ಪ್ರಧಾನ ಮಂತ್ರಿಯವರ ಕಛೇರಿ

 ಗುಜರಾತ್‌ನ ಜುನಾಗಢದಲ್ಲಿ ಸುಮಾರು 3580 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ "ಡಬಲ್-ಎಂಜಿನ್ ಸರಕಾರವು ಅಭಿವೃದ್ಧಿ ಕಾರ್ಯಗಳಲ್ಲಿ ದುಪ್ಪಟ್ಟು ವೇಗವನ್ನು ತಂದಿದೆ"


"ಕಿಸಾನ್ ಕ್ರೆಡಿಟ್ ಕಾರ್ಡ್ ವಿಶೇಷವಾಗಿ ನಮ್ಮ ಪಶುಸಂಗೋಪನಾ ಕಾರ್ಮಿಕರು ಮತ್ತು ಮೀನುಗಾರರ ಸಮುದಾಯದ ಪಾಲಿಗೆ ಜೀವನವನ್ನು ಸಾಕಷ್ಟು ಸುಗಮಗೊಳಿಸಿದೆ"

"ಸರಕಾರವು ಈ ಉಪಕ್ರಮವನ್ನು ಕೇವಲ ಬಂದರುಗಳಿಗಾಗಿ ಮಾತ್ರ ಸೀಮಿತಗೊಳಿಸದೆ, ಬಂದರು-ನೇತೃತ್ವದ ಅಭಿವೃದ್ಧಿಯನ್ನು ಕಾರ್ಯಗತಗೊಳಿಸುತ್ತಿದೆ"

"ಉದ್ಯಮಶೀಲತೆಯ ಪ್ರತಿಯೊಂದು ಹಂತದಲ್ಲೂ ಸರಕಾರವು ಯುವಕರಿಗೆ ಸಹಾಯ ಮಾಡುತ್ತಿದೆ"

"ಮೂಲಸೌಕರ್ಯಗಳ ಅಭಿವೃದ್ಧಿಯು ಪ್ರವಾಸೋದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸುತ್ತಿದೆ"

"ಕೆಲವು ರಾಜಕೀಯ ಪಕ್ಷಗಳು ಗುಜರಾತ್ ಅನ್ನು ದುರುಪಯೋಗಪಡಿಸಿಕೊಳ್ಳುವುದನ್ನೇ ತಮ್ಮ ರಾಜಕೀಯ ಸಿದ್ಧಾಂತವನ್ನಾಗಿ ಮಾಡಿಕೊಂಡಿವೆ"

ಸರ್ದಾರ್ ಪಟೇಲರ 'ಏಕ್ ಭಾರತ್‌, ಶ್ರೇಷ್ಠ ಭಾರತ್' ಮತ್ತು ಕನಸುಗಳ ಸ್ಫೂರ್ತಿಯನ್ನು ದುರ್ಬಲಗೊಳಿಸಲು ನಾವು ಅವಕಾಶ ನೀಡೆವು

Posted On: 19 OCT 2022 5:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ಜುನಾಗಢದಲ್ಲಿ ಸುಮಾರು 3580 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಜುನಾಗಢದ ಈ ಯೋಜನೆಗಳಲ್ಲಿ ಕರಾವಳಿ ಹೆದ್ದಾರಿಗಳ ಸುಧಾರಣೆ ಮತ್ತು ಸಂಪರ್ಕ ಸೇತುಗಳ ನಿರ್ಮಾಣ, ಎರಡು ನೀರು ಸರಬರಾಜು ಯೋಜನೆಗಳು ಹಾಗೂ ಕೃಷಿ ಉತ್ಪನ್ನಗಳ ಸಂಗ್ರಹಣೆಗಾಗಿ ಗೋದಾಮು ಸಂಕೀರ್ಣದ ನಿರ್ಮಾಣ ಸೇರಿವೆ. ಮಾಧವಪುರದ ಶ್ರೀ ಕೃಷ್ಣ ರುಕ್ಮಿಣಿ ಮಂದಿರದ ಸಮಗ್ರ ಅಭಿವೃದ್ಧಿ, ಒಳಚರಂಡಿ ಮತ್ತು ನೀರು ಸರಬರಾಜು ಯೋಜನೆಗಳಿಗೆ ಹಾಗೂ ಪೋರ್‌ಬಂದರ್ ಮೀನುಗಾರಿಕಾ ಬಂದರಿನಲ್ಲಿ ಹೂಳೆತ್ತುವ ಕಾರ್ಯಕ್ಕೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು. ಗಿರ್ ಸೋಮನಾಥದಲ್ಲಿ ಪ್ರಧಾನಮಂತ್ರಿಯವರು ಮಧ್ವಾಡ್‌ನಲ್ಲಿ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಸೇರಿದಂತೆ ಎರಡು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ʻʻದೀಪಾವಳಿ ಮತ್ತು ಧನ್‌ತೇರಸ್‌ ಹಬ್ಬಗಳು ಈ ಬಾರಿ ಮುಂಚಿತವಾಗಿಯೇ ಬಂದಿವೆ ಮತ್ತು ಜುನಾಗಢದ ಜನರ ಪಾಲಿಗೆ ಈಗಾಗಲೇ ಹೊಸ ವರ್ಷಾಚರಣೆಯ ಸಿದ್ಧತೆಗಳೂ ಆರಂಭವಾಗಿವೆ,ʼʼ ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ ಶ್ರೀ ಮೋದಿ ಅವರು, ಜನರ ಆಶೀರ್ವಾದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದರು. ಹಿಂದಿನ ಕಾಲದಲ್ಲಿ ರಾಜ್ಯದ ಆಯವ್ಯಯಕ್ಕಿಂತಲೂ ಅಧಿಕ ಮೌಲ್ಯದ ಯೋಜನೆಗಳ ಶಂಕುಸ್ಥಾಪನೆ ಮತ್ತು ಸಮರ್ಪಣೆಗೆ ಪ್ರಧಾನಮಂತ್ರಿಯವರು ಹರ್ಷ ವ್ಯಕ್ತಪಡಿಸಿದರು. ಇದಕ್ಕೆಲ್ಲ ಗುಜರಾತ್ ಜನತೆಯ ಆಶೀರ್ವಾದವೇ ಕಾರಣ ಎಂದು ಅವರು ಹೇಳಿದರು.

ಜುನಾಗಢ, ಗಿರ್ ಸೋಮನಾಥ್ ಮತ್ತು ಪೋರ್‌ಬಂದರ್‌ಗಳನ್ನು ಒಳಗೊಂಡಿರುವ ಪ್ರದೇಶವನ್ನು ಗುಜರಾತ್‌ನ ಪ್ರವಾಸೋದ್ಯಮ ರಾಜಧಾನಿ ಎಂದು ಪ್ರಧಾನಮಂತ್ರಿಯವರು ಬಣ್ಣಿಸಿದರು. ಇಂದು ಶಂಕುಸ್ಥಾಪನೆ ನೆರವೇರಿಸಿದ ಯೋಜನೆಗಳು ಉದ್ಯೋಗ ಮತ್ತು ಸ್ವ-ಉದ್ಯೋಗಕ್ಕೆ ಭಾರಿ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. "ಇಂದು ನನ್ನ ಎದೆಯು ಹೆಮ್ಮೆಯಿಂದ ಉಬ್ಬಿದೆ" ಎಂದು ಹರ್ಷ ವ್ಯಕ್ತಪಡಿಸಿದ ಪ್ರಧಾನಿ. ಇದಕ್ಕೆ ಗುಜರಾತ್ ಜನತೆಯ ಆಶೀರ್ವಾದವೇ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು. ಕೇಂದ್ರದಲ್ಲಿ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಗುಜರಾತ್ ತೊರೆದ ನಂತರವೂ ಮುಖ್ಯಮಂತ್ರಿ ಭೂಪೇಂದ್ರ ಪಟೇಲರ ತಂಡವು ಗುಜರಾತ್ ಅನ್ನು ಅದೇ ರೀತಿಯ ಮೌಲ್ಯಗಳು ಮತ್ತು ಸಂಪ್ರದಾಯಗಳೊಂದಿಗೆ ನೋಡಿಕೊಳ್ಳುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಇಂದು, ಗುಜರಾತ್ ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ", ಎಂದು ಹೇಳಿದರು.

ಈ ಪ್ರದೇಶದಲ್ಲಿದ್ದ ಬರಗಾಲ ಮತ್ತು ವಲಸೆ ಸಮಸ್ಯೆಯ ಕಠಿಣ ದಿನಗಳನ್ನು ಪ್ರಧಾನಿ ಸ್ಮರಿಸಿದರು. ಕಳೆದ ಎರಡು ದಶಕಗಳಲ್ಲಿ ಹವಾಮಾನ ವೈಪರೀತ್ಯಗಳು ಸಹ ಕಡಿಮೆಯಾಗಿದ್ದು, ಸಮರ್ಪಣೆ ಮತ್ತು ಪ್ರಮಾಣಿಕತೆಯಿಂದ ಕೆಲಸ ಮಾಡುವ ಜನರಿಗೆ ಪ್ರಕೃತಿ ಸಹ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. "ಒಂದು ಕಡೆ ಜನರ ಆಶೀರ್ವಾದ ಮತ್ತು ಮತ್ತೊಂದೆಡೆ ಪ್ರಕೃತಿಯ ಬೆಂಬಲದಿಂದಾಗಿ, ವ್ಯಕ್ತಿಯೊಬ್ಬರ ಜೀವನವನ್ನು ಜನರ ಸೇವೆಗಾಗಿ ಮುಡಿಪಾಗಿರಿಸಲು ಸಂತೋಷವಾಗುತ್ತಿದೆ" ಎಂದು ಪ್ರಧಾನಿ ಹೇಳಿದರು. ನರ್ಮದಾ ನದಿಯು ಹಿಂದೆ ಒಂದು ದೂರದ ಯಾತ್ರಾಸ್ಥಳವಾಗಿತ್ತು. ಆದರೆ ಇಂದು ಜನರ ಕಠಿಣ ಪರಿಶ್ರಮದಿಂದ, ನರ್ಮದಾ ಮಾತೆಯು ಸೌರಾಷ್ಟ್ರದ ಹಳ್ಳಿಗಳನ್ನು ತಲುಪಿ ಅಲ್ಲಿನ ಜನರನ್ನು ಆಶೀರ್ವದಿಸಿದ್ದಾಳೆ ಎಂದು ಪ್ರಧಾನಮಂತ್ರಿ ಅವರು ಗಮನಸೆಳೆದರು. ಸಂಪೂರ್ಣ ಸಮರ್ಪಣಾ ಭಾವದಿಂದ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಿದ್ದಕ್ಕಾಗಿ ಜುನಾಗಢದ ರೈತರನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಗುಜರಾತ್‌ನಲ್ಲಿ ಬೆಳೆಯುವ ʻಕೇಸರ್ʼ ಮಾವಿನ ಹಣ್ಣಿನ ರುಚಿ ವಿಶ್ವದ ಪ್ರತಿಯೊಂದು ಭಾಗಕ್ಕೂ ತಲುಪುತ್ತಿದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು.

ಭಾರತದ ವಿಶಾಲ ಕರಾವಳಿ ಪ್ರದೇಶಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತದ ಕರಾವಳಿಯ ಬಹುಭಾಗ ಗುಜರಾತ್‌ಗೆ ಸೇರಿದೆ ಎಂದು ಗಮನ ಸೆಳೆದರು. ಸಮುದ್ರಗಳನ್ನು ಒಂದು ಹೊರೆಯಂತೆ ಮತ್ತು ಅದರ ತಾಜಾ ಗಾಳಿಯನ್ನು ವಿಷದಂತೆ ಪರಿಗಣಿಸಿದ್ದ ಹಿಂದಿನ ಸರಕಾರಗಳನ್ನು ನೆನೆದ ಶ್ರೀ ಮೋದಿ, ಈಗ ಕಾಲ ಬದಲಾಗಿದೆ ಎಂದರು. "ಪ್ರತಿಕೂಲಕಾರಿ ಎಂದು ಪರಿಗಣಿಸಲಾಗಿದ್ದ ಅದೇ ಸಮುದ್ರಗಳು ಈಗ ನಮ್ಮ ಪ್ರಯತ್ನಗಳಿಗೆ ಲಾಭವನ್ನು ನೀಡುತ್ತಿವೆ."  ತೊಂದರೆಗಳಿಂದ ಕಂಗೆಟ್ಟಿದ್ದ ರಣ್ ಆಫ್ ಕಛ್ ಈಗ ಗುಜರಾತ್‌ನ ಅಭಿವೃದ್ಧಿಗೆ ದಾರಿ ತೋರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. 25 ವರ್ಷಗಳ ಹಿಂದೆ ಗುಜರಾತ್‌ನ ಅಭಿವೃದ್ಧಿಗಾಗಿ ತಾವು ಕೈಗೊಂಡ ಸಂಕಲ್ಪ ಈಗ ಸಾಕಾರಗೊಂಡಿದೆ ಎಂದು ಪ್ರಧಾನಿ ಹೇಳಿದರು.

ತಾವು ಮುಖ್ಯಮಂತ್ರಿಯಾಗಿದ್ದಾಗ ಮೀನುಗಾರರ ಸಮುದಾಯದ ಕಲ್ಯಾಣ, ಭದ್ರತೆ, ಸೌಲಭ್ಯಗಳು ಮತ್ತು ಮೂಲಸೌಕರ್ಯಗಳಿಗಾಗಿ ʻಸಾಗರ್ ಖೇಡುʼ ಯೋಜನೆಯನ್ನು ಪ್ರಾರಂಭಿಸಿದ್ದನ್ನು ಪ್ರಧಾನಿ ಸ್ಮರಿಸಿದರು. ಈ ಪ್ರಯತ್ನಗಳಿಂದಾಗಿ, ರಾಜ್ಯದಿಂದ ಮೀನು ರಫ್ತು ಏಳು ಪಟ್ಟು ಹೆಚ್ಚಾಗಿದೆ. ತಾವು ಮುಖ್ಯಮಂತ್ರಿಯಾಗಿದ್ದ ದಿನಗಳಲ್ಲಿ ಜಪಾನಿನ ನಿಯೋಗದೊಂದಿಗಿನ ಒಂದು ಘಟನೆಯನ್ನು ಅವರು ಸ್ಮರಿಸಿದರು. ನಿಯೋಗದ ಸದಸ್ಯರು ಮೀನುಗಾರಿಕಾ ಉಪಕ್ರಮಗಳ ನೀಡಲಾಗುತ್ತಿದ್ದ ಪ್ರಸ್ತುತಿಯನ್ನು ನಿಲ್ಲಿಸುವಂತೆ ಕೇಳಿದರು. ಏಕೆಂದರೆ, ಪರದೆಯ ಮೇಲೆ ಪ್ರಸಿದ್ಧ ʻಸುರ್ಮಾಯಿʼ ಮೀನುಗಳನ್ನು ನೋಡಿದ ನಂತರ ಮತ್ತು ಅವುಗಳ ರುಚಿಯ ಬಗ್ಗೆ ಕೇಳಿದ ನಂತರ ಅವರಿಗೆ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ʻಸುರ್ಮಾಯಿʼ ಮೀನು ಈಗ ಜಪಾನಿನ ಮಾರುಕಟ್ಟೆಯಲ್ಲಿ ಪ್ರಸಿದ್ಧವಾಗಿದೆ ಮತ್ತು ಪ್ರತಿ ವರ್ಷ ಗಣನೀಯ ಪ್ರಮಾಣದಲ್ಲಿ ಇವುಗಳ ರಫ್ತು ನಡೆಯುತ್ತದೆ ಎಂದು ಅವರು ಮಾಹಿತಿ ನೀಡಿದರು. "ಡಬಲ್ ಇಂಜಿನ್ ಸರಕಾರವು ಅಭಿವೃದ್ಧಿ ಕಾರ್ಯಗಳಲ್ಲಿ ದುಪ್ಪಟ್ಟು ವೇಗವನ್ನು ತಂದಿದೆ," ಎಂದು ಪ್ರಧಾನಿ ಹೇಳಿದರು. ಇಂದೇ, ಮೂರು ಮೀನುಗಾರಿಕಾ ಬಂದರುಗಳ ಕೆಲಸ ಪ್ರಾರಂಭವಾಗಿದೆ.

ಇದೇ ಮೊದಲ ಬಾರಿಗೆ ರೈತರು, ಪಶುಸಂಗೋಪನೆ ಕಾರ್ಮಿಕರು ಮತ್ತು ʻಸಾಗರ್ ಖೇಡುʼ ಮೀನುಗಾರರನ್ನು ಕಿಸಾನ್ ಕ್ರೆಡಿಟ್‌ಕಾರ್ಡ್ ಯೋಜನೆಯ ಸೇವೆಗಳೊಂದಿಗೆ ಸಂಪರ್ಕಿಸಲಾಗಿದೆ ಹಾಗೂ ಬ್ಯಾಂಕ್‌ನಿಂದ ಸಾಲ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಇದರ ಪರಿಣಾಮವಾಗಿ, 3.5 ಕೋಟಿ ಫಲಾನುಭವಿಗಳು ಇದರ ಸೇವೆಗಳನ್ನು ಪಡೆಯುತ್ತಿದ್ದಾರೆ ಎಂದು ಶ್ರೀ ಮೋದಿ ಹೇಳಿದರು.  ಇದು ಸಮಾಜದ ಬಡವರು ಮತ್ತು ನಿರ್ಗತಿಕರು ತಮ್ಮ ಹಾಗೂ ತಮ್ಮ ಕುಟುಂಬಗಳ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಅವರನ್ನು ಸಶಕ್ತಗೊಳಿಸಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದ ಫಲಾನುಭವಿಗಳಿಗೆ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ಅವರು ಹೇಳಿದರು. "ಕಿಸಾನ್ ಕ್ರೆಡಿಟ್‌ಕಾರ್ಡ್ ವಿಶೇಷವಾಗಿ ನಮ್ಮ ಪಶುಸಂಗೋಪನಾ ಕಾರ್ಮಿಕರು ಮತ್ತು ಮೀನುಗಾರ ಸಮುದಾಯಕ್ಕೆ ಜೀವನವನ್ನು ಸಾಕಷ್ಟು ಸುಲಭಗೊಳಿಸಿದೆ" ಎಂದು ಪ್ರಧಾನಿ ಹೇಳಿದರು.

ಮಾತು ಮುಂದುವರಿಸಿದ ಪ್ರಧಾನಿಯವರು, "ಕಳೆದ ಎರಡು ದಶಕಗಳಲ್ಲಿ ಬಂದರುಗಳ ಪ್ರಚಂಡ ಅಭಿವೃದ್ಧಿಯು ಗುಜರಾತ್‌ಗೆ ಸಮೃದ್ಧಿಯ ಮಹಾಪೂರದ ಬಾಗಿಲನ್ನೇ ತೆರೆದಿದೆ. ಇದು ಗುಜರಾತ್‌ಗೆ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ,ʼʼ ಎಂದು ಬಣ್ಣಿಸಿದರು. ʻಸಾಗರ ಮಾಲಾʼ ಯೋಜನೆಯ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಬಂದರುಗಳನ್ನು ಅಭಿವೃದ್ಧಿಪಡಿಸುವುದಷ್ಟೇ ಅಲ್ಲ, ಬಂದರು ಆಧಾರಿತ ಅಭಿವೃದ್ಧಿಯನ್ನು ಕಾರ್ಯಗತಗೊಳಿಸುವ ಮೂಲಕ ಭಾರತದ ಕರಾವಳಿಗಳಲ್ಲಿ ಮೂಲಸೌಕರ್ಯಗಳನ್ನು ಉತ್ತೇಜಿಸಲು ಸರಕಾರ ಉಪಕ್ರಮ ಕೈಗೊಂಡಿದೆ ಎಂದು ಮಾಹಿತಿ ನೀಡಿದರು. "ಗುಜರಾತ್ ಕರಾವಳಿಗಳು ಇದರ ಆಧಾರದ ಮೇಲೆ ಅನೇಕ ಹೊಸ ಯೋಜನೆಗಳಿಗೆ ಸಾಕ್ಷಿಯಾಗಿವೆ," ಎಂದರು. "ಹೊಸ ಕರಾವಳಿ ಹೆದ್ದಾರಿಯು ಜುನಾಗಢ ಮಾತ್ರವಲ್ಲದೆ ಪೋರ್‌ಬಂದರ್, ಜಾಮ್‌ನಗರ, ದೇವಭೂಮಿ ದ್ವಾರಕಾ, ಮೊರ್ಬಿ ಸೇರಿದಂತೆ ಅನೇಕ ಜಿಲ್ಲೆಗಳ ಮೂಲಕ ಮಧ್ಯ ಹಾಗೂ ದಕ್ಷಿಣ ಗುಜರಾತ್‌ಗೆ ಹಾದುಹೋಗಲಿದೆ. ಇದು ಗುಜರಾತ್‌ನ ಇಡೀ ಕರಾವಳಿಯ ಸಂಪರ್ಕವನ್ನು ಬಲಪಡಿಸುತ್ತದೆ," ಎಂದು ಹೇಳಿದರು.

ರಾಜ್ಯದ ತಾಯಂದಿರು ಮತ್ತು ಸಹೋದರಿಯರು ಮಾಡಿದ ಅದ್ಭುತ ಕಾರ್ಯವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಅವರ ಕೆಲಸಗಳು ರಕ್ಷಣಾ ಕವಚವಾಗಲಿವೆ ಎಂದರು. ಕಳೆದ 8 ವರ್ಷಗಳಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಕೇಂದ್ರ ಸರಕಾರ ಕೈಗೊಂಡಿರುವ ಪ್ರಯತ್ನಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ತಾಯಂದಿರು ಮತ್ತು ಸಹೋದರಿಯರ ಜೀವನವನ್ನು ಸುಲಭಗೊಳಿಸಲು ಪ್ರತಿಯೊಂದು ಹಂತದಲ್ಲೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಮಹಿಳೆಯರ ಆರೋಗ್ಯ ಮತ್ತು ಗೌರವದ ಸುಧಾರಣೆಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ʻಸ್ವಚ್ಛ ಭಾರತʼ ಅಭಿಯಾನದಡಿ ಕೋಟ್ಯಂತರ ಶೌಚಾಲಯಗಳ ನಿರ್ಮಾಣದಿಂದ ಇದು ಸಾಧ್ಯವಾಯಿತು ಎಂದರು. ʻಉಜ್ವಲʼ ಯೋಜನೆಯು ಮಹಿಳೆಯರಿಗೆ ಕೇವಲ ಸಮಯವನ್ನು ಉಳಿಸುವ ಮೂಲಕ ಮಾತ್ರವಲ್ಲದೆ ಅವರ ಆರೋಗ್ಯ ಮತ್ತು ಇಡೀ ಕುಟುಂಬದ ಆರೋಗ್ಯವನ್ನು ಸುಧಾರಿಸುವ ಮೂಲಕ ಅವರಿಗೆ ಸಹಾಯ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು. ಒಂದು ಹಳ್ಳಿಗೆ ಕೆಲವು ನೀರಿನ ಕೈಪಂಪ್‌ಗಳನ್ನು ತಲುಪಿಸಿ, ನಂತರ ಅದನ್ನೇ ದೊಡ್ಡ ಸಾಧನೆ ಎಂಬಂತೆ ಆಡಂಬರ ಮತ್ತು ಅಬ್ಬರದ ಪ್ರದರ್ಶನದೊಂದಿಗೆ ಆಚರಿಸುತ್ತಿದ್ದ ಹಿಂದಿನ ಸರಕಾರಗಳ ಕಾಲವನ್ನು ಪ್ರಧಾನಮಂತ್ರಿಯವರು ತಿರಸ್ಕರಿಸಿದರು. "ಇಂದು ನಿಮ್ಮ ಮಗ ಪ್ರತಿ ಮನೆಗೂ ಕೊಳವೆ ಮೂಲಕ ನೀರನ್ನು ತಲುಪಿಸುತ್ತಿದ್ದಾನೆ," ಎಂದು ಹೇಳಿದರು. ʻಪ್ರಧಾನ ಮಂತ್ರಿ ಮಾತೃ ವಂದನಾʼ ಯೋಜನೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಗರ್ಭಿಣಿಯರಿಗೆ ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವಿಸಲು ಅನುಕೂಲವಾಗುವಂತೆ ನಾನಾ ರೀತಿಯಲ್ಲಿ ನೆರವು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. "ನಮ್ಮ ಸರಕಾರವು ʻಪ್ರಧಾನ ಮಂತ್ರಿ ಆವಾಸ್ ಯೋಜನೆʼಯಡಿ ನೀಡುವ ಹೆಚ್ಚಿನ ಮನೆಗಳು ಮಹಿಳೆಯರ ಹೆಸರಿನಲ್ಲಿವೆ," ಎಂದು ಅವರು ಹೇಳಿದರು. "ಇಂದು ನಮ್ಮ ಸರಕಾರವು ಸ್ವಸಹಾಯ ಗುಂಪುಗಳ ಮೂಲಕ ಗ್ರಾಮ-ಗ್ರಾಮಗಳಲ್ಲಿ ಮಹಿಳಾ ಉದ್ಯಮಶೀಲತೆಗೆ ವ್ಯಾಪಕ ಉತ್ತೇಜನ ನೀಡುತ್ತಿದೆ. ದೇಶಾದ್ಯಂತ 8 ಕೋಟಿಗೂ ಹೆಚ್ಚು ಸಹೋದರಿಯರು ಸ್ವಸಹಾಯ ಗುಂಪುಗಳೊಂದಿಗೆ ಸಂಪರ್ಕಗೊಂಡಿದ್ದಾರೆ, ಅವರಲ್ಲಿ ಲಕ್ಷಾಂತರ ಮಂದಿ ಗುಜರಾತ್ ಮೂಲದವರಾಗಿದ್ದಾರೆ. ಅಂತೆಯೇ, ʻಮುದ್ರಾ ಯೋಜನೆʼಯಡಿ ಅನೇಕ ಸಹೋದರಿಯರು ಮೊದಲ ಬಾರಿಗೆ ಉದ್ಯಮಿಗಳಾಗಿದ್ದಾರೆ ಎಂದು ಪ್ರಧಾನಿ ಉಲ್ಲೇಖಿಸಿದರು.

ದೇಶದ ಯುವಕರಿಗೆ ಒತ್ತು ನೀಡುವ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು, ಕಳೆದ 8 ವರ್ಷಗಳಲ್ಲಿ ಗುಜರಾತ್ ಸೇರಿದಂತೆ ದೇಶಾದ್ಯಂತ ಯುವಜನರ ಸಾಮರ್ಥ್ಯವನ್ನು ಹೆಚ್ಚಿಸಲು ನಾವು ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು. ಶಿಕ್ಷಣದಿಂದ ಹಿಡಿದು ಉದ್ಯೋಗ ಮತ್ತು ಸ್ವ-ಉದ್ಯೋಗದವರೆಗೆ ಪ್ರತಿಯೊಂದು ಅಂಶದಲ್ಲೂ ಹೊಸ ಅವಕಾಶಗಳನ್ನು ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ. ಇಂದು ಸರಕಾರವು ಉದ್ಯಮಶೀಲತೆಯ ಪ್ರತಿಯೊಂದು ಹಂತದಲ್ಲೂ ಯುವಕರಿಗೆ ಸಹಾಯ ಮಾಡುತ್ತಿದೆ ಎಂದರು. ಇದಕ್ಕೂ ಮುನ್ನ ಗಾಂಧಿನಗರದಲ್ಲಿ ಪ್ರಧಾನಮಂತ್ರಿಯವರು ಉದ್ಘಾಟಿಸಿದ ʻಡಿಫೆನ್ಸ್ ಎಕ್ಸ್‌ಪೋ-2022ʼ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಗುಜರಾತ್ ರಾಜ್ಯವು ಯುದ್ಧ ಟ್ಯಾಂಕ್‌ಗಳನ್ನು ತಯಾರಿಸುವ ದಿನ ದೂರವಿಲ್ಲ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯವು ಸಾಧಿಸಿರುವ ಮೈಲುಗಲ್ಲುಗಳ ಬಗ್ಗೆಯೂ ಪ್ರಧಾನಮಂತ್ರಿಯವರು ಬೆಳಕು ಚೆಲ್ಲಿದರು. ಕಳೆದ 8 ವರ್ಷಗಳಲ್ಲಿ ದೇಶದಲ್ಲಿ ನೂರಾರು ವಿಶ್ವವಿದ್ಯಾಲಯಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು. ಅನೇಕ ಗುಣಮಟ್ಟದ ಉನ್ನತ ಶಿಕ್ಷಣದ ಸಂಸ್ಥೆಗಳ ಆರಂಭಕ್ಕೆ ಗುಜರಾತ್ ಸಾಕ್ಷಿಯಾಗುತ್ತಿದೆ. ʻಹೊಸ ರಾಷ್ಟ್ರೀಯ ಶಿಕ್ಷಣ ನೀತಿʼಯು ಗುಜರಾತಿ ಭಾಷೆಯಲ್ಲಿ ಹೊಸ ಅವಕಾಶಗಳನ್ನು ಅನಾವರಣಗೊಳಿಸುತ್ತಿದೆ. ಅಂತೆಯೇ, ಡಿಜಿಟಲ್ ಬೆಳವಣಿಗೆಗಳು ಗುಜರಾತ್‌ನ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂದರು. "ಡಿಜಿಟಲ್ ಇಂಡಿಯಾ ಗುಜರಾತ್‌ನ ಯುವಕರಿಗೆ ತಮ್ಮ ವಿವಿಧ ಪ್ರತಿಭೆಗಳನ್ನು ಬೆಳೆಸಿಕೊಳಳಲು ಹೊಸ ಅವಕಾಶಗಳನ್ನು ನೀಡಿದೆ, ಇದು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಯುವಕರಿಗೆ ದೊಡ್ಡ ಮಾರುಕಟ್ಟೆಗೆ ಪ್ರವೇಶ ಲಭ್ಯವಾಗಿದೆ. ಅಗ್ಗದ ʻಮೇಡ್ ಇನ್ ಇಂಡಿಯಾʼ ಮೊಬೈಲ್ ಫೋನ್‌ಗಳು ಮತ್ತು ಅಗ್ಗದ ಡೇಟಾ ಸೌಲಭ್ಯಗಳಿಂದಾಗಿ ಇದು ಸಾಧ್ಯವಾಗುತ್ತಿದೆ", ಎಂದು ಅವರು ಹೇಳಿದರು.

ಹೆಚ್ಚುತ್ತಿರುವ ಮೂಲಸೌಕರ್ಯವು ಪ್ರವಾಸೋದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಗಮನಸೆಳೆದರು. ಈ ಪ್ರದೇಶದಲ್ಲಿ ಈಗ ಸೇವೆಯಲ್ಲಿರುವ ಹಗ್ಗದ ಸೇತುವೆಯು ಅತಿದೊಡ್ಡ ರೋಪ್‌ವೇಗಳಲ್ಲಿ ಒಂದಾಗಿದೆ ಎಂದರು. ಅನೇಕ ವರ್ಷಗಳ ನಂತರ, ಈ ವರ್ಷದ ಏಪ್ರಿಕಲ್‌ನಲ್ಲಿ, ʻಕೇಶೋಡ್ ವಿಮಾನ ನಿಲ್ದಾಣʼದಿಂದ ಮತ್ತೆ ವಿಮಾನ ಹಾರಾಟವನ್ನು ಪ್ರಾರಂಭಿಸಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಕೇಶೋಡ್ ವಿಮಾನ ನಿಲ್ದಾಣವನ್ನು ಮತ್ತಷ್ಟು ಅಭಿವೃದ್ಧಿಪಡಿಸಿದಾಗ, ಅಲ್ಲಿಂದ ಸರಕು ಸಾಗಣೆಗೆ ಸಾಧ್ಯವಾದಾಗ, ನಮ್ಮ ಹಣ್ಣುಗಳು, ತರಕಾರಿಗಳು, ಮೀನು ಮತ್ತು ಇತರ ಉತ್ಪನ್ನಗಳನ್ನು ಇಲ್ಲಿಂದ ಕಳುಹಿಸುವುದು ಸುಲಭವಾಗುತ್ತದೆ. ಕೇಶೋಡ್ ವಿಮಾನ ನಿಲ್ದಾಣದ ವಿಸ್ತರಣೆಯೊಂದಿಗೆ, ದೇಶ ಮತ್ತು ವಿಶ್ವವು ಅಂತಹ ಎಲ್ಲಾ ಸ್ಥಳಗಳಿಗೆ ಹೆಚ್ಚಿನ ಸಂಪರ್ಕವನ್ನು ಪಡೆಯುತ್ತದೆ, ಇಲ್ಲಿನ ಪ್ರವಾಸೋದ್ಯಮವು ಮತ್ತಷ್ಟು ವೃದ್ಧಿಯಾಗುತ್ತದೆ ಎಂದು ಅವರು ಹೇಳಿದರು.

ಬಾಹ್ಯಾಕಾಶ, ವಿಜ್ಞಾನ ಅಥವಾ ಕ್ರೀಡಾ ಕ್ಷೇತ್ರಗಳಲ್ಲಿನ ರಾಷ್ಟ್ರೀಯ ಸಾಧನೆಗಳ ಬಗ್ಗೆ ಇಡೀ ದೇಶವೇ ಒಂದಾಗಿ ಸಂಭ್ರಮಿಸುತ್ತಿದೆ. ಆದಾಗ್ಯೂ, ಗುಜರಾತ್ ಮತ್ತು ಅದರ ಜನರ ಸಾಧನೆಗಳನ್ನು ಕೆಲವು ವರ್ಗಗಳು ರಾಜಕೀಯಗೊಳಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಪ್ರಧಾನಿ ವಿಷಾದಿಸಿದರು. "ಕೆಲವು ರಾಜಕೀಯ ಪಕ್ಷಗಳು ಗುಜರಾತ್ ಅನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಮ್ಮ ರಾಜಕೀಯ ಸಿದ್ಧಾಂತವನ್ನಾಗಿ ಮಾಡಿಕೊಂಡಿವೆ" ಎಂದು ಪ್ರಧಾನಿ ಹೇಳಿದರು. ಗುಜರಾತಿಗಳನ್ನು ಅಥವಾ ದೇಶದ ಯಾವುದೇ ರಾಜ್ಯದ ಜನರನ್ನು ಅವಮಾನಿಸುವುದನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದು ಅವರು ಒತ್ತಿ ಹೇಳಿದರು. 'ಏಕ್ ಭಾರತ್‌, ಶ್ರೇಷ್ಠ ಭಾರತ್' ಮತ್ತು ಸರ್ದಾರ್ ಪಟೇಲರ ಕನಸುಗಳ ಸ್ಫೂರ್ತಿಯನ್ನು ದುರ್ಬಲಗೊಳಿಸಲು ನಾವು ಅವಕಾಶ ನೀಡಬಾರದು. ಸಿನಿಕತನವನ್ನು ಭರವಸೆಯಾಗಿ ಪರಿವರ್ತಿಸುವ ಮತ್ತು ಅಭಿವೃದ್ಧಿಯ ಮೂಲಕ ಸುಳ್ಳನ್ನು ಎದುರಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು. ಗುಜರಾತ್‌ನ ಏಕತೆಯೇ ಅದರ ಶಕ್ತಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಸಂಸದರಾದ ಶ್ರೀ ರಾಜೇಶ್ ಭಾಯಿ ಚುಡಾಸಮಾ ಮತ್ತು ಶ್ರೀ ರಮೇಶ್ ಧಾಡುಕ್ ಮತ್ತು ಗುಜರಾತ್ ಸರಕಾರದ ಸಚಿವರಾದ ಶ್ರೀ ಋಷಿಕೇಶ್ ಪಟೇಲ್ ಮತ್ತು ಶ್ರೀ ದೇವಭಾಯಿ ಮಲಂ ಮೊದಲಾದವರು ಉಪಸ್ಥಿತರಿದ್ದರು.

ಹಿನ್ನೆಲೆ
ಪ್ರಧಾನಮಂತ್ರಿಯವರು ಕರಾವಳಿ ಹೆದ್ದಾರಿಗಳ ಸುಧಾರಣೆ ಹಾಗೂ ಸಂಪರ್ಕ ಸೇತುಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಯ ಮೊದಲ ಹಂತದಲ್ಲಿ 13 ಜಿಲ್ಲೆಗಳಲ್ಲಿ ಒಟ್ಟು 270 ಕಿ.ಮೀ ಉದ್ದದ ಹೆದ್ದಾರಿಯನ್ನು ನಿರ್ಮಿಸಲಾಗುವುದು.

ಪ್ರಧಾನಮಂತ್ರಿಯವರು ಜುನಾಗಢದಲ್ಲಿ ಎರಡು ನೀರು ಸರಬರಾಜು ಯೋಜನೆಗಳಿಗೆ ಮತ್ತು ಕೃಷಿ ಉತ್ಪನ್ನಗಳ ಸಂಗ್ರಹಣೆಗಾಗಿ ಗೋದಾಮು ಸಂಕೀರ್ಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಪೋರ್‌ಬಂದರ್‌ನಲ್ಲಿ ಪ್ರಧಾನಮಂತ್ರಿಯವರು ಮಾಧವಪುರದ ಶ್ರೀ ಕೃಷ್ಣ ರುಕ್ಮಿಣಿ ಮಂದಿರದ ಸಮಗ್ರ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು. ಪೋರ್‌ಬಂದರ್ ಮೀನುಗಾರಿಕಾ ಬಂದರಿನಲ್ಲಿ ಒಳಚರಂಡಿ ಮತ್ತು ನೀರು ಸರಬರಾಜು ಯೋಜನೆಗಳಿಗೆ ಹಾಗೂ ಹೂಳೆತ್ತುವಿಕೆ ಕಾರ್ಯಕ್ಕೆ ಅವರು ಶಂಕುಸ್ಥಾಪನೆ ನೆರವೇರಿಸಿದರು. ಮಧ್ವಾಡ್‌ನಲ್ಲಿ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಸೇರಿದಂತೆ ಗಿರ್ ಸೋಮನಾಥದಲ್ಲಿ ಎರಡು ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು.

*****



(Release ID: 1869640) Visitor Counter : 116