ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

​​​​​​​ಬಾಂಗ್ಲಾದೇಶದ ಯುವ ನಿಯೋಗದ ಜೊತೆ  ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಸಂವಾದ

Posted On: 20 OCT 2022 9:02AM by PIB Bengaluru

ಭಾರತದಲ್ಲಿ 2022 ರ ಅಕ್ಟೋಬರ್ 12 ರಿಂದ 19 ರವರೆಗೆ ಬಾಂಗ್ಲಾದೇಶದ 100 ಸದಸ್ಯರ ಯುವ ನಿಯೋಗದ ಆತಿಥ್ಯವನ್ನು ಯುವಜನ ವ್ಯವಹಾರಗಳ ಇಲಾಖೆ ವಹಿಸಿದ್ದು, ಕೊನೆಯ ದಿನವಾದ ಇಂದು ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಬಾಂಗ್ಲಾದೇಶದ ಯುವ ನಿಯೋಗದ ಗೌರವಾರ್ಥವಾಗಿ ಹೊಸದಿಲ್ಲಿಯಲ್ಲಿ ಔತಣಕೂಟವನ್ನು ಆಯೋಜಿಸಿದ್ದರು. ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವ ಶ್ರೀ ನಿಸಿತ್ ಪ್ರಾಮಾಣಿಕ್ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಾರತ ಸರ್ಕಾರದ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರೊಂದಿಗಿನ ಸಂವಾದದ ಸಂದರ್ಭದಲ್ಲಿ ಬಾಂಗ್ಲಾದೇಶ ನಿಯೋಗವು ಈ ಕಾರ್ಯಕ್ರಮದ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿತು. ನಿಯೋಗವು ಬಾಂಗ್ಲಾದೇಶದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಪ್ರದರ್ಶಿಸಿತು. ಈ ಉತ್ಸವದ  ಸಂಜೆಯಲ್ಲಿ  ಭಾರತೀಯ ಕಲಾವಿದರೂ ಪ್ರದರ್ಶನ ನೀಡಿದರು.

ನಿಯೋಗದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವಾಗ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಒಂದು ವಾರಗಳ ಕಾಲ ಭಾರತದಲ್ಲಿ ತಂಗಿದ ಬಗ್ಗೆ ಪ್ರತಿನಿಧಿಗಳು ಅನುಭವಗಳನ್ನು ಹಂಚಿಕೊಂಡದ್ದನ್ನು ಆಲಿಸಿದರು. ಈ ಭೇಟಿಯು ಎರಡೂ ದೇಶಗಳ ನಡುವಿನ ವಿಚಾರಗಳು, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಸಂಬಂಧಗಳ ವಿನಿಮಯಕ್ಕೆ ಅವಕಾಶ ಮಾಡಿಕೊಟ್ಟಿತು ಮತ್ತು ಪ್ರಾದೇಶಿಕ ಸಹಕಾರ ಮತ್ತು ವಿಶ್ವ ಶಾಂತಿಯನ್ನು ಹೆಚ್ಚಿಸುವುದಕ್ಕೂ ಕೊಡುಗೆ ನೀಡಿತು. ಭಾರತ ಮತ್ತು ಬಾಂಗ್ಲಾದೇಶಗಳು ದೀರ್ಘಕಾಲದ ಸಾಮಾನ್ಯ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಇತಿಹಾಸವನ್ನು ಹೊಂದಿವೆ.  ಭಾರತದ ದೊಡ್ಡ ಜನಸಂಖ್ಯೆಯು ಬಾಂಗ್ಲಾದೇಶದಲ್ಲಿ ಮಾತನಾಡುವ ಅದೇ ಭಾಷೆಯಾದ ಬಾಂಗ್ಲಾವನ್ನು ಸಹ ಮಾತನಾಡುತ್ತದೆ.  ಎರಡೂ ದೇಶಗಳು ಪರಸ್ಪರ ಮಹತ್ವದ ಗಡಿಯನ್ನು ಹಂಚಿಕೊಂಡಿವೆ.  ನಾವು ಪರಸ್ಪರ ಹಳೆಯ, ಆಳವಾದ, ಸ್ನೇಹಪರ ಸಂಬಂಧಗಳನ್ನು ಹೊಂದಿದ್ದೇವೆ ಮತ್ತು ಸಮಾನ ಹಿತಾಸಕ್ತಿಗಳನ್ನು ಹಂಚಿಕೊಂಡಿದ್ದೇವೆ.

ಕಾರ್ಯಕ್ರಮದ ಭಾಗವಾಗಿ, ಬಾಂಗ್ಲಾದೇಶದ ಯುವ ನಿಯೋಗವು 2022 ರ ಅಕ್ಟೋಬರ್ 14 ರಂದು ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿತು. ಆಗ್ರಾದ ತಾಜ್ ಮಹಲ್, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಮೈಸೂರಿನ ಇನ್ಫೋಸಿಸ್ ನಂತಹ ವಿವಿಧ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಕೈಗಾರಿಕಾ ಸ್ಥಳಗಳಿಗೆ ನಿಯೋಗವು ಭೇಟಿ ನೀಡಿತು, ಅಲ್ಲಿ ಅವರು ಶಿಕ್ಷಣ ತಜ್ಞರು ಮತ್ತು ಕೈಗಾರಿಕಾ ನಾಯಕರೊಂದಿಗೆ ಸಂವಾದ ನಡೆಸಿದರು. ಈ ಗುಂಪು  ವಿದ್ಯಾರ್ಥಿಗಳು, ಯುವ ಪತ್ರಕರ್ತರು, ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು, ವೈದ್ಯರು ಸೇರಿದಂತೆ ವಿವಿಧ ಹಿನ್ನೆಲೆಯ ಯುವಜನರನ್ನು ಒಳಗೊಂಡಿದೆ. ಈ ಕಾರ್ಯಕ್ರಮವು ನಮ್ಮ ನೆರೆಹೊರೆಯವರೊಂದಿಗೆ ಸೌಹಾರ್ದಯುತ ಸಂಬಂಧಗಳನ್ನು ಬೆಳೆಸುವಲ್ಲಿ ಸಾಕಷ್ಟು ಸದ್ಭಾವನೆ ಮತ್ತು ಸಕಾರಾತ್ಮಕ ಭಾವನೆಗಳನ್ನು ಮೂಡಿಸಲಿದೆ. ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಯುವಜನ  ವ್ಯವಹಾರಗಳ ಇಲಾಖೆಯು ಇತರ ದೇಶಗಳು ಮತ್ತು ವಿವಿಧ ಅಂತರರಾಷ್ಟ್ರೀಯ ಏಜೆನ್ಸಿಗಳು / ಸಂಸ್ಥೆಗಳ ಸಹಯೋಗದೊಂದಿಗೆ ವಿವಿಧ ಯುವ ಸಮಸ್ಯೆಗಳು, ವಿಷಯಗಳ  ಬಗ್ಗೆ ಯುವಜನರಲ್ಲಿ  ಅಂತರರಾಷ್ಟ್ರೀಯ ದೃಷ್ಟಿಕೋನವನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ.  ಶಾಂತಿ ಮತ್ತು ತಿಳುವಳಿಕೆಯನ್ನು ಉತ್ತೇಜಿಸುವಲ್ಲಿ ಯುವಜನರನ್ನು  ತೊಡಗಿಸಿಕೊಳ್ಳುವ ಸಲುವಾಗಿ, ಇಲಾಖೆಯು ಅಂತರರಾಷ್ಟ್ರೀಯ ಯುವ ನಿಯೋಗಗಳ ವಿನಿಮಯವನ್ನು ಒಂದು ಪರಿಣಾಮಕಾರಿ ಸಾಧನವಾಗಿ ಪರಿಗಣಿಸಿದೆ.

ವಿವಿಧ ದೇಶಗಳ ಯುವಜನರಲ್ಲಿ  ಚಿಂತನೆಗಳು, ವಿಚಾರಗಳು, ಮೌಲ್ಯಗಳು ಮತ್ತು ಸಂಸ್ಕೃತಿಯ ವಿನಿಮಯವನ್ನು ಉತ್ತೇಜಿಸಲು ಮತ್ತು ಅಂತರರಾಷ್ಟ್ರೀಯ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ಸ್ನೇಹಪರ ರಾಷ್ಟ್ರಗಳೊಂದಿಗೆ ಪರಸ್ಪರ ಯುವ ನಿಯೋಗಗಳ ವಿನಿಮಯವನ್ನು ಆಯೋಜಿಸಲಾಗುತ್ತದೆ.  ಈ ಇಲಾಖೆಯು 2006 ರಿಂದ ಚೀನಾ ಮತ್ತು ದಕ್ಷಿಣ ಕೊರಿಯಾದೊಂದಿಗೆ ಯುವ ನಿಯೋಗಗಳ ನಿಯಮಿತ ವಿನಿಮಯವನ್ನು ನಡೆಸುತ್ತಿದೆ.

2012ರಲ್ಲಿ ಢಾಕಾದ ಭಾರತೀಯ ಹೈಕಮಿಷನ್, ಭಾರತ ಸರ್ಕಾರದ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯಕ್ಕೆ 100 ಸದಸ್ಯರ ಬಾಂಗ್ಲಾದೇಶ ಯುವ ನಿಯೋಗವನ್ನು ಭಾರತಕ್ಕೆ ಆಹ್ವಾನಿಸುವಂತೆ ಮತ್ತು ಐತಿಹಾಸಿಕ, ಶೈಕ್ಷಣಿಕ, ತಾಂತ್ರಿಕ ಮತ್ತು ಕೈಗಾರಿಕಾ ಹಿತಾಸಕ್ತಿಗಳನ್ನು ಪ್ರದರ್ಶಿಸಲು ಅವರಿಗಾಗಿ ಪ್ರವಾಸವನ್ನು ಏರ್ಪಡಿಸುವಂತೆ ವಿನಂತಿಸಿತ್ತು.  ಅದರಂತೆ, 2012 ರ ಅಕ್ಟೋಬರ್ 6 ರಿಂದ 13 ರವರೆಗೆ 100 ಸದಸ್ಯರ ಬಾಂಗ್ಲಾದೇಶದ ಯುವ ನಿಯೋಗವು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿತು.  ಬಾಂಗ್ಲಾದೇಶದ ಪ್ರಸ್ತುತ ನಿಯೋಗವು ಅಂತಹ 8 ನೇ ತಂಡವಾಗಿದೆ.

******


(Release ID: 1869588) Visitor Counter : 222