ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮೇ 12ರಂದು ಗುಜರಾತ್ ಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


ಸುಮಾರು 4400 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಪಿಎಂಎವೈ ಅಡಿಯಲ್ಲಿ ಸುಮಾರು 19,000 ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಲಾಗುವುದು

ಗಿಫ್ಟ್ ನಗರಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿಯವರು, ನಡೆಯುತ್ತಿರುವ ವಿವಿಧ ಯೋಜನೆಗಳ ಸ್ಥಿತಿಗತಿ ಪರಿಶೀಲಿಸಲಿದ್ದಾರೆ.

ಅಖಿಲ ಭಾರತೀಯ ಶಿಕ್ಷಾ ಸಂಘ ಅಧಿವೇಷನ್ ನಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ

Posted On: 11 MAY 2023 10:40AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇ 12ರಂದು ಗುಜರಾತ್ ಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 10:30 ಕ್ಕೆ ಗಾಂಧಿನಗರದಲ್ಲಿ ಅಖಿಲ ಭಾರತೀಯ ಶಿಕ್ಷಾ ಸಂಘ ಅಧಿವೇಷನ್ ನಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ನಂತರ ಮಧ್ಯಾಹ್ನ 12 ಗಂಟೆಗೆ ಗಾಂಧಿನಗರದಲ್ಲಿ ಸುಮಾರು 4400 ಕೋಟಿ ರೂ.ಗಳ ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಪ್ರಧಾನಮಂತ್ರಿಯವರು ಗಿಫ್ಟ್ ಸಿಟಿಗೆ ಭೇಟಿ ನೀಡಲಿದ್ದಾರೆ.

ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ

ಗಾಂಧಿನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 2450 ಕೋಟಿ ರೂ.ಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇವುಗಳಲ್ಲಿ ನಗರಾಭಿವೃದ್ಧಿ ಇಲಾಖೆ, ನೀರು ಸರಬರಾಜು ಇಲಾಖೆ, ರಸ್ತೆ ಮತ್ತು ಸಾರಿಗೆ ಇಲಾಖೆ ಮತ್ತು ಗಣಿ ಮತ್ತು ಖನಿಜ ಇಲಾಖೆಯ ಯೋಜನೆಗಳು ಸೇರಿವೆ.

ಬನಸ್ಕಾಂತ ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳು, ಅಹಮದಾಬಾದ್ನಲ್ಲಿ ನದಿ ಮೇಲ್ಸೇತುವೆ, ನರೋಡಾ ಜಿಐಡಿಸಿಯಲ್ಲಿ ಒಳಚರಂಡಿ ಸಂಗ್ರಹ ಜಾಲ, ಮೆಹ್ಸಾನಾ ಮತ್ತು ಅಹಮದಾಬಾದ್ನಲ್ಲಿ ಒಳಚರಂಡಿ ಸಂಸ್ಕರಣಾ ಘಟಕಗಳು, ದಹೇಗಾಮ್ನಲ್ಲಿ ಆಡಿಟೋರಿಯಂ ಸೇರಿದಂತೆ ಹಲವು ಯೋಜನೆಗಳನ್ನು ಉದ್ಘಾಟಿಸಲಾಗುತ್ತಿದೆ. ಜುನಾಗಢ ಜಿಲ್ಲೆಯಲ್ಲಿ ಬೃಹತ್ ಪೈಪ್ ಲೈನ್ ಯೋಜನೆ, ಗಾಂಧಿನಗರ ಜಿಲ್ಲೆಯಲ್ಲಿ ನೀರು ಸರಬರಾಜು ಯೋಜನೆಗಳ ಹೆಚ್ಚಳ, ಫ್ಲೈಓವರ್ ಸೇತುವೆಗಳ ನಿರ್ಮಾಣ, ಹೊಸ ನೀರು ವಿತರಣಾ ಕೇಂದ್ರ, ವಿವಿಧ ನಗರ ಯೋಜನಾ ರಸ್ತೆಗಳು ಸೇರಿದಂತೆ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು.

ಪ್ರಧಾನಮಂತ್ರಿಯವರು ಪಿಎಂಎವೈ (ಗ್ರಾಮೀಣ ಮತ್ತು ನಗರ) ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಯೋಜನೆಯಡಿ ನಿರ್ಮಿಸಲಾದ ಸುಮಾರು 19,000 ಮನೆಗಳ ಗೃಹ ಪ್ರವೇಶದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅವರು ಯೋಜನೆಯ ಫಲಾನುಭವಿಗಳಿಗೆ ಕೀಲಿಗಳನ್ನು ಹಸ್ತಾಂತರಿಸುವರು. ಈ ಯೋಜನೆಗಳ ಒಟ್ಟು ವೆಚ್ಚ ಸುಮಾರು ೧೯೫೦ ಕೋಟಿ ರೂ.

ಗಿಫ್ಟ್ ಸಿಟಿಯಲ್ಲಿ ಪ್ರಧಾನ ಮಂತ್ರಿ

ಪ್ರಧಾನಮಂತ್ರಿಯವರು ಗಾಂಧಿನಗರದ 'ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್ ಸಿಟಿ' (ಗಿಫ್ಟ್ ಸಿಟಿ) ಗೆ ಭೇಟಿ ನೀಡಲಿದ್ದಾರೆ. ಭೇಟಿಯ ಸಮಯದಲ್ಲಿ ಅವರು ಗಿಫ್ಟ್ ಸಿಟಿಯಲ್ಲಿ ನಡೆಯುತ್ತಿರುವ ವಿವಿಧ ಯೋಜನೆಗಳ ಸ್ಥಿತಿಯನ್ನು ಪರಿಶೀಲಿಸಲಿದ್ದಾರೆ. ಗಿಫ್ಟ್ ಸಿಟಿಯಲ್ಲಿ ತಮ್ಮ ಅನುಭವ ಮತ್ತು ಭವಿಷ್ಯದ ಯೋಜನೆಗಳನ್ನು ಅರ್ಥಮಾಡಿಕೊಳ್ಳಲು ಗಿಫ್ಟ್ ಐಎಫ್ ಎಸ್ ಸಿ ಘಟಕಗಳೊಂದಿಗೆ ಸಂವಾದವೂ ನಡೆಯಲಿದೆ. 'ಭೂಗತ ಯುಟಿಲಿಟಿ ಸುರಂಗ' ಮತ್ತು 'ಸ್ವಯಂಚಾಲಿತ ತ್ಯಾಜ್ಯ ಸಂಗ್ರಹ ವಿಂಗಡಣೆ ಘಟಕ' ಸೇರಿದಂತೆ ನಗರದ ಪ್ರಮುಖ ಮೂಲಸೌಕರ್ಯ ಸೌಲಭ್ಯಗಳಿಗೂ ಪ್ರಧಾನಿ ಭೇಟಿ ನೀಡಲಿದ್ದಾರೆ.

ಅಖಿಲ ಭಾರತೀಯ ಶಿಕ್ಷಾ ಸಂಘ ಅಧಿವೇಷನ್

ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಒಕ್ಕೂಟದ 29ನೇ ದ್ವೈವಾರ್ಷಿಕ ಸಮ್ಮೇಳನವಾದ ಅಖಿಲ ಭಾರತೀಯ ಶಿಕ್ಷಾ ಸಂಘ ಅಧಿವೇಷನ್ ನಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಈ ಸಮ್ಮೇಳನದ ಥೀಮ್ 'ಶಿಕ್ಷಕರು ಶಿಕ್ಷಣದ ಪರಿವರ್ತನೆಯ ಹೃದಯಭಾಗದಲ್ಲಿದ್ದಾರೆ'.

*****


(Release ID: 1925138) Visitor Counter : 129