ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ವರ್ಷಾಂತ್ಯದ ಹಿನ್ನೋಟ: ಕ್ರೀಡಾ ಇಲಾಖೆ
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು 22 ಚಿನ್ನದ ಪದಕಗಳು ಸೇರಿದಂತೆ ಒಟ್ಟು 61 ಪದಕಗಳೊಂದಿಗೆ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿತು.
ಇತಿಹಾಸದಲ್ಲಿ ಮೊದಲ ಬಾರಿಗೆ, ಭಾರತದ ಪುರುಷರ ತಂಡವು 14 ಬಾರಿಯ ವಿಶ್ವ ಚಾಂಪಿಯನ್ ಇಂಡೋನೇಷ್ಯಾವನ್ನು ಸೋಲಿಸುವ ಮೂಲಕ ಅಂತರರಾಷ್ಟ್ರೀಯ ಥಾಮಸ್ ಕಪ್ ಅನ್ನು ಗೆದ್ದುಕೊಂಡಿತು
2022 ನೇ ಸಾಲಿನ ರಾಷ್ಟ್ರೀಯ ಕ್ರೀಡೆ ಮತ್ತು ಸಾಹಸ ಪ್ರಶಸ್ತಿಗಳನ್ನು 44 ಅತ್ಯುತ್ತಮ ಕ್ರೀಡಾಪಟುಗಳು/ತರಬೇತುದಾರರಿಗೆ ನೀಡಲಾಯಿತು
ಭಾರತವು 17 ವರ್ಷದೊಳಗಿನವರ ಫಿಫಾ ಮಹಿಳಾ ಫುಟ್ಬಾಲ್ ವಿಶ್ವಕಪ್, 44 ನೇ ಫಿಡೆ ಚೆಸ್ ಒಲಿಂಪಿಯಾಡ್ ಮತ್ತು ಡಬ್ಲ್ಯು ಎ ಡಿ ಎ ಅಥ್ಲೀಟ್ ಬಯೊಲಾಜಿಕಲ್ ಪಾಸ್‌ಪೋರ್ಟ್ ಸಿಂಪೋಸಿಯಂ-2022 ನಂತಹ ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಿತು.
36ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಗುಜರಾತ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಕ್ರೀಡೆಗಳಲ್ಲಿ ಡೋಪಿಂಗ್ ವಿರೋಧಿ ಚಟುವಟಿಕೆಗಳನ್ನು ನಿಯಂತ್ರಿಸಲು ಶಾಸನಬದ್ಧ ಸಂಸ್ಥೆಯಾಗಿ ರಾಷ್ಟ್ರೀಯ ಡೋಪಿಂಗ್ ನಿಗ್ರಹ ಏಜೆನ್ಸಿಯನ್ನು ರಚಿಸಲು ಸಂಸತ್ತು ರಾಷ್ಟ್ರೀಯ ಡೋಪಿಂಗ್ ನಿಗ್ರಹ ಮಸೂದೆ 2022 ಅನ್ನು ಅಂಗೀಕರಿಸಿದೆ
ಖೇಲೋ ಇಂಡಿಯಾ ಯುವ ಕ್ರೀಡಾಕೂಟದ 4 ಮತ್ತು 5 ನೇ ಆವೃತ್ತಿ ಮತ್ತು ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದ 2 ನೇ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
Posted On:
20 DEC 2022 3:52PM by PIB Bengaluru
2022 ರ ಕ್ಯಾಲೆಂಡರ್ ವರ್ಷದಲ್ಲಿ ಕ್ರೀಡಾ ಇಲಾಖೆಯ ಪ್ರಮುಖ ಸಾಧನೆಗಳು ಈ ಕೆಳಗಿನಂತಿವೆ:
ಪ್ರಮುಖ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದ ಶ್ಲಾಘನೀಯ ಪ್ರದರ್ಶನ:
- ಭಾರತ ತಂಡವು ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದ ಅಭಿಯಾನವನ್ನು 22 ಚಿನ್ನದ ಪದಕಗಳನ್ನು ಒಳಗೊಂಡಂತೆ ಒಟ್ಟು 61 ಪದಕಗಳೊಂದಿಗೆ 4 ನೇ ಸ್ಥಾನದಲ್ಲಿ ಮುಕ್ತಾಯಗೊಳಿಸಿತು. ಶೂಟಿಂಗ್ ಮತ್ತು ಗ್ರೀಕೋ-ರೋಮನ್ ರೆಸ್ಲಿಂಗ್‌ನಂತಹ ಹೆಚ್ಚಿನ ಪದಕ ಸಂಭಾವ್ಯ ವಿಭಾಗಗಳ ಅನುಪಸ್ಥಿತಿಯ ಹೊರತಾಗಿಯೂ, ಭಾರತೀಯ ಕ್ರೀಡಾಪಟುಗಳು ರಾಷ್ಟ್ರಕ್ಕೆ ಅತ್ಯುತ್ತಮ ಕಾಮನ್ವೆಲ್ತ್ ಕ್ರೀಡಾಕೂಟದ ಪ್ರದರ್ಶನಗಳನ್ನು ನೀಡಿದರು, ಕುಸ್ತಿ (12) ಮತ್ತು ವೇಟ್‌ಲಿಫ್ಟಿಂಗ್ (10) ವಿಭಾಗಗಳಲ್ಲಿನ ಅತ್ಯುತ್ತಮ ಪ್ರದರ್ಶನಗಳು ವಿಶೇಷವಾಗಿದ್ದವು. ಸಿಡಬ್ಲ್ಯೂಜಿಯಲ್ಲಿ ಭಾರತದ ಲಾನ್ ಬೌಲ್ಸ್ ತಂಡಗಳು ಅದ್ಭುತವಾದ ಪ್ರದರ್ಶನ ನೀಡಿದವು. ಇದರಲ್ಲಿ ಮಹಿಳಾ ತಂಡ ಮತ್ತು ಪುರುಷರ ತಂಡವು ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕವನ್ನು ಗೆದ್ದವು.
- ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಪ್ರತಿಷ್ಠಿತ ಅಂತರರಾಷ್ಟ್ರೀಯ ಥಾಮಸ್ ಕಪ್ (ಬ್ಯಾಡ್ಮಿಂಟನ್) ಪಂದ್ಯಾವಳಿಯ ಇತಿಹಾಸದಲ್ಲಿ ಮೊದಲ ಬಾರಿಗೆ, ಭಾರತದ ಪುರುಷರ ತಂಡವು 14 ಬಾರಿ ವಿಶ್ವ ಚಾಂಪಿಯನ್ ಇಂಡೋನೇಷ್ಯಾವನ್ನು ಸೋಲಿಸುವ ಮೂಲಕ ಚಾಂಪಿಯನ್‌ಶಿಪ್ ಗೆದ್ದಿದೆ. ಈ ಐತಿಹಾಸಿಕ ಸಂದರ್ಭದ ಅಂಗವಾಗಿ, ಗೌರವಾನ್ವಿತ ಪ್ರಧಾನ ಮಂತ್ರಿಯವರು ಮೇ 21, 2022 ರಂದು ತಂಡದ ಸದಸ್ಯರನ್ನು ಭೇಟಿ ಮಾಡಿದರು ಮತ್ತು ಅವರನ್ನು ಗೌರವಿಸಿದರು. ಉಬರ್ ಕಪ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ತಂಡವನ್ನು ಸಹ ಗೌರವಿಸಲಾಯಿತು.
- 16 ಪದಕಗಳನ್ನು (8 ಚಿನ್ನ, 1 ಬೆಳ್ಳಿ ಮತ್ತು 7 ಕಂಚು) ಗೆದ್ದು ದೇಶಕ್ಕೆ ಇದುವರೆಗೆ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ 2021 ರ ಡೆಫ್ಲಿಂಪಿಕ್ಸ್ ಬ್ರೆಜಿಲ್ 2021 ರ ಭಾರತೀಯ ತಂಡವನ್ನು ಮಾನ್ಯ ಪ್ರಧಾನ ಮಂತ್ರಿಯವರು 21 ಮೇ 2022 ರಂದು ಗೌರವಿಸಿದರು.
ರಾಷ್ಟ್ರೀಯ ಕ್ರೀಡೆ ಮತ್ತು ಸಾಹಸ ಪ್ರಶಸ್ತಿಗಳು 2022:
ನವೆಂಬರ್ 30, 2022 ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಯವರು 2022 ರ ರಾಷ್ಟ್ರೀಯ ಕ್ರೀಡೆ ಮತ್ತು ಸಾಹಸ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಆವೃತ್ತಿಯಲ್ಲಿ ಒಟ್ಟು 44 ಪ್ರಶಸ್ತಿಗಳನ್ನು ನೀಡಲಾಯಿತು. ಪ್ರಖ್ಯಾತ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಈ ವರ್ಷದ ಪ್ರತಿಷ್ಠಿತ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾದರು. ಈ ಸಂದರ್ಭದಲ್ಲಿ ನೀಡಲಾದ ಇತರ ಪ್ರಶಸ್ತಿಗಳಲ್ಲಿ ದ್ರೋಣಾಚಾರ್ಯ ಪ್ರಶಸ್ತಿಗಳು, ಅರ್ಜುನ ಪ್ರಶಸ್ತಿಗಳು, ಕ್ರೀಡೆ ಮತ್ತು ಆಟಗಳಲ್ಲಿ ಜೀವಮಾನದ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿಗಳು, ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ, ಮೌಲಾನಾ ಅಬುಲ್ ಕಲಾಂ ಆಜಾದ್ ಟ್ರೋಫಿ ಮತ್ತು ತೇನ್ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿಗಳು ಸೇರಿವೆ.
2022 ರಲ್ಲಿ ಭಾರತ ಆಯೋಜಿಸಿದ ಅಂತರರಾಷ್ಟ್ರೀಯ ಕ್ರೀಡಾ ಕಾರ್ಯಕ್ರಮಗಳು:
- 17 ವರ್ಷದೊಳಗಿನವರ ಫಿಫಾ ಮಹಿಳಾ ಫುಟ್ಬಾಲ್ ವಿಶ್ವಕಪ್ ಭಾರತ 2022 ಅನ್ನು 11 ಅಕ್ಟೋಬರ್, 2022 ರಂದು ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಉದ್ಘಾಟಿಸಲಾಯಿತು. ಕಳೆದ ಐದು ವರ್ಷಗಳಲ್ಲಿ ರಾಷ್ಟ್ರವು ಆಯೋಜಿಸಿದ ಎರಡನೇ ಪ್ರಮುಖ ಫುಟ್ಬಾಲ್ ಪಂದ್ಯಾವಳಿ ಇದಾಗಿದೆ. 30.10.2022 ರಂದು ಮುಂಬೈನಲ್ಲಿ ನಡೆದ ಫೈನಲ್ಸ್‌ನಲ್ಲಿ ಕೊಲಂಬಿಯಾವನ್ನು ಸೋಲಿಸಿ ಸ್ಪೇನ್ ಚಾಂಪಿಯನ್ ಕಿರೀಟವನ್ನು ಅಲಂಕರಿಸಿತು.
- 44 ನೇ ಫಿಡೆ ಚೆಸ್ ಒಲಿಂಪಿಯಾಡ್ (28 ಜುಲೈ, 2022 ರಿಂದ 10 ಆಗಸ್ಟ್, 2022) ಅನ್ನು ಪ್ರಧಾನ ಮಂತ್ರಿಯವರು 28.07.2022 ರಂದು ಚೆನ್ನೈನ ಜೆ ಎಲ್ ಎನ್ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟಿಸಿದರು. 188 ದೇಶಗಳ 2000 ಕ್ಕೂ ಹೆಚ್ಚು ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದರು, ಇದು ಚೆಸ್ ಒಲಿಂಪಿಯಾಡ್‌ನ ಇತಿಹಾಸದಲ್ಲಿ ಅತ್ಯಧಿಕವಾಗಿದೆ. ಒಲಿಂಪಿಯಾಡ್ ಗೆ ಮುನ್ನ "ಚೆಸ್ ಒಲಂಪಿಯಾಡ್‌ಗಾಗಿ ಟಾರ್ಚ್ ರಿಲೇ" ಅನ್ನು 19 ಜೂನ್, 2022 ರಿಂದ ನವದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಪ್ರಾರಂಭಿಸಲಾಯಿತು. ಅಂತಿಮವಾಗಿ ಚೆಸ್ ಒಲಿಂಪಿಯಾಡ್‌ನ ಸ್ಥಳವಾದ ತಮಿಳುನಾಡಿನ ಮಹಾಬಲಿಪುರಂ ತಲುಪುವ ಮೊದಲು ಈ ಜ್ಯೋತಿಯನ್ನು 40 ದಿನಗಳ ಅವಧಿಯಲ್ಲಿ ದೇಶದ 75 ಪಾರಂಪರಿಕ ಸ್ಥಳಗಳಿಗೆ ಕೊಂಡೊಯ್ಯಲಾಯಿತು.
- ವರ್ಲ್ಡ್ ಆಂಟಿ-ಡೋಪಿಂಗ್ ಏಜೆನ್ಸಿ (ವಾಡಾ) ಅಥ್ಲೀಟ್ ಬಯೋಲಾಜಿಕಲ್ ಪಾಸ್‌ಪೋರ್ಟ್ (ಎಬಿಪಿ) ಸಿಂಪೋಸಿಯಂ-2022 ರ ಮೂರನೇ ಆವೃತ್ತಿಯನ್ನು 2022 ರ ಅಕ್ಟೋಬರ್ 12 ರಿಂದ 14 ರವರೆಗೆ ನವದೆಹಲಿಯಲ್ಲಿ ಆಯೋಜಿಸಲಾಯಿತು. ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರು ಮತ್ತು ಇತರ ಗಣ್ಯರು ವಿಚಾರ ಸಂಕಿರಣದ ಆರಂಭಿಕ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಎಬಿಪಿಯು ಉದ್ದೀಪನ ವಸ್ತು ಸೇವನೆ ನಿಗ್ರಹ ಮತ್ತು ಸಂಬಂಧಿತ ಸಂಶೋಧನೆಯಲ್ಲಿ ಬಹಳ ಮುಖ್ಯವಾದ ವೈಜ್ಞಾನಿಕ ಸಾಧನವಾಗಿದೆ, ಇದು ಕ್ರೀಡೆಗಳಲ್ಲಿ ಉದ್ದೀಪನ ವಸ್ತು ಸೇವನೆಯನ್ನು ಪತ್ತೆಹಚ್ಚಲು ಮಾತ್ರವಲ್ಲದೆ ತಡೆಯಲು ಜಗತ್ತಿಗೆ ಅವಕಾಶವನ್ನು ಒದಗಿಸುತ್ತದೆ. ಎಬಿಪಿಗೆ ಸಂಬಂಧಿಸಿದಂತೆ ಇತ್ತೀಚಿನ ಪ್ರವೃತ್ತಿಗಳು, ನಡೆಯುತ್ತಿರುವ ಸಂಶೋಧನೆ ಮತ್ತು ಸವಾಲುಗಳನ್ನು ಚರ್ಚಿಸಲು ಪ್ರಪಂಚದಾದ್ಯಂತದ ತಜ್ಞರಿಗೆ ವೇದಿಕೆಯನ್ನು ಒದಗಿಸಲು ಸಿಂಪೋಸಿಯಂ ಸಹಾಯ ಮಾಡಿತು. 56 ದೇಶಗಳ 200 ಕ್ಕೂ ಹೆಚ್ಚು ಭಾಗವಹಿಸುವವರು, ವಾಡಾ ಅಧಿಕಾರಿಗಳು, ವಿವಿಧ ರಾಷ್ಟ್ರೀಯ ಉದ್ದೀಪನ ವಸ್ತು ನಿಗ್ರಹ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ತಜ್ಞರು ಸೇರಿದಂತೆ ಅಥ್ಲೀಟ್ ಪಾಸ್‌ಪೋರ್ಟ್ ನಿರ್ವಹಣಾ ಘಟಕಗಳು (ಎ ಪಿ ಎಂ ಯು) ಮತ್ತು ವಾಡಾ ಮಾನ್ಯತೆ ಪಡೆದ ಪ್ರಯೋಗಾಲಯಗಳು ಸಿಂಪೋಸಿಯಂನಲ್ಲಿ ಭಾಗವಹಿಸಿದವು.
ಗುಜರಾತ್ನಲ್ಲಿ ರಾಷ್ಟ್ರೀಯ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು:
36ನೇ ರಾಷ್ಟ್ರೀಯ ಕ್ರೀಡಾಕೂಟವು ಗುಜರಾತ್ ರಾಜ್ಯದ ಸೂರತ್‌ನ ಪಂಡಿತ್ ದೀನದಯಾಳ್ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 12, 2022 ರಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು. ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ (ಎಸ್ ಎಸ್ ಸಿ ಬಿ) 128 ಪದಕಗಳೊಂದಿಗೆ (61 ಚಿನ್ನ ಸೇರಿದಂತೆ) ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು, ಮಹಾರಾಷ್ಟ್ರ ಮತ್ತು ಹರಿಯಾಣ ಕ್ರೀಡಾಕೂಟದಲ್ಲಿ ನಂತರದ ಸ್ಥಾನ ಪಡೆದವು. 36 ನೇ ರಾಷ್ಟ್ರೀಯ ಕ್ರೀಡಾಕೂಟ, 2022 ಅನ್ನು ಸೆಪ್ಟೆಂಬರ್ 29 ರಂದು ಅಹಮದಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರು ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ದೇಶದಾದ್ಯಂತ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 15,000 ಕ್ಕೂ ಹೆಚ್ಚು ಕ್ರೀಡಾಪಟುಗಳು, ತರಬೇತುದಾರರು ಮತ್ತು ಅಧಿಕಾರಿಗಳು 36 ಕ್ರೀಡಾ ವಿಭಾಗಗಳಲ್ಲಿ ಭಾಗವಹಿಸಿದರು. ಇದು ಅತ್ಯಂತ ದೊಡ್ಡ ರಾಷ್ಟ್ರೀಯ ಕ್ರೀಡಾಕೂಟವಾಯಿತು. ಏಳು ವರ್ಷಗಳ ಅಂತರದ ನಂತರ ಪುನರಾರಂಭಗೊಂಡ ಕ್ರೀಡಾಕೂಟದ ನಿರ್ವಹಣೆಯಲ್ಲಿ ಈ ಸಚಿವಾಲಯವು ಪ್ರಮುಖ ಪಾತ್ರ ವಹಿಸಿದೆ ಎಂಬುದು ಗಮನಾರ್ಹ.
ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳು:
2022 ರ ಅಕ್ಟೋಬರ್ 20 ರಂದು ನಡೆದ ಸಮಾರಂಭದಲ್ಲಿ, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರು, ಮಧ್ಯಪ್ರದೇಶದ ಮುಖ್ಯಮಂತ್ರಿಯವರ ಉಪಸ್ಥಿತಿಯಲ್ಲಿ, ಮುಂದಿನ ವರ್ಷ 5 ನೇ ಖೇಲೋ ಇಂಡಿಯಾ ಯುವ ಕ್ರೀಡಾಕೂಟವನ್ನು ಮಧ್ಯಪ್ರದೇಶದಲ್ಲಿ ಆಯೋಜಿಸಲಾಗುವುದೆಂದು ಅಧಿಕೃತವಾಗಿ ಘೋಷಿಸಿದರು.
- ಸಾಂಕ್ರಾಮಿಕ ರೋಗದಿಂದಾಗಿ ತಡವಾದ ಖೇಲೋ ಇಂಡಿಯಾ ಯುವ ಕ್ರೀಡಾಕೂಟ (ಕೆಐವೈಜಿ) ದ ನಾಲ್ಕನೇ ಆವೃತ್ತಿಯನ್ನು ಹರಿಯಾಣದ ಪಂಚಕುಲದಲ್ಲಿ 04.06.2022 ರಿಂದ 13.06.2022 ರವರೆಗೆ ಯಶಸ್ವಿಯಾಗಿ ಆಯೋಜಿಸಲಾಯಿತು. 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 4700 ಕ್ಕೂ ಹೆಚ್ಚು ಸ್ಪರ್ಧಿಗಳು 5 ದೇಶೀಯ ಆಟಗಳನ್ನು ಒಳಗೊಂಡಂತೆ 25 ವಿವಿಧ ವಿಭಾಗಗಳಲ್ಲಿ ಭಾಗವಹಿಸಿದರು. ಕೆಐವೈಜಿ, 2021 ರಲ್ಲಿ ಪದಕ ಪಟ್ಟಿಯಲ್ಲಿ ಹರಿಯಾಣ ರಾಜ್ಯವು ಅಗ್ರಸ್ಥಾನ ಪಡೆಯಿತು, ಮಹಾರಾಷ್ಟ್ರ ಮತ್ತು ಕರ್ನಾಟಕ ನಂತರದ ಸ್ಥಾನ ಗಳಿಸಿದವು. ಕೆಐವೈಜಿ, 2021 ರಲ್ಲಿ ವೇಟ್‌ಲಿಫ್ಟಿಂಗ್ ಮತ್ತು ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಕ್ರೀಡಾ ವಿಭಾಗಗಳಲ್ಲಿ ಹಲವಾರು ರಾಷ್ಟ್ರೀಯ ದಾಖಲೆಗಳು ಸೃಷ್ಟಿಯಾದವು.
- ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ (ಕೆಐಯುಜಿ) ದ ಎರಡನೇ ಆವೃತ್ತಿಯನ್ನು 24.04.2022 ರಿಂದ 03.05.2022 ರವರೆಗೆ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ ಸೇರಿದಂತೆ 5 ಸ್ಥಳಗಳಲ್ಲಿ ಯಶಸ್ವಿಯಾಗಿ ನಡೆಸಲಾಯಿತು. 200-ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳಿಂದ ಒಟ್ಟು 3894 ಸ್ಪರ್ಧಿಗಳು ಕೆಐಯುಜಿಯಲ್ಲಿ ದೇಶೀಯ ಕ್ರೀಡೆಗಳಾದ ಮಲ್ಲಕಂಬ ಮತ್ತು ಯೋಗಾಸನ ಸೇರಿದಂತೆ 20 ವಿವಿಧ ವಿಭಾಗಗಳಲ್ಲಿ ಭಾಗವಹಿಸಿದರು. ಉದ್ಘಾಟನಾ ಸಮಾರಂಭವು ಕಂಠೀರವ ಕ್ರೀಡಾಂಗಣದಲ್ಲಿ 24.04.2022 ರಂದು ಕರ್ನಾಟಕ ರಾಜ್ಯಪಾಲರು, ಕೇಂದ್ರ ಕ್ರೀಡಾ ಸಚಿವರು ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು. 2022 ರ ಮೇ 3 ರಂದು ಸಮಾರೋಪ ಸಮಾರಂಭವು ಅದೇ ಕಂಠೀರವ ಕ್ರೀಡಾಂಗಣದಲ್ಲಿ ಕೇಂದ್ರ ಗೃಹ ಸಚಿವರ ಉಪಸ್ಥಿತಿಯಲ್ಲಿ ನಡೆಯಿತು. ಐಯುಜಿ, 2021 ರಲ್ಲಿ ಜೈನ್ ವಿಶ್ವವಿದ್ಯಾನಿಲಯವು ಅಗ್ರಸ್ಥಾನ ಪಡೆಯಿತು ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ ಮತ್ತು ಪಂಜಾಬ್ ವಿಶ್ವವಿದ್ಯಾನಿಲಯ ನಂತರ ಸ್ಥಾನ ಪಡೆದವು.
ಫಿಟ್ ಇಂಡಿಯಾ ಅಭಿಯಾನದ ಅಡಿಯಲ್ಲಿ ಕಾರ್ಯಕ್ರಮಗಳು:
- ಖೇಲೋ ಇಂಡಿಯಾ ಯೋಜನೆಯ ಫಿಟ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ, ಫಿಟ್ ಇಂಡಿಯಾ ಶಾಲಾ ಸಪ್ತಾಹದ 4 ನೇ ಆವೃತ್ತಿಯು 15 ನೇ ನವೆಂಬರ್, 2022 ರಂದು ಪ್ರಾರಂಭವಾಯಿತು. ದೇಶದಾದ್ಯಂತ ಶಾಲೆಗಳು ವಿವಿಧ ಕ್ರೀಡಾ ಚಟುವಟಿಕೆಗಳು ಮತ್ತು ಉಪಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಸಕ್ರಿಯ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಬೆಳೆಸಲು ಪ್ರೋತ್ಸಾಹಿಸಲು ವಾರ್ಷಿಕ ಕ್ರೀಡಾ ದಿನದ ಆಚರಣೆ, ವಿದ್ಯಾರ್ಥಿಗಳ ದೈಹಿಕ ಮೌಲ್ಯಮಾಪನ, ಯೋಗ ಮತ್ತು ದೇಶೀಯ ಕಾರ್ಯಕ್ರಮಗಳ ಪ್ರಚಾರ ಇತ್ಯಾದಿ ಈ ಸಪ್ತಾಹದ ಉದ್ದೇಶವಾಗಿದ್ದವು. ಅದೇ ರೀತಿ, ಫಿಟ್ ಇಂಡಿಯಾ ಕ್ವಿಜ್‌ನ 2 ನೇ ಆವೃತ್ತಿಗೆ ದೇಶಾದ್ಯಂತದ ವಿದ್ಯಾರ್ಥಿಗಳಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು 2022 ರ ಡಿಸೆಂಬರ್ 8 ಮತ್ತು 9 ರಂದು ನಡೆಸಲಿರುವ ಪ್ರಾಥಮಿಕ ಸುತ್ತಿಗೆ, 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 42,490 ಶಾಲೆಗಳಿಂದ ಒಟ್ಟು 1,74,473 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
- "ಆಜಾದಿ ಕಾ ಅಮೃತ ಮಹೋತ್ಸವ" ಸ್ಮರಣಾರ್ಥವಾಗಿ, ಫಿಟ್ ಇಂಡಿಯಾ ಫ್ರೀಡಂ ರನ್‌ನ 3 ನೇ ಆವೃತ್ತಿಯನ್ನು 2 ನೇ ಅಕ್ಟೋಬರ್, 2022 ರಂದು ಪ್ರಾರಂಭಿಸಲಾಯಿತು, ಇದು ನಾಗರಿಕರಲ್ಲಿ ಫಿಟ್‌ನೆಸ್ ಅನ್ನು ಉತ್ತೇಜಿಸುತ್ತದೆ. ಫಿಟ್ ಇಂಡಿಯಾ ಫ್ರೀಡಂ ರನ್ 3.0, 2ನೇ ಅಕ್ಟೋಬರ್ 2022 ರಿಂದ 31 ಅಕ್ಟೋಬರ್ 2022 ರವರೆಗೆ ನಡೆಯಿತು.
- ಈ ಸಚಿವಾಲಯವು ತನ್ನ ಫಿಟ್ ಇಂಡಿಯಾ ಕಾರ್ಯಕ್ರಮದ ಮೂಲಕ, 75 ದಿನಗಳಲ್ಲಿ ಅಂದರೆ, 9ನೇ ಸೆಪ್ಟೆಂಬರ್ 2022 ರಿಂದ 24ನೇ ನವೆಂಬರ್ 2022 ವರೆಗೆ 21,000ಕ್ಕೂ ಹೆಚ್ಚು ಕಿಮೀಗಳನ್ನು ಕ್ರಮಿಸಲು 75 ಬೈಕರ್‌ಗಳನ್ನು (10 ಮಹಿಳಾ ಬೈಕರ್‌ಗಳನ್ನು ಒಳಗೊಂಡಂತೆ) ಒಳಗೊಂಡ ಪ್ಯಾನ್-ಇಂಡಿಯಾ ಮೋಟರ್‌ಬೈಕ್ ಯಾತ್ರೆಗೆ ನೆರವು ನೀಡಿತು. ದೇಶದ ಜನರಲ್ಲಿ ಸದೃಢತೆ ಮತ್ತು ಆರೋಗ್ಯದ ಸಂದೇಶವನ್ನು ಪ್ರಸಾರ ಮಾಡುವ 6 ಅಂತರರಾಷ್ಟ್ರೀಯ ಗಡಿಗಳು ಸೇರಿದಂತೆ 34 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 250+ ಜಿಲ್ಲೆಗಳನ್ನು ವ್ಯಾಪಿಸುವ ಗುರಿ ಹೊಂದಿತ್ತು. ಯಾತ್ರೆಯ ಉದ್ದಕ್ಕೂ 75 ಸ್ಥಳೀಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇದನ್ನು ಬೆಂಬಲಿಸಲಾಯಿತು.
- ಈ ಸಚಿವಾಲಯವು ಮುಂಬೈನಲ್ಲಿ 21.07.2022 ರಂದು ಆಯೋಜಿಸಿದ್ದ ಸಮಾರಂಭದಲ್ಲಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರು ಫಿಟ್ ಇಂಡಿಯಾ ಕ್ವಿಜ್ ರಾಜ್ಯ ಮಟ್ಟದ ವಿಜೇತರನ್ನು ಸನ್ಮಾನಿಸಿದರು. ಈ ವರ್ಷದ ಆರಂಭದಲ್ಲಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ನಡೆದ ರಾಜ್ಯ ಸುತ್ತುಗಳಲ್ಲಿ ವಿಜೇತರಾದ 36 ಶಾಲೆಗಳ 72 ವಿದ್ಯಾರ್ಥಿಗಳಿಗೆ 99 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ನೀಡಲಾಯಿತು.
2022 ರಲ್ಲಿ ಸಹಿ ಹಾಕಲಾದ ತಿಳುವಳಿಕೆ ಒಪ್ಪಂದ ಪತ್ರಗಳು:
- ಆಹಾರ ಪೂರಕಗಳ ಪರೀಕ್ಷಾ ಸೌಲಭ್ಯವನ್ನು ಸ್ಥಾಪಿಸಲು ಈ ಸಚಿವಾಲಯ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ ಎಎಸ್ ಎಸ್ ಎ ಐ) ಮತ್ತು ರಾಷ್ಟ್ರೀಯ ವಿಧಿವಿಜ್ಞಾನ ವಿಜ್ಞಾನ ವಿಶ್ವವಿದ್ಯಾಲಯ (ಎನ್ ಎಫ್ ಎಸ್ ಯು) ನಡುವೆ 2022 ರ ಅಕ್ಟೋಬರ್ 15 ರಂದು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಉದ್ಧಿಪನ ವಸ್ತು ನಿಗ್ರಹ ಮತ್ತು ಪಥ್ಯ ಪೂರಕಗಳ ಕ್ಷೇತ್ರದಲ್ಲಿ 'ಆತ್ಮನಿರ್ಭರತೆ' ಸಾಧಿಸುವ ದಿಕ್ಕಿನಲ್ಲಿ ಇದೊಂದು ದೃಢವಾದ ಹೆಜ್ಜೆಯಾಗಿದೆ.
- ಸೆಪ್ಟೆಂಬರ್ 14, 2022 ರಂದು, ಈ ಸಚಿವಾಲಯದ ಯೋಜನೆಯಾದ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ (ಎನ್ ಎಸ್ ಡಿ ಎಫ್) ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್ ಟಿ ಪಿ ಸಿ) ಫೌಂಡೇಶನ್ ಮತ್ತು ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಷನ್ (ಆರ್ ಇ ಸಿ) ಫೌಂಡೇಶನ್ ನಡುವೆ ದೇಶದ ಕ್ರೀಡೆಗಳ ಅಭಿವೃದ್ದಿಗೆ ಒಟ್ಟು 215 ಕೋಟಿ ರೂ. ಮೊತ್ತದ ತಿಳುವಳಿಕೆ ಒಪ್ಪಂದಕ್ಕೆ ನವದೆಹಲಿಯಲ್ಲಿ ಸಹಿ ಹಾಕಲಾಯಿತು. ಎನ್ ಟಿ ಪಿ ಸಿ ಮುಂದಿನ ಐದು ವರ್ಷಗಳ ಕಾಲ ಬಿಲ್ಲುಗಾರಿಕೆಯ ಕ್ರೀಡೆಯನ್ನು ಬೆಂಬಲಿಸುತ್ತದೆ ಮತ್ತು ಆರ್ ಇ ಸಿ ಫೌಂಡೇಶನ್ ಮುಂದಿನ ಮೂರು ವರ್ಷಗಳ ಕಾಲ ಹಾಕಿ (ಮಹಿಳೆಯರಿಗೆ), ಅಥ್ಲೆಟಿಕ್ಸ್ ಮತ್ತು ಬಾಕ್ಸಿಂಗ್ ವಿಭಾಗಗಳನ್ನು ಬೆಂಬಲಿಸಲು ಬದ್ಧವಾಗಿದೆ.
- ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರು ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿ ಜಲ ಕ್ರೀಡಾ ಕೇಂದ್ರವನ್ನು ಉದ್ಘಾಟಿಸಿದರು. ರೋಯಿಂಗ್, ಕಯಾಕಿಂಗ್, ಕ್ಯಾನೋಯಿಂಗ್ ಇತ್ಯಾದಿ ಕ್ರೀಡಾ ವಿಭಾಗಗಳಲ್ಲಿ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಜಲ ಕ್ರೀಡಾ ಅಕಾಡೆಮಿಗಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
- ರಚನಾತ್ಮಕ ಸಹಯೋಗದ ಮೂಲಕ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಕ್ಷೇತ್ರದಲ್ಲಿ ಬೋಧನೆ, ಸಂಶೋಧನಾ ಚಟುವಟಿಕೆಗಳನ್ನು ಹೆಚ್ಚಿಸಲು ತಿರುವನಂತಪುರಂನ ಲಕ್ಷ್ಮೀಬಾಯಿ ನ್ಯಾಷನಲ್ ಕಾಲೇಜ್ ಆಫ್ ಫಿಸಿಕಲ್ ಎಜುಕೇಶನ್ (ಎಲ್‌ಎನ್‌ಸಿಪಿಇ) ಮತ್ತು ಗಾಂಧಿನಗರದ ಸ್ವರ್ಣಿಮ್ ಗುಜರಾತ್ ಕ್ರೀಡಾ ವಿಶ್ವವಿದ್ಯಾಲಯದ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ರಾಷ್ಟ್ರೀಯ ಉದ್ಧೀಪನ ಮದ್ದು ನಿಗ್ರಹ ಮಸೂದೆ 2021:
- ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಸಂಸ್ಥೆ (ನಾಡಾ), ರಾಷ್ಟ್ರೀಯ ಉದ್ದೀಪನ ಮದ್ದು ಪರೀಕ್ಷಾ ಪ್ರಯೋಗಾಲಯ (ಎನ್ ಡಿ ಟಿ ಎಲ್) ಮತ್ತು ಇತರ ಡೋಪ್ ಪರೀಕ್ಷಾ ಸೌಲಭ್ಯಗಳ ಕಾರ್ಯನಿರ್ವಹಣೆಗೆ ಶಾಸನಬದ್ಧ ಚೌಕಟ್ಟನ್ನು ಒದಗಿಸುವ ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಮಸೂದೆ 2021 ಅನ್ನು ಲೋಕಸಭೆಯಲ್ಲಿ 27.07.2022 ರಂದು ಮತ್ತು 03.08.2022 ರಂದು ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು. ಹೊಸ ಕಾನೂನು ದೇಶದಲ್ಲಿ ಕ್ರೀಡೆಗಳಲ್ಲಿ ಉದ್ದೀಪನ ವಸ್ತು ಸೇವನೆ ಚಟುವಟಿಕೆಗಳನ್ನು ನಿಯಂತ್ರಿಸಲು ಕ್ರೀಡೆಯಲ್ಲಿ ಉದ್ದೀಪನ ಮದ್ದು ನಿಗ್ರಹ ರಾಷ್ಟ್ರೀಯ ಮಂಡಳಿಯ ರಚನೆಗೆ ದಾರಿ ಮಾಡಿಕೊಡುತ್ತದೆ.
ಯುವ ವ್ಯವಹಾರಗಳು ಮತ್ತು ಕ್ರೀಡೆಗಳ ಉಸ್ತುವಾರಿ ಸಚಿವರ ಸಮ್ಮೇಳನ:
ಭಾರತದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಏಕೀಕೃತ ವಿಧಾನದ ಮುಂದಿನ ಮಾರ್ಗವನ್ನು ಉದ್ದೇಶಪೂರ್ವಕವಾಗಿ ಮತ್ತು ಚರ್ಚಿಸಲು 24 ಮತ್ತು 25 ಜೂನ್, 2022 ರಂದು ಕೆವಾಡಿಯಾ (ಗುಜರಾತ್) ದಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಯುವ ವ್ಯವಹಾರಗಳು ಮತ್ತು ಕ್ರೀಡಾ ಉಸ್ತುವಾರಿ ಸಚಿವರ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ನಡೆಸಲಾಯಿತು. ಗೌರವಾನ್ವಿತ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದಲ್ಲಿ 15 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಯುವ ವ್ಯವಹಾರಗಳು ಮತ್ತು ಕ್ರೀಡಾ ಉಸ್ತುವಾರಿ ಸಚಿವರು ಮತ್ತು 33 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಕ್ರೀಡಾ ಇಲಾಖೆಯ ಎರಡು ಯೋಜನೆಗಳ ಮುಂದುವರಿಕೆ:
15 ನೇ ಹಣಕಾಸು ಆಯೋಗದ (2021-22 ರಿಂದ 2025-26) ಅವಧಿಯಲ್ಲಿ ಈ ಇಲಾಖೆಯ ಎರಡು ಪ್ರಮುಖ ಯೋಜನೆಗಳಾದ “ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ಸಹಾಯ ಮತ್ತು “ಖೇಲೋ ಇಂಡಿಯಾ – ಕ್ರೀಡೆಗಳ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾರ್ಯಕ್ರಮ”ಗಳ ಮುಂದುವರಿಕೆಗಾಗಿ ಅನುಮೋದನೆ ನೀಡಲಾಗಿದೆ. ಈ ಎರಡು ಯೋಜನೆಗಳ ಮುಂದುವರಿಕೆಯು ಕ್ರೀಡೆಯಲ್ಲಿ ಜಾಗತಿಕ ಶ್ರೇಷ್ಠತೆಗಾಗಿ ದೇಶದ ಗುರಿ ಸಾಧನೆಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ.
ಯೋಗಕ್ಷೇಮಕ್ಕಾಗಿ 75 ಕೋಟಿ ಸೂರ್ಯನಮಸ್ಕಾರ ಯೋಜನೆ:
ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಕ್ಷೇಮ, ಚೈತನ್ಯ ಮತ್ತು ಸದೃಢತೆಗಾಗಿ 75 ಕೋಟಿ ಸೂರ್ಯನಮಸ್ಕಾರ ಯೋಜನೆಗೆ ಫಿಟ್ ಇಂಡಿಯಾ ಕಾರ್ಯಕ್ರಮದ ಮೂಲಕ ಈ ಸಚಿವಾಲಯವು ಬೆಂಬಲ ನೀಡುತ್ತಿದೆ. ಖ್ಯಾತ ಕ್ರೀಡಾಪಟುಗಳು ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಹಾಯ ಮಾಡಿದ್ದಾರೆ. ಇದುವರೆಗೆ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 101 ಕೋಟಿಗೂ ಹೆಚ್ಚು ಸೂರ್ಯನಮಸ್ಕಾರಗಳನ್ನು ನಡೆಸಲಾಗಿದೆ.
ಕ್ರೀಡೆಯಲ್ಲಿ ಮಹಿಳೆಯರ ಒಳಗೊಳ್ಳುವಿಕೆಗೆ ಉತ್ತೇಜನ:
ಕ್ರೀಡೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ವಿಶೇಷ ಪ್ರಯತ್ನವಾಗಿ, ಖೇಲೋ ಇಂಡಿಯಾ ಯೋಜನೆಯ 36 ನೇ ಇಲಾಖಾ ಪ್ರಾಜೆಕ್ಟ್ ಅನುಮೋದನೆ ಸಮಿತಿ (ಡಿಪಿಎಸಿ) ವಿವಿಧ ಕ್ರೀಡೆಗಳಲ್ಲಿ ಮಹಿಳಾ ಲೀಗ್ ಅನ್ನು ಆಯೋಜಿಸುವ ಪ್ರಸ್ತಾಪವನ್ನು ಅನುಮೋದಿಸಿದೆ. ಇದರ ಭಾಗವಾಗಿ, ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಆಯೋಜಿಸಲಾದ ವಲಯ ಮತ್ತು ರಾಷ್ಟ್ರಮಟ್ಟದ ವಿವಿಧ ವಯೋಮಾನದ ವಿವಿಧ ಕ್ರೀಡಾ ವಿಭಾಗಗಳಲ್ಲಿ ಹಲವಾರು ಲೀಗ್‌ಗಳನ್ನು ಆಯೋಜಿಸಲಾಗಿದೆ.
ರಾಷ್ಟ್ರೀಯ ಕ್ರೀಡಾ ದಿನವನ್ನು 29 ಆಗಸ್ಟ್, 2022 ರಂದು ದೇಶದಾದ್ಯಂತ ದೊಡ್ಡ ಪ್ರಮಾಣದಲ್ಲಿ ಆಚರಿಸಲಾಯಿತು. ಕ್ರೀಡಾ ಉತ್ತೇಜನಾ ಮಂಡಳಿಗಳು, ಖೇಲೋ ಇಂಡಿಯಾ ಅಕಾಡೆಮಿಗಳು, ರಾಜ್ಯ ಮಟ್ಟದ ಖೇಲೋ ಇಂಡಿಯಾ ಕೇಂದ್ರಗಳು, ಎಸ್‌ಎಐ ಕೇಂದ್ರಗಳು ಸೇರಿದಂತೆ ವಿವಿಧ ಸಂಸ್ಥೆಗಳಿಂದ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. 6900 ಕ್ಕೂ ಹೆಚ್ಚು ಗಮನಾರ್ಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, 10 ಲಕ್ಷಕ್ಕೂ ಹೆಚ್ಚು ಉತ್ಸಾಹಿಗಳು ಭಾಗವಹಿಸಿದ್ದರು. ಈ ಸಚಿವಾಲಯದ ಅಧಿಕಾರಿಗಳು ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾದ ಭವ್ಯ ಸಮಾರಂಭದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಕ್ರೀಡಾ ತಾರೆಯರಾದ ಯೋಗೇಶ್ವರ್ ದತ್, ಅಖಿಲ್ ಕುಮಾರ್, ಜಾಫರ್ ಇಕ್ಬಾಲ್, ಸಿಡಬ್ಲ್ಯೂಜಿ ಪದಕ ವಿಜೇತ ತೇಜಸ್ವಿನ್ ಶಂಕರ್ ಮತ್ತು 15 ವರ್ಷದೊಳಗಿನ ಜೂಡೋ ಕೆಡೆಟ್ ವಿಶ್ವ ಚಾಂಪಿಯನ್ ಲಿಂಥೋಯ್ ಚನಂಬಮ್ ಅವರು ಜೆಎಲ್‌ಎನ್ ಸ್ಟೇಡಿಯಂನಲ್ಲಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.
Related links:
https://pib.gov.in/PressReleasePage.aspx?PRID=1880090
https://pib.gov.in/PressReleasePage.aspx?PRID=1848085
https://pib.gov.in/PressReleasePage.aspx?PRID=1856708
https://pib.gov.in/PressReleasePage.aspx?PRID=1833632
https://pib.gov.in/PressReleasePage.aspx?PRID=1850063
https://pib.gov.in/PressReleasePage.aspx?PRID=1867058
https://pib.gov.in/PressReleasePage.aspx?PRID=1820921
******
(Release ID: 1885239)
Visitor Counter : 268