ಸಂಪುಟ ಕಾರ್ಯಾಲಯ
ಅರಬ್ಬಿ ಸಮುದ್ರದಲ್ಲಿ ಮುಂಬರುವ 'ಬಿಪರ್‌ಜಾಯ್' ಚಂಡಮಾರುತದ ಸನ್ನದ್ಧತೆಯನ್ನು ಪರಿಶೀಲಿಸಲು ಸಭೆ ನಡೆಸಿದʻರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿʼ(ಎನ್‌ಸಿಎಂಸಿ)
Posted On:
12 JUN 2023 5:07PM by PIB Bengaluru
ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ 'ಬಿಪರ್‌ಜಾಯ್ʼ ಚಂಡಮಾರುತವನ್ನು ಎದುರಿಸಲು ಸನ್ನದ್ಧತೆ ಪರಿಶೀಲಿಸುವ ನಿಟ್ಟಿನಲ್ಲಿ ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಅವರ ಅಧ್ಯಕ್ಷತೆಯಲ್ಲಿ ಇಂದು ಸಭೆ ಸೇರಿದ ʻರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿʼಯು(ಎನ್‌ಸಿಎಂಸಿ), ಗುಜರಾತ್ ಸರಕಾರ ಮತ್ತು ಕೇಂದ್ರ ಸಚಿವಾಲಯಗಳು / ಏಜೆನ್ಸಿಗಳು ಈ ಸಂಬಂಧ ನಡೆಸಿರುವ ಸಿದ್ಧತೆಯ ಬಗ್ಗೆ ಮಾಹಿತಿ ಪಡೆಯಿತು.
ಪೂರ್ವ ಮಧ್ಯ ಅರಬ್ಬಿ ಸಮುದ್ರದಲ್ಲಿ ಅತ್ಯಂತ ಪ್ರಬಲ ಚಂಡಮಾರುತ 'ಬಿಪರ್‌ಜಾಯ್ʼ ಪ್ರಸ್ತುತ ಸ್ಥಿತಿಯ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹಾನಿರ್ದೇಶಕರು ಸಮಿತಿಗೆ ವಿವರಿಸಿದರು. ಚಂಡಮಾರುತವು ಜೂನ್ 14ರವರೆಗೆ ಉತ್ತರಾಭಿಮುಖವಾಗಿ ಚಲಿಸಿ, ನಂತರ ಉತ್ತರ-ಈಶಾನ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ. ಜೂನ್ 15ರ ಮಧ್ಯಾಹ್ನದ ವೇಳೆಗೆ ಗುಜರಾತ್‌ನ ಜಾಖೌ ಬಂದರು ಸಮೀಪದ ಮಾಂಡ್ವಿ (ಗುಜರಾತ್) ಮತ್ತು ಕರಾಚಿ (ಪಾಕಿಸ್ತಾನ) ನಡುವೆ ಸೌರಾಷ್ಟ್ರ ಮತ್ತು ಕಚ್ ಹಾಗೂ ಪಕ್ಕದ ಪಾಕಿಸ್ತಾನದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ.
ಚಂಡಮಾರುತದ ಸಾಗುವ ನಿರೀಕ್ಷಿತ ಹಾದಿಯಲ್ಲಿರುವ ಜನರನ್ನು ರಕ್ಷಿಸಲು ಕೈಗೊಳ್ಳಲಾಗುತ್ತಿರುವ ಪೂರ್ವಸಿದ್ಧತಾ ಕ್ರಮಗಳು ಮತ್ತು ಸ್ಥಳೀಯ ಆಡಳಿತವು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಗುಜರಾತ್ ಮುಖ್ಯ ಕಾರ್ಯದರ್ಶಿಯವರು ಸಮಿತಿಗೆ ಮಾಹಿತಿ ನೀಡಿದರು. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ ಮತ್ತು ಈಗಾಗಲೇ ಸಮುದ್ರದಲ್ಲಿರುವವರನ್ನು ಸುರಕ್ಷಿತ ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ. ಈವರೆಗೆ ಒಟ್ಟು 21,000 ದೋಣಿಗಳನ್ನು ನಿಲ್ಲಿಸಲಾಗಿದೆ. ಸ್ಥಳಾಂತರಿಸುವ ಉದ್ದೇಶಕ್ಕಾಗಿ ಅಪಾಯ ಸಾಧ್ಯತೆಯಲ್ಲಿರುವ ಎಲ್ಲಾ ಗ್ರಾಮಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ʻಸಾಲ್ಟ್‌ಪಾನ್ʼ ಕಾರ್ಮಿಕರ ವಿವರಗಳನ್ನು ಸಹ ಸಿದ್ಧಪಡಿಸಲಾಗಿದೆ. ಸಾಕಷ್ಟು ಆಶ್ರಯ ಕೇಂದ್ರಗಳು, ವಿದ್ಯುತ್ ಸರಬರಾಜು, ಔಷಧ ಮತ್ತು ತುರ್ತು ಸೇವೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ʻಎಸ್‌ಡಿಆರ್‌ಎಫ್ʼನ 10 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಈಗಾಗಲೇ 12 ತಂಡಗಳನ್ನು ನಿಯೋಜಿಸಿದೆ ಮತ್ತು 3 ಹೆಚ್ಚುವರಿ ತಂಡಗಳನ್ನು ಗುಜರಾತ್‌ನಲ್ಲಿ ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಇದಲ್ಲದೆ, ಅರಕೋಣಂ (ತಮಿಳುನಾಡು), ಮುಂಡ್ಲಿ (ಒಡಿಶಾ) ಮತ್ತು ಬಟಿಂಡಾ (ಪಂಜಾಬ್)ದಲ್ಲಿ ತಲಾ 5 ತಂಡಗಳು ಸೇರಿದಂತೆ 15 ತಂಡಗಳನ್ನು ತುರ್ತು ಏರ್‌ಲಿಫ್ಟ್ ಉದ್ದೇಶಕ್ಕಾಗಿ ಸಜ್ಜುಗೊಳಿಸಲಾಗಿದೆ. ಕರಾವಳಿ ಕಾವಲು ಪಡೆದ, ಭೂಸೇನೆ ಮತ್ತು ನೌಕಾಪಡೆಯ ರಕ್ಷಣಾ ಹಾಗೂ ಪರಿಹಾರ ತಂಡಗಳು; ಹಡಗುಗಳು ಮತ್ತು ವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.
ಭೂಸೇನೆ, ನೌಕಾಪಡೆ, ವಾಯುಪಡೆ ಮತ್ತು ಕರಾವಳಿ ಕಾವಲು ಪಡೆಯ ಸಾಕಷ್ಟು ಸಂಖ್ಯೆಯ ತಂಡಗಳು ಮತ್ತು ಸಾಧನ-ಸಲಕರಣೆಗಳನ್ನು ಗುಜರಾತ್ ರಾಜ್ಯದ ಸನ್ನದ್ಧತೆ, ರಕ್ಷಣೆ ಮತ್ತು ಪುನಃಸ್ಥಾಪನೆ ಪ್ರಯತ್ನಗಳಲ್ಲಿ ಸಹಾಯ ಮಾಡಲು ನಿಯೋಜಿಸಲಾಗುತ್ತಿದೆ. ಹಡಗು ವಿಭಾಗದ ಡಿಜಿ ಅವರು ಎಲ್ಲಾ ಸಂಬಂಧಪಟ್ಟ ವ್ಯಕ್ತಿಗಳು ಹಾಗೂ ಸಮುದಾಯಗಳಿಗೆ ನಿಯಮಿತ ಎಚ್ಚರಿಕೆಗಳು ಮತ್ತು ಸಲಹೆಗಳನ್ನು ಕಳುಹಿಸುತ್ತಿದ್ದಾರೆ. ಕಡಲಾಚೆಯ ತೈಲ ಕ್ಷೇತ್ರಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅಲ್ಲಿ ನಿಯೋಜಿಸಲಾದ ಎಲ್ಲಾ ಸಿಬ್ಬಂದಿಯನ್ನು ತಕ್ಷಣವೇ ವಾಪಸ್ ಕರೆಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಗುಜರಾತ್‌ನ ಕಡಲಾಚೆಯ ತೈಲ ಘಟಕ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಪ್ರಮುಖ ಬಂದರುಗಳಾದ ಕಾಂಡ್ಲಾ ಮತ್ತು ಮುಂದ್ರಾದಲ್ಲಿ ಮುನ್ನೆಚ್ಚರಿಕೆ ನೀಡಲಾಗಿದೆ. ಇತರ ಬಂದರುಗಳಿಗೂ ಮುಂಜಾಗ್ರತಾ ಕ್ರಮ ವಹಿಸಲು ಸೂಚಿಸಲಾಗಿದೆ.
ಕೇಂದ್ರೀಯ ಏಜೆನ್ಸಿಗಳು ಮತ್ತು ಗುಜರಾತ್ ಸರಕಾರದ ಸನ್ನದ್ಧತೆ ಕ್ರಮಗಳನ್ನು ಪರಿಶೀಲಿಸಿದ ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಅವರು, ಗುಜರಾತ್ ಸರ್ಕಾರದ ಸಂಬಂಧಿತ ಅಧಿಕಾರಿಗಳು ಮತ್ತು ಸಂಬಂಧಿತ ಕೇಂದ್ರ ಏಜೆನ್ಸಿಗಳು ಅಪಾಯ ತಡೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಿ ಹೇಳಿದರು. ಪ್ರಾಣಹಾನಿಯನ್ನು ಶೂನ್ಯವಾಗಿಸುವುದು, ವಿದ್ಯುತ್ ಹಾಗೂ ದೂರಸಂಪರ್ಕದಂತಹ ಆಸ್ತಿ ಮತ್ತು ಮೂಲಸೌಕರ್ಯಗಳಿಗೆ ಹಾನಿಯನ್ನು ಕಡಿಮೆ ಮಾಡುವುದು ಗುರಿಯಾಗಿರಬೇಕು. ಈ ಮೂಲಸೌಕರ್ಯಕ್ಕೆ ಹಾನಿಯಾದರೆ, ಅದನ್ನು ಸಾಧ್ಯವಾದಷ್ಟು ಬೇಗ ಪುನಃಸ್ಥಾಪಿಸಬೇಕು ಎಂದರು.
ಸಮುದ್ರದಲ್ಲಿರುವ ಮೀನುಗಾರರನ್ನು ಮರಳಿ ಕರೆಸಿಕೊಳ್ಳಬೇಕು ಮತ್ತು ಚಂಡಮಾರುತದ ಭೂ ಪ್ರದೇಶ ಪ್ರವೇಸಿಸುವ ಮುನ್ನ ಅಪಾಯದಲ್ಲಿರುವ ಪ್ರದೇಶಗಳಿಂದ ಜನರನ್ನು ಸರಿಯಾದ ಸಮಯಕ್ಕೆ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಂಪುಟ ಕಾರ್ಯದರ್ಶಿ ಹೇಳಿದರು. ಎಲ್ಲಾ ಕೇಂದ್ರೀಯ ಸಂಸ್ಥೆಗಳು ಸನ್ನದ್ಧವಾಗಿದ್ದು, ಸಹಾಯಕ್ಕಾಗಿ ಲಭ್ಯವಿರುತ್ತವೆ ಎಂದು ಅವರು ಗುಜರಾತ್ ಸರ್ಕಾರಕ್ಕೆ ಭರವಸೆ ನೀಡಿದರು.
ಸಭೆಯಲ್ಲಿ ಗುಜರಾತ್ ಮುಖ್ಯ ಕಾರ್ಯದರ್ಶಿ, ಕೇಂದ್ರ ಗೃಹ ಕಾರ್ಯದರ್ಶಿ, ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಸಿಇಒ, ನಾಗರಿಕ ವಿಮಾನಯಾನ ಸಚಿವಾಲಯ, ವಿದ್ಯುತ್, ಬಂದರುಗಳು, ಹಡಗು ಮತ್ತು ಜಲಮಾರ್ಗಗಳು, ಮೀನುಗಾರಿಕೆ ಇಲಾಖೆ, ಟೆಲಿಕಾಮ್ ಡಿಜಿ, ʻಎನ್‌ಡಿಎಂಎʼನ ಸದಸ್ಯ ಕಾರ್ಯದರ್ಶಿ, ಸಿಐಎಸ್ಸಿ ಐಡಿಎಸ್, ಐಎಂಡಿ ಡಿಜಿ, ಎನ್‌ಡಿಆರ್‌ಎಫ್ ಡಿಜಿ, ಕರಾವಳು ಕಾವಲು ಪಡೆದ ಡಿಜಿ ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
***
(Release ID: 1931880)
Visitor Counter : 118