ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್‌ನ ಮೊಧೇರಾದಲ್ಲಿ  ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅವತರಣಿಕೆ

Posted On: 09 OCT 2022 11:39PM by PIB Bengaluru

ಇಂದು ಮೆಹಸಾನಾ ಮತ್ತು ಇಡೀ ಉತ್ತರ ಗುಜರಾತ್‌ಗೆ ಅಭಿವೃದ್ಧಿಯ ಹೊಸ ಶಕ್ತಿಯನ್ನು ತುಂಬಲಾಗಿದೆ. ವಿದ್ಯುತ್, ನೀರು, ರಸ್ತೆಗಳು, ಹಳಿಗಳು, ಡೈರಿ, ಕೌಶಲ್ಯ ಅಭಿವೃದ್ಧಿ ಮತ್ತು ಆರೋಗ್ಯದಂತಹ ಅನೇಕ ಯೋಜನೆಗಳು ಇಂದು ಉದ್ಘಾಟನೆಯಾಗಿವೆ ಅಥವಾ ಅವುಗಳಿಗೆ ಅಡಿಪಾಯವನ್ನು ಹಾಕಲಾಗಿದೆ. ಸಾವಿರಾರು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಈ ಯೋಜನೆಗಳು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ, ರೈತರು ಮತ್ತು ಜಾನುವಾರು ಸಾಕಾಣಿಕೆಯವರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಮತ್ತು ಇಡೀ ಪ್ರದೇಶದ ಪರಂಪರೆ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ವಿಸ್ತರಿಸುತ್ತವೆ. ಈ ಅಭಿವೃದ್ಧಿ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ಅನೇಕ ಅಭಿನಂದನೆಗಳು. ಮೆಹಸಾನಾ ಜನತೆಗೆ ಶುಭಾಶಯಗಳು!

ಸ್ನೇಹಿತರೇ,

ನಾವು ಭಗವಾನ್ ಸೂರ್ಯದೇವನ ವಾಸಸ್ಥಾನವಾದ ಮೊಧೇರಾದಲ್ಲಿರುವಾಗ, ಇಂದು ಶರದ್ ಪೂರ್ಣಿಮೆ ಕೂಡ ಆಗಿರುವುದು ಒಂದು ಸಂತೋಷದ ಕಾಕತಾಳೀಯವಾಗಿದೆ. ಇಂದು ಮಹರ್ಷಿ ವಾಲ್ಮಿಕಿ ಅವರ ಜಯಂತಿಯ ಶುಭ ಸಂದರ್ಭವಾಗಿದೆ. ಒಂದು ರೀತಿಯಲ್ಲಿ, ಇದು ಮೂರು ಕಾಕತಾಳೀಯಗಳ ಸಂಗಮವಾಗಿದೆ. ಮಹರ್ಷಿ ವಾಲ್ಮಿಕಿ ಭಗವಾನ್ ರಾಮನ ಸಾಮರಸ್ಯದ ಜೀವನಕ್ಕೆ ನಮ್ಮನ್ನು ಪರಿಚಯಿಸಿ ಸಮಾನತೆಯ ಸಂದೇಶವನ್ನು ನೀಡಿದರು. ನಿಮಗೆ ಮತ್ತು ಇಡೀ ರಾಷ್ಟ್ರಕ್ಕೆ ಶರದ್ ಪೂರ್ಣಿಮಾ ಮತ್ತು ವಾಲ್ಮಿಕಿ ಜಯಂತಿಯ ಹಾರ್ದಿಕ ಶುಭಾಶಯಗಳು!

ಸಹೋದರ ಸಹೋದರಿಯರೇ,

ಕಳೆದ ಕೆಲವು ದಿನಗಳಿಂದ, ದೇಶಾದ್ಯಂತ ಟಿವಿ, ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮೊಧೇರಾದ ಸೂರ್ಯಗ್ರಾಮದ ಬಗ್ಗೆ ನಡೆಯುತ್ತಿರುವ ಚರ್ಚೆಗಳನ್ನು ನೀವು ಗಮನಿಸಿರಬೇಕು. ಈ ಕನಸು ತಮ್ಮ ಜೀವಿತಾವಧಿಯಲ್ಲಿ ನನಸಾಗಬಹುದೆಂದು ಎಂದಿಗೂ ಭಾವಿಸಿರಲಿಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. ಇಂದು ಅವರು ಆ ಕನಸು ನನಸಾಗುತ್ತಿರುವುದನ್ನು ಅವರು ನೋಡುತ್ತಿದ್ದಾರೆ. ಇದನ್ನು ಇನ್ನೂ ಕೆಲವರು ನಮ್ಮ ಹಳೆಯ ನಂಬಿಕೆ ಮತ್ತು ಆಧುನಿಕ ತಂತ್ರಜ್ಞಾನದ ಹೊಸ ಸಂಗಮ ಎಂದು ಕರೆಯುತ್ತಾರೆ. ಆದರೆ ಇತರರು ಇದನ್ನು ಭವಿಷ್ಯದ ಸ್ಮಾರ್ಟ್ ಗುಜರಾತ್ ಮತ್ತು ಸ್ಮಾರ್ಟ್ ಭಾರತದ ನೋಟ ಎಂದು ವಿವರಿಸುತ್ತಿದ್ದಾರೆ. ಮೆಹಸಾನಾ ಮತ್ತು ಗುಜರಾತ್‌ಗೆ ಇದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ. ಇದು ನಿಮಗೆ ಹೆಮ್ಮೆ ತಂದಿದೆಯೋ ಇಲ್ಲವೋ ಎಂದು ಮೊಧೇರಾ, ಚಾನಸ್ಮಾ ಮತ್ತು ಮೆಹ್ಸಾನಾ ಜನರನ್ನು ಕೇಳುತ್ತೇನೆ. ನಿಮ್ಮ ಜೀವನದಲ್ಲಿ ಈ ಅಮೂಲ್ಯ ಕ್ಷಣವನ್ನು ಆನಂದಿಸುತ್ತಿಲ್ಲವೇ? ಹಿಂದಿನ ಮೊಧೇರಾ ಸೂರ್ಯ ದೇವಾಲಯದ ಕಾರಣದಿಂದಾಗಿ ಜಗತ್ತಿಗೆ ತಿಳಿದಿತ್ತು, ಆದರೆ ಈಗ ಅದನ್ನು ಸೂರ್ಯಗ್ರಾಮ ಎಂದೂ ಗುರುತಿಸಲಾಗುವುದು, ಇದು ಮೊಧೇರಾದ ಸೂರ್ಯ ದೇವಾಲಯದಿಂದ ಸ್ಫೂರ್ತಿ ಪಡೆದಿದೆ. ಪರಿಸರವಾದಿಗಳು, ಸ್ನೇಹಿತರಿಗಾಗಿ ಮೊಧೇರಾ ವಿಶ್ವ ನಕ್ಷೆಯಲ್ಲಿ ತನ್ನ ಛಾಪು ಮೂಡಿಸಲಿದೆ.

ಸ್ನೇಹಿತರೇ,

ಇಂದು ಮೊಧೇರಾದಲ್ಲಿ ಕಾಣಿಸುತ್ತಿರುವ ಗುಜರಾತ್‌ನ ಈ ಸಾಮರ್ಥ್ಯವು ಗುಜರಾತ್‌ನ ಪ್ರತಿಯೊಂದು ಮೂಲೆ ಮತ್ತು ಮೂಲೆಯಲ್ಲಿಯೂ ಇದೆ. ಮೊಧೇರಾ ಸೂರ್ಯ ದೇವಾಲಯವನ್ನು ನಾಶಮಾಡಲು, ಅದನ್ನು ಧ್ವಂಸ ಮಾಡಲು ಆಕ್ರಮಣಕಾರರು ಮಾಡಿದ ಪ್ರಯತ್ನಗಳನ್ನು ಯಾರು ಮರೆಯುತ್ತಾರೆ? ಹಲವಾರು ದೌರ್ಜನ್ಯಗಳಿಗೆ ಒಳಗಾದ ಮೊಧೇರಾ, ಈಗ ಅದರ ಪುರಾಣ ಮತ್ತು ಆಧುನಿಕತೆಗಾಗಿ ಜಗತ್ತಿಗೆ ಒಂದು ಉದಾಹರಣೆಯಾಗುತ್ತಿದೆ.
ಜಗತ್ತಿನಲ್ಲಿ ಸೌರಶಕ್ತಿಯ ಬಗ್ಗೆ ಪ್ರಸ್ತಾಪಿಸಿದಾಗಲೆಲ್ಲಾ, ಮೊಧೇರಾ ಎದ್ದು ಕಾಣುತ್ತದೆ, ಏಕೆಂದರೆ ಇಲ್ಲಿ ಮನೆಗಳ ವಿದ್ಯುತ್‌ನಿಂದ ಕೃಷಿಯವರೆಗೆ ಎಲ್ಲವೂ ಸೌರಶಕ್ತಯಿಂದ ನಡೆಯುತ್ತಿದೆ. ಸೌರಶಕ್ತಿಯಲ್ಲಿ ಎಲ್ಲಾ ವಾಹನಗಳನ್ನು ಚಲಾಯಿಸಲು ಸಹ ಪ್ರಯತ್ನಿಸಲಾಗುವುದು. 21 ನೇ ಶತಮಾನದ ಸ್ವಾವಲಂಬಿ ಭಾರತವನ್ನು ನಿರ್ಮಿಸಲು ನಮ್ಮ ಶಕ್ತಿಯ ಅಗತ್ಯಗಳನ್ನು ಪೂರೈಸುವ ಇಂತಹ ಪ್ರಯತ್ನಗಳನ್ನು ನಾವು ಹೆಚ್ಚಿಸಬೇಕಾಗಿದೆ.

ಸ್ನೇಹಿತರೇ,

ಗುಜರಾತ್, ನಮ್ಮ ಭವಿಷ್ಯದ ತಲೆಮಾರಿಗೆ ಮತ್ತು ನಿಮ್ಮ ಮಕ್ಕಳಿಗೆ ಭದ್ರತೆಯನ್ನು ಖಚಿತಪಡಿಸಿಕೊಳುವ ದಿಕ್ಕಿನಲ್ಲಿ ದೇಶವನ್ನು ತೆಗೆದುಕೊಂಡು ಹೋಗಲು ನಾನು ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ. ನಮ್ಮ ಮೊಧೇರಾದ ಸಹೋದರರು ಈಗ ತಮ್ಮ ಮನೆಗಳ ಮೇಲೆ ವಿದ್ಯುತ್ ಉತ್ಪಾದಿಸುತ್ತಿರುವ ಮತ್ತು ಅವರು ಸರ್ಕಾರದಿಂದ ಹಣವನ್ನು ಪಡೆಯುತ್ತಿರುವ ಹಾಗೆ ದೇಶಾದ್ಯಂತ ಜನರು ಇದೇ ರೀತಿಯ ಕೆಲಸದಲ್ಲಿ ತೊಡಗುವುದನ್ನು ನೋಡುವ ದಿನಗಳು ಬಹಳ ದೂರವಿಲ್ಲ. ವಿದ್ಯುತ್ ಉಚಿತವಾಗುವುದು ಮಾತ್ರವಲ್ಲ, ವಿದ್ಯುತ್ ಉತ್ಪಾದಿಸುವ ಮೂಲಕ ಅವರು ಹಣವನ್ನೂ ಸಂಪಾದಿಸುತ್ತಿದ್ದಾರೆ. ಅದು ವಿದ್ಯುತ್ ಕಾರ್ಖಾನೆಯ ಮಾಲೀಕರಾಗಿರಲಿ, ಮನೆಯ ವ್ಯಕ್ತಿಯಾಗಲಿ, ರೈತ ಮತ್ತು ಅದನ್ನು ಬಳಸುವ ಗ್ರಾಹಕನಾಗಿರಲಿ ಎಲ್ಲರೂ ಸಮಾನರು. ನಿಮಗೆ ಅಗತ್ಯವಿರುವ ವಿದ್ಯುತ್‌ನ್ನು ಬಳಸಿ ಮತ್ತು ಹೆಚ್ಚುವರಿ ವಿದ್ಯುತ್‌ನ್ನು ಸರ್ಕಾರಕ್ಕೆ ಮಾರಾಟ ಮಾಡಿ. ಇದು ವಿದ್ಯುತ್ ಬಿಲ್‌ಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ, ಅಲ್ಲದೆ, ಜನರು ವಿದ್ಯುತ್ ಮಾರಾಟ ಮಾಡುವ ಮೂಲಕವೂ ಆದಾಯವನ್ನೂ ಗಳಿಸುತ್ತಾರೆ.

ಈಗ ಹೇಳಿ, ಇದು ಎಲ್ಲರಿಗೂ ಗೆಲುವಿನ ಪರಿಸ್ಥಿತಿ ಅಲ್ಲವೇ? ಜನರು ಮತ್ತು ಸಮಾಜದ ಮೇಲೆ ಯಾವುದೇ ಹೊರೆ ಇಲ್ಲ ಮತ್ತು ನಮಗೆ ನಾವು ಹೊರೆಯಾಗದೆ ಇತರರಿಗೂ ಸಹಾಯ ಮಾಡಬಹುದು. ನಿಸ್ಸಂದೇಹವಾಗಿ, ಇದು ಕಠಿಣ ಪರಿಶ್ರಮವನ್ನು ಬೇಡುತ್ತದೆ, ಆದರೆ ನಾವು ಕಠಿಣ ಕೆಲಸ ಮಾಡಲು ಹುಟ್ಟಿದ್ದೇವೆ. ನಮ್ಮ ಮೆಹ್ಸಾನಾ ಜಿಲ್ಲೆಯು ಬಹಳ ತೊಂದರೆಗೀಡಾದ ಜಿಲ್ಲೆಯಾಗಿತ್ತು, ಆದರೆ ಇಲ್ಲಿನ ಜನರು ಎಂದಿಗೂ ಕಠಿಣ ಪರಿಶ್ರಮದಿಂದ ಹಿಂದೆ ಸರಿಯಲಿಲ್ಲ.

ಸ್ನೇಹಿತರೇ,

ಇದುವರೆಗಿನ ಪರಿಸ್ಥಿತಿ ಏನಿತ್ತೆಂದರೆ, ಸರ್ಕಾರವು ವಿದ್ಯುತ್ ಉತ್ಪಾದಿಸುತ್ತಿತ್ತು ಮತ್ತು ಜನರು ಅದನ್ನು ಖರೀದಿಸುತ್ತಿದ್ದರು. ಆದರೆ ನಾನು ದೇಶವನ್ನು ಮುಂದಿನ ಮಾರ್ಗದೊಂದಿಗೆ ಸಂಪರ್ಕಿಸಲು ಪ್ರಯತ್ನಿಸುತ್ತೇನೆ. ಕೇಂದ್ರ ಸರ್ಕಾರವು ಈ ಬಗ್ಗೆ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಇದರಿಂದ ಜನರು ತಮ್ಮ ಮನೆಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸುತ್ತಾರೆ ಮತ್ತು ರೈತರು ಸೌರ ಪಂಪ್‌ಗಳನ್ನು ಬಳಸಿಕೊಂಡು ತಮ್ಮ ಹೊಲಗಳಲ್ಲಿ ವಿದ್ಯುತ್ ಉತ್ಪಾದಿಸುತ್ತಾರೆ. ಹಿಂದೆ, ನಾವು ಅಶ್ವಶಕ್ತಿಗಾಗಿ ಹೋರಾಡಬೇಕಾಗಿತ್ತು. ಈಗ ಜಮೀನಿನ ಸುತ್ತ ಎರಡು ಮೀಟರ್ ಭೂಮಿಯಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲಾಗುತ್ತಿದೆ. ಸೌರ ಫಲಕಗಳೊಂದಿಗೆ, ನಿಮ್ಮ ಪಂಪ್‌ಗಳು ಕಾರ್ಯನಿರ್ವಹಿಸುತ್ತವೆ, ನಿಮ್ಮ ಗಳಿಗೆ ಹೊಲಗಳಿಗೆ ನೀರು ಸಿಗುತ್ತದೆ ಮತ್ತು ಸರ್ಕಾರವು ಹೆಚ್ಚುವರಿ ವಿದ್ಯುತ್ ಸಹ ಖರೀದಿಸುತ್ತದೆ. ನಾವು ಸಂಪೂರ್ಣ ಚಕ್ರವನ್ನು ಬದಲಾಯಿಸಿದ್ದೇವೋ, ಇಲ್ಲವೋ? ಸೌರಶಕ್ತಿಯನ್ನು ಉತ್ತೇಜಿಸಲು ಮತ್ತು ಲಕ್ಷಾಂತರ ಸೌರ ಪಂಪ್‌ಗಳನ್ನು ವಿತರಿಸಲು ಸರ್ಕಾರ ಹಣಕಾಸಿನ ಸಹಾಯವನ್ನು ನೀಡುತ್ತಿದೆ.

20-22 ವರ್ಷ ವಯಸ್ಸಿನ ಅನೇಕ ಯುವಕರು ಇಲ್ಲಿ ಕುಳಿತಿದ್ದಾರೆ ಮತ್ತು ನಮ್ಮ ರೈತರು ತಮ್ಮ ಹೊಲಗಳ ನೀರಾವರಿಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಹ ಅವರಿಗೆ ತಿಳಿದಿಲ್ಲ. ಮೆಹ್ಸಾನಾದಲ್ಲಿ ಯಾವ ಪರಿಸ್ಥಿತಿ ಇತ್ತು? ವಿದ್ಯುತ್ ಲಭ್ಯವಿರಲಿಲ್ಲ. ಪತ್ರಿಕೆಗಳು ವಿದ್ಯುತ್ ಅಲಭ್ಯತೆಯ ಬಗ್ಗೆ ವರದಿಗಳನ್ನು ಮಾಡುತ್ತಿದ್ದವು. ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ನೀರಿಗಾಗಿ ತಲೆಯ ಮೇಲೆ ಮಡಕೆಗಳನ್ನು ಹೊತ್ತು 3-4 ಕಿಲೋಮೀಟರ್ ನಡೆಯುತ್ತಿದ್ದರು. ಉತ್ತರ ಗುಜರಾತ್‌ನ ನನ್ನ ತಾಯಂದಿರು ಮತ್ತು ಸಹೋದರಿಯರು ಅಂತಹ ಕಷ್ಟದ ಸಮಯವನ್ನು ಅನುಭವಿಸಿದ್ದಾರೆ. ಇಂದು, ನಮ್ಮ 20-22 ವರ್ಷ ವಯಸ್ಸಿನ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳಿಗೆ ಆಗ ಎದುರಿಸುತ್ತಿದ್ದ ತೊಂದರೆಗಳ ಬಗ್ಗೆ ಅರಿವೂ ಸಹ ಇಲ್ಲ. ಇಂದು ಶಾಲೆಗಳು ಮತ್ತು ಕಾಲೇಜುಗಳಿಗೆ ಹೋಗುವ ಅನೇಕ ಯುವಕರಿಗೆ ಇದು ತುಂಬಾ ಆಶ್ಚರ್ಯಕರವಾದ ಸುದ್ದಿಯಾಗಿದೆ.

ಸ್ನೇಹಿತರೇ,

ನಿಮ್ಮ ಪೂರ್ವಜರನ್ನು ಕೇಳಿದರೆ ನಮ್ಮ ಪರಿಸ್ಥಿತಿ ಹೇಗಿತ್ತೆಂದು ಅವರು ನಿಮಗೆ ಹೇಳುತ್ತಾರೆ. ಅನೇಕ ಸಮಸ್ಯೆಗಳಿದ್ದವು. ವಿದ್ಯುತ್ ಇಲ್ಲದೆ ಮಕ್ಕಳಿಗೆ ಅಧ್ಯಯನ ಮಾಡುವುದು ತುಂಬಾ ಕಷ್ಟಕರವಾಗಿತ್ತು. ಆ ದಿನಗಳಲ್ಲಿ ಟಿವಿ ಅಥವಾ ಫ್ಯಾನ್‌ಗಳು ಇರಲಿಲ್ಲ. ನೀರಾವರಿ, ಓದು, ಔಷಧಿಗಳವರೆಗೆ ಸಮಸ್ಯೆಗಳಿದ್ದವು. ಇದು ನಮ್ಮ ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ಕೆಟ್ಟದಾಗಿ ಪರಿಣಾಮ ಬೀರಿತು. ಮೆಹ್ಸಾನಾ ಜಿಲ್ಲೆಯ ಜನರು ಹುಟ್ಟಿನಿಂದ ಗಣಿತ ಮತ್ತು ವಿಜ್ಞಾನದಲ್ಲಿ ತುಂಬಾ ಬುದ್ಧಿವಂತರು. ನೀವು ಅಮೆರಿಕಾಕ್ಕೆ ಭೇಟಿ ನೀಡಿದರೆ, ಗಣಿತ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಉತ್ತರ ಗುಜರಾತಿನವರನ್ನು ಕಾಣಬಹುದು. ಸಂಪೂರ್ಣ ಕಚ್‌ ಪ್ರದೇಶದಲ್ಲಿ ಮೆಹ್ಸಾನಾದ ಶಿಕ್ಷಕರನ್ನು ನೀವು ಕಾಣಬಹುದು. ನಾವು ಸಾಮರ್ಥ್ಯವನ್ನು ಹೊಂದಿದ್ದೆವು. ಆದರೆ ವಿದ್ಯುತ್ ಮತ್ತು ನೀರಿನ ಸಮಸ್ಯೆಗಳಿಂದಾಗಿ ಅರ್ಹವಾದ ಎತ್ತರವನ್ನು ತಲುಪಲು ಸಾಧ್ಯವಾಗಲಿಲ್ಲ.

ಇಂದಿನ ಪೀಳಿಗೆಗೆ ಅಪರಿಮಿತ ಅವಕಾಶಗಳಿವೆ ಮತ್ತು ಅವರು ಸಾಮರ್ಥ್ಯವನ್ನು ಹೊಂದಿರಬೇಕು ಎಂದು ಹೇಳಲು ಬಯಸುತ್ತೇನೆ. ಸ್ನೇಹಿತರೇ, ಆ ಸಮಯದಲ್ಲಿದ್ದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಬಗ್ಗೆ ನಿಮಗೆ ತಿಳಿದಿಲ್ಲ. ತನ್ನ ಮಗಳ ಮದುವೆ ಖರೀದಿಗಾಗಿ ಯಾರಾದರೂ ಅಹಮದಾಬಾದ್‌ಗೆ ಹೋಗಬೇಕಾದರೆ, ಅಹಮದಾಬಾದ್‌ನಲ್ಲಿ ಪರಿಸ್ಥಿತಿ ಶಾಂತವಾಗಿದೆಯೋ, ಇಲ್ಲವೋ ಎಂದು ಅವರು ತಮ್ಮ ಸಂಬಂಧಿಕರನ್ನು ಕೇಳುತ್ತಿದ್ದರು. ಸ್ನೇಹಿತರೇ, ಅಂದಿನ ದಿನಗಳು ಅಕ್ಷರಶಃ ಕೋಲಾಹಲದ ದಿನಗಳಾಗಿದ್ದವು. ಯಾವ ಮಟ್ಟಕ್ಕೆ ಎಂದರೆ, ಮಕ್ಕಳು ತಮ್ಮ ಮೊದಲ ಮಾತುಗಳಲ್ಲಿ ‘ಕಾಕಾ ಅಥವಾ ಮಾಮಾ’ಗಿಂತ ಹೆಚ್ಚಾಗಿ ಪೊಲೀಸರ ಹೆಸರುಗಳನ್ನು ಹೇಳುತ್ತಿದ್ದವು. ಏಕೆಂದರೆ ಪೊಲೀಸರು ಅವರ ಮನೆಗಳ ಹೊರಗೆ ಬೀಡುಬಿಟ್ಟಿದ್ದರು. ಮಕ್ಕಳು  ಹುಟ್ಟಿನಿಂದಲೂ ‘ಕರ್ಫ್ಯೂʼಗಳನ್ನು ನೋಡುತ್ತಿದ್ದರು. ಗುಜರಾತ್‌ನಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ತಿಳಿಗೊಳಿಸುವ ನಮ್ಮ ಪ್ರಯತ್ನಗಳಿಂದಾಗಿ ಇಂದಿನ 20-22 ವರ್ಷಗಳ ಯುವಕರು ‘ಕರ್ಫ್ಯೂ’ಎಂಬ ಪದವನ್ನೇ ಕೇಳಿಲ್ಲ. ಅಭಿವೃದ್ಧಿಯ ವಿರೋಧದ ವಾತಾವರಣದ ಹೊರತಾಗಿಯೂ, ಕಳೆದ ಎರಡು ದಶಕಗಳಲ್ಲಿ ನೀವು ನಮ್ಮಲ್ಲಿ ಪುನರಾವರ್ತಿಸಿರುವ ನಂಬಿಕೆಯಿಂದಾಗಿ ಗುಜರಾತ್ ದೇಶದ ಪ್ರಮುಖ ರಾಜ್ಯವಾಗಿ ಹೊರಹೊಮ್ಮಿದೆ. ಗುಜರಾತ್ ಬಗ್ಗೆ ಹೆಚ್ಚುತ್ತಿರುವ ಗೌರವಕ್ಕಾಗಿ ನಾನು ಕೋಟ್ಯಂತರ ಗುಜರಾತಿಗಳಿಗೆ ನಮಸ್ಕರಿಸುತ್ತೇನೆ.

ಸಹೋದರರೇ,

ಸರ್ಕಾರ ಮತ್ತು ಜನರ ಜಂಟಿ ಪ್ರಯತ್ನಗಳಿಂದಾಗಿ ಹೊಸ ಇತಿಹಾಸವನ್ನು ಸೃಷ್ಟಿಸಲಾಗಿದೆ ಮತ್ತು ನನ್ನ ಬಗ್ಗೆ ನೀವು ಇಟ್ಟಿರುವ ನಂಬಿಕೆಯಿಂದಾಗಿ ಇದು ಸಾಧ್ಯವಾಗಿದೆ. ನನ್ನ ಜಾತಿ ಅಥವಾ ನನ್ನ ರಾಜಕೀಯ ಒಲವುಗಳನ್ನು ನೀವು ಎಂದಿಗೂ ನೋಡಿಲ್ಲ, ನೀವು ನನ್ನನ್ನು ಆಶೀರ್ವದಿಸಿದ್ದೀರಿ ಮತ್ತು ನನ್ನ ಮೇಲೆ ಪ್ರೀತಿಯನ್ನು ತೋರಿಸಿದ್ದೀರಿ.. ನೀವು ಕೇವಲ ನನ್ನ ಕೆಲಸದ ಮಾನದಂಡವನ್ನು ಮಾತ್ರ ನೋಡಿದ್ದೀರಿ ಮತ್ತು ನಿಮ್ಮ ಅನುಮೋದನೆ ನೀಡಿದ್ದೀರಿ. ನೀವು ನನ್ನನ್ನು ಮಾತ್ರವಲ್ಲ, ನನ್ನ ಸಹೋದ್ಯೋಗಿಗಳಿಗೂ ಆಶೀರ್ವದಿಸಿದ್ದೀರಿ. ನಿಮ್ಮ ಆಶೀರ್ವಾದಗಳು ಹೆಚ್ಚಾದಂತೆ, ನಿಮಗಾಗಿ ಹೆಚ್ಚಿನದನ್ನು ಮಾಡುವ ನನ್ನ ಬಯಕೆ ಕೂಡ ಹೆಚ್ಚುತ್ತದೆ.

ಸ್ನೇಹಿತರೇ,

ಬದಲಾವಣೆ ತಂತಾನೇ ಆಗುವುದಿಲ್ಲ. ಇದಕ್ಕೆ ದೂರದೃಷ್ಟಿಯ ಅಗತ್ಯವಿದೆ. ಗುಜರಾತ್‌ನ ಸರ್ವಾಂಗೀಣ ಅಭಿವೃದ್ಧಿಗೆ ನಾವು ಐದು ಸ್ತಂಭಗಳನ್ನು ಸೃಷ್ಟಿಸಿರುವುದಕ್ಕೆ ಮೆಹ್ಸಾನಾ ಜನರು ಸಾಕ್ಷಿಯಾಗಿದ್ದಾರೆ. ನಾನು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ, ನೀರಿನ ಅಗತ್ಯಗಳನ್ನು ಪೂರೈಸಲು ನಮ್ಮ ಬಜೆಟ್‌ನ ಒಂದು ದೊಡ್ಡ ಭಾಗವನ್ನು ಖರ್ಚು ಮಾಡುತ್ತಿದ್ದೆವು ಎಂಬುದನ್ನು ಇತರ ರಾಜ್ಯಗಳ ನನ್ನ ಸಹವರ್ತಿಗಳಿಗೆ ಹೇಳುತ್ತೇನೆ. ನಮಗೆ ದೊಡ್ಡ ನೀರಿನ ಬಿಕ್ಕಟ್ಟು ಇತ್ತು ಮತ್ತು ಹತ್ತು ವರ್ಷಗಳಲ್ಲಿ ಏಳು ವರ್ಷ ಬರಗಾಲವಿತ್ತು. ನಮ್ಮ ಬಜೆಟ್‌ನ ಎಷ್ಟು ದೊಡ್ಡ ಭಾಗವನ್ನು ನೀರಿನ ಮೇಲೆ ವ್ಯಯ ಮಾಡಿದೆವು ಎಂದು ದೇಶದ ಇತರ ರಾಜ್ಯಗಳು ಊಹಿಸಲು ಸಾಧ್ಯವಿಲ್ಲ.  ಆದ್ದರಿಂದ, ನಾವು ಪಂಚಾಮೃತ ಯೋಜನೆಯನ್ನು ಪ್ರಾರಂಭಿಸಿದಾಗ ಗುಜರಾತ್‌ಗೆ ಹೆಚ್ಚಿನ ಒತ್ತು ನೀಡಿದೆವು. ನೀರು ಮತ್ತು ವಿದ್ಯುತ್ ಇಲ್ಲದಿದ್ದರೆ ಗುಜರಾತ್ ಹಾಳಾಗುತ್ತದೆ. ಎರಡನೆಯದಾಗಿ, ಭವಿಷ್ಯದ ಪೀಳಿಗೆಯ ಬಗ್ಗೆ ನನಗೆ ಕಾಳಜಿ ಇತ್ತು. ಆದ್ದರಿಂದ, ಅವರ ಶಿಕ್ಷಣಕ್ಕಾಗಿ, ವಯಸ್ಸಾದವರ ಆರೋಗ್ಯ ಮತ್ತು ಸ್ವಾಸ್ಥ್ಯಕ್ಕಾಗಿ ನಾನು ನನ್ನ ಸಂಪೂರ್ಣ ಶಕ್ತಿಯನ್ನು ಹಾಕಿದ್ದೇನೆ. ಮೂರನೆಯದಾಗಿ, ನಮ್ಮ ರೈತರ ಸಮೃದ್ಧಿಗಾಗಿ ನಾನು ಕೆಲಸ ಮಾಡಿದ್ದೇನೆ. ಕೃಷಿಗೆ ಸಂಬಂಧಿಸಿದಂತೆ ಇತರ ರಾಜ್ಯಗಳಿಗೆ ಹೋಲಿಸಿದರೆ ಗುಜರಾತ್ ಹಿಂದುಳಿದಿತ್ತು. ರೈತರು ಏಳಿಗೆ ಹೊಂದಿದರೆ ನಮ್ಮ ಹಳ್ಳಿಗಳು ಸಹ ಸಮೃದ್ಧಿಯಾಗುತ್ತವೆ ಮತ್ತು ನಮ್ಮ ಹಳ್ಳಿಗಳು ಏಳಿಗೆ ಹೊಂದಿದ್ದರೆ ನನ್ನ ಗುಜರಾತ್‌ ಹಿಂದೆ ಬೀಳುವುದಿಲ್ಲ. ಆದ್ದರಿಂದ, ನಾವು ಕೃಷಿಯತ್ತ ಗಮನ ಹರಿಸಿದ್ದೇವೆ. ಅಭಿವೃದ್ಧಿಯ ತ್ವರಿತ ಬೆಳವಣಿಗೆಗಾಗಿ, ಉತ್ತಮ ರಸ್ತೆಗಳು, ರೈಲ್ವೆ ಜಾಲಗಳು, ವಿಮಾನ ನಿಲ್ದಾಣಗಳು ಮತ್ತು ಸಂಪರ್ಕ ಇರಬೇಕು ಮತ್ತು ಆಗ ಮಾತ್ರ ಅಭಿವೃದ್ಧಿಯ ಯಶಸ್ಸನ್ನು ಸವಿಯುವ ಅವಕಾಶಗಳಿರುತ್ತವೆ. ಬೆಳವಣಿಗೆಗೆ ಹೊಸ ಕೈಗಾರಿಕೆಗಳು ಮತ್ತು ಪ್ರವಾಸೋದ್ಯಮದ ಹೊಸ ಮಾರ್ಗಗಳು ಇರಬೇಕು. ಮತ್ತು ಇಂದು, ಈ ಎಲ್ಲ ವಿಷಯಗಳು ಗುಜರಾತ್‌ನಲ್ಲಿ ಗೋಚರಿಸುತ್ತಿವೆ.

ಏಕತಾ ಪ್ರತಿಮೆಯನ್ನು ನೋಡಿ. ಇಂದು ಅಮೆರಿಕದಲ್ಲಿನ ಲಿಬರ್ಟಿ ಪ್ರತಿಮೆಗಿಂತ ಹೆಚ್ಚಿನ ಜನರು ನಮ್ಮ ಸರ್ದಾರ್ ಸಾಹೇಬ್‌ ಪಾದಕ್ಕೆ ನಮಸ್ಕರಿಸಲು ಏಕತಾ ಪ್ರತಿಮೆಗೆ ಭೇಟಿ ನೀಡಲು ಬರುತ್ತಾರೆ. ಬಹಳ ಕಡಿಮೆ ಸಮಯದಲ್ಲಿ, ಮೊಧೇರಾ ಪ್ರವಾಸೋದ್ಯಮ ಕೇಂದ್ರವಾಗಲಿದೆ, ಸ್ನೇಹಿತರೇ. ಯಾವುದೇ ಪ್ರವಾಸಿಗರು ನಿರಾಶೆಗೊಳ್ಳದಂತೆ ನೀವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಈ ಹಳ್ಳಿಯು ಇದನ್ನು ನಿರ್ಧರಿಸಿದ ನಂತರ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮೊಧೇರಾಕ್ಕೆ ಭೇಟಿ ನೀಡುತ್ತಾರೆ.

ಸ್ನೇಹಿತರೇ,

ಉನ್‌ಝಾದ ಎಲ್ಲಾ ಹಳ್ಳಿಗಳಿಗೆ 24 ಗಂಟೆಗಳು ವಿದ್ಯುತ್ ಒದಗಿಸುವುದನ್ನು ನಾನು ಮೊದಲೇ ಹೇಳಿದೆ. ನಾವು ಉನ್‌ಝಾದಿಂದ ಜ್ಯೋತಿಗ್ರಾಮ ಯೋಜನೆ ಪ್ರಾರಂಭಿಸಿದ್ದೇವೆ. ನಮ್ಮ ನಾರಾಯಣ್ ಕಾಕಾ ಇಲ್ಲಿ ಕುಳಿತಿದ್ದಾರೆ, ಅವರಿಗೆ ಚೆನ್ನಾಗಿ ಗೊತ್ತು. ಎಲ್ಲಾ ಹಳ್ಳಿಗಳಿಗೆ 24 ಗಂಟೆಗಳ ವಿದ್ಯುತ್ ಒದಗಿಸಲು ನಾವು ತೆಗೆದುಕೊಂಡ ಪ್ರತಿಜ್ಞೆಗೆ ಎಲ್ಲಾ ಗುಜರಾತಿಗಳು ಸಾಕ್ಷಿಯಾಗಿದ್ದರು. ನಾವು ಆಂದೋಲನವನ್ನು ಪ್ರಾರಂಭಿಸಿದೆವು ಮತ್ತು ಅದನ್ನು 1000 ದಿನಗಳಲ್ಲಿ ಯಶಸ್ವಿಯಾದೆವು. ನಾನು ದೆಹಲಿಗೆ ಹೋದಾಗ, ವಿದ್ಯುತ್ ಸಂಪರ್ಕವಿಲ್ಲದ 18,000 ಹಳ್ಳಿಗಳಿವೆ ಎಂದು ನನಗೆ ತಿಳಿಯಿತು. 1000 ದಿನಗಳಲ್ಲಿ ಆ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ತಲುಪಬೇಕು ಎಂದು ನಾನು ಒತ್ತಿಹೇಳಿದೆ. ಗುಜರಾತ್‌ನ ಮಗ ಆ 18,000 ಹಳ್ಳಿಗಳಿಗೆ ವಿದ್ಯುತ್ ಅನ್ನು ಖಾತ್ರಿಪಡಿಸಿದ ಎಂಬ ಬಗ್ಗೆ ನೀವು ಸಂತೋಷಪಡುತ್ತೀರಿ.

ನೀರಿನ ಯೋಜನೆಯನ್ನು ಉದ್ಘಾಟಿಸಲು 2007 ರಲ್ಲಿ ದೆದಿಯಾಸನ್‌ಗೆ ಬಂದಿದ್ದು ನನಗೆ ನೆನಪಿದೆ. ಆ ಸಮಯದಲ್ಲಿ, ನಾನು ನೀರಿನ ಮಹತ್ವವನ್ನು ಒತ್ತಿಹೇಳಿದ್ದೆ ಮತ್ತು ಅದರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಜನರನ್ನು ವಿನಂತಿಸಿದ್ದೆ. ಟಿವಿಯಲ್ಲಿ ಸುದ್ದಿಯನ್ನು ನೋಡಿದಾಗ ನಮ್ಮ 15 ವರ್ಷಗಳ ಪ್ರಯತ್ನಗಳು ಫಲ ನೀಡುತ್ತಿರುವುದು ತಿಳಿಯಿತು. ನಮ್ಮ ಹೊಲಗಳು ಹಸಿರಾಗಿವೆ ಮತ್ತು ನನ್ನ ತಾಯಂದಿರು ಮತ್ತು ಸಹೋದರಿಯರ ಮುಖದಲ್ಲಿ ನಗು ತುಂಬಿದೆ. ಇದು ನೀರಿನ ಶಕ್ತಿ. ಕಾಲುವೆಗಳನ್ನು ನಿರ್ಮಿಸಲು ನಾನು ಸುಜಲಂ ಸುಫಲಂ ಯೋಜನೆಯನ್ನು ಪ್ರಾರಂಭಿಸಿದೆ. ಗುಜರಾತ್‌ನ ರೈತರಿಗೆ ನಾನು ಹೆಚ್ಚು ಋಣಿಯಾಗಿದ್ದೇನೆ. ಏಕೆಂದರೆ ಕೋಸಿಯಲ್ಲಿನ ನ್ಯಾಯಾಲಯದ ಪ್ರಕರಣಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಅವರು ನನಗೆ ಸುಜಲಂ ಸುಫಲಂ ಕಾಲುವೆ ನಿರ್ಮಾಣಕ್ಕೆ ಭೂಮಿಯನ್ನು ನೀಡಿದರು. ಅತ್ಯಲ್ಪ ಸಮಯದಲ್ಲಿ, ಸುಜಲಂ ಸುಫಲಂ ಕಾಲುವೆ ಸಿದ್ಧವಾಯಿತು ಮತ್ತು ಸಮುದ್ರಗಳಿಗೆ ಹರಿಯುತ್ತಿದ್ದ ನೀರು ಉತ್ತರ ಗುಜರಾತ್ ಜಮೀನುಗಳನ್ನು ತಲುಪಲು ಪ್ರಾರಂಭಿಸಿತು ಮತ್ತು ಉತ್ತರ ಗುಜರಾತ್‌ನ ಜನರು ದಿನಕ್ಕೆ ಮೂರು ಬಾರಿ ಅಡುಗೆ ಮಾಡಲು ಪ್ರಾರಂಭಿಸಿದರು.

ಇಂದು ನಾನು ನೀರು-ಸಂಬಂಧಿತ ಯೋಜನೆಗಳ ಉದ್ಘಾಟನೆ ಮತ್ತು ಅಡಿಪಾಯ ಹಾಕುವ ಸೌಭಾಗ್ಯ ಪಡೆದಿದ್ದೇನೆ. ವಿಸ್ನಾಗರ, ನನ್ನ ಹಳ್ಳಿ ವಡ್ನಾಗರ ಮತ್ತು ನಮ್ಮ ಖೇರಾಲು ತಾಲ್ಲೂಕಿನ ಜನರು ಇದರಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ. ನೀರಿನ ಸುಲಭ ಲಭ್ಯತೆ ಇದ್ದಾಗ, ಅದು ಕುಟುಂಬಗಳ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಮತ್ತು ನಮ್ಮ ತಾಯಂದಿರು ಮತ್ತು ಸಹೋದರಿಯರ ಸಾಮರ್ಥ್ಯವನ್ನು ಉತ್ತಮವಾಗಿ ಬಳಸಿಕೊಳ್ಳಬಹುದು. ಇದು ಪಶುಸಂಗೋಪನೆ ಮತ್ತು ಕೃಷಿಗೆ ಸಹಾಯ ಮಾಡುತ್ತದೆ. ಮೆಹ್ಸಾನಾ ಜಿಲ್ಲೆಯು ಪಶುಸಂಗೋಪನೆಗೆ ಹೆಸರುವಾಸಿಯಾಗಿದೆ. ನಮ್ಮ ಡೈರಿಗಳು 1960 ರ ನಂತರ ದಾಖಲೆಯ ಲಾಭವನ್ನು ಗಳಿಸಿವೆ ಎಂದು ಅಶೋಕ ಬಾಯಿ ನನಗೆ ಹೇಳಿದರು. ಉತ್ತರ ಗುಜರಾತ್‌ನ ಪಶುಸಂಗೋಪನೆಯಲ್ಲಿ ಭಾಗಿಯಾಗಿರುವವರು, ದುರುಪಯೋಗವನ್ನು ನಿಲ್ಲಿಸಿದವರಿಗೆ ಡೈರಿ ಕೆಲಸವನ್ನು ಒಪ್ಪಿಸಿದ್ದಾರೆ ಮತ್ತು ಲಾಭದಲ್ಲಿ ನಿಮ್ಮನ್ನು ಪಾಲುದಾರರನ್ನಾಗಿ ಮಾಡಿದ್ದಾರೆ. ಅದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ.

ಸಹೋದರರೇ,

ನೀರು ಮತ್ತು ಮೇವು ಇಲ್ಲದ ಬರಗಾಲದ ದಿನಗಳನ್ನು ನೀವು ನೋಡಿದ್ದೀರಿ ಮತ್ತು ದೇಶಾದ್ಯಂತದಿಂದ ಮೇವಿನ ರೈಲು ಲೋಡ್‌ಗಳನ್ನು ನಾವು ತರಬೇಕಾಗಿತ್ತು. ನೀರು ಸಿಗದೆ ಪ್ರಾಣಿಗಳು ತಲ್ಲಣಿಸಿದ್ದವು ಮತ್ತು ಪತ್ರಿಕೆಗಳು ಅಂತಹ ವರದಿಗಳಿಂದಲೇ ತುಂಬಿದ್ದವು. ಇಂದು ನಾವು ಆ ಎಲ್ಲ ಸಮಸ್ಯೆಗಳಿಂದ ಮುಕ್ತರಾಗಿದ್ದೇವೆ. ಆದ್ದರಿಂದ, ಇಂದು, 20-22 ವರ್ಷದೊಳಗಿನ ಯುವಕರಿಗೆ ನಾವು ಗುಜರಾತ್‌ನನ್ನು ಆ ಸಮಸ್ಯೆಗಳಿಂದ ಹೇಗೆ ಹೊರಬಂದೆವು ಎಂಬುದು ತಿಳಿದಿಲ್ಲ. ಈಗ ನಮಗೆ ಭಾರೀ ಜಿಗಿತದ ಅಗತ್ಯವಿದೆ. ನಾವು ನಮ್ಮ ಪ್ರಶಸ್ತಿಗಳ ನಂತರ ವಿಶ್ರಾಂತಿ ಪಡೆಯಬಾರದು. ಇದುವರೆಗೆ ಸಾಧಿಸಿರುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಬೇಕು ಎಂದು ನನಗನಿಸುತ್ತದೆ.
ವಿದ್ಯುತ್ ಮತ್ತು ನೀರಿನ ಲಭ್ಯತೆಯು ಕೈಗಾರಿಕಾ ಅಭಿವೃದ್ಧಿಗೆ ಕಾರಣವಾಗುತ್ತದೆ ಮತ್ತು ಕೃಷಿ ಮತ್ತು ಹಾಲು ಉತ್ಪಾದನೆಯೂ ಹೆಚ್ಚಾಗುತ್ತದೆ. ಈಗ ಆಹಾರ ಪಾರ್ಕ್‌ಗಳಿಗೆ ಉತ್ತಮ ಅವಕಾಶವಿದೆ. ಎಫ್‌ಪಿಒಗಳನ್ನು ಸ್ಥಾಪಿಸಲಾಗುತ್ತಿದೆ. ನಮ್ಮ ಮೆಹ್ಸಾನಾ ಔಷಧಿಗಳು, ಸಿಮೆಂಟ್, ಪ್ಲಾಸ್ಟಿಕ್ ಮತ್ತು ಎಂಜಿನಿಯರಿಂಗ್ ಉತ್ಪನ್ನಗಳಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಏಕೆಂದರೆ ದೊಡ್ಡ ಬೇಡಿಕೆಯಿದೆ. ಮಂಡಲ್ ಬಕರಾಜಿ ವಿಶೇಷ ಹೂಡಿಕೆ ಪ್ರದೇಶದಲ್ಲಿ ನಮ್ಮ ವಾಹನ ಉದ್ಯಮದ ಅಭಿವೃದ್ಧಿ ಹೇಗಿದೆ! ಜಪಾನ್ ಜನರು ಇಲ್ಲಿ ಕಾರುಗಳನ್ನು ತಯಾರಿಸುತ್ತಾರೆ ಮತ್ತು ಅವುಗಳನ್ನು ಜಪಾನ್‌ಗೆ ರಫ್ತು ಮಾಡುತ್ತಾರೆ. ಇನ್ನೇನು ಬೇಕು! ಜಪಾನ್ ಜನರು ಇಲ್ಲಿಗೆ ಬರುತ್ತಾರೆ, ತಮ್ಮ ಹಣವನ್ನು ಹೂಡಿಕೆ ಮಾಡುತ್ತಾರೆ ಮತ್ತು ಕಾರುಗಳನ್ನು ಇಲ್ಲಿಯೇ ತಯಾರಿಸುತ್ತಾರೆ. ಗುಜರಾತ್‌ ಯುವಕರ ಬುದ್ಧಿಶಕ್ತಿ ಮತ್ತು ಬೆವರಿನ ಶಕ್ತಿಯಿಂದಾಗಿ ಜಪಾನ್‌ ಇಲ್ಲಿಂದ ಕಾರುಗಳನ್ನು ಆಮದು ಮಾಡಿಕೊಳ್ಳುತ್ತದೆ. ಮೂರು ಘಟಕಗಳಲ್ಲಿ ಲಕ್ಷಾಂತರ ಕಾರುಗಳನ್ನು ಇಲ್ಲಿ ತಯಾರಿಸಲಾಗುತ್ತಿದೆ. ಇಲ್ಲಿ ಸೈಕಲ್‌ಗಳನ್ನು ತಯಾರಿಸುವುದು ಸಹ ಕಷ್ಟಕರವಾದ ಸಮಯವಿತ್ತು ಮತ್ತು ಈಗ ಕಾರುಗಳನ್ನು ತಯಾರಿಸಲಾಗುತ್ತಿದೆ. ಸ್ನೇಹಿತರೇ, ನನ್ನ ಮಾತುಗಳನ್ನು ಗಮನವಿಟ್ಟು ಕೇಳಿ, ಸೈಕಲ್‌ಗಳನ್ನು ತಯಾರಿಸಲು ಸಾಧ್ಯವಾಗದಿದ್ದ ಗುಜರಾತ್‌ನಲ್ಲಿ, ಇಂದು ಕಾರುಗಳು ಮತ್ತು ಮೆಟ್ರೋ ಕೋಚ್‌ಗಳನ್ನು ತಯಾರಿಸಲಾಗುತ್ತಿದೆ. ನೀವು ಆಕಾಶದಲ್ಲಿ ನೋಡುವ ವಿಮಾನಗಳನ್ನು ಗುಜರಾತ್‌ನ ಮಣ್ಣಿನಲ್ಲಿ ತಯಾರಿಸುವ ದಿನವು ದೂರವಿಲ್ಲ.

ಸುಜುಕಿಗಾಗಿ ಸಣ್ಣ ಬಿಡಿಭಾಗಗಳನ್ನು ಮಾಡುವ 100 ಕ್ಕೂ ಹೆಚ್ಚು ಪೂರೈಕೆದಾರರು ಇದ್ದಾರೆ. ಜಗತ್ತು ಬದಲಾಗುತ್ತಿದೆ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಹೊರತುಪಡಿಸಿ ಬೇರೆ ಆಯ್ಕೆಗಳಿರುವುದಿಲ್ಲ. ಅಂತಹ ದೊಡ್ಡ ಯೋಜನೆಗಳಲ್ಲಿ ಒಂದು ನಮ್ಮ ತಾಯಿ ಬಕರಾಜಿಯ ಪಾದಗಳಲ್ಲಿದೆ. ನಮ್ಮ ಹನ್ಸಲ್‌ಪುರದಲ್ಲಿ ಲಿಥಿಯಂ ಕಬ್ಬಿಣದ ಘಟಕವಿದೆ ಮತ್ತು ನಾನು ಮತ್ತೆ ಹನ್ಸಲ್‌ಪುರದ ರೈತರಿಗೆ ಧನ್ಯವಾದ ಹೇಳಬೇಕಾಗಿದೆ. ನಾನು ನಿಮ್ಮೊಂದಿಗೆ ವಿಷಯವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಎಲ್ಲಾ ಯೋಜನೆಗಳು ವ್ಯರ್ಥ ಎಂದು ಹಲವಾರು ವರದಿಗಳು ಬಂದವು ಮತ್ತು ಜನರು ಹೋರಾಕ್ಕಿಳಿಯುವಂತೆ ಪ್ರಚೋದಿಸಲಾಯಿತು. ನಾವು ಸುಜುಕಿ ಯೋಜನೆಯನ್ನು ಇಲ್ಲಿಗೆ ತರಲು ಪ್ರಯತ್ನಿಸಿದಾಗ ಹನ್ಸಲ್‌ಪುರದ ಎಲ್ಲಾ ರೈತರು ತಮ್ಮ ಆಂದೋಲನವನ್ನು ಹೆಚ್ಚಿಸಿದರು. ಇಲ್ಲಿನ ಭೂಮಿಯಲ್ಲಿ ಸಿರಿಧಾನ್ಯವನ್ನೂ ಬೆಳೆಯುವುದು ಕಷ್ಟ. ಆಗ ಬರಗಾಲವಿತ್ತು ಮತ್ತು ದೊಡ್ಡ ಆಂದೋಲನ ನಡೆಯುತ್ತಿತ್ತು. ನಾನು ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದೆ. ಅವರು ಗಾಂಧಿನಗರಕ್ಕೆ ಬಂದು ನನ್ನ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ನನ್ನ ಪ್ರತಿಕೃತಿಗಳನ್ನು ಸುಟ್ಟರು.

ನಾನು ಅವರನ್ನು ಮಾತುಕತೆಗಾಗಿ ಆಹ್ವಾನಿಸಿದೆ ಮತ್ತು ಅವರ ದೂರುಗಳನ್ನು ಕೇಳಿದೆ. ಅವರು ತಮ್ಮ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಅವರು ಹೇಳಿದರು. ಅದೇ ನಿಮ್ಮ ಆಶಯವಾಗಿದ್ದರೆ ನಾನು ಗುಜರಾತ್‌ನಲ್ಲಿ ಬೇರೆಡೆ ಈ ಘಟಕವನ್ನು ಸ್ಥಾಪಿಸುತ್ತೇನೆ ಎಂದು ಅವರಿಗೆ ಹೇಳಿದೆ. ಐದಾರು ಜನರಿದ್ದರು ಮತ್ತು ಅವರು ಬುದ್ಧಿವಂತರಾಗಿದ್ದರು. ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಬೇಡಿ ಎಂದು ನನಗೆ ಮನವಿ ಮಾಡಿದರು. ರೈತರು ಪ್ರಬುದ್ಧತೆಯನ್ನು ತೋರಿಸಿದರು ಮತ್ತು ಅವರ ಆಂದೋಲನವನ್ನು ಕೊನೆಗೊಳಿಸಿದರು. ಈಗ ನೋಡಿ, ಇಂದು ಇಡೀ ಕೈಗಾರಿಕಾ ಪ್ರದೇಶವು ಅದ್ಭುತಗಳನ್ನು ಮಾಡುತ್ತಿದೆ ಮತ್ತು ಮೆಹ್ಸಾನಾದ ಒಟ್ಟಾರೆ ಅಭಿವೃದ್ಧಿಗೆ ಕಾರಣವಾಗಿದೆ.

ಸಹೋದರರೇ,
ಪಶ್ಚಿಮ ಸರಕು ಕಾರಿಡಾರ್ ಮತ್ತು ದೆಹಲಿ-ಮುಂಬೈ ಸರಕು ಕಾರಿಡಾರ್ ದೃಷ್ಟಿಯಿಂದ, ಇದು ಒಂದು ಪ್ರಮುಖ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಇದಲ್ಲದೆ, ಲಾಜಿಸ್ಟಿಕ್ಸ್ ಮತ್ತು ಶೇಖರಣಾ ಕ್ಷೇತ್ರಗಳಲ್ಲಿ ಅನೇಕ ಹೊಸ ಅವಕಾಶಗಳು ಹೊರಹೊಮ್ಮುತ್ತಿವೆ ಮತ್ತು ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ.

ಸ್ನೇಹಿತರೇ,

ಕಳೆದ ಎರಡು ದಶಕಗಳಲ್ಲಿ ನಾವು ಸಂಪರ್ಕಕ್ಕೆ ಒತ್ತು ನೀಡಿದ್ದೇವೆ. ಡಬಲ್ ಎಂಜಿನ್ ಸರ್ಕಾರವನ್ನು ನರೇಂದ್ರ (ಮೋದಿ) ಮತ್ತು ಭೂಪೇಂದ್ರ (ಪಟೇಲ್) ರೂಪದಲ್ಲಿ ಒಟ್ಟಿಗೆ ಸೇರಿಸುವುದರೊಂದಿಗೆ, ಅಭಿವೃದ್ಧಿ ಕಾರ್ಯಗಳಲ್ಲಿ ಅಭೂತಪೂರ್ವ ವೇಗವಿದೆ. 1930 ರ ದಶಕದಲ್ಲಿ ಬ್ರಿಟಿಷರು ಸುಮಾರು 90-95 ವರ್ಷಗಳ ಹಿಂದೆ ನೀಲನಕ್ಷೆಯನ್ನು ಸಿದ್ಧಪಡಿಸಿದ್ದರು ಎಂದು ತಿಳಿದರೆ ನೀವು ಆಶ್ಚರ್ಯಪಡುತ್ತೀರಿ. ಒಂದು ಫೈಲ್ ಇದೆ ಮತ್ತು ಇದು ಮೆಹ್ಸಾನಾ-ಅಂಬಾಜಿ-ತರಂಗಾ- ಅಬು ರಸ್ತೆ ರೈಲ್ವೆ ಮಾರ್ಗವನ್ನು ಉಲ್ಲೇಖಿಸುವ ನಕ್ಷೆಯಾಗಿದೆ. ಆದರೆ ಸ್ವಾತಂತ್ರ್ಯದ ನಂತರದ ಸರ್ಕಾರಗಳು ಈ ಯೋಜನೆಯನ್ನು ಕಸದಬುಟ್ಟಿಗೆ ಎಸೆದವು. ನಾವು ಆ ಯೋಜನೆಯನ್ನು ಪುನರುಜ್ಜೀವನಗೊಳಿಸಿದೆವು ಮತ್ತು ಹೊಸ ಯೋಜನೆಗಳನ್ನು ಮಾಡಿದ್ದೇವೆ. ಅಂಬಾ ಮಾತೆಗೆ ನಮಸ್ಕರಿಸಲು ನಾನು ಕಳೆದ ಬಾರಿ ಇಲ್ಲಿಗೆ ಬಂದಾಗ ಆ ರೈಲ್ವೆ ಹಳಿಗೆ ಅಡಿಪಾಯವನ್ನು ಹಾಕಿದೆ. ರೈಲ್ವೆ ಮಾರ್ಗ ಸಿದ್ಧವಾದ ನಂತರ ನೀವು ಬದಲಾವಣೆಯನ್ನು ಊಹಿಸಬಹುದು. ಇದು ಈ ಪ್ರದೇಶದಲ್ಲಿ ಭಾರಿ ಸಮೃದ್ಧಿಯನ್ನು ತರಲಿದೆ.

ಸ್ನೇಹಿತರೇ,

ನಾಲ್ಕು ಪಥಗಳಾಗಿ ಪರಿವರ್ತಿಸುವ ಮೊದಲು ಒಂದೇ ಪಥವಾಗಿದ್ದ ಚಾನಸ್ಮಾ ಬಹುಕರಾಜಿ, ಮೊಧೇರಾ, ಚಾನಸ್ಮಾ ರಸ್ತೆಯಲ್ಲಿ ಭಾರಿ ಸಮಸ್ಯೆಗಳಿದ್ದವು. ಬಹುಕರಾಜಿಯಲ್ಲಿ ಕೇವಲ ಒಂದು ಬಸ್ ಮಾತ್ರ ಹಾದುಹೋಗಬಹುದಾಗಿತ್ತು. ಮತ್ತೊಂದು ಬಸ್ ವಿರುದ್ಧ ದಿಕ್ಕಿನಿಂದ ಬಂದರೆ ಅದು ದೊಡ್ಡ ಸಮಸ್ಯೆಯಾಗುತ್ತಿತ್ತು. ಆ ದಿನಗಳು ನಿಮಗೆ ನೆನಪಿದೆಯೇ ಅಥವಾ ನೀವು ಮರೆತಿದ್ದೀರಾ? ಇಂದು, ಇದು ನಾಲ್ಕು ಪಥದ ರಸ್ತೆಯಾಗಿದೆ. ಶಿಕ್ಷಣ, ಕೌಶಲ್ಯ ಮತ್ತು ಆರೋಗ್ಯವಿಲ್ಲದೆ ಅಭಿವೃದ್ಧಿ ಅಪೂರ್ಣವಾಗುತ್ತದೆ. ಆದ್ದರಿಂದ, ನಾನು ಮೆಹ್ಸಾನಾ ಮತ್ತು ಗುಜರಾತ್‌ನಲ್ಲಿ ಈ ವಿಷಯಗಳಿಗೆ ವಿಶೇಷ ಒತ್ತು ನೀಡಿದ್ದೇನೆ. ಸರ್ಕಾರಿ ಅಧಿಕಾರಿಗಳ ತರಬೇತಿಗಾಗಿ ಸರ್ದಾರ್ ಸಾಹೇಬ್ ಅವರ ಸ್ಮರಣೆಯಲ್ಲಿ ಒಂದು ಸಂಸ್ಥೆಯನ್ನು ರಚಿಸಲಾಗುತ್ತಿದೆ, ಇದು ಯುವಕರ ಪ್ರಗತಿಗೆ ಅವಕಾಶ ನೀಡುತ್ತದೆ.

ವಡ್ನಾಗರದಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸುವ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕಾಗಿ ಗುಜರಾತ್ ಸರ್ಕಾರವನ್ನು ನಾನು ಅಭಿನಂದಿಸುತ್ತೇನೆ. ಈ ಮೊದಲು, ತಮ್ಮ 11 ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ಎಲ್ಲಿಗೆ ಹೋಗಬೇಕೆಂದು ಜನರು ಚಿಂತಿಸುತ್ತಿದ್ದರು. ಈಗ ಅಂತಹ ಗ್ರಾಮದಲ್ಲಿ ವೈದ್ಯಕೀಯ ಕಾಲೇಜನ್ನು ನಿರ್ಮಿಸಲಾಗುತ್ತಿದೆ ಮತ್ತು ಈ ಡಬಲ್ ಎಂಜಿನ್ ಸರ್ಕಾರವು ಗುಜರಾತ್‌ನ ಎಲ್ಲಾ ಜಿಲ್ಲೆಗಳಿಗೆ ಆಧುನಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಶ್ರಮಿಸುತ್ತಿದೆ.

ಸ್ನೇಹಿತರೇ,
ಯಾವುದೇ ಕಾಯಿಲೆಯಿಂದ ಬಳಲುತ್ತಿರುವ ವಯಸ್ಸಾದ ವ್ಯಕ್ತಿಯು ವೈದ್ಯಕೀಯ ಬಿಲ್‌ಗಳಿಗಾಗಿ ಪ್ರತಿ ತಿಂಗಳು ಕನಿಷ್ಠ 1,000 ರೂಪಾಯಿಗಳನ್ನು ವ್ಯಯಿಸುತ್ತಿದ್ದ. ಜನೌಷಧಿ ಕೇಂದ್ರಗಳಿಂದ ಔಷಧಿಗಳನ್ನು ಖರೀದಿಸುವಂತೆ ನಿಮ್ಮೆಲ್ಲರಿಗೂ ನಾನು ವಿನಂತಿಸುತ್ತೇನೆ. ಇವು ಅಧಿಕೃತ ಮತ್ತು ಸಾಮಾನ್ಯ ಔಷಧಿಗಳಾಗಿವೆ. ಈ ಹಿಂದೆ ಸುಮಾರು 1,000 ರೂಪಾಯಿಗಳಾಗಿದ್ದ ವೈದ್ಯಕೀಯ ಬಿಲ್‌ಗಳು ಈಗ 100-200 ರೂಪಾಯಿಗಳಿಗೆ ಇಳಿದಿವೆ. ನಿಮ್ಮ ಮಗನ ಪ್ರಯತ್ನಗಳಿಂದಾಗಿ ನೀವು ಪ್ರತಿ ತಿಂಗಳು 800 ರೂಪಾಯಿಗಳನ್ನು ಉಳಿಸಬಹುದು. ಆ ಜನೌಷಧಿ ಕೇಂದ್ರಗಳನ್ನು ಬಳಸಿಕೊಳ್ಳಿ.

ಹೆಚ್ಚಿನ ಸಂಖ್ಯೆಯ ಜನರಿಗೆ ಉದ್ಯೋಗವನ್ನು ಒದಗಿಸುವ ಪ್ರವಾಸೋದ್ಯಮವನ್ನು ನಾನು ಉಲ್ಲೇಖಿಸಿದೆ. ಇತ್ತೀಚೆಗೆ, ವಡ್ನಾಗರದಲ್ಲಿ ಉತ್ಖನನ ನಡೆಯಿತು ಮತ್ತು ಸಾವಿರಾರು ವರ್ಷಗಳಷ್ಟು ಹಳೆಯದಾದ ವಸ್ತುಗಳು ಕಂಡುಬಂದಿವೆ. ಕಾಶಿಯು ಶಾಶ್ವತವಾದಂತೆ, ಭಾರತದಲ್ಲಿ ನಮ್ಮ ವಡ್ನಾಗರ ಎರಡನೇ ನಗರ. ಇದು ಕಳೆದ 3000 ವರ್ಷಗಳಲ್ಲಿ ನಾಶವಾಗಿಲ್ಲ ಮತ್ತು ಯಾವಾಗಲೂ ಕೆಲವು ಮಾನವ ವಸಾಹತು ಕಂಡುಬಂದಿದೆ ಎಂದು ಉತ್ಖನನ ತೋರಿಸುತ್ತದೆ. ಪ್ರಪಂಚದಾದ್ಯಂತದ ಜನರು ಸೂರ್ಯ ದೇವಾಲಯ, ಬಹುಕರಾಜಿಯ ತೀರ್ಥಯಾತ್ರೆ, ಉಮಿಯಾ ಮಾತಾ, ಸ್ಯಾಟ್ರಲಿಂಗ್ ಕೊಳ, ರಾಣಿ ಕಿ ವಾವ್, ತರಂಗಾ ಹಿಲ್, ರುದ್ರ ಮಹಾಲಯ, ವಡ್ನಾಗರದ ಟೋರಾನಾಗಳು ಇತ್ಯಾದಿಗಳನ್ನು ನೋಡಲು ಬರುತ್ತಾರೆ. ಪ್ರವಾಸಿಗರು ಕನಿಷ್ಠ ಎರಡು ದಿನ ನೋಡಬಹುದಾದ ತಾಣಗಳಿವೆ. ನಾವು ಅದನ್ನು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ.

ಸ್ನೇಹಿತರೇ,

ಕಳೆದ ಎರಡು ದಶಕಗಳಲ್ಲಿ, ದೇವಾಲಯಗಳು ಮತ್ತು ಶಕ್ತಿಪೀಠಗಳನ್ನು ಪುನಃಸ್ಥಾಪಿಸಲು ನಾವು ಶ್ರದ್ಧೆಯಿಂದ ಕೆಲಸ ಮಾಡಿದ್ದೇವೆ. ಸೋಮನಾಥ, ಚೋಟಿಲಾ ಮತ್ತು ಪಾವಗಢದ ಸ್ಥಿತಿಯನ್ನು ಸುಧಾರಿಸಲಾಗಿದೆ. ಪವಗಢದಲ್ಲಿ ಧ್ವಜವನ್ನು ಎಂದಿಗೂ ಹಾರಿಸಿರಲಿಲ್ಲ. ಇತ್ತೀಚೆಗೆ, ನಾನು ಅಲ್ಲಿದ್ದೆ ಮತ್ತು 500 ವರ್ಷಗಳ ನಂತರ ಧ್ವಜವನ್ನು ಹಾರಿಸಲಾಯಿತು. ಅಂಬಾಜಿ ಹಿಂದೆಂದಿಗಿಂತಲೂ ಹೊಳೆಯುತ್ತಿದೆ. ಸಂಜೆ ಅಂಬಾಜಿಯಲ್ಲಿ ಪ್ರಾರ್ಥನೆ ನಡೆಯಲಿದೆ ಮತ್ತು ಸಾವಿರಾರು ಜನರು ಶರದ್ ಪೂರ್ಣಿಮಾದಲ್ಲಿ ಅಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ನನಗೆ ತಿಳಿಯಿತು.

ಸಹೋದರರೇ,

ಗಿರ್ನಾರ್, ಪಾಲಿಟಾನಾ ಅಥವಾ ಬಹುಕರಾಜಿಯಂತಹ ಎಲ್ಲಾ ತೀರ್ಥಕ್ಷೇತ್ರಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಬೃಹತ್ ಯೋಜನೆಗಳು ನಡೆಯುತ್ತಿವೆ. ಪ್ರವಾಸಿಗರು ಬಂದರೆ, ಅದು ಎಲ್ಲರಿಗೂ ಒಳ್ಳೆಯದು, ಸ್ನೇಹಿತರೇ. ನಮ್ಮ ಮಂತ್ರವು ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್. ಇದು ಡಬಲ್ ಎಂಜಿನ್ ಸರ್ಕಾರದ ಮಂತ್ರ. ಸೂರ್ಯನ ಬೆಳಕಿನಂತೆ, ಅದು ತಾರತಮ್ಯ ಮಾಡುವುದಿಲ್ಲ ಮತ್ತು ಅದರ ಬೆಳಕನ್ನು ತಲುಪುವಷ್ಟು ದೂರ ಚೆಲ್ಲುತ್ತದೆ, ಅಭಿವೃದ್ಧಿಯ ಬೆಳಕು ಪ್ರತಿ ಮನೆಯಲ್ಲೂ ತಲುಪಲಿ. ನಿಮ್ಮ ಆಶೀರ್ವಾದ ನಮಗೆ ಬೇಕು. ನಮ್ಮ ತಂಡಕ್ಕೆ ನಿಮ್ಮ ಆಶೀರ್ವಾದದ ಅಗತ್ಯವಿದೆ. ಇದರಿಂದ ನಾವು ಗುಜರಾತ್ ಅಭಿವೃದ್ಧಿಯನ್ನು ಮುಂದುವರಿಸಬಹುದು. ಮತ್ತೊಮ್ಮೆ, ನಿಮ್ಮೆಲ್ಲರಿಗೂ ಅನೇಕ ಅಭಿನಂದನೆಗಳು ಮತ್ತು ಧನ್ಯವಾದಗಳು.

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಎಲ್ಲರೂ ಜೋರಾಗಿ ಹೇಳಿ. ನಮ್ಮ ಮೆಹ್ಸಾನಾವನ್ನು ಹಿಂದೆ ಬೀಳಬಾರದು.

ನಿಮ್ಮ ಕೈಗಳನ್ನು ಮೇಲಕ್ಕೆತ್ತಿ ನನ್ನೊಂದಿಗೆ ಹೇಳಿ: ಭಾರತ್ ಮಾತಾ ಕಿ - ಜೈ! ಭಾರತ್ ಮಾತಾ ಕಿ - ಜೈ! ಭಾರತ್ ಮಾತಾ ಕಿ - ಜೈ!

ಧನ್ಯವಾದಗಳು.

 

ಸೂಚನೆ: ಇದು ಪ್ರಧಾನ ಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣದ ಬಹುತೇಕ ಗುಜರಾತಿ ಭಾಷೆಯಲ್ಲಿತ್ತು.

*******



(Release ID: 1866954) Visitor Counter : 151