ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಫ್ರಾನ್ಸ್‌ನಲ್ಲಿ ಜರುಗಿದ ಅನ್ನೆಸಿ ಅಂತಾರಾಷ್ಟ್ರೀಯ ಅನಿಮೇಷನ್ ಉತ್ಸವದಲ್ಲಿ ಭಾರತದ ಸೃಜನ(ಸೃಷ್ಟಿ)ಶೀಲ ಆರ್ಥಿಕತೆಯ ಪ್ರದರ್ಶನ

Posted On: 14 JUN 2023 2:43PM by PIB Bengaluru

ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯ ಕಾರ್ಯದರ್ಶಿ ನೇತೃತ್ವದ ಭಾರತೀಯ ನಿಯೋಗವು ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್ ಮತ್ತು ಕಾಮಿಕ್ಸ್(ಎವಿಜಿಸಿ) ವಲಯಕ್ಕೆ ಸಚಿವಾಲಯವು ನೀಡಿದ ಪ್ರೋತ್ಸಾಹಕ ಕ್ರಮಗಳ ಪ್ರಸ್ತಾಪ; ಭಾರತದಲ್ಲಿ ಅಂತಾರಾಷ್ಟ್ರೀಯ ಅನಿಮೇಷನ್ ಉತ್ಸವ ಆಯೋಜಿಸುವ ಸಾಧ್ಯತೆಗಳ ಕುರಿತು ಚರ್ಚೆ

ಅನ್ನೆಸಿ, ಜೂನ್ 14, 2023: ಫ್ರಾನ್ಸ್ ನಲ್ಲಿ ನಡೆಯುತ್ತಿರುವ “ದಿ ಅನ್ನೆಸಿ ಅಂತಾರಾಷ್ಟ್ರೀಯ ಅನಿಮೇಷನ್ ಉತ್ಸವ(ಎಐಎಎಫ್)”ದಲ್ಲಿ  ಭಾರತವು ಈ ವರ್ಷ ಮೊದಲ ಬಾರಿಗೆ ಭಾಗವಹಿಸುತ್ತಿದೆ. ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ನೇತೃತ್ವದ ಭಾರತೀಯ ನಿಯೋಗವು ಎಐಎಎಫ್ ನಲ್ಲಿ ಅನಿಮೇಷನ್ ಉದ್ಯಮದ ಗಣ್ಯರೊಂದಿಗೆ ಕೈಜೋಡಿಸಿ, ಜಾಗತಿಕ ಪ್ರೇಕ್ಷಕರಿಗಾಗಿ ಅನಿಮೇಷನ್ ಮತ್ತು ದೃಶ್ಯ ಪರಿಣಾಮ(ವಿಎಫ್ಎಕ್ಸ್)ಗಳನ್ನು ರಚಿಸುವಲ್ಲಿ ಭಾರತ ಹೊಂದಿರುವ  ಕೌಶಲ್ಯ ಮತ್ತು ಪರಾಕ್ರಮಗಳ ಪ್ರದರ್ಶನ ನೀಡುತ್ತಿದ್ದಾರೆ.

ಭಾರತವು ಇತ್ತೀಚೆಗೆ ಮತ್ತು ತಡವಾಗಿ ಜಾಗತಿಕ ಉತ್ಪಾದನಾ ಸಂಸ್ಥೆಗಳಿಗೆ ದೃಶ್ಯ ಪರಿಣಾಮ(ವಿಎಫ್ಎಕ್ಸ್)ಗಳು ಮತ್ತು ಅನಿಮೇಷನ್ ವಿಷಯದ ಆದ್ಯತೆಯ ತಾಣವಾಗಿ ಹೊರಹೊಮ್ಮಿದೆ. ಭಾರತದ ಅನಿಮೇಷನ್ ಮತ್ತು ವಿಎಫ್ಎಕ್ಸ್  ಮಾರುಕಟ್ಟೆಯು 2021ರಲ್ಲಿ 109 ಶತಕೋಟಿ ರೂಪಾಯಿ ಮೌಲ್ಯದ್ದಾಗಿದೆ, ವಿಎಫ್ಎಕ್ಸ್  ವ್ಯವಹಾರವೊಂದರಲ್ಲೇ 50 ಶತಕೋಟಿ ರೂಪಾಯಿ ಮೌಲ್ಯ ಹೊಂದಿದೆ. E&Y ವರದಿಯ ಪ್ರಕಾರ, ಈ ಅಂಕಿಅಂಶವು 2024ರ ವೇಳೆಗೆ 180 ಶತಕೋಟಿ ರೂ.ಗೆ ಬೆಳೆಯುವ ನಿರೀಕ್ಷೆಯಿದೆ. ಆದ್ದರಿಂದ ಅನ್ನೆಸಿಯಲ್ಲಿ ಭಾರತದ ಭಾಗವಹಿಸುವಿಕೆಯು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಏಕೆಂದರೆ ಭಾರತವು ಈ ಕ್ಷೇತ್ರದಲ್ಲಿ ಹೊಂದಿರುವ ತನ್ನ ಸಾಮರ್ಥ್ಯವನ್ನು ಅಂತಾರಾಷ್ಟ್ರೀಯ ಖರೀದಿದಾರರಿಗೆ ಪ್ರದರ್ಶಿಸಲಿದೆ.

ಉತ್ಸವದಲ್ಲಿ ಭಾರತದ ಭಾಗವಹಿಸುವಿಕೆ ಕುರಿತು ಮಾತನಾಡಿದ ಶ್ರೀ. ಅಪೂರ್ವ ಚಂದ್ರ,  "ಭಾರತದಲ್ಲಿ ಅನಿಮೇಷನ್, ಗೇಮಿಂಗ್, ವಿಷುಯಲ್ ಎಫೆಕ್ಟ್ಸ್ ಮತ್ತು ಕಾಮಿಕ್ಸ್ (AVGC) ವಲಯವು ವಿಶ್ವ ದರ್ಜೆಯ ಕಾರ್ಯತಂತ್ರಗಳು ಮತ್ತು ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಪ್ರಗತಿ ಸಾಧಿಸುತ್ತಿದೆ, ಅಗಾಧವಾಗಿರುವ ಪ್ರತಿಭಾವಂತ ವೃತ್ತಿಪರರ ಸಮೂಹ ಹೊಂದಿದೆ.  ಭಾರತದಲ್ಲಿ AVGC ವಿಷಯವನ್ನು ತಯಾರಿಸಲು ವಿದೇಶಿ ಕಂಪನಿಗಳಿಗೆ ನಗದು ಪ್ರೋತ್ಸಾಹ ನೀಡುವ ಕೆಲವು ದೇಶಗಳಲ್ಲಿ ಭಾರತವು ಒಂದಾಗಿದೆ.. ಭಾರತದಲ್ಲಿ ಚಲನಚಿತ್ರಗಳನ್ನು ಚಿತ್ರೀಕರಿಸಲು ಇರುವ ನಗದು ಪ್ರೋತ್ಸಾಹ ಮತ್ತು ಇದು ಒಂದೇ ಆಗಿದೆ. ಇದರಿಂದ ಲಾಭ ಪಡೆಯಲು ಕಂಪನಿಗಳಿಗೆ ಇದು ಒಂದು ದೊಡ್ಡ ಅವಕಾಶವಾಗಿದೆ. ಒಂದು ದೇಶವಾಗಿ, ಉದ್ಯಮಕ್ಕೆ ಪ್ರೋತ್ಸಾಹ ನೀಡಲು ನಾವು ಬದ್ಧರಾಗಿದ್ದೇವೆ. ಹಾಗೆಯೇ ಭಾರತದಲ್ಲಿ ಚಲನಚಿತ್ರ ತಯಾರಿಕೆಯ ಪೂರ್ವ ಮತ್ತು ನಂತರದ ಚಟುವಟಿಕೆಗಳನ್ನು ಸಹ ಬೆಂಬಲಿಸುತ್ತೇವೆ" ಎಂದರು.

ಉತ್ಸವದಲ್ಲಿ ಅಪೂರ್ವ ಚಂದ್ರ ಅವರು ಎಐಎಎಫ್‌ ನಿರ್ದೇಶಕ ಮೈಕೆಲ್ ಮರಿನ್ ಅವರನ್ನು ಭೇಟಿ ಮಾಡಿದರು. ಅನ್ನಿಸಿಯಲ್ಲಿ ಭಾರತದ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸುವ ಸಾಧ್ಯತೆಗಳು ಮತ್ತು ಭಾರತದಲ್ಲಿ ಅನಿಮೇಷನ್ ಚಲನಚಿತ್ರೋತ್ಸವ ಆಯೋಜಿಸಲು ಭಾರತ ಮತ್ತು ಫ್ರಾನ್ಸ್ ನಡುವಿನ ಸಹಭಾಗಿತ್ವ ಸಾಧ್ಯತೆಗಳ ಕುರಿತು ಚರ್ಚಿಸಿದರು. ಸರಸ್ವತಿ ಯಂತ್ರದ ನಿರೂಪಣಾ ವಿಷಯ(ಥೀಮ್)ದ ಮೇಲೆ ವಿನ್ಯಾಸಗೊಳಿಸಲಾದ ಇಂಡಿಯಾ ಪೆವಿಲಿಯನ್ ಅನ್ನು ಚಂದ್ರ ಅವರು ಉದ್ಘಾಟಿಸಿದರು. 2023ರ ಪ್ರತಿಷ್ಠಿತ ಅನ್ನೆಸಿ ಉತ್ಸವದ ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ಭಾರತೀಯ ಸೃಜನಶೀಲ ಸಮುದಾಯದೊಂದಿಗೆ ಸಂವಾದ ನಡೆಸಿದರು. ಯುವ ಸೃಷ್ಟಿಕರ್ತರಾದ ಅರವಿಂದ್ ಜೀನಾ, ನಿಕಿತಾ ಪ್ರಭುದೇಸಾಯಿ ಜೀನಾ, ಉಪಮನ್ಯು ಭಟ್ಟಾಚಾರ್ಯ, ಕಲ್ಪ್ ಸಾಂಘ್ವಿ ಜತೆ ಉದ್ಯಮದ ಹಿರಿಯರಾದ ಸರಸ್ವತಿ ವಾಣಿ ಬಲ್ಗುಮ್, ಕಿರೀತ್ ಖುರಾನಾ, ಬಿರೇನ್ ಘೋಷ್, ಅನಿಲ್ ವನ್ವರಿ ಮತ್ತು ಅನ್ನೆ ದೋಷಿ ಸೇರಿ ಹಲವರು ಉತ್ಸವದಲ್ಲಿ ಉಪಸ್ಥಿತರಿದ್ದರು.

ಅದಲ್ಲದೆ, ಚಂದ್ರ ಅವರು ವಿವಿಧ ದೇಶಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ಎವಿಜಿಸಿ ವಲಯಕ್ಕೆ ಸಂಬಂಧಿಸಿದಂತೆ ಸಚಿವಾಲಯದ ವಿವಿಧ ಉಪಕ್ರಮಗಳ ಸುತ್ತ ಕೇಂದ್ರೀಕೃತವಾಗಿರುವ ಚರ್ಚೆಗಳು, ಈ ವಲಯದಲ್ಲಿ ವ್ಯವಹಾರ ಸುಲಭಗೊಳಿಸಲು ಭಾರತ ಸರ್ಕಾರವು ನೀಡಿದ ಪ್ರೋತ್ಸಾಹಕ ಯೋಜನೆಗಳ ಕುರಿತು ಚರ್ಚೆ ನಡೆಸಿದರು.



(Release ID: 1932299) Visitor Counter : 107