ಪ್ರಧಾನ ಮಂತ್ರಿಯವರ ಕಛೇರಿ

ಜಿ 20 ನಾಯಕರ ಶೃಂಗಸಭೆಗಾಗಿ ಬಾಲಿಗೆ ತೆರಳುವ ಮುನ್ನ ಪ್ರಧಾನಮಂತ್ರಿಯವರು ನೀಡಿದ ಹೇಳಿಕೆ

Posted On: 14 NOV 2022 9:14AM by PIB Bengaluru

ಇಂಡೋನೇಷ್ಯಾದ ಅಧ್ಯಕ್ಷತೆಯಲ್ಲಿ ನಡೆಯಲಿರುವ 17ನೇ ಜಿ-20 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನಾನು 2022ರ ನವೆಂಬರ್ 14ರಿಂದ16ರವರೆಗೆ ಇಂಡೋನೇಷ್ಯಾದ ಬಾಲಿಗೆ ಭೇಟಿ ನೀಡಲಿದ್ದೇನೆ.

ಬಾಲಿ ಶೃಂಗಸಭೆಯಲ್ಲಿ, ಜಾಗತಿಕ ವೃದ್ಧಿ, ಆಹಾರ ಮತ್ತು ಇಂಧನ ಭದ್ರತೆ, ಪರಿಸರ, ಆರೋಗ್ಯ ಮತ್ತು ಡಿಜಿಟಲ್ ರೂಪಾಂತರದಂತಹ ಜಾಗತಿಕ ಕಾಳಜಿಯ ಪ್ರಮುಖ ವಿಷಯಗಳ ಪುನಶ್ಚೇತನ ಕುರಿತಂತೆ ನಾನು ಇತರ ಜಿ 20  ನಾಯಕರೊಂದಿಗೆ ವಿಸ್ತೃತ ಚರ್ಚೆ ನಡೆಸಲಿದ್ದೇನೆ. ಜಿ 20 ಶೃಂಗಸಭೆಯ ವೇಳೆ, ನಾನು ಈ ಶೃಂಗದಲ್ಲಿ ಭಾಗವಹಿಸುವ ಇತರ ಹಲವಾರು ರಾಷ್ಟ್ರಗಳ ನಾಯಕರನ್ನು ಭೇಟಿಯಾಗಲಿದ್ದು, ಅವರೊಂದಿಗೆ ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳ ಪ್ರಗತಿಯನ್ನು ಪರಿಶೀಲಿಸಲಿದ್ದೇನೆ. 2022ರ ನವೆಂಬರ್ 15 ರಂದು ಬಾಲಿಯಲ್ಲಿ ನಡೆಯಲಿರುವ ಸ್ವಾಗತ ಸಮಾರಂಭದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲು ನಾನು ಎದುರು ನೋಡುತ್ತಿದ್ದೇನೆ.

ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೋ ಅವರು ಬಾಲಿ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಜಿ 20ರ ಅಧ್ಯಕ್ಷತೆಯನ್ನು ಭಾರತಕ್ಕೆ ಹಸ್ತಾಂತರಿಸಲಿದ್ದು,  ನಮ್ಮ ದೇಶ ಮತ್ತು ನಾಗರಿಕರಿಗೆ ಮಹತ್ವದ ಕ್ಷಣವಾಗಿದೆ. 2022ರ ಡಿಸೆಂಬರ್ 1 ರಿಂದ ಭಾರತವು ಅಧಿಕೃತವಾಗಿ ಜಿ 20ರ ಅಧ್ಯಕ್ಷ ಸ್ಥಾನವನ್ನು  ವಹಿಸಿಕೊಳ್ಳಲಿದೆ. ಮುಂದಿನ ವರ್ಷ ನಾವು ನಡೆಸಲಿರುವ ಜಿ 20 ಶೃಂಗಸಭೆಗೆ ಜಿ 20 ಸದಸ್ಯರು ಮತ್ತು ಇತರ ಆಹ್ವಾನಿತರಿಗೆ ನಾನು ನನ್ನ ವೈಯಕ್ತಿಕ ಆಹ್ವಾನವನ್ನು ನೀಡುತ್ತೇನೆ.

ಜಿ-20 ಶೃಂಗಸಭೆಯಲ್ಲಿ ನನ್ನ ಸಂವಾದದ ವೇಳೆ, ನಾನು ಭಾರತದ ಸಾಧನೆಗಳನ್ನು ಮತ್ತು ಜಾಗತಿಕ ಸವಾಲುಗಳನ್ನು ಸಾಮೂಹಿಕವಾಗಿ ಎದುರಿಸುವ ನಮ್ಮ ಅಚಲ ಬದ್ಧತೆಯನ್ನು ಎತ್ತಿ ತೋರಿಸಲಿದ್ದೇನೆ. "ವಸುಧೈವ ಕುಟುಂಬಕಂ" ಅಥವಾ "ಒಂದು ಭೂಮಿ ಒಂದು ಕುಟುಂಬ ಒಂದು ಭವಿಷ್ಯ" ಎಂಬ ಧ್ಯೇಯವಾಕ್ಯದಲ್ಲಿ ಭಾರತದ ಜಿ 20 ಅಧ್ಯಕ್ಷ ಸ್ಥಾನವು ಮುನ್ನಡೆಯುತ್ತದೆ, ಇದು ಎಲ್ಲರಿಗೂ ಸಮಾನ ಪ್ರಗತಿಯ ಸಂದೇಶವನ್ನು ಸಾರುತ್ತದೆ ಮತ್ತು ಎಲ್ಲರಿಗೂ ಹಂಚಿಕೆಯ ಭವಿಷ್ಯವನ್ನು ಒತ್ತಿಹೇಳುತ್ತದೆ.

*****



(Release ID: 1875767) Visitor Counter : 168