ಸಂಪುಟ

ನವದೆಹಲಿ ಜಿ 20 ಶೃಂಗಸಭೆಯ ಯಶಸ್ಸಿನ ಬಗ್ಗೆ ಕ್ಯಾಬಿನೆಟ್ ನಿರ್ಣಯ

Posted On: 13 SEP 2023 8:53PM by PIB Bengaluru

2023 ಸೆಪ್ಟೆಂಬರ್ 9 ಮತ್ತು 10ರಂದು ನವದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯ ಯಶಸ್ಸನ್ನು ಶ್ಲಾಘಿಸುವ ನಿರ್ಣಯಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಇಂದು ಅಂಗೀಕಾರ ನೀಡಿದೆ.

‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ವಿಷಯದ ವಿವಿಧ ಅಂಶಗಳನ್ನು ರೂಪಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯನ್ನು ಸಂಪುಟ ಸಭೆ ಶ್ಲಾಘಿಸಿದೆ. ಪ್ರಧಾನಮಂತ್ರಿ ಅವರ ಜನ ಭಾಗಿದಾರಿ ಕಾರ್ಯವಿಧಾನವು ನಮ್ಮ ಸಮಾಜದ ಎಲ್ಲ ವರ್ಗಗಳನ್ನು ಜಿ-20 ಶೃಂಗಸಭೆಯ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿತು. ದೇಶದ 60 ನಗರಗಳಲ್ಲಿ ಜರುಗಿದ 200ಕ್ಕಿಂತ ಅಧಿಕ ಸಭೆಗಳು ಜಿ-20 ಕಾರ್ಯಕ್ರಮಗಳಿಗೆ ಅಭೂತಪೂರ್ವ ಹೆಜ್ಜೆಗುರುತು ಮೂಡಿಸಿವೆ. ಇದರ ಪರಿಣಾಮವಾಗಿ, ಭಾರತದ ಅಧ್ಯಕ್ಷತೆಯಲ್ಲಿ ಸಂಭ್ರಮವಾಗಿ ಜರುಗಿದ ಜಿ-20 ಶೃಂಗಸಭೆ ನಿಜಕ್ಕೂ ಜನಕೇಂದ್ರಿತವಾಗಿತ್ತು ಮತ್ತು ಒಟ್ಟಾರೆ ರಾಷ್ಟ್ರೀಯ ಪ್ರಯತ್ನವಾಗಿ ಹೊರಹೊಮ್ಮಿತು.

ಶೃಂಗಸಭೆಯ ಫಲಿತಾಂಶಗಳು ಪರಿವರ್ತನಾಶೀಲವಾಗಿವೆ. ಇವು ಮುಂದಿನ ದಶಕಗಳಲ್ಲಿ ಜಾಗತಿಕ ಕ್ರಮಗಳನ್ನು ಮರುರೂಪಿಸಲು ಭಾರತಕ್ಕೆ ಕೊಡುಗೆ ನೀಡುತ್ತವೆ ಎಂದು ಸಚಿವ ಸಂಪುಟ ಸಭೆ ಭಾವಿಸಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಕಾರಗೊಳಿಸುವಲ್ಲಿ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಕಾರ್ಯವೈಖರಿ ಸುಧಾರಿಸುವಲ್ಲಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಹೆಚ್ಚಿಸುವಲ್ಲಿ, ಹಸಿರು ಅಭಿವೃದ್ಧಿ ಒಪ್ಪಂದ ಉತ್ತೇಜಿಸುವಲ್ಲಿ ಮತ್ತು ಮಹಿಳೆಯರ ನೇತೃತ್ವದ ಅಭಿವೃದ್ಧಿ ಉತ್ತೇಜಿಸುವಲ್ಲಿ ಆದ್ಯತೆಯ ಗಮನ ಹರಿಸಲಾಗಿದೆ.

ಪೂರ್ವ-ಪಶ್ಚಿಮ ಧ್ರುವೀಕರಣವು ಬಲಿಷ್ಠವಾಗಿದ್ದಾಗ ಮತ್ತು ಉತ್ತರ-ದಕ್ಷಿಣ ವಿಭಜನೆಯು ಉತ್ತುಂಗ ಸ್ಥಿತಿ ತಲುಪಿದ್ದ ಸಂಭರ್ಭದಲ್ಲೇ, ಪ್ರಧಾನ ಮಂತ್ರಿ ಅವರು ನಡೆಸಿದ ಸತತ ಪ್ರಯತ್ನಗಳು ದೈನಂದಿನ ಪ್ರಮುಖ ವಿಷಯಗಳ ಬಗ್ಗೆ ನಿರ್ಣಾಯಕ ಒಮ್ಮತ ಸೃಷ್ಟಿಸಿದವು ಎಂಬುದನ್ನು ಸಂಪುಟ ಸಭೆ ಗಮನಿಸಿದೆ.

'ಜಾಗತಿಕ ದಕ್ಷಿಣ ಭಾಗದ ರಾಷ್ಟ್ರಗಳ ದನಿ' ಶೃಂಗಸಭೆ ನಡೆಸಿರುವುದು ಭಾರತದ ಅಧ್ಯಕ್ಷತೆಯ ವಿಶಿಷ್ಟ ಅಂಶವಾಗಿದೆ. ಭಾರತದ ಉಪಕ್ರಮವು ಆಫ್ರಿಕಾ ಒಕ್ಕೂಟವನ್ನು ಜಿ-20 ಶೃಂಗದ ಕಾಯಂ ಸದಸ್ಯರನ್ನಾಗಿ ಸ್ವೀಕರಿಸಲು ಕಾರಣವಾಯಿತು ಎಂಬುದು ನಿರ್ದಿಷ್ಟವಾಗಿ ಸಂತೃಪ್ತಿ ನೀಡುವ ವಿಷಯವಾಗಿದೆ.

ನವದೆಹಲಿಯ ಶೃಂಗಸಭೆಯು ಭಾರತದ ಸಮಕಾಲೀನ ತಂತ್ರಜ್ಞಾನದ ಪ್ರಗತಿ, ನಮ್ಮ ಪರಂಪರೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಪ್ರದರ್ಶನಕ್ಕೆ ಒಂದು ಸುಸಂದರ್ಭವನ್ನು ಹುಟ್ಟುಹಾಕಿತು. ಇದನ್ನು ಜಿ-20 ಸದಸ್ಯ ರಾಷ್ಟ್ರಗಳ ನಾಯಕರು ಮತ್ತು ಪ್ರತಿನಿಧಿಗಳು ವ್ಯಾಪಕವಾಗಿ ಮೆಚ್ಚಿದರು.

ಅಂತಾರಾಷ್ಟ್ರೀಯ ಆರ್ಥಿಕತೆಯನ್ನು ಸಶಕ್ತಗೊಳಿಸುವುದು, ಅಭಿವೃದ್ಧಿಗೆ ಹೆಚ್ಚಿನ ಸಂಪನ್ಮೂಲಗಳ ಲಭ್ಯತೆ, ಪ್ರವಾಸೋದ್ಯಮ ಕ್ಷೇತ್ರದ ವಿಸ್ತರಣೆ, ಜಾಗತಿಕ ಉದ್ಯೋಗ ಅವಕಾಶಗಳು, ಸಿರಿಧಾನ್ಯಗಳ ಉತ್ಪಾದನೆ ಮತ್ತು ಬಳಕೆಯ ಮೂಲಕ ಬಲವಾದ ಆಹಾರ ಭದ್ರತೆ ಮತ್ತು ಜೈವಿಕ ಇಂಧನಗಳ ವ್ಯಾಪಕ ಉತ್ಪಾದನೆಗೆ ನೀಡಿದ ಆಳವಾದ ಬದ್ಧತೆಯು ಇಡೀ ರಾಷ್ಟ್ರಕ್ಕೆ ಪ್ರಯೋಜನ ಒದಗಿಸುವ ಜಿ-20 ಶೃಂಗಸಭೆಯ ಪ್ರಮುಖ ಫಲಿತಾಂಶಗಳಲ್ಲಿ ಒಂದಾಗಿದೆ.

ಶೃಂಗಸಭೆಯ ಸಮಯದಲ್ಲಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಒಪ್ಪಂದ ಮತ್ತು ಜಾಗತಿಕ ಜೈವಿಕ ಇಂಧನ ಒಕ್ಕೂಟ ಸ್ಥಾಪಿಸುವ ತೀರ್ಮಾನಗಳು ಸಹ ಗಣನೀಯ ಪ್ರಾಮುಖ್ಯತೆಯ ಬೆಳವಣಿಗೆಗಳಾಗಿವೆ.

ಜಿ-20 ಶೃಂಗಸಭೆಯ ಯಶಸ್ಸಿನಲ್ಲಿ ಭಾಗಿಯಾಗಿರುವ ಎಲ್ಲಾ ಸಂಸ್ಥೆಗಳು ಮತ್ತು ವ್ಯಕ್ತಿಗಳ ಕೊಡುಗೆಯನ್ನು ಕೇಂದ್ರ ಸಚಿವ ಸಂಪುಟ ಸಭೆ ಶ್ಲಾಘಿಸಿದೆ. ಇದು ಭಾರತದ ಜನರು ಅದರಲ್ಲೂ ವಿಶೇಷವಾಗಿ ಯುವ ಪೀಳಿಗೆಯು ತನ್ನ ಚಟುವಟಿಕೆಗಳಲ್ಲಿ ಭಾಗವಹಿಸುವ ಉತ್ಸಾಹವನ್ನು ಗುರುತಿಸಿತು. ವಿಶ್ವದಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಭಾರತೀಯ ಜಿ- 20 ಅಧ್ಯಕ್ಷತೆಗೆ ಪ್ರಬಲವಾದ ನಿರ್ದೇಶನ ನೀಡುವಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಸಂಪುಟ ಸಭೆ ಗುರುತಿಸಿ, ನಿರ್ಣಯ ಅಂಗೀಕರಿಸಿದೆ.

 

***

 



(Release ID: 1957211) Visitor Counter : 136