ಪ್ರಧಾನ ಮಂತ್ರಿಯವರ ಕಛೇರಿ
ಅಯೋಧ್ಯೆಯ ಶ್ರೀ ರಾಮ್ ಕಥಾ ಪಾರ್ಕ್‌ನಲ್ಲಿ ಭಗವಾನ್ ಶ್ರೀ ರಾಮನ ರಾಜ್ಯಾಭಿಷೇಕದ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಭಾಷಾಂತರ
Posted On:
23 OCT 2022 7:50PM by PIB Bengaluru
ಜೈ ಸಿಯಾ ರಾಮ್!
ಜೈ ಜೈ ಸಿಯಾ ರಾಮ್!
ಕಾರ್ಯಕ್ರಮದಲ್ಲಿ ಉಪಸ್ಥಿತರಿರುವಂತಹ ಉತ್ತರ ಪ್ರದೇಶದ ರಾಜ್ಯಪಾಲೆ ಶ್ರೀಮತಿ ಆನಂದಿಬೆನ್ ಪಟೇಲ್ ಅವರೇ, ಜನಪ್ರಿಯ ಮತ್ತು ಕರ್ಮಯೋಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ, ಎಲ್ಲ ಪೂಜ್ಯ ಸಂತರು, ವಿದ್ವಾಂಸರು, ಭಕ್ತರು, ಮಹಿಳೆಯರು ಮತ್ತು ಮಹನೀಯರೇ!
ಯಾರೇ ಒಬ್ಬ ವ್ಯಕ್ತಿಯಯು ಭಗವಾನ್ ಶ್ರೀ ರಾಮಲಲ್ಲಾನ 'ದರ್ಶನ' ಪಡೆಯುತ್ತಾನೆಂದರೆ, ಬಳಿಕ ಶ್ರೀರಾಮನ ಪಟ್ಟಾಭಿಷೇಕಕ್ಕೆ ಸಾಕ್ಷಿಯಾಗುತ್ತಾನೆಂದರೆ, ಅದು ಅವನ ಮೇಲೆ ರಾಮನ ಕೃಪೆ ಇದ್ದರೆ ಮಾತ್ರ ಸಾಧ್ಯ. ಶ್ರೀರಾಮನ ಪಟ್ಟಾಭಿಷೇಕ ಮಾಡಿದಾಗ ಶ್ರೀರಾಮನ ಆದರ್ಶಗಳು ಮತ್ತು ಮೌಲ್ಯಗಳು ನಮ್ಮೊಳಗೆ ಬಲಗೊಳ್ಳುತ್ತವೆ. ರಾಮನು ತೋರಿಸಿದ ಮಾರ್ಗವು ಅವನ ಪಟ್ಟಾಭಿಷೇಕದಿಂದ ಮತ್ತಷ್ಟು ಪ್ರಕಾಶಮಾನವಾಗುತ್ತದೆ. ಅವನ ತತ್ತ್ವಶಾಸ್ತ್ರವು ಅಯೋಧ್ಯೆಯ ಪ್ರತಿಯೊಂದು ಕಣದಲ್ಲೂ ಅಡಕವಾಗಿದೆ. ಇಂದು, ಅಯೋಧ್ಯೆಯ ರಾಮಲೀಲಾಗಳು, ಸರಯೂ ಆರತಿ, ದೀಪೋತ್ಸವ ಮತ್ತು ರಾಮಾಯಣದ ಸಂಶೋಧನೆ ಮತ್ತು ಅಧ್ಯಯನದ ಮೂಲಕ ಈ ತತ್ವಶಾಸ್ತ್ರವನ್ನು ವಿಶ್ವದಾದ್ಯಂತ ಹರಡಲಾಗುತ್ತಿದೆ. ಅಯೋಧ್ಯೆ, ಉತ್ತರ ಪ್ರದೇಶ ಮತ್ತು ದೇಶದ ಜನರು ಈ ಹರಿವಿನ ಭಾಗವಾಗುತ್ತಿರುವುದಕ್ಕೆ ಮತ್ತು ದೇಶದಲ್ಲಿ ಸಾರ್ವಜನಿಕ ಕಲ್ಯಾಣದ ಪ್ರವಾಹಕ್ಕೆ ಉತ್ತೇಜನ ನೀಡುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಈ ಸಂದರ್ಭದಲ್ಲಿ ನಾನು ನಿಮಗೆ, ದೇಶವಾಸಿಗಳಿಗೆ ಮತ್ತು ಪ್ರಪಂಚದಾದ್ಯಂತ ವ್ಯಾಪಿಸಿರುವ ರಾಮನ ಭಕ್ತರಿಗೆ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ʻಛೋಟಿ ದೀಪಾವಳಿʼ ಹಬ್ಬದಂದು ಮತ್ತು ನಾಳಿನ ದೀಪಾವಳಿಯಂದು ಭಗವಾನ್ ಶ್ರೀರಾಮನ ಪವಿತ್ರ ಜನ್ಮಸ್ಥಳದಿಂದ ಎಲ್ಲ ದೇಶವಾಸಿಗಳಿಗೆ ನನ್ನ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.
ಸ್ನೇಹಿತರೇ,
ಈ ಬಾರಿ ನಾವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ ಸಮಯದಲ್ಲಿ ದೀಪಾವಳಿ ಬಂದಿದೆ ಮತ್ತು ಈಗ ನಾವು ʻಸ್ವಾತಂತ್ರ್ಯದ ಅಮೃತ ಮಹೋತ್ಸವʼವನ್ನು ಆಚರಿಸುತ್ತಿದ್ದೇವೆ. ಭಗವಾನ್ ರಾಮನಂತಹ ಇಚ್ಛಾಶಕ್ತಿಯು ಸ್ವಾತಂತ್ರ್ಯದ ಈ 'ಅಮೃತ ಕಾಲ'ದಲ್ಲಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಭಗವಾನ್ ರಾಮನು ತನ್ನ ಮಾತುಗಳಲ್ಲಿ, ಆಲೋಚನೆಗಳಲ್ಲಿ ಮತ್ತು ತನ್ನ ಆಡಳಿತದಲ್ಲಿ ಅಳವಡಿಸಿಕೊಂಡ ಮೌಲ್ಯಗಳು 'ಸಬ್ ಕಾ ಸಾಥ್-ಸಬ್ ಕಾ ವಿಕಾಸ್'ಗೆ ಸ್ಫೂರ್ತಿಯಾಗಿವೆ ಮತ್ತು 'ಸಬ್ ಕಾ ವಿಶ್ವಾಸ್-ಸಬ್ ಕಾ ಪ್ರಯಾಸ್'ಗಳ ತಳಹದಿಯಾಗಿವೆ. ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಆಕಾಂಕ್ಷೆಯೊಂದಿಗೆ ಮುನ್ನಡೆಯುತ್ತಿರುವ ಭಾರತೀಯರಿಗೆ, ಶ್ರೀ ರಾಮನ ಆದರ್ಶಗಳು ದಾರಿದೀಪವಿದ್ದಂತೆ, ಇದು ನಮಗೆ ಅತ್ಯಂತ ಕಷ್ಟಕರವಾದ ಗುರಿಗಳನ್ನು ಸಾಧಿಸಲು ಧೈರ್ಯವನ್ನು ನೀಡುತ್ತದೆ.
ಸ್ನೇಹಿತರೇ,
ಈ ಬಾರಿ, ನಾನು ಕೆಂಪು ಕೋಟೆಯಿಂದ ನನ್ನ ಭಾಷಣದ ಸಮಯದಲ್ಲಿ 'ಪಂಚ ಪ್ರಾಣ'ಗಳನ್ನು (ಐದು ಸಂಕಲ್ಪಗಳು) ಅಳವಡಿಸಿಕೊಳ್ಳುವಂತೆ ಎಲ್ಲ ದೇಶವಾಸಿಗಳಿಗೆ ಕರೆ ನೀಡಿದ್ದೇನೆ. ಭಾರತದ ನಾಗರಿಕರ ಕರ್ತವ್ಯ ಎಂಬ ಅಂಶವು ಈ ಐದು 'ಪ್ರಾಣ'ಗಳ ಶಕ್ತಿಯನ್ನು ಪರಸ್ಪರ ನಂಟು ಮಾಡಿ ಬೆಸೆದಿದೆ. ಇಂದು, ಅಯೋಧ್ಯೆ ನಗರದಲ್ಲಿ ದೀಪೋತ್ಸವದ ಈ ಶುಭ ಸಂದರ್ಭದಲ್ಲಿ, ಶ್ರೀ ರಾಮನಿಂದ ನಾವು ಸಾಧ್ಯವಾದಷ್ಟು ಕಲಿಯುವ ನಮ್ಮ ಸಂಕಲ್ಪವನ್ನು ಪುನರುಚ್ಚರಿಸಬೇಕಾಗಿದೆ. ಭಗವಾನ್ ರಾಮನನ್ನು 'ಮರ್ಯಾದಾ ಪುರುಷೋತ್ತಮ' ಎಂದು ಕರೆಯಲಾಗುತ್ತದೆ. 'ಮರ್ಯಾದೆ'ಯು ನಮಗೆ ಸಭ್ಯತೆಯನ್ನು ಕಲಿಸುತ್ತದೆ. ಜೊತೆಗೆ, 'ಕರ್ತವ್ಯ'ವನ್ನು ಒತ್ತಾಯಿಸುವ ʻಮರ್ಯಾದೆʼಯು ಆ ಕರ್ತವ್ಯಕ್ಕೆ ಪ್ರತಿಯಾಗಿ ಗೌರವ ಸಲ್ಲಿಸುವಂತೆಯೂ ನಮಗೆ ಕಲಿಸಿಕೊಡುತ್ತದೆ. ನಮ್ಮ ಧರ್ಮಗ್ರಂಥಗಳಲ್ಲಿ ಇದನ್ನು ಹೇಳಲಾಗಿದೆ - "ರಾಮೋ ವಿಗ್ರಹಾವನ ಧರ್ಮಃ" ಅಂದರೆ, ರಾಮನು 'ಧರ್ಮ'ದ ಜೀವಂತ ಮೂರ್ತರೂಪ, ಅಂದರೆ ಕರ್ತವ್ಯ. ಭಗವಾನ್ ರಾಮನು ಯಾವುದೇ ಪಾತ್ರವನ್ನು ನಿರ್ವಹಿಸಿದರೂ ಕರ್ತವ್ಯಗಳಿಗೆ ಹೆಚ್ಚಿನ ಒತ್ತು ನೀಡಿದನು. ಅವನು ರಾಜಕುಮಾರನಾಗಿದ್ದಾಗ ಋಷಿಮುನಿಗಳು, ಅವರ 'ಆಶ್ರಮಗಳು' ಮತ್ತು 'ಗುರುಕುಲಗಳನ್ನು' ರಕ್ಷಿಸುವ ಕರ್ತವ್ಯವನ್ನು ನಿರ್ವಹಿಸಿದನು. ಶ್ರೀ ರಾಮನು ತನಗೆ ಕಿರೀಟಧಾರಣೆ ಮಾಡಿದಾಗ ವಿಧೇಯ ಮಗನಾಗಿ ಅವನ ಕರ್ತವ್ಯವನ್ನು ನಿರ್ವಹಿಸಿದನು. ಅವನು ತನ್ನ ತಂದೆ ಮತ್ತು ಕುಟುಂಬದ ಮಾತುಗಳಿಗೆ ಆದ್ಯತೆ ನೀಡಿದನು, ರಾಜ್ಯ ತ್ಯಾಗವನ್ನು ಒಪ್ಪಿಕೊಂಡನು ಮತ್ತು ಕಾಡಿಗೆ ಹೋಗುವುದು ತನ್ನ ಕರ್ತವ್ಯವೆಂದು ಪರಿಗಣಿಸಿದನು. ಅವನು ಕಾಡಿನಲ್ಲಿದ್ದಾಗ, ಅವನು ಅಲ್ಲಿನ ಅರಣ್ಯವಾಸಿಗಳೊಂದಿಗೆ ಬೆರೆಯುತ್ತಾನೆ. ಅವನು ಆಶ್ರಮಗಳಿಗೆ ಭೇಟಿ ನೀಡಿದಾಗ, ಮಾತೆ ಶಬರಿಯ ಆಶೀರ್ವಾದವನ್ನು ಪಡೆಯುತ್ತಾನೆ. ಅವನು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವ ಮೂಲಕ ಲಂಕೆಯನ್ನು ಗೆಲ್ಲುತ್ತಾನೆ. ಅವನು ಸಿಂಹಾಸನದ ಮೇಲೆ ಕುಳಿತಾಗ, ಕಾಡಿನ ಅವನ ಎಲ್ಲ ಸಹಚರರು ಉಪಸ್ಥಿತರಿರುತ್ತಾರೆ. ಇದು ರಾಮನು ಯಾರನ್ನೂ ಹಿಂದೆ ಬಿಡುವುದಿಲ್ಲ ಎಂಬುದನ್ನು ತೋರಿಸುತ್ತದೆ. ರಾಮನು ಕರ್ತವ್ಯಗಳಿಂದ ನುಣುಚಿಕೊಳ್ಳುವುದಿಲ್ಲ. ಆದ್ದರಿಂದ, ರಾಮನು ನಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ ನಮ್ಮ ಹಕ್ಕುಗಳನ್ನು ಪ್ರತಿಪಾದಿಸಬೇಕೆಂದು ನಂಬುವ ಭಾರತದ ಆಶಯವನ್ನು ಮೂರ್ತೀಕರಿಸುತ್ತಾನೆ. ಕಾಕತಾಳೀಯವೆಂದರೆ, ನಮ್ಮ ಸಂವಿಧಾನದ ಮೂಲ ಪ್ರತಿಯ ಮೇಲೆ ರಾಮ, ಸೀತಾಮಾತೆ ಮತ್ತು ಲಕ್ಷ್ಮಣರ ಚಿತ್ರವನ್ನು ಬಿಡಿಸಲಾಗಿದೆ. ಸಂವಿಧಾನದ ಆ ಪುಟವು ಮೂಲಭೂತ ಹಕ್ಕುಗಳ ಬಗ್ಗೆಯೂ ಮಾತನಾಡುತ್ತದೆ. ಅಂದರೆ, ಅಲ್ಲಿ ಒಂದು ಕಡೆ ನಮ್ಮ ಸಾಂವಿಧಾನಿಕ ಹಕ್ಕುಗಳ ಖಾತರಿ ಇದ್ದರೆ, ಮತ್ತೊಂದೆಡೆ ಭಗವಾನ್ ರಾಮನ ರೂಪದಲ್ಲಿ ಕರ್ತವ್ಯಗಳ ಸಾಕ್ಷಾತ್ಕಾರವಿದೆ! ಆದ್ದರಿಂದ, ನಾವು ಕರ್ತವ್ಯಗಳ ಬಗ್ಗೆ ನಮ್ಮ ಸಂಕಲ್ಪವನ್ನು ಬಲಪಡಿಸಿದಷ್ಟೂ, 'ರಾಮರಾಜ್ಯ'ದ ಪರಿಕಲ್ಪನೆಯು ಹೆಚ್ಚು ಹೆಚ್ಚು ವಾಸ್ತವವಾಗುತ್ತದೆ.
ಸ್ನೇಹಿತರೇ,
ದೇಶವು ತನ್ನ ಪರಂಪರೆಯ ಬಗ್ಗೆ ಹೆಮ್ಮೆ ಹೊಂದಿದೆ ಮತ್ತು ಸ್ವಾತಂತ್ರ್ಯದ 'ಅಮೃತ ಕಾಲ'ದಲ್ಲಿ ಗುಲಾಮ ಮನಸ್ಥಿತಿಯಿಂದ ಸ್ವಾತಂತ್ರ್ಯ ಪಡೆಯುವಂತೆ ಕರೆ ನೀಡಿದೆ. ಭಗವಾನ್ ಶ್ರೀ ರಾಮನಿಂದಲೂ ನಾವು ಈ ಸ್ಫೂರ್ತಿಯನ್ನು ಪಡೆಯುತ್ತೇವೆ. ರಾಮನು ಹೇಳಿದನು: "जननी जन्मभूमिश्च स्वर्गादपि गरीयसी (ಜನನಿ ಜನ್ಮ ಭೂಮಿಶ್ಚ, ಸ್ವರ್ಗಾದಿಪಿ ಗರಿಯಸಿ)”- ಅಂದರೆ ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತ ಮಿಗಿಲಾದುದು." ಸುವರ್ಣ ಲಂಕೆಯನ್ನು ಕಂಡು ಅವನು ಕೀಳರಿಮೆಯಿಂದ ನರಳಲಿಲ್ಲ. ಇದೇ ಆತ್ಮವಿಶ್ವಾಸದೊಂದಿಗೆ ರಾಮನು ಅಯೋಧ್ಯೆಗೆ ಹಿಂದಿರುಗಿದಾಗ ಅಯೋಧ್ಯೆಯ ಬಗ್ಗೆ ಹೀಗೆ ಹೇಳಲಾಯಿತು: नव ग्रह " निकर अनीक बनाई। जनु घेरी अमरावति आई" - ಅಂದರೆ ಅಯೋಧ್ಯೆಯನ್ನು ಸ್ವರ್ಗಕ್ಕೆ ಹೋಲಿಸಲಾಗಿದೆ. ಆದ್ದರಿಂದ ಸಹೋದರ-ಸಹೋದರಿಯರೇ, ರಾಷ್ಟ್ರವನ್ನು ಕಟ್ಟುವ ಸಂಕಲ್ಪವಿದ್ದಾಗ ಮಾತ್ರ, ನಾಗರಿಕರಲ್ಲಿ ದೇಶಕ್ಕಾಗಿ ಸೇವಾ ಪ್ರಜ್ಞೆ ಇದ್ದಾಗ ಮಾತ್ರ ರಾಷ್ಟ್ರವು ಅಭಿವೃದ್ಧಿಯ ಅಪರಿಮಿತ ಎತ್ತರವನ್ನು ಮುಟ್ಟಬಲ್ಲದು. ರಾಮನ ಬಗ್ಗೆ, ನಮ್ಮ ಸಂಸ್ಕೃತಿ ಮತ್ತು ನಾಗರೀಕತೆಯ ಬಗ್ಗೆಯೂ ಮಾತನಾಡದೆ ತಪ್ಪಿಸುತ್ತಿದ್ದ ಕಾಲವೊಂದಿತ್ತು. ಈ ದೇಶದಲ್ಲಿ ರಾಮನ ಅಸ್ತಿತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಯಿತು. ಅದರ ಪರಿಣಾಮವೇನು? ನಮ್ಮ ಧಾರ್ಮಿಕ, ಸಾಂಸ್ಕೃತಿಕ ಸ್ಥಳಗಳು ಮತ್ತು ನಗರಗಳು ಹಿಂದೆ ಉಳಿದಿವೆ. ಅಯೋಧ್ಯೆಯ ರಾಮಘಾಟ್‌ನ ದುಃಸ್ಥಿತಿ ಕಂಡು ನಾವು ದುಃಖಿತರಾಗುತ್ತಿದ್ದೆವು. ಕಾಶಿಯ ಕಷ್ಟಗಳು, ಅಲ್ಲಿನ ಕೊಳಕು ಮತ್ತು ಕಿಕ್ಕಿರಿದ ರಸ್ತೆಗಳು ತುಂಬಾ ಕಿರಿಕಿರಿ ಉಂಟು ಮಾಡುತ್ತಿದ್ದವು. ನಮ್ಮ ಅಸ್ಮಿತೆ ಮತ್ತು ಅಸ್ತಿತ್ವದ ಸಂಕೇತವೆಂದು ಪರಿಗಣಿಸಲಾದ ನಮ್ಮ ಸ್ಥಳಗಳ ದಯನೀಯ ಸ್ಥಿತಿಯನ್ನು ಕಂಡು ದೇಶದ ಅಭಿವೃದ್ಧಿಯ ನೈತಿಕ ಸ್ಥೈರ್ಯವೇ ದುರ್ಬಲವಾಗಿತ್ತು.
ಸ್ನೇಹಿತರೇ,
ಕಳೆದ ಎಂಟು ವರ್ಷಗಳಲ್ಲಿ ದೇಶವು ಕೀಳರಿಮೆಯ ಈ ಸಂಕೋಲೆಗಳನ್ನು ಮುರಿದಿದೆ. ನಾವು ಭಾರತದ ತೀರ್ಥಯಾತ್ರೆಗಳ ಅಭಿವೃದ್ಧಿಯ ಸಮಗ್ರ ದೃಷ್ಟಿಕೋನವನ್ನು ಮುಂದಿಟ್ಟಿದ್ದೇವೆ. ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ರಾಮ ಮಂದಿರ, ಕಾಶಿ ವಿಶ್ವನಾಥ ಧಾಮ, ಕೇದಾರನಾಥ ಮತ್ತು ಮಹಾಕಾಲ್-ಮಹಾಲೋಕ್ ಸೇರಿದಂತೆ ನಮ್ಮ ಧಾರ್ಮಿಕ ಸ್ಥಳಗಳ ವೈಭವವನ್ನು ನಾವು ಪುನರುಜ್ಜೀವಗೊಳಿಸಿದ್ದೇವೆ. ಸಮಗ್ರ ಪ್ರಯತ್ನವು ಹೇಗೆ ಸಮಗ್ರ ಅಭಿವೃದ್ಧಿಯ ಸಾಧನವಾಗಬಹುದು ಎಂಬುದಕ್ಕೆ ಇಂದು ದೇಶವು ಸಾಕ್ಷಿಯಾಗಿದೆ. ಇಂದು ಅಯೋಧ್ಯೆಯ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಪಾಯಿಗಳ ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಚೌಕಗಳು ಮತ್ತು ಘಾಟ್‌ಗಳನ್ನು ಸುಂದರಗೊಳಿಸಲಾಗುತ್ತಿದೆ. ಹೊಸ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅಯೋಧ್ಯೆಯು ಅಭಿವೃದ್ಧಿಯ ಹೊಸ ಆಯಾಮಗಳನ್ನು ಸ್ಪರ್ಶಿಸುತ್ತಿದೆ. ಅಯೋಧ್ಯೆ ರೈಲ್ವೆ ನಿಲ್ದಾಣದ ಜೊತೆಗೆ, ಇಲ್ಲಿ ವಿಶ್ವದರ್ಜೆಯ ವಿಮಾನ ನಿಲ್ದಾಣವನ್ನು ಸಹ ನಿರ್ಮಿಸಲಾಗುವುದು. ಅಂದರೆ, ಇಡೀ ಪ್ರದೇಶವು ಸಂಪರ್ಕ ಮತ್ತು ಅಂತರರಾಷ್ಟ್ರೀಯ ಪ್ರವಾಸೋದ್ಯಮದ ಪ್ರಯೋಜನವನ್ನು ಪಡೆಯುತ್ತದೆ. ಅಯೋಧ್ಯೆಯ ಅಭಿವೃದ್ಧಿಯ ಜೊತೆಗೆ, ʻರಾಮಾಯಣ ಸರ್ಕ್ಯೂಟ್ʼನ ಅಭಿವೃದ್ಧಿಯ ಕೆಲಸವೂ ನಡೆಯುತ್ತಿದೆ. ಅಯೋಧ್ಯೆಯಿಂದ ಪ್ರಾರಂಭವಾದ ಅಭಿವೃದ್ಧಿ ಅಭಿಯಾನವು ಇಡೀ ಸುತ್ತಮುತ್ತಲಿನ ಪ್ರದೇಶಕ್ಕೆ ವಿಸ್ತರಿಸುತ್ತದೆ.
ಸ್ನೇಹಿತರೇ,
ಈ ಸಾಂಸ್ಕೃತಿಕ ಬೆಳವಣಿಗೆಯು ಅನೇಕ ಸಾಮಾಜಿಕ ಮತ್ತು ಅಂತರರಾಷ್ಟ್ರೀಯ ಆಯಾಮಗಳನ್ನು ಹೊಂದಿದೆ. ʻಶೃಂಗವೇರ್‌ಪುರ್ ಧಾಮʼದಲ್ಲಿ ʻನಿಶಾದ್ರಾಜ್ ಪಾರ್ಕ್ʼ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇಲ್ಲಿ 51 ಅಡಿ ಎತ್ತರದ ಶ್ರೀರಾಮ ಮತ್ತು ನಿಶಾದ್ ರಾಜ್ ಕಂಚಿನ ಪ್ರತಿಮೆಗಳನ್ನು ನಿರ್ಮಿಸಲಾಗುತ್ತಿದೆ. ಈ ಪ್ರತಿಮೆಗಳು ಸಮಾನತೆ ಮತ್ತು ಸಾಮರಸ್ಯಕ್ಕಾಗಿ ನಮ್ಮನ್ನು ಬದ್ಧಗೊಳಿಸುವ ರಾಮಾಯಣದ ಸರ್ವವ್ಯಾಪಿ ಸಂದೇಶವನ್ನು ಜನರಿಗೆ ತಲುಪಿಸುತ್ತವೆ. ಅಂತೆಯೇ, ಅಯೋಧ್ಯೆಯಲ್ಲಿ ʻಕ್ವೀನ್ ಹಿಯೋ ಮೆಮೋರಿಯಲ್ ಪಾರ್ಕ್ʼ ಅನ್ನು ನಿರ್ಮಿಸಲಾಗಿದೆ. ಈ ಉದ್ಯಾನವನವು ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವ ಹಾಗೂ ಭಾರತ ಮತ್ತು ದಕ್ಷಿಣ ಕೊರಿಯಾ ನಡುವಿನ ಅಂತರರಾಷ್ಟ್ರೀಯ ಸಂಬಂಧಗಳನ್ನು ಆಳಗೊಳಿಸುವ ಮಾಧ್ಯಮವಾಗಲಿದೆ. ಅನೇಕ ಅಭಿವೃದ್ಧಿ ಯೋಜನೆಗಳೊಂದಿಗೆ ಯುವಕರಿಗೆ ಸೃಷ್ಟಿಯಾಗುವ ಉದ್ಯೋಗಾವಕಾಶಗಳನ್ನು ನೀವು ಊಹಿಸಬಹುದು. ಸರಕಾರ ನಡೆಸುವ ʻರಾಮಾಯಣ ಎಕ್ಸ್‌ಪ್ರೆಸ್ʼ ರೈಲು ಆಧ್ಯಾತ್ಮಿಕ ಪ್ರವಾಸೋದ್ಯಮದ ದಿಕ್ಕಿನಲ್ಲಿ ಉತ್ತಮ ಆರಂಭವಾಗಿದೆ. ಇಂದು, ಅದು ʻಚಾರ್ ಧಾಮ್ʼ ಯೋಜನೆಯೇ ಆಗಿರಲಿ, ʻಬುದ್ಧ ಸರ್ಕ್ಯೂಟ್ʼ ಆಗಿರಲಿ ಅಥವಾ ʻಪ್ರಸಾದ್ʼ ಯೋಜನೆಯಡಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಾಗಿರಲಿ, ನಮ್ಮ ಸಾಂಸ್ಕೃತಿಕ ಪುನರುಜ್ಜೀವವು ನವ ಭಾರತದ ಒಟ್ಟಾರೆ ಏಳಿಗೆಯ ಪ್ರಾರಂಭ ಬಿಂದುವಾಗಿದೆ.
ಸ್ನೇಹಿತರೇ,
ಇಂದು, ನಾನು ಅಯೋಧ್ಯೆ ನಗರದಿಂದ ದೇಶದ ಜನರಿಗೆ ವಿನಮ್ರವಾಗಿ ವಿನಂತಿಸಲು ಬಯಸುತ್ತೇನೆ. ಅಯೋಧ್ಯೆಯು ಭಾರತದ ಶ್ರೇಷ್ಠ ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬವಾಗಿದೆ. ರಾಮನು ಅಯೋಧ್ಯೆಯ ರಾಜಕುಮಾರನಾಗಿದ್ದನು, ಆದರೆ ಇಡೀ ದೇಶದ ಜನರು ಅವನನ್ನು ಆರಾಧಿಸುತ್ತಾರೆ. ಅವನ ಸ್ಫೂರ್ತಿ, ತಪಸ್ಸು ಮತ್ತು ಅವನು ತೋರಿದ ಮಾರ್ಗವು ಪ್ರತಿಯೊಬ್ಬ ದೇಶವಾಸಿಗೂ ಮುಖ್ಯವಾಗಿದೆ. ಭಗವಾನ್ ರಾಮನ ಆದರ್ಶಗಳನ್ನು ಅನುಸರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾವು ಅವನ ಆದರ್ಶಗಳನ್ನು ಅಭ್ಯಾಸ ಮಾಡಬೇಕು ಮತ್ತು ಅವುಗಳನ್ನು ನಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು. ಈ ಆದರ್ಶ ಮಾರ್ಗವನ್ನು ಅನುಸರಿಸುವ ವಿಚಾರದಲ್ಲಿ ಅಯೋಧ್ಯೆಯ ಜನರ ಮೇಲೆ ದುಪ್ಪಟ್ಟು ಜವಾಬ್ದಾರಿ ಇದೆ. ಅಯೋಧ್ಯೆಯ ನನ್ನ ಸಹೋದರ-ಸಹೋದರಿಯರೇ, ಇದು ನಿಮ್ಮ ದುಪ್ಪಟ್ಟು ಜವಾಬ್ದಾರಿ! ಜಗತ್ತಿನ ಮೂಲೆ ಮೂಲೆಗಳಿಂದ ಇಲ್ಲಿಗೆ ಬರುವ ಜನರ ಸಂಖ್ಯೆ ಅನೇಕ ಪಟ್ಟು ಹೆಚ್ಚಾಗುವ ದಿನಗಳು ದೂರವಿಲ್ಲ. ಕಣಕಣದಲ್ಲೂ ರಾಮನು ಇರುವಾಗ, ಅಲ್ಲಿನ ಜನರ ನಡವಳಿಕೆ ಹೇಗಿರಬೇಕು ಎಂಬುದು ಸಹ ಅಷ್ಟೇ ಮುಖ್ಯವಾಗುತ್ತದೆ. ಅಯೋಧ್ಯೆಯ ಜನರು ಇಲ್ಲಿಗೆ ಬರುವ ಪ್ರತಿಯೊಬ್ಬರನ್ನೂ ಶ್ರೀರಾಮನಷ್ಟೇ ಆತ್ಮೀಯತೆಯಿಂದ ಸ್ವಾಗತಿಸಬೇಕು. ಅಯೋಧ್ಯೆಯನ್ನು ಕರ್ತವ್ಯದ ನಗರವಾಗಿಯೂ ಗುರುತಿಸಬೇಕು. ಮುಖ್ಯಮಂತ್ರಿ ಯೋಗಿ ಅವರ ಸರಕಾರವು ದೈವಿಕ ದೃಷ್ಟಿಕೋನದೊಂದಿಗೆ ಅನೇಕ ಯೋಜನೆಗಳನ್ನು ಮುನ್ನಡೆಸುತ್ತಿದೆ. ಅಯೋಧ್ಯೆಯಲ್ಲಿ ರಸ್ತೆಗಳನ್ನು ಅಗಲಗೊಳಿಸುವ ಮೂಲಕ ಮತ್ತು ಸೌಂದರ್ಯೀಕರಣ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸ್ವಚ್ಛ ನಗರವನ್ನಾಗಿ ಮಾಡಲು ಸಂಘಟಿತ ಪ್ರಯತ್ನಗಳನ್ನು ಸರಕಾರ ಮಾಡುತ್ತಿದೆ. ಈ ಪ್ರಯತ್ನಗಳಿಗೆ ಜನರು ತಮ್ಮ ಬೆಂಬಲವನ್ನು ನೀಡಿದರೆ ಅಯೋಧ್ಯೆಯ ದೈವತ್ವಕ್ಕೆ ಮತ್ತಷ್ಟು ಮೆರುಗು ನೀಡಬಹುದು. ನಾಗರಿಕ ಘನತೆ ಮತ್ತು ನಾಗರಿಕ ಶಿಸ್ತಿನ ಬಗ್ಗೆ ಮಾತನಾಡುವಾಗಲೆಲ್ಲಾ ಅಯೋಧ್ಯೆಯ ಜನರನ್ನು ಉದಾಹರಣೆಯಾಗಿ ಉಲ್ಲೇಖಿಸುವಂತಾಗಬೇಕು. ದೇಶದ ಜನತೆಯ ಕರ್ತವ್ಯದ ಮೂಲಕ ಭಾರತದ ಸಾಮರ್ಥ್ಯವು ಉತ್ತುಂಗಕ್ಕೇರುವಂತಾಗಲಿ ಎಂದು ನಾನು ಅಯೋಧ್ಯೆಯ ಈ ಪವಿತ್ರ ಭೂಮಿಯಲ್ಲಿ ಭಗವಾನ್ ಶ್ರೀ ರಾಮನಲ್ಲಿ ಕೋರುತ್ತೇನೆ. ನವ ಭಾರತದ ನಮ್ಮ ಕನಸು ಮನುಕುಲದ ಕಲ್ಯಾಣಕ್ಕೆ ಒಂದು ಮಾಧ್ಯಮವಾಗಲಿ. ಈ ಆಶಯದೊಂದಿಗೆ, ನಾನು ನನ್ನ ಮಾತುಗಳನ್ನು ಮುಗಿಸುತ್ತೇನೆ. ಮತ್ತೊಮ್ಮೆ, ನಾನು ಎಲ್ಲ ದೇಶವಾಸಿಗಳಿಗೆ ದೀಪಾವಳಿಯ ಶುಭಾಶಯಗಳನ್ನು ಕೋರುತ್ತೇನೆ. ತುಂಬಾ ಧನ್ಯವಾದಗಳು!
ನನ್ನೊಂದಿಗೆ ಮಾತನಾಡಿ:
ಸಿಯಾವರ್ ರಾಮಚಂದ್ರ ಕಿ - ಜೈ!
ಸಿಯಾವರ್ ರಾಮಚಂದ್ರ ಕಿ - ಜೈ!
ಧನ್ಯವಾದಗಳು!
ಗಮನಿಸಿ: ಇದು ಪ್ರಧಾನಮಂತ್ರಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.
*****
(Release ID: 1871706)
Visitor Counter : 201
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam