ಪ್ರಧಾನ ಮಂತ್ರಿಯವರ ಕಛೇರಿ

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ʻಗೀತಾ ಪ್ರೆಸ್‌ʼನ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

Posted On: 07 JUL 2023 6:27PM by PIB Bengaluru

श्री हरिः। वसुदेव सुतं देवं, कंस चाणूर-मर्दनम्।

देवकी परमानन्दं, कृष्णं वंदे जगद्गुरुम्॥
 
ಉತ್ತರ ಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರೇ, ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರೇ, `ಗೀತಾ ಪ್ರೆಸ್’ನ ಶ್ರೀ ಕೇಶೋರಾಮ್ ಅಗರ್ವಾಲ್ ಅವರೇ, ಶ್ರೀ ವಿಷ್ಣು ಪ್ರಸಾದ್ ಅವರೇ, ಸಂಸತ್ ಸದಸ್ಯ ರವಿ ಕಿಶನ್ ಅವರೇ, ಇತರ ಎಲ್ಲಾ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!
 
ಪವಿತ್ರ ʻಸಾವನ್ʼ ಮಾಸ, ಇಂದ್ರನ ಆಶೀರ್ವಾದ, ಶಿವನ ಅವತಾರ ಗುರು ಗೋರಖನಾಥ್ ಅವರ ನೆಲೆ ಮತ್ತು ಹಲವಾರು ಸಂತರ ಭೂಮಿ - ಇದು ಗೋರಖ್‌ಪುರದ ʻಗೀತಾ ಪ್ರೆಸ್! ಸಂತರ ಆಶೀರ್ವಾದಗಳು ಮೂರ್ತರೂಪ ಪಡೆದಾಗ ನಾವು ಅಂತಹ ಸಂತೋಷದ ಸಂದರ್ಭಗಳನ್ನು ಅನುಭವಿಸುತ್ತೇವೆ. ಈ ಬಾರಿ ನಾನು ಗೋರಖ್‌ಪುರಕ್ಕೆ ಭೇಟಿ ನೀಡಿರುವುದು 'ವಿಕಾಸ್ ಭಿ, ವಿರಾಸತ್ ಭಿ' (ಅಭಿವೃದ್ಧಿಯ ಜೊತೆ ಜೊತೆಗೆ ಪರಂಪರೆ) ನೀತಿಗೆ ಅತ್ಯುತ್ತಮ ಉದಾಹರಣೆಯಾಗಿದೆ. ʻಚಿತ್ರಾತ್ಮಕ ಶಿವ ಪುರಾಣʼ ಮತ್ತು ನೇಪಾಳಿ ಭಾಷೆಯಲ್ಲಿ ʻಶಿವ ಪುರಾಣʼವನ್ನು ಲೋಕಾರ್ಪಣೆ ಮಾಡುವ ಅದೃಷ್ಟ ನನ್ನದಾಗಿದೆ. ʻಗೀತಾ ಪ್ರೆಸ್ʼನ ಈ ಕಾರ್ಯಕ್ರಮದ ನಂತರ ನಾನು ಗೋರಖ್‌ಪುರ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಲಿದ್ದೇನೆ.
 
ಗೋರಖ್‌ಪುರ ರೈಲ್ವೆ ನಿಲ್ದಾಣದ ಆಧುನೀಕರಣ ಕಾರ್ಯ ಇಂದು ಪ್ರಾರಂಭವಾಗುತ್ತಿದೆ. ನಾನು ಅದರ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಿನಿಂದ ಜನರು ಆಶ್ಚರ್ಯಚಕಿತರಾಗಿದ್ದಾರೆ. ರೈಲ್ವೆ ನಿಲ್ದಾಣಗಳು ಇಂತಹ ಅದ್ಭುತ ಪರಿವರ್ತನೆಗೆ ಒಳಗಾಗುತ್ತವೆ ಎಂದು ಜನರು ಎಂದಿಗೂ ಊಹಿಸಿರಲಿಲ್ಲ. ಮತ್ತು ಅದೇ ಕಾರ್ಯಕ್ರಮದಲ್ಲಿ, ನಾನು ಗೋರಖ್‌ಪುರದಿಂದ ಲಖನೌಗೆ ʻವಂದೇ ಭಾರತ್ ಎಕ್ಸ್‌ಪ್ರೆಸ್‌ʼ ರೈಲಿಗೆ ಹಸಿರು ನಿಶಾನೆ ತೋರಲಿದ್ದೇನೆ. ಇದೇ ವೇಳೆ, ಜೋಧಪುರ ಮತ್ತು ಅಹಮದಾಬಾದ್ ನಡುವೆ ಸಂಚರಿಸುವ ʻವಂದೇ ಭಾರತ್ ಎಕ್ಸ್‌ಪ್ರೆಸ್ʼಗೆ ಸಹ ಹಸಿರು ನಿಶಾನೆ ತೋರಿಸಲಾಗುವುದು. ʻವಂದೇ ಭಾರತ್ʼ ರೈಲು ನಮ್ಮ ದೇಶದ ಮಧ್ಯಮ ವರ್ಗದ ಜನರಿಗೆ ಆರಾಮದಾಯಕತೆ ಮತ್ತು ಅನುಕೂಲತೆಯ ಹೊಸ ಆಯಾಮ ನೀಡಿದೆ. ಒಂದು ಕಾಲದಲ್ಲಿ ರಾಜಕೀಯ ನಾಯಕರು ತಮ್ಮ ಕ್ಷೇತ್ರಗಳಲ್ಲಿ ನಿರ್ದಿಷ್ಟ ರೈಲನ್ನು ನಿಲ್ಲಿಸುವಂತೆ ಕೋರಿ ಪತ್ರಗಳನ್ನು ಬರೆಯುತ್ತಿದ್ದರು. ಇಂದು, ದೇಶಾದ್ಯಂತದ ನಾಯಕರು ತಮ್ಮ ಕ್ಷೇತ್ರಗಳಲ್ಲಿ ʻವಂದೇ ಭಾರತ್ʼ ರೈಲು ಆರಂಭಿಸುವಂತೆ ಕೋರಿ ನನಗೆ ಪತ್ರಗಳನ್ನು ಬರೆಯುತ್ತಾರೆ. ʻವಂದೇ ಭಾರತ್ʼ ಇಂದು ಒಂದು ಕ್ರೇಜ್ ಆಗಿ ಮಾರ್ಪಟ್ಟಿದೆ. ಈ ಎಲ್ಲಾ ಕಾರ್ಯಕ್ರಮಗಳಿಗಾಗಿ, ಈ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದಕ್ಕಾಗಿ ನಾನು ಗೋರಖ್‌ಪುರದ ಜನರಿಗೆ ಮತ್ತು ನಮ್ಮ ರಾಷ್ಟ್ರದ ಜನರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
 
ಸ್ನೇಹಿತರೇ,
ʻಗೀತಾ ಪ್ರೆಸ್‌ʼ ವಿಶ್ವದ ಒಂದು ಅನನ್ಯ ಮುದ್ರಣಾಲಯವಾಗಿದೆ. ಇದು ಕೇವಲ ಒಂದು ಸಂಸ್ಥೆಯಲ್ಲ, ಬದಲಿಗೆ ಜೀವಂತ ನಂಬಿಕೆಯಾಗಿದೆ. ʻಗೀತಾ ಪ್ರೆಸ್‌ʼ ಕಚೇರಿಯು ಲಕ್ಷಾಂತರ ಜನರ ದೇವಾಲಯಕ್ಕಿಂತ ಕಡಿಮೆಯಲ್ಲ. ಇದು ಭಗವದ್ಗೀತೆಯ ಸಾರವನ್ನು ಅದರ ಹೆಸರಿನಲ್ಲಿ ಮಾತ್ರವಲ್ಲದೆ, ಕೃತಿಯಲ್ಲೂ ಹೊಂದಿದೆ. ಎಲ್ಲಿ ಗೀತೆ ಇದೆಯೋ ಅಲ್ಲಿ ವೈಯಕ್ತಿಕವಾಗಿ ಕೃಷ್ಣ ಇರುತ್ತಾನೆ. ಮತ್ತು ಕೃಷ್ಣ ಎಲ್ಲಿ ಇರುವನೋ ಅಲ್ಲಿ, ಸಹಾನುಭೂತಿ ಮತ್ತು ಕ್ರಿಯೆ ಇರುತ್ತದೆ. ಜ್ಞಾನದ ಜಾಗೃತಿ ಮತ್ತು ವಿಜ್ಞಾನದ ಸಂಶೋಧನೆ ಇರುತ್ತದೆ. ಏಕೆಂದರೆ ಗೀತೆಯ ಶ್ಲೋಕವು 'ವಸುದೇವ ಸರ್ವಂ' ಎಂದು ಹೇಳುತ್ತದೆ - ಎಲ್ಲವೂ ವಸುದೇವ (ಕೃಷ್ಣ). ಎಲ್ಲವೂ ವಸುದೇವನಿಂದ ಬಂದಿದೆ, ಮತ್ತು ಎಲ್ಲವೂ ವಸುದೇವನೊಳಗೆ ಇದೆ.
 
ಸಹೋದರ ಸಹೋದರಿಯರೇ,
1923ರಲ್ಲಿ `ಗೀತಾ ಪ್ರೆಸ್‌ʼ ರೂಪದಲ್ಲಿ ಇಲ್ಲಿ ಆಧ್ಯಾತ್ಮಿಕ ಬೆಳಕು ಬೆಳಗಲು ಆರಂಭವಾಯಿತು. ಇಂದು ಅದರ ಬೆಳಕು ಇಡೀ ಮನುಕುಲಕ್ಕೆ ಮಾರ್ಗದರ್ಶನ ನೀಡುತ್ತಿದೆ. ಈ ಮಾನವೀಯ ಧ್ಯೇಯದ ಶತಮಾನೋತ್ಸವ ಆಚರಣೆಗೆ ಸಾಕ್ಷಿಯಾಗಲು ನಾವು ಅದೃಷ್ಟವಂತರೇ ಸರಿ. ಈ ಐತಿಹಾಸಿಕ ಸಂದರ್ಭದಲ್ಲಿ, ನಮ್ಮ ಸರ್ಕಾರವು ʻಗೀತಾ ಪ್ರೆಸ್‌ʼಗೆ ʻಗಾಂಧಿ ಶಾಂತಿ ಪ್ರಶಸ್ತಿʼಯನ್ನು ನೀಡಿ ಗೌರವಿಸಿದೆ. ಗಾಂಧೀಜಿಯವರು ಗೀತಾ ಪ್ರೆಸ್‌ ಜೊತೆ ಗಾಢವಾದ ಭಾವನಾತ್ಮಕ ನಂಟು ಹೊಂದಿದ್ದರು. ಒಂದು ಕಾಲದಲ್ಲಿ ಗಾಂಧೀಜಿಯವರು ʻಕಲ್ಯಾಣ್‌ ಪತ್ರಿಕೆʼಯ ಮೂಲಕ ಗೀತಾ ಪ್ರೆಸ್‌ಗೆ ಬರೆಯುತ್ತಿದ್ದರು. ʻಕಲ್ಯಾಣ್ ಪತ್ರಿಕೆʼಯಲ್ಲಿ ಯಾವುದೇ ಜಾಹೀರಾತುಗಳನ್ನು ಪ್ರಕಟಿಸಬಾರದು ಎಂದು ಗಾಂಧಿಜಿ ಸಲಹೆ ನೀಡಿದ್ದರು ಎಂದು ಕೇಳಲ್ಪಟ್ಟೆ. ಇಂದಿಗೂ, ʻಕಲ್ಯಾಣ್ ಪತ್ರಿಕೆʼ ಗಾಂಧೀಜಿಯವರ ಸಲಹೆಯನ್ನು ನಿಷ್ಠೆಯಿಂದ ಅನುಸರಿಸುತ್ತದೆ. ʻಗೀತಾ ಪ್ರೆಸ್ʼ ಇಂದು ಈ ಪ್ರಶಸ್ತಿಯನ್ನು ಸ್ವೀಕರಿಸಿರುವುದು ನನಗೆ ಸಂತೋಷ ತಂದಿದೆ. ಇದು ʻಗೀತಾ ಪ್ರೆಸ್‌ʼಗೆ ರಾಷ್ಟ್ರದಿಂದ ಸಂದ ಗೌರವವಾಗಿದೆ, ಅದರ ಕೊಡುಗೆಗಳನ್ನು ಗುರುತಿಸಲಾಗಿದೆ ಮತ್ತು ಅದರ 100 ವರ್ಷಗಳ ಪರಂಪರೆಗೆ ಸಂದ ಗೌರವ ಇದಾಗಿದೆ. ಈ 100 ವರ್ಷಗಳಲ್ಲಿ, ʻಗೀತಾ ಪ್ರೆಸ್ʼ ಕೋಟ್ಯಂತರ ಪುಸ್ತಕಗಳನ್ನು ಪ್ರಕಟಿಸಿದೆ. ಕೆಲವು ಅಂದಾಜುಗಳು ಈ ಸಂಖ್ಯೆಯನ್ನು 70 ಕೋಟಿ, 80 ಕೋಟಿ ಮತ್ತು ಕೆಲವು 90 ಕೋಟಿ ಎಂದೂ ಹೇಳುತ್ತವೆ! ಈ ಸಂಖ್ಯೆಯು ಎಂಥವರನ್ನೂ ಚಕಿತಗೊಳಿಸುತ್ತದೆ. ಈ ಪುಸ್ತಕಗಳನ್ನು ಅವುಗಳ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ ಮತ್ತು ಅವು ಪ್ರತಿ ಮನೆಯನ್ನು ತಲುಪುತ್ತವೆ. ಈ ಜ್ಞಾನದ ಹರಿವಿನ ಮೂಲಕ ಎಷ್ಟು ಜನರು ಆಧ್ಯಾತ್ಮಿಕ ಮತ್ತು ಬೌದ್ಧಿಕ ಸಂತೃಪ್ತಿಯನ್ನು ಕಂಡುಕೊಂಡಿರಬಹುದು, ಅದು ಸಮಾಜಕ್ಕೆ ಹಲವಾರು ಸಮರ್ಪಿತ ನಾಗರಿಕರನ್ನು ಹೇಗೆ ರೂಪಿಸಿರಬಹುದು ಎಂಬುದನ್ನು ನೀವು ಊಹಿಸಬಹುದು. ಯಾವುದೇ ಪ್ರಚಾರವಿಲ್ಲದೆ ನಿಸ್ವಾರ್ಥವಾಗಿ ಈ ಪ್ರಯತ್ನವನ್ನು ಬೆಂಬಲಿಸಿದ ವ್ಯಕ್ತಿಗಳನ್ನು ನಾನು ಅಭಿನಂದಿಸುತ್ತೇನೆ. ಈ ಸಂದರ್ಭದಲ್ಲಿ ನಾನು ಸೇಠ್ ಜಯದಯಾಳ್ ಗೋಯಾಂಕಾ ಮತ್ತು ಭಾಯಿಜಿ ಹನುಮಾನ್ ಪ್ರಸಾದ್ ಪೊದ್ದಾರ್ ಅವರಂತಹ ಗಣ್ಯ ವ್ಯಕ್ತಿಗಳಿಗೆ ಗೌರವ ಸಲ್ಲಿಸುತ್ತೇನೆ.
 
ಸ್ನೇಹಿತರೇ,
ʻಗೀತಾ ಪ್ರೆಸ್‌ʼನಂತಹ ಸಂಸ್ಥೆಯು ಧರ್ಮ ಮತ್ತು ಕ್ರಿಯೆಗೆ ಸಂಬಂಧಿಸಿದ್ದು ಮಾತ್ರವಲ್ಲದೆ ರಾಷ್ಟ್ರೀಯ ಗುಣಲಕ್ಷಣವನ್ನು ಹೊಂದಿದೆ. ʻಗೀತಾ ಪ್ರೆಸ್‌ʼ ಭಾರತವನ್ನು ಸಂಪರ್ಕಿಸುತ್ತದೆ, ಭಾರತದ ಏಕತೆಯನ್ನು ಬಲಪಡಿಸುತ್ತದೆ. ಇದು ದೇಶಾದ್ಯಂತ 20 ಶಾಖೆಗಳನ್ನು ಹೊಂದಿದೆ. ದೇಶದ ಮೂಲೆ ಮೂಲೆಯ ರೈಲ್ವೆ ನಿಲ್ದಾಣಗಳಲ್ಲಿ ʻಗೀತಾ ಪ್ರೆಸ್ʼ ಸ್ಟಾಲ್‌ಗಳನ್ನು ನಾವು ಕಾಣಬಹುದು. ಇದು 15 ವಿವಿಧ ಭಾಷೆಗಳಲ್ಲಿ ಸುಮಾರು 1600 ಪ್ರಕಟಣೆಗಳನ್ನು ಹೊರಡಿಸಿದೆ. ʻಗೀತಾ ಪ್ರೆಸ್‌ʼ ಭಾರತದ ಪ್ರಮುಖ ಮೌಲ್ಯಗಳನ್ನು ವಿವಿಧ ಭಾಷೆಗಳಲ್ಲಿ ಪ್ರಸಾರ ಮಾಡುತ್ತದೆ, ಜನಸಾಮಾನ್ಯರನ್ನು ತಲುಪುತ್ತದೆ. ಒಂದು ರೀತಿಯಲ್ಲಿ, ಗೀತಾ ಪ್ರೆಸ್ 'ಏಕ ಭಾರತ, ಶ್ರೇಷ್ಠ ಭಾರತ' ಆಶಯವನ್ನು ಪ್ರತಿನಿಧಿಸುತ್ತದೆ.
 
ಸ್ನೇಹಿತರೇ,
ದೇಶವು ತನ್ನ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿರುವ ಈ ಸಮಯದಲ್ಲಿ ʻಗೀತಾ ಪ್ರೆಸ್‌ʼ ತನ್ನ 100 ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸಿದೆ. ಇಂತಹ ಸಮಕಾಲೀನತೆಗಳು ಕೇವಲ ಕಾಕತಾಳೀಯವಲ್ಲ. 1947ರ ಮೊದಲು, ಭಾರತವು ತನ್ನ ಪುನರುಜ್ಜೀವನಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ನಿರಂತರ ಪ್ರಯತ್ನಗಳನ್ನು ಮಾಡಿತ್ತು. ಭಾರತದ ಆತ್ಮವನ್ನು ಜಾಗೃತಗೊಳಿಸಲು ವಿವಿಧ ಸಂಘಟನೆಗಳು ರೂಪುಗೊಂಡವು. ಇದರ ಪರಿಣಾಮವಾಗಿ, 1947ರ ಹೊತ್ತಿಗೆ, ಭಾರತವು ಮಾನಸಿಕ ಮತ್ತು ದೈಹಿಕ ಗುಲಾಮಗಿರಿಯ ಸರಪಳಿಗಳನ್ನು ತುಂಡರಿಸಲು ಸಂಪೂರ್ಣವಾಗಿ ಸಿದ್ಧವಾಯಿತು. ʻಗೀತಾ ಪ್ರೆಸ್‌ʼನ ಸ್ಥಾಪನೆಯು ಇದರಲ್ಲಿ ಮಹತ್ವದ ಪಾತ್ರ ವಹಿಸಿತು. ನೂರು ವರ್ಷಗಳ ಹಿಂದೆ, ಶತಮಾನಗಳ ಕಾಲ ನಡೆದಿದ್ದ ದಬ್ಬಾಳಿಕೆಯಿಂದಾಗಿ ಭಾರತದ ಪ್ರಜ್ಞೆ ಮಸುಕಾಗಿಸಿತ್ತು. ನೂರಾರು ವರ್ಷಗಳ ಹಿಂದೆ ವಿದೇಶಿ ಆಕ್ರಮಣಕಾರರು ನಮ್ಮ ಗ್ರಂಥಾಲಯಗಳನ್ನು ಸುಟ್ಟುಹಾಕಿದ್ದರು ಎಂಬುದು ನಿಮಗೆ ತಿಳಿದಿದೆ. ಬ್ರಿಟಿಷ್ ಯುಗದಲ್ಲಿ ಗುರುಕುಲಗಳು ಮತ್ತು ಗುರು ಸಂಪ್ರದಾಯವು ಬಹುತೇಕ ನಾಶವಾಯಿತು. ಅಂತಹ ಸಂದರ್ಭಗಳಲ್ಲಿ, ಜ್ಞಾನ ಮತ್ತು ಪರಂಪರೆ ಅಳಿವಿನ ಅಂಚಿನಲ್ಲಿರುವುದು ಸ್ವಾಭಾವಿಕವಾಗಿತ್ತು. ನಮ್ಮ ಪೂಜ್ಯ ಧರ್ಮಗ್ರಂಥಗಳು ಕಣ್ಮರೆಯಾಗಲು ಪ್ರಾರಂಭಿಸಿದ್ದವು. ಭಾರತದಲ್ಲಿದ್ದ ಮುದ್ರಣಾಲಯಗಳು ದುವಬಾರಿ ಕಾರಣದಿಂದಾಗಿ ಶ್ರೀಸಾಮಾನ್ಯನಿಗೆ ಕೈಗೆಟುಕುತ್ತಿರಲಿಲ್ಲ. ಗೀತೆ ಮತ್ತು ರಾಮಾಯಣದ ಉಪಸ್ಥಿತಿಯಿಲ್ಲದೆ ನಮ್ಮ ಸಮಾಜವು ಹೇಗೆ ಕಾರ್ಯನಿರ್ವಹಿಸಲ್ಲದು ಊಹಿಸಿ? ಮೌಲ್ಯಗಳು ಮತ್ತು ಆದರ್ಶಗಳ ಮೂಲಗಳು ಒಣಗಿದಾಗ, ಸಮಾಜದ ಹರಿವು ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುತ್ತದೆ. ಆದಾಗ್ಯೂ, ಸ್ನೇಹಿತರೇ, ನಾವು ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು. ಭಾರತದ ನಮ್ಮ ಕಾಲಾತೀತ ಪ್ರಯಾಣದಲ್ಲಿ, ನಾವು ಮತ್ತಷ್ಟು ಸುಧಾರಿತವಾಗಿ ಮತ್ತು ವರ್ಧಿತವಾಗಿ ಹೊರಹೊಮ್ಮಿದ ಅನೇಕ ಸಂದರ್ಭಗಳಿವೆ. ಅನೀತಿ ಮತ್ತು ಭಯವು ಹಲವಾರು ಸಂದರ್ಭಗಳಲ್ಲಿ ಹೆಚ್ಚು ಶಕ್ತಿಯುತವಾಗಿದೆ, ಮತ್ತು ಬಿಕ್ಕಟ್ಟಿನ ಮೋಡಗಳು ಸತ್ಯವನ್ನು ಮರೆ ಮಾಚುತ್ತವೆ. ಆದರೆ ಆ ಕಾಲದಲ್ಲಿ, ನಮ್ಮ ದೊಡ್ಡ ನಂಬಿಕೆಯು ಶ್ರೀಮದ್ ಭಗವದ್ಗೀತೆಯಿಂದಲೇ ಬರುತ್ತದೆ: ಶ್ರೀಮದ್ ಭಗವದ್ಗೀತೆ ಹೇಳುತ್ತದೆ: यदा यदा हि धर्मस्य 
ग्लानिर्भवति भारत। अभ्युत्थानमधर्मस्य तदाऽऽत्मानं सृजाम्यहम्॥  ಅಂದರೆ, ಧರ್ಮ, ಸತ್ಯಕ್ಕೆ  ಬಿಕ್ಕಟ್ಟು ಉಂಟಾದಾಗಲೆಲ್ಲಾ, ಅದನ್ನು ರಕ್ಷಿಸಲು ದೇವರು ಅವತರಿಸುತ್ತಾನೆ. ಗೀತೆಯ ಹತ್ತನೇ ಅಧ್ಯಾಯವು ದೇವರು ವಿವಿಧ ರೂಪಗಳಲ್ಲಿ ಅವತರಿಸಬಹುದು ಎಂದು ಹೇಳುತ್ತದೆ. ಕೆಲವೊಮ್ಮೆ ಸಂತರು ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸಲು ಬರುತ್ತಾರೆ, ಮತ್ತು ಕೆಲವೊಮ್ಮೆ ʻಗೀತಾ ಪ್ರೆಸ್ʼನಂತಹ ಸಂಸ್ಥೆಗಳು ಮಾನವೀಯ ಮೌಲ್ಯಗಳು ಮತ್ತು ಆದರ್ಶಗಳನ್ನು ಪುನರುಜ್ಜೀವನಗೊಳಿಸಲು ಅವತರಿಸುತ್ತವೆ. ಅದಕ್ಕಾಗಿಯೇ, 1923ರಲ್ಲಿ ʻಗೀತಾ ಪ್ರೆಸ್‌ʼ ತನ್ನ ಕೆಲಸವನ್ನು ಪ್ರಾರಂಭಿಸಿದಾಗ, ಅದು ಭಾರತದಲ್ಲಿ ಜಾಗೃತಿ ಮತ್ತು ಚಿಂತನೆಯ ಹರಿವನ್ನು ವೇಗಗೊಳಿಸಿತು. ಭಗವದ್ಗೀತೆ ಸೇರಿದಂತೆ ನಮ್ಮ ಧಾರ್ಮಿಕ ಗ್ರಂಥಗಳು ಮತ್ತೆ ಪ್ರತಿ ಮನೆಯಲ್ಲೂ ಪ್ರತಿಧ್ವನಿಸಲಾರಂಭಿಸಿದವು. ಭಾರತದ ಮನಸ್ಸು ಮತ್ತೊಮ್ಮೆ ಸಂಚಲನತೆ ಅನುಭವಿಸಿತು. ಈ ಧರ್ಮಗ್ರಂಥಗಳು ಕುಟುಂಬ ಸಂಪ್ರದಾಯಗಳಿಗೆ ನಾಂದಿ ಹಾಡಿದವು, ಮತ್ತು ಹೊಸ ತಲೆಮಾರುಗಳು ನಮ್ಮ ಪವಿತ್ರ ಗ್ರಂಥಗಳೊಂದಿಗೆ ಸಂಪರ್ಕ ಸಾಧಿಸಲು ಪ್ರಾರಂಭಿಸಿದವು, ಭವಿಷ್ಯದ ಪೀಳಿಗೆಗೆ ದಾರಿದೀಪಗಳಾದವು.
 
ಸ್ನೇಹಿತರೇ,
ನಿಮ್ಮ ಉದ್ದೇಶಗಳು ಪವಿತ್ರವಾಗಿದ್ದಾಗ ಮತ್ತು ನಿಮ್ಮ ಮೌಲ್ಯಗಳು ಪರಿಶುದ್ಧವಾಗಿದ್ದಾಗ, ನಿಮಗೆ ದೊರಕುವುದು ನಿಸ್ಸಂಶಯ ಎಂಬುದಕ್ಕೆ ʻಗೀತಾ ಪ್ರೆಸ್‌ʼ ಪುರಾವೆಯಾಗಿದೆ. ಗೀತಾ ಪ್ರೆಸ್‌ ನಿರಂತರವಾಗಿ ಸಾಮಾಜಿಕ ಮೌಲ್ಯಗಳನ್ನು ಶ್ರೀಮಂತಗೊಳಿಸಿದ ಮತ್ತು ಜನರಿಗೆ ಕರ್ತವ್ಯದ ಮಾರ್ಗವನ್ನು ತೋರಿಸಿದ ಸಂಸ್ಥೆಯಾಗಿದೆ. ಅದು ಗಂಗಾನದಿಯ ಶುಚಿತ್ವವೇ ಆಗಿರಲಿ, ಪತಂಜಲಿಯ ಯೋಗ ಸೂತ್ರಗಳ ಮೂಲಕ ಯೋಗ ವಿಜ್ಞಾನ ಪ್ರಕಟಣೆಯೇ ಇರಲಿ, ಆಯುರ್ವೇದಕ್ಕೆ ಸಂಬಂಧಿಸಿದ 'ಆರೋಗ್ಯ ಅಂಕ'ದ ಪ್ರಕಟಣೇ ಇರಲಿ, ಭಾರತೀಯ ಜೀವನ ವಿಧಾನವನ್ನು ಜನರಿಗೆ ಪರಿಚಯಿಸಲು 'ಜೀವನಾಚಾರ್ಯ ಅಂಕ', ಸಮಾಜದಲ್ಲಿ ಸೇವೆಯ ಆದರ್ಶಗಳನ್ನು ಬಲಪಡಿಸಲು 'ಸೇವಾ ಅಂಕ' ಮತ್ತು 'ದಾನ ಮಹಿಮಾ' ಪ್ರಕಟಣೆಯೇ ಇರಲಿ ಈ ಎಲ್ಲ ಪ್ರಯತ್ನಗಳ ಹಿಂದೆ ರಾಷ್ಟ್ರ ನಿರ್ಮಾಣದ ಆಶಯವಿದೆ.
 
ಸ್ನೇಹಿತರೇ,
ಸಂತರ ತಪಸ್ಸು ಎಂದಿಗೂ ವ್ಯರ್ಥವಾಗುವುದಿಲ್ಲ; ಅವರ ಸಂಕಲ್ಪಗಳು ಎಂದಿಗೂ ವೃಥಾ ಆಗುವುದಿಲ್ಲ. ಈ ಸಂಕಲ್ಪಗಳಿಂದಾಗಿಯೇ ಇಂದು ನಮ್ಮ ಭಾರತವು ಪ್ರತಿದಿನ ಯಶಸ್ಸಿನ ಹೊಸ ಆಯಾಮಗಳನ್ನು ಸ್ಥಾಪಿಸುತ್ತಿದೆ. ನಾನು ಕೆಂಪು ಕೋಟೆಯ ಕೊತ್ತಲಗಳಿಂದ ಹೇಳಿದ್ದೆ, ಮತ್ತು ನಿಮಗೆ ನೆನಪಿರಬಹುದು, ಗುಲಾಮಗಿರಿಯ ಮನಸ್ಥಿತಿಯಿಂದ ನಮ್ಮನ್ನು ಮುಕ್ತಗೊಳಿಸಲು ಮತ್ತು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಪಡಲು ಇದು ಸಮಯ ಎಂದು ನಾನು ಅಂದು ಹೇಳಿದ್ದೆ. ಹಾಗಾಗಿಯೇ ಇಂದು ಕೂಡಾ ಆರಂಭದಲ್ಲಿ ದೇಶವು ಅಭಿವೃದ್ಧಿ ಮತ್ತು ಪರಂಪರೆ ಎರಡರೊಂದಿಗೂ ಮುಂದುವರಿಯುತ್ತಿದೆ ಎಂದು ನಾನು ಹೇಳಿದೆ. ಇಂದು, ಒಂದೆಡೆ, ಭಾರತವು ಡಿಜಿಟಲ್ ತಂತ್ರಜ್ಞಾನದಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ, ಮತ್ತೊಂದೆಡೆ, ಕಾಶಿಯ ವಿಶ್ವನಾಥ ಧಾಮದ ದೈವಿಕ ರೂಪವು ಶತಮಾನಗಳ ನಂತರ ರಾಷ್ಟ್ರದ ಮುಂದೆ ಪ್ರಕಟವಾಗುತ್ತಿದೆ. ನಾವು ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದೇವೆ ಮತ್ತು ಇದೇ ವೇಳೆ, ಕೇದಾರನಾಥ ಮತ್ತು ಮಹಾಕಾಲ ಮಹಾಲೋಕದಂತಹ ಯಾತ್ರಾ ಸ್ಥಳಗಳ ಭವ್ಯತೆಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಶತಮಾನಗಳ ನಂತರ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರದ ನಮ್ಮ ಕನಸು ನನಸಾಗಲಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ನಾವು ನಮ್ಮ ನೌಕಾಪಡೆಯ ಚಿಹ್ನೆಯ ಮೇಲೆ ಗುಲಾಮಗಿರಿಯ ಚಿಹ್ನೆಯನ್ನು ಇರಿಸಿಕೊಂಡಿದ್ದೆವು. ಭಾರತದ ಸಂಸತ್ತಿನ ಪಕ್ಕದಲ್ಲಿರುವ ರಾಜಧಾನಿ ದೆಹಲಿಯಲ್ಲಿ ನಾವು ಇಂಗ್ಲಿಷ್ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದೆವು. ನಾವು ಪೂರ್ಣ ವಿಶ್ವಾಸದಿಂದ ಅವುಗಳನ್ನು ಬದಲಾಯಿಸಲು ಕೆಲಸ ಮಾಡಿದ್ದೇವೆ. ನಾವು ನಮ್ಮ ಪರಂಪರೆ, ಭಾರತೀಯ ಕಲ್ಪನೆಗಳಿಗೆ ಅರ್ಹವಾದ ಸ್ಥಾನವನ್ನು ನೀಡಿದ್ದೇವೆ. ಅದಕ್ಕಾಗಿಯೇ, ಈಗ ಭಾರತದ ನೌಕಾಪಡೆಯ ಧ್ವಜವು ಛತ್ರಪತಿ ಶಿವಾಜಿ ಮಹಾರಾಜರ ಕಾಲದ ಚಿಹ್ನೆಯನ್ನು ಪ್ರದರ್ಶಿಸುತ್ತದೆ. ಈಗ ಗುಲಾಮಗಿರಿಯ ಯುಗದ ʻರಾಜಪಥʼವು ʻಕರ್ತವ್ಯ ಪಥʼವಾಗುವ ಮೂಲಕ ಕರ್ತವ್ಯದ ಮನೋಭಾವವನ್ನು ಪ್ರೇರೇಪಿಸುತ್ತಿದೆ. ಇಂದು, ದೇಶದ ಬುಡಕಟ್ಟು ಸಂಪ್ರದಾಯವನ್ನು ಗೌರವಿಸಲು ದೇಶಾದ್ಯಂತ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ನಮ್ಮ ದೇವಾಲಯಗಳಿಂದ ಕದ್ದು ಹೊತ್ತೊಯ್ಯಲಾದ ಪ್ರಾಚೀನ ಪವಿತ್ರ ವಿಗ್ರಹಗಳು ಸಹ ಮತ್ತೆ ನಮ್ಮ ದೇವಾಲಯಗಳಿಗೆ ಮರಳುತ್ತಿವೆ. ನಮ್ಮ ಋಷಿಮುನಿಗಳು ಮತ್ತು ದಾರ್ಶನಿಕರು ನಮಗೆ ನೀಡಿದ ಅಭಿವೃದ್ಧಿ ಹೊಂದಿದ ಮತ್ತು ಆಧ್ಯಾತ್ಮಿಕ ಭಾರತದ ಕಲ್ಪನೆ ಇಂದು ಅರ್ಥಪೂರ್ಣವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಮ್ಮ ಸಂತರು, ಋಷಿಮುನಿಗಳು ಮತ್ತು ಸನ್ಯಾಸಿಗಳ ಆಧ್ಯಾತ್ಮಿಕ ಅಭ್ಯಾಸಗಳು ಭಾರತದ ಸರ್ವತೋಮುಖ ಅಭಿವೃದ್ಧಿಗೆ ಶಕ್ತಿಯನ್ನು ನೀಡುವುದನ್ನು ಮುಂದುವರಿಸುತ್ತವೆ ಎಂದು ನಾನು ನಂಬುತ್ತೇನೆ. ನಾವು ನವ ಭಾರತವನ್ನು ನಿರ್ಮಿಸುತ್ತೇವೆ ಮತ್ತು ಜಾಗತಿಕ ಕಲ್ಯಾಣದ ನಮ್ಮ ದೃಷ್ಟಿಕೋನವನ್ನು ಯಶಸ್ವಿಗೊಳಿಸುತ್ತೇವೆ. ಈ ಪವಿತ್ರ ಸಂದರ್ಭದಲ್ಲಿ ನಿಮ್ಮ ನಡುವೆ ಇರುವ ಅವಕಾಶವನ್ನು ನೀವೆಲ್ಲರೂ ನನಗೆ ನೀಡಿದ್ದೀರಿ, ಈ ಪವಿತ್ರ ಕಾರ್ಯದಲ್ಲಿ ಕೆಲವು ಕ್ಷಣಗಳನ್ನು ಕಳೆಯಲು ನಾನು ಅದೃಷ್ಟಶಾಲಿ. ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೃದಯಾಂತರಾಳದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತಾ ನನ್ನ ಮಾತು ಮುಗಿಸುತ್ತೇನೆ.
 
ಗಮನಿಸಿ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು. 

****
 



(Release ID: 1938328) Visitor Counter : 113