ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ವಿಕಸಿತ ಭಾರತ ಸಂಕಲ್ಪ ಯಾತ್ರೆ (ನಗರ)ವನ್ನು ಉದ್ದೇಶಿಸಿ ಪ್ರಧಾನಿ ಅವರು ಮಾಡಿದ ಭಾಷಣದ ಅನುವಾದ

Posted On: 16 DEC 2023 7:38PM by PIB Bengaluru

ಎಲ್ಲರಿಗೂ ನಮಸ್ಕಾರ..!

“ವಿಕಸಿತ ಭಾರತ’ದ ಸಂಕಲ್ಪದೊಂದಿಗೆ ಮೋದಿ ಅವರ ವಾಹನ ದೇಶದ ಮೂಲೆ ಮೂಲೆಯನ್ನೂ ತಲುಪುತ್ತಿದೆ. ಯಾತ್ರೆ ಆರಂಭವಾಗಿ ಬಹುತೇಕ ಒಂದು ತಿಂಗಳು ಕಳೆದಿದೆ ಮತ್ತು ಇದು ಈಗಾಗಲೇ ಸಾವಿರಾರು ಗ್ರಾಮಗಳನ್ನು ಮತ್ತು ಸುಮಾರು ಒಂದು ಸಾವಿರದ 500 ಪಟ್ಟಣಗಳನ್ನು ತಲುಪಿದೆ. ಇವೆಲ್ಲಾ ಬಹುತೇಕ ಸಣ್ಣ ಪಟ್ಟಣಗಳು ಮತ್ತು ಗ್ರಾಮಗಳಾಗಿವೆ. ನಾನು ಈ ಮೊದಲೇ ಉಲ್ಲೇಖಿಸಿದ್ದಂತೆ ಈ ಯಾತ್ರೆ ಇದೀಗ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ , ತೆಲಂಗಾಣ ಮತ್ತು ಮಿಜೋರಂಗಳಲ್ಲಿ ಇಂದಿನಿಂದ ಆರಂಭವಾಗಿದೆ. ಚುನಾವಣಾ ನೀತಿ ಸಂಹಿತೆ ಕಾರಣಕ್ಕೆ ಯಾತ್ರೆ ಈ ರಾಜ್ಯಗಳಲ್ಲಿ ಆರಂಭವಾಗಿರಲಿಲ್ಲ. ಈ ರಾಜ್ಯಗಳಲ್ಲಿ ಹೊಸ ಸರ್ಕಾರಗಳು ತ್ವರಿತವಾಗಿ ಅಯಾ ರಾಜ್ಯಗಳಲ್ಲಿ “ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಗಳನ್ನು ವಿಸ್ತರಣೆ ಮಾಡುವಂತೆ ನಾನು ಕರೆ ನೀಡುತ್ತೇನೆ. 

ಮಿತ್ರರೇ,

ಮೋದಿ ಅವರು ಈ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಿದ್ದರೂ, ದೇಶದ ಜನತೆ ಈಗ ಈ ‘ಯಾತ್ರೆ’ಯ ಜವಾಬ್ದಾರಿ ವಹಿಸಿಕೊಂಡಿರುವುದು ನಿಜ. ಈ ‘ಯಾತ್ರೆ’ಯ ಬಗ್ಗೆ ದೇಶದ ಜನರು ಎಷ್ಟು ಉತ್ಸಾಹದಿಂದಿದ್ದಾರೆ ಎಂಬುದನ್ನು ನಾನು ಮಾತನಾಡಿದ ಫಲಾನುಭವಿಗಳಿಂದ ತಿಳಿಯಬಹುದಾಗಿದೆ.‘ಯಾತ್ರೆ’ ಎಲ್ಲಿ ಮುಗಿಯುತ್ತದೆಯೋ ಅಲ್ಲೆಲ್ಲ ಇತರ ಹಳ್ಳಿಗಳು ಅಥವಾ ನಗರಗಳ ಜನರು ಅದನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ‘ಮೋದಿ ಅವರ ಗ್ಯಾರಂಟಿ ವಾಹನ’ದ ಸ್ವಾಗತಕ್ಕೆ ಭಾರಿ ಪೈಪೋಟಿ ನಡೆಯುತ್ತಿದ್ದು, ಅದನ್ನು ಸ್ವಾಗತಿಸಲು ಹೊಸ ಹೊಸ ವಿಧಾನಗಳನ್ನು ಬಳಸುತ್ತಿದ್ದಾರೆಂಬುದು ನನಗೆ ತಿಳಿದು ಬಂದಿದೆ. ಮತ್ತು ಇಂದಿನ ದಿನಗಳಲ್ಲಿ ಯುವಕರು ಸೆಲ್ಫಿಗಳನ್ನು ವ್ಯಾಪಕವಾಗಿ ಬಳಸುವುದನ್ನು ನಾನು ನೋಡಿದ್ದೇನೆ, ವಾಹನದೊಂದಿಗೆ ಸೆಲ್ಫಿ ತೆಗೆದುಕೊಂಡು ಅವುಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ ಮತ್ತು ಅನೇಕ ಜನರು ‘ವಿಕಸಿತ ಭಾರತ’ದ ರಾಯಭಾರಿಗಳಾಗುತ್ತಿದ್ದಾರೆ. ನಮೋ ಆಪ್ ಡೌನ್‌ಲೋಡ್ ಮಾಡಿಕೊಂಡು ‘ವಿಕಸಿತ ಭಾರತ’ ರಾಯಭಾರಿಯಾಗುವ ಯೋಜನೆ ಇದೆ. ಎಲ್ಲರೂ ಅದಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಗ್ರಾಮವಿರಲಿ, ನಗರವೇ ಆಗಿರಲಿ, ರಸಪ್ರಶ್ನೆ ಸ್ಪರ್ಧೆ, ಪ್ರಶ್ನೋತ್ತರಗಳ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸುತ್ತಿರುವುದೇ ಅಲ್ಲದೆ, ಅವರ ಜ್ಞಾನವನ್ನು ವೃದ್ಧಿಸುವ ಜತೆಗೆ ಮಾಹಿತಿಯನ್ನೂ ನೀಡಲಾಗುತ್ತಿದೆ. ಸ್ಪರ್ಧೆಯಲ್ಲಿ ಜನರೂ ಭಾಗವಹಿಸುತ್ತಿದ್ದಾರೆ. ಈ ಸ್ಪರ್ಧೆಗಳ ಮೂಲಕ, ಜನರು ಕೇವಲ ಬಹುಮಾನಗಳನ್ನು ಗೆಲ್ಲುತ್ತಿರುವುದು ಮಾತ್ರವಲ್ಲ, ಹೊಸ ಜ್ಞಾನ ಸಂಪಾದಿಸುತ್ತಿದ್ದಾರೆ ಮತ್ತು ಇತರರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಮಿತ್ರರೇ,

‘ಯಾತ್ರೆ’ ಆರಂಭವಾದ ನಂತರ ನಾನು ಇದೀಗ ನಾಲ್ಕನೇ ಬಾರಿಗೆ ವರ್ಚುವಲ್ ಮೂಲಕ ಸಂಪರ್ಕ ಹೊಂದಿದ್ದೇನೆ. ಹಿಂದಿನ ಕಾರ್ಯಕ್ರಮದಲ್ಲಿ ನಾನು ಬಹುಶಃ ಗ್ರಾಮೀಣ ಪ್ರದೇಶದ ಜನರೊಂದಿಗೆ ಸಂವಾದ ನಡೆಸಿದೆ. ಅದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಆಗಿರಬಹುದು, ಇಲ್ಲವೇ ನೈಸರ್ಗಿಕ ಕೃಷಿ ಅಥವಾ ಗ್ರಾಮೀಣ ಆರ್ಥಿಕತೆಯ ವಿವಿಧ ಆಯಾಮಗಳ ಬಗ್ಗೆ ಚರ್ಚೆಗಳನ್ನು ನಡೆಸಿದ್ದೇನೆ, ನಮ್ಮ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಕುರಿತು ನಾನು ಹಲವು ವಿಷಯಗಳನ್ನು ಚರ್ಚಿಸಿದ್ದೇನೆ. ಈ ಸಂವಾದದಲ್ಲಿ ನಾನು ಜನರೊಂದಿಗೆ ಮಾತನಾಡಿದಾಗ, ಅವರು ಸಂಕೀರ್ಣವಾದ ವಿವರಗಳನ್ನು ಹಂಚಿಕೊಂಡರು ಮತ್ತು ಸರ್ಕಾರದ ಯೋಜನೆಗಳು ಹಳ್ಳಿಗಳು ಮತ್ತು ಬಡವರ ಮನೆಗಳನ್ನು ತಲುಪುತ್ತಿರುವುದನ್ನು ನೋಡುವುದು ತುಂಬಾ ಸಂತೋಷಕರವಾಗಿತ್ತು. ಇಂದಿನ ಕಾರ್ಯಕ್ರಮದಲ್ಲಿ ನಗರ ಪ್ರದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಆದ್ದರಿಂದ, ಈ ಬಾರಿ, ನನ್ನ ಗಮನವು ನಗರಾಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರೀಕೃತವಾಗಿದ್ದವು ಮತ್ತು ನಾನು ನಡೆಸಿದ ಸಂಭಾಷಣೆಗಳು ಆ ವಿಷಯಗಳ ಸುತ್ತ ಇದ್ದವು.

ನನ್ನ ಕುಟುಂಬದ ಸದಸ್ಯರೇ,

 “ವಿಕಸಿತ ಭಾರತ ’ ಸಂಕಲ್ಪದಲ್ಲಿ ನಮ್ಮ ನಗರಗಳು ಅತ್ಯಂತ ಮಹತ್ವದ ಪಾತ್ರವನ್ನು ವಹಿಸಲಿವೆ ಸ್ವಾತಂತ್ರ್ಯಾನಂತರ ದೀರ್ಘಕಾಲದ ಬಳಿಕ ಅಭಿವೃದ್ಧಿ ಕೆಲವು ಪ್ರಮುಖ ನಗರಗಳಿಗೆ ಮಾತ್ರ ಸೀಮತವಾಗಿತ್ತು. ನಾವು 2 ಮತ್ತು 3ನೇ ದರ್ಜೆ ನಗರಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ.  ನೂರಾರು ಸಣ್ಣ ನಗರಗಳು ‘ವಿಕಸಿತ ಭಾರತ’ದ ಭವ್ಯ ವ್ಯವಸ್ಥೆಯನ್ನು ಸಶಕ್ತಗೊಳಿಸುತ್ತಿವೆ. ಅದು ಅಮೃತ್ ಮಿಷನ್ ಅಥವಾ ಸ್ಮಾರ್ಟ್ ಸಿಟಿ ಮಿಷನ್ ಆಗಿರಲಿ, ಎರಡಲ್ಲೂ ಸಣ್ಣ ನಗರಗಳಲ್ಲಿ ಮೂಲ ಸೌಕರ್ಯಗಳನ್ನು ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ. ಈ ನಗರಗಳಲ್ಲಿ ನೀರು ಸರಬರಾಜು, ಒಳಚರಂಡಿ ಮತ್ತು ನೈರ್ಮಲ್ಯ ವ್ಯವಸ್ಥೆಗಳು, ಸಂಚಾರ ವ್ಯವಸ್ಥೆಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳ ಜಾಲವನ್ನು ನಿರಂತರವಾಗಿ ನವೀಕರಿಸುವುದು ಗುರಿಯಾಗಿದೆ. ಸ್ವಚ್ಛತೆ, ಸಾರ್ವಜನಿಕ ಶೌಚಾಲಯಗಳು ಮತ್ತು ಎಲ್ಇಡಿ ಬೀದಿ ದೀಪಗಳು-ಈ ಅಂಶಗಳಲ್ಲಿ ಇದೇ ಮೊದಲ ಬಾರಿಗೆ ನಗರಗಳಲ್ಲಿ ವ್ಯಾಪಕ ಕೆಲಸವನ್ನು ಮಾಡಲಾಗಿದೆ. ಇದರ ನೇರ ಪರಿಣಾಮವು ಸುಲಭ ಜೀವನ (ಈಸ್ ಆಫ್ ಲಿವಿಂಗ್), ಸುಲಭ ಪ್ರಯಾಣ (ಈಸ್ ಆಫ್ ಟ್ರಾವೆಲ್) ಮತ್ತು ವ್ಯಾಪಾರಕ್ಕೆ ಸುಗಮ ವಾತಾವರಣ (ಈಸ್ ಆಫ್ ಡೂಯಿಂಗ್ ಬಿಸಿನೆಸ್) ಮೇಲೆ ಆಗಿದೆ. ಬಡವರು, ಮಧ್ಯಮ ವರ್ಗದವರು ಅಥವಾ ಇತ್ತೀಚೆಗೆ ಬಡತನದಿಂದ ಹೊರಬಂದವರು, ನವ ಮಧ್ಯಮ ವರ್ಗದ ಹೊಸ ಕುಟುಂಬ ಅಥವಾ ಶ್ರೀಮಂತ ಕುಟುಂಬಗಳು ಸೇರಿ ಎಲ್ಲರೂ ಈ ಹೆಚ್ಚುತ್ತಿರುವ ಸೌಲಭ್ಯಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ.

ನನ್ನ ಕುಟುಂಬದ ಸದಸ್ಯರೇ,

ನಮ್ಮ ಸರ್ಕಾರ ಕುಟುಂಬದ ಸದಸ್ಯರಂತೆ ಜನರ ಚಿಂತೆಗಳನ್ನು ತಗ್ಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಕರೋನಾ ಸಾಂಕ್ರಾಮಿಕದ ಭಾರಿ ಬಿಕ್ಕಟ್ಟಿನ ಸಮಯದಲ್ಲಿ, ಸರ್ಕಾರ ಹೇಗೆ ನಿಮಗೆ ಸಹಾಯ ಮಾಡುವ ಯಾವ ಅವಕಾಶವನ್ನೂ ತಪ್ಪಿಸಿಕೊಂಡಿಲ್ಲ ಎಂಬುದಕ್ಕೆ ನೀವು ಸಾಕ್ಷಿಯಾಗಿದ್ದೀರಿ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಸರ್ಕಾರವು 20 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ವರ್ಗಾಯಿಸಿದೆ. ನಮ್ಮ ಸರ್ಕಾರ ಸಾಂಕ್ರಾಮಿಕದ ವೇಳೆ ಪ್ರತಿಯೊಬ್ಬ ವ್ಯಕ್ತಿಗೆ ಉಚಿತ ಲಸಿಕೆಗಳನ್ನು ಖಾತ್ರಿಪಡಿಸಿದೆ. ನಮ್ಮ ಸರ್ಕಾರವೇ ಕರೋನ ಸೋಂಕಿನ ಯುಗದಲ್ಲಿ ಪ್ರತಿಯೊಬ್ಬ ಬಡವರಿಗೂ ಉಚಿತ ಪಡಿತರ ಯೋಜನೆಯನ್ನು ಆರಂಭಿಸಿದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸಣ್ಣ ಕೈಗಾರಿಕೆಗಳನ್ನು ಉಳಿಸಲು ನಮ್ಮ ಸರ್ಕಾರ ಶತಕೋಟಿ ರೂಪಾಯಿಗಳನ್ನು ವರ್ಗಾಯಿಸಿದೆ. ಎಲ್ಲಿ ಇತರರ ಭರವಸೆ ಅಂತ್ಯಗೊಳ್ಳುತ್ತದೋ ಅಲ್ಲಿಂದ ಮೋದಿ ಗ್ಯಾರಂಟಿ ಆರಂಭವಾಗುತ್ತದೆ.

ಬೀದಿ ಬದಿಯ ತಳ್ಳುವ ಗಾಡಿಗಳು, ಮಳಿಗೆಗಳು ಮತ್ತು ಪಾದಚಾರಿ ಮಾರ್ಗಗಳ ಮೇಲೆ ಕೆಲಸ ಮಾಡುವ ನಮ್ಮ ಸ್ನೇಹಿತರೆಲ್ಲರೂ ಭರವಸೆ ಕಳೆದುಕೊಂಡಿದ್ದರು. ನಮಗೆ ಏನೂ ಒಳ್ಳೆಯದಾಗುವುದಿಲ್ಲ, ಹೀಗೆ ಬದುಕಬೇಕಾಗುತ್ತದೆಂದು ಅವರು ಭಾವಿಸಿದರು. ಅವರನ್ನು ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಮೊಟ್ಟಮೊದಲ ಬಾರಿಗೆ ಈ ಸ್ನೇಹಿತರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕಿಸುವ ಭಾಗ್ಯ ನಮ್ಮ ಸರ್ಕಾರಕ್ಕಿದೆ. ಇಂದು, ಈ ಸ್ನೇಹಿತರು ಪಿಎಂ ಸ್ವನಿಧಿ ಯೋಜನೆಯ ಮೂಲಕ ಬ್ಯಾಂಕ್‌ಗಳಿಂದ ಅಗ್ಗದ ಬಡ್ಡಿದರದಲ್ಲಿ ಮತ್ತು ಸುಲಭ ಸಾಲಗಳನ್ನು ಪಡೆಯುತ್ತಿದ್ದಾರೆ. ದೇಶದಲ್ಲಿ ಇಂತಹ 50 ಲಕ್ಷಕ್ಕೂ ಅಧಿಕ ಸ್ನೇಹಿತರು ಬ್ಯಾಂಕ್‌ಗಳಿಂದ ಸಹಾಯ ಪಡೆದಿದ್ದಾರೆ. ಈ ಯಾತ್ರೆ ಸಮಯದಲ್ಲಿಯೂ ಸುಮಾರು 1.25 ಲಕ್ಷ ಮಿತ್ರರು ಪ್ರಧಾನಮಂತ್ರಿ ಸ್ವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಶೇಕಡ 75ಕ್ಕೂ ಅಧಿಕ ಫಲಾನುಭವಿಗಳು ದಲಿತ, ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳಿಂದ ಬಂದವರು. ಸುಮಾರು ಶೇಕಡ 45ರಷ್ಟು ಫಲಾನುಭವಿಗಳು ನಮ್ಮ ಸಹೋದರಿಯರು. ಅದೇನೆಂದರೆ, ಬ್ಯಾಂಕ್ ಖಾತೆ ತೆರೆಯಲು ಗ್ಯಾರಂಟಿ ಇಲ್ಲದವರು ಈಗ ಮೋದಿಯವರ ಗ್ಯಾರಂಟಿಯಿಂದ ಲಾಭ ಪಡೆಯುತ್ತಿದ್ದಾರೆ.

ಮಿತ್ರರೇ,

ನಮ್ಮ ಸರ್ಕಾರ ನಗರವಾಸಿಗಳಿಗೂ ಸಾಮಾಜಿಕ ಭದ್ರತೆಯನ್ನು ಕಲ್ಪಿಸಲು ಬದ್ಧವಾಗಿದೆ. ನಮ್ಮ ಸರ್ಕಾರ 60 ವರ್ಷಗಳ ನಂತರವೂ ಪ್ರತಿಯೊಬ್ಬ ವ್ಯಕ್ತಿಗೂ ಸಾಮಾಜಿಕ ಭದ್ರತಾ ಕವಚ ಒದಗಿಸಲು ಅವಿತರವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶದಲ್ಲಿ ಈವರೆಗೆ ಸುಮಾರು ಆರು ಕೋಟಿ ಸ್ನೇಹಿತರು ಅಟಲ್ ಪಿಂಚಣಿ ಯೋಜನೆಯ ಭಾಗವಾಗಿದ್ದಾರೆ. ಇದು 60 ವರ್ಷ ವಯಸ್ಸಿನ ನಂತರ 5,000 ರೂ. ವರೆಗೆ ನಿಯಮಿತ ಪಿಂಚಣಿಯನ್ನು ಖಾತ್ರಿಪಡಿಸುತ್ತದೆ. ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯು ನಗರಗಳಲ್ಲಿ ವಾಸಿಸುವ ಬಡವರಿಗೆ ಭಾರಿ ಭರವಸೆಯಾಗಿ ಹೊರಹೊಮ್ಮಿದೆ. ಈ ಯೋಜನೆಯಡಿಯಲ್ಲಿ, ವಿಮಾದಾರರು ವರ್ಷಕ್ಕೊಮ್ಮೆ ಕೇವಲ 20 ರೂ. ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ ಮತ್ತು ಪ್ರತಿಯಾಗಿ 2 ಲಕ್ಷ ರೂ.ವರೆಗೆ ಕವರೇಜ್ ಹೊಂದಿರುತ್ತಾರೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿಯಲ್ಲಿ, ನಗರದ ಬಡವರು ವರ್ಷಕ್ಕೆ ಕೇವಲ 436 ರೂ. ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಇದು ಅವರಿಗೆ 2 ಲಕ್ಷ ರೂ.ವರೆಗಿನ ವಿಮಾ ರಕ್ಷಣೆಯನ್ನೂ ಒದಗಿಸುತ್ತದೆ. ಈ ಎರಡು ಯೋಜನೆಗಳ ಮೂಲಕ, ನಮ್ಮ ಸರ್ಕಾರವು ಈಗಾಗಲೇ ಕಷ್ಟದಲ್ಲಿರುವ ಕುಟುಂಬಗಳಿಗೆ 17,000 ಕೋಟಿ ರೂ. ಪರಿಹಾರವನ್ನು ಒದಗಿಸಿದೆ. ಬಿಕ್ಕಟ್ಟಿನ ಸಮಯದಲ್ಲಿ, ಆತ್ಮೀಯ ವ್ಯಕ್ತಿ ಕಳೆದುಹೋದಾಗ ಮತ್ತು ಆ ಹೊತ್ತಿನಲ್ಲಿ ಪರಿಹಾರ ಧನವು  ಬಂದಾಗ, ಆ ಕುಟುಂಬಗಳಿಗೆ ಅದು ಎಷ್ಟು ಸಹಾಯವಾಗುತ್ತದೆ ಎಂಬುದನ್ನು ನೀವೇ ಊಹಿಸಿಕೊಳ್ಳಬಹುದು. ಇಂದು 200-400 ಕೋಟಿ ರೂ.ಗಳ ಯೋಜನೆಗಳನ್ನು ಆರಂಭಿಸಿದರೂ ಅದನ್ನು ಕೆಲ ರಾಜಕೀಯ ಪಕ್ಷಗಳು ಟೀಕಿಸಿ ಸುದ್ದಿ ಮಾಡುತ್ತಲೇ ಇರುತ್ತವೆ. ಆದರೆ ಬಡವರ ಮನೆಗೆ 17,000 ಕೋಟಿ ರೂ. ಮೊತ್ತ ತಲುಪಿದ್ದು, ಸರ್ಕಾರದ ಯೋಜನೆಗಳಿಂದ ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಸರ್ಕಾರದ ಪಿಂಚಣಿ ಮತ್ತು ವಿಮಾ ಯೋಜನೆಗಳೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಅವರ ಭದ್ರತಾ ಕವಚವನ್ನು ಬಲಪಡಿಸಲು ನನ್ನ ಎಲ್ಲ ಸ್ನೇಹಿತರನ್ನು ನಾನು ಕೋರುತ್ತೇನೆ. ಈ ನಿಟ್ಟಿನಲ್ಲಿ ಮೋದಿಯವರ ಗ್ಯಾರಂಟಿ ವಾಹನವು ನಿಮಗೆ ಸಹಾಯ ಮಾಡುತ್ತದೆ.

ಮಿತ್ರರೇ,
ಆದಾಯ ತೆರಿಗೆ ವಿನಾಯಿತಿ ಅಥವಾ ಕೈಗೆಟುಕುವ ಆರೋಗ್ಯ ಸೇವೆಯ ಮೂಲಕ ನಗರ ಕುಟುಂಬಗಳು ಹೆಚ್ಚಿನ ಹಣವನ್ನು ಉಳಿಸಲು ಸರ್ಕಾರವು ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿದೆ. ನಗರಗಳಲ್ಲಿ ಲಕ್ಷಾಂತರ ಬಡವರು ಈಗಾಗಲೇ ಆಯುಷ್ಮಾನ್ ಭಾರತ ಯೋಜನೆಯಿಂದ ಲಾಭ ಪಡೆಯುತ್ತಿದ್ದಾರೆ. ಆಯುಷ್ಮಾನ್ ಕಾರ್ಡ್‌ನಿಂದಾಗಿ ಬಡವರು ಒಂದು ಲಕ್ಷ ಕೋಟಿ ರೂಪಾಯಿ ವೈದ್ಯಕೀಯ ವೆಚ್ಚವನ್ನು ಉಳಿಸಿದ್ದಾರೆ, ಅದಕ್ಕಾಗಿ ಕಾರ್ಡ್ ಗೆ ಧನ್ಯವಾದಗಳನ್ನು ಹೇಳ ಬಯಸುತ್ತೇನೆ. ಈ ಒಂದು ಲಕ್ಷ ಕೋಟಿ ರೂಪಾಯಿ ವೈದ್ಯರ ಶುಲ್ಕ ಅಥವಾ ಔಷಧಿಗಳಿಗೆ ಖರ್ಚು ಮಾಡಬಹುದಾಗಿತ್ತು, ಆದರೆ ಇಂದು ಈ ಹಣವು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಲ್ಲಿ  ಉಳಿದಿದೆ. ಜನೌಷಧಿ ಕೇಂದ್ರಗಳನ್ನು ತೆರೆಯುವ ಸರ್ಕಾರದ ಉಪಕ್ರಮವು ವರದಾನವಾಗಿದೆ. ಇಂದು, ನನ್ನ ಮಾತನ್ನು ಕೇಳುವ ಎಲ್ಲರಿಗೂ ನಾನು ಈ ಕೇಂದ್ರಗಳಿಂದ ಔಷಧಿಗಳನ್ನು ಖರೀದಿಸಲು ಪ್ರೋತ್ಸಾಹಿಸುತ್ತೇನೆ, ಅಲ್ಲಿ ನೀವು ಶೇಕಡ 80 ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ. 100 ರೂ. ತಗುಲಬಹುದಾದ ಔಷಧಿಯನ್ನು ಕೇವಲ 20 ರೂ.ಗೆ ಪಡೆಯಬಹುದಾಗಿದೆ. ಇದರಿಂದ ನಿಮಗೆ ಹಣ ಉಳಿತಾಯವಾಗುತ್ತದೆ. ಈ ಕೇಂದ್ರಗಳಿಂದ ನಗರದ ಬಡವರು ಮತ್ತು ಮಧ್ಯಮ ವರ್ಗದ ಪ್ರಜೆಗಳು 25,000 ಕೋಟಿ ರೂ. ಉಳಿತಾಯ ಮಾಡಿವೆ. ಈ ಜನೌಷಧಿ ಕೇಂದ್ರಗಳು ಇರದಿದ್ದರೆ ಅವರು ಈ ಹೆಚ್ಚುವರಿ 25,000 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದ್ದರು. ಹಾಗಾಗಿ ಆ 25,000 ಕೋಟಿ ರೂ. ಆ ಜನರಿಗೆ ಉಳಿತಾಯವಾಗಿದೆ.  ಇದೀಗ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 25,000ಕ್ಕೆ ಹೆಚ್ಚಿಸಲು ಸರ್ಕಾರ ಚಿಂತಿಸುತ್ತಿದೆ. ಕಲವೇ ವರ್ಷಗಳಲ್ಲಿ ನಾವು ಎಲ್ಇಡಿ ಬಲ್ಬ್ ಗಳನ್ನು ವಿತರಿಸುವ ಉಜಾಲಾ ಯೋಜನೆಯೊಂದಿಗೆ ದೇಶದಲ್ಲಿ ಕ್ರಾಂತಿಯನ್ನು ಕಂಡಿದ್ದೇವೆ. ಇದರಿಂದ ನಗರ ಪ್ರದೇಶದ ಕುಟುಂಬಗಳಿಗೆ ವಿದ್ಯುತ್ ಬಿಲ್ ಗಣನೀಯವಾಗಿ ತಗ್ಗಿದೆ.

ನನ್ನ ಕುಟುಂಬದ ಸದಸ್ಯರೇ,

ಉದ್ಯೋಗ ಅರಸಿ ಹಳ್ಳಿಗಳಿಂದ ವಲಸೆ ಹೋಗುವ ಬಡ ಸಹೋದರ ಸಹೋದರಿಯರು ಎದುರಿಸುತ್ತಿರುವ ಸವಾಲುಗಳನ್ನು ನಮ್ಮ ಸರ್ಕಾರ ಅರ್ಥಮಾಡಿಕೊಂಡಿದೆ. ಅನೇಕರು ತಮ್ಮ ಹಳ್ಳಿಯ ಪಡಿತರ ಚೀಟಿ ಇತರ ರಾಜ್ಯಗಳ ನಗರಗಳಲ್ಲಿ ಮಾನ್ಯ ಮಾಡುವುದಿಲ್ಲ ಎಂಬ ಸಮಸ್ಯೆಯನ್ನು ಎದುರಿಸುತ್ತಿದ್ದರು. ಅದಕ್ಕಾಗಿಯೇ ಮೋದಿ ಅವರು ಒಂದು ರಾಷ್ಟ್ರ- ಒಂದು ಪಡಿತರ ಕಾರ್ಡ್ ಯೋಜನೆ ಜಾರಿಗೆ ತಂದರು. ಈಗ, ಯಾವುದೇ ಕುಟುಂಬ, ಯಾವುದೇ ಗ್ರಾಮ ಅಥವಾ ನಗರದಿಂದ ಬಂದರೂ ತಮ್ಮ ಅಗತ್ಯಗಳಿಗಾಗಿ ಒಂದೇ ಪಡಿತರ ಚೀಟಿಯನ್ನು ಬಳಸಬಹುದಾಗಿದೆ.

ನನ್ನ ಕುಟುಂಬದ ಸದಸ್ಯರೇ,

ಕೊಳೆಗೇರಿಗಳಲ್ಲಿ ವಾಸಿಸುವಂತೆ ಯಾರನ್ನೂ ಬಲವಂತಪಡಿಸುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ನಮ್ಮ ಸರ್ಕಾರವು ಬದ್ಧವಾಗಿದೆ ಮತ್ತು ಪ್ರತಿಯೊಬ್ಬರಿಗೂ ಅವರ ನೆತ್ತಿಯ ಮೇಲೆ ಗಟ್ಟಿಯಾದ ಸೂರು, ಶಾಶ್ವತ ಮನೆ ಲಭ್ಯವಾಗುವಂತೆ ಮಾಡುತ್ತಿದೆ. ಕಳೆದ 9 ವರ್ಷಗಳಲ್ಲಿ, ಕೇಂದ್ರ ಸರ್ಕಾರವು 4 ಕೋಟಿಗೂ ಅಧಿಕ ಮನೆಗಳನ್ನು ನಿರ್ಮಿಸಿದ್ದು, 1 ಕೋಟಿಗೂ ಅಧಿಕ ಮನೆಗಳನ್ನು ನಗರದಲ್ಲಿ ವಾಸಿಸುತ್ತಿರುವ ಬಡಕುಟುಂಬಗಳಿಗೆ ಹಂಚಿಕೆ ಮಾಡಲಾಗಿದೆ. ನಮ್ಮ ಸರ್ಕಾರವು ಮಧ್ಯಮ ವರ್ಗದ ಕುಟುಂಬಗಳ ಸ್ವಂತ ಮನೆಗಳ ಕನಸನ್ನು ನನಸಾಗಿಸಲು ಸಾಧ್ಯವಿರುವ ಎಲ್ಲ ನೆರವನ್ನೂ ನೀಡುತ್ತಿದೆ. ಸಾಲ ಸಂಯೋಜಿತ ಸಬ್ಸಿಡಿ ಯೋಜನೆಯಡಿ, ಲಕ್ಷಾಂತರ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ಒದಗಿಸಲಾಗಿದೆ. ಸ್ವಂತ ಮನೆ ಇಲ್ಲದವರಿಗೆ ಉತ್ತಮ ಬಾಡಿಗೆ ಮನೆಯನ್ನು ಸೂಕ್ತ ದರದಲ್ಲಿ ಒದಗಿಸುವ ಬಗ್ಗೆಯೂ ಸರ್ಕಾರ ಚಿಂತಿಸುತ್ತಿದೆ. ನಗರ ವಲಸಿಗರು, ಕಾರ್ಮಿಕರು ಮತ್ತು ಇತರ ಕೆಲಸ ಮಾಡುವ ವ್ಯಕ್ತಿಗಳಿಗೆ ಬಾಡಿಗೆ ಮನೆಗಳನ್ನು ಹೊಂದಲು ಸರ್ಕಾರವು ಯೋಜನೆಗಳನ್ನು ಪರಿಚಯಿಸಿದೆ ಮತ್ತು ವಿವಿಧ ನಗರಗಳಲ್ಲಿ ಈಗಾಗಲೇ ವಿಶೇಷ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತಿದೆ.

ನನ್ನ ಕುಟುಂಬದ ಸದಸ್ಯರೇ,

ನಗರಗಳಲ್ಲಿನ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಉತ್ತಮ ಜೀವನ ನಡೆಸಲು ಮತ್ತೊಂದು ಮಹತ್ವದ ಉಪಕ್ರಮವೆಂದರೆ, ಅದು ಪರಿಣಾಮಕಾರಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿದೆ. ಕಳೆದ 10 ವರ್ಷಗಳಲ್ಲಿ ಆಧುನಿಕ ಸಾರ್ವಜನಿಕ ಸಾರಿಗೆಯಲ್ಲಿ ಸಾಧಿಸಿದ ಪ್ರಗತಿಯು ಅಸಾಮಾನ್ಯವಾಗಿದೆ. 10 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ, ಮೆಟ್ರೋ ಸೇವೆಗಳು 15 ಹೊಸ ನಗರಗಳಿಗೆ ವಿಸ್ತರಿಸಿದ್ದೇವೆ ಮತ್ತು ಪ್ರಸ್ತುತ ಮೆಟ್ರೋ ಸೇವೆಗಳು 27 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಅಥವಾ ನಿರ್ಮಾಣ ಹಂತದಲ್ಲಿವೆ ಎಂಬುದನ್ನು ಗಮನಿಸಿ ಎಷ್ಟು ಆದ್ಯತೆ ನೀಡಲಾಗಿದೆ ಎಂಬುದನ್ನು ನೀವೇ ಊಹಿಸಬಹುದು.  ಕಳೆದ ಕೆಲ ವರ್ಷಗಳಲ್ಲಿ, ಕೇಂದ್ರ ಸರ್ಕಾರವು ನಗರ ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಕೋಟ್ಯಂತರ ರೂಪಾಯಿಗಳನ್ನು ಹೂಡಿಕೆ ಮಾಡಿದೆ. 'ಪಿಎಂ ಇ-ಬಸ್ ಸೇವಾ ಅಭಿಯಾನ' ವಿವಿಧ ನಗರಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆ ಸುಗಮಗೊಳಿಸುತ್ತಿದೆ. ಸುಮಾರು ಎರಡು-ಮೂರು ದಿನಗಳ ಹಿಂದೆ, ಕೇಂದ್ರ ಸರ್ಕಾರವು ದೆಹಲಿಯೊಂದರಲ್ಲೇ 500 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸೇವೆ ಅರಂಭಿಸಿತು,. ದೆಹಲಿಯಲ್ಲಿ 1300 ಕ್ಕೂ ಅಧಿಕ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆ ನಡೆಸುತ್ತಿವೆ.

ನನ್ನ ಕುಟುಂಬದ ಸದಸ್ಯರೇ,

ನಮ್ಮ ನಗರಗಳು ನಮ್ಮ ಯುವ ಮತ್ತು ಮಹಿಳಾ ಶಕ್ತಿಯ ಸಬಲೀಕರಣಕ್ಕೆ ಮಹತ್ವದ ವಿಧಾನಗಳಾಗಿವೆ. ಮೋದಿಯವರ ಗ್ಯಾರಂಟಿ ವಾಹನ ಯುವಕರು ಮತ್ತು ಮಹಿಳೆಯರಿಬ್ಬರನ್ನೂ ಸಬಲೀಕರಣಗೊಳಿಸುತ್ತಿದೆ. ನೀವು ಇದರ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳಬೇಕು ಮತ್ತು ‘ವಿಕಸಿತ ಭಾರತ’ದ ಸಂಕಲ್ಪ’ವನ್ನು ಮುಂದಕ್ಕೆ ಕೊಂಡೊಯ್ಯಬೇಕು. ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸಲು ಬಯಸುತ್ತೇನೆ. ಈ ಯಾತ್ರೆಯಿಂದ ಹೆಚ್ಚು ಜನರಿಗೆ ಅನುಕೂಲವಾಗಲಿ, ಹೆಚ್ಚು ಹೆಚ್ಚು ಜನರು ಕೈ ಜೋಡಿಸಲಿ, ಯಾತ್ರೆ ಬರುವ ಮುನ್ನವೇ ಹಳ್ಳಿ-ನಗರಗಳಲ್ಲೆಲ್ಲ ಪೂರಕ ವಾತಾವರಣ ನಿರ್ಮಿಸಿ, ಈಗಾಗಲೇ ಸರ್ಕಾರದಿಂದ ಸವಲತ್ತು ಪಡೆದವರನ್ನು ಅಲ್ಲಿಗೆ ಕರೆತಂದು ಇತರರಿಗೂ ಸಿಗುವಂತೆ ಮಾಡಬೇಕು. ಸೌಕರ್ಯಗಳನ್ನು ಪಡೆಯದ ಮತ್ತು ಇನ್ನೂ ಕಾಯುತ್ತಿರುವವರು ಭವಿಷ್ಯದಲ್ಲಿ ಅದನ್ನು ಸ್ವೀಕರಿಸುತ್ತಾರೆ ಎಂಬ ವಿಶ್ವಾಸವಿದೆ. ಏಕೆಂದರೆ ಇದು ಮೋದಿಯವರ ಭರವಸೆಯಾಗಿದೆ. ಆದ್ದರಿಂದ, ಸಾಧ್ಯವಾದಷ್ಟು ಜನರನ್ನು ಕರೆತನ್ನಿ, ಅವರಿಗೆ ಮಾಹಿತಿ ನೀಡಿ, ಮತ್ತು ಈಗಾಗಲೇ ಲಾಭ ಪಡೆದವರು ಪ್ರಯೋಜನಗಳ ಬಗ್ಗೆ ಹೇಳಿದಾಗ, ಅದು ಇತರರ ವಿಶ್ವಾಸ ವೃದ್ಧಿಯಾಗುತ್ತದೆ. ಅದಕ್ಕಾಗಿಯೇ ಅನಿಲ ಸಂಪರ್ಕ, ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ, ಮನೆ, ಆಯುಷ್ಮಾನ್ ಕಾರ್ಡ್ ಪಡೆದವರು ಅಥವಾ ಮುದ್ರಾ ಯೋಜನೆ ಅಥವಾ ಸ್ವನಿಧಿ ಯೋಜನೆಯಿಂದ ಲಾಭ ಪಡೆದವರು, ಬ್ಯಾಂಕ್‌ನಿಂದ ಹಣ ಅಥವಾ ವಿಮಾ ಹಣವನ್ನು ಪಡೆದವರು ಇತರರಿಗೆ ಆ ಬಗ್ಗೆ ಮಾಹಿತಿ ನೀಡುವಂತೆ ನಾನು ಕರೆ ನೀಡುತ್ತೇನೆ. ಹಲವು ಪ್ರಯೋಜನಗಳಿವೆ. ತಮ್ಮ ಗ್ರಾಮದಲ್ಲಿ ಯಾರಾದರೂ ಅಂತಹ ಸವಲತ್ತುಗಳನ್ನು ಸ್ವೀಕರಿಸಿದ್ದಾರೆಂದು ತಿಳಿದಾಗ ಅವರೂ ಮುಂದೆ ಬಂದು ತಮ್ಮ ಹೆಸರನ್ನು ಸೌಲಭ್ಯಗಳಿಗಾಗಿ ನೋಂದಾಯಿಸಿಕೊಳ್ಳುತ್ತಾರೆ ಮತ್ತು ಪ್ರಯೋಜನ ಪಡೆದವರು ಹೆಚ್ಚಾಗಿ ಬಂದು ಇದು ಮೋದಿಯವರ ಯೋಜನೆ, ಅದರ ಲಾಭವನ್ನು ಪಡೆದುಕೊಳ್ಳಿ ಎಂದು ಇತರರಿಗೆ ತಿಳಿಸಿಕೊಡಬೇಕು.

ಗ್ರಾಮಗಳಲ್ಲಿನ ಬಡವರಿಂದ ಹಿಡಿದು ನಗರದ ಕೊಳೆಗೇರಿಗಳಲ್ಲಿ ವಾಸಿಸುತ್ತಿರುವವರೆಗೆ ಎಲ್ಲರಿಗೂ ಯಾವುದೇ ತೊಂದರೆಗಳಿಲ್ಲದೆ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಖಾತ್ರಿಪಡಿಸಿಕೊಳ್ಳಲು ನಾನು ಬದ್ಧನಾಗಿದ್ದೇನೆ. ಅದಕ್ಕಾಗಿಯೇ ಮೋದಿಯವರ ಗ್ಯಾರಂಟಿಯ ಶಕ್ತಿಯಿಂದ ಚಲಿಸುವ ಈ ವಾಹನ ನಿಮಗಾಗಿ ಲಭ್ಯವಿವೆ. ಆದುದರಿಂದ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿ. ಭಾರತವು 100 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುವ 2047ರ ವೇಳೆಗೆ ದೇಶವು ಅಭಿವೃದ್ಧಿ ಹೊಂದುತ್ತದೆ. ನಾವು ಈ ಚೈತನ್ಯವನ್ನು ಸೃಷ್ಟಿಸಬೇಕು. ನಾವು ಎಲ್ಲವನ್ನೂ ಸರಿಯಾಗಿ ಮಾಡುತ್ತೇವೆ ಮತ್ತು ದೇಶವನ್ನು ಉತ್ತಮಗೊಳಿಸುತ್ತೇವೆ. ಇದು ನಾವು ಅಳವಡಿಸಿಕೊಳ್ಳಬೇಕಾದ ಮನಸ್ಥಿತಿ. ಈ ‘ಯಾತ್ರೆ’, ಈ ವಾಹನ, ಈ ನಿರ್ಣಯವು ಸಕಾರಾತ್ಮಕ ವಾತಾವರಣ ಸೃಷ್ಟಿಸಲು ಬಹಳ ಸಹಾಯಕವಾಗುತ್ತದೆ. ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು

ಧನ್ಯವಾದಗಳು!

ಘೋಷಣೆ: ಪ್ರಧಾನಿ ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು, ಇದು ಪ್ರಧಾನಿ ಅವರ ಭಾಷಣದ ಯಥಾವತ್ ಅನುವಾದವಲ್ಲ.

***

 


(Release ID: 1987698) Visitor Counter : 239