ಗೃಹ ವ್ಯವಹಾರಗಳ ಸಚಿವಾಲಯ
ಸುಭಾಷ್ ಚಂದ್ರ ಬೋಸ್ ಆಪತ್ತು ನಿರ್ವಹಣಾ ಪುರಸ್ಕಾರ-2023
ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಮಿಜೋರಾಂನ ಲುಂಗ್ಲೈ ಅಗ್ನಿಶಾಮಕ ಠಾಣೆಗಳು ಪ್ರಸಕ್ತ ಸಾಲಿನ ಸುಭಾಷ್ ಚಂದ್ರ ಬೋಸ್ ಆಪತ್ತು ನಿರ್ವಹಣಾ ಪುರಸ್ಕಾರಕ್ಕೆ ಆಯ್ಕೆಯಾಗಿವೆ.
ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ದೇಶವಾಸಿಗಳು ಮತ್ತು ಸಂಸ್ಥೆಗಳು ಸಲ್ಲಿಸಿದ ಅಮೂಲ್ಯ ಕೊಡುಗೆ ಮತ್ತು ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಗೌರವಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು "ಸುಭಾಷ್ ಚಂದ್ರ ಬೋಸ್ ಆಪತ್ತು ನಿರ್ವಹಣಾ ಪುರಸ್ಕಾರ" ಸ್ಥಾಪಿಸಿದೆ.
Posted On:
23 JAN 2023 12:28PM by PIB Bengaluru
ಪ್ರಸಕ್ತ ಸಾಲಿನಲ್ಲಿ ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (OSDMA) ಮತ್ತು ಮಿಜೋರಾಂನ ಲುಂಗ್ಲೀ ಅಗ್ನಿಶಾಮಕ ಠಾಣೆ (LFS), ಸಾಂಸ್ಥಿಕ ವಿಭಾಗದಲ್ಲಿ, ವಿಪತ್ತು ನಿರ್ವಹಣೆಯಲ್ಲಿನ ಅತ್ಯುತ್ತಮ ಕೆಲಸಕ್ಕಾಗಿ "ಸುಭಾಷ್ ಚಂದ್ರ ಬೋಸ್ ಆಪತ್ತು ನಿರ್ವಹಣಾ ಪುರಸ್ಕಾರ-2023"ಕ್ಕೆ ಆಯ್ಕೆಯಾಗಿದೆ.
ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ದೇಶವಾಸಿಗಳು ಮತ್ತು ಸಂಸ್ಥೆಗಳು ಸಲ್ಲಿಸಿದ ಅಮೂಲ್ಯ ಕೊಡುಗೆ ಮತ್ತು ನಿಸ್ವಾರ್ಥ ಸೇವೆಯನ್ನು ಗುರುತಿಸಲು ಮತ್ತು ಗೌರವಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಸುಭಾಷ್ ಚಂದ್ರ ಬೋಸ್ ಆಪತ್ತು ನಿರ್ವಹಣಾ ಪುರಸ್ಕಾರ ವಾರ್ಷಿಕ ಪ್ರಶಸ್ತಿಯನ್ನು ಸ್ಥಾಪಿಸಿದೆ.
ಪ್ರತಿ ವರ್ಷ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23 ರಂದು ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ. ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಯು ರೂ. 51 ಲಕ್ಷ ಮತ್ತು ಪ್ರಮಾಣಪತ್ರ ಮತ್ತು ವೈಯಕ್ತಿಕ ಪ್ರಶಸ್ತಿ ಸಂದರ್ಭದಲ್ಲಿ ರೂ. 5 ಲಕ್ಷ ಮತ್ತು ಪ್ರಮಾಣಪತ್ರ ಒಳಗೊಂಡಿರುತ್ತದೆ.
ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ವಿಪತ್ತು ನಿರ್ವಹಣಾ ಕಾರ್ಯಾಚರಣೆ, ಸನ್ನದ್ಧತೆ, ಮತ್ತು ಕ್ಷಿಪ್ತಗತಿಯಲ್ಲಿ ಕಾರ್ಯವಿಧಾನಗಳನ್ನು ಕೈಗೊಳ್ಳುವ ವ್ಯವಸ್ಥೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಇದರಿಂದಾಗಿ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಸಾವು-ನೋವುಗಳು ಗಣನೀಯವಾಗಿ ಕಡಿಮೆಯಾಗಿದೆ.
ಪ್ರಸಕ್ತ ಸಾಲಿನ ಪ್ರಶಸ್ತಿಗಾಗಿ, 1ನೇ ಜುಲೈ, 2022ರಿಂದ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿತ್ತು. 2023 ರ ಪ್ರಶಸ್ತಿ ಯೋಜನೆಗೆ ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರವನ್ನು ಮಾಡಲಾಗಿತ್ತು. ಸಂಸ್ಥೆಗಳು ಮತ್ತು ವೈಯಕ್ತಿಕವಾಗಿ ಒಟ್ಟಾರೆಯಾಗಿ 274 ನಾಮನಿರ್ದೇಶನಗಳನ್ನು ಸ್ವೀಕರಿಸಲಾಗಿತ್ತು.
ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ 2023ರ ಪ್ರಶಸ್ತಿಗೆ ಆಯ್ಕೆಯಾದ ಸಂಸ್ಥೆಗಳ ವಿಜೇತರ ಮಹೋನ್ನತ ಕಾರ್ಯಗಳ ವಿವರ ಇಲ್ಲಿದೆ:
1) 1999ರಲ್ಲಿ ಸೂಪರ್ ಸೈಕ್ಲೋನ್ ನಂತರ ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (OSDMA) ಸ್ಥಾಪಿಸಿತು. OSDMAವು ಒಡಿಶಾ ಡಿಸಾಸ್ಟರ್ ರೆಸ್ಪಾನ್ಸ್ ಆಕ್ಷನ್ ಫೋರ್ಸ್ (ODRAF), ಬಹು-ಅಪಾಯದ ಆರಂಭಿಕ ಎಚ್ಚರಿಕೆ ಸೇವೆ (MHEWS) ಮತ್ತು "SATARK" ಎಂಬ ಅತ್ಯಾಧುನಿಕ ತಂತ್ರಜ್ಞಾನದ ವೆಬ್/ಸ್ಮಾರ್ಟ್ಫೋನ್ ಆಧಾರಿತ ಪ್ಲಾಟ್ಫಾರ್ಮ್ ಸೇರಿ ಅನೇಕ ಉಪಕ್ರಮಗಳನ್ನು ಆರಂಭಿಸಿದೆ. ಡೈನಾಮಿಕ್ ರಿಸ್ಕ್ ತಂತ್ರಜ್ಞಾನದ ಆಧಾರದ ಮೇಲೆ ವಿಪತ್ತು ಅಪಾಯದ ಮಾಹಿತಿಯನ್ನು ಕಲೆ ಹಾಕುವುದು, ಟ್ರ್ಯಾಕಿಂಗ್ ಮಾಡುವುದು ಮತ್ತು ಎಚ್ಚರಿಕೆ ನೀಡುವುದು ಮಹತ್ವದ್ದಾಗಿದೆ. OSDMA ವಿವಿಧ ಚಂಡಮಾರುತಗಳು, Hudhud (2014), Fani (2019), ಅಂಫಾನ್ (2020) ಮತ್ತು ಒಡಿಶಾ ಪ್ರವಾಹಗಳ (2020) ಸಮಯದಲ್ಲಿ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸಿದೆ. ಕರಾವಳಿ ಪ್ರದೇಶದ 1.5 ಕಿ.ಮೀ. ವ್ಯಾಪ್ತಿಯ ಒಳಗಡೆ 381 ಸುನಾಮಿ ಪೀಡಿತ ಗ್ರಾಮಗಳು/ವಾರ್ಡ್ ಗಳಲ್ಲಿ ಸಮುದಾಯದ ಸ್ಥಿತಿಸ್ಥಾಪಕತ್ವ ನಿರ್ಮಾಣ ಮತ್ತು ವಿಪತ್ತು ಸನ್ನದ್ಧತೆಯ ಉಪಕ್ರಮಗಳನ್ನು OSDMA ಕೈಗೊಂಡಿದೆ.
2) 24 ಏಪ್ರಿಲ್ 2021 ರಂದು ಲುಂಗ್ಲೇ ಪಟ್ಟಣವನ್ನು ಸುತ್ತುವರೆದಿರುವ ಮತ್ತು 10ಕ್ಕೂ ಹೆಚ್ಚು ಗ್ರಾಮ ಪ್ರದೇಶಗಳಿಗೆ ಹರಡಿದ ಕಾಡ್ಗಿಚ್ಚು ಸಂದರ್ಭದಲ್ಲಿ ಮಿಜೋರಾಂನ ಲುಂಗ್ಲೆಯ್ ಅಗ್ನಿ ಶಾಮಕ ಠಾಣೆ ಅತ್ಯಂತ ಪರಿಣಾಮಕಾರಿ ಹಾಗೂ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿತ್ತು.
ಜನವಸತಿ ಇಲ್ಲದ ಅರಣ್ಯ ಪ್ರದೇಶಗಳಲ್ಲಿ ಅತ್ಯಂತ ತ್ವರಿತ ಗತಿಯಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯ ಕೈಗೊಂಡಿತ್ತು. ಸ್ಥಳೀಯ ನಾಗರಿಕರ ನೆರವಿನಿಂದ ಲುಂಗ್ಲೈ ಅಗ್ನಿಶಾಮಕ ಠಾಣೆಯ ಸಿಬ್ಬಂದಿ 32 ಗಂಟೆಗಳಿಗೂ ಹೆಚ್ಚು ಕಾಲ ನಿರಂತರವಾಗಿ ಕೆಲಸ ಮಾಡಿದರು ಮತ್ತು ಈ ಸಮಯದಲ್ಲಿ ಅವರು ಸ್ಥಳೀಯರಿಗೆ ಅಲ್ಲೇ ತರಬೇತಿ ನೀಡಿದರು. ಬೆಂಕಿಯನ್ನು ನಂದಿಸುವಲ್ಲಿ ಅಗ್ನಿ ಶಾಮಕ ಮತ್ತು ತುರ್ತು ಸಿಬ್ಬಂದಿಯ ತೀವ್ರ ಪರಿಶ್ರಮ ಮತ್ತು ತ್ವರಿತ ಕಾರ್ಯಾಚರಣೆಯ ಪರಿಣಾಮದಿಂದಾಗಿ ಯಾವುದೇ ಪ್ರಾಣ ಹಾನಿ ಮತ್ತು ಆಸ್ತಿಪಾಸ್ತಿ ಹಾನಿ ಸಂಭವಿಸಲಿಲ್ಲ. ಇತರೆ ಅರಣ್ಯ ಪ್ರದೇಶಕ್ಕೆ ಹಾಗೂ ಇತರೆ ಗ್ರಾಮಗಳಿಗೆ ಕಾಡ್ಗಿಚ್ಚು ಹರಡುವುದನ್ನು ತಡೆ ಹಿಡಿಯುವಲ್ಲಿ ಲುಂಗ್ಲೆಯ್ ಅಗ್ನಿ ಶಾಮಕ ಠಾಣೆ ಯಶಸ್ವಿಯಾಗಿತ್ತು.
*****
(Release ID: 1893033)
Visitor Counter : 220
Read this release in:
English
,
Urdu
,
Hindi
,
Marathi
,
Assamese
,
Manipuri
,
Punjabi
,
Gujarati
,
Odia
,
Tamil
,
Telugu