ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಜನವರಿ 8-10ರವರೆಗೆ ಗುಜರಾತ್‌ಗೆ ಪ್ರಧಾನ ಮಂತ್ರಿಗಳ ಭೇಟಿ


ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯ 10ನೇ ಆವೃತ್ತಿಯನ್ನು ಉದ್ಘಾಟಿಸಲಿರುವ ಪ್ರಧಾನ ಮಂತ್ರಿಗಳು

ಶೃಂಗಸಭೆಯ ಧ್ಯೇಯವಾಕ್ಯ: ಭವಿಷ್ಯಕ್ಕೆ ರಹದಾರಿ (ಗೇಟ್‌ ವೇ ಟು ದಿ ಫ್ಯೂಚರ್)

ವೈಬ್ರೆಂಟ್ ಗುಜರಾತ್ ಜಾಗತಿಕ ವ್ಯಾಪಾರ ಪ್ರದರ್ಶನಕ್ಕೂ ಚಾಲನೆ ನೀಡಲಿರುವ ಪ್ರಧಾನ ಮಂತ್ರಿಗಳು

ಜಾಗತಿಕ ಮಟ್ಟದ ಪ್ರತಿಷ್ಠಿತ ಕಂಪನಿಗಳ ಸಿಇಒಗಳೊಂದಿಗೆ ಸಭೆ ನಡೆಸಲಿರುವ ಪ್ರಧಾನ ಮಂತ್ರಿಗಳು

ಜಿಐಎಫ್‌ಟಿ ಸಿಟಿಯಲ್ಲಿ ನಡೆಯಲಿರುವ ಜಾಗತಿಕ ಆರ್ಥಿಕ ತಂತ್ರಜ್ಞಾನ ನಾಯಕತ್ವ ವೇದಿಕೆಯಲ್ಲಿ ಪ್ರತಿಷ್ಠಿತ ಉದ್ಯಮಿ ನಾಯಕರೊಂದಿಗೆ ಸಂವಾದ ನಡೆಸಲಿರುವ ಪ್ರಧಾನಮಂತ್ರಿಗಳು

Posted On: 07 JAN 2024 3:11PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಜನವರಿ 8-10 ರವರೆಗೆ ಗುಜರಾತ್‌ಗೆ ಭೇಟಿ ನೀಡಲಿದ್ದಾರೆ.

ಜನವರಿ 9ರಂದು ಸುಮಾರು ಬೆಳಗ್ಗೆ 9:30ಕ್ಕೆ ಗಾಂಧಿನಗರದ ಮಹಾತ್ಮ ಮಂದಿರಕ್ಕೆ ಆಗಮಿಸಲಿರುವ ಪ್ರಧಾನ ಮಂತ್ರಿಗಳು ಅಲ್ಲಿ ಜಾಗತಿಕ ನಾಯಕರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ನಂತರ ಪ್ರತಿಷ್ಠಿತ ಜಾಗತಿಕ ಕಂಪನಿಗಳ ಸಿಇಒಗಳೊಂದಿಗೆ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ "ವೈಬ್ರೆಂಟ್ ಗುಜರಾತ್ ಗ್ಲೋಬಲ್ ಟ್ರೇಡ್ ಶೋ" ಉದ್ಘಾಟಿಸಲಿದ್ದಾರೆ.

ಜನವರಿ 10ರಂದು, ಸುಮಾರು ಬೆಳಗ್ಗೆ 9:45ಕ್ಕೆ ಪ್ರಧಾನ ಮಂತ್ರಿಗಳು ಗಾಂಧಿನಗರದ ಮಹಾತ್ಮ ಮಂದಿರದಲ್ಲಿ "ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ 2024"ಅನ್ನು ಉದ್ಘಾಟಿಸಲಿದ್ದಾರೆ. ಆ ಬಳಿಕ ಅವರು ಪ್ರತಿಷ್ಠಿತ ಜಾಗತಿಕ ಕಂಪನಿಗಳ ಸಿಇಒಗಳೊಂದಿಗೆ ಸಭೆ ನಡೆಸಲಿದ್ದಾರೆ. ತರುವಾಯ ಪ್ರಧಾನಮಂತ್ರಿಗಳು ಜಿಐಎಫ್‌ಟಿ ಸಿಟಿ ಕಡೆಗೆ ಪ್ರಯಾಣ ಬೆಳೆಸಲಿದ್ದು, ಸಂಜೆ 5:15ರ ಸುಮಾರಿಗೆ ಅವರು ಜಾಗತಿಕ ಆರ್ಥಿಕ ತಂತ್ರಜ್ಞಾನ ನಾಯಕತ್ವ ವೇದಿಕೆಯಲ್ಲಿ (ಗ್ಲೋಬಲ್ ಫಿನ್‌ಟೆಕ್ ಲೀಡರ್‌ಶಿಪ್ ಫೋರಮ್‌)ನಲ್ಲಿ ಪ್ರತಿಷ್ಠಿತ ಉದ್ಯಮಿ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ.

2003ರಲ್ಲಿ ಮುಖ್ಯಮಂತ್ರಿಯಾಗಿದ್ದ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಪರಿಕಲ್ಪನೆಯಾಗಿ ಆರಂಭವಾದ "ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ" ಇಂದು ವ್ಯಾಪಾರ- ವ್ಯವಹಾರ ಸಹಭಾಗಿತ್ವ, ಜ್ಞಾನ ಹಂಚಿಕೆ ಮತ್ತು ಎಲ್ಲರನ್ನು ಒಳಗೊಂಡ ಬೆಳವಣಿಗೆ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ಕಾರ್ಯತಂತ್ರದ ಪಾಲುದಾರಿಕೆಗಾಗಿ ಅತ್ಯಂತ ಪ್ರತಿಷ್ಠಿತ ಜಾಗತಿಕ ವೇದಿಕೆಗಳಲ್ಲಿ ಒಂದಾಗಿ ವಿಕಸನಗೊಂಡಿದೆ. "ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ" ಹತ್ತನೇ ಆವೃತ್ತಿಯು 2024ರ ಜನವರಿ 10ರಿಂದ 12ರವರೆಗೆ ಗುಜರಾತ್‌ನ ಗಾಂಧಿನಗರದಲ್ಲಿ ಆಯೋಜನೆಯಾಗಿದೆ. ಈ ಬಾರಿ ಶೃಂಗಸಭೆಯ ಧ್ಯೇಯವಾಕ್ಯ "ಭವಿಷ್ಯಕ್ಕೆ ರಹದಾರಿ" (ಗೇಟ್‌ವೇ ಟು ದಿ ಫ್ಯೂಚರ್). ಶೃಂಗಸಭೆಯ ಈ ಹತ್ತನೇ ಆವೃತ್ತಿಯು "20 ವರ್ಷಗಳ ರೋಚಕ ಗುಜರಾತ್ ಅನ್ನು ಯಶಸ್ಸಿನ ಶೃಂಗಸಭೆಯಾಗಿ" ಆಚರಿಸಲಿದೆ.

ಈ ವರ್ಷದ ಶೃಂಗಸಭೆಯಲ್ಲಿ 34 ಪಾಲುದಾರ ರಾಷ್ಟ್ರಗಳು ಮತ್ತು 16 ಪಾಲುದಾರ ಸಂಸ್ಥೆಗಳಿವೆ. ಇದಲ್ಲದೆ, ಈಶಾನ್ಯ ವಲಯದ ಅಭಿವೃದ್ಧಿ ಸಚಿವಾಲಯವು ಈಶಾನ್ಯ ಪ್ರದೇಶಗಳಲ್ಲಿ ಹೂಡಿಕೆ ಅವಕಾಶಗಳನ್ನು ಪ್ರದರ್ಶಿಸಲು ವೈಬ್ರೆಂಟ್ ಗುಜರಾತ್ ವೇದಿಕೆಯನ್ನು ಬಳಸಿಕೊಳ್ಳಲಿದೆ.

ಶೃಂಗಸಭೆಯು ಉದ್ಯಮ 4.0, ತಂತ್ರಜ್ಞಾನ ಮತ್ತು ನಾವೀನ್ಯತೆ, ಸುಸ್ಥಿರ ಉತ್ಪಾದನೆ, ಹಸಿರು ಹೈಡ್ರೋಜನ್, ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರತೆಯತ್ತ ಪರಿವರ್ತನೆಯಂತಹ ಜಾಗತಿಕವಾಗಿ ಸಂಬಂಧಿತ ವಿಷಯಗಳ ಕುರಿತು ವಿಚಾರಸಂಕಿರಣಗಳು ಮತ್ತು ಸಮ್ಮೇಳನಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿದೆ.

ವೈಬ್ರೆಂಟ್ ಗುಜರಾತ್ ಗ್ಲೋಬಲ್ ಟ್ರೇಡ್ ಶೋನಲ್ಲಿ ಕಂಪನಿಗಳು ವಿಶ್ವದರ್ಜೆಯ ಅತ್ಯಾಧುನಿಕ ತಂತ್ರಜ್ಞಾನದಿಂದ ಉತ್ಪಾದಿಸಲಾದ ಉತ್ಪನ್ನಗಳನ್ನು ಪ್ರದರ್ಶಿಸಲಿವೆ. ಇ-ಮೊಬಿಲಿಟಿ, ಸ್ಟಾರ್ಟ್-ಅಪ್‌ಗಳು, ಎಂಎಸ್‌ಎಂಇಗಳು, ಬ್ಲೂ ಎಕಾನಮಿ, ಗ್ರೀನ್ ಎನರ್ಜಿ ಮತ್ತು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಟ್ರೇಡ್ ಶೋನ ಕೆಲವು ಕೇಂದ್ರೀಕೃತ ವಲಯಗಳಾಗಿವೆ.

****


(Release ID: 1993995) Visitor Counter : 120