ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಜಿ20 ಭಾರತ ಹೆಲ್ತ್ ಟ್ರ್ಯಾಕ್ (ಆರೋಗ್ಯ ಬೆಳವಣಿಗೆ)


ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ ಡಾ.ಭಾರತಿ ಪ್ರವೀಣ್ ಪವಾರ್ ಮತ್ತು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಎಸ್.ವಿ.ಮುರಳೀಧರನ್ ಅವರು ಕೇರಳದ ತಿರುವನಂತಪುರಂನಲ್ಲಿ ನಡೆದ 1 ನೇ ಜಿ20 ಆರೋಗ್ಯ ಕಾರ್ಯ ಗುಂಪಿನ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು.

ಸಾಂಕ್ರಾಮಿಕ ನೀತಿಯು ನಮ್ಮ ಆರೋಗ್ಯ ನೀತಿಯ ವ್ಯಾಖ್ಯಾನಿಸುವ ಭಾಗವಾಗಿರಬೇಕು ಏಕೆಂದರೆ ಇಂದು ಯಾವುದೇ ಆರೋಗ್ಯ ಬಿಕ್ಕಟ್ಟು ನಮ್ಮ ಅಂತರ್-ಸಂಪರ್ಕಿತ ಪ್ರಪಂಚದ ಬಹು-ವಲಯ ಸ್ವರೂಪದಿಂದಾಗಿ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ: ಡಾ.ಭಾರತಿ ಪ್ರವೀಣ್ ಪವಾರ್

"ಸಾಂಕ್ರಾಮಿಕ ರೋಗದಿಂದ ಕಲಿತ ಪಾಠಗಳು ನಮ್ಮ ಸನ್ನದ್ಧತೆ ಮತ್ತು ಪ್ರತಿಕ್ರಿಯೆಯ ಕಾರ್ಯಸೂಚಿಯನ್ನು ರೂಪಿಸಬೇಕು. ನಾವು ನಮ್ಮ ಸಾಮರ್ಥ್ಯಗಳನ್ನು ವೈವಿಧ್ಯಗೊಳಿಸಬೇಕಾಗಿದೆ ಮತ್ತು ಸಾಮೂಹಿಕವಾಗಿ, ಯಾವುದೇ ಆರೋಗ್ಯ ಬಿಕ್ಕಟ್ಟಿನ ಎದುರಿನಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತೇವೆ ಎಂದು ಖಚಿತಪಡಿಸಿಕೊಳ್ಳಬೇಕು,’’

Posted On: 18 JAN 2023 11:47AM by PIB Bengaluru

"ಸಾಂಕ್ರಾಮಿಕ ನೀತಿಯು ನಮ್ಮ ಆರೋಗ್ಯ ನೀತಿಯ ವ್ಯಾಖ್ಯಾನಿಸುವ ಭಾಗವಾಗಿರಬೇಕು, ಏಕೆಂದರೆ ಇಂದು ಯಾವುದೇ ಆರೋಗ್ಯ ಬಿಕ್ಕಟ್ಟು ನಮ್ಮ ಅಂತರ್-ಸಂಪರ್ಕಿತ ಪ್ರಪಂಚದ ಬಹು-ವಲಯ ಸ್ವರೂಪದಿಂದಾಗಿ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ," ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ ಡಾ.ಭಾರತಿ ಪ್ರವೀಣ್ ಪವಾರ್ ಅವರು ಇಂದು ಇಲ್ಲಿ ಜಿ20 ಭಾರತದ ಅಧ್ಯಕ್ಷತೆಯ ಅಡಿಯಲ್ಲಿ 1 ನೇ ಆರೋಗ್ಯ ಕಾರ್ಯ ಗುಂಪಿನ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಎಸ್.ವಿ.ಮುರಳೀಧರನ್ ಮತ್ತು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಾಂಕ್ರಾಮಿಕ ತಡೆಗಟ್ಟುವಿಕೆ, ಸನ್ನದ್ಧತೆ ಮತ್ತು ಪ್ರತಿಕ್ರಿಯೆಗೆ ವೈವಿಧ್ಯಮಯ ಬಹು-ವಲಯ, ಬಹು-ಏಜೆನ್ಸಿ ಸಮನ್ವಯ ಪ್ರಯತ್ನಗಳು ಅಗತ್ಯವಿದೆ ಎಂದು ಡಾ.ಭಾರತಿ ಪ್ರವೀಣ್ ಪವಾರ್ ಪ್ರತಿಪಾದಿಸಿದರು. ಭವಿಷ್ಯದ ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ಸ್ಥಿತಿಸ್ಥಾಪಕತ್ವ ಹೊಂದಲು ಸಮುದಾಯಗಳನ್ನು ಬಲಪಡಿಸುವ ಮತ್ತು ಸಬಲೀಕರಣಗೊಳಿಸುವ ಅಗತ್ಯವನ್ನು ಅವರು ಇದೇ ವೇಳೆ ಒತ್ತಿ ಹೇಳಿದರು. " ಕೋವಿಡ್ 19 ಕೊನೆಯ ಸಾಂಕ್ರಾಮಿಕ ರೋಗವಲ್ಲ. ಕಲಿಕೆಗಳು ನಮ್ಮ ಸನ್ನದ್ಧತೆ ಮತ್ತು ಪ್ರತಿಕ್ರಿಯೆಯ ಕಾರ್ಯಸೂಚಿಯನ್ನು ರೂಪಿಸಬೇಕು. ನಾವು ನಮ್ಮ ಸಾಮರ್ಥ್ಯಗಳನ್ನು ವೈವಿಧ್ಯಗೊಳಿಸಬೇಕಾಗಿದೆ ಮತ್ತು ಸಾಮೂಹಿಕವಾಗಿ, ಯಾವುದೇ ಆರೋಗ್ಯ ಬಿಕ್ಕಟ್ಟಿನ ಎದುರಿನಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತೇವೆ ಎಂದು ಖಚಿತಪಡಿಸಿಕೊಳ್ಳಬೇಕು," ಎಂದು ಹೇಳಿದರು.

ಸ್ಥಿತಿಸ್ಥಾಪಕ ಆರೋಗ್ಯ ವ್ಯವಸ್ಥೆಗಳನ್ನು ನಿರ್ಮಿಸುವ ಮತ್ತು ಜೀವ ಉಳಿಸುವ ಲಸಿಕೆಗಳು, ಚಿಕಿತ್ಸಕ ಮತ್ತು ರೋಗನಿರ್ಣಯದಲ್ಲಿ ಹೂಡಿಕೆ ಮಾಡುವ ಮಹತ್ವವನ್ನು ಅವರು ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.

ವೈದ್ಯಕೀಯ ಪದ್ಧತಿಗಳು ಮತ್ತು ಹೊಸತನಶೋಧದ ಭಾರತದ ಬಲವಾದ ಸಂಸ್ಕೃತಿ ಕುರಿತು ಬೆಳಕು ಚೆಲ್ಲಿದ ಶ್ರೀ ಎಸ್.ವಿ.ಮುರಳೀಧರನ್ ಅವರು, " ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಎಂಬ ಗೌರವಾನ್ವಿತ ಪ್ರಧಾನ ಮಂತ್ರಿ ಅವರ ಕರೆ ಗ್ರಹ ಪರವಾದ ವಿಧಾನವಾಗಿದೆ, ಇದು ಹೆಚ್ಚುತ್ತಿರುವ ಜಾಗತೀಕರಣದ ಜಗತ್ತಿಗೆ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಇರುವುದರ ಬಗ್ಗೆ ತಿಳಿಸುತ್ತದೆ ಎಂದು ಹೇಳಿದರು.

"ಯಾವುದೇ ಆರೋಗ್ಯ ತುರ್ತು ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗುವಂತೆ ಸನ್ನದ್ಧತೆ ಮತ್ತು ಪ್ರತಿಕ್ರಿಯೆಗಾಗಿ ನಮ್ಮ ಕಾರ್ಯಸೂಚಿಯನ್ನು ಒಟ್ಟಿಗೆ ಹೊಂದಿಸುವ ಅಗತ್ಯವನ್ನು" ಅವರು ಪ್ರತಿನಿಧಿಗಳಿಗೆ ಒತ್ತಿ ಹೇಳಿದರು. ಭವಿಷ್ಯದಲ್ಲಿ ಯಾವುದೇ ಆರೋಗ್ಯ ಸವಾಲುಗಳನ್ನು ಸಾಮೂಹಿಕವಾಗಿ ಎದುರಿಸಲು ನಾವು ಸಿದ್ಧರಾಗಿರಬೇಕು ಎಂದು ಅವರು ಹೇಳಿದರು.

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಅವರು, ಜಿ20 ಅಧ್ಯಕ್ಷರಾಗಿ ಆರೋಗ್ಯ ಸಹಕಾರಕ್ಕಾಗಿ ವಿವಿಧ ಬಹುಪಕ್ಷೀಯ ಚರ್ಚೆಗಳಲ್ಲಿ ಒಮ್ಮತವನ್ನು ಸಾಧಿಸುವ ಭಾರತದ ಗುರಿಯನ್ನು ಬಿಂಬಿಸಿದರು. ಜಿ20 ಆರೋಗ್ಯ ಟ್ರ್ಯಾಕ್ ಗೆ ಮೂರು ಆದ್ಯತೆಗಳನ್ನು ಅವರು ಪುನರುಚ್ಚರಿಸಿದರು. ಅವುಗಳೆಂದರೆ, ಆರೋಗ್ಯ ತುರ್ತುಸ್ಥಿತಿ ತಡೆಗಟ್ಟುವಿಕೆ, ಸನ್ನದ್ಧತೆ ಮತ್ತು ಪ್ರತಿಕ್ರಿಯೆ (ಒಂದು ಆರೋಗ್ಯ ಮತ್ತು ಎಎಂಆರ್ ಮೇಲೆ ಕೇಂದ್ರೀಕರಿಸಿ); ಸುರಕ್ಷಿತ, ಪರಿಣಾಮಕಾರಿ, ಗುಣಮಟ್ಟದ ಮತ್ತು ಕೈಗೆಟುಕುವ ವೈದ್ಯಕೀಯ ಪ್ರತಿಕ್ರಮಗಳಿಗೆ (ಲಸಿಕೆಗಳು, ಚಿಕಿತ್ಸಕ ಮತ್ತು ರೋಗನಿರ್ಣಯ) ಪ್ರವೇಶ ಮತ್ತು ಲಭ್ಯತೆಯ ಮೇಲೆ ಕೇಂದ್ರೀಕರಿಸಿ ಔಷಧೀಯ ವಲಯದಲ್ಲಿ ಸಹಕಾರವನ್ನು ಬಲಪಡಿಸುವುದು; ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಸಹಾಯ ಮಾಡಲು ಮತ್ತು ಆರೋಗ್ಯ ಸೇವಾ ವಿತರಣೆಯನ್ನು ಸುಧಾರಿಸಲು ಡಿಜಿಟಲ್ ಆರೋಗ್ಯ ಆವಿಷ್ಕಾರಗಳು ಮತ್ತು ಪರಿಹಾರಗಳು ಸೇರಿವೆ ಎಂದು ತಿಳಿಸಿದರು.

ಇಂಡೋನೇಷ್ಯಾ ಮತ್ತು ಬ್ರೆಜಿಲಿಯನ್ ತ್ರಿಕೋನ ಸದಸ್ಯರು ಮೂರು ಆರೋಗ್ಯ ಆದ್ಯತೆಗಳನ್ನು ಸ್ಥಾಪಿಸಿದ್ದಕ್ಕಾಗಿ ಭಾರತೀಯ ಅಧ್ಯಕ್ಷತೆಯನ್ನು ಶ್ಲಾಘಿಸಿದರು. ಸಾಂಕ್ರಾಮಿಕ ರೋಗವು ನಮ್ಮ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಅವಕಾಶವನ್ನು ನೀಡಿದೆ ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಪ್ರಯತ್ನಗಳನ್ನು ವೇಗಗೊಳಿಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿ ಡಾ.ರಾಜೀವ್ ಬಹ್ಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಲವ್ ಅಗರ್ವಾಲ್, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅಭಯ್ ಠಾಕೂರ್, ಜಿ20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು, ವಿಶೇಷ ಆಹ್ವಾನಿತ ದೇಶಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು, ವೇದಿಕೆಗಳು ಮತ್ತು ಪಾಲುದಾರರಾದ ಡಬ್ಲ್ಯುಎಚ್ಒ, ವಿಶ್ವ ಬ್ಯಾಂಕ್, ಡಬ್ಲ್ಯುಇಎಫ್ ಇತ್ಯಾದಿಗಳು ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

*****



(Release ID: 1891941) Visitor Counter : 215