ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

​​​​​​​ಬೀಚ್ ಗೇಮ್ಸ್ 2024, ದಿಯು


ದಿಯುನಲ್ಲಿ ನಡೆದ ಮೊಟ್ಟ ಮೊದಲ ಬೀಚ್ ಕ್ರೀಡಾಕೂಟದಲ್ಲಿ ಮಧ್ಯಪ್ರದೇಶ ಸಮಗ್ರ ಚಾಂಪಿಯನ್

ಬಲಿಷ್ಠ ಮಹಾರಾಷ್ಟ್ರವನ್ನು ಮಣಿಸಿ ಬೀಚ್ ಸಾಕರ್ (ಫುಟ್ಬಾಲ್)  ಚಿನ್ನ ಗೆದ್ದು ಅಚ್ಚರಿ ಮೂಡಿಸಿದ  ಪುಟ್ಟ ಲಕ್ಷದ್ವೀಪ

ದಿಯು ಬೀಚ್ ಕ್ರೀಡಾಕೂಟದ ಯಶಸ್ವಿ ನಿರ್ವಹಣೆಯು ರೋಮಾಂಚಕ ಸಮುದ್ರ ಕ್ರೀಡಾಕೂಟಗಳಿಗೆ ಅಡಿಪಾಯ ಹಾಕಿದೆ - ಅನುರಾಗ್ ಠಾಕೂರ್

Posted On: 13 JAN 2024 12:04PM by PIB Bengaluru

ದಿಯುವಿನ ಬ್ಲೂ ಫ್ಲಾಗ್   ಪ್ರಮಾಣೀಕೃತ ಘೋಘ್ಲಾ ಬೀಚಿನಲ್ಲಿ ಆಯೋಜಿಸಲಾದ ಭಾರತದ ಮೊದಲ ಬಹು-ಕ್ರೀಡಾ ಸ್ಪರ್ಧೆಗಳ  ಬೀಚ್ ಕ್ರೀಡಾಕೂಟವಾದ ಬೀಚ್ ಗೇಮ್ಸ್ 2024 ರಲ್ಲಿ, ಮಧ್ಯಪ್ರದೇಶವು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು, 7 ಚಿನ್ನ ಸೇರಿದಂತೆ ಒಟ್ಟು 18 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅದು ಅಗ್ರಸ್ಥಾನಿಯಾಯಿತು. ಈ ಗಮನಾರ್ಹ ಸಾಧನೆಯು ಮಧ್ಯಪ್ರದೇಶ ತಂಡದ ಕ್ರೀಡಾ ಪರಾಕ್ರಮವನ್ನು ಸಾಬೀತು ಮಾಡಿತಲ್ಲದೆ , ರಾಜ್ಯದಲ್ಲಿ ಪೋಷಿಸಲಾದ  ಪ್ರತಿಭೆಯ ಗುಣಮಟ್ಟದ ಆಳ- ಅಗಲವನ್ನೂ ಎತ್ತಿ ತೋರಿಸಿತು.

ಮಹಾರಾಷ್ಟ್ರ 3 ಚಿನ್ನ ಸೇರಿದಂತೆ 14 ಪದಕಗಳನ್ನು ಗೆದ್ದರೆ, ತಮಿಳುನಾಡು, ಉತ್ತರಾಖಂಡ ಮತ್ತು ಆತಿಥೇಯ ದಾದ್ರಾ, ನಗರ್ ಹವೇಲಿ, ದಿಯು ಮತ್ತು ದಮನ್ ತಲಾ 12 ಪದಕಗಳನ್ನು ಗೆದ್ದವು.  ಅಸ್ಸಾಂ 8 ಪದಕಗಳನ್ನು ಗೆದ್ದಿದೆ, ಅದರಲ್ಲಿ 5 ಚಿನ್ನ.

ಕ್ರೀಡಾಕೂಟದ ರೋಮಾಂಚಕ ಕ್ಷಣಗಳಲ್ಲಿ, ಲಕ್ಷದ್ವೀಪವು ಬೀಚ್ ಸಾಕರ್ನಲ್ಲಿ (ಬೀಚ್ ಕಾಲ್ಚೆಂಡಾಟ) ಚಿನ್ನದ ಪದಕವನ್ನು ಗಳಿಸಿತು, ಇದು ಆಧುನಿಕತೆಯಿಂದ ಕಲುಶಿತವಾಗದ ಈ ದ್ವೀಪ ಪ್ರದೇಶದ ಐತಿಹಾಸಿಕ ಸಾಧನೆಯನ್ನು ಸೂಚಿಸುತ್ತದೆ.  ಅಂತಿಮ ಪಂದ್ಯದಲ್ಲಿ  ಅವರು ಮಹಾರಾಷ್ಟ್ರವನ್ನು 5-4 ಗೋಲುಗಳಿಂದ ಸೋಲಿಸಿದರು.  ಲಕ್ಷದ್ವೀಪದ ಗೆಲುವು ಪದಕ ವಿಜೇತರ ವೈವಿಧ್ಯತೆಯನ್ನು ಹೆಚ್ಚಿಸಿದ್ದಲ್ಲದೆ, ದಿಯು ಬೀಚ್ ಗೇಮ್ಸ್ 2024 ರ ಎಲ್ಲರನ್ನೂ ಒಳಗೊಳ್ಳುವ ಮತ್ತು ಅದರ  ರಾಷ್ಟ್ರವ್ಯಾಪಿ ಪರಿಣಾಮವನ್ನು ಒತ್ತಿಹೇಳಿತು.

ಜನವರಿ 4 ರಿಂದ 11 ರವರೆಗೆ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 21 ವರ್ಷಕ್ಕಿಂತ ಕೆಳಗಿನ  ವಯಸ್ಸಿನ 1404 ಕ್ರೀಡಾಪಟುಗಳು, 205 ಪಂದ್ಯ ಅಧಿಕಾರಿಗಳ ಬೆಂಬಲದೊಂದಿಗೆ ವಿವಿಧ ಕ್ರೀಡಾ ಶಿಸ್ತುಗಳ ವಿಭಾಗಗಳಲ್ಲಿ ಭಾಗವಹಿಸಿದ್ದರು. 

ಕ್ರೀಡೆಗಳನ್ನು  ಪ್ರತಿದಿನ 2 ಅಧಿವೇಶನಗಳಾಗಿ (ಸೆಷನ್ ಗಳಾಗಿ)  ರೂಪಿಸಲಾಗಿತ್ತು . ಬೆಳಿಗ್ಗೆಯ  ಅಧಿವೇಶನವು ಬೆಳಿಗ್ಗೆ 8 ರಿಂದ ಪ್ರಾರಂಭವಾಗಿ ಮಧ್ಯಾಹ್ನ ಕೊನೆಗೊಳ್ಳುತ್ತದೆ, ನಂತರ ಮಧ್ಯಾಹ್ನದ ಅಧಿವೇಶನವು ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗುತ್ತದೆ. ಈ ವೇಳಾಪಟ್ಟಿಯು ಸೂಕ್ತ ಹವಾಮಾನ ಪರಿಸ್ಥಿತಿಗಳಲ್ಲಿ ಕ್ರೀಡಾಪಟುಗಳ ಸಾಧನೆಯನ್ನು  ಉತ್ತಮಗೊಳಿಸುವುದಲ್ಲದೆ, ಉತ್ಸಾಹಿ ಪ್ರೇಕ್ಷಕರಿಗೆ ಕ್ರಿಯಾತ್ಮಕ ಮತ್ತು ಆಕರ್ಷಕ ವೀಕ್ಷಣೆಯ ಅನುಭವಕ್ಕೆ ಅವಕಾಶ ಮಾಡಿಕೊಟ್ಟಿತು.

ಹಗ್ಗಜಗ್ಗಾಟದ ವ್ಯೂಹಾತ್ಮಕ ಮುಖಾಮುಖಿಗಳಿಂದ ಹಿಡಿದು ಸಮುದ್ರ ಈಜು ಸಾಹಸಗಳು, ಪೆಂಕಾಕ್ ಸಿಲಾಟ್ (ಸಮರ ತಂತ್ರದ ಕ್ರೀಡೆ) ನ ಸಮರ ಕಲಾತ್ಮಕತೆ, ಮಲ್ಲಕಂಬದ ಚಮತ್ಕಾರಿಕ ಪ್ರದರ್ಶನಗಳು, ಬೀಚ್ ವಾಲಿಬಾಲ್ ಪ್ರಚಂಡ ವೇಗದ ಕ್ರಿಯೆ, ಬೀಚ್ ಕಬಡ್ಡಿಯ ಕಾರ್ಯತಂತ್ರದ ಕದನಗಳು ಮತ್ತು ಬೀಚ್ ಸಾಕರ್ ನ ರೋಮಾಂಚಕ ಕಿಕ್ ಗಳು ಮತ್ತು ಗೋಲುಗಳವರೆಗೆ, ಪ್ರತಿಯೊಂದು ಕ್ರೀಡೆಯು ಈ ಕಾರ್ಯಕ್ರಮಕ್ಕೆ ತನ್ನದೇ ಆದ ವಿಶಿಷ್ಟ ಶಕ್ತಿಯನ್ನು, ಮೆರುಗನ್ನು  ತುಂಬಿತು. ಚೊಚ್ಚಲ ಬೀಚ್ ಬಾಕ್ಸಿಂಗ್ ಉತ್ಸಾಹಕ್ಕೆ, ರೋಮಾಂಚಕತೆಗೆ  ಹೆಚ್ಚುವರಿ ಶಕ್ತಿಯನ್ನು ತುಂಬಿ  ಭಾಗವಹಿಸುವವರು ಮತ್ತು ಪ್ರೇಕ್ಷಕರನ್ನು ಆಕರ್ಷಿಸಿತು.  ಇದು ರಾಷ್ಟ್ರದ ಅಥ್ಲೆಟಿಕ್ ಪ್ರಯಾಣದಲ್ಲಿ ಐತಿಹಾಸಿಕ ಕ್ಷಣವನ್ನು ದಾಖಲಿಸಿತು.

ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಈ ಕಾರ್ಯಕ್ರಮಕ್ಕೆ ತಮ್ಮ ಬೆಂಬಲ ಮತ್ತು ಉತ್ಸಾಹವನ್ನು ವ್ಯಕ್ತಪಡಿಸಲು ಎಕ್ಸ್ (ಹಿಂದೆ ಟ್ವಿಟರ್) ನ್ನು ಬಳಸಿದರು. "ಕ್ರೀಡಾಪಟುಗಳ ಶಕ್ತಿ ಮತ್ತು ದಿಯುವಿನ ಸೌಂದರ್ಯವು ಹಿಂದೆಂದೂ ಕಾಣದ ಜಾಲವನ್ನು  ಹೆಣೆದಿದೆ, ಅದು ಮೋಡಿ ಮಾಡುತ್ತದೆ ಮತ್ತು ಉಲ್ಲಾಸಕರವಾಗಿದೆ" ಎಂದು ಅವರು ತಮ್ಮ ಪೋಸ್ಟ್ ಗೆ  ಶೀರ್ಷಿಕೆ ನೀಡಿದ್ದಾರೆ.  ದಿಯುನಲ್ಲಿ ಮೊಟ್ಟಮೊದಲ ಬೀಚ್ ಕ್ರೀಡಾಕೂಟವನ್ನು ಆಯೋಜಿಸುವುದರೊಂದಿಗೆ ಭಾರತದ ಕಡಲತೀರಗಳಿಗೆ ಹೊಸ ಕಳೆಯನ್ನು ತರುವ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಗೆ ಈಗ ಕ್ರೀಡಾ ತಿರುವು ಲಭಿಸಿದೆ ಎಂದು ಅವರು ಹೇಳಿದ್ದಾರೆ.

ಭಾರತವು ಭೌಗೋಳಿಕವಾಗಿ ವಿಶ್ವದಲ್ಲೇ ಅತ್ಯಂತ  ಸುಂದರವಾದ ಕೆಲವು ಕಡಲತೀರಗಳನ್ನು ಹೊಂದಿದೆ.  ಭಾರತದಲ್ಲಿ  ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸ್ವಚ್ಛ ಕಡಲತೀರಗಳೆಂದು  12 ಕಡಲ ತೀರಗಳಿಗೆ (ಬೀಚ್ ಗಳಿಗೆ) ಬ್ಲೂ ಫ್ಲ್ಯಾಗ್ ಪ್ರಮಾಣಪತ್ರವನ್ನು ನೀಡಲಾಗಿದೆ.  ಆದಾಗ್ಯೂ, ದೇಶದ ಅನೇಕ ಕಡಲತೀರಗಳು ಅವುಗಳಿಗೆ ಲಭಿಸಬೇಕಾದಷ್ಟು ಪ್ರಾಮುಖ್ಯತೆ ಲಭಿಸದೆ ಅಜ್ಞಾತವಾಗುಳಿದಿವೆ.  ಆದ್ದರಿಂದ ದಿಯು ಬೀಚ್ ಕ್ರೀಡಾಕೂಟದ ಯಶಸ್ವಿ ಸಂಘಟನೆ ಮತ್ತು ಆತಿಥ್ಯವು ಒಂದು ಹೃದಯಸ್ಪರ್ಶಿ ಸುದ್ದಿಯಾಗಿದೆ.

ಬೀಚ್ ಗೇಮ್ಸ್ 2024 ದಿಯು ಇದರ  ಚಿತ್ರಗಳು

***



(Release ID: 1995870) Visitor Counter : 89