭದಲ್ಲಿ ರಸ್ತೆಗಳು ಮುಳುಗಡೆಯಾಗುವುದನ್ನು ಎದುರಿಸಲು ನೈಸರ್ಗಿಕ ಒಳಚರಂಡಿ ವ್ಯವಸ್ಥೆಯು ರಸ್ತೆ ನಿರ್ಮಾಣದ ವಿನ್ಯಾಸಗಳ ಅವಿಭಾಜ್ಯ ಅಂಗವಾಗಿರಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಬ್ರಹ್ಮಪುತ್ರ ನದಿಯ ನೀರನ್ನು ಬೇರೆಡೆಗೆ ತಿರುಗಿಸಲು ಮತ್ತು ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿಈಶಾನ್ಯದಲ್ಲಿ ಕನಿಷ್ಠ 50 ದೊಡ್ಡ ಕೊಳಗಳನ್ನು ನಿರ್ಮಿಸಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಇದು ಆ ಪ್ರದೇಶಗಳಲ್ಲಿಕಡಿಮೆ ವೆಚ್ಚದಲ್ಲಿ ಕೃಷಿ, ನೀರಾವರಿ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಮತ್ತು ಪ್ರವಾಹವನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಮತ್ತು ಇದು ಅಂತಿಮವಾಗಿ ಸ್ಥಳೀಯ ಆರ್ಥಿಕತೆಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್.ಡಿ.ಎಂ.ಎ.) ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (ಎಂ.ಇ.ಎಫ್.ಸಿ.ಸಿ)ಕ್ಕೆ ಕಾಡ್ಗಿಚ್ಚಿನ ಘಟನೆಗಳನ್ನು ತಡೆಗಟ್ಟಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಶ್ರೀ ಅಮಿತ್ ಅಮಿತ್ ಶಾ ಸೂಚನೆ ನೀಡಿದರು. ಇದಕ್ಕಾಗಿ, ನಿಯಮಿತವಾಗಿ ಬೆಂಕಿ ರೇಖೆಗಳನ್ನು ರಚಿಸುವ, ಒಣ ಎಲೆಗಳನ್ನು ತೆಗೆದುಹಾಕುವ ಮತ್ತು ಸ್ಥಳೀಯ ನಿವಾಸಿಗಳು ಮತ್ತು ಅರಣ್ಯ ಸಿಬ್ಬಂದಿಯೊಂದಿಗೆ ಕಾಲಕಾಲಕ್ಕೆ ಅಣಕು ಅಭ್ಯಾಸಗಳನ್ನು ನಡೆಸುವ ಅಗತ್ಯವನ್ನು ಗೃಹ ಸಚಿವರು ಒತ್ತಿ ಹೇಳಿದರು. ಇದರೊಂದಿಗೆ, ಒಂದೇ ಸ್ಥಳದಲ್ಲಿಪದೇ ಪದೇ ಕಾಡ್ಗಿಚ್ಚಿನ ಘಟನೆಗಳನ್ನು ವಿಶ್ಲೇಷಿಸಲು ಅವರು ಕೇಳಿದರು. ಕಾಡ್ಗಿಚ್ಚಿನ ಘಟನೆಗಳನ್ನು ಎದುರಿಸಲು ವಿವರವಾದ ಕೈಪಿಡಿಯನ್ನು ಸಿದ್ಧಪಡಿಸುವಂತೆ ಗೃಹ ಸಚಿವರು ಎನ್‌ಡಿಎಂಎಗೆ ಸೂಚಿಸಿದರು.
ಮಿಂಚಿನ ದಾಳಿಯ ಬಗ್ಗೆ ಐಎಂಡಿಯ ಎಚ್ಚರಿಕೆಗಳನ್ನು ಎಸ್‌ಎಂಎಸ್, ಟಿವಿ, ಎಫ್‌ಎಂ ರೆಡಿಯೊ ಮತ್ತು ಇತರ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಪ್ರಸಾರ ಮಾಡಬೇಕು ಎಂದು ಕೇಂದ್ರ ಗೃಹ ಸಚಿವರು ನಿರ್ದೇಶನ ನೀಡಿದರು. ವಿವಿಧ ಇಲಾಖೆಗಳು ಅಭಿವೃದ್ಧಿಪಡಿಸಿದ ಹವಾಮಾನ, ಮಳೆ ಮತ್ತು ಪ್ರವಾಹ ಎಚ್ಚರಿಕೆ ಸಂಬಂಧಿತ ಅಪ್ಲಿಕೇಶನ್‌ಗಳನ್ನು ಸಂಯೋಜಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು, ಇದರಿಂದ ಅವುಗಳ ಪ್ರಯೋಜನಗಳು ಉದ್ದೇಶಿತ ಜನಸಂಖ್ಯೆಯನ್ನು ತಲುಪಬಹುದು. ಪ್ರವಾಹ ಸೇರಿದಂತೆ ಯಾವುದೇ ವಿಪತ್ತಿನ ಸಮಯದಲ್ಲಿ ಸಮುದಾಯವು ಮೊದಲ ಪ್ರತಿಕ್ರಿಯೆ ನೀಡುವುದರಿಂದ, ವಿವಿಧ ಏಜೆನ್ಸಿಗಳು ನಡೆಸುತ್ತಿರುವ ಸಮುದಾಯ ಜಾಗೃತಿ ಕಾರ್ಯಕ್ರಮಗಳಲ್ಲಿಸಮನ್ವಯ ಮತ್ತು ಏಕೀಕರಣ ಇರಬೇಕು, ಇದರಿಂದ ಅವರು ಗರಿಷ್ಠ ಪರಿಣಾಮ ಬೀರಬಹುದು ಎಂದು ಶ್ರೀ ಅಮಿತ್ ಶಾ ನಿರ್ದೇಶನ ನೀಡಿದರು.
ಸಭೆಯಲ್ಲಿ, ಐಎಂಡಿ, ಸಿಡಬ್ಲ್ಯೂಸಿ, ಎನ್‌ಡಿಆರ್‌ಎಫ್ ಮತ್ತು ಎನ್‌ಡಿಎಂಎ ವಿವರವಾದ ಪ್ರಸ್ತುತಿಗಳನ್ನು ನೀಡಿದರು. ಕಳೆದ ವರ್ಷ ನಡೆದ ಪ್ರವಾಹ ಪರಿಶೀಲನಾ ಸಭೆಯಲ್ಲಿಕೇಂದ್ರ ಗೃಹ ಸಚಿವರು ನೀಡಿದ ಸೂಚನೆಗಳ ಮೇರೆಗೆ ಕೈಗೊಂಡ ಕ್ರಮಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಮಾಹಿತಿ ನೀಡಿವೆ. ಪ್ರಸಕ್ತ ಮುಂಗಾರು ಋುತುವಿಗೆ ತಮ್ಮ ಸಿದ್ಧತೆ ಮತ್ತು ಭವಿಷ್ಯದ ಕ್ರಿಯಾ ಯೋಜನೆಯ ಬಗ್ಗೆಯೂ ಅವರು ಮಾಹಿತಿ ನೀಡಿದರು.
ಕೇಂದ್ರ ಜಲಶಕ್ತಿ ಸಚಿವ ಶ್ರೀ ಸಿ.ಆರ್.ಪಾಟಿಲ್, ಗೃಹ ವ್ಯವಹಾರಗಳ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ, ಕೇಂದ್ರ ಗೃಹ ಕಾರ್ಯದರ್ಶಿ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ, ಭೂ ವಿಜ್ಞಾನ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ರೈಲ್ವೆ ಮಂಡಳಿಯ ಅಧ್ಯಕ್ಷ ರು, ಎನ್‌ಡಿಎಂಎ ಸದಸ್ಯರು ಮತ್ತು ಇಲಾಖೆಗಳ ಮುಖ್ಯಸ್ಥರು, ಎನ್‌ಡಿಆರ್‌ಎಫ್ ಮತ್ತು ಐಎಂಡಿ ಮಹಾನಿರ್ದೇಶಕರು, ಎನ್‌ಎಚ್‌ಎಐ ಅಧ್ಯಕ್ಷ ರು ಮತ್ತು ಸಿಡಬ್ಲ್ಯೂಸಿ ಸೇರಿದಂತೆ ಇತರ ಸಂಬಂಧಿತ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿಉಪಸ್ಥಿತರಿದ್ದರು.
*****
(Release ID: 2028169)
Visitor Counter : 75
Read this release in:
Khasi
,
English
,
Urdu
,
Marathi
,
Hindi
,
Hindi_MP
,
Bengali
,
Bengali-TR
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam