ಪ್ರಧಾನ ಮಂತ್ರಿಯವರ ಕಛೇರಿ
ಗೋವಾದ ಮೋಪಾದಲ್ಲಿ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ
"ಈ ಅತ್ಯಾಧುನಿಕ ವಿಮಾನ ನಿಲ್ದಾಣ ಟರ್ಮಿನಲ್ ಗೋವಾದ ಜನರ ಪ್ರೀತಿ ಮತ್ತು ಆಶೀರ್ವಾದವನ್ನು ಹಿಂದಿರುಗಿಸುವ ಪ್ರಯತ್ನವಾಗಿದೆ"
"ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ, ಪರಿಕ್ಕರ್ ಜಿ ಎಲ್ಲಾ ಪ್ರಯಾಣಿಕರ ನೆನಪಿನಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ"
"ಹಿಂದೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಅಗತ್ಯವಿರುವ ಸ್ಥಳಗಳನ್ನು ಕಡೆಗಣಿಸಲಾಗಿತ್ತು"
"ಕಳೆದ 70 ವರ್ಷಗಳಲ್ಲಿ 70 ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ಕಳೆದ 8 ವರ್ಷಗಳಲ್ಲಿ 72 ಹೊಸ ವಿಮಾನ ನಿಲ್ದಾಣ ಆರಂಭವಾಗಿವೆ"
"ಭಾರತವು ವಿಶ್ವದ ಮೂರನೇ ಅತಿದೊಡ್ಡ ವೈಮಾನಿಕ ಮಾರುಕಟ್ಟೆಯಾಗಿದೆ"
"21 ನೇ ಶತಮಾನದ ಭಾರತವು ನವ ಭಾರತವಾಗಿದು, ಅದು ಜಾಗತಿಕ ವೇದಿಕೆಯಲ್ಲಿ ತನ್ನ ಛಾಪು ಮೂಡಿಸುತ್ತಿದೆ ಮತ್ತು ಅದರ ಪರಿಣಾಮವಾಗಿ, ಪ್ರಪಂಚದ ದೃಷ್ಟಿಕೋನವು ಕ್ಷಿಪ್ರವಾಗಿ ಬದಲಾಗುತ್ತಿದೆ"
"ಪ್ರಯಾಣವನ್ನು ಸುಲಭಗೊಳಿಸಲು ಮತ್ತು ದೇಶದ ಪ್ರವಾಸೋದ್ಯಮ ವಲಯವನ್ನು ವೃದ್ಧಿಸಲು ಹೆಚ್ಚಿನ ಪ್ರಯತ್ನ ಮಾಡಲಾಗುತ್ತಿದೆ"
"ಇಂದು, ಗೋವಾ ಶೇಕಡಾ ನೂರಕ್ಕೆ 100 ರಷ್ಟು ಸಂತೃಪ್ತ ಸ್ಥಿತಿ ಮಾದರಿಯ ಪರಿಪೂರ್ಣ ಉದಾಹರಣೆಯಾಗಿದೆ"
Posted On:
11 DEC 2022 7:50PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೋವಾದ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. 2016ರ ನವೆಂಬರ್‌ನಲ್ಲಿ ಪ್ರಧಾನಿ ಅವರು ಈ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದ್ದರು. ಸುಮಾರು 2870 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ವಿಮಾನ ನಿಲ್ದಾಣವನ್ನು ಸುಸ್ಥಿರ ಮೂಲಸೌಕರ್ಯಗಳ ಧ್ಯೇಯವನ್ನಿಟ್ಟುಕೊಂಡು ನಿರ್ಮಿಸಲಾಗಿದೆ ಮತ್ತು ಸೌರ ವಿದ್ಯುತ್ ಸ್ಥಾವರ, ಹಸಿರು ಕಟ್ಟಡಗಳು, ರನ್ ವೇ ಉದ್ದಕ್ಕೂ ಎಲ್‌ಇಡಿ ದೀಪಗಳು, ಮಳೆನೀರು ಕೊಯ್ಲು, ಮರುಬಳಕೆ ಸೌಲಭ್ಯಗಳೊಂದಿಗೆ ಅತ್ಯಾಧುನಿಕ ಒಳಚರಂಡಿ ಸಂಸ್ಕರಣಾ ಘಟಕ ಮತ್ತಿತರರ ಸೌಲಭ್ಯಗಳನ್ನು ಒಳಗೊಂಡಿದೆ. ಆರಂಭದಲ್ಲಿ, ವಿಮಾನ ನಿಲ್ದಾಣದ ಒಂದನೇ ಹಂತ ವರ್ಷಕ್ಕೆ ಸುಮಾರು 4.4 ಮಿಲಿಯನ್ ಪ್ರಯಾಣಿಕರಿಗೆ (ಎಂಪಿಪಿಎ) ಪೂರೈಸುತ್ತಿತ್ತು, ಅದನ್ನು 33 ಎಂಪಿಪಿಎ ಯ ಗರಿಷ್ಠ ಸಾಮರ್ಥ್ಯಕ್ಕೆ ವಿಸ್ತರಿಸಬಹುದು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಮೋಪಾದಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣದ ಉದ್ಘಾಟನೆಗಾಗಿ ಗೋವಾ ಮತ್ತು ದೇಶದ ಎಲ್ಲಾ ನಾಗರಿಕರನ್ನು ಅಭಿನಂದಿಸಿದರು. ಕಳೆದ ಎಂಟು ವರ್ಷಗಳಲ್ಲಿ ಗೋವಾಕ್ಕೆ ತಾವು ನೀಡಿದ ಭೇಟಿಗಳನ್ನು ಸ್ಮರಿಸಿಕೊಂಡ ಪ್ರಧಾನಿ, ಗೋವಾ ಜನರು ತಮ್ಮ ಬಗ್ಗೆ ತೋರಿದ ಪ್ರೀತಿ ಮತ್ತು ಮಮತೆಯನ್ನು ಅಭಿವೃದ್ಧಿಯ ರೂಪದಲ್ಲಿ ಬಡ್ಡಿ ಸಹಿತ ಮರುಪಾವತಿಸಲಾಗುವುದು ಎಂದು ಪ್ರತಿಪಾದಿಸಿದರು. "ಈ ಅತ್ಯಾಧುನಿಕ ವಿಮಾನ ನಿಲ್ದಾಣದ ಟರ್ಮಿನಲ್ ಆ ರೀತಿ ಪುನಃ ಹಿಂತಿರುಗಿಸುವ ಪ್ರಯತ್ನವಾಗಿದೆ" ಎಂದು ಅವರು ಹೇಳಿದರು. ದಿವಂಗತ ಮನೋಹರ್ ಪರಿಕ್ಕರ್ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಲಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಈ ಹಿಂದಿನ ಸರ್ಕಾರಗಳು ಮೂಲಸೌಕರ್ಯ ಅಭಿವೃದ್ಧಿಗೆ ಅನುಸರಿಸಿದ ವಿಧಾನದ ಕುರಿತು ಪ್ರಸ್ತಾಪಿಸಿದ ಪ್ರಧಾನಿ, ನಾಗರಿಕರ ಅಗತ್ಯತೆಗಳು ಮತ್ತು ಅವಶಕ್ಯತೆಗಳ ಬದಲಿಗೆ ಮತ ಬ್ಯಾಂಕ್ ಮೊದಲ ಆದ್ಯತೆಯಾಗಿತ್ತು ಎಂದು ಹೇಳಿದರು. ಅಗತ್ಯವಿಲ್ಲದ ಯೋಜನೆಗಳಿಗೆ ಸಾವಿರಾರು ಕೋಟಿ ಖರ್ಚು ಮಾಡಲಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇದರ ಪರಿಣಾಮವಾಗಿ ಮೂಲಸೌಕರ್ಯ ಅಭಿವೃದ್ಧಿಯ ಅಗತ್ಯವಿದ್ದ ಸ್ಥಳಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. "ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ" ಎಂದು ಅವರು ಹೇಳಿದರು. ಆರಂಭದಲ್ಲಿ ಈ ವಿಮಾನ ನಿಲ್ದಾಣವನ್ನು ಯೋಜಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರವನ್ನು ನೆನಪಿಸಿಕೊಂಡ ಪ್ರಧಾನಿ, ಅವರ ಸರ್ಕಾರ ಅಧಿಕಾರದಿಂದ ಹೊರಗುಳಿದ ನಂತರ ಮತ್ತು ಯೋಜನೆಯು ಹಲವು ವರ್ಷಗಳಿಂದ ಕೈಬಿಡಲಾಗಿತ್ತು ಎಂದು ವಿಷಾದಿಸಿದರು. 2014ರಲ್ಲಿ, ಡಬಲ್ ಇಂಜಿನ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ, ವಿಮಾನ ನಿಲ್ದಾಣದ ಕಾಮಗಾರಿಯು ಹೊಸ ವೇಗವನ್ನು ಪಡೆದುಕೊಂಡಿತು ಮತ್ತು ಕಾನೂನು ಅಡೆತಡೆಗಳು ಮತ್ತು ಸಾಂಕ್ರಾಮಿಕದ ನಡುವೆಯೂ ೬ ವರ್ಷಗಳ ಹಿಂದೆ ಶಂಕುಸ್ಥಾಪನೆ ಮಾಡಲಾಗಿತ್ತು, ಇದೀಗ ವಿಮಾನ ನಿಲ್ದಾಣವು ಕಾರ್ಯಾರಂಭಕ್ಕೆ ಸಿದ್ಧವಾಗಿದೆ ಎಂದು ಪ್ರಧಾನಿ ಹೇಳಿದರು. ವಿಮಾನ ನಿಲ್ದಾಣವು ವರ್ಷಕ್ಕೆ ಸುಮಾರು 40 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸೌಲಭ್ಯವನ್ನು ಹೊಂದಿದ್ದು ಭವಿಷ್ಯದಲ್ಲಿ 3.5 ಕೋಟಿ ಪ್ರಯಾಣಿಕರ ಸಾಮರ್ಥ್ಯಕ್ಕೆ ಅದನ್ನು ವಿಸ್ತರಣೆ ಮಾಡಬಹುದು. ಪ್ರವಾಸೋದ್ಯಮ ಪ್ರಯೋಜನಗಳ ಹೊರತಾಗಿ, ಎರಡು ವಿಮಾನ ನಿಲ್ದಾಣಗಳ ಉಪಸ್ಥಿತಿಯು ಗೋವಾಕ್ಕೆ ಸರಕು ತಾಣವಾಗಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದರು.
ಬದಲಾದ ಕಾರ್ಯಶೈಲಿ ಮತ್ತು ಆಡಳಿತದ ವಿಧಾನಕ್ಕೆ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಒಂದು ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. 2014ಕ್ಕಿಂತ ಮೊದಲು ವಿಮಾನ ಪ್ರಯಾಣವು ಮೇಲ್ವರ್ಗದ ಜನರಿಗೆ ಐಷಾರಾಮಿ ಚಟುವಟಿಕೆಯಾಗಿತ್ತು ಎಂದು ಅವರು ಹೇಳಿದರು. ವಿಮಾನ ಪ್ರಯಾಣದ ಸಾಮಾನ್ಯ ನಾಗರಿಕರ ಬಯಕೆಯ ಈ ನಿರ್ಲಕ್ಷ್ಯವು ವಿಮಾನ ನಿಲ್ದಾಣಗಳು ಮತ್ತು ವಿಮಾನ ಪ್ರಯಾಣಕ್ಕೆ ಸಂಬಂಧಿಸಿದ ಇತರ ಮೂಲಸೌಕರ್ಯ ವೃದ್ಧಿಯಲ್ಲಿ ಕಡಿಮೆ ಹಣ ಹೂಡಿಕೆಗೆ ಕಾರಣವಾಗಿತ್ತು ಮತ್ತು ಬೃಹತ್ ಸಾಮರ್ಥ್ಯದ ಹೊರತಾಗಿಯೂ ಭಾರತವು ವಿಮಾನ ಪ್ರಯಾಣದಲ್ಲಿ ಹಿಂದುಳಿದಿದೆ. ಸ್ವಾತಂತ್ರ್ಯದ ಮೊದಲ 70 ವರ್ಷಗಳಲ್ಲಿ ದೇಶದ ವಿಮಾನ ನಿಲ್ದಾಣಗಳ ಸಂಖ್ಯೆ ಕೇವಲ 70 ಆಗಿತ್ತು ಮತ್ತು ವಿಮಾನ ಪ್ರಯಾಣವನ್ನು ದೊಡ್ಡ ನಗರಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು ಎಂದು ಪ್ರಧಾನಿ ಹೇಳಿದರು. ಮಾತು ಮುಂದುವರಿಸಿದ ಪ್ರಧಾನಿ, ತಮ್ಮ ಸರ್ಕಾರವು 2 ಹಂತಗಳಲ್ಲಿ ಕೆಲಸ ಮಾಡಿದೆ, ಮೊದಲನೆಯದಾಗಿ, ವಿಮಾನ ನಿಲ್ದಾಣದ ಜಾಲವನ್ನು ದೇಶಾದ್ಯಂತ ವಿಸ್ತರಿಸಲಾಗಿದೆ, ಎರಡನೆಯದಾಗಿ, ಉಡಾನ್ ಯೋಜನೆಯ ಮೂಲಕ ಸಾಮಾನ್ಯ ನಾಗರಿಕರಿಗೂ ವಿಮಾನ ಪ್ರಯಾಣದ ಅವಕಾಶ ದೊರಕಿಸಿದೆ. ಕಳೆದ 8 ವರ್ಷಗಳಲ್ಲಿ, 72 ವಿಮಾನ ನಿಲ್ದಾಣಗಳನ್ನು ಆರಂಭಿಸಲಾಗಿದೆ, ಆದರೆ ಕಳೆದ 70 ವರ್ಷಗಳಲ್ಲಿ ನಿರ್ಮಾಣವಾಗಿರುವುದು ಕೇವಲ 70 ನಿಲ್ದಾಣ. ಅಂದರೆ ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡಿದೆ. ಇದಲ್ಲದೆ, 2000 ರಲ್ಲಿ ಕೇವಲ 6 ಕೋಟಿ ಪ್ರಯಾಣಿಕರಿಗೆ ಹೋಲಿಸಿದರೆ 2020 ರಲ್ಲಿ (ಸಾಂಕ್ರಾಮಿಕ ರೋಗಕ್ಕೆ ಸ್ವಲ್ಪ ಮೊದಲು) ವಿಮಾನ ಪ್ರಯಾಣಿಕರ ಸಂಖ್ಯೆ 14 ಕೋಟಿಗೆ ಏರಿದೆ. ಉಡಾನ್ ಯೋಜನೆಯಡಿಯಲ್ಲಿ 1 ಕೋಟಿಗೂ ಅಧಿಕ ಪ್ರಯಾಣಿಕರು ವಿಮಾನ ಪ್ರಯಾಣ ಕೈಗೊಂಡಿದ್ದಾರೆ. "ಈ ಕ್ರಮಗಳಿಂದಾಗಿ, ಭಾರತವು ವಿಶ್ವದ ಮೂರನೇ ಅತಿದೊಡ್ಡ ವಿಮಾನಯಾನ ಮಾರುಕಟ್ಟೆಯಾಗಿದೆ" ಎಂದು ಅವರು ಹೇಳಿದರು.
ಉಡಾನ್ ಯೋಜನೆಯ ಸಾಧನೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಇದು ಶೈಕ್ಷಣಿಕ ಜಗತ್ತಿಗೆ ಅಧ್ಯಯನ ವಿಷಯವಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು. ಮಧ್ಯಮ ವರ್ಗದವರು ಕಡಿಮೆ ದೂರದ ಪ್ರಯಾಣಕ್ಕೂ ರೈಲ್ವೇ ಬದಲಿಗೆ ವಿಮಾನ ಟಿಕೆಟ್‌ಗಳನ್ನು ಪರಿಶೀಲಿಸುವ ಬದಲಾಗುತ್ತಿರುವ ಪ್ರವೃತ್ತಿಯ ಬಗ್ಗೆಯೂ ಪ್ರಧಾನ ಮಂತ್ರಿ ಉಲ್ಲೇಖಿಸಿದರು. ದೇಶದಲ್ಲಿ ವೈಮಾನಿಕ ಸಂಪರ್ಕದ ಜಾಲವು ವಿಸ್ತರಣೆಯಾಗುತ್ತಿರುವಂತೆಯೇ ವಿಮಾನದ ಮೂಲಕ ಪ್ರಯಾಣ ಮಾಡಬಹುದಾದ ಅಂದರೆ ಕೈಗೆಟುಬಹುದಾದ ಸಾರಿಗೆಯ ವಿಧಾನವಾಗಿದೆ ಎಂದು ಅವರು ಪ್ರಸ್ತಾಪಿಸಿದರು.
"ಪ್ರವಾಸೋದ್ಯಮವು ರಾಷ್ಟ್ರದ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂಬುದು ನಿಜ, ಆದರೆ ಒಂದು ರಾಷ್ಟ್ರವು ಬಲಗೊಳ್ಳುತ್ತಿದ್ದಂತೆ, ಜಗತ್ತು ಆ ರಾಷ್ಟ್ರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತದೆ ಮತ್ತು ಅದರತ್ತ ಆಕರ್ಷಿತವಾಗುತ್ತದೆ" ಎಂದು ಪ್ರಧಾನಿ ಹೇಳಿದರು. ಭಾರತದ ಸಮೃದ್ಧ ಇತಿಹಾಸದತ್ತ ಒಮ್ಮೆ ದೃಷ್ಟಿ ಹಾಯಿಸಿದರೆ, ಅದು ಇಡೀ ಪ್ರಪಂಚದ ಆಕರ್ಷಣೆಯ ಕೇಂದ್ರವಾಗಿದೆ, ಅಲ್ಲಿ ವಿದ್ವಾಂಸರು, ಪ್ರಯಾಣಿಕರು, ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಮತ್ತು ವಿದ್ಯಾರ್ಥಿಗಳು ಈ ಭೂಮಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಭಾರತಕ್ಕೆ ಬರುತ್ತಾರೆ ಎಂದು ಪ್ರಧಾನಿ ಹೇಳಿದರು. ಭಾರತವು ಎದುರಿಸುತ್ತಿದ್ದ ಗುಲಾಮಗಿರಿಯ ಕರಾಳ ಕಾಲದ ಬಗ್ಗೆಯೂ ಪ್ರಧಾನಿ ವಿಷಾದಿಸಿದರು, ಇದು ಸಂಸ್ಕೃತಿ ಮತ್ತು ಸಂಪ್ರದಾಯಗಳು ಒಂದೇ ಆಗಿದ್ದರೂ ಸಹ ದೇಶದ ಬಗೆಗಿನ ಚಿತ್ರಣ ಮತ್ತು ದೂರದೃಷ್ಟಿಯನ್ನು ಪರಿವರ್ತಿಸಿತು. "21ನೇ ಶತಮಾನದ ಭಾರತವು ನವ ಭಾರತವಾಗಿದ್ದು, ಇದು ಜಾಗತಿಕ ವೇದಿಕೆಗಳಲ್ಲಿ ತನ್ನ ಛಾಪು ಮೂಡಿಸುತ್ತಿದೆ ಮತ್ತು ಅದರ ಪರಿಣಾಮವಾಗಿ ಪ್ರಪಂಚದ ದೃಷ್ಟಿಕೋನವು ಕ್ಷಿಪ್ರವಾಗಿ ಬದಲಾಗುತ್ತಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಇಂದಿನ ಜಗತ್ತು ಭಾರತದ ಬಗ್ಗೆ ಹೆಚ್ಚು ತಿಳಿಯಲು ಮತ್ತು ಅದರ ವಿಧಾನಗಳನ್ನು ಅರ್ಥಮಾಡಿಕೊಳ್ಳಲು ಬಯಸುತ್ತದೆ ಎಂದು ಅವರು ಒತ್ತಿ ಹೇಳಿದರು. ಬಹಳಷ್ಟು ವಿದೇಶಿಗರು ಡಿಜಿಟಲ್ ವೇದಿಕೆಗಳಲ್ಲಿ ಭಾರತದ ಕಥೆಯನ್ನು ವಿವರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಕಳೆದ 8 ವರ್ಷಗಳಲ್ಲಿ ಪ್ರಯಾಣ ಸುಲಭ ಮತ್ತು ಸುಗಮಗೊಳಿಸುವುದನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ದೇಶದ ಪ್ರವಾಸೋದ್ಯಮ ಭೂದೃಶ್ಯವನ್ನು ಬದಲಾಯಿಸಲು ತೆಗೆದುಕೊಂಡ ಕ್ರಮಗಳನ್ನು ಪ್ರಧಾನಿ ವಿವರಿಸಿದರು. ಅವರು ವೀಸಾ ಪ್ರಕ್ರಿಯೆ ಸುಲಭಗೊಳಿಸುವುದು, ಸುಧಾರಿತ ವೀಸಾ-ಆನ್-ಅರೈವಲ್ ಸೌಲಭ್ಯಗಳು, ಆಧುನಿಕ ಮೂಲಸೌಕರ್ಯ ಮತ್ತು ಕೊನೆಯ ಮೈಲು ಸಂಪರ್ಕ ಮತ್ತು ಡಿಜಿಟಲ್, ಮೊಬೈಲ್ ಮತ್ತು ರೈಲ್ವೇ ಸಂಪರ್ಕದ ಬಗ್ಗೆ ಮಾತನಾಡಿದರು. ಈ ಎಲ್ಲ ಕ್ರಮಗಳು ಫಲಿತಾಂಶ ನೀಡಿವೆ. 2015ರಲ್ಲಿ ಭಾರತದಲ್ಲಿ ದೇಶೀಯ ಪ್ರವಾಸಿಗರ ಸಂಖ್ಯೆ 14 ಕೋಟಿ ಇತ್ತು. ಕಳೆದ ವರ್ಷ ಈ ಸಂಖ್ಯೆ ಸುಮಾರು 70 ಕೋಟಿಗೆ ಏರಿಕೆಯಾಗಿದೆ ಎಂದು ಅವರು ಹೇಳಿದರು.
ಪ್ರವಾಸೋದ್ಯಮವು ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅತಿದೊಡ್ಡ ಸಾಮರ್ಥ್ಯವನ್ನು ಹೊಂದಿದೆ ಎಂದು ಪುನರುಚ್ಚರಿಸಿದ ಪ್ರಧಾನಮಂತ್ರಿ ಅವರು ಗೋವಾದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಸುಧಾರಿಸುವ ಕ್ರಮಗಳ ಬಗ್ಗೆ ವಿವರಿಸಿದರು. “2014ರಿಂದ ರಾಜ್ಯದಲ್ಲಿ ಹೆದ್ದಾರಿ ಯೋಜನೆಗಳಲ್ಲಿ 10 ಸಾವಿರ ಕೋಟಿಗೂ ಅಧಿಕ ಹಣ ಹೂಡಿಕೆ ಮಾಡಲಾಗಿದೆ. ಗೋವಾದಲ್ಲಿ ಸಂಚಾರ ಸಮಸ್ಯೆಯನ್ನು ಸಹ ಪರಿಹರಿಸಲಾಗುತ್ತಿದೆ. ಕೊಂಕಣ ರೈಲ್ವೆಯ ವಿದ್ಯುದ್ದೀಕರಣದಿಂದ ರಾಜ್ಯಕ್ಕೆ ಪ್ರಯೋಜನವಾಗುತ್ತಿದೆ ಎಂದು ಅವರು ಹೇಳಿದರು.
ಸಂಪರ್ಕವನ್ನು ಹೆಚ್ಚಿಸುವುದರ ಹೊರತಾಗಿ ಸ್ಮಾರಕಗಳ ನಿರ್ವಹಣೆ ಸಂಪರ್ಕ ಮತ್ತು ಸಂಬಂಧಿತ ಸೌಲಭ್ಯಗಳನ್ನು ಸುಧಾರಿಸುವ ಮೂಲಕ ಪಾರಂಪರಿಕ ಪ್ರವಾಸೋದ್ಯಮ ಉತ್ತೇಜಿಸಲು ಸರ್ಕಾರ ಗಮನಹರಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಪ್ರಯತ್ನಕ್ಕೆ ಉದಾಹರಣೆಯಾಗಿ ಅಗೋಡಾ ಕಾರಾಗೃಹ ಸಂಕೀರ್ಣದ ಮ್ಯೂಸಿಯಂ ಅಭಿವೃದ್ಧಿಯನ್ನು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. ಸ್ಮಾರಕಗಳನ್ನು ಹೆಚ್ಚು ಆಕರ್ಷಕವಾಗಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಮತ್ತು ವಿಶೇಷ ರೈಲುಗಳ ಮೂಲಕ ಯಾತ್ರಾ ಸ್ಥಳಗಳು ಮತ್ತು ಸ್ಮಾರಕಗಳಿಗೆ ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಅವರು ಹೇಳಿದರು.
ಸಾಮಾಜಿಕ ಮೂಲಸೌಕರ್ಯ ಹಾಗೂ ಭೌತಿಕ ಮೂಲಸೌಕರ್ಯ ಎರಡಕ್ಕೂ ಸಮಾನವಾದ ಪ್ರಾಮುಖ್ಯತೆಯನ್ನು ನೀಡುತ್ತಿರುವ ಗೋವಾ ಸರ್ಕಾರದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಸ್ವಯಂಪೂರ್ಣ ಗೋವಾ ಅಭಿಯಾನದ ಯಶಸ್ಸನ್ನು ಪ್ರಧಾನಮಂತ್ರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು, ಇದು ಜೀವನ ಸೌಕರ್ಯವನ್ನು ಉತ್ತೇಜಿಸಲು ಮತ್ತು ಯಾವೊಬ್ಬ ನಾಗರಿಕರು ಸರ್ಕಾರದ ಯೋಜನೆಗಳಿಂದ ವಂಚಿತರಾಗದಂತೆ ನೋಡಿಕೊಳ್ಳಲು ಪ್ರಮುಖವಾಗಿದೆ ಎಂದರು. "ಇಂದು, ಗೋವಾ ಶೇಕಡ ನೂರಕ್ಕೆ 100ರಷ್ಟು ಸಂತೃಪ್ತ ಸ್ಥಿತಿ ಮಾದರಿಯ ಪರಿಪೂರ್ಣ ಉದಾಹರಣೆಯಾಗಿದೆ", ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಪ್ರತಿಯೊಬ್ಬರೂ ಮುಂದುವರಿಸಿಕೊಂಡು ಹೋಗಬೇಕೆಂದು ಹೇಳುತ್ತಾ ಪ್ರಧಾನಮಂತ್ರಿ ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಈ ಸಂದರ್ಭದಲ್ಲಿ ಗೋವಾದ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್, ಗೋವಾ ರಾಜ್ಯಪಾಲರಾದ ಶ್ರೀ ಪಿ.ಎಸ್.ಶ್ರೀಧರನ್ ಪಿಳ್ಳೈ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್ ಉಪಸ್ಥಿತರಿದ್ದರು.
ಹಿನ್ನೆಲೆ:
ದೇಶಾದ್ಯಂತ ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಸಾರಿಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಧಾನಿ ಅವರು ನಿರಂತರ ಪ್ರಯತ್ನ ಕೈಗೊಂಡಿದ್ದಾರೆ. ಅದರ ಮತ್ತೊಂದು ಹೆಜ್ಜೆಯಾಗಿ, ಗೋವಾದ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ಉದ್ಘಾಟಿಸಿದರು. 2016ರ ನವೆಂಬರ್‌ನಲ್ಲಿ ಪ್ರಧಾನಿ ಅವರು ವಿಮಾನ ನಿಲ್ದಾಣದ ಶಂಕುಸ್ಥಾಪನೆ ನೆರವೇರಿಸಿದ್ದರು.
ಸುಮಾರು 2870 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾದ ಈ ವಿಮಾನ ನಿಲ್ದಾಣವನ್ನು ಸುಸ್ಥಿರ ಮೂಲಸೌಕರ್ಯಗಳ ಧ್ಯೇಯದೊಂದಿಗೆ ನಿರ್ಮಿಸಲಾಗಿದೆ ಮತ್ತು ಸೌರ ವಿದ್ಯುತ್ ಸ್ಥಾವರ, ಹಸಿರು ಕಟ್ಟಡಗಳು, ರನ್‌ವೇಯಲ್ಲಿ ಎಲ್‌ಇಡಿ ದೀಪಗಳು, ಮಳೆನೀರು ಕೊಯ್ಲು, ಅತ್ಯಾಧುನಿಕ ಒಳಚರಂಡಿ ಸಂಸ್ಕರಣಾ ಘಟಕ, ಮರುಬಳಕೆ ಸೌಲಭ್ಯ ಮತ್ತಿತರ ಸೌಕರ್ಯಗಳನ್ನು ಒಳಗೊಂಡಿದೆ. ಇದು ೩-ಡಿ ಶಿಲೆಯ ಪ್ರೀಕಾಸ್ಟ್ ಕಟ್ಟಡಗಳು, ಸ್ಟೆಬಿಲ್ ಡ್, ರೋಬೋಮ್ಯಾಟಿಕ್ ಹಾಲೋ ಪ್ರಿಕಾಸ್ಟ್ ಗೋಡೆಗಳು ಮತ್ತು 5ಜಿಗೆ ಹೊಂದುವ ಮೂಲಸೌಕರ್ಯಗಳಂತಹ ಕೆಲವು ಅತ್ಯುತ್ತಮ-ದರ್ಜೆಯ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ವಿಮಾನ ನಿಲ್ದಾಣದ ಕೆಲವು ವೈಶಿಷ್ಟ್ಯಗಳಲ್ಲಿ ವಿಶ್ವದ ಅತಿದೊಡ್ಡ ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ರನ್‌ವೇ, 14 ಪಾರ್ಕಿಂಗ್ ಬೇಗಳು ಜೊತೆಗೆ ವಿಮಾನಗಳಿಗೆ ರಾತ್ರಿ ಪಾರ್ಕಿಂಗ್ ಸೌಲಭ್ಯ, ಸ್ವಯಂ-ಬ್ಯಾಗೇಜ್ ಡ್ರಾಪ್ ಸೌಲಭ್ಯಗಳು, ಅತ್ಯಾಧುನಿಕ ಮತ್ತು ಸ್ವತಂತ್ರ ವಾಯು ನ್ಯಾವಿಗೇಷನ್ ಮೂಲಸೌಕರ್ಯಗಳು ಸೇರಿವೆ.
ಆರಂಭದಲ್ಲಿ, ವಿಮಾನ ನಿಲ್ದಾಣದ ಒಂದನೇ ಹಂತ ವರ್ಷಕ್ಕೆ ಸುಮಾರು 4.4ಮಿಲಿಯನ್ ಪ್ರಯಾಣಿಕರಿಗೆ (ಎಂಪಿಪಿಎ) ಪೂರೈಸುತ್ತದೆ, ಇದನ್ನು 33 ಎಂಪಿಪಿಎಯ ಗರಿಷ್ಠ ಸಾಮರ್ಥ್ಯಕ್ಕೆ ವಿಸ್ತರಿಸಬಹುದು. ಈ ವಿಮಾನ ನಿಲ್ದಾಣವು ರಾಜ್ಯದ ಸಾಮಾಜಿಕ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಮತ್ತು ಪ್ರವಾಸೋದ್ಯಮದ ಅಗತ್ಯತೆಗಳನ್ನು ಪೂರೈಸುತ್ತದೆ. ಇದು ಪ್ರಮುಖ ಲಾಜಿಸ್ಟಿಕ್ಸ್ ಕೇಂದ್ರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ, ಅನೇಕ ದೇಶೀಯ ಮತ್ತು ಅಂತಾರಾಷ್ಟ್ರೀಯ ಸ್ಥಳಗಳನ್ನು ನೇರವಾಗಿ ಸಂಪರ್ಕಿಸುತ್ತದೆ. ವಿಮಾನ ನಿಲ್ದಾಣವು ಬಹು-ಮಾದರಿ ಸಂಪರ್ಕವನ್ನು ಹೊಂದಲು ಯೋಜಿಸಲಾಗಿದೆ.
ವಿಶ್ವದರ್ಜೆಯ ವಿಮಾನ ನಿಲ್ದಾಣವಾಗಿದ್ದರೂ, ಈ ವಿಮಾನ ನಿಲ್ದಾಣವು ಪ್ರವಾಸಿಗರಿಗೆ ಗೋವಾದ ಅನುಭವವನ್ನು ನೀಡುತ್ತದೆ. ವಿಮಾನನಿಲ್ದಾಣವು ಗೋವಾ ಮೂಲದ ಅಜುಲೆಜೋಸ್ ಟೈಲ್ಸ್ ಅನ್ನು ವ್ಯಾಪಕವಾಗಿ ಬಳಸಿದೆ. ಫುಡ್ ಕೋರ್ಟ್ ವಿಶಿಷ್ಟವಾದ ಗೋವಾದ ಕೆಫೆಯ ಮೋಡಿಯನ್ನು ಮರುಸೃಷ್ಟಿಸುತ್ತದೆ. ಸ್ಥಳೀಯ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳು ತಮ್ಮ ಸರಕುಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಪ್ರೋತ್ಸಾಹಿಸುವ ಕ್ಯುರೇಟೆಡ್ ಫ್ಲೀ ಮಾರುಕಟ್ಟೆಗೆ ಮೀಸಲಾದ ನಿರ್ದಿಷ್ಟ ಸ್ಥಳವನ್ನೂ ಇದು ಹೊಂದಿದೆ.
.
*****
(Release ID: 1882821)
Visitor Counter : 217
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam