ಸಂಪುಟ ಕಾರ್ಯಾಲಯ

ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (NCMC) ಬಂಗಾಳ ಕೊಲ್ಲಿಯಲ್ಲಿ ಸನ್ನಿಹಿತವಾದ ಚಂಡಮಾರುತದ ಸಿದ್ಧತೆಯನ್ನು ಪರಿಶೀಲಿಸಲು ಸಭೆ

Posted On: 24 MAY 2024 6:43PM by PIB Bengaluru

ಬಂಗಾಳಕೊಲ್ಲಿಯನ್ನು ಅಪ್ಪಳಿಸಲಿರುವ ಚಂಡಮಾರುತವನ್ನು ಎದುರಿಸಲು ಮಾಡಿಕೊಳ್ಳಲಾಗಿರುವ ಸಿದ್ಧತೆಗಳನ್ನು ಪರಿಶೀಲಿಸಲು ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (NCMC) ಇಂದು ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿತು.

ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕರು, ಬಾಂಗ್ಲಾದೇಶದ ಖೇಪುಪಾರದಿಂದ ಸುಮಾರು 800 ಕಿಮೀ ದಕ್ಷಿಣ-ನೈಋತ್ಯದಲ್ಲಿ ಮತ್ತು ಪಶ್ಚಿಮ ಬಂಗಾಳದ ಕ್ಯಾನಿಂಗ್  810 ಕಿಮೀ ದಕ್ಷಿಣದಲ್ಲಿ ಬಂಗಾಳ ಕೊಲ್ಲಿಯ ಕೇಂದ್ರಸ್ಥಾನದಲ್ಲಿ ರೂಪುಗೊಂಡಿರುವ ಖಿನ್ನತೆಯ ಪ್ರಸ್ತುತ ಸ್ಥಿತಿಯ ಬಗ್ಗೆ ಸಮಿತಿಗೆ ವಿವರಿಸಿದರು. ಚಂಡಮಾರುತವು ಈಶಾನ್ಯಕ್ಕೆ ಚಲಿಸುವ ಸಾಧ್ಯತೆಯಿದ್ದು, ಮೇ 25 ರ ರಾತ್ರಿಯ ವೇಳೆಗೆ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ. ಅದರ ನಂತರ, ಇದು ಉತ್ತರದ ಕಡೆಗೆ ಚಲಿಸಿ, ಮೇ 26 ರ ಮಧ್ಯರಾತ್ರಿಯ ಸುಮಾರಿಗೆ ಸಾಗರ್ ದ್ವೀಪ ಮತ್ತು ಖೆಪುಪಾರಾ ನಡುವಿನ ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ. ಮೇ 26 ರ ಸಂಜೆಯಿಂದ ಗಂಟೆಗೆ 110-120 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. 

ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅವರು ಚಂಡಮಾರುತ ಸಾಗುವ ನಿರೀಕ್ಷಿತ ಹಾದಿಯಲ್ಲಿ ಜನಸಂಖ್ಯೆಯನ್ನು ರಕ್ಷಿಸಲು ಮಾಡಿಕೊಂಡಿರುವ ಪೂರ್ವಸಿದ್ಧತೆ ಮತ್ತು ಸ್ಥಳೀಯ ಆಡಳಿತವು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಮಿತಿಗೆ ತಿಳಿಸಿದರು. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದ್ದು, ಸಮುದ್ರದಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಕರೆಸಲಾಗಿದೆ. ಜಿಲ್ಲಾ ನಿಯಂತ್ರಣ ಕೊಠಡಿಗಳನ್ನು ಸಹ ಸಕ್ರಿಯಗೊಳಿಸಲಾಗಿದ್ದು, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಸಾಕಷ್ಟು ಶೆಲ್ಟರ್‌ಗಳನ್ನು ನಿರ್ಮಿಸಲಾಗಿದ್ದು, ವಿದ್ಯುತ್ ಸರಬರಾಜು, ಔಷಧ ಮತ್ತು ತುರ್ತು ಸೇವೆಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ ಎಂದು ಅವರು ಹೇಳಿದರು. 

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) 12 ತಂಡಗಳನ್ನು ನಿಯೋಜಿಸಿದ್ದು, 5 ಹೆಚ್ಚುವರಿ ತಂಡಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿದೆ. ಸೇನೆ, ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್‌ನ ರಕ್ಷಣಾ ಮತ್ತು ಪರಿಹಾರ ತಂಡಗಳು, ಹಡಗುಗಳು ಮತ್ತು ವಿಮಾನಗಳೊಂದಿಗೆ ಸನ್ನದ್ಧವಾಗಿ ಇರಿಸಲಾಗಿದೆ. ಡಿಜಿ, ಶಿಪ್ಪಿಂಗ್ ಅವರಿಂದ ನಿಯಮಿತವಾಗಿ ಎಚ್ಚರಿಕೆ ಮತ್ತು ಸಲಹೆಗಳನ್ನು ಕೋಲ್ಕತ್ತಾ ಮತ್ತು ಪಾರಾದೀಪ್ ಬಂದರುಗಳಿಗೆ ಕಳುಹಿಸಲಾಗುತ್ತಿದೆ. ತ್ವರಿತವಾಗಿ ವಿದ್ಯುತ್ ಮರುಸ್ಥಾಪನೆಗಾಗಿ M/o ಪವರ್‌ನಿಂದ ತುರ್ತು ತಂಡಗಳನ್ನು ನಿಯೋಜಿಸಲಾಗಿದೆ.

ಕೇಂದ್ರೀಯ ಏಜೆನ್ಸಿಗಳು ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಸನ್ನದ್ಧತೆಯ ಕ್ರಮಗಳನ್ನು ಪರಿಶೀಲಿಸಿದ ಸಂಪುಟ ಕಾರ್ಯದರ್ಶಿಗಳು, ರಾಜ್ಯ ಸರ್ಕಾರ ಮತ್ತು ಕೇಂದ್ರ ಏಜೆನ್ಸಿಗಳು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಿದರು. ಯಾವುದೇ ಜೀವಹಾನಿಯಾಗದಂತೆ ಮತ್ತು ಜನರ ಆಸ್ತಿ ಮತ್ತು ಮೂಲಸೌಕರ್ಯಗಳಾದ ವಿದ್ಯುತ್ ಮತ್ತು ಟೆಲಿಕಾಂಗಳಿಗೆ ಇಂತಹ ಸಂದರ್ಭಗಳಲ್ಲಿ ಆಗುವ ಹಾನಿಯನ್ನು ಕಡಿಮೆ ಮಾಡುವುದು ನಿಮ್ಮ ಗುರಿಯಾಗಿರಬೇಕು ಎಂದು ಅವರು ಹೇಳಿದರು. ಅಗತ್ಯ ಸೇವೆಗಳಿಗೆ ಹಾನಿ ಸಂಭವಿಸಿದ ಸಂದರ್ಭದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಅವುಗಳನ್ನು ಮರುಸ್ಥಾಪಿಸಬೇಕೆಂದು ಅವರು ಸೂಚಿಸಿದರು. 

ಸಮುದ್ರದಲ್ಲಿರುವ ಮೀನುಗಾರರನ್ನು ಹಿಂದಕ್ಕೆ ಕರೆಸಿಕೊಳ್ಳುವುದನ್ನು ಮತ್ತು ಅಪಾಯಕಾರಿ ಪ್ರದೇಶಗಳಿಂದ ಜನರನ್ನು ಸಮಯಕ್ಕೆ ಸರಿಯಾಗಿ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕ್ಯಾಬಿನೆಟ್ ಕಾರ್ಯದರ್ಶಿ ಹೇಳಿದರು. ಸೈಕ್ಲೋನಿಕ್ ಚಂಡಮಾರುತದಿಂದ ಪ್ರಭಾವಿತವಾಗಲಿರುವ ಪ್ರದೇಶಗಳಲ್ಲಿ ದೊಡ್ಡದಾದ ಎಚ್ಚರಿಕೆ ಫಲಕಗಳನ್ನು ಹಾಕುವುದನ್ನು ಖಚಿತಪಡಿಸಿಕೊಳ್ಳುವಂತೆ ಅವರು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹೇಳಿದರು. ಕೇಂದ್ರೀಯ ಏಜೆನ್ಸಿಗಳು ಚಂಡಮಾರುತವನ್ನು ಎದುರಿಸಲು ಸಂಪೂರ್ಣ ಸಜ್ಜಾಗಿದ್ದು, ಸಹಾಯಕ್ಕಾಗಿ ಯಾವಾಗಲೂ ಲಭ್ಯವಿರುತ್ತವೆ ಎಂದು ಕ್ಯಾಬಿನೆಟ್ ಕಾರ್ಯದರ್ಶಿ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಭರವಸೆ ನೀಡಿದರು.

ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಕೇಂದ್ರ ಗೃಹ ಕಾರ್ಯದರ್ಶಿ, ಪವರ್, ಟೆಲಿಕಾಂ, ಬಂದರು ಶಿಪ್ಪಿಂಗ್ ಮತ್ತು ಜಲಮಾರ್ಗಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಮೀನುಗಾರಿಕೆ ಇಲಾಖೆಗಳ ಕಾರ್ಯದರ್ಶಿಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಸಮಗ್ರ ರಕ್ಷಣಾ ಸಿಬ್ಬಂದಿ , ಚೇರಮನ್ ಚೀಫ್ಸ್ ಆಫ್ ಸ್ಟಾಫ್ ಕಮಿಟಿ (CISC), ಭಾರತೀಯ ಹವಾಮಾನ ಇಲಾಖೆ, ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್, ಕೋಸ್ಟ್ ಗಾರ್ಡ್ ಗಳ ಮಹಾ ನಿರ್ದೇಶಕರುಗಳು  ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

*****



(Release ID: 2021624) Visitor Counter : 18