ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಮನ್ ಕಿ ಬಾತ್ 100 ಕೋಟಿ ಕೇಳುಗರನ್ನು ತಲುಪಿದೆ ಎಂದು ಅದರ 100 ನೇ ಸಂಚಿಕೆಗೆ ಮುಂಚಿತವಾಗಿ ನಡೆದ ಐಐಎಂ ಸಮೀಕ್ಷೆ ಹೇಳಿದೆ


ಮನ್ ಕಿ ಬಾತ್‌ಗೆ 23 ಕೋಟಿ ನಿಯಮಿತ ಕೇಳುಗರಿದ್ದಾರೆ, ಶೇ.96 ರಷ್ಟು ಜನರಿಗೆ ಈ ಪ್ರಸಿದ್ಧ ರೇಡಿಯೊ ಕಾರ್ಯಕ್ರಮದ ಬಗ್ಗೆ ತಿಳಿದಿದೆ: ಐಐಎಂ ರೋಹ್ಟಕ್ ಸಮೀಕ್ಷೆ

ಪ್ರಬಲ ಮತ್ತು ದೃಢವಾದ ನಾಯಕತ್ವ, ಕೇಳುಗರೊಂದಿಗೆ ಭಾವನಾತ್ಮಕ ಸಂಪರ್ಕ ಕಾರ್ಯಕ್ರಮದ ಜನಪ್ರಿಯತೆಗೆ ಕಾರಣವೆಂದು ಉಲ್ಲೇಖಿಸಲಾಗಿದೆ

ಮನ್ ಕಿ ಬಾತ್ ನಡವಳಿಕೆಯ ಮೇಲೆ ಪ್ರಭಾವ ಬೀರುತ್ತದೆ, ಶೇ.60 ರಷ್ಟು ಜನರು ರಾಷ್ಟ್ರ ನಿರ್ಮಾಣದಲ್ಲಿ ಆಸಕ್ತಿ ಹೊಂದಿದ್ದಾರೆ, ಶೇ.73 ರಷ್ಟು ಜನರು ದೇಶವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವುದಾಗಿ ಭಾವಿಸಿದ್ದಾರೆ ಎಂದು ವರದಿ ಹೇಳಿದೆ

Posted On: 24 APR 2023 6:52PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಬಗ್ಗೆ ದೇಶದ ಸುಮಾರು ತೊಂಬತ್ತಾರು ಪ್ರತಿಶತದಷ್ಟು ಜನರಿಗೆ ತಿಳಿದಿದೆ. ಈ ಕಾರ್ಯಕ್ರಮವು 100 ಕೋಟಿ ಜನರನ್ನು ತಲುಪಿದೆ, ಇವರು ಒಮ್ಮೆಯಾದರೂ ಕಾರ್ಯಕ್ರಮವನ್ನು ಆಲಿಸಿದ್ದಾರೆ. ಈ ಅಂಕಿ ಅಂಶಗಳು ಪ್ರಸಾರ ಭಾರತಿ ನಿಯೋಜಿಸಿದ ಮತ್ತು ರೋಹ್ಟಕ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಡೆಸಿದ ಸಮಗ್ರ ಅಧ್ಯಯನದಲ್ಲಿ ಬಹಿರಂಗವಾಗಿವೆ. ಪ್ರಸಾರ ಭಾರತಿಯ ಸಿಇಒ ಶ್ರೀ ಗೌರವ್ ದ್ವಿವೇದಿ ಮತ್ತು ಐಐಎಂ ರೋಹ್ಟಕ್‌ನ ನಿರ್ದೇಶಕ ಶ್ರೀ ಧೀರಜ್ ಪಿ. ಶರ್ಮಾ ಅವರು ಪತ್ರಿಕಾಗೋಷ್ಠಿಯಲ್ಲಿ ಅಧ್ಯಯನದ ವಿವರಗಳನ್ನು ನೀಡಿದರು.

ಶ್ರೀ ಶರ್ಮಾ ಅವರು ಅಧ್ಯಯನದ ವಿವರಗಳನ್ನು ಕುರಿತು ಮಾತನಾಡಿ, 23 ಕೋಟಿ ಜನರು ನಿಯಮಿತವಾಗಿ ಕಾರ್ಯಕ್ರಮವನ್ನು ಆಲಿಸುತ್ತಾರೆ, ಹಾಗೆಯೇ 41 ಕೋಟಿ ಜನರು ಸಾಂದರ್ಭಿಕ ಕೇಳುಗರಾಗಿದ್ದಾರೆ, ಇವರು ಸಾಮಾನ್ಯ ಕೇಳುಗರಾಗಿ ಪರಿವರ್ತನೆಯಾಗುವ ಸಾಧ್ಯತೆಯನ್ನು ಹೊಂದಿದ್ದಾರೆ ಎಂದು ಹೇಳಿದರು.

ವರದಿಯು ಪ್ರಧಾನ ಮಂತ್ರಿಯವರ ರೇಡಿಯೋ ಕಾರ್ಯಕ್ರಮದ ಜನಪ್ರಿಯತೆಯ ಹಿಂದಿನ ಕಾರಣಗಳನ್ನು ಕಂಡುಹಿಡಿದಿದೆ ಮತ್ತು ಜನರನ್ನು ಆಕರ್ಷಿಸಲು ಕಾರ್ಯಕ್ರಮಕ್ಕೆ ಇರುವ ವಿಶೇಷಗಳನ್ನು ಪಟ್ಟಿ ಮಾಡಿದೆ. ಕೇಳುಗರೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಸ್ಥಾಪಿಸುವ  ಪ್ರಬಲ ಮತ್ತು ದೃಢ ನಾಯಕತ್ವವು ಕಾರ್ಯಕ್ರಮದ ಯಶಸ್ಸಿಗೆ ಕಾರಣವೆಂದು ಉಲ್ಲೇಖಿಸಲಾಗಿದೆ. ಪ್ರಧಾನಮಂತ್ರಿಯವರು ತಿಳುವಳಿಕೆಯುಳ್ಳವರು ಮತ್ತು ಸಹಾನುಭೂತಿ ಮತ್ತು ಅನುಭೂತಿಯ ವಿಧಾನವನ್ನು ಹೊಂದಿದ್ದಾರೆ ಎಂದು ದೇಶದ ಜನರು ಅವರಿಗೆ ಮನ್ನಣೆ ನೀಡಿದ್ದಾರೆ. ನಾಗರಿಕರೊಂದಿಗೆ ನೇರವಾಗಿ ತೊಡಗಿಸಿಕೊಳ್ಳುವುದು ಮತ್ತು ಮಾರ್ಗದರ್ಶನವನ್ನು ನೀಡುವುದು ಸಹ ಕಾರ್ಯಕ್ರಮದ ಬಗ್ಗೆ ವಿಶ್ವಾಸ ಮೂಡಲು ಕಾರಣವೆಂದು ಹೇಳಲಾಗಿದೆ.

ಇದುವರೆಗಿನ 99 ಸಂಚಿಕೆಗಳಲ್ಲಿ ಮನ್ ಕಿ ಬಾತ್ ಜನರ ಮೇಲೆ ಬೀರಿದ ಪ್ರಭಾವವನ್ನು ಅಳೆಯಲು ಅಧ್ಯಯನವು ಪ್ರಯತ್ನಿಸಿದೆ. ಬಹುಪಾಲು ಕೇಳುಗರು ಸರ್ಕಾರದ ಕೆಲಸಗಳ ಬಗ್ಗೆ ಅರಿವು ಹೊಂದಿದ್ದಾರೆ ಮತ್ತು ಶೇ.73 ರಷ್ಟು ಜನರು ಆಶಾವಾದಿಗಳಾಗಿದ್ದಾರೆ ಮತ್ತು ದೇಶವು ಪ್ರಗತಿಯತ್ತ ಸಾಗುತ್ತಿದೆ ಎಂದು ಭಾವಿಸುತ್ತಾರೆ ಎಂದು ಅದು ಹೇಳಿದೆ. ಶೇ.58 ರಷ್ಟು ಕೇಳುಗರು ತಮ್ಮ ಜೀವನ ಪರಿಸ್ಥಿತಿಗಳು ಸುಧಾರಿಸಿವೆ ಎಂದು ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ ಇಷ್ಟೇ ಸಂಖ್ಯೆಯ (ಶೇ.59) ಜನರಿಗೆ ಸರ್ಕಾರದ ಮೇಲಿನ ನಂಬಿಕೆ ಹೆಚ್ಚಾಗಿದೆ ಎಂದು ವರದಿ ಹೇಳಿದೆ. ಸಮೀಕ್ಷೆಯ ಪ್ರಕಾರ ಶೇ.63 ರಷ್ಟು ಜನರು ಸರ್ಕಾರದ ವಿಧಾನವು ಸಕಾರಾತ್ಮಕವಾಗಿದೆ ಎಂದು ಹೇಳಿದ್ದಾರೆ ಮತ್ತು ಶೇ.60 ರಷ್ಟು ಜನರು ರಾಷ್ಟ್ರ ನಿರ್ಮಾಣಕ್ಕಾಗಿ ಕೆಲಸ ಮಾಡಲು ಆಸಕ್ತಿ ತೋರಿಸಿದ್ದಾರೆ ಎಂಬ ಅಂಶದಿಂದ ಸರ್ಕಾರದ ಬಗೆಗಿನ ಸಾಮಾನ್ಯ ಭಾವನೆಯನ್ನು ಅಳೆಯಬಹುದಾಗಿದೆ.

ಅಧ್ಯಯನವು 3 ಪ್ಲಾಟ್‌ಫಾರ್ಮ್‌ಗಳ ಪ್ರೇಕ್ಷಕರನ್ನು ಹೊಂದಿತ್ತು. ಶೇ.44.7 ಜನರು ಟಿವಿಯಲ್ಲಿ ಕಾರ್ಯಕ್ರಮ ನೋಡುತ್ತಾರೆ ಮತ್ತು ಶೇ.37.6 ಜನರು ಅದನ್ನು ಮೊಬೈಲ್ ನಲ್ಲಿ ಕೇಳುತ್ತಾರೆ. ಪ್ರತಿಕ್ರಿಯಿಸಿದವರಲ್ಲಿ 19 ರಿಂದ 34 ವರ್ಷದೊಳಗಿನ ಶೇ.62 ರಷ್ಟು ಜನರು ಕಾರ್ಯಕ್ರಮವನ್ನು ಟಿವಿಯಲ್ಲಿ ವೀಕ್ಷಿಸಲು ಆದ್ಯತೆ ನೀಡುತ್ತಾರೆ. ಕಾರ್ಯಕ್ರಮವನ್ನು ಕೇಳುವುದಕ್ಕಿಂತ ಅದನ್ನು ವೀಕ್ಷಿಸಲು ಹೆಚ್ಚು ಒಲವು ಇರುವುದು ಕಂಡುಬರುತ್ತದೆ.

ಹಿಂದಿ ಭಾಷೆಯ ಮನ್ ಕಿ ಬಾತ್‌ ಪ್ರಮುಖ ಶ್ರೋತೃಗಳ ಪಾಲನ್ನು ಹೊಂದಿದೆ. ಶೇ.65 ರಷ್ಟು ಕೇಳುಗರು ಇತರ ಭಾಷೆಗಿಂತ ಹಿಂದಿಗೆ ಆದ್ಯತೆ ನೀಡುತ್ತಾರೆ ಮತ್ತು ಇಂಗ್ಲಿಷ್ ಶೇ.18 ರೊಂದಿಗೆ ಎರಡನೇ ಸ್ಥಾನದಲ್ಲಿದೆ.

ಸಮೀಕ್ಷೆಗೆ ಪ್ರತಿಕ್ರಿಯಿಸಿದವರ ವಿವರ ಕುರಿತು ಮಾತನಾಡಿದ ನಿರ್ದೇಶಕ ಶ್ರೀ ಧೀರಜ್ ಶರ್ಮಾ ಅವರು ಈ ಅಧ್ಯಯನಕ್ಕಾಗಿ ಒಟ್ಟು 10003 ಮಂದಿ ಪ್ರತಿಕ್ರಿಯಿಸಿದ್ದಾರೆ. ಇವರಲ್ಲಿ ಶೇ.60 ಪುರುಷರು ಮತ್ತು ಶೇ.40 ಮಹಿಳೆಯರು. ಈ ಜನರು 68 ವಿವಿಧ ಉದ್ಯೋಗ ವಲಯಗಳಲ್ಲಿದ್ದಾರೆ ಮತ್ತು ಶೇ.64 ರಷ್ಟು ಅನೌಪಚಾರಿಕ ಮತ್ತು ಸ್ವಯಂ ಉದ್ಯೋಗಿ ವಲಯಕ್ಕೆ ಸೇರಿದ್ದರೆ, ಶೇ. 23 ರಷ್ಟು ವಿದ್ಯಾರ್ಥಿಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ಸೈಕೋಮೆಟ್ರಿಕ್ ಸಮೀಕ್ಷೆ ವಿಧಾನದ ಮೂಲಕ ಪ್ರತಿ ವಲಯಕ್ಕೆ ಸರಿಸುಮಾರು 2500 ಪ್ರತಿಕ್ರಿಯೆಗಳೊಂದಿಗೆ ಎಲ್ಲ ವರ್ಗದ ಪ್ರತಿಕ್ರಿಯೆ ಮಾದರಿಯನ್ನು ಬಳಸಿಕೊಂಡು ಭಾರತದ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಪ್ರದೇಶಗಳಿಂದ ಡೇಟಾವನ್ನು ಸಂಗ್ರಹಿಸಲಾಗಿದೆ ಎಂದು ಶ್ರೀ ಶರ್ಮಾ ಹೇಳಿದರು.

22 ಭಾರತೀಯ ಭಾಷೆಗಳು ಮತ್ತು 29 ಉಪಭಾಷೆಗಳಲ್ಲದೇ, ಫ್ರೆಂಚ್, ಚೈನೀಸ್, ಇಂಡೋನೇಷಿಯನ್, ಟಿಬೆಟಿಯನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಶ್ತು, ಪರ್ಷಿಯನ್, ದರಿ ಮತ್ತು ಸ್ವಾಹಿಲಿ ಸೇರಿದಂತೆ 11 ವಿದೇಶಿ ಭಾಷೆಗಳಲ್ಲಿ ಮನ್ ಕಿ ಬಾತ್ ಪ್ರಸಾರವಾಗುತ್ತದೆ ಎಂದು ಶ್ರೀ ಗೌರವ್ ದ್ವಿವೇದಿ ತಿಳಿಸಿದರು. ಆಕಾಶವಾಣಿಯ 500ಕ್ಕೂ ಹೆಚ್ಚು ಪ್ರಸಾರ ಕೇಂದ್ರಗಳಿಂದ ಮನ್ ಕಿ ಬಾತ್ ಪ್ರಸಾರವಾಗುತ್ತಿದೆ ಎಂದು ಅವರು ಹೇಳಿದರು.

ಅಧ್ಯಯನ ನಡೆಸುವ ಆಲೋಚನಾ ಪ್ರಕ್ರಿಯೆ ಬಗ್ಗೆ ಮಾತನಾಡಿದ ಶ್ರೀ ದ್ವಿವೇದಿ, ಕಾಲಕಾಲಕ್ಕೆ ನಾವು ಒಟ್ಟಾರೆ ಕಾರ್ಯಕ್ರಮ ಬಗ್ಗೆ ಹೆಚ್ಚು ಸುಸಜ್ಜಿತ ಪ್ರತಿಕ್ರಿಯೆಯನ್ನು ಪಡೆಯಬೇಕು ಮತ್ತು ನಿರ್ದಿಷ್ಟ ಸಂಚಿಕೆಗಳಿಗೆ ಮಾತ್ರ ಅಲ್ಲ ಎಂಬ ಚಿಂತನೆ ಇದರ ಉದ್ದೇಶ ಎಂದು ಹೇಳಿದರು. ಮನ್ ಕಿ ಬಾತ್‌ ಬಗ್ಗೆ ಡಿಜಿಟಲ್ ಪ್ರತಿಕ್ರಿಯೆಗಳು ಸುಲಭವಾಗಿ ಲಭ್ಯವಿದ್ದರೂ, ಕೆಲವು ಮಿತಿಗಳಿಂದಾಗಿ ಸಾಂಪ್ರದಾಯಿಕ ಮಾಧ್ಯಮಗಳಲ್ಲಿ ಅದು ಇರುವುದಿಲ್ಲ. ಈ ದೃಷ್ಟಿಕೋನದಿಂದ, ಸಮೀಕ್ಷೆಯ ಕಾರ್ಯವನ್ನು ಐಐಎಂ ರೋಹ್ಟಕ್‌ಗೆ 18ನೇ ಏಪ್ರಿಲ್, 2022 ರಂದು ನೀಡಲಾಯಿತು ಎಂದು ಅವರು ತಿಳಿಸಿದರು.

ಮನ್ ಕಿ ಬಾತ್ ಬಗ್ಗೆ:

ಆಕಾಶವಾಣಿಯಲ್ಲಿ ಜನಪ್ರಿಯ ಕಾರ್ಯಕ್ರಮವಾದ ಪ್ರಧಾನ ಮಂತ್ರಿಯವರ ಮನ್ ಕಿ ಬಾತ್ ಅನ್ನು 3 ನೇ ಅಕ್ಟೋಬರ್, 2014 ರಂದು ಪ್ರಾರಂಭಿಸಲಾಯಿತು. ಪ್ರತಿ ತಿಂಗಳ ಕೊನೆಯ ಭಾನುವಾರದಂದು ಬೆಳಿಗ್ಗೆ 11 ಗಂಟೆಗೆ ಎಲ್ಲಾ ಆಕಾಶವಾಣಿ ಮತ್ತು ದೂರದರ್ಶನ ನೆಟ್‌ವರ್ಕ್‌ನಲ್ಲಿ ಇದು ಪ್ರಸಾರವಾಗುತ್ತದೆ. 30 ನಿಮಿಷಗಳ ಈ ಕಾರ್ಯಕ್ರಮವು 30ನೇ ಏಪ್ರಿಲ್ 2023 ರಂದು 100 ಸಂಚಿಕೆಗಳನ್ನು ಪೂರ್ಣಗೊಳಿಸುತ್ತಿದೆ. ಮನ್ ಕಿ ಬಾತ್ ಅನ್ನು ಆಕಾಶವಾಣಿಯಿಂದ ಇಂಗ್ಲಿಷ್‌ ಅಲ್ಲದೆ, 22 ಭಾರತೀಯ ಭಾಷೆಗಳು, 29 ಉಪಭಾಷೆಗಳು ಮತ್ತು 11 ವಿದೇಶಿ ಭಾಷೆಗಳಿಗೆ ಇಂಗ್ಲಿಷ್ ಅನುವಾದಿಸಲಾಗುತ್ತದೆ. ಇದರಲ್ಲಿ ಕನ್ನಡ, ಹಿಂದಿ, ಸಂಸ್ಕೃತ, ಪಂಜಾಬಿ, ತಮಿಳು, ತೆಲುಗು, ಮರಾಠಿ, ಗುಜರಾತಿ, ಮಲಯಾಳಂ, ಒಡಿಯಾ, ಕೊಂಕಣಿ, ನೇಪಾಳಿ, ಕಾಶ್ಮೀರಿ, ಡೋಗ್ರಿ, ಮಣಿಪುರಿ, ಮೈಥಿಲಿ, ಬೆಂಗಾಲಿ, ಅಸ್ಸಾಮಿ, ಬೋಡೋ, ಸಂತಾಲಿ, ಉರ್ದು, ಸಿಂಧಿ ಸೇರಿವೆ. ಉಪಭಾಷೆಗಳಲ್ಲಿ ಛತ್ತೀಸ್‌ಗಢಿ, ಗೊಂಡಿ, ಹಲ್ಬಿ, ಸರ್ಗುಜಿಯಾ, ಪಹಾಡಿ, ಶೀನಾ, ಗೊಜ್ರಿ, ಬಾಲ್ಟಿ, ಲಡಾಖಿ, ಕರ್ಬಿ, ಖಾಸಿ, ಜೈನ್ತಿಯಾ, ಗಾರೊ, ನಾಗಮೀಸ್, ಹ್ಮಾರ್, ಪೈಟೆ, ಥಾಡೌ, ಕಬುಯಿ, ಮಾವೋ, ತಂಗ್ಖುಲ್, ನೈಶಿ, ಆದಿ, ಮೊನ್ಪಾ, ಆವೋ, ಅಂಗಮಿ, ಕೊಕ್ಬೊರೊಕ್, ಮಿಜೋ, ಲೆಪ್ಚಾ, ಸಿಕ್ಕಿಮೀಸ್ (ಭುಟಿಯಾ) ಸೇರಿವೆ.

****



(Release ID: 1919394) Visitor Counter : 98