ಪ್ರಧಾನ ಮಂತ್ರಿಯವರ ಕಛೇರಿ

ನವೆಂಬರ್ 19ರಂದು ಅರುಣಾಚಲ ಪ್ರದೇಶ ಮತ್ತು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿರುವ ಪ್ರಧಾನಿ 


ಈಶಾನ್ಯದಲ್ಲಿ ಸಂಪರ್ಕವನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿ, ಅರುಣಾಚಲ ಪ್ರದೇಶದ ಮೊದಲ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣವನ್ನು -  ಇಟಾನಗರದಲ್ಲಿ 'ಡೋನಿ ಪೋಲೊ ಏರ್‌ಪೋರ್ಟ್‌ʼ ಅನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ  
 
ಈ ವಿಮಾನ ನಿಲ್ದಾಣದ ಹೆಸರು, ಅರುಣಾಚಲ ಪ್ರದೇಶದಲ್ಲಿ ಸೂರ್ಯ ('ಡೋನಿ') ಮತ್ತು ಚಂದ್ರನ ('ಪೋಲೋ') ಬಗ್ಗೆ ಅಲ್ಲಿನ ಜನರು ಹೊಂದಿರುವ ಪುರಾತನ ಸ್ಥಳೀಯ ಗೌರವವನ್ನು ಪ್ರತಿಬಿಂಬಿಸುತ್ತದೆ 
  
640 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ವಿಮಾನ ನಿಲ್ದಾಣವು ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಈ ಪ್ರದೇಶದಲ್ಲಿ ವ್ಯಾಪಾರ, ಪ್ರವಾಸೋದ್ಯಮದ ಬೆಳವಣಿಗೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ 

8450 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ 600 ಮೆಗಾವ್ಯಾಟ್ ಕಮೆಂಗ್ ಜಲವಿದ್ಯುತ್ ಸ್ಥಾವರವನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ 
 
ಈ ಯೋಜನೆಯು ಅರುಣಾಚಲ ಪ್ರದೇಶವನ್ನು ವಿದ್ಯುತ್ ಸಮೃದ್ಧ ರಾಜ್ಯವನ್ನಾಗಿ ಮಾಡುತ್ತದೆ 
 
 ವಾರಣಾಸಿಯಲ್ಲಿ ಆಯೋಜಿಸಲಾಗಿರುವ ಒಂದು ತಿಂಗಳ ಕಾಲ ನಡೆಯಲಿರುವ 'ಕಾಶಿ ತಮಿಳು ಸಂಗಮಂ' ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ 
  
ಈ ಕಾರ್ಯಕ್ರಮ

Posted On: 17 NOV 2022 3:30PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ನವೆಂಬರ್ 19ರಂದು ಅರುಣಾಚಲ ಪ್ರದೇಶ ಮತ್ತು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 9.30ರ ಸುಮಾರಿಗೆ ಪ್ರಧಾನಮಂತ್ರಿಯವರು ಇಟಾನಗರದ ʻಡೋನಿ ಪೋಲೊ ವಿಮಾನ ನಿಲ್ದಾಣʼವನ್ನು ಉದ್ಘಾಟಿಸಲಿದ್ದಾರೆ ಮತ್ತು 600 ಮೆಗಾವ್ಯಾಟ್ ಸಾಮರ್ಥ್ಯದ ಕಮೆಂಗ್ ಜಲವಿದ್ಯುತ್ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅದಾದ ಬಳಿಕ, ಅವರು ಉತ್ತರ ಪ್ರದೇಶದ ವಾರಾಣಸಿಯನ್ನು ತಲುಪಲಿದ್ದು, ಅಲ್ಲಿ ಅವರು ಮಧ್ಯಾಹ್ನ 2 ಗಂಟೆಗೆ 'ಕಾಶಿ ತಮಿಳು ಸಂಗಮಂ' ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. 

ಅರುಣಾಚಲ ಪ್ರದೇಶದಲ್ಲಿ ಪ್ರಧಾನ ಮಂತ್ರಿ 

ಈಶಾನ್ಯದಲ್ಲಿ ಸಂಪರ್ಕವನ್ನು ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿ, ಪ್ರಧಾನಮಂತ್ರಿಯವರು ಅರುಣಾಚಲ ಪ್ರದೇಶದ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವಾದ ಇಟಾನಗರದ 'ಡೋನಿ ಪೋಲೊ ವಿಮಾನ ನಿಲ್ದಾಣʼವನ್ನು ಉದ್ಘಾಟಿಸಲಿದ್ದಾರೆ. ವಿಮಾನ ನಿಲ್ದಾಣದ ಹೆಸರು ಅರುಣಾಚಲ ಪ್ರದೇಶದ ಸಂಪ್ರದಾಯಗಳು ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಮತ್ತು ಸೂರ್ಯ ('ಡೋನಿ') ಮತ್ತು ಚಂದ್ರನ ('ಪೋಲೊ') ಬಗ್ಗೆ ರಾಜ್ಯವು ಹೊಂದಿರುವ ಪುರಾತನ ಸ್ಥಳೀಯ ಗೌರವವನ್ನು ಪ್ರತಿಬಿಂಬಿಸುತ್ತದೆ. 

ಅರುಣಾಚಲ ಪ್ರದೇಶದ ಮೊದಲ ಗ್ರೀನ್‌ಫೀಲ್ಡ್‌ ಏರ್‌ಪೋರ್ಟ್‌ ಎನಿಸಿರುವ ಈ ವಿಮಾನ ನಿಲ್ದಾಣವನ್ನು 690 ಎಕರೆ ಪ್ರದೇಶದಲ್ಲಿ 640 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. 2300 ಮೀಟರ್ ರನ್‌ವೇ ಹೊಂದಿರುವ ಈ ವಿಮಾನ ನಿಲ್ದಾಣವು, ಎಲ್ಲಾ ಹವಾಮಾನ ದಿನದ ಕಾರ್ಯಾಚರಣೆಗಳಿಗೆ ಸೂಕ್ತವಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಅತ್ಯಾಧುನಿಕ ಕಟ್ಟಡವಾಗಿದ್ದು, ಇದು ಇಂಧನ ದಕ್ಷತೆ, ನವೀಕರಿಸಬಹುದಾದ ಇಂಧನ ಮತ್ತು ಸಂಪನ್ಮೂಲಗಳ ಮರುಬಳಕೆಯನ್ನು ಉತ್ತೇಜಿಸುತ್ತದೆ. 

ಇಟಾನಗರದಲ್ಲಿ ಹೊಸ ವಿಮಾನ ನಿಲ್ದಾಣದ ಅಭಿವೃದ್ಧಿಯು ಈ ಪ್ರದೇಶದ ಸಂಪರ್ಕವನ್ನು ಸುಧಾರಿಸುವುದಲ್ಲದೆ, ವ್ಯಾಪಾರ ಮತ್ತು ಪ್ರವಾಸೋದ್ಯಮದ ಬೆಳವಣಿಗೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ಆ ಮೂಲಕ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ. 

ದಿನದ ಕಾರ್ಯಕ್ರಮದ ಭಾಗವಾಗಿ ಪ್ರಧಾನಮಂತ್ರಿಯವರು 600 ಮೆಗಾವ್ಯಾಟ್ ಸಾಮರ್ಥ್ಯದ ಕಮೆಂಗ್ ಜಲವಿದ್ಯುತ್ ಸ್ಥಾವರವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ 80 ಕಿ.ಮೀ.ಗಿಂತಲೂ ಹೆಚ್ಚು ಪ್ರದೇಶದಲ್ಲಿ 8450 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಯೋಜನೆಯು ಅರುಣಾಚಲ ಪ್ರದೇಶವನ್ನು ವಿದ್ಯುತ್ ಸಮೃದ್ಧ ರಾಜ್ಯವನ್ನಾಗಿ ಮಾಡುತ್ತದೆ. ಗ್ರಿಡ್ ಸ್ಥಿರತೆ ಮತ್ತು ಸಂಯೋಜನೆಯ ದೃಷ್ಟಿಯಿಂದ ರಾಷ್ಟ್ರೀಯ ಗ್ರಿಡ್‌ಗೆ ಪ್ರಯೋಜನ ನೀಡುತ್ತದೆ. ಹಸಿರು ಇಂಧನದ ಅಳವಡಿಕೆಯನ್ನು ಹೆಚ್ಚಿಸುವ ದೇಶದ ಬದ್ಧತೆಯನ್ನು ಪೂರೈಸಲು ಈ ಯೋಜನೆಯು ಪ್ರಮುಖ ರೀತಿಯಲ್ಲಿ ಕೊಡುಗೆ ನೀಡುತ್ತದೆ.

ವಾರಾಣಸಿಯಲ್ಲಿ ಪ್ರಧಾನ ಮಂತ್ರಿ 

ಪ್ರಧಾನ ಮಂತ್ರಿಯವರ ದೂರದೃಷ್ಟಿಗೆ ಅನುಗುಣವಾಗಿ, 'ಏಕ ಭಾರತ, ಶ್ರೇಷ್ಠ ಭಾರತ' ಪರಿಕಲ್ಪನೆಯನ್ನು ಉತ್ತೇಜಿಸಲು ಸರಕಾರದ ಪ್ರಧಾನವಾಗಿ ಗಮನ ಕೇಂದ್ರೀಕರಿಸುತ್ತಿದೆ. ಈ ದೂರದೃಷ್ಟಿಯನ್ನು ಪ್ರತಿಬಿಂಬಿಸುವ ಮತ್ತೊಂದು ಉಪಕ್ರಮವಾಗಿ, 'ಕಾಶಿ ತಮಿಳು ಸಂಗಮಂ' ಎಂಬ ಒಂದು ತಿಂಗಳ ಕಾರ್ಯಕ್ರಮವನ್ನು ಕಾಶಿಯಲ್ಲಿ (ವಾರಾಣಸಿ) ಆಯೋಜಿಸಲಾಗುತ್ತಿದೆ ಮತ್ತು ನವೆಂಬರ್ 19ರಂದು ಪ್ರಧಾನಮಂತ್ರಿಯವರು ಇದನ್ನು ಉದ್ಘಾಟಿಸಲಿದ್ದಾರೆ. 

ದೇಶದ ಎರಡು ಅತ್ಯಂತ ಪ್ರಮುಖ ಮತ್ತು ಪ್ರಾಚೀನ ಶಿಕ್ಷಣ ಕ್ಷೇತ್ರಗಳೆನಿಸಿದ  ತಮಿಳುನಾಡು ಮತ್ತು ಕಾಶಿ ನಡುವಿನ ಹಳೆಯ ಸಂಬಂಧಗಳನ್ನು ಸಂಭ್ರಮಿಸುವುದು, ಪುನರುಚ್ಚರಿಸುವುದು ಮತ್ತು ಮರುಶೋಧಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಎರಡೂ ಪ್ರದೇಶಗಳ ವಿದ್ವಾಂಸರು, ವಿದ್ಯಾರ್ಥಿಗಳು, ದಾರ್ಶನಿಕರು, ವ್ಯಾಪಾರಿಗಳು, ಕುಶಲಕರ್ಮಿಗಳು, ಕಲಾವಿದರು ಸೇರಿದಂತೆ ಜೀವನದ ಎಲ್ಲಾ ವರ್ಗದ ಜನರಿಗೆ ಪರಸ್ಪರ ಒಗ್ಗೂಡಲು, ಅವರ ಜ್ಞಾನ, ಸಂಸ್ಕೃತಿ ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಹಾಗೂ ಪರಸ್ಪರರ ಅನುಭವದಿಂದ ಕಲಿಯಲು ಅವಕಾಶ ಒದಗಿಸುವ ಗುರಿಯನ್ನು ಈ ಕಾರ್ಯಕ್ರಮವು ಹೊಂದಿದೆ.

ತಮಿಳುನಾಡಿನಿಂದ 2500ಕ್ಕೂ ಹೆಚ್ಚು ಪ್ರತಿನಿಧಿಗಳು ಕಾಶಿಗೆ ಭೇಟಿ ನೀಡಲಿದ್ದಾರೆ. ಒಂದೇ ರೀತಿಯ ವ್ಯಾಪಾರ, ವೃತ್ತಿ ಮತ್ತು ಆಸಕ್ತಿಯ ಸ್ಥಳೀಯ ಜನರೊಂದಿಗೆ ಸಂವಹನ ನಡೆಸಲು ಅವರು ವಿಚಾರ ಸಂಕಿರಣಗಳು, ಕ್ಷೇತ್ರ ಭೇಟಿಗಳು ಇತ್ಯಾದಿಗಳಲ್ಲಿ ಭಾಗವಹಿಸುತ್ತಾರೆ. ಎರಡೂ ಪ್ರದೇಶಗಳ ಕೈಮಗ್ಗಗಳು, ಕರಕುಶಲ ವಸ್ತುಗಳು, ʻಒ.ಡಿ.ಒ.ಪಿ.ʼ ಉತ್ಪನ್ನಗಳು, ಪುಸ್ತಕಗಳು, ಸಾಕ್ಷ್ಯಚಿತ್ರಗಳು, ಪಾಕಪದ್ಧತಿ, ಕಲಾ ಪ್ರಕಾರಗಳು, ಇತಿಹಾಸ, ಪ್ರವಾಸಿ ಸ್ಥಳಗಳು ಇತ್ಯಾದಿಗಳು ಒಂದು ತಿಂಗಳ ಕಾಲ ಕಾಶಿಯಲ್ಲಿ ಪ್ರದರ್ಶನಗೊಳ್ಳಲಿವೆ. 

ಈ ಪ್ರಯತ್ನವು ಭಾರತೀಯ ಜ್ಞಾನ ವ್ಯವಸ್ಥೆಗಳ ಸಂಪತ್ತನ್ನು ಆಧುನಿಕ ಜ್ಞಾನ ವ್ಯವಸ್ಥೆಗಳೊಂದಿಗೆ ಸಂಯೋಜಿಸುವ ʻನೂತನ ರಾಷ್ಟ್ರೀಯ ಶಿಕ್ಷಣ ನೀತಿʼಯ (ಎನ್ಇಪಿ 2020) ಧ್ಯೇಯಕ್ಕೆ ಅನುಗುಣವಾಗಿದೆ. ಐಐಟಿ ಮದ್ರಾಸ್ ಮತ್ತು ಬನಾರಸ್‌ ಹಿಂದೂ ವಿಶ್ವವಿದ್ಯಾಲಯ(ಬಿಎಚ್‌ಯು) ಈ ಕಾರ್ಯಕ್ರಮದ ಎರಡು ಅನುಷ್ಠಾನ ಸಂಸ್ಥೆಗಳಾಗಿವೆ. 

*****
 



(Release ID: 1876817) Visitor Counter : 141