ಪ್ರಧಾನ ಮಂತ್ರಿಯವರ ಕಛೇರಿ
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಗವಾನ್ ಶ್ರೀ ರಾಮನ ಪ್ರತೀಕ ಸ್ವರೂಪಕ್ಕೆ ಪ್ರಧಾನಮಂತ್ರಿ ಅವರಿಂದ ರಾಜ್ಯಾಭಿಷೇಕ
"ಆಜಾದಿ ಕಾ ಅಮೃತ್ ಕಾಲ್ ನಲ್ಲಿ, ಭಗವಾನ್ ಶ್ರೀ ರಾಮನ ಕುರಿತು ಕೈಗೊಂಡ ದೃಢ ಸಂಕಲ್ಪವು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ"
"ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನ ಸ್ಫೂರ್ತಿ ಮತ್ತು ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ನ ತತ್ವಗಳನ್ನು ಭಗವಾನ್ ರಾಮನ ಮಾತುಗಳು ಮತ್ತು ಚಿಂತನೆಗಳಲ್ಲಿ ಕಾಣಬಹುದು."
"ರಾಮ ಎಂದಿಗೂ ಯಾರನ್ನೂ ಹಿಂದುಳಿಯಲು ಬಿಡುವುದಿಲ್ಲ, ರಾಮ ಎಂದಿಗೂ ತನ್ನ ಕರ್ತವ್ಯಗಳಿಂದ ವಿಮುಖನಾಗುವುದಿಲ್ಲ"
"ಮೂಲ ಸಂವಿಧಾನದ ಮೂಲಭೂತ ಹಕ್ಕುಗಳ ಪುಟದಲ್ಲಿ ಶ್ರೀ ರಾಮನ ಚಿತ್ರವು ಕರ್ತವ್ಯಗಳ ಬಗ್ಗೆ ಶಾಶ್ವತವಾದ ಸಾಂಸ್ಕೃತಿಕ ತಿಳುವಳಿಕೆಯನ್ನು ಸೂಚಿಸುತ್ತದೆ"
"ಕಳೆದ ಎಂಟು ವರ್ಷಗಳಲ್ಲಿ, ದೇಶವು ಕೀಳರಿಮೆಯ ಸಂಕೋಲೆಗಳನ್ನು ಮುರಿದಿದೆ ಮತ್ತು ಭಾರತದ ನಂಬಿಕೆಯ ಕೇಂದ್ರಗಳ ಅಭಿವೃದ್ಧಿಯ ಸಮಗ್ರ ದೃಷ್ಟಿಕೋನವನ್ನು ಅನುಸರಿಸಿದೆ"
"ಅಯೋಧ್ಯೆಯು ಭಾರತದ ಶ್ರೇಷ್ಠ ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬವಾಗಿದೆ"
"ಅಯೋಧ್ಯೆಯ ಅಸ್ಮಿತೆಯು 'ಕರ್ತವ್ಯ ನಗರಿ' ಅಂದರೆ ಕರ್ತವ್ಯದ ನಗರವಾಗಿ ಬೆಳೆಯಬೇಕು"
Posted On:
23 OCT 2022 7:41PM by PIB Bengaluru
ದೀಪಾವಳಿಯ ಮುನ್ನಾದಿನವಾದ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಗವಾನ್ ಶ್ರೀ ರಾಮನ ಪ್ರತೀಕ ಸ್ವರೂಪಕ್ಕೆ ರಾಜ್ಯಾಭಿಷೇಕ ನೆರವೇರಿಸಿದರು. ಸರಯೂ ನದಿಯ ನ್ಯೂ ಘಾಟ್ ನಲ್ಲಿ ಆರತಿಯನ್ನೂ ಪ್ರಧಾನಮಂತ್ರಿಯವರು ವೀಕ್ಷಿಸಿದರು. ಸ್ಥಳಕ್ಕೆ ಆಗಮಿಸಿದ ನಂತರ, ಪ್ರಧಾನಮಂತ್ರಿಯವರು ಸಂತರನ್ನು ಭೇಟಿ ಮಾಡಿ ಸಂವಾದ ನಡೆಸಿದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಶ್ರೀ ರಾಮಲಾಲನ ದರ್ಶನ ಮತ್ತು ರಾಜ್ಯ ಅಭಿಷೇಕದ ದರ್ಶನ ಪಡೆಯುವ ಅದೃಷ್ಟವು ಭಗವಾನ್ ಶ್ರೀ ರಾಮನ ಆಶೀರ್ವಾದದಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಭಗವಾನ್ ರಾಮನ ಅಭಿಷೇಕವು ನಮ್ಮಲ್ಲಿರುವ ಆತನ ಮೌಲ್ಯಗಳು ಮತ್ತು ಆದರ್ಶಗಳನ್ನು ಮತ್ತಷ್ಟು ಬಲಪಡಿಸುತ್ತದೆ. ಶ್ರೀರಾಮನ ಅಭಿಷೇಕದೊಂದಿಗೆ, ಭಗವಾನ್ ಶ್ರೀ ರಾಮ ತೋರಿಸಿದ ಮಾರ್ಗವು ಇನ್ನಷ್ಟು ಸ್ಪಷ್ಟವಾಗುತ್ತದೆ. ಅಯೋಧ್ಯೆಯ ಪ್ರತಿಯೊಂದು ಕಣದಲ್ಲೂ ನಾವು ಶ್ರೀರಾಮನ ತತ್ತ್ವಜ್ಞಾನವನ್ನು ಕಾಣುತ್ತೇವೆ", ಎಂದು ಪ್ರಧಾನಿ ಹೇಳಿದರು. " ಅಯೋಧ್ಯೆಯ ರಾಮ ಲೀಲಾಗಳು, ಸರಯೂ ಆರತಿ, ದೀಪೋತ್ಸವ ಮತ್ತು ರಾಮಾಯಣದ ಬಗ್ಗೆ ಸಂಶೋಧನೆ ಹಾಗು ಅಧ್ಯಯನದ ಮೂಲಕ ಈ ತತ್ವಶಾಸ್ತ್ರವು ವಿಶ್ವದಾದ್ಯಂತ ಹರಡುತ್ತಿದೆ" ಎಂದು ಶ್ರೀ ಮೋದಿ ಹೇಳಿದರು.
ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ ಸಮಯದಲ್ಲಿ ಮತ್ತು ನಾವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ ಈ ದೀಪಾವಳಿ ಬಂದಿದೆ ಎಂದು ಪ್ರಧಾನಿ ಹೇಳಿದರು. ಈ ಆಜಾದಿ ಕಾ ಅಮೃತ್ ಕಾಲ್ ನಲ್ಲಿ, ಭಗವಾನ್ ಶ್ರೀ ರಾಮನ ಸಂಕಲ್ಪವು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನ ಸ್ಫೂರ್ತಿ ಮತ್ತು ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ನ ತತ್ವಗಳನ್ನು ಭಗವಾನ್ ರಾಮನ ಮಾತುಗಳು ಮತ್ತು ಆಲೋಚನೆಗಳಲ್ಲಿ, ಹಾಗು ಆಡಳಿತದಲ್ಲಿ ಕಾಣಬಹುದು ಎಂದು ಪ್ರಧಾನಿ ಹೇಳಿದರು. "ಪ್ರತಿಯೊಬ್ಬ ಭಾರತೀಯನೂ ಒಳಗೊಂಡಂತೆ ಭಗವಾನ್ ಶ್ರೀ ರಾಮನ ತತ್ವಗಳು ಅಭಿವೃದ್ಧಿ ಹೊಂದಿದ ಭಾರತದ ಆಕಾಂಕ್ಷೆಗಳಾಗಿವೆ. ಇದು ಅತ್ಯಂತ ಕಠಿಣ ಗುರಿಗಳನ್ನು ಸಾಧಿಸಲು ಸ್ಫೂರ್ತಿಯನ್ನು ಒದಗಿಸುವ ದೀಪಸ್ತಂಭದಂತಿದೆ." ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು.
ಈ ವರ್ಷ ಕೆಂಪುಕೋಟೆಯಿಂದ 'ಪಂಚ ಪ್ರಾಣ'ದ ಬಗ್ಗೆ ತಾವು ನೀಡಿದ ಕರೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, "'ಪಂಚ ಪ್ರಾಣ'ದ ಶಕ್ತಿಯು ನಾಗರಿಕರ ಕರ್ತವ್ಯ ಪ್ರಜ್ಞೆಯ ಅಂಶದೊಂದಿಗೆ ಸಂಬಂಧ ಹೊಂದಿದೆ. "ಇಂದು, ಪವಿತ್ರ ನಗರವಾದ ಅಯೋಧ್ಯೆಯಲ್ಲಿ, ಈ ಶುಭ ಸಂದರ್ಭದಲ್ಲಿ, ನಾವು ನಮ್ಮ ಸಂಕಲ್ಪಕ್ಕೆ ನಮ್ಮನ್ನು ನಾವು ಮರುಸಮರ್ಪಿಸಿಕೊಳ್ಳಬೇಕಾಗಿದೆ ಮತ್ತು ಭಗವಾನ್ ರಾಮನಿಂದ ಕಲಿಯಬೇಕಾಗಿದೆ" ಎಂದು ಅವರು ಹೇಳಿದರು. 'ಮರ್ಯಾದಾ ಪುರುಷೋತ್ತಮ'ವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, 'ಮರ್ಯಾದಾ' ನಮಗೆ ಸಭ್ಯತೆಯನ್ನು ಕಲಿಸುತ್ತದೆ ಮತ್ತು ಗೌರವವನ್ನು ನೀಡಲು ಕಲಿಸುತ್ತದೆ ಹಾಗು 'ಮರ್ಯಾದಾ' ಪ್ರತಿಪಾದಿಸುವ ಭಾವನೆಯು ಕರ್ತವ್ಯ ಎಂಬುದನ್ನು ಒತ್ತಿಹೇಳುತ್ತದೆ ಎಂದು ಹೇಳಿದರು. ಭಗವಾನ್ ರಾಮನನ್ನು ಕರ್ತವ್ಯಗಳ ಜೀವಂತ ಮೂರ್ತರೂಪ ಎಂದು ಬಣ್ಣಿಸಿದ ಪ್ರಧಾನಮಂತ್ರಿಯವರು, ಶ್ರೀ ರಾಮನು ತನ್ನ ಎಲ್ಲಾ ಪಾತ್ರಗಳಲ್ಲಿ ಸದಾ ತನ್ನ ಕರ್ತವ್ಯಗಳಿಗೆ ಮೊದಲ ಆದ್ಯತೆಯನ್ನು ನೀಡಿದ್ದಾನೆ ಎಂದೂ ಹೇಳಿದರು. "ರಾಮ ಯಾರನ್ನೂ ಹಿಂದುಳಿಯಲು ಬಿಡುವುದಿಲ್ಲ, ರಾಮನು ಎಂದಿಗೂ ತನ್ನ ಕರ್ತವ್ಯಗಳಿಂದ ವಿಮುಖನಾಗುವುದಿಲ್ಲ. ಹೀಗಾಗಿ ನಮ್ಮ ಹಕ್ಕುಗಳು ನಮ್ಮ ಕರ್ತವ್ಯಗಳ ಮೂಲಕ ತಮ್ಮಿಂದತಾವೇ ಸಾಕಾರಗೊಳ್ಳುತ್ತವೆ ಎಂಬ ಭಾರತೀಯ ಕಲ್ಪನೆಯನ್ನು ರಾಮ ಪ್ರತಿನಿಧಿಸುತ್ತಾನೆ", ಎಂದು ಪ್ರಧಾನ ಮಂತ್ರಿ ವಿವರಿಸಿದರು. ಭಾರತದ ಸಂವಿಧಾನದ ಮೂಲ ಪ್ರತಿಯಲ್ಲಿ ರಾಮ, ಮಾತೆ ಸೀತೆ ಮತ್ತು ಲಕ್ಷ್ಮಣರ ಚಿತ್ರವಿದೆ ಎಂದು ಪ್ರಧಾನಿ ಹೇಳಿದರು. ಸಂವಿಧಾನದ ಅದೇ ಪುಟವು ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುತ್ತದೆ. ಒಂದು ಕಡೆ ಸಂವಿಧಾನವು ಮೂಲಭೂತ ಹಕ್ಕುಗಳನ್ನು ಖಾತರಿಪಡಿಸಿದರೆ, ಅದೇ ಸಮಯದಲ್ಲಿ ಭಗವಾನ್ ಶ್ರೀ ರಾಮನ ರೂಪದಲ್ಲಿ ಕರ್ತವ್ಯಗಳ ಬಗ್ಗೆ ಶಾಶ್ವತವಾದ ಸಾಂಸ್ಕೃತಿಕ ತಿಳುವಳಿಕೆ ಇದೆ ಎಂಬುದನ್ನೂ ಅದು ತೋರಿಸುತ್ತದೆ ಎಂದೂ ಅವರು ಹೇಳಿದರು.
ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮತ್ತು ಗುಲಾಮರ ಮನಸ್ಥಿತಿಯ ತೊಡೆಯುವಿಕೆಗೆ ಸಂಬಂಧಿಸಿದ 'ಪಂಚ ಪ್ರಾಣ'ಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಶ್ರೀ ರಾಮನು ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತ ಮೇಲೆ ಎನ್ನುವ ಮೂಲಕ ಈ ಹಾದಿಯಲ್ಲಿ ನಮಗೆ ಮಾರ್ಗದರ್ಶನ ನೀಡಿದ್ದಾನೆ ಎಂದು ಹೇಳಿದರು. ರಾಮ ಮಂದಿರ, ಕಾಶಿ ವಿಶ್ವನಾಥ, ಕೇದಾರನಾಥ ಮತ್ತು ಮಹಾಕಾಲ್ ಲೋಕದ ಉದಾಹರಣೆಗಳನ್ನು ನೀಡಿದ ಪ್ರಧಾನಮಂತ್ರಿಯವರು, ಭಾರತದ ಹೆಮ್ಮೆಯ ಒಂದು ಭಾಗವಾಗಿರುವ ಪೂಜಾ ಸ್ಥಳಗಳನ್ನು ಸರ್ಕಾರ ಪುನರುಜ್ಜೀವನಗೊಳಿಸಿದೆ ಎಂದು ಹೇಳಿದರು. ಭಗವಾನ್ ಶ್ರೀ ರಾಮನ ಅಸ್ತಿತ್ವವನ್ನು ಜನರು ಪ್ರಶ್ನಿಸುವ ಮತ್ತು ಆ ಬಗ್ಗೆ ಮಾತನಾಡಲು ಹಿಂಜರಿಯುತ್ತಿದ್ದ ಕಾಲಘಟ್ಟವನ್ನು ಪ್ರಧಾನಮಂತ್ರಿಯವರು ನೆನಪಿಸಿಕೊಂಡರು. "ನಾವು ಕೀಳರಿಮೆಯ ಈ ಸಂಕುಚಿತ ಭಾವನೆಯನ್ನು ಮುರಿದಿದ್ದೇವೆ ಮತ್ತು ಕಳೆದ ಎಂಟು ವರ್ಷಗಳಲ್ಲಿ ಭಾರತದ ತೀರ್ಥಯಾತ್ರೆಗಳ ಅಭಿವೃದ್ಧಿಯ ಸಮಗ್ರ ದೃಷ್ಟಿಕೋನವನ್ನು ಮುಂದಿಟ್ಟಿದ್ದೇವೆ ಎಂದವರು ಹೇಳಿದರು. ಅಯೋಧ್ಯೆಯಲ್ಲಿ ಸಾವಿರಾರು ಕೋಟಿ ರೂ.ಗಳ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು. ರಸ್ತೆಗಳ ಅಭಿವೃದ್ಧಿಯಿಂದ ಹಿಡಿದು ಘಾಟ್ ಗಳು ಮತ್ತು ಅಡ್ಡರಸ್ತೆಗಳ ಸೌಂದರ್ಯೀಕರಣದಿಂದ ಹಿಡಿದು ಹೊಸ ರೈಲ್ವೆ ನಿಲ್ದಾಣ ಮತ್ತು ವಿಶ್ವದರ್ಜೆಯ ವಿಮಾನ ನಿಲ್ದಾಣಗಳಂತಹ ಮೂಲಸೌಲಭ್ಯಗಳ ಸುಧಾರಣೆಗಳವರೆಗೆ, ಹೆಚ್ಚಿದ ಸಂಪರ್ಕ ಮತ್ತು ಅಂತಾರಾಷ್ಟ್ರೀಯ ಪ್ರವಾಸೋದ್ಯಮದಿಂದ ಇಡೀ ಪ್ರದೇಶವು ಅಪಾರ ಪ್ರಯೋಜನಗಳನ್ನು ಪಡೆಯಲಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ರಾಮಾಯಣ ಸರ್ಕ್ಯೂಟ್ ನ ಅಭಿವೃದ್ಧಿಗಾಗಿ ಕೆಲಸ ನಡೆಯುತ್ತಿದೆ ಎಂದೂ ಅವರು ಮಾಹಿತಿ ನೀಡಿದರು. ಸಾಂಸ್ಕೃತಿಕ ಪುನರುಜ್ಜೀವನದ ಸಾಮಾಜಿಕ ಮತ್ತು ಅಂತಾರಾಷ್ಟ್ರೀಯ ಆಯಾಮಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಶ್ರೀಂಗ್ವೇರ್ ಪುರ ಧಾಮ್ ನಲ್ಲಿ ನಿಶಾದ್ ರಾಜ್ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು, ಇದರಲ್ಲಿ ಭಗವಾನ್ ಶ್ರೀ ರಾಮ ಮತ್ತು ನಿಶಾದ್ ರಾಜ್ ಅವರ 51 ಅಡಿ ಎತ್ತರದ ಕಂಚಿನ ಪ್ರತಿಮೆ ಇರಲಿದೆ ಎಂದರು. ಈ ಪ್ರತಿಮೆಯು ನಮ್ಮನ್ನು ಸಮಾನತೆ ಮತ್ತು ಸಾಮರಸ್ಯದ ಸಂಕಲ್ಪದೊಂದಿಗೆ ಬೆಸೆಯುವ ಹಾಗು ಸರ್ವರನ್ನು ಒಳಗೊಳ್ಳುವ ರಾಮಾಯಣದ ಸಂದೇಶವನ್ನು ಪ್ರಚಾರ ಮಾಡಲಿದೆ ಎಂದು ಅವರು ಹೇಳಿದರು. ಅಯೋಧ್ಯೆಯಲ್ಲಿ 'ಕ್ವೀನ್ ಹಿಯೋ ಮೆಮೋರಿಯಲ್ ಪಾರ್ಕ್' ಅಭಿವೃದ್ಧಿಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಈ ಉದ್ಯಾನವನವು ಭಾರತ ಮತ್ತು ದಕ್ಷಿಣ ಕೊರಿಯಾದ ಅಂತರರಾಷ್ಟ್ರೀಯ ಸಂಬಂಧಗಳಿಗೆ ವಿಶ್ವಾಸ ತುಂಬುವ ಮಾಧ್ಯಮವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು. .” ಆಧ್ಯಾತ್ಮಿಕ ಪ್ರವಾಸೋದ್ಯಮದ ವಿಷಯಕ್ಕೆ ಬಂದಾಗ ರಾಮಾಯಣ ಎಕ್ಸ್ಪ್ರೆಸ್ ರೈಲು ಸರಿಯಾದ ದಿಕ್ಕಿನಲ್ಲಿ ಇಟ್ಟ ಒಂದು ಹೆಜ್ಜೆಯಾಗಿದೆ ಎಂದು ಪ್ರಧಾನಿ ಹೇಳಿದರು. "ಅದು ಚಾರ್ಧಾಮ್ ಯೋಜನೆಯೇ ಆಗಿರಲಿ, ಬುದ್ಧ ಸರ್ಕ್ಯೂಟ್ ಆಗಿರಲಿ ಅಥವಾ ಪ್ರಸಾದ ಯೋಜನೆಯಡಿಯ ಅಭಿವೃದ್ಧಿ ಯೋಜನೆಗಳೇ ಆಗಿರಲಿ" ಆ ಯೋಜನೆಗಳು ಮತ್ತು , “ಈ ಸಾಂಸ್ಕೃತಿಕ ಪುನರುಜ್ಜೀವನವು ನವ ಭಾರತದ ಸಮಗ್ರ ಅಭಿವೃದ್ಧಿಯ ಶ್ರೀ ಗಣೇಶವಾಗಿದೆ.(ಒಳ್ಳೆಯ ಆರಂಭವಾಗಿದೆ)"ಎಂದವರು ವಿಶ್ಲೇಷಿಸಿದರು.
ಅಯೋಧ್ಯೆಯು ಭಾರತದ ಶ್ರೇಷ್ಠ ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬವಾಗಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ರಾಮನು ಅಯೋಧ್ಯೆಯ ರಾಜಕುಮಾರನಾಗಿದ್ದರೂ, ಅವನ ಆರಾಧನೆಯು ಇಡೀ ದೇಶಕ್ಕೆ ವ್ಯಾಪಿಸಿದೆ ಎಂದು ಅವರು ಹೇಳಿದರು. ಶ್ರೀರಾಮನ ಸ್ಫೂರ್ತಿ, ತಪಸ್ಸು, ಅನುಸರಿಸಿದ ಮಾರ್ಗ ಪ್ರತಿಯೊಬ್ಬ ದೇಶವಾಸಿಗಾಗಿ ಇರುವಂತಹದ್ದು. ಭಗವಾನ್ ರಾಮನ ಆದರ್ಶಗಳನ್ನು ಅನುಸರಿಸುವುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯವಾಗಿದೆ. ನಾವು ನಿರಂತರವಾಗಿ ಅವರ ಆದರ್ಶಗಳಲ್ಲಿ ಬದುಕಬೇಕು ಮತ್ತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಈ ಪವಿತ್ರ ನಗರಕ್ಕೆ ಎಲ್ಲರನ್ನೂ ಸ್ವಾಗತಿಸುವ ಮತ್ತು ಅದನ್ನು ಸ್ವಚ್ಛವಾಗಿಡುವ ಉಭಯ ಕರ್ತವ್ಯಗಳ ಬಗ್ಗೆ ಅಯೋಧ್ಯೆಯ ಜನತೆಗೆ ನೆನಪಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಅಯೋಧ್ಯೆಯ ಅಸ್ಮಿತೆಯು “ಕರ್ತವ್ಯದ ನಗರ”ವಾಗಿ ಬೆಳೆಯಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಪ್ರಧಾನಮಂತ್ರಿಯವರು ಭಗವಾನ್ ಶ್ರೀ ರಾಮಲಾಲಾ ವಿರಾಜಮಾನ್ ಅವರ ದರ್ಶನ ಪಡೆದರು ಮತ್ತು ಪೂಜೆಯನ್ನು ನೆರವೇರಿಸಿದರು ಹಾಗು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಸ್ಥಳವನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದ ರಾಜ್ಯಪಾಲ ಶ್ರೀಮತಿ ಆನಂದಿಬೆನ್ ಪಟೇಲ್ ಮತ್ತು ಮಹಂತ್ ನೃತ್ಯ ಗೋಪಾಲ್ ದಾಸ್ ಜೀ ಮಹಾರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
(Release ID: 1870649)
Visitor Counter : 204
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam