ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಗುಜರಾತ್ನಲ್ಲಿ ಪಿಎಂಜೆಎವೈ-ಎಂಎ ಯೋಜನೆಯ ಆಯುಷ್ಮಾನ್ ಕಾರ್ಡ್ಗಳ ವಿತರಣೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದ ಪ್ರಧಾನಮಂತ್ರಿ


​​​​​​​"ಜಗತ್ತಿನ ಹಲವು ದೇಶಗಳಲ್ಲಿ ಆರೋಗ್ಯ ವಿಮೆಯ ಬಗ್ಗೆ ಮಾತನಾಡಲಾಗುತ್ತದೆ, ಆದರೆ ಭಾರತವು ಅದನ್ನು ಮೀರಿ ಆರೋಗ್ಯವನ್ನು ಖಾತ್ರಿಪಡಿಸುತ್ತಿದೆ"

"ಇಂದು ನಮ್ಮ ಯೋಜನೆಗಳು ನೇರವಾಗಿ ಜನಸಾಮಾನ್ಯರ ಅಗತ್ಯಗಳನ್ನು ಈಡೇರಿಸುತ್ತವೆ"

"ನಾಗರಿಕರು ಸಬಲರಾದಾಗ ದೇಶವು ಪ್ರಬಲವಾಗುತ್ತದೆ"

“ಆಯುಷ್ಮಾನ್ ಕಾರ್ಡ್ 5 ಲಕ್ಷ ರೂಪಾಯಿಯ ಎಟಿಎಂ ಆಗಿದೆ. ಇದು ಪ್ರತಿ ವರ್ಷವೂ ಉಚಿತ ಚಿಕಿತ್ಸೆಯ ಪ್ರಯೋಜನಗಳನ್ನು ನೀಡುವ ಎಟಿಎಂ ಕಾರ್ಡ್ ಆಗಿದೆ”

"30-40 ವರ್ಷಗಳ ಅವಧಿಯಲ್ಲಿ, 1.5-2 ಕೋಟಿ ರೂ. ಮೌಲ್ಯದ ಚಿಕಿತ್ಸೆಗೆ ಖಾತ್ರಿ ಇದೆ"

Posted On: 17 OCT 2022 5:59PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ನಲ್ಲಿ ಪಿಎಂಜೆಎವೈ-ಎಂಎ ಯೋಜನೆಯ ಆಯುಷ್ಮಾನ್ ಕಾರ್ಡ್ಗಳ ವಿತರಣೆಗೆನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಪಿಎಂಜೆಎವೈ-ಎಂಎ ಯೋಜನೆ ಆಯುಷ್ಮಾನ್ ಕಾರ್ಡ್ಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

ಬನಸ್ಕಾಂತದ ತುವಾರ್ನ ಶ್ರೀ ಪಿಯೂಷ್ಭಾಯ್ ಅವರೊಂದಿಗೆ ಮಾತುಕತೆ ನಡೆಸಿದ ಪ್ರಧಾನಮಂತ್ರಿಯವರು ಅವರು ಮತ್ತು ಕುಟುಂಬದ ಆರೋಗ್ಯ ಪರಿಸ್ಥಿತಿಗಳ ಬಗ್ಗೆ ವಿಚಾರಿಸಿದರು. ಆಯುಷ್ಮಾನ್ ಭಾರತ್ ಯೋಜನೆಯು ಅವರಿಗೆ ಹೊಸ ಬದುಕನ್ನು ನೀಡಿದೆ ಎಂದು ತಿಳಿದು ಪ್ರಧಾನಿ ಸಂತೋಷಪಟ್ಟರು. ಅವರಂತೆಯೇ ಎಲ್ಲರ ಬಗ್ಗೆಯೂ ಸರ್ಕಾರ ಸದಾ ಕಾಳಜಿ ವಹಿಸುತ್ತದೆ ಎಂದು ಪ್ರಧಾನಿ ಭರವಸೆ ನೀಡಿದರು.

ಮಹಿಸಾಗರದ ಶ್ರೀ ದಾಮೋರ್ ಲಾಲಾಭಾಯಿ ಸೋಮಾಭಾಯಿ ಅವರೊಂದಿಗೆ ಮಾತನಾಡಿದ ಪ್ರಧಾನಿಯವರು, ಅವರ ಕ್ಯಾನ್ಸರ್ ಚಿಕಿತ್ಸೆಯು ಉತ್ತಮವಾಗಿ ನಡೆದಿದೆಯೇ ಎಂದು ವಿಚಾರಿಸಿದರು. ಶ್ರೀ ದಾಮೋರ್ ಅವರ ಚಿಕಿತ್ಸೆಯು ಆಯುಷ್ಮಾನ್ ಭಾರತ್ ಯೋಜನೆಗೆ ಒಳಪಟ್ಟಿದೆ ಮತ್ತು ಅವರು ಒಂದು ಪೈಸೆಯನ್ನೂ ಖರ್ಚು ಮಾಡಬೇಕಾಗಿಲ್ಲ ಎಂದು ತಿಳಿದು ಪ್ರಧಾನಮಂತ್ರಿ ಹರ್ಷ ವ್ಯಕ್ತಪಡಿಸಿದರು. ತಂಬಾಕು ತ್ಯಜಿಸುವ ಪ್ರತಿಜ್ಞೆ ಮಾಡುವಂತೆ ಮತ್ತು ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವಂತೆ ಶ್ರೀ ದಾಮೋರ್ ಅವರಿಗೆ ಪ್ರಧಾನಿ ಕೇಳಿಕೊಂಡರು.

ಆಯುಷ್ಮಾನ್ ಕಾರ್ಡ್ ಇಲ್ಲದಿದ್ದರೆ, ತಮ್ಮ ಚಿಕಿತ್ಸೆಗಾಗಿ ಸಾಲ ಮಾಡಬೇಕಾಗುತ್ತಿತ್ತು ಮತ್ತು ಶಸ್ತ್ರಚಿಕಿತ್ಸೆಯಿಂದ ವಂಚಿತಳಾಗುವ ಸಾಧ್ಯತೆಗಳಿದ್ದವು ಎಂದು ಗಾಂಧಿನಗರದ ಡಾರ್ಜಿ ನಿವಾಸಿ ಶ್ರೀಮತಿ ರಮಿಲಾಬೆನ್ ಪ್ರಧಾನಿಯವರಿಗೆ ತಿಳಿಸಿದರು. ತಾಯಂದಿರು ಮತ್ತು ಸಹೋದರಿಯರು ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ತಿಳಿದು ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸಾರ್ವಜನಿಕ ಆರೋಗ್ಯದ ಬಗ್ಗೆ ಇಂತಹ ಒಂದು ಬೃಹತ್ ಕಾರ್ಯಕ್ರಮವು ಧನ್ತೇರಸ್ ಮತ್ತು ದೀಪಾವಳಿಗೆ ಮುಂಚೆ ನಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಧನ್ತೇರಸ್ ಸಂದರ್ಭದಲ್ಲಿ ಆಯುರ್ವೇದದ ಮೂಲ ಎಂದು ಪರಿಗಣಿಸಲಾಗಿರುವ ಭಗವಾನ್ ಧನ್ವಂತರಿಯನ್ನು ಪೂಜಿಸಲಾಗುತ್ತಿರುವುದು ಕಾಕತಾಳೀಯವಾಗಿದೆ ಎಂದು ಅವರು ಹೇಳಿದರು. ಶಾಸ್ತ್ರಗಳನ್ನು ಉಲ್ಲೇಖಿಸಿದ ಪ್ರಧಾನಿಯವರು, “ಆರೋಗ್ಯಂ ಪರಮಂ ಭಾಗ್ಯಂ”ಎಂದು ಪಠಿಸಿದರು. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ನೇತೃತ್ವದಲ್ಲಿ ಗುಜರಾತ್ನ ಲಕ್ಷಾಂತರ ಜನರಿಗೆ ಆರೋಗ್ಯ ಧನ ನೀಡಲು ಇಂತಹ ಬೃಹತ್ ಕಾರ್ಯಕ್ರಮ ನಡೆಯುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

‘ಸರ್ವೇ ಸಂತು ನಿರಾಮಯ’ಅಂದರೆ ಎಲ್ಲರೂ ರೋಗಗಳಿಂದ ಮುಕ್ತರಾಗಲಿ ಎಂದು ಹಾರೈಸಿದ ಪ್ರಧಾನಮಂತ್ರಿಯವರು ಆಯುಷ್ಮಾನ್ ಯೋಜನೆಯು ಎಲ್ಲರಿಗೂ ಆರೋಗ್ಯದ ಗುರಿಯನ್ನು ಹೊಂದಿದೆ ಎಂದು ಹೇಳಿದರು. ರಾಜ್ಯದ ಜನರಿಗೆ 50 ಲಕ್ಷ ಕಾರ್ಡ್ಗಳನ್ನು ವಿತರಿಸುವ ಅಭಿಯಾನದ ಅಗಾಧತೆಯನ್ನು ಪ್ರಧಾನಿ ಶ್ಲಾಘಿಸಿದರು. ಇದು ಗುಜರಾತ್ ಸರ್ಕಾರದ ಸೂಕ್ಷ್ಮತೆಗೆ ಸಾಕ್ಷಿಯಾಗಿದೆ. ನಾವು ಪ್ರಪಂಚದ ಅನೇಕ ದೇಶಗಳಲ್ಲಿ ಆರೋಗ್ಯ ವಿಮೆಯ ಬಗ್ಗೆ ಕೇಳುತ್ತಿದ್ದೇವೆ. ಆದರೆ ಭಾರತವು ಅದನ್ನು ಮೀರಿ ಆರೋಗ್ಯ ಭರವಸೆಯನ್ನು ಖಾತ್ರಿಪಡಿಸುತ್ತಿದೆ ಎಂದು ಅವರು ಹೇಳಿದರು.

ಬದಲಾದ ರಾಜಕೀಯ ಚಿಂತನೆ ಮತ್ತು ಕೆಲಸದ ಸಂಸ್ಕೃತಿಯ ಬಗ್ಗೆ ಪ್ರಧಾನಿ ಒತ್ತಿ ಹೇಳಿದರು. ಹಿಂದಿನ ಸರ್ಕಾರಗಳಲ್ಲಿ, ಜನಸಾಮಾನ್ಯರ ಅನುಕೂಲಕ್ಕಾಗಿದ್ದ ಯೋಜನೆಗಳು ಕೇವಲ ಔಪಚಾರಿಕವಾಗಿದ್ದವು. ಈ ಯೋಜನೆಗಳಿಗೆ ಹಣವನ್ನು ನಿರ್ದಿಷ್ಟ ಪ್ರದೇಶ ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಖರ್ಚು ಮಾಡಲಾಗುತ್ತಿತ್ತು. ಈ ಪರಿಸ್ಥಿತಿಯನ್ನು ಬದಲಾಯಿಸಬೇಕಾದ ಅಗತ್ಯವಿತ್ತು ಮತ್ತು ಈ ಬದಲಾವಣೆಯಲ್ಲಿ ನಾವು ಮುಂದಾಳತ್ವ ವಹಿಸಿದ್ದೇವೆ. ಇಂದು ಯೋಜನೆಯನ್ನು ಮಾಡಿದಾಗ, ನಾವು ಮೊದಲು ಸಾಮಾನ್ಯ ನಾಗರಿಕರ ಸ್ಥಿತಿಯನ್ನು ಅಧ್ಯಯನ ಮಾಡುತ್ತೇವೆ ಮತ್ತು ಅವರ ಅಗತ್ಯಗಳನ್ನು ಅಧ್ಯಯನ ಮಾಡುತ್ತೇವೆ. ಇಂದು ನಮ್ಮ ಯೋಜನೆಗಳು ನೇರವಾಗಿ ಜನಸಾಮಾನ್ಯರ ಅಗತ್ಯಗಳನ್ನು ಈಡೇರಿಸುತ್ತವೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ದೇಶದ ನಾಗರಿಕರು ಸಬಲರಾದಾಗ ಮಾತ್ರ, ದೇಶವು ಪ್ರಬಲವಾಗುತ್ತದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಅದಕ್ಕಾಗಿಯೇ ನಾವು ಸಾಮಾನ್ಯ ನಾಗರಿಕರನ್ನು, ವಿಶೇಷವಾಗಿ ಮಹಿಳೆಯರನ್ನು ಸಬಲೀಕರಣಗೊಳಿಸುವತ್ತ ಗಮನಹರಿಸಿದ್ದೇವೆ. ಉಚಿತ ಗ್ಯಾಸ್ ಸಂಪರ್ಕ, ಪಕ್ಕಾ ಮನೆಗಳು, ಶೌಚಾಲಯಗಳು, ಉಚಿತ ಪಡಿತರ ಮತ್ತು ಕೊಳವೆ ನೀರು ಈ ಮಾದರಿಯ ಉದಾಹರಣೆಗಳಾಗಿವೆ ಎಂದುಇ ಅವರು ಹೇಳಿದರು. ದೇಶಾದ್ಯಂತ ಈ ಯೋಜನೆಯಡಿ ಇದುವರೆಗೆ ಸುಮಾರು 4 ಕೋಟಿ ಬಡ ರೋಗಿಗಳು ಆರೋಗ್ಯದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಈ ಪೈಕಿ ಸುಮಾರು 50 ಲಕ್ಷ ಬಡ ರೋಗಿಗಳು ಗುಜರಾತ್ನವರು ಎಂದು ಅವರು ಹೇಳಿದರು. ಈ ಫಲಾನುಭವಿಗಳ ಚಿಕಿತ್ಸೆಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ ಎಂದರು. ಈ ಯೋಜನೆಯ ಹೊರತಾಗಿ ಚಿಕಿತ್ಸೆ ಪಡೆಯಬೇಕಾದರೆ ಫಲಾನುಭವಿಗಳ ಜೇಬಿನಿಂದ ಹಣ ಖರ್ಚಾಗುತ್ತಿತ್ತು ಎಂದು ತಿಳಿಸಿದ ಪ್ರಧಾನಿ, ಆಯುಷ್ಮಾನ್ ಭಾರತ್ನ ಅರ್ಧದಷ್ಟು ಫಲಾನುಭವಿಗಳು ನನ್ನ ತಾಯಂದಿರು ಮತ್ತು ಸೋದರಿಯರಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಈ ತಾಯಂದಿರು ಮತ್ತು ಸೋದರಿಯರು ಕುಟುಂಬದ ಹಿತಾಸಕ್ತಿಯಿಂದ ತಮ್ಮ ಕಾಯಿಲೆಗಳನ್ನು ಮರೆಮಾಚುತ್ತಾರೆ ಮತ್ತು ಹೆಚ್ಚಿನ ಚಿಕಿತ್ಸೆಯ ವೆಚ್ಚಕ್ಕಾಗಿ ಮಾಡಬೇಕಾದ ಸಾಲದ ಭಯದಿಂದ ಬಳಲುತ್ತಾರೆ ಎಂದು ಶ್ರೀ ಮೋದಿ ಹೇಳಿದರು. ಆಯುಷ್ಮಾನ್ ಭಾರತ್ ಯೋಜನೆಯು ಬಡ ತಾಯಂದಿರು ಮತ್ತು ಸಹೋದರಿಯರನ್ನು ಈ ಸಮಸ್ಯೆಯಿಂದ ಮುಕ್ತಗೊಳಿಸಿದೆ ಎಂದು ಅವರು ಹೇಳಿದರು, ಸರಳವಾಗಿ ಹೇಳುವುದಾದರೆ, ಆಯುಷ್ಮಾನ್ ಕಾರ್ಡ್ 5 ಲಕ್ಷ ರೂಪಾಯಿಗಳ ಎಟಿಎಂ ಆಗಿದೆ. ಇದು ಪ್ರತಿ ವರ್ಷವೂ ಪ್ರಯೋಜನಗಳನ್ನು ನೀಡುತ್ತಲೇ ಇರುವ ಎಟಿಎಂ ಕಾರ್ಡ್ ಆಗಿದೆ ಎಂದರು. ಒಬ್ಬ ವ್ಯಕ್ತಿಯು 30-40 ವರ್ಷಗಳವರೆಗೆ ಬದುಕಿದ್ದರೆ, ಆ ಅವಧಿಯಲ್ಲಿ 1.5-2 ಕೋಟಿ ರೂ. ಮೌಲ್ಯದ ಚಿಕಿತ್ಸೆಯ ಖಾತ್ರಿ ಇದರಲ್ಲಿ ಇರುತ್ತದೆ. ಆಯುಷ್ಮಾನ್ ಕಾರ್ಡ್ ನಿಮ್ಮ ನಿಜವಾದ ಸ್ನೇಹಿತ, ದೊಡ್ಡ ಕಂಟಕನಿವಾರಕ ಎಂದು ಅವರು ಹೇಳಿದರು.

ತಾವು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಚಿರಂಜೀವಿ, ಬಾಲಭೋಗ್ ಮತ್ತು ಖಿಲ್ಖಿಲತ್ ಯೋಜನೆಗಳನ್ನು ಪ್ರಧಾನಿ ಸ್ಮರಿಸಿಕೊಂಡರು. ಮುಖ್ಯಮಂತ್ರಿ ಅಮೃತಂ ಯೋಜನೆಯನ್ನು ಹಲವು ವರ್ಷಗಳ ಹಿಂದೆಯೇ ಗುಜರಾತ್ನಲ್ಲಿ ಪರಿಚಯಿಸಲಾಯಿತು. ಪಿಎಂಜೆಎವೈ-ಎಂಎ ಪರಿಚಯವು ಗುಜರಾತ್ನ ಜನರು ಗುಜರಾತ್ನ ಹೊರಗೂ ಸಹ ಉಚಿತ ಚಿಕಿತ್ಸೆಯ ಪ್ರಯೋಜನವನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಪ್ರಧಾನಿ ತಿಳಿಸಿದರು.

ಹಿನ್ನೆಲೆ
ಪ್ರಧಾನಮಂತ್ರಿಯವರು ಹಿಂದೆ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಬಡ ನಾಗರಿಕರನ್ನು ದುಬಾರಿ ವೈದ್ಯಕೀಯ ಚಿಕಿತ್ಸೆ ಮತ್ತು ಅನಾರೋಗ್ಯದ ವೆಚ್ಚಗಳಿಂದ ರಕ್ಷಿಸಲು 2012 ರಲ್ಲಿ ‘ಮುಖ್ಯಮಂತ್ರಿ ಅಮೃತಂ (ಎಂಎ)’ ಯೋಜನೆಯನ್ನು ಪ್ರಾರಂಭಿಸಿದರು. 2014 ರಲ್ಲಿ, 4 ಲಕ್ಷ ವಾರ್ಷಿಕ ಆದಾಯದ ಮಿತಿಯನ್ನು ಹೊಂದಿದ ಕುಟುಂಬಗಳಿಗೆ 'ಎಂಎ' ಯೋಜನೆಯನ್ನು ವಿಸ್ತರಿಸಲಾಯಿತು. ಈ ಯೋಜನೆಯನ್ನು ಹಲವಾರು ಇತರ ಗುಂಪುಗಳಿಗೆ ವಿಸ್ತರಿಸಲಾಯಿತು ಮತ್ತು ನಂತರ ಮುಖ್ಯಮಂತ್ರಿ ಅಮೃತಂ ವಾತ್ಸಲ್ಯ (ಎಂಎವಿ) ಯೋಜನೆ ಎಂದು ಮರುನಾಮಕರಣ ಮಾಡಲಾಯಿತು.
ಈ ಯೋಜನೆಯ ಯಶಸ್ಸಿನ ಅನುಭವದಿಂದ, ಪ್ರಧಾನಮಂತ್ರಿಯವರು 2018 ರಲ್ಲಿ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿಎಂಜೆಎವೈ) ಅನ್ನು ಪ್ರಾರಂಭಿಸಿದರು. ಇದು ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯಾಗಿದೆ. ಕುಟುಂಬದ ಗಾತ್ರ ಮತ್ತು ವಯಸ್ಸಿನ ಮೇಲೆ ಯಾವುದೇ ಮಿತಿಯಿಲ್ಲದೆ ಪ್ರಾಥಮಿಕ, ಮಾಧ್ಯಮಿಕ ಮತ್ತು ತೃತೀಯ ಆರೈಕೆ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ. ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. ಎಬಿ-ಪಿಎಂಜೆಎವೈ ಪ್ರಾರಂಭದ ನಂತರ, ಗುಜರಾತ್ 2019 ರಲ್ಲಿ ಎಬಿ-ಪಿಎಂಜೆಎವೈ ಯೋಜನೆಯೊಂದಿಗೆ ಎಂಎ/ಎಂಎವಿ ಯೋಜನೆಯನ್ನು ಪಿಎಂಜೆಎವೈ-ಎಂಎ ಎಂಬ ಹೆಸರಿನೊಂದಿಗೆ ಸಂಯೋಜಿಸಿತು ಮತ್ತು ಎಂಎ/ಎಂಎವಿ ಮತ್ತು ಎಬಿ-ಪಿಎಂಜೆಎವೈ ಅಡಿಯಲ್ಲಿ ಫಲಾನುಭವಿಗಳು ಪಿಎಂಜೆಎವೈ-ಎಂಎ  ಕಾರ್ಡ್ಗಳಿಗೆ ಅರ್ಹರಾಗಿರುತ್ತಾರೆ.

ಕಾರ್ಯಕ್ರಮದ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಈ ಕಾರ್ಡ್ಗಳ ವಿತರಣೆಗೆ ಚಾಲನೆ ನೀಡಿದರು ಮತ್ತು ನಂತರ 50 ಲಕ್ಷ ಆಯುಷ್ಮಾನ್ ಕಾರ್ಡ್ಗಳನ್ನು ಗುಜರಾತ್ನಾದ್ಯಂತ ಎಲ್ಲಾ ಫಲಾನುಭವಿಗಳಿಗೆ ಅವರ ಇ-ಕೆವೈಸಿ ಪರಿಶೀಲನೆ ನಂತರ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಏಜೆನ್ಸಿಗಳ ಮೂಲಕ ಅವರ ಮನೆ ಬಾಗಿಲಿಗೆ ವಿತರಿಸಲಾಯಿತು.

*****

 (Release ID: 1869630) Visitor Counter : 92