ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್ನ ಲೋಥಾಲ್ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣದ ಪ್ರಗತಿ ಪರಿಶೀಲನೆಯನ್ನು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅವತರಣಿಕೆ

Posted On: 18 OCT 2022 7:49PM by PIB Bengaluru

ನಮಸ್ಕಾರ!
ಐತಿಹಾಸಿಕ ಮತ್ತು ವಿಶ್ವ ಪರಂಪರೆಯ ಮಹತ್ವದ ಲೋಥಾಲ್ನಲ್ಲಿ ನೀವೆಲ್ಲರೂ ಸೇರಿದ್ದೀರಿ. ದೂರದ ದೆಹಲಿಯಿಂದ ತಂತ್ರಜ್ಞಾನದ ಮೂಲಕ ನಾನು ನಿಮ್ಮೊಂದಿಗೆ ಸಂಪರ್ಕ ಹೊಂದಿದ್ದರೂ, ನಿಮ್ಮೆಲ್ಲರ ನಡುವೆಯೇ ನಾನು ಇದ್ದೇನೆ ಎನಿಸುತ್ತಿದೆ. ಇದೀಗ, ನಾನು ಡ್ರೋನ್ ಮೂಲಕ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣದಲ್ಲಿ ವಿವಿಧ ಯೋಜನೆಗಳನ್ನು ನೋಡಿದ್ದೇನೆ ಮತ್ತು ಅವುಗಳ ಪ್ರಗತಿಯನ್ನು ಪರಿಶೀಲಿಸಿದ್ದೇನೆ. ಈ ಯೋಜನೆಯು ಅತ್ಯಂತ ವೇಗವಾಗಿ ಪ್ರಗತಿಯಲ್ಲಿದೆ ಎಂದು ನನಗೆ ತೃಪ್ತಿ ಇದೆ.

ಸ್ನೇಹಿತರೇ,
ಈ ವರ್ಷ ಕೆಂಪು ಕೋಟೆಯ ಮೇಲಿನಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವಾಗ ನಾನು ‘ಪಂಚ ಪ್ರಾಣ’(ಐದು ಪ್ರತಿಜ್ಞೆ) ಭಾಗವಾಗಿ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವ ಕುರಿತು ಮಾತನಾಡಿದೆ. ನಮ್ಮ ಮುಖ್ಯಮಂತ್ರಿ ಭೂಪೇಂದ್ರಭಾಯಿ ಕೂಡ ಈಗಾಗಲೇ ಅದರ ಬಗ್ಗೆ ಉಲ್ಲೇಖಿಸಿದ್ದಾರೆ. ನಮ್ಮ ಕಡಲ ಪರಂಪರೆಯು ನಮ್ಮ ಪೂರ್ವಜರಿಂದ ಬಂದಂತಹ ಶ್ರೇಷ್ಠ ಪರಂಪರೆಯಾಗಿದೆ. ಯಾವುದೇ ಸ್ಥಳ ಅಥವಾ ಕಾಲದ ಇತಿಹಾಸವು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುವುದಲ್ಲದೆ ಭವಿಷ್ಯದ ಬಗ್ಗೆ ನಮ್ಮನ್ನು ಎಚ್ಚರಿಸುತ್ತದೆ. ನಮ್ಮ ಇತಿಹಾಸದಲ್ಲಿ ಇಂತಹ ಅನೇಕ ಕಥೆಗಳಿವೆ, ಅವುಗಳು ಮರೆತುಹೋಗಿವೆ ಮತ್ತು ಅವುಗಳನ್ನು ಸಂರಕ್ಷಿಸಲು ಮತ್ತು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಇತಿಹಾಸದ ಆ ಘಟನೆಗಳಿಂದ ನಾವು ಕಲಿಯುವುದು ಬಹಳಷ್ಟಿತ್ತು.

ಸಾವಿರಾರು ವರ್ಷಗಳ ಹಿಂದೆಯೇ ಸಾಕರ ವ್ಯಾಪಾರಕ್ಕೆ ಹೆಸರಾಗಿದ್ದ ಲೋಥಲ್, ಧೋಲವೀರಾಗಳಂತಹ ಸ್ಥಳಗಳ ಮಹಾನ್ ಪರಂಪರೆಯನ್ನು ನಾವು ಮರೆತಿದ್ದೇವೆ. ದಕ್ಷಿಣದಲ್ಲಿ ಚೋಳ ಸಾಮ್ರಾಜ್ಯ, ಚೇರ ಮತ್ತು ಪಾಂಡ್ಯ ರಾಜವಂಶಗಳು ಇದ್ದವು, ಅವುಗಳು ಸಮುದ್ರ ಸಂಪನ್ಮೂಲಗಳ ಸಾಮರ್ಥ್ಯವನ್ನು ಗುರುತಿಸಿದ್ದವು ಮತ್ತು ಅಭೂತಪೂರ್ವ ಸಾಧನೆಯನ್ನು ಮಾಡಿದವು. ಆ ರಾಜವಂಶಗಳು ತಮ್ಮ ಕಡಲ ಶಕ್ತಿಯನ್ನು ವಿಸ್ತರಿಸಿದ್ದಲ್ಲದೆ, ದೂರದ ದೇಶಗಳಿಗೆ ವ್ಯಾಪಾರವನ್ನು ಕೊಂಡೊಯ್ಯುವಲ್ಲಿ ಯಶಸ್ವಿಯಾದವು. ಛತ್ರಪತಿ ಶಿವಾಜಿ ಮಹಾರಾಜರು ಬಲವಾದ ನೌಕಾಪಡೆಯನ್ನು ರಚಿಸಿದರು ಮತ್ತು ವಿದೇಶಿ ಆಕ್ರಮಣಕಾರರಿಗೆ ಸವಾಲು ಹಾಕಿದರು.

ಭಾರತದ ಇತಿಹಾಸದಲ್ಲಿ ಇದೊಂದು ಹೆಮ್ಮೆಯ ಅಧ್ಯಾಯವಾಗಿದ್ದು ಅದನ್ನು ನಿರ್ಲಕ್ಷಿಸಲಾಗಿದೆ. ಸಾವಿರಾರು ವರ್ಷಗಳ ಹಿಂದೆಯೇ ಕಚ್ ಹಡಗು ನಿರ್ಮಾಣ ಉದ್ಯಮವನ್ನು ಹೊಂದಿತ್ತು ಎಂದು ನೀವು ಊಹಿಸಬಲ್ಲಿರಾ? ಭಾರತದಲ್ಲಿ ತಯಾರಾದ ದೊಡ್ಡ ಹಡಗುಗಳು ಪ್ರಪಂಚದಾದ್ಯಂತ ಮಾರಾಟವಾಗುತ್ತಿದ್ದವು. ಪರಂಪರೆಯ ಬಗೆಗಿನ ಈ ಅಸಡ್ಡೆ ದೇಶಕ್ಕೆ ಬಹಳಷ್ಟು ಹಾನಿ ಮಾಡಿತು. ಈ ಪರಿಸ್ಥಿತಿಯನ್ನು ಬದಲಾಯಿಸುವುದು ಅವಶ್ಯಕ. ಆದ್ದರಿಂದ, ಭಾರತದ ಹೆಮ್ಮೆಯ ಕೇಂದ್ರಗಳಾದ ಧೋಲಾವೀರಾ ಮತ್ತು ಲೋಥಲ್ ಗಳನ್ನು ಅವು ಹಿಂದೆ ಹೆಸರುವಾಸಿಯಾಗಿದ್ದ ರೂಪದಲ್ಲಿಯೇ ನಿರ್ಮಿಸಲು ನಾವು ನಿರ್ಧರಿಸಿದೆವು. ಇಂದು ನಾವು ಆ ಅಭಿಯಾನವು ಕ್ಷಿಪ್ರ ಗತಿಯಲ್ಲಿ ಸಾಗುತ್ತಿರುವುದನ್ನು ನೋಡಬಹುದು.

ಸ್ನೇಹಿತರೇ,
ಇಂದು, ಲೋಥಲ್ ಬಗ್ಗೆ ಮಾತನಾಡುವಾಗ ನನಗೆ ಸಾವಿರಾರು ವರ್ಷಗಳ ಪರಂಪರೆಯು ನೆನಪಿಗೆ ಬರುತ್ತದೆ. ಗುಜರಾತಿನ ಹಲವು ಪ್ರದೇಶಗಳಲ್ಲಿ ಸಿಕೋತಾರ್ ಮಾತೆಯನ್ನು ಪೂಜಿಸಲಾಗುತ್ತದೆ. ಆಕೆಯನ್ನು ಸಮುದ್ರ ದೇವತೆ ಎಂದು ಪೂಜಿಸಲಾಗುತ್ತದೆ. ಲೋಥಾಲ್ ಕುರಿತು ಸಂಶೋಧನೆ ನಡೆಸುತ್ತಿರುವ ತಜ್ಞರು ಹಿಂದೆಯೂ ಸಿಕೋತಾರ್ ಮಾತೆಯನ್ನು ಯಾವುದೋ ರೂಪದಲ್ಲಿ ಪೂಜಿಸುತ್ತಿದ್ದರು ಎಂದು ನಂಬುತ್ತಾರೆ. ಸಮುದ್ರಕ್ಕೆ ಇಳಿಯುವ ಮೊದಲು ಜನರು ಸಿಕೋತಾರ್ ದೇವಿಯನ್ನು ಪೂಜಿಸುತ್ತಿದ್ದರು, ತಮ್ಮ ಪ್ರಯಾಣದ ಸಮಯದಲ್ಲಿ ದೇವಿಯು ತಮ್ಮನ್ನು ರಕ್ಷಿಸುತ್ತಾಳೆ ಎಂದು ಅವರು ನಂಬುತ್ತಾರೆ. ಇತಿಹಾಸಕಾರರ ಪ್ರಕಾರ, ಸಿಕೋತಾರ್ ಮಾತೆಯು ಇಂದು ಅಡೆನ್ ಕೊಲ್ಲಿಯಲ್ಲಿರುವ ಸೊಕೊತ್ರಾ ದ್ವೀಪಕ್ಕೆ ಸಂಬಂಧಿಸಿದೆ. ಸಾವಿರಾರು ವರ್ಷಗಳ ಹಿಂದೆಯೇ ಖಂಭತ್ ಕೊಲ್ಲಿಯಿಂದ ಸಮುದ್ರ ವ್ಯಾಪಾರ ಮಾರ್ಗಗಳು ದೂರದವರೆಗೆ ತೆರೆದಿದ್ದವು ಎಂಬುದನ್ನು ಇದು ತೋರಿಸುತ್ತದೆ.

ಸ್ನೇಹಿತರೇ,
ಇತ್ತೀಚೆಗೆ, ವಡ್ನಾಗರದ ಬಳಿ ಉತ್ಖನನದ ಸಮಯದಲ್ಲಿ ಸಿಕೋತಾರ್ ಮಾತೆಯ ದೇವಾಲಯವು ಪತ್ತೆಯಾಗಿದೆ. ಪ್ರಾಚೀನ ಕಾಲದಲ್ಲಿ ಇಲ್ಲಿ ಕಡಲ ವ್ಯಾಪಾರವು ಅಸ್ತಿತ್ವದಲ್ಲಿತ್ತು ಎಂದು ಹೇಳುವ ಕೆಲವು ಪುರಾವೆಗಳು ಕಂಡುಬಂದಿವೆ. ಅದೇ ರೀತಿ ಸುರೇಂದ್ರನಗರದ ಜಿಂಜುವಾಡ ಗ್ರಾಮದಲ್ಲಿ ಲೈಟ್ ಹೌಸ್ ಇದ್ದ ಬಗ್ಗೆ ಪುರಾವೆಗಳು ಸಿಕ್ಕಿವೆ. ರಾತ್ರಿಯಲ್ಲಿ ಹಡಗುಗಳಿಗೆ ಮಾರ್ಗದರ್ಶನ ನೀಡಲು ಲೈಟ್ ಹೌಸ್ ನಿರ್ಮಿಸಲಾಗುತ್ತಿತ್ತು ಎಂಬುದು ನಿಮಗೆ ಗೊತ್ತಿದೆ. ಜಿಂಜುವಾಡ ಗ್ರಾಮದಿಂದ ಸಮುದ್ರವು ಸುಮಾರು 100 ಕಿಲೋಮೀಟರ್ ದೂರದಲ್ಲಿದೆ ಎಂದು ತಿಳಿದರೆ ದೇಶದ ಜನರು ಆಶ್ಚರ್ಯಪಡುತ್ತಾರೆ. ಈ ಗ್ರಾಮವು ಹಲವಾರು ಶತಮಾನಗಳ ಹಿಂದೆ ಕಾರ್ಯನಿರತ ಬಂದರನ್ನು ಹೊಂದಿತ್ತು ಎಂಬ ಬಗ್ಗೆ ಹಲವಾರು ಪುರಾವೆಗಳಿವೆ. ಪ್ರಾಚೀನ ಕಾಲದಿಂದಲೂ ಈ ಇಡೀ ಪ್ರದೇಶದಲ್ಲಿ ಪ್ರವರ್ಧಮಾನಕ್ಕೆ ಬಂದ ಕಡಲ ವ್ಯಾಪಾರದ ಬಗ್ಗೆ ಇದು ನಮಗೆ ಹೇಳುತ್ತದೆ.

ಸ್ನೇಹಿತರೇ,
ಲೋಥಲ್ ಸಿಂಧೂ ಕಣಿವೆ ನಾಗರಿಕತೆಯ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು ಮಾತ್ರವಲ್ಲ, ಇದು ಭಾರತದ ಸಮುದ್ರ ಶಕ್ತಿ ಮತ್ತು ಸಮೃದ್ಧಿಯ ಸಂಕೇತವಾಗಿತ್ತು. ಸಾವಿರಾರು ವರ್ಷಗಳ ಹಿಂದೆ ಲೋಥಾಲ್ ಅನ್ನು ಬಂದರು ನಗರವಾಗಿ ಅಭಿವೃದ್ಧಿಪಡಿಸಿದ ರೀತಿ ಇನ್ನೂ ತಜ್ಞರನ್ನು ಬೆರಗುಗೊಳಿಸುತ್ತಿದೆ. ಲೋಥಾಲ್ನ ಉತ್ಖನನದಲ್ಲಿ ಕಂಡುಬಂದ್ ನಗರ, ಮಾರುಕಟ್ಟೆ ಮತ್ತು ಬಂದರಿನ ಅವಶೇಷಗಳು ಆ ಅವಧಿಯಲ್ಲಿ ನಗರ ಯೋಜನೆ ಮತ್ತು ವಾಸ್ತುಶಿಲ್ಪದ ಅದ್ಭುತ ನೋಟಗಳನ್ನು ನೀಡುತ್ತವೆ. ಪ್ರಾಕೃತಿಕ ಸವಾಲುಗಳನ್ನು ಎದುರಿಸಲು ಇಲ್ಲಿ ಇದ್ದ ವ್ಯವಸ್ಥೆಯಿಂದ ಇಂದಿನ ಯೋಜನಾ ನಿರೂಪಕರು ಕಲಿಯಬೇಕಾದುದು ಬಹಳಷ್ಟಿದೆ.

ಸ್ನೇಹಿತರೇ,
ಒಂದು ರೀತಿಯಲ್ಲಿ, ಈ ಪ್ರದೇಶವು ಲಕ್ಷ್ಮಿ ಮತ್ತು ಸರಸ್ವತಿ ದೇವಿಯರ ಆಶೀರ್ವಾದವನ್ನು ಹೊಂದಿದೆ. ಅನೇಕ ದೇಶಗಳೊಂದಿಗಿನ ವ್ಯಾಪಾರ ಸಂಬಂಧಗಳಿಂದಾಗಿ ಲೋಥಲ್ ಬಹಳ ಸಮೃದ್ಧವಾಗಿತ್ತು. ಆಗ ಲೋಥಾಲ್ ಬಂದರಿನಲ್ಲಿ 84 ದೇಶಗಳ ಧ್ವಜಗಳನ್ನು ಹಾರಿಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಅಂತೆಯೇ, ಹತ್ತಿರದ ವಲಭಿ ವಿಶ್ವವಿದ್ಯಾಲಯವು ಪ್ರಪಂಚದ 80 ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿತ್ತು. ಏಳನೇ ಶತಮಾನದಲ್ಲಿ ಈ ಪ್ರದೇಶಕ್ಕೆ ಬಂದ ಚೀನೀ ತತ್ವಜ್ಞಾನಿಗಳು ಆ ಸಮಯದಲ್ಲಿ ವಲಭಿ ವಿಶ್ವವಿದ್ಯಾಲಯದಲ್ಲಿ 6,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು ಎಂದು ಬರೆದಿದ್ದಾರೆ. ಅಂದರೆ, ಈ ಪ್ರದೇಶಕ್ಕೆ ಸರಸ್ವತಿ ದೇವಿಯ ಕೃಪೆಯೂ ಇತ್ತು.

ಸ್ನೇಹಿತರೇ,
ಲೋಥಾಲ್ನಲ್ಲಿ ಪ್ರಸ್ತಾವಿತ ಪರಂಪರೆ ಸಂಕೀರ್ಣವನ್ನು ಭಾರತದ ಜನಸಾಮಾನ್ಯರು ಸಹ ಅದರ ಇತಿಹಾಸವನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ. ಅತ್ಯಂತ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅದೇ ಯುಗವನ್ನು ಪುನರುತ್ಥಾನಗೊಳಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಸಾವಿರಾರು ವರ್ಷಗಳ ಹಿಂದಿನ ಅದೇ ವೈಭವ ಮತ್ತು ಶಕ್ತಿ ಈ ನೆಲದಲ್ಲಿ ಪುನರುಜ್ಜೀವನಗೊಳ್ಳುತ್ತಿದೆ.

ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ಇದೊಂದು ದೊಡ್ಡ ಆಕರ್ಷಣೆಯ ಕೇಂದ್ರವಾಗಲಿದೆ ಎಂದು ನನಗೆ ಖಾತ್ರಿಯಿದೆ. ದಿನಕ್ಕೆ ಸಾವಿರಾರು ಪ್ರವಾಸಿಗರನ್ನು ಬರಮಾಡಿಕೊಳ್ಳಲು ಸಂಕೀರ್ಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಏಕತಾನಗರದಲ್ಲಿರುವ ಏಕತಾ ಪ್ರತಿಮೆ ಪ್ರತಿದಿನ ಪ್ರವಾಸಿಗರ ದಾಖಲೆಯನ್ನು ಸೃಷ್ಟಿಸುತ್ತಿರುವಂತೆಯೇ, ಲೋಥಾಲ್ನಲ್ಲಿರುವ ಈ ಪಾರಂಪರಿಕ ಸಂಕೀರ್ಣವನ್ನು ನೋಡಲು ದೇಶದ ಮೂಲೆ ಮೂಲೆಗಳಿಂದ ಜನರು ಬರುವ ದಿನ ದೂರವಿಲ್ಲ. ಇದರಿಂದ ಇಲ್ಲಿ ಸಾವಿರಾರು ಹೊಸ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಈ ಪ್ರದೇಶವು ಅಹಮದಾಬಾದ್ನಿಂದ ಹೆಚ್ಚು ದೂರದಲ್ಲಿಲ್ಲ ಎಂಬ ಅಂಶವೂ ಹೆಚ್ಚು ಪ್ರಯೋಜನಕ್ಕೆ ಕಾರಣವಾಗುತ್ತದೆ. ಭವಿಷ್ಯದಲ್ಲಿ, ಇತರ ನಗರಗಳಿಂದ ಹೆಚ್ಚು ಹೆಚ್ಚು ಜನರು ಇಲ್ಲಿಗೆ ಬರುತ್ತಾರೆ ಮತ್ತು ಇಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಾರೆ.

ಸ್ನೇಹಿತರೇ,
ಈ ಪ್ರದೇಶ ಕಂಡ ಕಷ್ಟದ ದಿನಗಳನ್ನು ನಾನು ಮರೆಯಲಾರೆ. ಒಂದು ಕಾಲದಲ್ಲಿ ಸಮುದ್ರವು ತುಂಬಾ ವಿಸ್ತರಿಸಲ್ಪಟ್ಟಿತ್ತು, ಬಹಳ ದೊಡ್ಡ ಪ್ರದೇಶದಲ್ಲಿ ಯಾವುದೇ ಬೆಳೆಯನ್ನು ಬೆಳೆಯುವುದು ಕಷ್ಟಕರವಾಗಿತ್ತು. ಸುಮಾರು 20-25 ವರ್ಷಗಳ ಹಿಂದೆ ಬಿಕ್ಕಟ್ಟಿನ ಸಂದರ್ಭದಲ್ಲಿ ನೂರಾರು ಎಕರೆ ಜಮೀನಿನ ಮೇಲೆ ಯಾರೂ ಸಾಲ ನೀಡದ ಆ ದಿನಗಳನ್ನು ಜನರು ನೋಡಿದ್ದಾರೆ. ಸಾಲ ಕೊಡುವವರು ಉಪಯೋಗಕ್ಕೆ ಬಾರದ ಜಮೀನಲ್ಲಿ ಏನು ಮಾಡಲಾಗುತ್ತದೆ ಎಂದು ಕೇಳುತ್ತಿದ್ದರು. ನಾವು ಅಂತಹ ಪರಿಸ್ಥಿತಿಯಿಂದ ಲೋಥಾಲ್ ಮತ್ತು ಈ ಇಡೀ ಪ್ರದೇಶವನ್ನು ಇಂದು ಹೊರತಂದಿದ್ದೇವೆ.

ಸ್ನೇಹಿತರೇ,
ಲೋಥಾಲ್ ಮತ್ತು ಈ ಪ್ರದೇಶವನ್ನು ಅದರ ಹಿಂದಿನ ವೈಭವಕ್ಕೆ ಮರಳಿ ತರುವ ಪಾರಂಪರಿಕ ಸಂಕೀರ್ಣಗಳಿಗೆ ಮಾತ್ರ ನಮ್ಮ ಗಮನವು ಸೀಮಿತವಾಗಿಲ್ಲ. ಇಂದು ಗುಜರಾತ್ನ ಕರಾವಳಿ ಪ್ರದೇಶಗಳಲ್ಲಿ ಆಧುನಿಕ ಮೂಲಸೌಕರ್ಯದ ಕೆಲಸಗಳು ನಡೆಯುತ್ತಿವೆ ಮತ್ತು ಕರಾವಳಿ ಪ್ರದೇಶಗಳಲ್ಲಿ ವಿವಿಧ ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ. ಈ ಯೋಜನೆಗಳಿಗೆ ಲಕ್ಷಾಂತರ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ.
ಅತೀ ಶೀಘ್ರದಲ್ಲಿ ಸೆಮಿಕಂಡಕ್ಟರ್ ಘಟಕ ಕೂಡ ಇಲ್ಲಿನ ಹೆಗ್ಗಳಿಕೆಗೆ ಕಾರಣವಾಗಲಿದೆ. ಸಾವಿರಾರು ವರ್ಷಗಳ ಹಿಂದೆ ಇದ್ದಂತಹ ಈ ಪ್ರದೇಶವನ್ನು ಮತ್ತೆ ಅಭಿವೃದ್ಧಿ ಪಡಿಸಲು ನಮ್ಮ ಸರ್ಕಾರ ಸಂಪೂರ್ಣ ಬಲದಿಂದ ಕೆಲಸ ಮಾಡುತ್ತಿದೆ. ತನ್ನ ಇತಿಹಾಸದ ಕಾರಣದಿಂದ ನಮ್ಮಲ್ಲಿ ಹೆಮ್ಮೆಯನ್ನು ತುಂಬುವ ಲೋಥಲ್ ಈಗ ಮುಂದಿನ ಪೀಳಿಗೆಯ ಭವಿಷ್ಯವನ್ನು ರೂಪಿಸುತ್ತದೆ.

ಸ್ನೇಹಿತರೇ,
ವಸ್ತುಸಂಗ್ರಹಾಲಯವು ಕೇವಲ ವಸ್ತುಗಳನ್ನು ಅಥವಾ ದಾಖಲೆಗಳನ್ನು ಸಂಗ್ರಹಿಸುವ ಮತ್ತು ಪ್ರದರ್ಶಿಸುವ ತಾಣವಲ್ಲ. ನಾವು ನಮ್ಮ ಪರಂಪರೆಯನ್ನು ಗೌರವಿಸಿದಾಗ, ನಾವು ಅದರೊಂದಿಗೆ ಬೆಸೆದುಕೊಂಡಿರುವ ಭಾವನೆಗಳನ್ನು ಉಳಿಸಿಕೊಳ್ಳುತ್ತೇವೆ. ದೇಶಾದ್ಯಂತ ನಿರ್ಮಾಣವಾಗುತ್ತಿರುವ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯಗಳನ್ನು ನೋಡಿದಾಗ ನಮ್ಮ ಬುಡಕಟ್ಟು ವೀರರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಎಷ್ಟು ಕೊಡುಗೆ ನೀಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ನಾವು ರಾಷ್ಟ್ರೀಯ ಯುದ್ಧ ಸ್ಮಾರಕ ಮತ್ತು ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ನೋಡಿದಾಗ, ನಮ್ಮ ವೀರ ಪುತ್ರರು ಮತ್ತು ಪುತ್ರಿಯರು ದೇಶವನ್ನು ರಕ್ಷಿಸಲು ಮತ್ತು ಅದನ್ನು ಸುರಕ್ಷಿತವಾಗಿರಿಸಲು ತಮ್ಮ ಪ್ರಾಣವನ್ನು ಹೇಗೆ ಸಮರ್ಪಿಸಿದ್ದಾರೆ ಎಂಬುದನ್ನು ಅರಿತುಕೊಳ್ಳುತ್ತೇವೆ. ಪ್ರಧಾನಮಂತ್ರಿಗಳ ಮ್ಯೂಸಿಯಂಗೆ ಭೇಟಿ ನೀಡಿದಾಗ ಪ್ರಜಾಪ್ರಭುತ್ವದ ಶಕ್ತಿ, ನಮ್ಮ ದೇಶದ 75 ವರ್ಷಗಳ ಪಯಣ ತಿಳಿಯುತ್ತದೆ. ಕೆವಾಡಿಯಾದ ಏಕತಾ ನಗರದಲ್ಲಿರುವ ಏಕತಾ ಪ್ರತಿಮೆಯು ಭಾರತದ ಏಕತೆ ಮತ್ತು ಸಮಗ್ರತೆಗಾಗಿ ಪ್ರಯತ್ನ, ದೃಢತೆ ಮತ್ತು ತಪಸ್ಸುಗಳನ್ನು ನಮಗೆ ನೆನಪಿಸುತ್ತದೆ.

ನಿಮಗೆ ತಿಳಿದಿರುವಂತೆ, ಒಂದು ದೊಡ್ಡ ಸಂಶೋಧನಾ ಕಾರ್ಯ ನಡೆಯುತ್ತಿದೆ. ಕೆವಾಡಿಯಾದಲ್ಲಿರುವ ಸರ್ದಾರ್ ಪಟೇಲ್ ಪ್ರತಿಮೆಯಂತೆಯೇ, ನಾವು ದೇಶದ ಏಕತೆ ಮತ್ತು ಸಮಗ್ರತೆಗಾಗಿ ಭಾರತದೊಂದಿಗೆ ವಿಲೀನಗೊಂಡ ರಾಜಸಂಸ್ಥಾನಗಳನ್ನು ಕುರಿತು ವಸ್ತುಸಂಗ್ರಹಾಲಯವನ್ನು ನಿರ್ಮಿಸುತ್ತಿದ್ದೇವೆ. ಇದೀಗ, ವಿನ್ಯಾಸ ಮತ್ತು ಸಂಶೋಧನಾ ಕಾರ್ಯವು ಪ್ರಕ್ರಿಯೆಯಲ್ಲಿದೆ. ಸಂಶೋಧನೆಯು ರಾಜಸಂಸ್ಥಾನಗಳ ಜೀವನಶೈಲಿ, ಸಮಾಜ ಮತ್ತು ದೇಶದ ಕಲ್ಯಾಣದಲ್ಲಿ ಅವರ ಪಾತ್ರವನ್ನು ಒಳಗೊಂಡಿರುತ್ತದೆ. ಏಕತಾ ನಗರಕ್ಕೆ ಭೇಟಿ ನೀಡುವ ವ್ಯಕ್ತಿಯು ರಾಜಸಂಸ್ಥಾನಗಳಿಂದ ಸರ್ದಾರ್ ಪಟೇಲರ ಪ್ರಯಾಣದವರೆಗೆ ಮತ್ತು ರಾಜಸಂಸ್ಥಾನಗಳನ್ನು ಯಶಸ್ವಿಯಾಗಿ ಭಾರತದಲ್ಲಿ ವಿಲೀನಗೊಳಿಸುವ ಮೂಲಕ ಅವರು ಅಖಂಡ ಭಾರತವನ್ನು ಹೇಗೆ ರೂಪಿಸಿದರು ಎಂಬ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳುತ್ತಾನೆ ಸದ್ಯದಲ್ಲಿಯೇ ವಸ್ತುಸಂಗ್ರಹಾಲಯದ ನಿರ್ಮಾಣ ಕಾರ್ಯವೂ ಆರಂಭವಾಗಲಿದೆ.

ಕಳೆದ ಎಂಟು ವರ್ಷಗಳಲ್ಲಿ ನಾವು ದೇಶದಲ್ಲಿ ಅಭಿವೃದ್ಧಿಪಡಿಸಿದ ಪರಂಪರೆಯು ನಮ್ಮ ಪರಂಪರೆಯ ಅಗಾಧತೆಯನ್ನು ತೋರಿಸುತ್ತದೆ. ಲೋಥಾಲ್ನಲ್ಲಿ ನಿರ್ಮಿಸಲಾಗುತ್ತಿರುವ ರಾಷ್ಟ್ರೀಯ ಕಡಲ ವಸ್ತುಸಂಗ್ರಹಾಲಯವು ಎಲ್ಲಾ ಭಾರತೀಯರಿಗೆ ಸಮುದ್ರ ಪರಂಪರೆಯ ಬಗ್ಗೆ ಹೆಮ್ಮೆಯನ್ನು ತರುತ್ತದೆ ಎಂದು ನನಗೆ ಖಾತ್ರಿಯಿದೆ. ಲೋಥಾಲ್ ತನ್ನ ಹಳೆಯ ವೈಭವದೊಂದಿಗೆ ಹೊರಹೊಮ್ಮುತ್ತದೆ ಎಂಬ ನಂಬಿಕೆಯೊಂದಿಗೆ, ನಿಮ್ಮೆಲ್ಲರಿಗೂ ಧನ್ಯವಾದಗಳು! ನಿಮ್ಮೆಲ್ಲರಿಗೂ ಶುಭ ಹಾರೈಕೆಗಳು.

ಲೋಥಾಲ್ನಲ್ಲಿ ಕುಳಿತಿರುವ ಎಲ್ಲಾ ಸಹೋದರ ಸಹೋದರಿಯರಿಗೆ ಸಂತೋಷದಾಯಕ ಮತ್ತು ಸಮೃದ್ಧ ದೀಪಾವಳಿಯ ಶುಭಾಶಯಗಳು ಮತ್ತು ಗುಜರಾತ್ನಲ್ಲಿ ದೀಪಾವಳಿಯ ಮರುದಿನ ಬರುವ ಹೊಸ ವರ್ಷಕ್ಕೆ ನಿಮ್ಮಲ್ಲರಿಗೂ ಶುಭಾಶಯಗಳನ್ನು ಕೋರುತ್ತೇನೆ. ಎಲ್ಲರಿಗೂ ತುಂಬು ಧನ್ಯವಾದಗಳು!

ಸೂಚನೆ: ಪ್ರಧಾನಿಯವರ ಭಾಷಣದ ಕೆಲವು ಭಾಗಗಳು ಗುಜರಾತಿ ಭಾಷೆಯಲ್ಲಿಯೂ ಇದ್ದು, ಅದನ್ನು ಇಲ್ಲಿ ಅನುವಾದಿಸಲಾಗಿದೆ.

******


(Release ID: 1869637) Visitor Counter : 146