ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಛತ್ತೀಸ್‌ಗಢದ ಬಸ್ತರ್‌ ಜಿಲ್ಲೆಯ ಜಗದಲ್‌ಪುರದಲ್ಲಿ ಸುಮಾರು 27,000 ಕೋಟಿ ರೂಪಾಯಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದ ಪ್ರಧಾನಿ


ನಗರ್‌ನಾರ್‌ನಲ್ಲಿ ʻಎನ್‌ಎಂಡಿಸಿ ಸ್ಟೀಲ್ ಲಿಮಿಟೆಡ್ʼನ ಉಕ್ಕು ಸ್ಥಾವರವನ್ನು ಲೋಕಾರ್ಪಣೆ ಮಾಡಿದರು

ಜಗದಲ್‌ಪುರ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು

ಛತ್ತೀಸ್‌ಗಢದಲ್ಲಿ ಹಲವು ರೈಲು ಮತ್ತು ರಸ್ತೆ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದರು

ತರೋಕಿ- ರಾಯ್‌ಪುರ ಡೆಮು ರೈಲು ಸೇವೆಗೆ ಹಸಿರು ನಿಶಾನೆ ತೋರಿದರು

"ದೇಶದ ಪ್ರತಿಯೊಂದು ರಾಜ್ಯ, ಪ್ರತಿ ಜಿಲ್ಲೆ ಮತ್ತು ಪ್ರತಿ ಗ್ರಾಮವು ಅಭಿವೃದ್ಧಿ ಹೊಂದಿದಾಗ ಮಾತ್ರ ʻವಿಕಸಿತ ಭಾರತʼದ ಕನಸು ನನಸಾಗುತ್ತದೆ"

"ವಿಕಸಿತ ಭಾರತ  ಸಾಧನೆಯ ನಿಟ್ಟಿನಲ್ಲಿ ಭೌತಿಕ, ಸಾಮಾಜಿಕ ಮತ್ತು ಡಿಜಿಟಲ್ ಮೂಲಸೌಕರ್ಯಗಳು ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿರಬೇಕು"

"ಛತ್ತೀಸ್‌ಗಢವು ಬೃಹತ್‌ ಉಕ್ಕು ಉತ್ಪಾದಿಸುವ ರಾಜ್ಯವಾಗುವುದರ ಲಾಭವನ್ನು ಪಡೆಯುತ್ತಿದೆ"

ಬಸ್ತಾರ್‌ನಲ್ಲಿ ತಯಾರಿಸಿದ ಉಕ್ಕು ನಮ್ಮ ಸೈನ್ಯವನ್ನು ಬಲಪಡಿಸುವುದಲ್ಲದೆ,  ರಕ್ಷಣಾ ರಫ್ತುಗಳಲ್ಲಿ ಭಾರತವು ಬಲವಾದ ಉಪಸ್ಥಿತಿಯನ್ನು ಹೊಂದಲು ನೆರವಾಗುತ್ತದೆ

“ಅಮೃತ್‌ ಭಾರತ್‌ ನಿಲ್ದಾಣ ಯೋಜನೆ ಅಡಿಯಲ್ಲಿ ಛತ್ತೀಸ್‌ಗಢದ 30ಕ್ಕೂ ಹೆಚ್ಚು ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ"

"ಛತ್ತೀಸ್ಗಢದ ಜನರ ಜೀವನವನ್ನು ಸುಲಭಗೊಳಿಸಲು ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ"

"ಛತ್ತೀಸ್ಗಢದ ಅಭಿವೃದ್ಧಿಯ ಪ್ರಯಾಣಕ್ಕೆ ಸರ್ಕಾರ ತನ್ನ ಬೆಂಬಲವನ್ನು ಮುಂದುವರಿಸುತ್ತದೆ ಮತ್ತು ರಾಷ್ಟ್ರದ ಹಣೆಬರಹವನ್ನು ಬದಲಾಯಿಸುವಲ್ಲಿ ರಾಜ್ಯವು ತನ್ನ ಪಾತ್ರವನ್ನು ವಹಿಸುತ್ತದೆ"

Posted On: 03 OCT 2023 12:49PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಛತ್ತೀಸ್‌ಗಢದ ಬಸ್ತಾರ್‌ನ ಜಗದಲ್‌ಪುರದಲ್ಲಿ ಸುಮಾರು 27,000 ಕೋಟಿ ರೂಪಾಯಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದರು. ಈ ಯೋಜನೆಗಳಲ್ಲಿ ಬಸ್ತಾರ್ ಜಿಲ್ಲೆಯ ನಗರ್‌ನಾರ್‌ನಲ್ಲಿ ʻಎನ್ಎಂಡಿಸಿ ಸ್ಟೀಲ್ ಲಿಮಿಟೆಡ್‌ʼನ ಉಕ್ಕು ಸ್ಥಾವರದ ಸಮರ್ಪಣೆ ಹಾಗೂ ಅನೇಕ ರೈಲ್ವೆ ಮತ್ತು ರಸ್ತೆ ಯೋಜನೆಗಳು ಸೇರಿವೆ. ʻತರೋಕಿ- ರಾಯ್‌ಪುರ್ ಡೆಮುʼ ರೈಲು ಸೇವೆಗೂ ಪ್ರಧಾನಿಯವರು ಹಸಿರು ನಿಶಾನೆ ತೋರಿದರು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ದೇಶದ ಪ್ರತಿಯೊಂದು ರಾಜ್ಯ, ಪ್ರತಿ ಜಿಲ್ಲೆ ಮತ್ತು ಪ್ರತಿ ಗ್ರಾಮ ಅಭಿವೃದ್ಧಿ ಹೊಂದಿದಾಗ ಮಾತ್ರ ʻವಿಕಸಿತ ಭಾರತʼದ ಕನಸು ನನಸಾಗುತ್ತದೆ ಎಂದರು. ಈ ಸಂಕಲ್ಪವನ್ನು ಸಾಧಿಸಲು ಇಂದು ಸುಮಾರು 27,000 ಕೋಟಿ ರೂ.ಗಳ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ ಅವರು ಈ  ಅಭಿವೃದ್ಧಿ ಯೋಜನೆಗಳಿಗಾಗಿ ಛತ್ತೀಸ್‌ಗಢದ ಜನರನ್ನು ಅಭಿನಂದಿಸಿದರು. ʻವಿಕಸಿತ ಭಾರತʼ ಸಾಧನೆಯ ನಿಟ್ಟಿನಲ್ಲಿ ಭೌತಿಕ, ಸಾಮಾಜಿಕ ಮತ್ತು ಡಿಜಿಟಲ್ ಮೂಲಸೌಕರ್ಯಗಳು ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿರಬೇಕು ಎಂದು ಪ್ರಧಾನಿ ಹೇಳಿದರು. ಮೂಲಸೌಕರ್ಯಕ್ಕಾಗಿ ಈ ವರ್ಷ 10 ಲಕ್ಷ ಕೋಟಿ ರೂ. ವ್ಯಯಿಸಲಾಗುತ್ತಿದ್ದು, ಇದು ಆರು ಪಟ್ಟು ಹೆಚ್ಚಳವಾಗಿದೆ ಎಂದು ಅವರು ಮಾಹಿತಿ ನೀಡಿದರು.

ರೈಲು, ರಸ್ತೆ, ವಿಮಾನ ನಿಲ್ದಾಣ, ವಿದ್ಯುತ್ ಯೋಜನೆಗಳು, ಸಾರಿಗೆ, ಬಡವರಿಗೆ ಮನೆಗಳು ಹಾಗೂ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳ ನಿರ್ಮಾಣ ಯೋಜನೆಗಳಲ್ಲಿ ಉಕ್ಕಿನ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ, ಕಳೆದ 9 ವರ್ಷಗಳಲ್ಲಿ ಉಕ್ಕು ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದರು. "ಛತ್ತೀಸ್‌ಗಢವು ಬೃಹತ್‌ ಉಕ್ಕು ಉತ್ಪಾದಿಸುವ ರಾಜ್ಯವಾಗಿರುವುದರ ಲಾಭವನ್ನು ಪಡೆಯುತ್ತಿದೆ," ಎಂದು ಹೇಳಿದ ಪ್ರಧಾನಿಯವರು,  ಇಂದು ನಗರ್‌ನಾರ್‌ನಲ್ಲಿ ಅತ್ಯಂತ ಆಧುನಿಕ ಉಕ್ಕು ಸ್ಥಾವರದ ಉದ್ಘಾಟನೆಯನ್ನು ಒತ್ತಿ ಹೇಳಿದರು. ಈ ಸ್ಥಾವರದಲ್ಲಿ ಉತ್ಪಾದನೆಯಾಗುವ ಉಕ್ಕು ದೇಶದ ವಾಹನ, ಎಂಜಿನಿಯರಿಂಗ್ ಮತ್ತು ರಕ್ಷಣಾ ಉತ್ಪಾದನಾ ಕ್ಷೇತ್ರಗಳಿಗೆ ಹೊಸ ಶಕ್ತಿಯನ್ನು ನೀಡುತ್ತದೆ ಎಂದು ಅವರು ಹೇಳಿದರು. "ಬಸ್ತಾರ್‌ನಲ್ಲಿ ಉತ್ಪಾದಿಸಲಾಗುವ ಉಕ್ಕು ರಕ್ಷಣಾ ರಫ್ತನ್ನು ಹೆಚ್ಚಿಸುವುದರ ಜೊತೆಗೆ ಸಶಸ್ತ್ರ ಪಡೆಗಳನ್ನು ಬಲಪಡಿಸುತ್ತದೆ" ಎಂದು ಶ್ರೀ ಮೋದಿ ಹೇಳಿದರು. ಉಕ್ಕು ಸ್ಥಾವರವು ಬಸ್ತಾರ್ ಮತ್ತು ಹತ್ತಿರದ ಪ್ರದೇಶಗಳ ಸುಮಾರು 50,000 ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಎಂದು ಅವರು ಒತ್ತಿ ಹೇಳಿದರು. "ಈ ಹೊಸ ಉಕ್ಕು ಸ್ಥಾವರವು, ಬಸ್ತಾರ್‌ನಂತಹ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡುವ ಆದ್ಯತೆಯ ವೇಗವನ್ನು ಹೆಚ್ಚಿಸುತ್ತದೆ," ಎಂದು ಅವರು ಹೇಳಿದರು.

ಸಂಪರ್ಕ ಜಾಲ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಗಮನ ಹರಿಸುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಛತ್ತೀಸ್‌ಗಢದಲ್ಲಿ ಆರ್ಥಿಕ ಕಾರಿಡಾರ್ ಮತ್ತು ಆಧುನಿಕ ಹೆದ್ದಾರಿಗಳ ಬಗ್ಗೆ ಪ್ರಸ್ತಾಪಿಸಿದರು. 2014ಕ್ಕೆ ಹೋಲಿಸಿದರೆ, ಛತ್ತೀಸ್‌ಗಢದ ರೈಲ್ವೆ ಬಜೆಟ್ ಅನ್ನು ಸುಮಾರು 20 ಪಟ್ಟು ಹೆಚ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಸ್ವಾತಂತ್ರ್ಯ ಬಂದ ಹಲವು ವರ್ಷಗಳ ಬಳಿಕ ʻತರೋಕಿʼಯು ಹೊಸ ರೈಲ್ವೆ ಮಾರ್ಗದ ಉಡುಗೊರೆ ಪಡೆಯುತ್ತಿದೆ ಎಂದು ಅವರು ಹೇಳಿದರು. ಈ ಮಾರ್ಗದ ಹೊಸ ಡೆಮು ರೈಲು ಸೇವೆಯು ದೇಶದ ರೈಲ್ವೆ ನಕ್ಷೆಯಲ್ಲಿ ತರೋಕಿಯನ್ನು ಸಂಪರ್ಕಿಸುತ್ತದೆ, ಇದು ರಾಜಧಾನಿ ರಾಯ್‌ಪುರಕ್ಕೆ ಪ್ರಯಾಣವನ್ನು ಸುಲಭಗೊಳಿಸುತ್ತದೆ ಎಂದರು. ಜಗದಲ್‌ಪುರ ಮತ್ತು ದಾಂತೇವಾಡ ನಡುವಿನ ರೈಲು ಮಾರ್ಗ ಡಬ್ಲಿಂಗ್‌ ಯೋಜನೆಯು ಸರಕು-ಸಾಗಣೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣವನ್ನು ಸುಲಭಗೊಳಿಸುತ್ತದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

ರೈಲ್ವೆ ಹಳಿಗಳ 100% ವಿದ್ಯುದ್ದೀಕರಣ ಕಾರ್ಯವನ್ನು ಛತ್ತೀಸ್‌ಗಢ ಪೂರ್ಣಗೊಳಿಸಿರುವುದಕ್ಕೆ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ʻವಂದೇ ಭಾರತ್ʼ ರೈಲು ಕೂಡ ಸಂಚರಿಸುತ್ತಿದೆ. "ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಛತ್ತೀಸ್‌ಗಢದ 30ಕ್ಕೂ ಹೆಚ್ಚು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಅದರಲ್ಲಿ 7 ನಿಲ್ದಾಣಗಳ ಪುನರಾಭಿವೃದ್ಧಿಗೆ ಈಗಾಗಲೇ ಶಂಕುಸ್ಥಾಪನೆ ಮಾಡಲಾಗಿದೆ. ಬಿಲಾಸ್‌ಪುರ, ರಾಯ್‌ಪುರ ಮತ್ತು ದುರ್ಗ್ ನಿಲ್ದಾಣದ ಜೊತೆಗೆ ಇಂದು ಜಗದಲ್‌ಪುರ ನಿಲ್ದಾಣವನ್ನು ಈ ಪಟ್ಟಿಗೆ ಸೇರಿಸಲಾಗಿದೆ", ಎಂದು ಪ್ರಧಾನಿ ಹೇಳಿದರು. "ಮುಂದಿನ ದಿನಗಳಲ್ಲಿ, ಜಗದಲ್‌ಪುರ ನಿಲ್ದಾಣವು ನಗರದ ಮುಖ್ಯ ಕೇಂದ್ರವಾಗಲಿದೆ ಮತ್ತು ಇಲ್ಲಿನ ಪ್ರಯಾಣಿಕರ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಕಳೆದ ಒಂಬತ್ತು ವರ್ಷಗಳಲ್ಲಿ ರಾಜ್ಯದ 120ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯವನ್ನು ಒದಗಿಸಲಾಗಿದೆ," ಎಂದು ಅವರು ತಿಳಿಸಿದರು.

"ಛತ್ತೀಸ್‌ಗಢದ ಜನರ ಜೀವನವನ್ನು ಸುಲಭಗೊಳಿಸಲು ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ," ಎಂದು ಶ್ರೀ ಮೋದಿ ಹೇಳಿದರು. ಇಂದಿನ ಯೋಜನೆಗಳು ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತವೆ, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಮತ್ತು ರಾಜ್ಯದಲ್ಲಿ ಹೊಸ ಕೈಗಾರಿಕೆಗಳನ್ನು ಪ್ರೋತ್ಸಾಹಿಸುತ್ತವೆ ಎಂದರು. ಭಾಷಣದ ಕೊನೆಯಲ್ಲಿ ಪ್ರಧಾನಮಂತ್ರಿಯವರು ಛತ್ತೀಸ್‌ಗಢದ ಅಭಿವೃದ್ಧಿಯ ಪಯಣಕ್ಕೆ ಕೇಂದ್ರ ಸರ್ಕಾರ ತನ್ನ ಬೆಂಬಲವನ್ನು ಮುಂದುವರಿಸಲಿದೆ ಮತ್ತು ರಾಷ್ಟ್ರದ ಹಣೆಬರಹವನ್ನು ಬದಲಾಯಿಸುವಲ್ಲಿ ರಾಜ್ಯವು ತನ್ನ ನಿರ್ಣಾಯಕ ಪಾತ್ರವನ್ನು ನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಕ್ಕಾಗಿ ಮತ್ತು ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತನಶೀಲರಾಗಿದ್ದಕ್ಕಾಗಿ ಛತ್ತೀಸ್‌ಗಢದ ರಾಜ್ಯಪಾಲ ಶ್ರೀ ಬಿಸ್ವಭೂಷಣ್ ಹರಿಚಂದನ್ ಅವರಿಗೆ ಪ್ರಧಾನಿ ಧನ್ಯವಾದ ಅರ್ಪಿಸಿದರು.

ಛತ್ತೀಸ್‌ಗಢದ ರಾಜ್ಯಪಾಲ ಶ್ರೀ ಬಿಸ್ವಭೂಷಣ್ ಹರಿಚಂದನ್ ಮತ್ತು ಸಂಸತ್ ಸದಸ್ಯ ಶ್ರೀ ಮೋಹನ್ ಮಾಂಡವಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ʻಆತ್ಮನಿರ್ಭರ ಭಾರತʼದ ಆಶಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು, ಬಸ್ತಾರ್ ಜಿಲ್ಲೆಯ ನಗರ್‌ನಾರ್‌ನಲ್ಲಿ ʻಎನ್‌ಎಂಡಿಸಿ ಸ್ಟೀಲ್ ಲಿಮಿಟೆಡ್ʼನ ಉಕ್ಕು ಸ್ಥಾವರವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. 23,800 ಕೋಟಿ ರೂ.ಗಿಂತಲೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾದ ಈ ಉಕ್ಕು ಸ್ಥಾವರವು ʻಗ್ರೀನ್ ಫೀಲ್ಡ್ʼ ಯೋಜನೆಯಾಗಿದ್ದು, ಉತ್ತಮ ಗುಣಮಟ್ಟದ ಉಕ್ಕನ್ನು ಉತ್ಪಾದಿಸುತ್ತದೆ. ನಗರ್‌ನಾರ್‌ನಲ್ಲಿರುವ ʻಎನ್‌ಎಂಡಿಸಿ ಸ್ಟೀಲ್ ಲಿಮಿಟೆಡ್ʼನ ಉಕ್ಕು ಸ್ಥಾವರವು, ಪ್ರಧಾನ ಸ್ಥಾವರದಲ್ಲಿ ಹಾಗೂ ಪೂರಕ ಮತ್ತು ಕೆಳಮಟ್ಟದ ಕೈಗಾರಿಕೆಗಳಲ್ಲಿ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಇದು ವಿಶ್ವದ ಉಕ್ಕಿನ ನಕ್ಷೆಯಲ್ಲಿ ಬಸ್ತಾರ್ನ ಗುರುತು ಮೂಡಿಸುತ್ತದೆ ಮತ್ತು ಈ ಪ್ರದೇಶದ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ.

ಇದೇ ವೇಳೆ, ದೇಶಾದ್ಯಂತ ರೈಲ್ವೆ ಮೂಲಸೌಕರ್ಯವನ್ನು ಸುಧಾರಿಸುವ ಪ್ರಧಾನಮಂತ್ರಿಯವರ ದೂರದೃಷ್ಟಿಗೆ ಅನುಗುಣವಾಗಿ, ಅನೇಕ ರೈಲು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಲಾಯಿತು. ಅಂತಗಢ್‌ ಮತ್ತು ತರೋಕಿ ನಡುವಿನ ಹೊಸ ರೈಲು ಮಾರ್ಗ ಮತ್ತು ಜಗದಲ್‌ಪುರ ಮತ್ತು ದಾಂತೇವಾಡ ನಡುವಿನ ರೈಲು ಮಾರ್ಗ ಡಬ್ಲಿಂಗ್‌ ಯೋಜನೆಯನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಬೋರಿಡಾಂಡ್- ಸೂರಜ್‌ಪುರ ರೈಲು ಮಾರ್ಗ ಡಬ್ಲಿಂಗ್‌ ಯೋಜನೆ ಮತ್ತು ʻಅಮೃತ್ ಭಾರತ್ ನಿಲ್ದಾಣʼ ಯೋಜನೆಯಡಿ ಜಗದಲ್‌ಪುರ ನಿಲ್ದಾಣದ ಪುನರಾಭಿವೃದ್ಧಿಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು. ʻತರೋಕಿ- ರಾಯ್‌ಪುರ್ ಡೆಮು ರೈಲುʼ ಸೇವೆಗೂ ಪ್ರಧಾನಮಂತ್ರಿಯವರು ಹಸಿರು ನಿಶಾನೆ ತೋರಿದರು. ಈ ರೈಲು ಯೋಜನೆಗಳು ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಸಂಪರ್ಕಜಾಲವನ್ನು ಸುಧಾರಿಸುತ್ತವೆ. ಸುಧಾರಿತ ರೈಲು ಮೂಲಸೌಕರ್ಯ ಮತ್ತು ಹೊಸ ರೈಲು ಸೇವೆಯು ಸ್ಥಳೀಯ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಸಹಾಯಕವಾಗುತ್ತದೆ.

ಪ್ರಧಾನಮಂತ್ರಿಯವರು ರಾಷ್ಟ್ರೀಯ ಹೆದ್ದಾರಿ 43ರ 'ಕುಂಕುರಿಯಿಂದ ಛತ್ತೀಸ್‌ಗಢ - ಜಾರ್ಖಂಡ್ ಗಡಿ ವಿಭಾಗ'ದವರೆಗೆ ರಸ್ತೆ ಮೇಲ್ದರ್ಜೆಗೇರಿಸುವ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಹೊಸ ರಸ್ತೆಯು ರಸ್ತೆ ಸಂಪರ್ಕವನ್ನು ಸುಧಾರಿಸುವುದರ ಜೊತೆಗೆ ಈ ಪ್ರದೇಶದ ಜನರಿಗೆ ಪ್ರಯೋಜನ ಹೆಚ್ಚಿಸಲಿದೆ.

 

***


(Release ID: 1963729) Visitor Counter : 107