ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ನರೇಂದ್ರ ತೋಮರ್ ಹಾಗೂ ನೇಪಾಳ ಸರ್ಕಾರದ ಕೃಷಿ ಮತ್ತು ಜಾನುವಾರು ಅಭಿವೃದ್ಧಿ ಸಚಿವ ಡಾ. ಬೇಡು ರಾಮ್ ಭೂಸಾಲ್ ಅವರ ಉಪಸ್ಥಿತಿಯಲ್ಲಿ ಚೊಚ್ಚಲ `ಜಾಗತಿಕ ಆಹಾರ ನಿಯಂತ್ರಕ ಶೃಂಗಸಭೆ-2023’ ಅನ್ನು ಉದ್ಘಾಟಿಸಿದರು.


ಜಾಗತಿಕ ಸುಸ್ಥಿರ ಅಭಿವೃದ್ಧಿಗಾಗಿ ಆಹಾರ ಧಾನ್ಯಗಳು, ಆಹಾರ ಸುರಕ್ಷತೆ ಮತ್ತು ಆಹಾರ ಭದ್ರತೆಯ ವಿಷಯಗಳ ಬಗ್ಗೆ ಆಳವಾಗಿ ಚರ್ಚಿಸುವುದು ಬಹಳ ಮುಖ್ಯ. ʻಒಂದು ಆರೋಗ್ಯʼ ವಿಧಾನದ ಅಡಿಯಲ್ಲಿ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಜವಾಬ್ದಾರಿಯುತ ಕೆಲಸವನ್ನು ಆಹಾರ ನಿಯಂತ್ರಕರು ಹೆಚ್ಚು ಮಾಡಬೇಕಾಗಿದೆ: ಡಾ. ಮಾಂಡವಿಯಾ

"ಸಮತೋಲಿತ, ಸುರಕ್ಷಿತ ಮತ್ತು ಪೌಷ್ಟಿಕ ಆಹಾರವು ರೋಗತಡೆಯ ಆರೈಕೆಯಾಗಿದೆ. ಜೊತೆಗೆ ಇದು ನಮ್ಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಚಿತಪಡಿಸುತ್ತದೆ"

ಭಾರತದ ಕೃಷಿ ಕ್ಷೇತ್ರ ಮತ್ತು ಆಹಾರ ಉದ್ಯಮದ ಗಾತ್ರ ಹಾಗೂ ಪರಿಮಾಣವನ್ನು ಅಗಾಧವಾಗಿದೆ. ಈ ಹಿನ್ನೆಲೆಯಲ್ಲಿ, ಆಹಾರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೃಷಿಗೆ ಬಳಸುವ ಉತ್ಪನ್ನಗಳಿಂದ ಹಿಡಿದು ಸಿದ್ಧ ಉತ್ಪನ್ನಗಳು ಅಂತಿಮ ಗ್ರಾಹಕರನ್ನು ತಲುಪುವವರೆಗೆ ಸಂಪೂರ್ಣ ಮೌಲ್ಯ ಸರಪಳಿಯನ್ನು ಒಂದೇ ಘಟಕವಾಗಿ ಪರಿಗಣಿಸುವುದು ಅತ್ಯಗತ್ಯ: ಶ್ರೀ ನರೇಂದ್ರ ತೋಮರ್

Posted On: 20 JUL 2023 12:57PM by PIB Bengaluru

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ನರೇಂದ್ರ ತೋಮರ್ ಹಾಗೂ ವಿಶೇಷ ಅತಿಥಿಗಳಾದ ನೇಪಾಳ ಸರ್ಕಾರದ ಕೃಷಿ ಮತ್ತು ಜಾನುವಾರು ಅಭಿವೃದ್ಧಿ ಸಚಿವ ಡಾ. ಬೇಡು ರಾಮ್ ಭೂಸಾಲ್ ಅವರ ಉಪಸ್ಥಿತಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಮೊದಲ ʻಜಾಗತಿಕ ಆಹಾರ ನಿಯಂತ್ರಕರ ಶೃಂಗಸಭೆ-2023ʼ ಅನ್ನು ಇಂದು ಉದ್ಘಾಟಿಸಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಹಾಯಕ ಸಚಿವರಾದ ಪ್ರೊ.ಎಸ್.ಪಿ. ಸಿಂಗ್ ಬಘೇಲ್ ಮತ್ತು ಡಾ.ಭಾರತಿ ಪ್ರವೀಣ್ ಪವಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಶೃಂಗಸಭೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ʻಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರʼ(ಎಫ್ಎಸ್ಎಸ್ಎಐ) ಏರ್ಪಡಿಸಿದೆ. ಆಹಾರ ಮೌಲ್ಯ ಸರಪಳಿಯುದ್ದಕ್ಕೂ, ಆಹಾರ ಸುರಕ್ಷತಾ ವ್ಯವಸ್ಥೆಗಳು ಮತ್ತು ನಿಯಂತ್ರಕ ನೀತಿಗಳನ್ನು ಬಲಪಡಿಸಲು ನೆರವಾಗಬಲ್ಲ ಉಪಕ್ರಮಗಳ ಪರಸ್ಪರ ವಿನಿಮಯಕ್ಕಾಗಿ ಆಹಾರ ನಿಯಂತ್ರಕರ ಜಾಗತಿಕ ವೇದಿಕೆಯೊಂದನ್ನು ರಚಿಸುವ ಪ್ರಯತ್ನ ಇದಾಗಿದೆ.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾ.ಮಾಂಡವಿಯಾ, "ಸುರಕ್ಷಿತ ಆಹಾರ ಮತ್ತು ಉತ್ತಮ ಆರೋಗ್ಯವು ಪರಸ್ಪರ ಪೂರಕವಾಗಿವೆ. ಸಮತೋಲಿತ, ಸುರಕ್ಷಿತ ಮತ್ತು ಪೌಷ್ಟಿಕ ಆಹಾರವು ರೋಗ ತಡೆಗೆ ನೆರವಾಗುತ್ತದೆ. ಜೊತೆಗೆ, ನಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಚಿತಪಡಿಸುತ್ತದೆ,ʼʼ ಎಂದರು. ಆಹಾರ ಸುರಕ್ಷತೆಯ ಮಹತ್ವವನ್ನು ಒತ್ತಿಹೇಳಿದ ಅವರು, "ಜಾಗತಿಕ ಸುಸ್ಥಿರ ಅಭಿವೃದ್ಧಿಗಾಗಿ ಆಹಾರ ಧಾನ್ಯಗಳು, ಆಹಾರ ಸುರಕ್ಷತೆ ಮತ್ತು ಆಹಾರ ಭದ್ರತೆಯ ವಿಷಯಗಳ ಬಗ್ಗೆ ಆಳವಾಗಿ ಚರ್ಚಿಸುವುದು ಬಹಳ ಮುಖ್ಯ. ಹವಾಮಾನ, ಮಾನವ, ಪ್ರಾಣಿ ಮತ್ತು ಸಸ್ಯ ಸಂಕುಲದ ಆರೋಗ್ಯವನ್ನು ಒಟ್ಟಾಗಿ ನೋಡಲು ಒಂದು ಸಮಗ್ರ ವೇದಿಕೆಯನ್ನು ಒದಗಿಸಬಲ್ಲ ʻಒಂದು ಆರೋಗ್ಯʼ ವಿಧಾನದ ಅಡಿಯಲ್ಲಿ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಬೇಕಾಗಿದೆ. ಈ ನಿಟ್ಟಿನಲ್ಲಿ ಆಹಾರ ನಿಯಂತ್ರಕರು ಹೆಚ್ಚು ಜವಾಬ್ದಾರಿ ಹೊಂದಿದ್ದಾರೆ. ಪ್ರಸ್ತುತ ಭಾರತ ʻಜಿ-20ʼ ಅಧ್ಯಕ್ಷತೆ ವಹಿಸಿರುವ ಈ ಸಂದರ್ಭದಲ್ಲಿ, ʻಆರೋಗ್ಯ ಕಾರ್ಯಪಡೆʼಯ ಪಾಲಿಗೆ ʻಒಂದು ಆರೋಗ್ಯʼವು ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

ಜಾಗತಿಕ ಸಮುದಾಯದ ಮತ್ತಷ್ಟು ಒಳಿತು ಮತ್ತು ಕಲ್ಯಾಣಕ್ಕಾಗಿ ಅಂತರರಾಷ್ಟ್ರೀಯ ಸಹಕಾರ ಮತ್ತು ಒಗ್ಗಟ್ಟಿನ ಮಹತ್ವವನ್ನು ಡಾ.ಮಾಂಡವಿಯಾ ಒತ್ತಿಹೇಳಿದರು. "ಈ ಸಮ್ಮೇಳನವು ಈ ವರ್ಷದ ಭಾರತದ ʻಜಿ-20ʼ ಅಧ್ಯಕ್ಷತೆಯ ಧ್ಯೇಯವಾಕ್ಯವಾದ ʻವಸುದೇವ ಕುಟುಂಬಕಂ: ಒಂದು ಭೂಮಿ, ಒಂದು ರಾಷ್ಟ್ರʼದ ಜೊತೆಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ ಮತ್ತು ಅದಕ್ಕೆ ಪೂರಕವಾಗಿದೆ. ವಿವಿಧ ಭೌಗೋಳಿಕ ಪ್ರದೇಶಗಳು ವೈವಿಧ್ಯಮಯ ಕೃಷಿ-ಹವಾಮಾನ ಹೊಂದಿರುವುದರಿಂದ, ಆಹಾರ ಸುರಕ್ಷತಾ ಮಾರ್ಗಸೂಚಿಗಳಿಗೆ ಯಾವುದೇ ಮಾನದಂಡವನ್ನು ಅನ್ವಯಿಸಲಾಗುವುದಿಲ್ಲ,ʼʼ ಎಂದು ಅವರು ಹೇಳಿದರು. "ಪ್ರಾದೇಶಿಕ ವೈವಿಧ್ಯತೆಯನ್ನು ಜಾಗತಿಕ ಅತ್ಯುತ್ತಮ ಕಾರ್ಯವಿಧಾನಗಳಲ್ಲಿ ಹೇಗೆ ಪರಿಗಣಿಸಬಹುದು ಎಂಬುದನ್ನು ನಾವು ಅನ್ವೇಷಿಸಬೇಕಾಗಿದೆ," ಎಂದು ಅವರು ಹೇಳಿದರು.

ಮಣ್ಣಿನ ಆರೋಗ್ಯವು ಹೇಗೆ ಆಹಾರದ ಆರೋಗ್ಯವನ್ನು ನಿರ್ಧರಿಸುವ ಪ್ರಮುಖ ಅಂಶವಾಗಬಲ್ಲದು ಎಂಬುದನ್ನು ಡಾ. ಮಾಂಡವೀಯಾ ವಿವರಿಸಿದರು. ಆಹಾರ ಕೃಷಿಯಲ್ಲಿ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಮತೋಲಿತ ಬಳಕೆಯನ್ನು ಉತ್ತೇಜಿಸುವ ಹಾಗೂ ಸಾವಯವ, ನೈಸರ್ಗಿಕ ಮತ್ತು ಪರ್ಯಾಯ ಕೃಷಿಯನ್ನು ಕೈಗೊಳ್ಳಲು ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಘೋಷಿಸಲಾದ ʻಪಿಎಂ-ಪ್ರಾಣಾಂʼ ಯೋಜನೆಯ ಪ್ರಮುಖ ಲಕ್ಷಣಗಳನ್ನು ಸಚಿವರು ವಿವರಿಸಿದರು. ಆಹಾರ ಕೊರತೆಯು ಜಾಗತಿಕ ಸಮಸ್ಯೆಯಾಗಿದ್ದು, ಇದನ್ನು ಪರಿಹರಿಸಲು ಪರಸ್ಪರ ಸಹಯೋಗದೊಂದಿಗೆ  ಜಾಗತಿಕ ಕ್ರಮಗಳನ್ನು ರೂಪಿಸುವ ಅಗತ್ಯವಿದೆ. ಹೀಗಾಗಿ ʻವಸುದೈವ ಕುಟುಂಬಕಂʼ(ಜಗತ್ತು ಒಂದು ಕುಟುಂಬ) ಎಂಬ ಮನೋಭಾವದಲ್ಲಿ ಎಲ್ಲಾ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಅವರು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಗೌರವಾನ್ವಿತ ಅತಿಥಿ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಆಹಾರವು ಮೂಲಭೂತ ಹಕ್ಕಾಗಿದ್ದು, ಅದರ ಲಭ್ಯತೆ ಮತ್ತು ಕೈಗೆಟುಕುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು. "ಭಾರತದ ಕೃಷಿ ವಲಯ ಮತ್ತು ಆಹಾರ ಉದ್ಯಮದ ಗಾತ್ರ ಮತ್ತು ಪರಿಮಾಣದಲ್ಲಿ ಅಗಾಧವಾದುದು. ಹೀಗಾಗಿ, ಆಹಾರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೃಷಿಗೆ ಬಳಸುವ ಉತ್ಪನ್ನಗಳಿಂದ ಹಿಡಿದು ಗ್ರಾಹಕರನ್ನು ತಲುಪುವ ಅಂತಿಮ ಸಿದ್ಧ ಉತ್ಪನ್ನಗಳವರೆಗೆ ಎಲ್ಲವುಗಳ ಸಂಪೂರ್ಣ ಮೌಲ್ಯ ಸರಪಳಿ ಜಾಲವನ್ನು ಒಂದೇ ಘಟಕವಾಗಿ ಪರಿಗಣಿಸುವುದು ಅತ್ಯಗತ್ಯ," ಎಂದು ಅವರು ಹೇಳಿದರು.

ಆಹಾರ ಪೂರೈಕೆಗೆ ಸಂಬಂಧಿಸಿದ ಯಾವುದೇ ನೀತಿಗಳ ಹೃದಯಭಾಗದಲ್ಲಿ ಸದಾ ರೈತರೇ ಇರಬೇಕು. ಇದರಿಂದ ಅವರ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದನ್ನು ತಡೆಯಬಹುದು ಎಂದು ಕೇಂದ್ರ ಸಚಿವರು ಗಮನಸೆಳೆದರು. ಇತರ ಬೆಳೆಗಳಿಗೆ ಹೋಲಿಸಿದರೆ ಸಿರಿಧಾನ್ಯಗಳು ಹೊಂದಿರುವ ಸಕಾರಾತ್ಮಕ ಗುಣಗಳನ್ನು ಸಚಿವರು ವಿವರಿಸಿದರು. ಕಡಿಮೆ ನೀರಿನ ಬಳಕೆ, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಗೆ ಹೊಂದಾಣಿಕೆ ಮತ್ತು ಹೆಚ್ಚಿನ ಪೌಷ್ಠಿಕಾಂಶ ಮೌಲ್ಯದಂತಹ ಸಕಾರಾತ್ಮಕ ಗುಣಲಕ್ಷಣಗಳನ್ನು ಸಿರಿಧಾನ್ಯಗಳು ಹೊಂದಿವೆ. ಹೀಗಾಗಿ ಅವುಗಳ ಬಳಕೆಯನ್ನು ಉತ್ತೇಜಿಸಬೇಕೆಂದು ಅವರು ಒತ್ತಿ ಹೇಳಿದರು.

ಮೊಟ್ಟ ಮೊದಲ ʻಜಾಗತಿಕ ಆಹಾರ ನಿಯಂತ್ರಕ ಶೃಂಗಸಭೆʼಯನ್ನು ಆಯೋಜಿಸಿದ್ದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯೂಎಚ್‌ಒ) ಮಹಾನಿರ್ದೇಶಕ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ವೀಡಿಯೊ ಸಂದೇಶದ ಮೂಲಕ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ʻಎಫ್ಎಸ್ಎಸ್ಎಐʼ ಅನ್ನು ಅಭಿನಂದಿಸಿದರು. "ಎಲ್ಲೆಡೆ ಪ್ರತಿಯೊಬ್ಬರೂ ಸುರಕ್ಷಿತ ಮತ್ತು ಪೌಷ್ಠಿಕಾಂಶದ ಆಹಾರವನ್ನು ಪಡೆಯುವುದನ್ನು ನಾವು ಸಾಮೂಹಿಕವಾಗಿ ಖಚಿತಪಡಿಸಿಕೊಳ್ಳಬೇಕು" ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ, ಡಾ.ಮಾಂಡವಿಯಾ ಅವರು ʻಫುಡ್‌-ಒ-ಕೊಪೊಯಾʼ ಎಂಬ  ಆಹಾರಗಳ ವರ್ಗವಾರು ಮೊನೊಗ್ರಾಫ್‌ಗಳ ಸಂಗ್ರಹ ಹಾಗೂ ಗುಣಮಟ್ಟ ಮತ್ತು ಆಹಾರ ಸುರಕ್ಷತಾ ಮಾನದಂಡಗಳನ್ನು ಬಿಡುಗಡೆ ಮಾಡಿದರು. ಲೇಬಲ್ ಮತ್ತು ಕ್ಲೈಮ್, ಪ್ಯಾಕೇಜಿಂಗ್, ಪರೀಕ್ಷಾ ವಿಧಾನಗಳು ಹಾಗೂ ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ಎಫ್ಎಸ್ಎಸ್ಆರ್) ಪ್ರಕಾರ ಅನುಸರಿಸಬೇಕಾದ ಇತರ ಯಾವುದೇ ನಿಯಂತ್ರಕ ನಿಯಮಗಳನ್ನು ವಿವರಿಸುವ, ನಿರ್ದಿಷ್ಟ ಉತ್ಪನ್ನ ವರ್ಗಕ್ಕೆ ಅನ್ವಯವಾಗುವ ಎಲ್ಲಾ ಮಾನದಂಡಗಳ ಉಲ್ಲೇಖವನ್ನು ಇದು ಒಳಗೊಂಡಿದೆ.

ʻಸಂಗ್ರಹ್‌(SaNGRAH ) - ರಾಷ್ಟ್ರಗಳಿಗೆ ಸುರಕ್ಷಿತ ಆಹಾರ: ಜಾಗತಿಕ ಆಹಾರ ನಿಯಂತ್ರಣ ಪ್ರಾಧಿಕಾರಗಳ ಕೈಪಿಡಿʼ ಎಂಬ ಸಾಮಾನ್ಯ ನಿಯಂತ್ರಕ ವೇದಿಕೆಗೆ ಕೇಂದ್ರ ಆರೋಗ್ಯ ಸಚಿವರು ಚಾಲನೆ ನೀಡಿದರು. ಇದು ವಿಶ್ವದಾದ್ಯಂತ 76 ದೇಶಗಳ ಆಹಾರ ನಿಯಂತ್ರಣ ಪ್ರಾಧಿಕಾರಗಳ ಮಾಹಿತಿ ಭಂಡಾರವಾಗಿದೆ. ಅವುಗಳ ನಿಯಮಾವಳಿಗಳು, ಆಹಾರ ಸುರಕ್ಷತಾ ಪರಿಸರ ವ್ಯವಸ್ಥೆ, ಆಹಾರ ಪರೀಕ್ಷಾ ಘಟಕಗಳು, ಆಹಾರ ಪ್ರಾಧಿಕಾರಗಳ ಸಂಪರ್ಕ ವಿವರಗಳು, ʻಎಸ್‌ಪಿಎಸ್ʼ / ʻಟಿಬಿಟಿʼ / ʻಕೋಡೆಕ್ಸ್ʼ / ʻಡಬ್ಲ್ಯೂಎಎಚ್‌ಒʼ ಇತ್ಯಾದಿಗಳನ್ನು ಒಳಗೊಂಡಿದೆ. ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಗುಜರಾತಿ, ಮರಾಠಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಈ ಆರು ಪ್ರಾದೇಶಿಕ ಭಾಷೆಗಳಲ್ಲಿ ʻಸಂಗ್ರಹ್‌ʼ ಲಭ್ಯವಿದೆ.

ಶೃಂಗಸಭೆಯ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ʻಸಾಮಾನ್ಯ ಡಿಜಿಟಲ್ ಡ್ಯಾಶ್ ಬೋರ್ಡ್ʼಗೆ ಸಹ ಚಾಲನೆ ನೀಡಿದರು. ಡ್ಯಾಶ್‌ಬೋರ್ಡ್‌ ಒಂದು ಸಾಮಾನ್ಯ ಏಕೀಕೃತ ಐಟಿ-ಪೋರ್ಟಲ್ ಆಗಿದ್ದು, ಇದು ಮಾನದಂಡಗಳು, ನಿಬಂಧನೆಗಳು, ಅಧಿಸೂಚನೆಗಳು, ಸಲಹೆಗಳು, ಮಾರ್ಗಸೂಚಿಗಳು, ಮಾಲಿನ್ಯ ಮಿತಿಗಳು ಮತ್ತು ಭಾರತದಲ್ಲಿ ಆಹಾರ ನಿಯಂತ್ರಕರ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ.

ʻಜಾಗತಿಕ ಆಹಾರ ನಿಯಂತ್ರಕ ಶೃಂಗಸಭೆ-2023ʼ ವೇಳೆ ಎರಡು ದಿನಗಳ ವಸ್ತು ಪ್ರದರ್ಶನಕ್ಕೂ ಡಾ.ಮಾಂಡವಿಯಾ ಚಾಲನೆ ನೀಡಿದರು. ಈ ವಸ್ತುಪ್ರದರ್ಶನವು ಆಹಾರ ಸುರಕ್ಷತೆ, ಆಹಾರ ಮಾನದಂಡಗಳು, ಆಹಾರ ಪರೀಕ್ಷಾ ಸಾಮರ್ಥ್ಯಗಳು, ಉತ್ಪನ್ನ ಸುಧಾರಣೆ ಮತ್ತು ಆಹಾರ ತಂತ್ರಜ್ಞಾನಗಳ ಪ್ರಗತಿಯ ಬಗ್ಗೆ ವಿಚಾರಗಳು ಮತ್ತು ಮಾಹಿತಿಯ ವಿನಿಮಯಕ್ಕೆ ಅವಕಾಶ ಒದಗಿಸುತ್ತದೆ. ಆಹಾರ ವ್ಯವಹಾರ ನಿರ್ವಾಹಕರು (ಎಫ್‌ಬಿಒ); ಕ್ಷಿಪ್ರ ವಿಶ್ಲೇಷಣಾತ್ಮಕ ಆಹಾರ ಪರೀಕ್ಷೆ (ರಾಫ್ಟ್); ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ(ಎಪಿಇಡಿಎ) ಮುಂತಾದ ಸಂಸ್ಥೆಗಳು ಹಾಗೂ ಆಹಾರೋತ್ಪನ್ನ ತಯಾರಕರು; ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಂಪಿಇಡಿಎ), ರಫ್ತು ಪರಿಶೀಲನಾ ಮಂಡಳಿ (ಇಐಸಿ), ಮಸಾಲೆ ಮಂಡಳಿ, ಚಹಾ ಮಂಡಳಿ ಮತ್ತು ಕಾಫಿ ಮಂಡಳಿ ಸೇರಿದಂತೆ ಒಟ್ಟು 35 ಪ್ರದರ್ಶಕರು ಎರಡು ದಿನಗಳಲ್ಲಿ ತಮ್ಮ ಪರಿಣತಿ ಮತ್ತು ಕೊಡುಗೆಗಳನ್ನು ಪ್ರದರ್ಶಿಸಲಿದ್ದಾರೆ. ಪ್ರದರ್ಶನವು ಶ್ರೀ ಅನ್ನ (ಸಿರಿಧಾನ್ಯ) ಕುರಿತ ಮಳಿಗೆಗಳನ್ನು ಸಹ ಒಳಗೊಂಡಿದೆ.

ʻಜಿ-20ʼ ಶೆರ್ಪಾ ಶ್ರೀ ಅಮಿತಾಭ್ ಕಾಂತ್ ಅವರು ಮಾತನಾಡಿ ಕಲಿಕೆಯ ಉದ್ದೇಶಕ್ಕಾಗಿ ಮತ್ತು ಆಹಾರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಾಲಗಳನ್ನು ಬಲಪಡಿಸುವ ಉದ್ದೇಶಕ್ಕಾಗಿ ಈ ವೇದಿಕೆಯನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು. ಇದೇ ವೇಳೆ, ಆಹಾರ ಸುರಕ್ಷತೆಯಲ್ಲಿ ಸುಸ್ಥಿರ ರೀತಿಯಲ್ಲಿ ಹೂಡಿಕೆ ಮಾಡಲು ಕಾರ್ಯವಿಧಾನವನ್ನು ರೂಪಿಸಲು ಸಹ ಈ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಅವರು ಸಭಿಕರನ್ನು ವಿನಂತಿಸಿದರು. ಸದೃಢ ಆಹಾರ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿದ ಅವರು, ಇದಕ್ಕಾಗಿ ಆಹಾರ ವ್ಯರ್ಥವನ್ನು ಕಡಿಮೆ ಮಾಡಬೇಕಲ್ಲದೆ, ಆಹಾರ ಸರಬರಾಜು ಹೆಚ್ಚಿಸಲು ಡಿಜಿಟಲ್ ಸಾಧನಗಳ ಬಳಕೆ ಮಾಡಬೇಕು ಎಂದು ಒತ್ತಿ ಹೇಳಿದರು. ಇದೇ ವೇಳೆ, ಸಿರಿಧಾನ್ಯಗಳಂತಹ ಸ್ಥಿತಿಸ್ಥಾಪಕ ಆಹಾರ ಬೆಳೆಗಳ ಬಳಕೆಯನ್ನು ಉತ್ತೇಜಿಸಿದರು.

ಉದ್ಘಾಟನಾ ಅಧಿವೇಶನದ ವಿಶೇಷ ಭಾಷಣಕಾರರಾಗಿ, ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಅಜಯ್ ಕುಮಾರ್ ಸೂದ್ ಅವರು ಮಾತನಾಡಿದರು. ಆಹಾರ ಸರಬರಾಜಿನಲ್ಲಿ ಪ್ಲಾಸ್ಟಿಕ್, ನ್ಯೂಟ್ರಾಸ್ಯುಟಿಕಲ್ಸ್ ಮತ್ತು ಲೋಹಗಳ ಬಳಕೆಯಿಂದ ಉಂಟಾಗುವ ಸಂಭಾವ್ಯ ಆರೋಗ್ಯ ಅಪಾಯಗಳ ಬಗ್ಗೆ ಚರ್ಚಿಸುವಂತೆ ಸಮ್ಮೇಳನದಲ್ಲಿ ಭಾಗವಹಿಸಿದವರನ್ನು ಅವರು ಒತ್ತಾಯಿಸಿದರು. ಏಕ ಬಳಕೆಯ ಪ್ಲಾಸ್ಟಿಕ್‌ಗೆ ಪರ್ಯಾಯಗಳನ್ನು ಅನ್ವೇಷಿಸಲು, ಆಹಾರ ದರ್ಜೆಯ ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ವರ್ತುಲವನ್ನು ಉತ್ತೇಜಿಸಲು, ಸೂಪರ್‌ ಮಾರ್ಕೆಟ್‌ಗಳಲ್ಲಿ ಹಾಗೂ ಡೆಲಿವರಿ ಸೇವೆಗಳಲ್ಲಿ ಪರಿಸರ ಸ್ನೇಹಿ ವಸ್ತುಗಳ ಬಳಕೆಯನ್ನು ಉತ್ತೇಜಿಸಲು ಕರೆ ನೀಡಿದರು.

ʻಎಫ್ಎಸ್ಎಸ್ಎಐʼನ ಸಿಇಒ ಶ್ರೀ ಜಿ ಕಮಲಾ ವರ್ಧನ ರಾವ್ ಅವರು ಮಾತನಾಡಿ, ಸುರಕ್ಷಿತ ಮತ್ತು ಪೌಷ್ಟಿಕ ಆಹಾರವು ಉತ್ತಮ ಆರೋಗ್ಯಕ್ಕೆ ಅತ್ಯಂತ ಮುಖ್ಯವಾಗಿದೆ. ಅಸುರಕ್ಷಿತ ಆಹಾರವು ಪ್ರತಿವರ್ಷ 600 ದಶಲಕ್ಷ ಸೋಂಕುಗಳು ಮತ್ತು 4.2 ಲಕ್ಷ ಸಾವುಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರು. ಆಹಾರ ಸುರಕ್ಷತೆಯ ನಿರ್ಣಾಯಕ ಅಂಶಗಳ ಬಗ್ಗೆ ಚಿಂತನ ಮಂಥನಕ್ಕೆ ಈ ಸಭೆಯು ಸಾಕ್ಷಿಯಾಗಲಿದ್ದು, ಸುರಕ್ಷಿತ ಆಹಾರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ನವೀನ ಪರಿಹಾರಗಳನ್ನು ಮುಂದೆ ತರಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಆಹಾರ ಸುರಕ್ಷತಾ ವ್ಯವಸ್ಥೆಗಳಿಗೆ ಸಂಬಂಧಿಸಿದ ನಿರ್ಣಾಯಕ ವಿಷಯಗಳ ಬಗ್ಗೆ ದೃಷ್ಟಿಕೋನಗಳು ಮತ್ತು ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು ಪ್ರಪಂಚದಾದ್ಯಂತದ ಆಹಾರ ನಿಯಂತ್ರಕರನ್ನು ʻಜಾಗತಿಕ ಆಹಾರ ನಿಯಂತ್ರಕರ ಶೃಂಗಸಭೆ-2023ʼ ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿದೆ. ಈ ಜಾಗತಿಕ ಶೃಂಗಸಭೆಯು ಜಾಗತಿಕ ಆಹಾರ ನಿಯಂತ್ರಕರ ಪಾತ್ರಗಳು ಮತ್ತು ಜವಾಬ್ದಾರಿಗಳು, ಜಾಗತಿಕ ಆಹಾರ ಸುರಕ್ಷತೆಗೆ ಸವಾಲುಗಳು ಮತ್ತು ಪರಿಹಾರಗಳು, ದೃಢವಾದ ಮಾನದಂಡ ನಿಗದಿ, ಆಹಾರ ತುರ್ತು ಸ್ಪಂದನೆಯಲ್ಲಿ ನಾವೀನ್ಯತೆತೆ ಮುಂತಾದ ವಿಷಯಗಳ ಮೇಲೆ ಗಮನ ಹರಿಸುವ ವಿವಿಧ ತಾಂತ್ರಿಕ ಚರ್ಚಾ ಗೋಷ್ಠಿಗಳನ್ನು ಹೊಂದಿರುತ್ತದೆ.

ಆರೋಗ್ಯ ಸಚಿವಾಲಯದ ವಿಶೇಷ ಅಧಿಕಾರಿ ಶ್ರೀ ಸುಧಾಂಶ್ ಪಂತ್; ವಿವಿಧ ದೇಶಗಳ ಗಣ್ಯರು, ಕೈಗಾರಿಕಾ ಸಂಘಗಳು, ಆಹಾರ ಉದ್ಯಮ, ಸಂಶೋಧನಾ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಇತರ ಸಚಿವಾಲಯಗಳು ಮತ್ತು ʻಎಫ್ಎಸ್ಎಸ್ಎಐʼನ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

****

 



(Release ID: 1941157) Visitor Counter : 142