ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಜಾಗತಿಕ ಜೈವಿಕ ಇಂಧನಗಳ ಒಕ್ಕೂಟ (ಜಿಬಿಎ)
ಜಾಗತಿಕ ಜೈವಿಕ ಇಂಧನಗಳ ಒಕ್ಕೂಟದ ಮೂಲಕ ಭಾರತವು ಜೈವಿಕ ಇಂಧನ ಕ್ಷೇತ್ರಕ್ಕೆ ಹೊಸ ಪಥವನ್ನು ಜಗತ್ತಿಗೆ ತೋರಿಸಲಿದೆ: ಪೆಟ್ರೋಲಿಯಂ ಸಚಿವ ಶ್ರೀ ಹರ್‌ದೀಪ್ ಸಿಂಗ್ ಪುರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಈ ಪ್ರಯತ್ನದಿಂದ ಜಗತ್ತಿನಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅವಲಂಬನೆ ತಗ್ಗಿಸುವುದು ಖಚಿತ: ಶ್ರೀ ಹರ್‌ದೀಪ್ ಸಿಂಗ್ ಪುರಿ
ಇದು ನಮ್ಮ ರೈತರಿಗೆ ಹೆಚ್ಚುವರಿ ಆದಾಯ ಮೂಲವಾಗುವ ಮೂಲಕ ಅವರನ್ನು ‘ಅನ್ನದಾತರಿಂದ ಶಕ್ತಿದಾತʼರಾಗಿ ಪರಿವರ್ತನೆ ಹೊಂದಲು ಉತ್ತೇಜಿಸುತ್ತದೆ: ಶ್ರೀ ಹರ್‌ದೀಪ್ ಸಿಂಗ್ ಪುರಿ
Posted On:
11 SEP 2023 12:13PM by PIB Bengaluru
ಜಾಗತಿಕ ಜೈವಿಕ ಇಂಧನ ಒಕ್ಕೂಟದ ಮೂಲಕ ಭಾರತವು ಜೈವಿಕ ಇಂಧನ ಕ್ಷೇತ್ರಕ್ಕೆ ಹೊಸ ಪಥವನ್ನು ಜಗತ್ತಿಗೆ ತೋರಿಸಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ವಸತಿ ಹಾಗೂ ನಗರ ವ್ಯವಹಾರಗಳ ಸಚಿವ ಶ್ರೀ ಹರ್ ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣ ʼಎಕ್ಸ್' ನಲ್ಲಿ ಸರಣಿ ಸಂದೇಶಗಳ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಕೇಂದ್ರ ಸಚಿವರು, ʼವಸುಧೈವ ಕುಟುಂಬಕಂ' ಮಂತ್ರವನ್ನು ಪಾಲಿಸುತ್ತಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಈ ಪ್ರಯತ್ನವು ಖಂಡಿತವಾಗಿಯೂ ಪ್ರಪಂಚದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅವಲಂಬನೆಯನ್ನು ತಗ್ಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿ-20 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಾಗತಿಕ ಜೈವಿಕ ಇಂಧನ ಒಕ್ಕೂಟ ರಚನೆಯನ್ನು ಘೋಷಿಸಿರುವುದು ಜಾಗತಿಕ ಇಂಧನ ವಲಯದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. 19 ದೇಶಗಳು ಮತ್ತು 12 ಅಂತರರಾಷ್ಟ್ರೀಯ ಸಂಸ್ಥೆಗಳು ಈಗಾಗಲೇ ಒಕ್ಕೂಟ ಸೇರಲು ಒಪ್ಪಿಕೊಂಡಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಜಿಬಿಎ ಭಾರತದ ನೇತೃತ್ವದಲ್ಲಿ ಮುನ್ನಡೆಯುವ ಒಕ್ಕೂಟವಾಗಿದ್ದು, ಜೈವಿಕ ಇಂಧನ ಬಳಕೆಗೆ ಉತ್ತೇಜಿಸುವ, ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಗಳು, ಅಂತರರಾಷ್ಟ್ರೀಯ ಸಂಸ್ಥೆಗಳು ಹಾಗೂ ಕೈಗಾರಿಕೆಗಳನ್ನು ಒಟ್ಟುಗೂಡಿಸುವ ಉಪಕ್ರಮವಾಗಿದೆ. ಜೈವಿಕ ಇಂಧನಗಳ ಅಭಿವೃದ್ಧಿ ಮತ್ತು ಬಳಕೆಯನ್ನು ಹೆಚ್ಚಿಸಲು ಜೈವಿಕ ಇಂಧನಗಳ ಅತಿದೊಡ್ಡ ಬಳಕೆದಾರರು ಹಾಗೂ ಉತ್ಪಾದಕರನ್ನು ಒಟ್ಟುಗೂಡಿಸುವ ಈ ಉಪಕ್ರಮದಿಂದ ಜೈವಿಕ ಇಂಧನವನ್ನು ಶಕ್ತಿಯ ಪರಿವರ್ತನೆಯ ಕೀಲಿ ಕೈಯಾಗಿ ಇರಿಸಲು ಮತ್ತು ಉದ್ಯೋಗಗಳು ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ.
ಜಿ- 20 ಶೃಂಗಸಭೆಯ ಭಾಗವಾಗಿ ಜಿಬಿಎ ಒಕ್ಕೂಟದ ಪ್ರಾರಂಭದೊಂದಿಗೆ ಸ್ವಚ್ಛ ಹಾಗೂ ಹಸಿರು ಇಂಧನಕ್ಕಾಗಿ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಅನ್ವೇಷಣೆ ಕಾರ್ಯಕ್ಕೆ ಐತಿಹಾಸಿಕ ವೇಗ ತಂದುಕೊಂಡಿದೆ ಎಂದು ಶ್ರೀ ಹರ್‌ದೀಪ್ ಸಿಂಗ್ ಪುರಿ ಗಮನಿಸಿದ್ದಾರೆ.
ಜಾಗತಿಕ ಜೈವಿಕ ಇಂಧನಗಳ ಒಕ್ಕೂಟ ರಚನೆಯಂತಹ ಪರಿಕಲ್ಪನೆಯ ಬೀಜ ಮೊಳಕೆಯೊಡೆಯಲು ಸಹಕರಿಸಿದ ಅಮೆರಿಕದ ಇಂಧನ ಇಲಾಖೆ ಕಾರ್ಯದರ್ಶಿ ಜೆನ್ನಿಫರ್ ಗ್ರಾನ್‌ಹೋಲ್ಮ್, ಬ್ರೆಜಿಲ್‌ನ ಇಂಧನ ಸಚಿವ ಅಲೆಕ್ಸಾಂಡರ್ ಸಿಲ್ವೇರಾ ಹಾಗೂ ಬ್ರಿಜಿಲ್‌ನ ಯುಎನ್‌ಐಸಿಎ ಸಿಇಒ ಹಾಗೂ ಅಧ್ಯಕ್ಷರಾದ ಡಾ. ಎವಾಂಡ್ರೋ ಗಸ್ಸಿ ಅವರಿಗೆ
ಭಾರತೀಯ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಅಭಿನಂದನೆ ಸಲ್ಲಿಸಿದರು.
ಶ್ರೀ ಹರ್ ದೀಪ್ ಸಿಂಗ್ ಪುರಿ ಅವರು ಜಿ-20 ರಾಷ್ಟ್ರಗಳು ಮತ್ತು ಇಂಧನ ಸಂಬಂಧಿತ ಜಾಗತಿಕ ಸಂಸ್ಥೆಗಳು, ಅಂತರರಾಷ್ಟ್ರೀಯ ಇಂಧನ ಏಜೆನ್ಸಿ (ಐಇಎ), ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ), ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯೂಇಒ) ಹಾಗೂ ವರ್ಲ್ಡ್ ಎಲ್ಪಿಜಿ ಅಸೋಸಿಯೇಷನ್ ಮತ್ತು ಇತರೆ ಸಂಸ್ಥೆಗಳು ಜಾಗತಿಕ ಜೈವಿಕ ಇಂಧನ ಒಕ್ಕೂಟದ ಪರಿಕಲ್ಪನೆಯನ್ನು ಬೆಂಬಲಿಸಿರುವುದು ಕಾಣುತ್ತದೆ ಎಂದಿದ್ದಾರೆ. ಹಾಗೆಯೇ ಜಾಗತಿಕ ಜೈವಿಕ ಇಂಧನ ವ್ಯಾಪಾರ ಮತ್ತು ಉತ್ತಮ ಅಭ್ಯಾಸಗಳನ್ನು ಬಲಪಡಿಸಲು ಸದಸ್ಯರಿಗೆ ಶಕ್ತಿ ತುಂಬುವ ಜತೆಗೆ ಜಾಗತಿಕ ಸವಾಲುಗಳನ್ನು ಎದುರಿಸಲು ಅನುವು ಮಾಡಿಕೊಡುತ್ತದೆ. ಇದು ಹೆಚ್ಚುವರಿ ಆದಾಯ ಮೂಲವನ್ನು ಸೃಷ್ಟಿಸುವ ಮೂಲಕ ನಮ್ಮ ರೈತರನ್ನು ‘ಅನ್ನದಾತರಿಂದ ಶಕ್ತಿದಾತʼರನ್ನಾಗಿ ಪರಿವರ್ತಿಸುವುದನ್ನು ಉತ್ತೇಜಿಸುತ್ತದೆ. ಕಳೆದ 9 ವರ್ಷದಲ್ಲಿ ನಮ್ಮ ರೈತರಿಗೆ ರೂ. 71,600 ಕೋಟಿ ನೀಡಿದ್ದೇವೆ. 2025ರ ಹೊತ್ತಿಗೆ ಇ-20ರ ಅನುಷ್ಠಾನದೊಂದಿಗೆ, ಭಾರತಕ್ಕೆ ತೈಲ ಆಮದುಗಳಲ್ಲಿ ಸುಮಾರು ರೂ. 45,000 ಕೋಟಿ ಮತ್ತು ವಾರ್ಷಿಕವಾಗಿ 63 ದಶಲಕ್ಷ ಟನ್ ತೈಲ ಉಳಿತಾಯವಾಗಲಿದೆ ಎಂದು ಹೇಳಿದ್ದಾರೆ.
ಮೌಲ್ಯ ಸರಪಳಿಯಲ್ಲಿ ಸಾಮರ್ಥ್ಯವರ್ಧನೆಯ ಕಸರತ್ತುಗಳು, ರಾಷ್ಟ್ರೀಯ ಕಾರ್ಯಕ್ರಮಗಳಿಗೆ ತಾಂತ್ರಿಕ ಬೆಂಬಲ ಮತ್ತು ನೀತಿ ನಿರೂಪಣೆಯ ಅನುಭವ ಹಂಚಿಕೆಯನ್ನು ಉತ್ತೇಜಿಸುವ ಮೂಲಕ ವಿಶ್ವಾದ್ಯಂತ ಅಭಿವೃದ್ಧಿ ಮತ್ತು ಸಮರ್ಥನೀಯ ಜೈವಿಕ ಇಂಧನಗಳ ನಿಯೋಜನೆಯನ್ನು ಜಿಬಿಎ ಉತ್ತೇಜಿಸುತ್ತದೆ. ಇದು ಕೈಗಾರಿಕೆಗಳು, ದೇಶಗಳು, ಪೂರಕ ವ್ಯವಸ್ಥೆ ಕಲ್ಪಿಸುವವರು ಹಾಗೂ ಬೇಡಿಕೆ ಮತ್ತು ಪೂರೈಕೆಯಲ್ಲಿ ಪ್ರಮುಖ ಪಾಲುದಾರರಿಗೆ ನೆರವಾಗಲು ವರ್ಚುವಲ್ ಮಾರುಕಟ್ಟೆ ಸ್ಥಳವನ್ನು ಸಜ್ಜುಗೊಳಿಸಲು ಅನುಕೂಲ ಮಾಡಿಕೊಡಲಿದೆ. ಹಾಗೆಯೇ ಅಂತಿಮ ಬಳಕೆದಾರರಿಗೆ ಸುಗಮವಾಗಿ ತಲುಪಲು ತಂತ್ರಜ್ಞಾನ ಪೂರೈಕೆದಾರರನ್ನೂ ಸಂಪರ್ಕಿಸಿ ಜೋಡಿಸಲು ನೆರವಾಲಿಗದೆ. ಇದು ಜೈವಿಕ ಇಂಧನ ಅಳವಡಿಕೆ ಮತ್ತು ವ್ಯಾಪಾರವನ್ನು ಉತ್ತೇಜಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಮಾನದಂಡಗಳು, ಸಂಕೇತಗಳು, ಸುಸ್ಥಿರತೆಯ ತತ್ವಗಳು ಮತ್ತು ನಿಬಂಧನೆಗಳ ಅಭಿವೃದ್ಧಿ, ಅಳವಡಿಕೆ ಮತ್ತು ಅನುಷ್ಠಾನವನ್ನು ಸುಗಮಗೊಳಿಸುತ್ತದೆ ಎಂದು ವಿಶ್ಲೇಷಿಸಿದ್ದಾರೆ.
ಈ ಉಪಕ್ರಮವು ಭಾರತಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಲಿದೆ. ಭಾರತ ಅಧ್ಯಕ್ಷತೆ ವಹಿಸಿರುವ ಜಿ- 20 ಶೃಂಗಸಭೆಯ ಫಲಶ್ರುತಿಯಾಗಿ ಜಿಬಿಎ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನವನ್ನು ಇನ್ನಷ್ಟು ಉತ್ಕೃಷ್ಟಗೊಳಿಸಲಿದೆ. ಮಾತ್ರವಲ್ಲದೆ, ಒಕ್ಕೂಟವು ರಾಷ್ಟ್ರಗಳ ಸಹಯೋಗದ ಮೇಲೆ ಗಮನ ಕೇಂದ್ರೀಕರಿಸುವ ಜತೆಗೆ ತಂತ್ರಜ್ಞಾನ ಹಾಗೂ ಉಪಕರಣಗಳ ರಫ್ತಿನಲ್ಲಿ ಭಾರತೀಯ ಕೈಗಾರಿಕೆಗಳಿಗೆ ಹೆಚ್ಚುವರಿ ಅವಕಾಶಗಳನ್ನು ಸೃಷ್ಟಿಸಲಿದೆ. ಇದು ಸದ್ಯ ಭಾರತದಲ್ಲಿ ಅಸ್ತಿತ್ವದಲ್ಲಿರುವ ಜೈವಿಕ ಇಂಧನ ಕಾರ್ಯಕ್ರಮಗಳಾದ ಪಿಎಂ- ಜೀವನ್ ಯೋಜನೆ, ಎಸ್‌ಎಟಿಎಟಿ, ಗೋಬರ್ಧನ್ ಯೋಜನೆಗಳಿಗೆ ಇನ್ನಷ್ಟು ವೇಗ ನೀಡಲು ಸಹಕಾರಿಯಾಗಲಿದೆ. ಆ ಮೂಲಕ ರೈತರ ಆದಾಯವನ್ನು ಹೆಚ್ಚಿಸಲು, ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ದೇಶೀಯ ವ್ಯವಸ್ಥೆಯ ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. ಜಾಗತಿಕ ಎಥೆನಾಲ್ ಮಾರುಕಟ್ಟೆಯು 2022ರಲ್ಲಿ 99.06 ಶತಕೋಟಿ ಡಾಲರ್ ಮೌಲ್ಯ ಹೊಂದಿದ್ದರೆ, 2032ರ ವೇಳೆಗೆ ಶೇ. 5.1% ನಷ್ಟು ಸಿಎಜಿಆರ್ ಬೆಳವಣಿಗೆ ಕಾಣುವ ಮೂಲಕ ಮಾರುಕಟ್ಟೆ ಮೌಲ್ಯವು 2032 ರ ವೇಳೆಗೆ 162.12 ಶತಕೋಟಿ ಡಾಲರ್ ಮೀರುವ ಅಂದಾಜಿದೆ. ಐಇಎ ಪ್ರಕಾರ, ನಿವ್ಚಳ ಶೂನ್ಯ ಗುರಿಯು 2050ರ ವೇಳೆಗೆ 3.5-5ಎಕ್ಸ್ ಜೈವಿಕ ಇಂಧನಗಳ ಬೆಳವಣಿಗೆ ಸಾಧ್ಯತೆಯಿದ್ದು, ಭಾರತಕ್ಕೆ ದೊಡ್ಡ ಅವಕಾಶವನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
****
(Release ID: 1956321)
Visitor Counter : 554
Read this release in:
English
,
Khasi
,
Urdu
,
Marathi
,
Nepali
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam