ಪ್ರಧಾನ ಮಂತ್ರಿಯವರ ಕಛೇರಿ

 ಅರಬ್ ರಿಪಬ್ಲಿಕ್ ಆಫ್ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸೀಸಿ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ

Posted On: 25 JAN 2023 4:21PM by PIB Bengaluru

ಗೌರವಾನ್ವಿತ ಅಧ್ಯಕ್ಷರಾದ ಅಬ್ದೆಲ್ ಫತ್ತಾಹ್ ಅಲ್-ಸೀಸಿ ಅವರೇ 

ಎರಡೂ ದೇಶಗಳ ಮಂತ್ರಿಗಳು ಮತ್ತು ಪ್ರತಿನಿಧಿಗಳೇ

ಮಾಧ್ಯಮ ಮಿತ್ರರೇ,

ಮೊದಲಿಗೆ, ನಾನು ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸೀಸಿ ಮತ್ತು ಅವರ ನಿಯೋಗಕ್ಕೆ ಭಾರತಕ್ಕೆ ಆತ್ಮೀಯ ಸ್ವಾಗತವನ್ನು ಕೋರಲು ಬಯಸುತ್ತೇನೆ.  ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸೀಸಿ ಅವರು  ನಾಳೆ ನಮ್ಮ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.  ಇದು ಇಡೀ ಭಾರತಕ್ಕೆ ಹೆಮ್ಮೆ ಮತ್ತು ಸಂತೋಷದ ವಿಷಯ.  ಈಜಿಪ್ಟ್‌ನ ಸೇನಾ ತುಕಡಿಯೂ ನಮ್ಮ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಿ ಅದಕ್ಕೆ ವೈಭವವನ್ನು ನೀಡುತ್ತಿರುವುದು ನನಗೆ ಸಂತೋಷ ತಂದಿದೆ.

 ಸ್ನೇಹಿತರೇ..

 ಭಾರತ ಮತ್ತು ಈಜಿಪ್ಟ್‌ ಈ ದೇಶಗಳ ನಾಗರೀಕತೆಯು ಪ್ರಪಂಚದ ಅತ್ಯಂತ ಪುರಾತನ ನಾಗರಿಕತೆಗಳಲ್ಲಿ ಸೇರಿವೆ.  ನಾವು ಸಾವಿರಾರು ವರ್ಷಗಳಿಂದ ನಿರಂತರ ಸಂಬಂಧವನ್ನು ಹೊಂದಿದ್ದೇವೆ.  ನಾಲ್ಕು ಸಾವಿರ ವರ್ಷಗಳ ಹಿಂದೆ ಗುಜರಾತಿನ ಲೋಥಲ್ ಬಂದರಿನ ಮೂಲಕ ಈಜಿಪ್ಟ್‌ನೊಂದಿಗೆ ವ್ಯಾಪಾರ ನಡೆಯುತ್ತಿತ್ತು.  ಮತ್ತು ಜಗತ್ತಿನಲ್ಲಿ ವಿವಿಧ ಬದಲಾವಣೆಗಳ ಹೊರತಾಗಿಯೂ, ನಮ್ಮ ಸಂಬಂಧಗಳು ಸ್ಥಿರವಾಗಿವೆ ಮತ್ತು ನಮ್ಮ ಸಹಕಾರವನ್ನು ನಿರಂತರವಾಗಿ ಬಲಪಡಿಸಲಾಗಿದೆ.

 ಕಳೆದ ಕೆಲವು ವರ್ಷಗಳಲ್ಲಿ ನಮ್ಮಗಳ ಪರಸ್ಪರ ಸಹಕಾರವು ಗಾಢವಾಗಿದೆ.  ಮತ್ತು ಇದಕ್ಕಾಗಿ, ನನ್ನ ಸ್ನೇಹಿತ ಅಧ್ಯಕ್ಷ ಸೀಸಿ ಅವರ ಸಮರ್ಥ ನಾಯಕತ್ವಕ್ಕೆ ನಾನು ಮಹತ್ತರವಾದ ಮನ್ನಣೆ ನೀಡಲು ಬಯಸುತ್ತೇನೆ.

 ಈ ವರ್ಷ, ಭಾರತವು ತನ್ನ G-20 ಅಧ್ಯಕ್ಷರ ಅವಧಿಯಲ್ಲಿ ಈಜಿಪ್ಟ್ ಅನ್ನು ಅತಿಥಿ ರಾಷ್ಟ್ರವಾಗಿ ಆಹ್ವಾನಿಸಿದೆ, ಇದು ನಮ್ಮ ವಿಶೇಷ ಸ್ನೇಹವನ್ನು ಪ್ರತಿಬಿಂಬಿಸುತ್ತದೆ.

 ಸ್ನೇಹಿತರೇ..

 ಅರಬ್ಬೀ ಸಮುದ್ರದ ಒಂದು ಬದಿಯಲ್ಲಿ ಭಾರತ ಮತ್ತು ಇನ್ನೊಂದು ಬದಿಯಲ್ಲಿ ಈಜಿಪ್ಟ್ ಇದೆ.  ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಸಹಕಾರವು ಇಡೀ ಪ್ರದೇಶದಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.  ಹಾಗಾಗಿ ಇಂದಿನ ಸಭೆಯಲ್ಲಿ, ಅಧ್ಯಕ್ಷ ಸೀಸಿ ಮತ್ತು ನಾನು ನಮ್ಮ ದ್ವಿಪಕ್ಷೀಯ ಪಾಲುದಾರಿಕೆಯನ್ನು "ಕಾರ್ಯತಂತ್ರದ ಪಾಲುದಾರಿಕೆ" ಮಟ್ಟಕ್ಕೆ ಏರಿಸಲು ನಿರ್ಧರಿಸಿದೆವು.  ಭಾರತ-ಈಜಿಪ್ಟ್ ಸ್ಟ್ರಾಟೆಜಿಕ್ ಪಾಲುದಾರಿಕೆಯ ಅಡಿಯಲ್ಲಿ, ನಾವು ರಾಜಕೀಯ, ಭದ್ರತೆ, ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರದ ದೀರ್ಘಾವಧಿಯ ಚೌಕಟ್ಟನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ನಾವು ನಿರ್ಧರಿಸಿದ್ದೇವೆ.

 ಭಾರತ ಮತ್ತು ಈಜಿಪ್ಟ್ ಜಗತ್ತಿನಾದ್ಯಂತ ಭಯೋತ್ಪಾದನೆಯ ಹರಡುವಿಕೆಯಿಂದ ಆತಂಕಕ್ಕೊಳಗಾಗಿವೆ.  ಭಯೋತ್ಪಾದನೆಯು ಮಾನವೀಯತೆಗೆ ಅತ್ಯಂತ ಗಂಭೀರವಾದ ಭದ್ರತಾ ಬೆದರಿಕೆಯಾಗಿದೆ ಎಂಬ ಅಭಿಪ್ರಾಯದಲ್ಲಿ ನಾವು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದೇವೆ. ಗಡಿಯಾಚೆಗಿನ ಭಯೋತ್ಪಾದನೆಯನ್ನು ಕೊನೆಗಾಣಿಸಲು ಸಂಘಟಿತ ಕ್ರಮ ಅಗತ್ಯ ಎಂಬುದನ್ನು ಈ ಎರಡೂ ದೇಶಗಳು ಸಹ ಒಪ್ಪಿಕೊಂಡಿವೆ.  ಮತ್ತು ಇದಕ್ಕಾಗಿ, ನಾವು ಒಟ್ಟಾಗಿ ಅಂತರರಾಷ್ಟ್ರೀಯ ಸಮುದಾಯವನ್ನು ಎಚ್ಚರಿಸಲು ಪ್ರಯತ್ನಿಸುವುದನ್ನು ಮುಂದುವರಿಸುತ್ತೇವೆ.

 ನಮ್ಮ ನಡುವೆ ಭದ್ರತೆ ಮತ್ತು ರಕ್ಷಣಾ ಸಹಕಾರವನ್ನು ಹೆಚ್ಚಿಸುವ ಅಪಾರ ಸಾಮರ್ಥ್ಯವೂ ಇದೆ.  ಕಳೆದ ಕೆಲವು ವರ್ಷಗಳಲ್ಲಿ, ನಮ್ಮ ಸೇನೆಗಳ ನಡುವೆ ಜಂಟಿ ವ್ಯಾಯಾಮ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.  ನಮ್ಮ ರಕ್ಷಣಾ ಉದ್ಯಮಗಳ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಮತ್ತು ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಗುಪ್ತಚರ ವಿನಿಮಯವನ್ನು ಹೆಚ್ಚಿಸಲು ನಾವು ಇಂದಿನ ಸಭೆಯಲ್ಲಿ ನಿರ್ಧರಿಸಿದ್ದೇವೆ.

 ಉಗ್ರಗಾಮಿ ಸಿದ್ಧಾಂತಗಳನ್ನು ಹರಡಲು ಮತ್ತು ಆಮೂಲಾಗ್ರ ಗೊಳಿಸಲು ಸೈಬರ್ ಸ್ಪೇಸ್‌ನ ದುರುಪಯೋಗವು ಬೆಳೆಯುತ್ತಿರುವ ಅಪಾಯವಾಗಿದೆ.  ಇದರ ವಿರುದ್ಧವೂ ಸಹಕಾರ ನೀಡುತ್ತೇವೆ.

 ಸ್ನೇಹಿತರೇ..

 ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಆರೋಗ್ಯ ಮೂಲಸೌಕರ್ಯ ಮತ್ತು ಜಾಗತಿಕ ಪೂರೈಕೆ ಸರಪಳಿಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಿದ್ದೇವೆ.  ಅಧ್ಯಕ್ಷ ಸೀಸಿ ಮತ್ತು ನಾನು ಈ  ಕೋವಿಡ್‌ನಂತಹ ಸವಾಲಿನ ಸಂದರ್ಭದಲ್ಲಿ ನಿಕಟ ಸಂಪರ್ಕದಲ್ಲಿದ್ದೆವು ಮತ್ತು ಎರಡೂ ದೇಶಗಳು ಅಗತ್ಯದ ಸಮಯದಲ್ಲಿ ಪರಸ್ಪರ ತಕ್ಷಣದ ಸಹಾಯವನ್ನು ಕಳುಹಿಸಿದ್ದೇವೆ.

 ಇಂದು, ಕೋವಿಡ್ ಮತ್ತು ಉಕ್ರೇನ್ ಸಂಘರ್ಷದಿಂದ ಪ್ರಭಾವಿತವಾಗಿರುವ ಆಹಾರ ಮತ್ತು ಫಾರ್ಮಾ ಪೂರೈಕೆ ಸರಪಳಿಗಳನ್ನು ಬಲಪಡಿಸುವ ಕುರಿತು ನಾವು ವ್ಯಾಪಕವಾದ ಚರ್ಚೆಗಳನ್ನು ನಡೆಸಿದ್ದೇವೆ.  ಈ ಕ್ಷೇತ್ರಗಳಲ್ಲಿ ಪರಸ್ಪರ ಹೂಡಿಕೆ ಮತ್ತು ವ್ಯಾಪಾರವನ್ನು ಹೆಚ್ಚಿಸುವ ಅಗತ್ಯವನ್ನು ನಾವು ಸಹ ಒಪ್ಪಿಕೊಂಡಿದ್ದೇವೆ.  ಮುಂದಿನ ಐದು ವರ್ಷಗಳಲ್ಲಿ ನಾವು ನಮ್ಮ ದ್ವಿಪಕ್ಷೀಯ ವ್ಯಾಪಾರವನ್ನು 12 ಬಿಲಿಯನ್ ಡಾಲರ್‌ಗೆ ಕೊಂಡೊಯ್ಯುತ್ತೇವೆ ಎಂದು ನಾವು ಒಟ್ಟಾಗಿ ನಿರ್ಧರಿಸಿದ್ದೇವೆ.

 ಸ್ನೇಹಿತರೇ..

 COP-27 ಅನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಮತ್ತು ಹವಾಮಾನ ವಲಯದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಹಿತಾಸಕ್ತಿಗಳನ್ನು ಖಚಿತಪಡಿಸಿಕೊಳ್ಳಲು ಅದರ ಪ್ರಯತ್ನಗಳಿಗಾಗಿ ನಾವು ಈಜಿಪ್ಟ್ ಅನ್ನು ಪ್ರಶಂಸಿಸುತ್ತೇವೆ.

 ಭಾರತ ಮತ್ತು ಈಜಿಪ್ಟ್ ವಿಶ್ವಸಂಸ್ಥೆ ಮತ್ತು ಇತರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸುದೀರ್ಘ ಮತ್ತು ಅತ್ಯುತ್ತಮ ಸಹಕಾರವನ್ನು ಹೊಂದಿವೆ.  ಅಂತರರಾಷ್ಟ್ರೀಯ ವಿವಾದಗಳನ್ನು ಪರಿಹರಿಸಲು ರಾಜತಾಂತ್ರಿಕತೆ ಮತ್ತು ಮಾತುಕತೆಯ ಅಗತ್ಯವನ್ನು ನಾವಿಬ್ಬರೂ ಒಪ್ಪುತ್ತೇವೆ.

ಶುಭಾಶಯಗಳು...

 ನಾನು ಮತ್ತೊಮ್ಮೆ ನಿಮಗೆ ಮತ್ತು ನಿಮ್ಮ ನಿಯೋಗಕ್ಕೆ ಭಾರತಕ್ಕೆ ಆತ್ಮೀಯ ಸ್ವಾಗತವನ್ನು ನೀಡುತ್ತೇನೆ.  ನಾನು ನಿಮಗೆ ಮತ್ತು ಈಜಿಪ್ಟ್ ಜನರಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇನೆ.

 ತುಂಬ ಧನ್ಯವಾದಗಳು!

 ಹಕ್ಕು ನಿರಾಕರಣೆ - ಇದು ಪ್ರಧಾನಿಯವರ ಭಾಷಣದ  ಅಂದಾಜು ಅನುವಾದವಾಗಿದೆ.  ಮೂಲ ಹೇಳಿಕೆಗಳನ್ನು ಹಿಂದಿಯಲ್ಲಿ ನೀಡಲಾಗಿದೆ.

*****



(Release ID: 1893804) Visitor Counter : 126