ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಹಾರಾಷ್ಟ್ರದಲ್ಲಿ ರೂ. 75,000 ಕೋಟಿ ಮೌಲ್ಯದ ವಿವಿಧ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು.


​​​​​​​

ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗವನ್ನು ಉದ್ಘಾಟಿಸಿದರು

"ಮಹಾರಾಷ್ಟ್ರದ ಅಭಿವೃದ್ಧಿಗಾಗಿ ಇಂದು ಹನ್ನೊಂದು ನೂತನ ನಕ್ಷತ್ರಗಳ ಗುಚ್ಛ ಉದಯಿಸಿದೆ"

"ಮೂಲಸೌಕರ್ಯ ಎಂದರೆ ಕೇವಲ ನಿರ್ಜೀವ ರಸ್ತೆಗಳು ಮತ್ತು ಮೇಲ್ಸೇತುವೆಗಳು ಮಾತ್ರ ಒಳಗೊಳ್ಳಲು ಸಾಧ್ಯವಿಲ್ಲ, ಅದರ ವಾಸ್ತವಿಕ ವಿಸ್ತರಣೆಯು ತುಂಬಾ ವಿಸ್ತಾರವಾಗಿದೆ"

"ಮೊದಲು ವಂಚಿತರಾಗಿದ್ದವರು ಈಗ ಸರ್ಕಾರದ ಆದ್ಯತೆಯಾಗಿದ್ದಾರೆ"

"ಅಡ್ಡಹಾದಿ(ಶಾರ್ಟ್ಕಟ್)ಗಳ ರಾಜಕಾರಣ ಒಂದು ರೋಗವಾಗಿದೆ"

"ಅಡ್ಡಹಾದಿ(ಶಾರ್ಟ್ಕಟ್)ಗಳನ್ನು ಅಳವಡಿಸಿಕೊಳ್ಳುವ ರಾಜಕೀಯ ಪಕ್ಷಗಳು ದೇಶದ ತೆರಿಗೆ ಪಾವತಿದಾರರ ದೊಡ್ಡ ಶತ್ರು"

"ಯಾವುದೇ ದೇಶವು ತ್ವರಿತಗತಿಯ ಅಡ್ಡಹಾದಿ(ಶಾರ್ಟ್ಕಟ್)ಗಳೊಂದಿಗೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ, ದೀರ್ಘಾವಧಿಯ ದೂರದೃಷ್ಟಿಯೊಂದಿಗೆ ಶಾಶ್ವತ ಪರಿಹಾರಗಳು ಮಾತ್ರ ದೇಶದ ಪ್ರಗತಿಗೆ ಬಹಳ ಮುಖ್ಯ"

"ಗುಜರಾತ್ ಚುನಾವಣಾ ಫಲಿತಾಂಶಗಳು ಶಾಶ್ವತ ಅಭಿವೃದ್ಧಿ ಮತ್ತು ಶಾಶ್ವತ ಪರಿಹಾರದ ಆರ್ಥಿಕ ನೀತಿಯ ಫಲಿತಾಂಶವಾಗಿದೆ"

Posted On: 11 DEC 2022 2:43PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದಲ್ಲಿ ರೂ. 75,000 ಕೋಟಿಗೂ ಅಧಿಕ ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಹಲವು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದು ರೂ. 1500 ಕೋಟಿಗೂ ಹೆಚ್ಚು ಮೌಲ್ಯದ ರಾಷ್ಟ್ರೀಯ ರೈಲು ಯೋಜನೆಗಳು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಒನ್ ಹೆಲ್ತ್ (ಎನ್.ಐ.ಒ.), ನಾಗ್ಪುರ ಮತ್ತು ನಾಗ್ ನದಿ ಮಾಲಿನ್ಯ ನಿವಾರಣೆ ಯೋಜನೆ, ನಾಗ್ಪುರ ಇತ್ಯಾದಿಗಳನ್ನು ಒಳಗೊಂಡಿದೆ.  

‘ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ & ಟೆಕ್ನಾಲಜಿ (ಸಿ.ಐ.ಪಿ.ಇ.ಟಿ.), ಚಂದ್ರಾಪುರ’ವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ‘ಸೆಂಟರ್ ಫಾರ್ ರಿಸರ್ಚ್, ಮ್ಯಾನೇಜ್ಮೆಂಟ್ ಮತ್ತು ಕಂಟ್ರೋಲ್ ಆಫ್ ಹಿಮೋಗ್ಲೋಬಿನೋಪತಿ, ಚಂದ್ರಾಪುರ’ವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು.

ನಾಗ್ಪುರದಿಂದ ಬಿಲಾಸ್ಪುರಕ್ಕೆ ವಂದೇ ಭಾರತ್ ಎಕ್ಸ್ಪ್ರೆಸ್ ಗೆ ಇಂದು ಮುಂಜಾನೆ ಪ್ರಧಾನಮಂತ್ರಿಯವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು, 'ನಾಗ್ಪುರ ಮೆಟ್ರೋ ಹಂತ I' ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು 'ನಾಗ್ಪುರ ಮೆಟ್ರೋ ಹಂತ- II' ಕ್ಕೆ ಅಡಿಪಾಯವನ್ನು ಹಾಕಿದರು. ಪ್ರಧಾನಮಂತ್ರಿಯವರು ಹಿಂದೂ ಹೃದಯಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್  ಇದರ ಮೊದಲ ಹಂತವನ್ನು ಉದ್ಘಾಟಿಸಿದರು, ಈ ಹೆದ್ದಾರಿಯು  520 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ ಹಾಗೂ ನಾಗ್ಪುರ ಮತ್ತು ಶಿರಡಿಯನ್ನು ಸಂಪರ್ಕಿಸುತ್ತದೆ.

ರೂ.1575 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಎ.ಐ.ಐ.ಎಂ.ಎಸ್.  ನಾಗ್ಪುರವನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು, ಇದು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಯಾಗಿದೆ, ಹೊರರೋಗಿ ಚಿಕಿತ್ಸೆ, ಒಳರೋಗಿ ಚಿಕಿತ್ಸೆ,  ರೋಗನಿರ್ಣಯ ಸೇವೆಗಳು, ಶಸ್ತ್ರಚಿಕಿತ್ಸಾ (ಆಪರೇಷನ್)  ಥಿಯೇಟರ್ ಗಳು ಮತ್ತು ವೈದ್ಯಕೀಯ ವಿಜ್ಞಾನದ ಎಲ್ಲಾ ಪ್ರಮುಖ ವಿಶೇಷತೆ ಮತ್ತು ಸೂಪರ್ ಸ್ಪೆಷಾಲಿಟಿ ವಿಷಯಗಳನ್ನು ಒಳಗೊಂಡಿರುವ 38 ವಿಭಾಗಗಳನ್ನು ಹೊಂದಿರುವ ಆಸ್ಪತ್ರೆಯಾಗಿದೆ. ಆಸ್ಪತ್ರೆಯು ಮಹಾರಾಷ್ಟ್ರದ ವಿದರ್ಭ ಪ್ರದೇಶಕ್ಕೆ ಆಧುನಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತದೆ ಹಾಗೂ ಗಡ್ಚಿರೋಲಿ, ಗೊಂಡಿಯಾ ಮತ್ತು ಮೆಲ್ಘಾಟ್ ಸುತ್ತಮುತ್ತಲಿನ ಬುಡಕಟ್ಟು ಪ್ರದೇಶಗಳಿಗೆ ಈ ಆಸ್ಪತ್ರೆಯು  ವರದಾನವಾಗಿದೆ.  

ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿಯವರು, ದೇಶದ ಜನತೆಗೆ ಸಂಕಷ್ಟಿ ಚತುರ್ಥಿಯ ಶುಭ ಸಂದರ್ಭದಲ್ಲಿ ಶುಭಾಶಯ ಕೋರಿದರು ಮತ್ತು ಗಣಪತಿ ದೇವರಿಗೆ ನಮನ ಸಲ್ಲಿಸಿದರು. “ಮಹಾರಾಷ್ಟ್ರದ ನಾಗ್ಪುರದಿಂದ ಅಭಿವೃದ್ಧಿ ಕಾರ್ಯಗಳ ಪುಷ್ಪಗುಚ್ಛವನ್ನು ಪ್ರಾರಂಭಿಸುತ್ತಿರುವ ಈ ವಿಶೇಷ ದಿನವು ಜನರ ಜೀವನವನ್ನು ಪರಿವರ್ತಿಸುತ್ತದೆ. ಇಂದು ಹನ್ನೊಂದು ಹೊಸ ನಕ್ಷತ್ರ ಗುಚ್ಛಗಳ ಉದಯವಾಗಿದೆ.  ಮಹಾರಾಷ್ಟ್ರದ ಅಭಿವೃದ್ಧಿಯು ಏರುತ್ತಿದೆ, ಇದು ಹೊಸ ಎತ್ತರವನ್ನು ಸಾಧಿಸಲು ಮತ್ತು ಹೊಸ ದಿಕ್ಕನ್ನು ಒದಗಿಸಲು ಸಹಾಯ ಮಾಡುತ್ತದೆ" ಎಂದು ಪ್ರಧಾನಮಂತ್ರಿಯವರು ಹೇಳಿದರು. ಎಲ್ಲಾ 11 ಯೋಜನೆಗಳನ್ನು ಒಂದೊಂದಾಗಿ ಪಟ್ಟಿ ಮಾಡಿ ವಿವರಿಸಿದ ಪ್ರಧಾನಮಂತ್ರಿಯವರು, “ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್ ಈಗ ನಾಗಪುರದಿಂದ ಶಿರಡಿಯವರೆಗೆ ಸಿದ್ಧವಾಗಿದೆ, ಎ.ಐ.ಐ.ಎಂ.ಎಸ್. ಆಸ್ಪತ್ರೆಯು ವಿದರ್ಭದ ಜನರಿಗೆ ಪ್ರಯೋಜನವನ್ನು ನೀಡುತ್ತದೆ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಒನ್ ಹೆಲ್ತ್ ಸ್ಥಾಪನೆ, ಐ.ಸಿ.ಎಂ.ಆರ್. ನ ನೂತನ ಸಂಶೋಧನಾ ಕೇಂದ್ರವನ್ನು ನಿರ್ಮಿಸಲಾಗಿದೆ. ಚಂದ್ರಾಪುರದಲ್ಲಿ ನೂತನ ಸಿ.ಐ.ಪಿ.ಟಿ. ಚಂದ್ರಾಪುರ ಸ್ಥಾಪನೆ, ನಾಗ್ ನದಿಯ ಮಾಲಿನ್ಯವನ್ನು ಕಡಿಮೆ ಮಾಡಲು ನಾಗ್ಪುರದಲ್ಲಿ ವಿವಿಧ ಯೋಜನೆಗಳು, ಮೆಟ್ರೋ ಹಂತ I ಉದ್ಘಾಟನೆ ಮತ್ತು ಹಂತ II ರ ಶಂಕುಸ್ಥಾಪನೆ, ನಾಗ್ಪುರದಿಂದ ಬಿಲಾಸ್ ಪುರ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು, 'ನಾಗ್ಪುರದ ಪುನರಾಭಿವೃದ್ಧಿ ಯೋಜನೆ ಮತ್ತು 'ಅಜ್ನಿ' ರೈಲು ನಿಲ್ದಾಣ, ಅಜ್ನಿಯಲ್ಲಿ 42 ಸಾವಿರ ಅಶ್ವಶಕ್ತಿಯ ರೈಲು ಎಂಜಿನ್ನ ನಿರ್ವಹಣಾ ಡಿಪೋ ಉದ್ಘಾಟನೆ ಮತ್ತು ನಾಗ್ಪುರ-ಇಟಾರ್ಸಿ ಮಾರ್ಗದ ಕೊಹ್ಲಿ-ನಾರ್ಖೇಡ್ ಮಾರ್ಗದ ಉದ್ಘಾಟನೆ. ಈ ರೀತಿ ಪೂರ್ಣಗೊಂಡ ಮತ್ತು ಮುಂಬರುವ 11 ಯೋಜನೆಗಳಿಗಾಗಿ ಮಹಾರಾಷ್ಟ್ರದ ಜನರನ್ನು ಪ್ರಧಾನಮಂತ್ರಿ ಅವರು ಅಭಿನಂದಿಸಿದರು. 

“ಇಂದಿನ ಯೋಜನೆಗಳು ಮಹಾರಾಷ್ಟ್ರದ ಡಬಲ್ ಇಂಜಿನ್ ಸರ್ಕಾರದ ಕೆಲಸದ ವೇಗಕ್ಕೆ ಪುರಾವೆಯಾಗಿದೆ.  ಸಮೃದ್ಧಿ ಮಹಾಮಾರ್ಗವು ನಾಗ್ಪುರ ಮತ್ತು ಮುಂಬೈ ನಡುವಿನ ಅಂತರವನ್ನು ಕೇವಲ ಕಡಿಮೆ ಮಾಡುತ್ತಿಲ್ಲ, ಜೊತೆಗೆ ಮಹಾರಾಷ್ಟ್ರದ ಇತರ 24 ಜಿಲ್ಲೆಗಳನ್ನು ಆಧುನಿಕ ಸಂಪರ್ಕದೊಂದಿಗೆ ಜೋಡಿಸುತ್ತಿದೆ. ಉದ್ಯೋಗಾವಕಾಶಗಳ ಉತ್ತೇಜನದ ಜೊತೆಗೆ, ಈ ಸಂಪರ್ಕ ಯೋಜನೆಗಳು ಈ ಪ್ರದೇಶದಲ್ಲಿ ನೆಲೆಗೊಂಡಿರುವ ರೈತರು, ಯಾತ್ರಿಕರು ಮತ್ತು ಕೈಗಾರಿಕೆಗಳಿಗೆ ಬಹಳಷ್ಟು ಪ್ರಯೋಜನವನ್ನು ನೀಡಲಿವೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಈ ಯೋಜನೆಗಳ ಆಂತರಿಕ ವ್ಯವಸ್ಥೆಗಳನ್ನು ಹಾಗೂ ಡಬಲ್ ಇಂಜಿನ್ ಸರ್ಕಾರದ ಪ್ರಯತ್ನಗಳನ್ನು ವಿವರಿಸುತ್ತಾ ಪ್ರಧಾನಮಂತ್ರಿಯವರು, “ಇಂದು ಉದ್ಘಾಟನೆಗೊಂಡ ಯೋಜನೆಗಳು ಸಮಗ್ರ ಮೂಲಸೌಕರ್ಯ ಅಭಿವೃದ್ಧಿಯ ದೃಷ್ಟಿ ಹಾಗೂ ಚಿತ್ರಣವನ್ನು ಚಿತ್ರಿಸುತ್ತವೆ. ಅದು ಎ.ಐ.ಐ.ಎಂ.ಎಸ್. ನಾಗ್ಪುರ ಅಥವಾ ಸಮೃದ್ಧಿ ಮಹಾಮಾರ್ಗ್ ಆಗಿರಬಹುದು, ಅದು ವಂದೇ ಭಾರತ್ ಎಕ್ಸ್ಪ್ರೆಸ್ ಅಥವಾ ನಾಗ್ಪುರ ಮೆಟ್ರೋ ಆಗಿರಬಹುದು, ಈ ಎಲ್ಲಾ ಯೋಜನೆಗಳು ಅವುಗಳ ಗುಣಲಕ್ಷಣಗಳಲ್ಲಿ ಭಿನ್ನವಾಗಿರಬಹುದು ಆದರೆ ಒಂದು ಗುಚ್ಛದ ರೂಪದಲ್ಲಿ ಒಟ್ಟುಗೂಡಿಸಿದಾಗ, ಸಂಪೂರ್ಣ ಅಭಿವೃದ್ಧಿಯ ಸಾರವು ಪ್ರತಿಯೊಬ್ಬ ನಾಗರಿಕನನ್ನು ತಲುಪುತ್ತದೆ.  ಶ್ರೀಸಾಮಾನ್ಯನ ಆರೋಗ್ಯ ರಕ್ಷಣೆಯಾಗಲಿ ಅಥವಾ ಸಂಪತ್ತು ಸೃಷ್ಟಿಯಾಗಲಿ, ರೈತನ ಸಬಲೀಕರಣವಾಗಲಿ ಅಥವಾ ಜಲ ಸಂರಕ್ಷಣೆಯಾಗಲಿ, ಇದೇ ಮೊದಲು ಬಾರಿಗೆ ಮೂಲಸೌಕರ್ಯಗಳಿಗೆ ಸರ್ಕಾರವು ಮಾನವ ರೂಪವನ್ನು ನೀಡಿದೆ, ಪ್ರತಿಯೊಬ್ಬರ ಜೀವನದ ಮೇಲೆ ಪರಿಣಾಮ ಬೀರುವ ಮೂಲಸೌಕರ್ಯಕ್ಕೆ ಮಾನವ ಸ್ಪರ್ಶವಿರುತ್ತದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.

“ಪ್ರತಿಯೊಬ್ಬ ಬಡವರಿಗೂ ರೂ. 5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುವ ಆಯುಷ್ಮಾನ್ ಭಾರತ್ ಯೋಜನೆಯು ನಮ್ಮ ಸಾಮಾಜಿಕ ಮೂಲಸೌಕರ್ಯ, ಕಾಶಿ, ಕೇದಾರನಾಥ, ಉಜ್ಜಯಿನಿಯಿಂದ ಪಂಢರಪುರಕ್ಕೆ ನಮ್ಮ ಸಾಂಸ್ಕೃತಿಕ ಮೂಲಸೌಕರ್ಯಗಳ ಮೂಲಕ ನಮ್ಮ ನಂಬಿಕೆಯ ಸ್ಥಳಗಳ ಅಭಿವೃದ್ಧಿಗೆ ಉದಾಹರಣೆಯಾಗಿದೆ. ಜನ್ ಧನ್ ಯೋಜನೆಯು 45 ಕೋಟಿಗೂ ಹೆಚ್ಚು ಬಡವರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕಿಸುತ್ತದೆ. ನಾಗ್ಪುರ ಏಮ್ಸ್ ನಂತಹ ಆಧುನಿಕ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಅಭಿಯಾನವು ವೈದ್ಯಕೀಯ ಮೂಲಸೌಕರ್ಯಕ್ಕೆ ಉದಾಹರಣೆಯಾಗಿದೆ. ಮೂಲಸೌಕರ್ಯವು ಕೇವಲ ನಿರ್ಜೀವ ರಸ್ತೆಗಳು ಮತ್ತು ಮೇಲ್ಸೇತುವೆಗಳನ್ನು ಒಳಗೊಳ್ಳಲು ಸಾಧ್ಯವಿಲ್ಲ, ಅದರ ವಿಸ್ತರಣೆಯು ತುಂಬಾ ದೊಡ್ಡದಾಗಿದೆ" ಎಂದು ಪ್ರಧಾನಮಂತ್ರಿಯವರು ಮೂಲಸೌಕರ್ಯಗಳ ಪ್ರಯೋಜನಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು.  

ಮೂವತ್ತರಿಂದ ಮೂವತ್ತೈದು ವರ್ಷಗಳ ಹಿಂದೆ ಸುಮಾರು ರೂ. 400 ಕೋಟಿಗಳ ಅಂದಾಜು ವೆಚ್ಚದಲ್ಲಿ ಶಂಕುಸ್ಥಾಪನೆ ಮಾಡಿದ ಗೋಸೆಖುರ್ದ್ ಅಣೆಕಟ್ಟು ಯೋಜನೆಯನ್ನು ಪ್ರಧಾನಮಂತ್ರಿ ಅವರು ಉದಾಹರಣೆಯಾಗಿ ಉಲ್ಲೇಖಿಸಿದರು. “ಅಣೆಕಟ್ಟಿನ ಅಂದಾಜು ವೆಚ್ಚ ಈಗ ರೂ. 18000 ಸಾವಿರ ಕೋಟಿಗೆ ಏರಿಕೆಯಾಗಿದೆ. 2017 ರಲ್ಲಿ ಡಬಲ್ ಇಂಜಿನ್ ಸರ್ಕಾರ ರಚನೆಯಾದ ನಂತರ, ಈ ಅಣೆಕಟ್ಟಿನ ಕಾಮಗಾರಿಯನ್ನು ವೇಗಗೊಳಿಸಲಾಗಿದೆ ಮತ್ತು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗಿದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು, ಹಾಗೂ ಈ ವರ್ಷ  ಅಣೆಕಟ್ಟು ಸಂಪೂರ್ಣ ಭರ್ತಿಯಾಗಿರುವ ಬಗ್ಗೆ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು. 

“ಆಜಾದಿ ಕಾ ಅಮೃತ್ ಕಾಲ್ ನಲ್ಲಿ, ದೇಶವು ಅಭಿವೃದ್ಧಿ ಹೊಂದಿದ ಭಾರತದ ಮಹಾನ್ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ ಮತ್ತು ಅದನ್ನು ರಾಷ್ಟ್ರದ ಸಾಮೂಹಿಕ ಶಕ್ತಿಯಿಂದ ಸಾಧಿಸಬಹುದು. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಮಂತ್ರವು ರಾಷ್ಟ್ರದ ಅಭಿವೃದ್ಧಿಗಾಗಿ ರಾಜ್ಯದ ಅಭಿವೃದ್ಧಿಯಾಗಿದೆ. ಅಭಿವೃದ್ಧಿ ಸೀಮಿತವಾದಾಗ ಅವಕಾಶಗಳೂ ಸೀಮಿತವಾಗುತ್ತವೆ. ಆಯ್ದ ಕೆಲವರಿಗೆ ಮಾತ್ರ ಶಿಕ್ಷಣವನ್ನು ಸೀಮಿತಗೊಳಿಸಿದಾಗ ರಾಷ್ಟ್ರದ ಪ್ರತಿಭೆಗಳು ಮುಂಚೂಣಿಗೆ ಬರಲು ಸಾಧ್ಯವಾಗಲಿಲ್ಲ, ಕೆಲವೇ ಜನರು ಬ್ಯಾಂಕ್ ಗಳಿಗೆ ಪ್ರವೇಶವನ್ನು ಹೊಂದಿರುವಾಗ ವ್ಯಾಪಾರ ವ್ಯವಹಾರವೂ ಸೀಮಿತವಾಗಿ ಉಳಿಯಿತು ಮತ್ತು ಉತ್ತಮ ಸಂಪರ್ಕವು ಕೆಲವರಲ್ಲಿ ಸೀಮಿತವಾದಾಗ, ಹಾಗೂ ಕೆಲವೇ ನಗರಗಳಿಗೆ ಬೆಳವಣಿಗೆ ಸೀಮಿತವಾದಾಗ, ಉಳಿದವರು ಅದರ ಪ್ರಯೋಜನದಿಂದ ವಂಚಿತರಾಗುತ್ತಾರೆ. ಇದರ ಪರಿಣಾಮವಾಗಿ ದೇಶದ ಹೆಚ್ಚಿನ ಜನಸಂಖ್ಯೆಯು ದೇಶದ ಅಭಿವೃದ್ಧಿಯ ಸಂಪೂರ್ಣ ಲಾಭವನ್ನು ಪಡೆಯುತ್ತಿಲ್ಲ ಅಥವಾ ಭಾರತದ ನಿಜವಾದ ಶಕ್ತಿಯು ಮುನ್ನೆಲೆಗೆ ಬರುತ್ತಿಲ್ಲ” ಎಂದು ಪ್ರಧಾನಮಂತ್ರಿಯವರು ಹೇಳಿದರು. “ಕಳೆದ 8 ವರ್ಷಗಳಲ್ಲಿ ಈ ಚಿಂತನೆ ಮತ್ತು ವಿಧಾನಗಳೆರಡೂ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್’ ತತ್ವಗಳೊಂದಿಗೆ ಬದಲಾಗಿದೆ. "ಮೊದಲು ವಂಚಿತರಾಗಿದ್ದವರು ಈಗ ಸರ್ಕಾರದ ಆದ್ಯತೆಯಾಗಿದ್ದಾರೆ", ಬದಲಾವಣೆ ಗುರುತಿಸಬಹುದಾಗಿದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು. “ಸರ್ಕಾರ ತನ್ನ ಯೋಜನೆಗಳನ್ನು ಲಿಂಕ್ ಮಾಡುವ ಮೂಲಕ ವಿದರ್ಭದ ರೈತರೂ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ದೊಡ್ಡ ಲಾಭವನ್ನು ಪಡೆದಿದ್ದಾರೆ ಮತ್ತು ಪಶುಪಾಲಕ ರೈತರಿಗೆ ಆದ್ಯತೆ ನೀಡುವ ಕಿಸಾನ್ ಕ್ರೆಡಿಟ್ ಕಾರ್ಡ್ನ ಸೌಲಭ್ಯಗಳ ಪ್ರಯೋಜನ ಹೆಚ್ಚು ಮಂದಿ ರೈತರು ಪಡೆದಿದ್ದಾರೆ” ಎಂದು ರೈತರ ನೇತೃತ್ವದ ಅಭಿವೃದ್ಧಿಯ ಕುರಿತು ಉದಾಹರಣೆ ನೀಡುತ್ತಾ ಪ್ರಧಾನಮಂತ್ರಿ ಅವರು  ಹೇಳಿದರು. 

“100 ಕ್ಕೂ ಹೆಚ್ಚು ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಪಟ್ಟಿ ಮಾಡಬಹುದು, ಆದರೆ, ಮರಾಠವಾಡ ಮತ್ತು ವಿದರ್ಭ ಜಿಲ್ಲೆಗಳು ಸೇರಿದಂತೆ ದೇಶದ 100 ಕ್ಕೂ ಹೆಚ್ಚು ಜಿಲ್ಲೆಗಳು ಅಭಿವೃದ್ಧಿಯ ಹಲವು ಮಾನದಂಡಗಳಲ್ಲಿ ಹಿಂದುಳಿದಿವೆ, ಕಳೆದ 8 ವರ್ಷಗಳಿಂದ, ನಾವು ಈ ವಂಚಿತ ಪ್ರದೇಶಗಳನ್ನು ತ್ವರಿತ ಅಭಿವೃದ್ಧಿಗಾಗಿ ಶಕ್ತಿಯ ನೂತನ ಕೇಂದ್ರಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು.  

ಭಾರತದಲ್ಲಿ ತ್ವರಿತ ಗತಿಯ ಅಡ್ಡಹಾದಿಯ(ಶಾರ್ಟ್-ಕಟ್) ರಾಜಕೀಯ ಹೊರಹೊಮ್ಮುವಿಕೆಯ ಬಗ್ಗೆ ಪ್ರಧಾನಮಂತ್ರಿಯವರು ಉಲ್ಲೇಖಿಸಿದರು.  “ರಾಜಕೀಯ ಪಕ್ಷಗಳು ಕಷ್ಟಪಟ್ಟು ಸಂಪಾದಿಸಿದ ತೆರಿಗೆದಾರರ ಹಣವನ್ನು ರಾಜಕೀಯ ಹಿತಾಸಕ್ತಿಗಾಗಿ ಲೂಟಿ ಮಾಡುತ್ತಿವೆ ಮತ್ತು ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಸರ್ಕಾರ ರಚಿಸುವ ಗುರಿಯೊಂದಿಗೆ ತ್ವರಿತ ಅಡ್ಡಹಾದಿ(ಶಾರ್ಟ್ಕಟ್)ಗಳನ್ನು ಅಳವಡಿಸಿಕೊಳ್ಳುತ್ತಿವೆ. ಮುಂದಿನ 25 ವರ್ಷಗಳಲ್ಲಿ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಶ್ರಮಿಸುತ್ತಿರುವ ಈ ಸಮಯದಲ್ಲಿ, ಕೆಲವು ರಾಜಕೀಯ ಪಕ್ಷಗಳು ತಮ್ಮ ಸ್ವಹಿತಾಸಕ್ತಿಗಾಗಿ ಭಾರತದ ಆರ್ಥಿಕತೆಯನ್ನು ನಾಶಮಾಡಲು ಬಯಸುತ್ತಿವೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಮೊದಲ ಕೈಗಾರಿಕಾ ಕ್ರಾಂತಿಯ ಲಾಭ ಪಡೆಯಲು ಸಾಧ್ಯವಾಗದೆ ಕಳೆದುಹೋದ ಅವಕಾಶಗಳು ಮತ್ತು ಎರಡನೇ-ಮೂರನೇ ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಭಾರತವು ಹಿಂದುಳಿದಿರುವ ಬಗ್ಗೆ ಪ್ರಧಾನಮಂತ್ರಿಯವರು ವಿಷಾದ ವ್ಯಕ್ತಪಡಿಸಿದರು. “ನಾಲ್ಕನೇ ಕೈಗಾರಿಕಾ ಕ್ರಾಂತಿಯ ಸಮಯ ಬಂದಾಗ ಭಾರತ ಅದನ್ನು ತಪ್ಪಿಸಿಕೊಳ್ಳಬಾರದು. ಯಾವುದೇ ದೇಶವು ತ್ವರಿತ ಗತಿಯ ಅಡ್ಡಹಾದಿ(ಶಾರ್ಟ್ಕಟ್)ಗಳೊಂದಿಗೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ, ದೀರ್ಘಾವಧಿಯ ದೂರದೃಷ್ಟಿಯೊಂದಿಗೆ ಶಾಶ್ವತ ಪರಿಹಾರವು ದೇಶದ ಪ್ರಗತಿಗೆ ಬಹಳ ಮುಖ್ಯವಾಗಿದೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.  

“ದಕ್ಷಿಣ ಕೊರಿಯಾ ಮತ್ತು ಸಿಂಗಾಪುರದಂತಹ ದೇಶಗಳು ಒಂದು ಕಾಲದಲ್ಲಿ ಬಡದೇಶವೆಂದು ಪರಿಗಣಿಸಲ್ಪಟ್ಟ ಪ್ರದೇಶಗಳಾಗಿದ್ದವು, ಆದರೆ ಮೂಲಸೌಕರ್ಯಗಳ ಅಭಿವೃದ್ಧಿಯ ಉತ್ಕರ್ಷದೊಂದಿಗೆ ತಮ್ಮ ಭವಿಷ್ಯವನ್ನು ಬದಲಾಯಿಸುವಲ್ಲಿ ಆ ದೇಶಗಳು ಯಶಸ್ವಿಯಾಗಿವೆ ಮತ್ತು ಈಗ ಆರ್ಥಿಕತೆಯ ದೊಡ್ಡ ಕೇಂದ್ರಗಳಾಗಿವೆ. ಈ ನಿಟ್ಟಿನಲ್ಲಿ ಮುಂದೆ ಹೋಗಲು ಸರಕಾರದ ಬೊಕ್ಕಸದ ಪ್ರತಿ ಪೈಸೆಯನ್ನೂ ಯುವ ಪೀಳಿಗೆಗೆ ಉಜ್ವಲ ಭವಿಷ್ಯ ನಿರ್ಮಿಸಲು ವಿನಿಯೋಗಿಸುವುದು ಇಂದಿನ ಅಗತ್ಯವಾಗಿದೆ” ಎಂದು ಉದಾಹರಣೆಗಳನ್ನು ಉಲ್ಲೇಖಮಾಡುತ್ತಾ ಪ್ರಧಾನಮಂತ್ರಿ ಅವರು ವಿವರಿಸಿದರು.  

 ‘ಕಡಿಮೆ ಗಳಿಸಿ, ಹೆಚ್ಚು ಖರ್ಚು ಮಾಡಿ’ ಎಂಬ ನೀತಿ ಅನುಸರಿಸುತ್ತಿರುವ ಸ್ವಾರ್ಥಿ ರಾಜಕೀಯ ಪಕ್ಷಗಳನ್ನು ಬಯಲಿಗೆಳೆಯುವಂತೆ ದೇಶದ ಯುವಕರು ಮತ್ತು ತೆರಿಗೆದಾರರನ್ನು ಪ್ರಧಾನಮಂತ್ರಿಯವರು ಒತ್ತಾಯಿಸಿದರು. “ಇಂತಹ ಕೆಟ್ಟ ನೀತಿ ನಿರೂಪಣೆಯಿಂದಾಗಿ ಜಗತ್ತಿನ ಹಲವು ದೇಶಗಳ ಇಡೀ ಆರ್ಥಿಕತೆ ಕುಸಿದಿರುವ ಬಗ್ಗೆ ವಿವರಿಸಿದರು. ಮತ್ತೊಂದೆಡೆ, ದೇಶದಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಸುಸ್ಥಿರ ಪರಿಹಾರಗಳ ಪ್ರಯತ್ನಗಳಿಗೆ ಜನರ ಬೆಂಬಲದ ಬಗ್ಗೆ ಪ್ರಧಾನಮಂತ್ರಿ ಅವರು ಸಂತೋಷ ವ್ಯಕ್ತಪಡಿಸಿದರು. "ಗುಜರಾತಿನ ಚುನಾವಣಾ ಫಲಿತಾಂಶಗಳು ಶಾಶ್ವತ ಅಭಿವೃದ್ಧಿ ಮತ್ತು ಶಾಶ್ವತ ಪರಿಹಾರದ ಆರ್ಥಿಕ ನೀತಿಯ ಫಲಿತಾಂಶವಾಗಿದೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು. 

ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಮಹಾರಾಷ್ಟ್ರದ ರಾಜ್ಯಪಾಲ ಶ್ರೀ ಭಗತ್ ಸಿಂಗ್ ಕೋಶ್ಯಾರಿ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು 

 ಹಿನ್ನೆಲೆ

 ನಾಗ್ಪುರ ಮೆಟ್ರೋ

ನಗರದ ಚಲನಶೀಲತೆಯ ಹೆಚ್ಚಳದಲ್ಲಿ ಕ್ರಾಂತಿ ಮೂಡಿಸುವ ಮತ್ತೊಂದು ಹಂತವಾಗಿ, ಪ್ರಧಾನಮಂತ್ರಿಯವರು 'ನಾಗ್ಪುರ ಮೆಟ್ರೋ ಹಂತ I' ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಖಾಪ್ರಿಯಿಂದ ಆಟೋಮೋಟಿವ್ ಸ್ಕ್ವೇರ್ (ಆರೆಂಜ್ ಲೈನ್) ಮತ್ತು ಪ್ರಜಾಪತಿ ನಗರದಿಂದ ಲೋಕಮಾನ್ಯ ನಗರ (ಆಕ್ವಾ ಲೈನ್) - ಖಾಪ್ರಿ ಮೆಟ್ರೋ ನಿಲ್ದಾಣದಲ್ಲಿ ಎರಡು ಮೆಟ್ರೋ ರೈಲುಗಳನ್ನು ಹಸಿರು ನಿಶಾನೆ ತೋರಿಸಿ ಪ್ರಧಾನಮಂತ್ರಿಯವರು ಚಾಲನೆ ಮಾಡಿದರು. ನಾಗ್ಪುರ ಮೆಟ್ರೋದ ಮೊದಲ ಹಂತವನ್ನು ರೂ. 8650 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ರೂ. 6700 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಿರುವ ನಾಗ್ಪುರ ಮೆಟ್ರೋ ಹಂತ- II ರ ಯೋಜನೆಗೆ ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. 


ರೈಲು ಯೋಜನೆಗಳು

ನಾಗ್ಪುರ ಮತ್ತು ಬಿಲಾಸ್ಪುರ್ ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ ಗೆ ನಾಗ್ಪುರ ರೈಲು ನಿಲ್ದಾಣದಲ್ಲಿ ಪ್ರಧಾನಮಂತ್ರಿಯವರು ಚಾಲನೆ ನೀಡಿದರು. 

ನಾಗ್ಪುರ ರೈಲು ನಿಲ್ದಾಣ ಮತ್ತು ಅಜ್ನಿ ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಕ್ರಮವಾಗಿ ಸುಮಾರು ರೂ. 590 ಕೋಟಿ ಮತ್ತು ರೂ. 360 ಕೋಟಿ ವೆಚ್ಚದಲ್ಲಿ ಮರುಅಭಿವೃದ್ಧಿಪಡಿಸಲು ಪ್ರಧಾನಮಂತ್ರಿಯವರು ಶಿಲಾನ್ಯಾಸ ನೆರವೇರಿಸಿದರು. ಪ್ರಧಾನಮಂತ್ರಿಯವರು ಸರ್ಕಾರಿ ನಿರ್ವಹಣಾ ಡಿಪೋ, ಅಜ್ನಿ (ನಾಗ್ಪುರ) ಮತ್ತು ಕೊಹ್ಲಿ-ನಾರ್ಖರ್ ರೈಲ್ವೇ ವಿಭಾಗದ ನಾಗ್ಪುರ-ಇಟಾರ್ಸಿಯ ಮೂರನೇ ರೈಲು ಹಳಿಯ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಯೋಜನೆಗಳನ್ನು ಕ್ರಮವಾಗಿ ಸುಮಾರು ರೂ. 110 ಕೋಟಿ ಮತ್ತು ರೂ. ಸುಮಾರು 450 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. 


 ಸಮೃದ್ಧಿ ಮಹಾಮಾರ್ಗ

ಪ್ರಧಾನಮಂತ್ರಿಯವರು ಹಿಂದೂ ಹೃದಯಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್ ಇದರ ಮೊದಲ ಹಂತವನ್ನು ಉದ್ಘಾಟಿಸಿದರು, ಇದು 520 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ ಮತ್ತು ನಾಗ್ಪುರ ಮತ್ತು ಶಿರಡಿಯನ್ನು ಸಂಪರ್ಕಿಸುತ್ತದೆ.

ಸಮೃದ್ಧಿ ಮಹಾಮಾರ್ಗ್ ಅಥವಾ ನಾಗ್ಪುರ-ಮುಂಬೈ ಸೂಪರ್ ಕಮ್ಯುನಿಕೇಷನ್ ಎಕ್ಸ್ಪ್ರೆಸ್ ವೇ ಯೋಜನೆಯು ದೇಶದಾದ್ಯಂತ ಸುಧಾರಿತ ಸಂಪರ್ಕ ಮತ್ತು ಮೂಲಸೌಕರ್ಯಗಳ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. 701 ಕಿಮೀ ಎಕ್ಸ್ಪ್ರೆಸ್ವೇ - ಸುಮಾರು ರೂ. 55,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ , ಇದು ಭಾರತದ ಅತಿ ಉದ್ದದ ಎಕ್ಸ್ಪ್ರೆಸ್ ವೇ ಗಳಲ್ಲಿ ಒಂದಾಗಿದೆ, ಇದು ಮಹಾರಾಷ್ಟ್ರದ 10 ಜಿಲ್ಲೆಗಳು ಮತ್ತು ಅಮರಾವತಿ, ಔರಂಗಾಬಾದ್ ಮತ್ತು ನಾಸಿಕ್ ಗಳ ಪ್ರಮುಖ ನಗರ ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಎಕ್ಸ್ಪ್ರೆಸ್ ವೇ ಪಕ್ಕದ 14 ಜಿಲ್ಲೆಗಳ ಸಂಪರ್ಕವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಹೀಗಾಗಿ ವಿದರ್ಭ, ಮರಾಠವಾಡ ಮತ್ತು ಉತ್ತರ ಮಹಾರಾಷ್ಟ್ರ ಪ್ರದೇಶಗಳು ಸೇರಿದಂತೆ ರಾಜ್ಯದ ಸುಮಾರು 24 ಜಿಲ್ಲೆಗಳ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. 

 ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಡಿಯಲ್ಲಿ ಸಮಗ್ರ ಯೋಜನೆ ಮತ್ತು ಮೂಲಸೌಕರ್ಯ ಸಂಪರ್ಕ ಯೋಜನೆಗಳ ಕುರಿತು ತನ್ನ ದೂರದೃಷ್ಟಿಯನ್ನು ಪ್ರಧಾನಮಂತ್ರಿಯವರು ವಿವರಿಸಿದರು. ದೆಹಲಿ - ಮುಂಬೈ ಎಕ್ಸ್ಪ್ರೆಸ್ ವೇ, ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್ ಮತ್ತು ಅಜಂತಾ ಎಲ್ಲೋರಾ ಗುಹೆಗಳು, ಶಿರಡಿ, ವೆರುಲ್, ಲೋನಾರ್ ಮುಂತಾದ ಪ್ರವಾಸಿ ಸ್ಥಳಗಳಿಗೆ ಸಮೃದ್ಧಿ ಮಹಾಮಾರ್ಗ್ ಸಂಪರ್ಕ ಕಲ್ಪಿಸುತ್ತದೆ. ಸಮೃದ್ಧಿ ಮಹಾಮಾರ್ಗವು ಮಹಾರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಉತ್ತೇಜನವನ್ನು ನೀಡುವಲ್ಲಿ ಬದಲಾವಣೆಯನ್ನು ತರುತ್ತದೆ. 

 
ಏಮ್ಸ್ (ಎ.ಐ.ಐ.ಎಂ.ಎಸ್.) ನಾಗ್ಪುರ

ದೇಶಾದ್ಯಂತ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಪ್ರಧಾನಮಂತ್ರಿಯವರ ಬದ್ಧತೆಯು ಏಮ್ಸ್ (ಎ.ಐ.ಐ.ಎಂ.ಎಸ್.)  ನಾಗ್ಪುರವನ್ನು ರಾಷ್ಟ್ರಕ್ಕೆ ಸಮರ್ಪಿಸುವುದರ ಮೂಲಕ ಬಲಗೊಳ್ಳುತ್ತದೆ. ಜುಲೈ 2017 ರಲ್ಲಿ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ಮಾಡಿದ ಆಸ್ಪತ್ರೆಯನ್ನು ಕೇಂದ್ರ ಸರ್ಕಾರದ ಯೋಜನೆಯಾದ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಸ್ಥಾಪಿಸಲಾಗಿದೆ.  
ಏಮ್ಸ್ (ಎ.ಐ.ಐ.ಎಂ.ಎಸ್.) ನಾಗ್ಪುರವನ್ನು ರೂ. 1575 ಕೋಟಿಗಿಂತ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ, ಇದು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಯಾಗಿದ್ದು, ಹೊರರೋಗಿ, ಒಳರೋಗಿ, ರೋಗನಿರ್ಣಯ ಸೇವೆಗಳು, ಆಪರೇಷನ್ ಥಿಯೇಟರ್ಗಳು ಮತ್ತು ಎಲ್ಲಾ ಪ್ರಮುಖ ವಿಶೇಷತೆ ಮತ್ತು ಸೂಪರ್ ಸ್ಪೆಷಾಲಿಟಿ ವಿಷಯಗಳನ್ನು ಒಳಗೊಂಡ 38 ವೈದ್ಯಕೀಯ ವಿಭಾಗಗಳನ್ನು ಹೊಂದಿದೆ. ಆಸ್ಪತ್ರೆಯು ಮಹಾರಾಷ್ಟ್ರದ ವಿದರ್ಭ ಪ್ರದೇಶಕ್ಕೆ ಆಧುನಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತದೆ ಮತ್ತು ಗಡ್ಚಿರೋಲಿ, ಗೊಂಡಿಯಾ ಮತ್ತು ಮೆಲ್ಘಾಟ್ ಸುತ್ತಮುತ್ತಲಿನ ಬುಡಕಟ್ಟು ಪ್ರದೇಶಗಳಿಗೆ ಈ ಆಸ್ಪತ್ರೆಯು ವರದಾನವಾಗಿದೆ. 

 

 ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಒನ್ ಹೆಲ್ತ್, ನಾಗ್ಪುರ

 ನಾಗ್ಪುರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಒನ್ ಹೆಲ್ತ್ (ಎನ್. ಐ. ಒ.)ಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದ್ದು, 'ಒಂದು ಆರೋಗ್ಯ' ಯೋಜನೆಯಡಿಯಲ್ಲಿ ದೇಶದಲ್ಲಿ ಆರೋಗ್ಯ ಸೇವಾ ಸಾಮರ್ಥ್ಯ ಮತ್ತು ಮೂಲಸೌಕರ್ಯಗಳನ್ನು ನಿರ್ಮಿಸುವಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ. 

ಮಾನವನ ಆರೋಗ್ಯವು ಪ್ರಾಣಿಗಳ ಆರೋಗ್ಯ ಮತ್ತು ಪರಿಸರದೊಂದಿಗೆ ಸಂಪರ್ಕ ಹೊಂದಿದೆ, ಮಾನವರನ್ನು ಬಾಧಿಸುವ ಹೆಚ್ಚಿನ ಸಾಂಕ್ರಾಮಿಕ ರೋಗಗಳು ಪ್ರಕೃತಿಯಲ್ಲಿ ಝೂನೋಟಿಕ್ (ಮನುಷ್ಯನಿಂದ ಪ್ರಾಣಿಗಳಿಗೆ) ರೂಪವಾಗಿರುತ್ತದೆ ಎಂದು ‘ಒಂದು ಆರೋಗ್ಯ’ ಉಪಕ್ರಮವು ಹೇಳುತ್ತದೆ. ಸಂಸ್ಥೆಯು - ರೂ. 110 ಕೋಟಿಗಿಂತ ಹೆಚ್ಚು ವೆಚ್ಚದಲ್ಲಿ ಸ್ಥಾಪನೆಯಾಗಲಿದೆ ಹಾಗೂ ಆರೋಗ್ಯ ಕ್ಷೇತ್ರದ ಎಲ್ಲಾ ಪಾಲುದಾರರೊಂದಿಗೆ ಸಹಕರಿಸಲಿದೆ ಮತ್ತು ಸಮನ್ವಯಗೊಳಿಸಲಿದೆ. ಈ ಆಸ್ಪತ್ರೆಯು ದೇಶಾದ್ಯಂತ 'ಒಂದು ಆರೋಗ್ಯ' ಉಪಕ್ರಮದಲ್ಲಿ ಸಂಶೋಧನೆ ಮತ್ತು ಆರೋಗ್ಯ ಸೇವಾ ಸಾಮರ್ಥ್ಯ ವರ್ಧನೆಯನ್ನು ಸುಧಾರಿಸಲು ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿದೆ.
 

 ಇತರ ಯೋಜನೆಗಳು

ನಾಗ್ಪುರದಲ್ಲಿ ನಾಗ್ ನದಿಯ ಮಾಲಿನ್ಯ ತಗ್ಗಿಸುವ ಯೋಜನೆಯ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಿದರು. ರಾಷ್ಟ್ರೀಯ ನದಿ ಸಂರಕ್ಷಣಾ ಯೋಜನೆ (ಎನ್. ಆರ್. ಸಿ. ಪಿ.) ಅಡಿಯಲ್ಲಿ – ರೂ. 1925 ಕೋಟಿಗೂ ಅಧಿಕ ವೆಚ್ಚದಲ್ಲಿ – ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು. 
  
 ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ, ವಿಶೇಷವಾಗಿ ಬುಡಕಟ್ಟು ಸಮುದಾಯಗಳ ಜನಸಂಖ್ಯೆ ಅಧಿಕವಿರುವಲ್ಲಿ ʼಸಿಕಲ್ ಸೆಲ್ʼ ಕಾಯಿಲೆಯ ಹರಡುವಿಕೆಯು ತುಲನಾತ್ಮಕವಾಗಿ ಹೆಚ್ಚಾಗಿದೆ. ನಮ್ಮ ದೇಶದಲ್ಲಿ ಥಲಸ್ಸೆಮಿಯಾ ಮತ್ತು ಹೆಚ್.ಬಿ.ಇ. ನಂತಹ ಇತರ ಹಿಮೋಗ್ಲೋಬಿನೋಪತಿಗಳೊಂದಿಗೆ ಸಂಬಂಧಿಸಿದ ಕಾಯಿಲೆಗಳಲ್ಲಿ ಈ ಸಿಕಲ್ ಸೆಲ್ ಕಾಯಿಲೆ ಗಮನಾರ್ಹವಾದ ರೋಗದ ಹೆಚ್ಚಳವನ್ನು  ಉಂಟುಮಾಡುತ್ತಿವೆ. ಈ ಸಮಸ್ಯೆಯನ್ನು ಪರಿಹರಿಸಲು, ಪ್ರಧಾನಮಂತ್ರಿಯವರು ಫೆಬ್ರವರಿ 2019 ರಲ್ಲಿ 'ಸೆಂಟರ್ ಫಾರ್ ರಿಸರ್ಚ್, ಮ್ಯಾನೇಜ್ಮೆಂಟ್ ಅಂಡ್ ಕಂಟ್ರೋಲ್ ಆಫ್ ಹಿಮೋಗ್ಲೋಬಿನೋಪತಿಸ್, ಚಂದ್ರಾಪುರ' ಎಂಬ ಸಂಸ್ಥೆಗೆ ಅಡಿಪಾಯವನ್ನು ಹಾಕಿದರು. ಇಂದು ಪ್ರಧಾನಮಂತ್ರಿಯವರು ಆ ಸಂಸ್ಥೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ದೇಶದಲ್ಲಿ ಹಿಮೋಗ್ಲೋಬಿನೋಪತಿ ಕ್ಷೇತ್ರದಲ್ಲಿ ನವೀನ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಶ್ರೇಷ್ಠತೆ ತರುವ ಪ್ರಧಾನ ಕೇಂದ್ರವಾಗಿ ಇದು ಹೊರಹೊಮ್ಮಲಿದೆ.

ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ & ಟೆಕ್ನಾಲಜಿ (ಸಿ.ಐ.ಪಿ.ಇ.ಟಿ), ಚಂದ್ರಾಪುರವನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು. ಪಾಲಿಮರ್ ಮತ್ತು ಸಂಬಂಧಿತ ಕೈಗಾರಿಕೆಗಳ ಅವಶ್ಯಕತೆಗಳನ್ನು ಪೂರೈಸಲು ನುರಿತ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಈ ಸಂಸ್ಥೆ ಹೊಂದಿದೆ.  

.

*****


(Release ID: 1882593) Visitor Counter : 171