ಪ್ರಧಾನ ಮಂತ್ರಿಯವರ ಕಛೇರಿ

ಗ್ರೀಸ್ ನ ಪ್ರಧಾನಮಂತ್ರಿಯವರ ಭಾರತ ಭೇಟಿಯ (ಫೆಬ್ರವರಿ 21, 2024) ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ

Posted On: 21 FEB 2024 3:18PM by PIB Bengaluru

ಘನತೆವೆತ್ತ ಪ್ರಧಾನಮಂತ್ರಿ ಶ್ರೀ ಮಿತ್ಸೋಟಾಕಿಸ್ ರವರೇ,

ಎರಡೂ ದೇಶಗಳ ಪ್ರತಿನಿಧಿಗಳೇ,

ಮಾಧ್ಯಮ ಮಿತ್ರರೇ,

ನಮಸ್ಕಾರಗಳು!

ಪ್ರಧಾನಮಂತ್ರಿ ಶ್ರೀ ಮಿತ್ಸೋಟಾಕಿಸ್ ಮತ್ತು ಅವರ ಪ್ರತಿನಿಧಿ ನಿಯೋಗವನ್ನು ಭಾರತಕ್ಕೆ ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗಿದೆ. ಕಳೆದ ವರ್ಷ ನಾನು ಗ್ರೀಸ್ ದೇಶಕ್ಕೆ ಭೇಟಿ ನೀಡಿದ ನಂತರ, ಅವರ ಭಾರತ ಭೇಟಿಯು ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಸಂಕೇತವಾಗಿದೆ, ಮತ್ತು ಹದಿನಾರು ವರ್ಷಗಳ ಸುದೀರ್ಘ ಅಂತರದ ನಂತರ ಗ್ರೀಸ್ ಪ್ರಧಾನಮಂತ್ರಿಯೊಬ್ಬರು ಭಾರತಕ್ಕೆ ಬರುತ್ತಿರುವುದು, ಒಂದು ಐತಿಹಾಸಿಕ ಸಂದರ್ಭವಾಗಿದೆ.

ಸ್ನೇಹಿತರೇ,

ಇಂದು ನಮ್ಮ ಚರ್ಚೆಗಳು ಬಹಳ ಮಹತ್ವಪೂರ್ಣ ಮತ್ತು ಉಪಯುಕ್ತವಾಗಿವೆ. 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯತ್ತ ನಾವು ದಾಪುಗಾಲಿಟ್ಟು ವೇಗವಾಗಿ ಚಲಿಸುತ್ತಿರುವುದು ಸಂತೋಷದ ವಿಷಯವಾಗಿದೆ. ನಮ್ಮ ಸಹಕಾರಕ್ಕೆ ಹೊಸ ಶಕ್ತಿ ಮತ್ತು ನಿರ್ದೇಶನವನ್ನು ನೀಡಲು ನಾವು ಹಲವಾರು ಹೊಸ ಅವಕಾಶಗಳನ್ನು ಗುರುತಿಸಿದ್ದೇವೆ. ಕೃಷಿ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವೆ ನಿಕಟ ಸಹಕಾರಕ್ಕೆ ಹಲವು ಸಾಧ್ಯತೆಗಳಿವೆ. ಮತ್ತು ಕಳೆದ ವರ್ಷ ಈ ಪ್ರದೇಶದಲ್ಲಿ ಮಾಡಿಕೊಂಡ ಒಪ್ಪಂದಗಳನ್ನು ಕಾರ್ಯಗತಗೊಳಿಸಲು ಎರಡೂ ಕಡೆಯವರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ನನಗೆ ಬಹಳ ಸಂತೋಷ ವಿಷಯವಾಗಿದೆ. ಫಾರ್ಮಾ, ವೈದ್ಯಕೀಯ ಸಾಧನಗಳು, ತಂತ್ರಜ್ಞಾನ, ನಾವೀನ್ಯತೆ, ಕೌಶಲ್ಯ ಅಭಿವೃದ್ಧಿ ಮತ್ತು ಬಾಹ್ಯಾಕಾಶದಂತಹ ಹಲವು ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ನಾವು ಒತ್ತು ನೀಡಿದ್ದೇವೆ.

ಎರಡೂ ದೇಶಗಳ ಸ್ಟಾರ್ಟ್ಅಪ್ ಗಳನ್ನು ಸಂಪರ್ಕಿಸುವ ಬಗ್ಗೆಯೂ ನಾವು ಚರ್ಚಿಸಿದ್ದೇವೆ. ಶಿಪ್ಪಿಂಗ್ ಮತ್ತು ಸಂಪರ್ಕವು ಎರಡೂ ದೇಶಗಳಿಗೆ ಹೆಚ್ಚಿನ ಆದ್ಯತೆಯ ವಿಷಯವಾಗಿದೆ. ಈ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಬಗ್ಗೆಯೂ ನಾವು ಚರ್ಚಿಸಿದ್ದೇವೆ.

ಸ್ನೇಹಿತರೇ,

ರಕ್ಷಣೆ ಮತ್ತು ಭದ್ರತೆಯಲ್ಲಿ ಬೆಳೆಯುತ್ತಿರುವ ಸಹಕಾರವು ನಮ್ಮ ಆಳವಾದ ಪರಸ್ಪರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಈ ಪ್ರದೇಶದಲ್ಲಿ ಕ್ರಿಯಾ ತಂಡ(ವರ್ಕಿಂಗ್ ಗ್ರೂಪ್) ರಚನೆಯೊಂದಿಗೆ, ರಕ್ಷಣೆ, ಸೈಬರ್ ಭದ್ರತೆ, ಭಯೋತ್ಪಾದನೆ ನಿಗ್ರಹ ಮತ್ತು ಕಡಲ ಭದ್ರತೆಯಂತಹ ಸಾಮಾನ್ಯ ಸವಾಲುಗಳ ಮೇಲೆ ನಾವು ಪರಸ್ಪರ ಸಮನ್ವಯವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಭಾರತದಲ್ಲಿ ರಕ್ಷಣಾ ಉತ್ಪಾದನೆಯಲ್ಲಿ ಸಹ-ಉತ್ಪಾದನೆ ಮತ್ತು ಸಹ-ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ, ಇದು ಎರಡೂ ದೇಶಗಳಿಗೆ ಪ್ರಯೋಜನಕಾರಿಯಾಗಿದೆ. ಎರಡೂ ದೇಶಗಳ ರಕ್ಷಣಾ ಉದ್ಯಮಗಳನ್ನು ಜೋಡಿಸಲು ನಾವು ಒಪ್ಪಿಕೊಂಡಿದ್ದೇವೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಗ್ರೀಸ್ ಸಾಮಾನ್ಯ ಕಾಳಜಿ ಮತ್ತು ಆದ್ಯತೆಗಳನ್ನು ಹೊಂದಿವೆ. ಈ ಪ್ರದೇಶದಲ್ಲಿ ನಮ್ಮ ಸಹಕಾರವನ್ನು ಇನ್ನಷ್ಟು ಬಲಪಡಿಸುವುದು ಹೇಗೆ ಎಂದು ನಾವು ವಿವರವಾಗಿ ಚರ್ಚಿಸಿದ್ದೇವೆ.

ಸ್ನೇಹಿತರೇ,

ಎರಡು ಪ್ರಾಚೀನ ಮತ್ತು ಶ್ರೇಷ್ಠ ನಾಗರಿಕತೆಗಳಾಗಿ, ಭಾರತ ಮತ್ತು ಗ್ರೀಸ್ ಆಳವಾದ ಸಾಂಸ್ಕೃತಿಕ ಮತ್ತು ಜನರ-ಜನರ ನಡುವಿನ ಪರಸ್ಪರ ಸಂಬಂಧಗಳ ಸುದೀರ್ಘ ಇತಿಹಾಸವನ್ನು ಹೊಂದಿವೆ. ಸುಮಾರು ಎರಡೂವರೆ ಸಾವಿರ ವರ್ಷಗಳಿಂದ ಎರಡೂ ದೇಶಗಳ ಜನರು ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಬಂಧಗಳ ಜೊತೆಗೆ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ.

ಇಂದು ನಾವು ಈ ಸಂಬಂಧಗಳಿಗೆ ಆಧುನಿಕ ರೂಪ ನೀಡಲು ಹಲವಾರು ಹೊಸ ಉಪಕ್ರಮಗಳನ್ನು ಗುರುತಿಸಿದ್ದೇವೆ. ಎರಡು ದೇಶಗಳ ನಡುವಿನ ವಲಸೆ ಮತ್ತು ಚಲನಶೀಲ ಪಾಲುದಾರಿಕೆ ಒಪ್ಪಂದಗಳಿಗೆ ಆದಷ್ಟು ಬೇಗನೆ ಮೂರ್ತರೂಪಕೊಡಲು ನಾವು ಚರ್ಚಿಸಿದ್ದೇವೆ. ಇದು ನಮ್ಮ ಜನ-ಜನರ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ.

ಉಭಯ ದೇಶಗಳ ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ಸಹಕಾರವನ್ನು ಉತ್ತೇಜಿಸಲು ನಾವು ಒತ್ತು ನೀಡಿದ್ದೇವೆ. ಮುಂದಿನ ವರ್ಷ ಭಾರತ ಮತ್ತು ಗ್ರೀಸ್ ನಡುವಿನ ರಾಜತಾಂತ್ರಿಕ ಸಂಬಂಧಗಳ 75 ನೇ ವಾರ್ಷಿಕೋತ್ಸವವನ್ನು ಆಚರಿಸಲು ನಾವು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ನಿರ್ಧರಿಸಿದ್ದೇವೆ. ಇದರೊಂದಿಗೆ, ಜಾಗತಿಕ ವೇದಿಕೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ನಾವೀನ್ಯತೆ, ಕ್ರೀಡೆ ಮತ್ತು ಇತರ ಕ್ಷೇತ್ರಗಳಲ್ಲಿ ಎರಡೂ ದೇಶಗಳ ಸಾಮಾನ್ಯ ಪರಂಪರೆ ಮತ್ತು ಸಾಧನೆಗಳನ್ನು ಪ್ರದರ್ಶಿಸಲು ನಮಗೆ ಸಾಧ್ಯವಾಗುತ್ತದೆ.

ಸ್ನೇಹಿತರೇ,

ಇಂದಿನ ಸಭೆಯಲ್ಲಿ ನಾವು ಅನೇಕ ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ವಿಷಯಗಳ ಬಗ್ಗೆಯೂ ಚರ್ಚಿಸಿದ್ದೇವೆ. ಎಲ್ಲಾ ವಿವಾದಗಳು ಮತ್ತು ಉದ್ವಿಗ್ನತೆಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕೆಂದು ನಾವು ಎರಡೂ ದೇಶಗಳು ಒಪ್ಪಿಕೊಳ್ಳುತ್ತಿದ್ದೇವೆ. ಇಂಡೋ-ಪೆಸಿಫಿಕ್ನಲ್ಲಿ ಗ್ರೀಸ್ ನ ಸಕ್ರಿಯ ಭಾಗವಹಿಸುವಿಕೆ ಮತ್ತು ಸಕಾರಾತ್ಮಕ ಪಾತ್ರವನ್ನು ನಾವು ಸ್ವಾಗತಿಸುತ್ತೇವೆ. ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮಕ್ಕೆ ಗ್ರೀಸ್ ಸೇರಲು ನಿರ್ಧರಿಸಿರುವುದು ಸಂತಸದ ವಿಷಯ. ಪೂರ್ವ ಮೆಡಿಟರೇನಿಯನ್ ಪ್ರದೇಶದಲ್ಲಿ ಸಹಕಾರಕ್ಕಾಗಿ ಸಹ ಒಪ್ಪಂದವಿದೆ. ಭಾರತದ ಜಿ-20 ಅಧ್ಯಕ್ಷೀಯ ಅವಧಿಯಲ್ಲಿ ಪ್ರಾರಂಭಿಸಲಾದ  ಐಎಂಇಸಿ ಕಾರಿಡಾರ್ ಪೂರ್ಣಗೊಂಡಾಗ, ದೀರ್ಘಾವಧಿಯಲ್ಲಿ ಮಾನವೀಯತೆಯ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತದೆ.

ಈ ಉಪಕ್ರಮದಲ್ಲಿ ಗ್ರೀಸ್ ದೇಶ ಕೂಡ ಪ್ರಮುಖ ಪಾಲುದಾರರಾಗಬಹುದು. ವಿಶ್ವಧಸಂಸ್ಥೆ ಮತ್ತು ಇತರ ಜಾಗತಿಕ ಸಂಸ್ಥೆಗಳನ್ನು ಸಕಾಲಿಕವಾಗಿ ಸುಧಾರಿಸಲು ನಾವು ಒಪ್ಪುತ್ತೇವೆ ಇದರಿಂದ ಅವುಗಳನ್ನು ಸಮಕಾಲೀನಗೊಳಿಸಬಹುದು. ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡಲು ಭಾರತ ಮತ್ತು ಗ್ರೀಸ್ ತಮ್ಮ ಪ್ರಯತ್ನಗಳನ್ನು ಮುಂದುವರೆಸುತ್ತವೆ.

ಘನತೆವೆತ್ತವರೇ,

ಇಂದು ಸಂಜೆ ನಡೆಯುವ ರೈಸಿನಾ ಸಂವಾದದಲ್ಲಿ ಮುಖ್ಯ ಅತಿಥಿಯಾಗಿ ತಾವು ಭಾಗವಹಿಸುವಿರಿ. ಅಲ್ಲಿ ನಿಮ್ಮ ಭಾಷಣವನ್ನು ಆಲಿಸಲು ನಾವೆಲ್ಲರೂ ಉತ್ಸುಕರಾಗಿದ್ದೇವೆ. ನಿಮ್ಮ ಈ ಭಾರತ ಭೇಟಿ ಮತ್ತು ನಮ್ಮ ಈ ಫಲಪ್ರದ ಚರ್ಚೆಗಾಗಿ ನಾವು ನಿಮಗೆ ತುಂಬಾ ಧನ್ಯವಾದಗಳನ್ನು ಹೇಳುತ್ತೇವೆ.

 ಹಕ್ಕು ನಿರಾಕರಣೆ - ಇದು ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆಯ ಅಂದಾಜು ಕನ್ನಡ ಅನುವಾದವಾಗಿದೆ. ಮೂಲ ಪತ್ರಿಕಾ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಗಿದೆ.

*****

 
 



(Release ID: 2008387) Visitor Counter : 50