ಕೃಷಿ ಸಚಿವಾಲಯ

ನಾಳೆ ವಾರಣಾಸಿಯಲ್ಲಿ ಪಿಎಂ-ಕಿಸಾನ್ ಯೋಜನೆಯ 17ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


9.26 ಕೋಟಿಗೂ ಹೆಚ್ಚು ರೈತರು 20,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಪ್ರಯೋಜನಗಳನ್ನು ಪಡೆಯಲಿದ್ದಾರೆ

ಕೃಷಿ ಸಖಿಗಳಾಗಿ ತರಬೇತಿ ಪಡೆದ 30,000ಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಿದ್ದಾರೆ ಶ್ರೀ ಪ್ರಧಾನಮಂತ್ರಿ

Posted On: 17 JUN 2024 2:30PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಿಎಂ-ಕಿಸಾನ್ ಯೋಜನೆಯ 17 ನೇ ಕಂತನ್ನು 2024 ರ ಜೂನ್ 18 ರಂದು ವಾರಣಾಸಿಯಲ್ಲಿ ಬಿಡುಗಡೆ ಮಾಡಲಿದ್ದಾರೆ, ಇದರಲ್ಲಿ 9.26 ಕೋಟಿಗೂ ಹೆಚ್ಚು ರೈತರು 20,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಪ್ಯಾರಾ ವಿಸ್ತರಣಾ ಕಾರ್ಯಕರ್ತರಾಗಿ ಕೆಲಸ ಮಾಡಲು ಕೃಷಿ ಸಖಿಗಳಾಗಿ ತರಬೇತಿ ಪಡೆದ 30,000 ಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳಿಗೆ ಪ್ರಧಾನಿ ಪ್ರಮಾಣಪತ್ರಗಳನ್ನು ವಿತರಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್ ಅವರು ಭಾಗವಹಿಸಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಮತ್ತು ಹಲವಾರು ರಾಜ್ಯ ಸಚಿವರು ಪಾಲ್ಗೊಳ್ಳುತ್ತಿದ್ದಾರೆ. 732 ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆ), 1 ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಮತ್ತು ದೇಶಾದ್ಯಂತ 5 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳು ಸೇರಿದಂತೆ 2.5 ಕೋಟಿಗೂ ಹೆಚ್ಚು ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಆಯ್ದ 50 ಕೃಷಿ ವಿಕಾಸ ಕೇಂದ್ರಗಳಲ್ಲಿ (ಕೆವಿಕೆ) ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯ ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕೇಂದ್ರಗಳಿಗೆ, ಹಲವಾರು ಕೇಂದ್ರ ಸಚಿವರು ಸಹ ಭೇಟಿ ನೀಡಲಿದ್ದಾರೆ ಮತ್ತು ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಉತ್ತಮ ಕೃಷಿ ಪದ್ಧತಿಗಳು, ಕೃಷಿ ಕ್ಷೇತ್ರದಲ್ಲಿ ಹೊಸ ಉದಯೋನ್ಮುಖ ತಂತ್ರಜ್ಞಾನಗಳು, ಹವಾಮಾನ ಸ್ಥಿತಿಸ್ಥಾಪಕ ಕೃಷಿಯನ್ನು ಅಳವಡಿಸಿಕೊಳ್ಳುವ ಅಭ್ಯಾಸ ಮಾಡುವುದು ಇತ್ಯಾದಿಗಳ ಬಗ್ಗೆ ರೈತರನ್ನು ಸಂವೇದನಾಶೀಲಗೊಳಿಸಲಾಗುವುದು. ತಮ್ಮ ಪಿಎಂ-ಕಿಸಾನ್ ಫಲಾನುಭವಿ ಸ್ಥಿತಿ, ಪಾವತಿ ಸ್ಥಿತಿ, ಕಿಸಾನ್-ಇಮಿತ್ರ ಚಾಟ್ಬಾಟ್ ಅನ್ನು ಹೇಗೆ ಬಳಸುವುದು ಇತ್ಯಾದಿಗಳನ್ನು ಪರಿಶೀಲಿಸುವುದು ಹೇಗೆ ಎಂದು ಅವರಿಗೆ ಅರಿವು ಮೂಡಿಸಲಾಗುವುದು. ಈ ಪ್ರದೇಶದಲ್ಲಿ  ತರಬೇತಿ ಪಡೆದ ಕೃಷಿ ಸಖಿಗಳಿಗೆ ಕೇಂದ್ರ ಸಚಿವರು ಪ್ರಮಾಣಪತ್ರಗಳನ್ನು ವಿತರಿಸಲಿದ್ದಾರೆ.

ಕೇಂದ್ರ ಕೃಷಿ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು 2024 ರ ಜೂನ್ 15 ರಂದು ಪತ್ರಿಕಾಗೋಷ್ಠಿ ನಡೆಸಿ, ಭಾರತದ ಆರ್ಥಿಕತೆಯಲ್ಲಿ ಕೃಷಿಯ ಪ್ರಮುಖ ಪಾತ್ರ ಮತ್ತು ರೈತರಿಗೆ ಪ್ರಧಾನಿ ಮೋದಿಯವರ ಅಚಲ ಬೆಂಬಲವನ್ನು ಒತ್ತಿ ಹೇಳಿದ್ದರು. ಕೃಷಿ ಸದಾ ಪ್ರಧಾನ ಮಂತ್ರಿಯವರ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದರು. 2019 ರಲ್ಲಿ ಪ್ರಾರಂಭಿಸಲಾದ ಪಿಎಂ-ಕಿಸಾನ್ ಯೋಜನೆ, ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಆರ್ಥಿಕ ಬೆಂಬಲವನ್ನು ಒದಗಿಸುವ ಮೂಲಕ ಗಮನಾರ್ಹವಾಗಿ ಪ್ರಯೋಜನವನ್ನು ನೀಡಿದೆ. ಕೃಷಿಯು ಭಾರತದ ಆರ್ಥಿಕತೆಯ ಬೆನ್ನೆಲುಬಾಗಿದೆ ಎಂಬುದನ್ನು ಉಲ್ಲೇಖಿಸಿದ ಅವರು, ತಮಗೆ ಪ್ರಮುಖ ಕೃಷಿ ಇಲಾಖೆಯನ್ನು ವಹಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಇಂದಿಗೂ, ಕೃಷಿಯ ಮೂಲಕ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ ಮತ್ತು ದೇಶದ ಆಹಾರ ನಿಕ್ಷೇಪಗಳನ್ನು ಉಳಿಸಿಕೊಳ್ಳುವಲ್ಲಿ ರೈತರು ನಿರ್ಣಾಯಕರಾಗಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಕೃಷಿ ಮತ್ತು ರೈತರ ಸೇವೆ ಮಾಡುವುದು ದೇವರನ್ನು ಪೂಜಿಸುವುದಕ್ಕೆ ಸಮಾನ ಎಂದು ಅವರು ಬಣ್ಣಿಸಿದರು. ಮುಂಬರುವ 100 ದಿನಗಳ ಯೋಜನೆ ಸೇರಿದಂತೆ ನಿರಂತರ ಪ್ರಯತ್ನಗಳು ಮತ್ತು ಕಾರ್ಯತಂತ್ರದ ಯೋಜನೆಗಳ ಮೂಲಕ ಕೃಷಿ ಕ್ಷೇತ್ರವನ್ನು ವಿಸ್ತರಿಸುವ/ಬಲಪಡಿಸುವ ನಿಟ್ಟಿನಲ್ಲಿ  ಸರ್ಕಾರದ ಸಮರ್ಪಣೆ ಸ್ಪಷ್ಟವಾಗಿದೆ ಎಂದವರು ಹೇಳಿದರು. 

ಹೆಚ್ಚಿನ ಆದಾಯದ ಇರುವವರನ್ನು ಹೊರಗಿಡುವ ಕೆಲವು ಮಾನದಂಡಗಳಿಗೆ ಒಳಪಟ್ಟು ಎಲ್ಲಾ ಭೂ ಹಿಡುವಳಿ ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸಲು 2019 ರ ಫೆಬ್ರವರಿ 24 ರಂದು ಪಿಎಂ-ಕಿಸಾನ್ ಯೋಜನೆಯನ್ನು ಪ್ರಾರಂಭಿಸಲಾಯಿತು. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮೂರು ಸಮಾನ ಕಂತುಗಳಲ್ಲಿ ವರ್ಷಕ್ಕೆ 6,000 ರೂ.ಗಳ ಆರ್ಥಿಕ ಪ್ರಯೋಜನವನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ಮೋಡ್ ಮೂಲಕ ದೇಶಾದ್ಯಂತದ ರೈತರ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಇಲ್ಲಿಯವರೆಗೆ ದೇಶಾದ್ಯಂತ 11 ಕೋಟಿಗೂ ಹೆಚ್ಚು ರೈತರಿಗೆ 3.04 ಲಕ್ಷ ಕೋಟಿ ರೂ.ಗಳನ್ನು ವಿತರಿಸಲಾಗಿದೆ ಮತ್ತು ಈ ಬಿಡುಗಡೆಯೊಂದಿಗೆ, ಯೋಜನೆಯ ಪ್ರಾರಂಭದಿಂದ ಫಲಾನುಭವಿಗಳಿಗೆ ವರ್ಗಾಯಿಸಲಾದ ಒಟ್ಟು ಮೊತ್ತವು 3.24 ಲಕ್ಷ ಕೋಟಿ ರೂ.ಗಳನ್ನು ದಾಟುತ್ತದೆ.

ಕೃಷಿ ಸಖಿಗಳನ್ನು ಕೃಷಿ ಪ್ಯಾರಾ-ವಿಸ್ತರಣಾ ಕೆಲಸಗಾರರನ್ನಾಗಿ ಆಯ್ಕೆ ಮಾಡಲಾಗುತ್ತದೆ, ಏಕೆಂದರೆ ಅವರು ವಿಶ್ವಾಸಾರ್ಹ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಅನುಭವಿ ರೈತರೂ ಆಗಿರುತ್ತಾರೆ. ಕೃಷಿ ಸಖಿಗಳು ಈಗಾಗಲೇ ವಿವಿಧ ಕೃಷಿ ಪದ್ಧತಿಗಳಲ್ಲಿ ವ್ಯಾಪಕ ತರಬೇತಿಯನ್ನು ಪಡೆದಿದ್ದಾರೆ, ಇದು ಸಹ ರೈತರನ್ನು ಪರಿಣಾಮಕಾರಿಯಾಗಿ ಬೆಂಬಲಿಸಲು ಮತ್ತು ಮಾರ್ಗದರ್ಶನ ಮಾಡಲು ಅವರನ್ನು ಸುಸಜ್ಜಿತವಾಗಿ ತಯಾರು ಮಾಡಿದೆ. ಇಲ್ಲಿಯವರೆಗೆ, 70,000 ಕೃಷಿ ಸಖಿಗಳಲ್ಲಿ 34,000 ಕ್ಕೂ ಹೆಚ್ಚು ಕೃಷಿ ಸಖಿಗಳನ್ನು ಪ್ಯಾರಾ-ವಿಸ್ತರಣಾ ಕೆಲಸಗಾರರೆಂದು ಪ್ರಮಾಣೀಕರಿಸಲಾಗಿದೆ.

*****



(Release ID: 2026079) Visitor Counter : 75