ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಪಿಎಂ ಉಜ್ವಲ ಯೋಜನೆ: ಹೊಗೆ ಮುಕ್ತ ಅಡುಗೆ ಮನೆಗಳ ಕನಸನ್ನು ನನಸು ಮಾಡುತ್ತಿದೆ
ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಯೋಜನೆಯ ಸಕಾರಾತ್ಮಕ ಪರಿಣಾಮದ ಹಲವು ನೆನಪುಗಳ ವಿವರಣೆಗಳು
Posted On:
19 DEC 2023 12:49PM by PIB Bengaluru
ಪ್ರಸ್ತುತ ನಡೆಯುತ್ತಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ, ಹಲವಾರು ಮಹಿಳೆಯರು ಪಿಎಂ ಉಜ್ವಲ ಯೋಜನೆಯಡಿ ಅಡುಗೆ ಅನಿಲ (ಎಲ್ಪಿಜಿ ) ಸಿಲಿಂಡರ್ ಪಡೆದ ನಂತರ ತಮ್ಮ ಜೀವನದಲ್ಲಿ ಸಂಭವಿಸಿದ ಪರಿವರ್ತನೆಯನ್ನು ಹಂಚಿಕೊಂಡಿದ್ದಾರೆ. ಗಮನಾರ್ಹವಾದ ಸಂಗತಿ ಎಂದರೆ , ಎಲ್ಪಿಜಿ ಸಿಲಿಂಡರ್ ಲಭ್ಯವಾಗಿಸುವಂತಹ ಸರಳ ವಿಷಯವು ದೇಶಾದ್ಯಂತದ ಮಹಿಳೆಯರಿಗೆ ಅನೇಕ ಪ್ರಯೋಜನಗಳನ್ನು ತಂದಿದೆ. ಸಾಂಪ್ರದಾಯಿಕ ಚುಲ್ಹಾಗಳಲ್ಲಿ (ಒಲೆಗಳಲ್ಲಿ) ಅಡುಗೆಯ ಮಾಡುವಾಗ ಅದರ ಅವಿಭಾಜ್ಯ ಅಂಗದಂತಿದ್ದ ಅನಾರೋಗ್ಯಕರ ಹೊಗೆಯಿಂದ ಮುಕ್ತಿ ಪಡೆದ ಬಗ್ಗೆ ಕೆಲವರು ಸಂತೋಷ ವ್ಯಕ್ತಪಡಿಸುತ್ತಾರೆ, ಇನ್ನು ಕೆಲವರು ಉರುವಲು ಸಂಗ್ರಹಿಸಲು ಖರ್ಚು ಮಾಡಿದ ಸಮಯ ಮತ್ತು ಶ್ರಮದ ಉಳಿತಾಯವನ್ನು ಉಲ್ಲೇಖಿಸುತ್ತಾರೆ.
ಯಾತ್ರೆಯ ಒಂದು ತಿಂಗಳಲ್ಲಿಯೇ ಸುಮಾರು 3.77 ಲಕ್ಷ ಮಹಿಳೆಯರು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ, 2016 ರಲ್ಲಿ ಪ್ರಾರಂಭವಾದಾಗಿನಿಂದ ಈ ಯೋಜನೆಯಡಿ ಈಗಾಗಲೇ ಕೋಟಿಗಟ್ಟಲೆ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. ಯಾತ್ರೆಯ ಸಮಯದಲ್ಲಿ ಹಲವಾರು ಮಹಿಳೆಯರು ಹಂಚಿಕೊಂಡ ಅನುಭವಗಳನ್ನು ಗಮನಿಸಿದರೆ, ಪಿಎಂ ಉಜ್ವಲ ಯೋಜನೆ ನಿಜವಾಗಿಯೂ ಕೋಟ್ಯಂತರ ಮಹಿಳೆಯರಿಗೆ ಉತ್ತಮ ಗುಣಮಟ್ಟದ ಜೀವನವನ್ನು ಒದಗಿಸುವ ಗಮನಾರ್ಹ ಬದಲಾವಣೆಯನ್ನು ತರುವ “ಗೇಮ್ ಚೇಂಜರ್” ಆಗಿದೆ ಎಂದು ಖಚಿತವಾಗಿ ತೀರ್ಮಾನಿಸಬಹುದು. ಶಿಮಾ ಕುಮಾರಿ ಮತ್ತು ಬಚನ್ ದೇವಿ ಅವರ ಹೇಳಿಕೆಗಳನ್ನು ಈಗ ನಾವು ನೋಡೋಣ.
ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ನಿವಾಸಿಯಾದ ಸೀಮಾ ಕುಮಾರಿ ತನ್ನ ಅಡುಗೆಮನೆಯಲ್ಲಿ ಸಾಮಾನ್ಯ ಎಂಬಂತೆ ದೈನಂದಿನ ಸವಾಲುಗಳನ್ನು ಎದುರಿಸುತ್ತಿದ್ದರು. ಅನೇಕ ಭಾರತೀಯ ಕುಟುಂಬಗಳಂತೆ, ಶ್ರೀಮತಿ ಸೀಮಾ ಕುಮಾರಿ ಅವರು ಸಾಂಪ್ರದಾಯಿಕ ಅಡುಗೆ ಪದ್ಧತಿಗಳಿಗೆ ಬದ್ಧರಾಗಿದ್ದರು, ಅವರು ಪ್ರತಿದಿನ ಉರುವಲು ಸಂಗ್ರಹಿಸುವ ಅಗತ್ಯವಿತ್ತು. ಅವರು ಹೊಗೆಯಿಂದಾಗಿ ತಲೆನೋವಿನಿಂದ ಬಳಲುತ್ತಿದ್ದರು ಮತ್ತು ಈ ಸಾಂಪ್ರದಾಯಿಕ ಅಡುಗೆ ಅಭ್ಯಾಸಗಳನ್ನು ಅನುಸರಿಸಿ ಬಹಳಷ್ಟು ಗಂಭೀರ ತೊಂದರೆಗಳನ್ನು ಎದುರಿಸಿದರು. ಉರುವಲಿನಿಂದ ಅಡುಗೆ ಮಾಡುವುದು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಿತ್ತು. ಈ ಅವಿಶ್ರಾಂತ ದಿನಚರಿ ಅವರಿಗೆ ಕಷ್ಟಕರವೆಂದು ತೋರಿತು, ಹೊಗೆ ಮುಕ್ತ ಅಡುಗೆಮನೆಯ ಕನಸು ಅವರಿಗೆ ಬಹಳ ದೂರದ ಕನಸಿನಂತೆ ಭಾಸವಾಗಿತ್ತು.
ಆದರೆ 'ಪ್ರಧಾನ ಮಂತ್ರಿ ಉಜ್ವಲ ಯೋಜನೆ' ಮೂಲಕ ಸರ್ಕಾರದ ಸಕಾಲಿಕ ಮಧ್ಯಪ್ರವೇಶವು ಅವರ ಜೀವನವನ್ನು ಬದಲಾಯಿಸಿತು. ಎಲ್ಪಿಜಿ ಸಿಲಿಂಡರ್ ಪಡೆದ ನಂತರ, ಅವರ ಅಡುಗೆಮನೆಯು ಪರಿವರ್ತನಾಶೀಲ ಬದಲಾವಣೆಗೆ ಸಾಕ್ಷಿಯಾಯಿತು, ಹೊಗೆಯಿಂದ ಮುಕ್ತವಾಯಿತು ಮತ್ತು ತನ್ನ ಕುಟುಂಬಕ್ಕೆ ಸಲೀಸಾಗಿ ಆಹಾರವನ್ನು/ಊಟವನ್ನು ತಯಾರಿಸಲು ಅನುವು ಮಾಡಿಕೊಟ್ಟಿತು. ಎಲ್ಪಿಜಿ ಸಿಲಿಂಡರಿನೊಂದಿಗೆ, ಅವರು ಈಗ ತ್ವರಿತವಾಗಿ ಆಹಾರವನ್ನು/ಊಟವನ್ನು ತಯಾರಿಸಬಹುದು, ಸಮಯಕ್ಕೆ ಸರಿಯಾಗಿ ಮತ್ತು ತೊಂದರೆಯಿಲ್ಲದ ಅಡುಗೆಯನ್ನು ಮಾಡುವುದನ್ನು ಇದು ಖಾತ್ರಿಪಡಿಸಿತು. ಈ ಸೌಲಭ್ಯವು ಅವರ ಮಕ್ಕಳಿಗೆ ಊಟವನ್ನು ತಯಾರಿಸುವುದನ್ನು ಹೆಚ್ಚು ಸುಲಭಗೊಳಿಸಿದೆ. ಶಿಮಾ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಅಮೂಲ್ಯ ಉಪಕಾರಕ್ಕಾಗಿ ಅಪಾರ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ, ಏಕೆಂದರೆ ಇದು ಅವರ ಜೀವನವನ್ನು ಗಮನಾರ್ಹವಾಗಿ ಸುಧಾರಿಸಿದೆ.
ಅದೇ ರೀತಿ, ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಬಚನ್ ದೇವಿ ಇದೇ ರೀತಿಯ ಕಷ್ಟಗಳನ್ನು ಸಹಿಸಿಕೊಂಡು ಹೋರಾಟ ಮಾಡಿದವರು. ಉರುವಲು ಸಂಗ್ರಹಿಸುವುದು ಮತ್ತು ಆತುರಾತುರವಾಗಿ ಊಟವನ್ನು ತಯಾರಿಸುವುದು ಅವರ ದಿನಚರಿಯಾಗಿತ್ತು. ಇದು ಅವರಿಗೆ ಅಂತ್ಯವಿಲ್ಲದ ಸವಾಲಿನ ದಿನಚರಿ ಎಂಬಂತಾಗಿತ್ತು. ಈ ಕಷ್ಟಗಳಿಂದ ಹೊರಬರಲು ಯಾವುದೇ ಮಾರ್ಗವಿಲ್ಲ ಎಂದು ಶ್ರೀಮತಿ ಬಚನ್ ದೇವಿ ಭಾವಿಸುತ್ತಿರುವಾಗ, ಪಿಎಂ ಉಜ್ವಲ ಯೋಜನೆ ಅವರ ಜೀವನದಲ್ಲಿ ಅನಿರೀಕ್ಷಿತ ಸಕಾರಾತ್ಮಕ ಬದಲಾವಣೆಯನ್ನು ತಂದಿತು. ಈ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಪಡೆದದ್ದು ಅವರ ಜೀವನವನ್ನು ಉತ್ತಮವಾಗಿ ಪರಿವರ್ತಿಸಿತು. ಉರುವಲು ಸಂಗ್ರಹಿಸುವ ಅತ್ಯಂತ ದಣಿವಿನ ಕೆಲಸದಿಂದ ತಮ್ಮನ್ನು ಮುಕ್ತಗೊಳಿಸಿದ್ದಕ್ಕಾಗಿ ಮತ್ತು ಸಿಲಿಂಡರ್ ಸೌಲಭ್ಯ ಒದಗಿಸಿದ್ದಕ್ಕಾಗಿ ಶ್ರೀಮತಿ ಬಚನ್ ದೇವಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಪಾರ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಈ ಹೊಸ ಅನುಕೂಲವು ಅವರಿಗೆ ಮಕ್ಕಳಿಗೆ ಸಕಾಲಕ್ಕೆ ಊಟವನ್ನು ಬೇಯಿಸಿ ಕೊಡಲು ಅನುವು ಮಾಡಿಕೊಡುತ್ತದೆ, ಅವರ ಭುಜಗಳ ಮೇಲಿದ್ದ ಭಾರೀ ಹೊರೆಯನ್ನು ಅದು ನಿವಾರಿಸಿದೆ.
ಪಿಎಂ ಉಜ್ವಲ ಯೋಜನೆಗೆ ಮುಂಚಿನ ಜೀವನ
ಪಿಎಂ ಉಜ್ವಲ ಯೋಜನೆ ಜಾರಿಗೆ ಬರುವ ಮೊದಲು, ಕೋಟ್ಯಂತರ ಕುಟುಂಬಗಳು ಉರುವಲು, ಕಲ್ಲಿದ್ದಲು ಮತ್ತು ಹಸುವಿನ ಸಗಣಿಯ ಬೆರಣಿಗಳಂತಹ ಸಾಂಪ್ರದಾಯಿಕ ಅಡುಗೆ ಇಂಧನಗಳನ್ನು ಬಳಸುವಂತಹ ಪರಿಸ್ಥಿತಿ ಇತ್ತು. ಭಾರತೀಯ ಮಹಿಳೆಯರು ಹೊಗೆಯ ಅಡುಗೆಮನೆಗಳಲ್ಲಿ ಅಡುಗೆ ಮಾಡುವುದು, ಕೆಮ್ಮುವುದು ಮತ್ತು ದಿನವಿಡೀ ಉಸಿರಾಡಲು ಹೆಣಗಾಡುವುದು ಸಾಮಾನ್ಯವಾಗಿತ್ತು. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿತ್ತಲ್ಲದೆ ಪರಿಸರ ಮಾಲಿನ್ಯ ಸಂಬಂದಿ ಕಳವಳಗಳಿಗೂ ಕಾರಣವಾಗಿತ್ತು.
ಅನೇಕ ಮಹಿಳೆಯರು, ಹೊಗೆ ಮತ್ತು ಹಾನಿಕಾರಕ ಕಣಗಳ ನಡುವೆ, ಅದಕ್ಕೆ ಪರ್ಯಾಯವಾದುದನ್ನು ಕಂಡುಹಿಡಿಯುವ ಭರವಸೆಯನ್ನು ತ್ಯಜಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ, ಗ್ರಾಮೀಣ ಮತ್ತು ವಂಚಿತ ಕುಟುಂಬಗಳಿಗೆ ಎಲ್ಪಿಜಿಯಂತಹ ಸ್ವಚ್ಛ ಅಡುಗೆ ಇಂಧನ ಲಭ್ಯವಾಗುವಂತೆ ಮಾಡಲು ಭಾರತ ಸರ್ಕಾರವು 2016ರ ಮೇ ತಿಂಗಳಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಯನ್ನು ಪ್ರಾರಂಭಿಸಿತು. ಈ ಉಪಕ್ರಮವು ತಲೆಮಾರುಗಳ ಕಾಲಾವಧಿಯಿಂದ ಕಷ್ಟಗಳನ್ನು ಸಹಿಸಿಕೊಂಡಿದ್ದ ಭಾರತೀಯ ಮಹಿಳೆಯರಿಗೆ ವಿಮೋಚನೆಯ ಅನುಭವವನ್ನು ಒದಗಿಸಿತು. ಮತ್ತು ಅಂತಿಮವಾಗಿ ಹೊಗೆ ಮುಕ್ತ ಅಡುಗೆಮನೆಯ ಕನಸನ್ನು ನನಸಾಗಿಸಿತು.
ಸೀಮಾ ಕುಮಾರಿ ಮತ್ತು ಬಚನ್ ದೇವಿ ಅವರ ನಿರೂಪಣೆಗಳು ಭಾರತದಾದ್ಯಂತ ಅಸಂಖ್ಯಾತ ಮಹಿಳೆಯರ ಅನುಭವಗಳನ್ನು ಅನುರಣಿಸುತ್ತವೆ. ಅವರ ಹೆಸರುಗಳು, ಸಂಸ್ಕೃತಿಗಳು ಮತ್ತು ಹಿನ್ನೆಲೆಗಳು ಭಿನ್ನವಾಗಿದ್ದರೂ, ಅವರು ಹಂಚಿಕೊಂಡ ಭಾವನೆಗಳು ಸಮಾನವಾಗಿದ್ದವು. ಅದೆಂದರೆ- ಕಷ್ಟಗಳ ವಿರುದ್ಧದ ವರ್ಷಗಳ ಹೋರಾಟಕ್ಕೆ ಲಭಿಸಿದ ಪರಿಹಾರ ಮತ್ತು ಅವರ ಜೀವನದಲ್ಲಿ ಆಗಿರುವ ಸಕಾರಾತ್ಮಕ ಬದಲಾವಣೆಗಾಗಿ ಕೃತಜ್ಞತೆಯ ಭಾವನೆ.
ಉಲ್ಲೇಖಗಳು
*****
(Release ID: 1988257)
Visitor Counter : 131
Read this release in:
English
,
Urdu
,
Marathi
,
Hindi
,
Bengali-TR
,
Manipuri
,
Assamese
,
Punjabi
,
Gujarati
,
Odia
,
Tamil
,
Telugu