ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

9 ವರ್ಷಗಳಲ್ಲಿ 332% ಮಾರಾಟ ಬೆಳವಣಿಗೆಯನ್ನು ದಾಖಲಿಸಿ ಕೆವಿಐಸಿಯಿಂದ ಚಾರಿತ್ರಿಕ ಮಹತ್ವದ ದಾಪುಗಾಲು

Posted On: 08 JUN 2023 7:29PM by PIB Bengaluru

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ)ವು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 'ಆತ್ಮನಿರ್ಭರ ಭಾರತ ಅಭಿಯಾನ'ವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಮೂಲಕ ವಿಶ್ವದ ಮುಂದೆ ಸದೃಢ ಭಾರತದ ಸಂತೃಪ್ತ ಚಿತ್ರಣವನ್ನು ಪ್ರಸ್ತುತಪಡಿಸಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಉತ್ಪನ್ನಗಳ ವಹಿವಾಟು 1.34 ಲಕ್ಷ ಕೋಟಿ ರೂ.ಗಳನ್ನು ದಾಟಿದೆ. ಕಳೆದ 9 ಹಣಕಾಸು ವರ್ಷಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಕುಶಲಕರ್ಮಿಗಳು ತಯಾರಿಸಿದ ಸ್ಥಳೀಯ ಖಾದಿ ಉತ್ಪನ್ನಗಳ ಮಾರಾಟದಲ್ಲಿ ಅಭೂತಪೂರ್ವ 332% ಬೆಳವಣಿಗೆ ಕಂಡುಬಂದಿದೆ. ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ವಹಿವಾಟು 2013-14ರ ಆರ್ಥಿಕ ವರ್ಷದಲ್ಲಿ ರೂ.31,154 ಕೋಟಿಗಳಷ್ಟಿದ್ದರೆ, 2022-23ನೇ ಹಣಕಾಸು ವರ್ಷದಲ್ಲಿ ಇದು ಅತ್ಯಧಿಕ ಮಟ್ಟವಾದ ರೂ.1,34,630 ಕೋಟಿಗಳಿಗೆ ಏರಿದೆ. ಇದು ಇದುವರೆಗಿನ ಅತ್ಯುತ್ತಮ ಸಾಧನೆ.ಅದೇ ರೀತಿ, ಕೆವಿಐಸಿ ಗ್ರಾಮೀಣ ಪ್ರದೇಶಗಳಲ್ಲಿ 9,54,899 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.

ಕೆವಿಐಸಿ ಅಧ್ಯಕ್ಷ ಶ್ರೀ ಮನೋಜ್ ಕುಮಾರ್ ಅವರು ಈ ಸಾಧನೆಯ ಶ್ರೇಯಸ್ಸನ್ನು ಮಹಾತ್ಮಾ ಗಾಂಧಿಯವರ ನೈಜ ಸ್ಫೂರ್ತಿ ಮತ್ತು ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ 'ಬ್ರಾಂಡ್ ಶಕ್ತಿ' ಮತ್ತು ದೇಶದ ದೂರದ ಹಳ್ಳಿಗಳಲ್ಲಿ ಕೆಲಸ ಮಾಡುವ ಕುಶಲಕರ್ಮಿಗಳ ದಣಿವರಿಯದ ಕಠಿಣ ಪರಿಶ್ರಮಕ್ಕೆ ಅರ್ಪಿಸಿದ್ದಾರೆ. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶ ಮತ್ತು ವಿದೇಶಗಳಲ್ಲಿ ಪ್ರತಿಯೊಂದು ವೇದಿಕೆಯಲ್ಲೂ ಖಾದಿಯನ್ನು ಉತ್ತೇಜಿಸಿದ್ದಾರೆ, ಈ ಕಾರಣದಿಂದಾಗಿ ಖಾದಿ ಜನಪ್ರಿಯತೆಯ ಹೊಸ ಉತ್ತುಂಗವನ್ನು ತಲುಪಿದೆ ಎಂದು ಅವರು ಹೇಳಿದರು. ಇಂದು ಖಾದಿ ಉತ್ಪನ್ನಗಳು ವಿಶ್ವದ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್ ಗಳಲ್ಲಿ ಒಂದಾಗಿವೆ ಎಂದರು. 2013-14 ರಿಂದ 2022-23ರ ಹಣಕಾಸು ವರ್ಷದವರೆಗೆ, ಕೆವಿಐ ಉತ್ಪನ್ನಗಳ ಉತ್ಪಾದನೆಯಲ್ಲಿ 268% ಹೆಚ್ಚಳ ಕಂಡುಬಂದಿದ್ದು, ಮಾರಾಟವು ಎಲ್ಲಾ ದಾಖಲೆಗಳನ್ನು ಮುರಿದು 332% ರಷ್ಟಕ್ಕೆ ತಲುಪಿದೆ. 'ಮೇಕ್ ಇನ್ ಇಂಡಿಯಾ', 'ವೋಕಲ್ ಫಾರ್ ಲೋಕಲ್' ಮತ್ತು 'ಸ್ವದೇಶಿ ಉತ್ಪನ್ನಗಳ' ಮೇಲೆ ದೇಶದ ಜನರ ನಂಬಿಕೆ, ವಿಶ್ವಾಸ  ಹೆಚ್ಚಾಗಿದೆ ಎಂಬುದಕ್ಕೆ ಇದು ಪುರಾವೆಯಾಗಿದೆ ಎಂದೂ ಅವರು ಹೇಳಿದರು.

ಕೇಂದ್ರದಲ್ಲಿ 'ಮೋದಿ ಸರ್ಕಾರ'ದ 9 ವರ್ಷಗಳ ಅಧಿಕಾರಾವಧಿಯಲ್ಲಿ, ಕೆವಿಐಸಿಯ ಪ್ರಯತ್ನದಿಂದ 'ಸ್ವಾವಲಂಬನೆಯಿಂದ ಸಮೃದ್ಧಿ' ಎಂಬ 9 ದಾಖಲೆಗಳನ್ನು ಸ್ಥಾಪಿಸಲಾಗಿದೆ, ಇದು ಖಾದಿಗೆ ಹೊಸ ಬದುಕನ್ನು ನೀಡಿದೆ.

1.    ಕೆವಿಐ ಉತ್ಪನ್ನಗಳ ಉತ್ಪಾದನೆಯಲ್ಲಿ ಅಸಾಧಾರಣ ಬೆಳವಣಿಗೆ - 2013-14ರ ಆರ್ಥಿಕ ವರ್ಷದಲ್ಲಿ ಕೆವಿಐ ಉತ್ಪನ್ನಗಳ ಉತ್ಪಾದನೆ 26,109 ಕೋಟಿ ರೂ.ಗಳಷ್ಟಾಗಿದ್ದರೆ, 2022-23ರ ಆರ್ಥಿಕ ವರ್ಷದಲ್ಲಿ ಇದು 95,957 ಕೋಟಿ ರೂ.ಗಳನ್ನು ತಲುಪಿದೆ. ಉತ್ಪಾದನೆಯ ಈ ಅಂಕಿ ಅಂಶವು ಕೆವಿಐಸಿ ಗ್ರಾಮೀಣ ಪ್ರದೇಶಗಳಲ್ಲಿ ಮಹತ್ವದ ಸ್ಮರಣಾರ್ಹ  ಕೆಲಸ ಮಾಡಿದೆ ಎಂಬುದಕ್ಕೆ ಬಲವಾದ ಪುರಾವೆಯಾಗಿದೆ.

2.    ಕೆವಿಐ ಉತ್ಪನ್ನಗಳ ಮಾರಾಟದಲ್ಲಿ ಬಹಳ ದೊಡ್ಡ ಉತ್ಕರ್ಷ - ಕಳೆದ 9 ಹಣಕಾಸು ವರ್ಷಗಳಲ್ಲಿ, ಮಾರಾಟದ ವಿಷಯದಲ್ಲಿ, ಕೆವಿಐ ಉತ್ಪನ್ನಗಳು ಪ್ರತಿವರ್ಷ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿವೆ. 2013-14ರ ಹಣಕಾಸು ವರ್ಷದಲ್ಲಿ ಮಾರಾಟವು ರೂ.31,154 ಕೋಟಿಗಳಷ್ಟಾಗಿದ್ದರೆ, 332%ನಷ್ಟು ಅಭೂತಪೂರ್ವ ಬೆಳವಣಿಗೆಯೊಂದಿಗೆ, ಇದು 2022-23ರ ಹಣಕಾಸು ವರ್ಷದಲ್ಲಿ ರೂ.1,34,630 ಕೋಟಿಗಳಿಗೆ ತಲುಪಿದೆ.ಇದು ಸಾರ್ವಕಾಲಿಕ ಗರಿಷ್ಟ.

3.     ಖಾದಿ ಬಟ್ಟೆಗಳ ಉತ್ಪಾದನೆಯಲ್ಲಿ ಹೊಸ ದಾಖಲೆ - ಕಳೆದ 9 ವರ್ಷಗಳಲ್ಲಿ ಖಾದಿ ಬಟ್ಟೆಗಳ ಉತ್ಪಾದನೆಯಲ್ಲಿ ಸಾಟಿಯಿಲ್ಲದ ಬೆಳವಣಿಗೆ ಕಂಡುಬಂದಿದೆ. 2013-14ರ ಆರ್ಥಿಕ ವರ್ಷದಲ್ಲಿ ಖಾದಿ ಬಟ್ಟೆಗಳ ಉತ್ಪಾದನೆ 811 ಕೋಟಿ ರೂ.ಗಳಷ್ಟಾಗಿದ್ದು, 2022-23ರ ಆರ್ಥಿಕ ವರ್ಷದಲ್ಲಿ ಶೇ.260 ರಷ್ಟು ಏರಿಕೆಯೊಂದಿಗೆ 2916 ಕೋಟಿ ರೂ.ಗಳನ್ನು ಮುಟ್ಟಿದೆ, ಇದು ಇದುವರೆಗಿನ ಅತ್ಯುತ್ತಮ ಸಾಧನೆಯಾಗಿದೆ.

4.    ಖಾದಿ ಬಟ್ಟೆ ಮಾರಾಟ ಕೂಡ ಹೊಸ ಇತಿಹಾಸವನ್ನು ಸೃಷ್ಟಿಸಿದೆ - ಕಳೆದ 9 ಹಣಕಾಸು ವರ್ಷಗಳಲ್ಲಿ ಖಾದಿ ಬಟ್ಟೆಗಳ ಬೇಡಿಕೆಯಲ್ಲಿ ತ್ವರಿತ ಬೆಳವಣಿಗೆ ಕಂಡುಬಂದಿದೆ. 2013-14ರ ಹಣಕಾಸು ವರ್ಷದಲ್ಲಿ ಕೇವಲ 1081 ಕೋಟಿ ರೂ.ಗಳ ಮಾರಾಟವಾಗಿದ್ದರೆ, 2022-23ರ ಆರ್ಥಿಕ ವರ್ಷದಲ್ಲಿ ಇದು 450% ರಷ್ಟು ಏರಿಕೆಯಾಗಿ 5943 ಕೋಟಿ ರೂ.ಗಳನ್ನು ಮುಟ್ಟಿದೆ. ಕೋವಿಡ್ -19 ರ ನಂತರ, ಸಾವಯವ ಬಟ್ಟೆಗಳಿಗೆ ಪ್ರಪಂಚದಾದ್ಯಂತ ಬೇಡಿಕೆ ಹೆಚ್ಚಾಗಿದೆ. ಈ ಕಾರಣದಿಂದಾಗಿ ಖಾದಿ ಉಡುಪುಗಳ ಬೇಡಿಕೆಯಲ್ಲಿ ತ್ವರಿತ ಹೆಚ್ಚಳ ಕಂಡುಬಂದಿದೆ. ಇದರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿ ವೇದಿಕೆಯಲ್ಲಿ ಖಾದಿಯನ್ನು ಉತ್ತೇಜಿಸುತ್ತಿರುವುದು ಖಾದಿ ಬಟ್ಟೆಗಳ ಮಾರಾಟವನ್ನು ಹೆಚ್ಚಿಸುವಲ್ಲಿ ಭಾರಿ ಪ್ರಭಾವ ಬೀರಿದೆ.

5.    ಉದ್ಯೋಗ ಸೃಷ್ಟಿ ಮತ್ತು ಸಂಚಿತ ಉದ್ಯೋಗ ಸೃಷ್ಟಿಯ ಹೊಸ ದಾಖಲೆ - ಗ್ರಾಮೀಣ ಪ್ರದೇಶಗಳಲ್ಲಿ ಗರಿಷ್ಠ ಉದ್ಯೋಗಾವಕಾಶಗಳನ್ನು ಒದಗಿಸುವುದು ಕೆವಿಐಸಿಯ ಮುಖ್ಯ ಉದ್ದೇಶವಾಗಿದೆ. ಕಳೆದ 9 ವರ್ಷಗಳಲ್ಲಿ ಕೆವಿಐಸಿ ಈ ಕ್ಷೇತ್ರಗಳಲ್ಲಿಯೂ ದಾಖಲೆ ನಿರ್ಮಿಸಿದೆ. 2013-14ರ ಆರ್ಥಿಕ ವರ್ಷದಲ್ಲಿ ಸಂಚಿತ ಉದ್ಯೋಗವು 130,38,444 ಆಗಿದ್ದರೆ, 36% ಹೆಚ್ಚಳವನ್ನು ದಾಖಲಿಸುವ ಮೂಲಕ ಅದು 2022-23ರಲ್ಲಿ 177,16,288 ಕ್ಕೆ ತಲುಪಿದೆ. ಅಂತೆಯೇ, 2013-14ರ ಆರ್ಥಿಕ ವರ್ಷದಲ್ಲಿ ಸೃಷ್ಟಿಯಾದ 5,62,521 ಹೊಸ ಉದ್ಯೋಗಾವಕಾಶಗಳಿಗೆ ಹೋಲಿಸಿದರೆ, 2022-23ರ ಆರ್ಥಿಕ ವರ್ಷದಲ್ಲಿ ಒಟ್ಟು 9,54,899 ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ.ಇದು 70%.ನಷ್ಟು ಹೆಚ್ಚಳ.

6.    ಖಾದಿ ಕುಶಲಕರ್ಮಿಗಳ ವೇತನದಲ್ಲಿ ದಾಖಲೆಯ ಹೆಚ್ಚಳ - ಖಾದಿ ಕ್ಷೇತ್ರಕ್ಕೆ ಸಂಬಂಧಿಸಿದ ಖಾದಿ ಕುಶಲಕರ್ಮಿಗಳು ಖಾದಿ ಬಟ್ಟೆಗಳ ಉತ್ಪಾದನೆ ಮತ್ತು ಮಾರಾಟದ ಹೆಚ್ಚಳದ ಲಾಭವನ್ನು ಪಡೆಯುತ್ತಿದ್ದಾರೆ. 2013-14ರ ಆರ್ಥಿಕ ವರ್ಷದಿಂದ ಅವರ ಸಂಭಾವನೆಯನ್ನು ಶೇ.150ಕ್ಕೂ ಅಧಿಕ   ಹೆಚ್ಚಿಸಲಾಗಿದೆ. ಇತ್ತೀಚೆಗೆ, ಏಪ್ರಿಲ್ 1, 2023 ರಿಂದ ಖಾದಿ ಕುಶಲಕರ್ಮಿಗಳ ವೇತನವನ್ನು 33% ಕ್ಕಿಂತ ಅಧಿಕ ಹೆಚ್ಚಿಸಲಾಗಿದೆ.

7.    ನವದೆಹಲಿಯ ಕನ್ಹಾಟ್  ಪ್ಲೇಸ್ ನಲ್ಲಿರುವ 'ಖಾದಿ ಭವನ'ದ ಹೊಸ ದಾಖಲೆ - 2022 ರ ಅಕ್ಟೋಬರ್ 2 ರಂದು, ಹೊಸದಿಲ್ಲಿಯ  ಕನ್ಹಾಟ್ ಪ್ಲೇಸ್ ನಲ್ಲಿರುವ ಕೆವಿಐಸಿಯ ಪ್ರಮುಖ 'ಖಾದಿ ಭವನ'ದ ಮಾರಾಟವು ಸಾರ್ವಕಾಲಿಕ ದಾಖಲೆಗಳನ್ನು ಮುರಿಯಿತು. ಪ್ರಧಾನ ಮಂತ್ರಿಯವರ ಮನವಿಯ ಮೇರೆಗೆ ಖಾದಿ ಪ್ರಿಯರು ಒಂದೇ ದಿನದಲ್ಲಿ 1.34 ಕೋಟಿ ರೂ.ಗಳ ಮೌಲ್ಯದ ಕೆವಿಐ ಉತ್ಪನ್ನಗಳನ್ನು ಖರೀದಿಸುವ ಮೂಲಕ ಮೊದಲ ಬಾರಿಗೆ ಹೊಸ ದಾಖಲೆ ನಿರ್ಮಿಸಿದ್ದಾರೆ.

8.    ಪ್ರಧಾನಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮ (ಪಿಎಂಇಜಿಪಿ)ದಿಂದ 'ಆತ್ಮನಿರ್ಭರ ಭಾರತ'ವನ್ನು ರೂಪಿಸುವುದು - ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸ್ವದೇಶಿ ಅಭಿಯಾನದೊಂದಿಗೆ ದೇಶದ ಯುವಕರನ್ನು ತೊಡಗಿಸಿಕೊಳ್ಳುವಲ್ಲಿ ಪಿಎಂಇಜಿಪಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಈ ಯೋಜನೆಯು ಪ್ರಧಾನಿ ಮೋದಿಯವರ 'ಉದ್ಯೋಗಾಕಾಂಕ್ಷಿಯಾಗುವ ಬದಲು ಉದ್ಯೋಗ ಒದಗಿಸುವವರಾಗುವ' ಕನಸನ್ನು ಈಡೇರಿಸುತ್ತದೆ. ಈ ಹಣಕಾಸು ವರ್ಷದಲ್ಲಿ 8.69 ಲಕ್ಷ ಹೊಸ ಘಟಕಗಳನ್ನು/ಯೋಜನೆಗಳನ್ನು ಸ್ಥಾಪಿಸುವ ಮೂಲಕ ಒಟ್ಟು 73.67 ಲಕ್ಷ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲಾಗಿದೆ, 2008-09 ರಿಂದ 2022-23 ರವರೆಗೆ ಒಟ್ಟು 21870.18 ಕೋಟಿ ರೂ.ಸಬ್ಸಿಡಿ ವಿತರಿಸಲಾಗಿದೆ. ಇದಲ್ಲದೆ, 80% ಕ್ಕೂ ಹೆಚ್ಚು ಘಟಕಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದೆ, ಅದರಲ್ಲಿ 50% ಕ್ಕೂ ಹೆಚ್ಚು ಘಟಕಗಳು ಎಸ್ಸಿ, ಎಸ್ಟಿ ಮತ್ತು ಮಹಿಳಾ ಉದ್ಯಮಿಗಳ ಒಡೆತನದಲ್ಲಿವೆ. ಜೊತೆಗೆ  ಆಶೋತ್ತರಗಳ  ಜಿಲ್ಲೆಗಳಲ್ಲಿ 14% ಕ್ಕಿಂತ ಹೆಚ್ಚು ಘಟಕಗಳನ್ನು ಸ್ಥಾಪಿಸಲಾಗಿದೆ. 2022-23ನೇ ಸಾಲಿನಲ್ಲಿ 85,167 ಘಟಕಗಳಲ್ಲಿ 9.37 ಲಕ್ಷ ಉದ್ಯೋಗಾವಕಾಶಗಳನ್ನು ಒದಗಿಸಲಾಗಿದೆ.

9.     'ಗ್ರಾಮೋದ್ಯೋಗ ವಿಕಾಸ್ ಯೋಜನೆ'ಯ ಹೊಸ ದಾಖಲೆ – ಅವಕಾಶ ವಂಚಿತರ ಕಲ್ಯಾಣಕ್ಕಾಗಿ ಮತ್ತು ಸಮಾಜದ ತಳಮಟ್ಟದಲ್ಲಿ ಕೆಲಸ ಮಾಡುವ ಕುಶಲಕರ್ಮಿಗಳ ಕಲ್ಯಾಣಕ್ಕಾಗಿ ಕೆವಿಐಸಿ 'ಗ್ರಾಮ ವಿಕಾಸ ಯೋಜನೆ' ಅಡಿಯಲ್ಲಿ ಹಲವಾರು ಪ್ರಮುಖ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುತ್ತಿದೆ. ಮಹತ್ವಾಕಾಂಕ್ಷೆಯ "ಹನಿ ಮಿಷನ್" ಕಾರ್ಯಕ್ರಮದಡಿ 2017-18 ರಿಂದ ಇಲ್ಲಿಯವರೆಗೆ 1,89,989 ಲಕ್ಷ ಜೇನು ಪೆಟ್ಟಿಗೆಗಳು ಮತ್ತು ಜೇನು ಕಾಲೋನಿಗಳನ್ನು ಒಟ್ಟು 19118 ಫಲಾನುಭವಿಗಳಿಗೆ ವಿತರಿಸಲಾಗಿದೆ. ಅದೇ ರೀತಿ, 'ಕುಂಬಾರ ಸಶಕ್ತೀಕರಣ' ಕಾರ್ಯಕ್ರಮದ ಮೂಲಕ, ಆಧುನಿಕ ವಿದ್ಯುತ್ ಬಳಸಿ ಮಡಕೆಗಳನ್ನು ಮಾಡುವ  ಚಕ್ರಗಳನ್ನು ಇಲ್ಲಿಯವರೆಗೆ 25 ಸಾವಿರಕ್ಕೂ ಹೆಚ್ಚು ಕುಂಬಾರರಿಗೆ ವಿತರಿಸಲಾಗಿದೆ.

****



(Release ID: 1930913) Visitor Counter : 201