ಪ್ರಧಾನ ಮಂತ್ರಿಯವರ ಕಛೇರಿ

​​​​​​​ಗುಜರಾತ್ ನ ಅಂಬಾಜಿಯಲ್ಲಿ 7,200 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ವಿವಿಧ ಅಭಿವೃದ್ದಿ ಯೋಜನೆಗಳ ಸಮರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿದ ಪ್ರಧಾನಮಂತ್ರಿ


ಪಿಎಂ ಆವಾಜ್ ಯೋಜನೆಯಡಿ 45,000 ಕ್ಕೂ ಹೆಚ್ಚು ಮನೆಗಳನ್ನು ಸಮರ್ಪಿಸಿದ ಮತ್ತು ಶಿಲಾನ್ಯಾಸ ನೆರವೇರಿಸಿದ ಪ್ರಧಾನಮಂತ್ರಿ

ತರಂಗಾ ಹಿಲ್ – ಅಂಬಾಜಿ – ಅಬು ಮಾರ್ಗದ ಹೊಸ ಬ್ರಾಡ್ ಗೇಜ್ ‍ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಮಂತ್ರಿ

ಪ್ರಸಾದ್ ಯೋಜನೆಯಡಿ ಅಂಬಾಜಿ ದೇವಾಲಯದಲ್ಲಿ ಯಾತ್ರಾರ್ಥಿಗಳಿಗೆ ಸೌಲಭ್ಯ ಅಭಿವೃದ್ಧಿಗೊಳಿಸುವ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಮಂತ್ರಿ

ನ್ಯೂ ಪಲನಪುರ್ – ನ್ಯೂ ಮಹೆಸನ ವಿಭಾಗದ 62 ಕಿಲೋಮೀಟರ್ ಉದ್ದದ ಪಶ್ಚಿಮ ಸರಕು ಸಾಗಣೆ ಕಾರಿಡಾರ್ ಹಾಗೂ 13 ಕಿಲೋಮೀಟರ್ ನ್ಯೂ ಪಲನಪುರ್ – ನ್ಯೂ ಚಾತೊದರ್ ವಿಭಾಗದ ಮಾರ್ಗಗಳನ್ನು ಸರ್ಮಪಿಸಿದ ಪ್ರಧಾನಮಂತ್ರಿ  
“ನಮ್ಮ ನಿರ್ಣಯಗಳನ್ನು ಸಾಕಾರಗೊಳಿಸಲು ಮಾತೆ ಅಂಬಾ ಅವರ ಆಶಿರ್ವಾದದಿಂದ ನಾವು ಮತ್ತಷ್ಟು ಶಕ್ತಿ ಪಡೆಯುತ್ತೇವೆ”

“ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ ಒದಗಿಸುವ ಕಾರ್ಯಕ್ರಮ ಮುಂದುವರಿಸಲು 4 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡುತ್ತಿದ್ದೇವೆ”

“ಹಬ್ಬದ ಸಂದರ್ಭದಲ್ಲಿ ಅಡುಗೆ ಮನೆಯನ್ನು ಸುಗಮವಾಗಿ ನಡೆಸಲು ನಮ್ಮ ಸಹೋದರಿಯರು ಮತ್ತು ತಾಯಂದಿರಿಗೆ ಅನುಕೂಲ ಕಲ್ಪಿಸಲು ಪಿಎಂಜಿಕೆಎವೈ ಯೋಜನೆಯನ್ನು ವಿಸ್ತರಿಸಿದ್ದೇವೆ”

“ಆಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ನಾವು ಈ ರೈಲು ಮಾರ್ಗವನ್ನು ಅಂಬಾ ಮಾತೆಯ ಪಾದಗಳಿಗೆ ಸಮರ್ಪಿಸುತ್ತಿರುವುದು ನಮ್ಮ ಸೌಭಾಗ್ಯವಾಗಿದೆ”

Posted On: 30 SEP 2022 8:18PM by PIB Bengaluru

ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಅವರು ಅಂಬಾಜಿಯಲ್ಲಿಂದು ಸುಮಾರು 7,200 ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಿವಿಧ ಯೋಜನೆಗಳನ್ನು ಸಮರ್ಪಿಸಿದರು ಮತ್ತು ಶಿಲಾನ್ಯಾಸ ನೆರವೇರಿಸಿದರು.  ಪಿಎಂ ಆವಾಜ್ ಯೋಜನೆಯಡಿ 45,000 ಕ್ಕೂ ಹೆಚ್ಚು ಮನೆಗಳನ್ನು ಲೋಕಾರ್ಪಣೆ ಮಾಡಿದರು ಮತ್ತು ಶಿಲಾನ್ಯಾಸ ನೆರವೇರಿಸಿದರು. ತರಂಗಾ ಹಿಲ್ – ಅಂಬಾಜಿ – ಅಬು ರೋಡ್ ಹೊಸ ಬ್ರಾಡ್ ಗೇಜ್ ‍ಮಾರ್ಗಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು. ಪ್ರಸಾದ್ ಯೋಜನೆಯಡಿ ಅಂಬಾಜಿ ದೇವಾಲಯದಲ್ಲಿ ಯಾತ್ರಾರ್ಥಿಗಳಿಗೆ ಸೌಲಭ್ಯ ಅಭಿವೃದ್ಧಿಗೊಳಿಸುವ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು. ನ್ಯೂ ಪಲನಪುರ್ – ನ್ಯೂ ಮಹೆಸನ ವಿಭಾಗದ 62 ಕಿಲೋಮೀಟರ್ ಉದ್ದದ ಪಶ್ಚಿಮ ಸರಕು ಸಾಗಣೆ ಕಾರಿಡಾರ್ ಹಾಗೂ 13 ಕಿಲೋಮೀಟರ್ ನ್ಯೂ ಪಲನಪುರ್ – ನ್ಯೂ ಚಾತೊದರ್ ವಿಭಾಗದ ಮಾರ್ಗಗಳನ್ನು ಪ್ರಧಾನಮಂತ್ರಿ ಅವರು ಸಮರ್ಪಣೆ [ಪಲನಪುರ ಬೈಪಾಸ್ ಮಾರ್ಗ] ಮಾಡಿದರು. ಮಿತಾ – ಥರದ್ – ದೇಸಾ ರಸ್ತೆ ಸೇರಿದಂತೆ ಇತರೆ ಮಾರ್ಗಗಳನ್ನು ವಿಸ್ತರಣೆ ಮಾಡುವ ರಸ್ತೆ ಯೋಜನೆಗಳನ್ನು ಲೋಕಾರ್ಪಣೆ ಮಾಡಿದರು.

ಪ್ರಧಾನಮಂತ್ರಿ ಅವರು ವಿವಿಧ ವಸತಿ ಯೋಜನೆಗಳಲ್ಲಿ ನಿರ್ಮಾಣವಾಗಿರುವ ಏಳು ಫಲಾನುಭವಿಗಳಿಗೆ ಕೀಲಿ ಕೈಗಳನ್ನು ಹಸ್ತಾಂತರಿಸಿದರು ಮತ್ತು ಮುಖ್ಯಮಂತ್ರಿ ಗೋಮಾತಾ ಪೋಷಣ್ ಯೋಜನೆ ಉದ್ಘಾಟಿಸಿದರು ಹಾಗೂ ಗೋಶಾಲೆಗಳಿಗೆ ಚೆಕ್ ಗಳನ್ನು ವಿತರಿಸಿದರು. ಕೆಲವು ವಸತಿ ಫಲಾನುಭವಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.

ಸಮಾರಂಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ನವರಾತ್ರಿ ಸಂದರ್ಭದ ಐದನೇ ದಿನ ಮಾತೆ ಅಂಬಾ ಅವರ ದರ್ಶನ ಪಡೆಯಲು ತಮಗೆ ಅವಕಾಶ ದೊರೆತಿರುವುದು ಸಂತಸ ತಂದಿದೆ. ದೇಶ ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ರೂಪಿಸುವ ಕುರಿತು ಮಹಾನ್ ಸಂಕಲ್ಪ ತೆಗೆದುಕೊಂಡಿರುವ ಈ ಸಂದರ್ಭದಲ್ಲಿ ಅಂಬಾಜಿ ಬಳಿಗೆ ಬಂದಿದ್ದೇನೆ. ನಮ್ಮ ನಿರ್ಣಯಗಳನ್ನು ಸಾಕಾರಗೊಳಿಸಲು ಮಾತೆ ಅಂಬಾ ಅವರ ಆಶಿರ್ವಾದದಿಂದ ನಾವು ಮತ್ತಷ್ಟು ಶಕ್ತಿ ಪಡೆಯುತ್ತೇವೆ ಎಂದು ಹೇಳಿದರು.

ವಸತಿ ಯೋಜನೆಗಳ 61,000 ಫಲಾನುಭವಿಗಳನ್ನು ಅಭಿನಂದಿಸಿದ ಪ್ರಧಾನಮಂತ್ರಿ ಅವರು, ಇವರೆಲ್ಲರಿಗೂ ಉತ್ತಮ ದೀಪಾವಳಿ ಕಾಯತ್ತಿದೆ ಎಂದು ಹೇಳಿದರಲ್ಲದೇ ಭಾರತದಲ್ಲಿ ಮಹಿಳೆಯರನ್ನು ಗೌರವಿಸುವ ಸಂಸ್ಕೃತಿ ಬಗ್ಗೆ ಮಾತನಾಡಿದರು. “ನಾವು ಮಹಿಳೆಯರ ಗೌರವದ ಬಗ್ಗೆ ಮಾತನಾಡಿದರೆ ಇದು ಕೊನೆಗೆ ಸಹಜವಾಗಿ ನಮ್ಮ ಬಳಿಯೇ ಬರುತ್ತದೆ. ನಾವು ಈ ಬಗ್ಗೆ ಗಂಭೀರವಾಗಿ ಆಲೋಚಿಸಿದರೆ ನಮ್ಮ ಸಂಸ್ಕಾರದಲ್ಲಿ ಮಹಿಳೆಯರ ಬಗ್ಗೆ ಎಷ್ಟು ಗೌರವ ಹೊಂದಿದ್ದೇವೆ ಎಂಬುದನ್ನು  ಕಾಣುತ್ತೇವೆ. ಇತರೆ ದೇಶಗಳಿಗಿಂತ ಭಿನ್ನವಾಗಿ ನಮ್ಮಲ್ಲಿ ಶಕ್ತಿ – ಬಲ ಸ್ತ್ರೀಯರೊಂದಿಗೆ ಸಂಬಂಧ ಹೊಂದಿದೆ ಮತ್ತು ವೀರಯೋಧರೊಂದಿಗೆ ತಾಯಿಯ ಹೆಸರನ್ನು ಸಂಯೋಜಿಸುವ ಸಂಪ್ರದಾಯವಿದೆ. ಅರ್ಜುನ, ಶ್ರೀ ಕೃಷ್ಣ ಮತ್ತು ಹನುಮಾನ್ ಅವರು ಇದಕ್ಕೆ ಉದಾಹರಣೆಯಾಗಿದ್ದಾರೆ. “ಇದು ನಮ್ಮ ಸಂಸ್ಕಾರ”. ನಮ್ಮ ದೇಶ ಭಾರತ ತಾಯಿ ಇದ್ದಂತೆ ಮತ್ತು ನಾವೆಲ್ಲರೂ ಭಾರತ ಮಾತೆಯ ಮಕ್ಕಳು. ಇದರ ಹೊರತಾಗಿಯೂ ಮಹಿಳೆಯರಿಗೆ ಸೀಮಿತ ಹಕ್ಕುಗಳಿವೆ ಮತ್ತು ಹಣಕಾಸಿನ ವಿಷಯದಲ್ಲೂ ಸಹ ಇದೇ ಪರಿಸ್ಥಿತಿ ಇದೆ.  ಇದನ್ನು ಸರಿಪಡಿಸುವ ಉದ್ದೇಶದಿಂದ ನಮ್ಮ ಬಹುತೇಕ ವಸತಿ ಯೋಜನೆಗಳಲ್ಲಿ ಮಹಿಳೆಯರೇ ಮಾಲಿಕರು, ಇಲ್ಲವೆ ಸಹ ಮಾಲಿಕರಾಗಿದ್ದಾರೆ. ಬಡ ಕುಟುಂಬಗಳಿಗೆ 3 ಕೋಟಿಗೂ ಹೆಚ್ಚು ಮನೆಗಳನ್ನು ಹಸ್ತಾಂತರಿಸಲಾಗಿದೆ ಎಂದರು.

ಹಬ್ಬದ ಸಂದರ್ಭದಲ್ಲಿ 80 ಕೋಟಿಗೂ ಹೆಚ್ಚು ಬಡ ಕುಟುಂಬಗಳ ಸದಸ್ಯರಿಗೆ ಉಚಿತ ಆಹಾರಧಾನ್ಯಗಳನ್ನು ವಿತರಿಸುವ ಕಾರ್ಯಕ್ರಮ ಮುಂದುವರಿಸಿರುವ ಪರಿಣಾಮ ಸುಮಾರು 4 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ಸರ್ಕಾರ ವೆಚ್ಚ ಮಾಡುತ್ತಿದೆ. ಸಂಕಷ್ಟದ ಸಮಯದಲ್ಲಿ ತಮ್ಮ ಸಹೋದರಿಯರು ಹಾಗೂ ತಾಯಂದಿರು ತಮ್ಮ ಅಡುಗೆ ಮನೆಯನ್ನು ಮುನ್ನಡೆಸಲು ಯಾವುದೇ ಸಮಸ್ಯೆ ಎದುರಿಸಬಾರದು ಎಂಬ ಕಾರಣಕ್ಕಾಗಿ ಈ ಕಾರ್ಯಕ್ರಮವನ್ನು ವಿಸ್ತರಿಸಲಾಗಿದೆ. ಕಳೆದ ಎರಡು ದಶಕಗಳಿಂದ ನಮ್ಮ ತಾಯಂದಿರು ಮತ್ತು ಸಹೋದರಿಯರ ಸಬಲೀಕರಣಕ್ಕಾಗಿ ಕೆಲಸ ಮಾಡುವ ಅವಕಾಶ ತಮಗೆ ದೊರೆತಿದೆ ಎಂದು ಪ್ರಧಾನಮಂತ್ರಿ ಅವರು ಹರ್ಷ ವ್ಯಕ್ತಪಡಿಸಿದರು. ಬದಲಾಗುತ್ತಿರುವ ಸನ್ನಿವೇಶಕ್ಕೆ ತಕ್ಕಂತೆ ಬನಸ್ಕಾಂತ ಪ್ರದೇಶ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು.  

ಈ ಪ್ರದೇಶದ ಮಹಿಳೆಯರು ತಮ್ಮ ಮನವಿಯನ್ನು ಪುರಸ್ಕರಿಸಿದ ಕಾರಣಕ್ಕಾಗಿ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿ ಅವರು, ನರ್ಮದೆಯ ನೀರು ಈ ಪ್ರದೇಶಕ್ಕೆ ಸಂತಸ ತರುತ್ತಿದೆ ಮತ್ತು ಬಾಲಕಿಯರು ಹೆಚ್ಚಿನ ಉತ್ಸಾಹದಿಂದ ಶಾಲೆಗಳು ಮತ್ತು ಕಾಲೇಜುಗಳಿಗೆ ತೆರಳುತ್ತಿದ್ದಾರೆ ಎಂದು ಹೇಳಿದರು. ಅಪೌಷ್ಟಿಕತೆ ವಿರುದ್ಧದ ಹೋರಾಟದಲ್ಲಿ ಮಹಿಳೆಯರ ಸಹಕಾರವನ್ನು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು. 2014 ರ ನಂತರ ಮಹಿಳೆಯರ ಬದುಕಿನ ಪ್ರತಿಯೊಂದು ಆಯಾಮ ಬಗ್ಗೆಯೂ ವಿಶೇಷವಾಗಿ ಗಮನಹರಿಸಲಾಗುತ್ತಿದೆ ಮತ್ತು ಅವರು ಭಾರತದ ಅಭಿವೃದ್ಧಿಯಾನದ ಚಾಲಕರಾಗಿ ಬದಲಾಗಿದ್ದಾರೆ ಎಂದರು. ದೇಶದ ಪ್ರಮುಖ ಕಾರ್ಯಕ್ರಮಗಳಲ್ಲಿ ಮಹಿಳಾ ಶಕ್ತಿ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಶೌಚಾಲಯ ನಿರ್ಮಾಣ, ಅಡುಗೆ ಅನಿಲ ಸಂಪರ್ಕ, ಹರ್ ಘರ್ ಜಲ್, ಜನ್ ಧನ್ ಅಥವಾ ಮುದ್ರಾ ಯೋಜನೆಯಡಿ ಖಾತರಿ ಇಲ್ಲದೇ ನೀಡುವ ಸಾಲ ಸೌಲಭ್ಯಗಳನ್ನು  ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳುತ್ತಿದ್ದಾರೆ ಎಂದರು. “ತಾಯಿ ಸಂತಸದಿಂದಿದ್ದರೆ ಕುಟುಂಬ ಸಂತಸದಿಂದ ಇರುತ್ತದೆ. ಸಮಾಜ ಸಂತೋಷವಾಗಿದ್ದರೆ ದೇಶದ ಸಂತಸಕ್ಕೆ ಕಾರಣವಾಗುತ್ತದೆ. ಇದೇ ರೀತಿಯ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದೇವೆ" ಎಂದು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು.  

ತರಂಗಾ ಹಿಲ್ – ಅಂಬಾಜಿ – ಅಬು ರಸ್ತೆ ಮಾರ್ಗವನ್ನು 1930 ರ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿತ್ತು. ಇದರ ಅಗತ್ಯವನ್ನು 100 ವರ್ಷಗಳ ಹಿಂದೆಯೇ ಗುರುತಿಸಲಾಗಿದೆ, ಆದರೆ ದುರದೃಷ್ಟವಶಾತ್ ಇಷ್ಟು ದೀರ್ಘ ಅವಧಿಯಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ. “ಇದನ್ನು ನನ್ನಿಂದ ಸಾಕಾರಗೊಳಿಸಬೇಕೆಂದು ಮಾತೆ ಅಂಬಾ ಬಯಸಿದ್ದಳು. ಆಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ನಾವು ಈ ರೈಲು ಮಾರ್ಗವನ್ನು ಅಂಬಾ ಮಾತೆಯ ಪಾದಗಳಿಗೆ ಸಮರ್ಪಿಸುತ್ತಿರುವುದು ನಮ್ಮ ಸೌಭಾಗ್ಯವಾಗಿದೆ” ಎಂದರು. ಈ ರೈಲು ಮಾರ್ಗ ಮತ್ತು ಬೈ ಪಾಸ್ ನಲ್ಲಿ ಇನ್ನು ಮುಂದೆ ಸಂಚಾರಿ ಒತ್ತಡ ಇರುವುದಿಲ್ಲ, ಅಮೃತಶಿಲೆ ಕೈಗಾರಿಕೆಗಳಿಗೆ ಇದರಿಂದ ಸಹಕಾರಿಯಾಗಲಿದೆ ಎಂದರು. ಈ ಭಾಗಕ್ಕೆ ಮೀಸಲಾದ ಸರಕು ಸಾಗಣೆ ಕಾರಿಡಾರ್ ಮಹತ್ವದ ಕ್ರಮವಾಗಿದ್ದು, ಇಲ್ಲಿಂದ ಕಿಸಾನ್ ರೈಲು ಆರಂಭಿಸಿದರೆ ರೈತರಿಗೆ ಇದರ ಲಾಭವಾಗಲಿದೆ.  ಗಬ್ಬಾರ್ ತೀರ್ಥ್ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳು ಸಹ ಮೆಚ್ಚುಗೆಗೆ ಕಾರಣವಾಗಿವೆ ಎಂದರು.

ದೇವಸ್ಥಾನದ ಆಸುಪಾಸಿನಲ್ಲಿ ಹಲವು ಆಕರ್ಷಣೀಯ ಸ್ಥಳಗಳನ್ನು ಸೃಷ್ಟಿಸುವುದು ತಮ್ಮ ಉದ್ದೇಶವಾಗಿದ್ದು, ಜನತೆ ಇವುಗಳನ್ನು ನೋಡಲು 2-3 ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳುವಂತಾಗ ಬೇಕು. ಅಂಬಾಜಿ ಒಂದು ಕಡೆ ನಂಬಿಕೆ ಮತ್ತು ಪೂಜೆಯ ಕೇಂದ್ರವಾಗಿದ್ದರೆ ಮತ್ತೊಂದೆಡೆ ಭಾರತದ ಗಡಿ ಭಾಗವಾಗಿರುವ ಇಲ್ಲಿಗೆ ಯೋಧರನ್ನು ನಿಯೋಜಿಸಲಾಗುತ್ತಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಸೌಗಮ್ ತಾಲ್ಲೂಕಿನಲ್ಲಿ ಸೀಮಾ ದರ್ಶನ್ ಯೋಜನೆಯನ್ನು ಆರಂಭಿಸಿದೆ ಎಂದು ಮಾಹಿತಿ ನೀಡಿದ ಪ್ರಧಾನಮಂತ್ರಿ ಅವರು, ಇದು ಗಡಿ ಭದ್ರತಾ ಪಡೆಯಲ್ಲಿ ಯೋಧರ ಜೀವನ ಶೈಲಿಯ ಬಗ್ಗೆ ಪರಿಚಯಿಸುವ ಕಾರ್ಯಕ್ರಮವಾಗಿದೆ ಮತ್ತು ಸೇನೆಯಲ್ಲಿರುವ ರೀತಿಯಲ್ಲಿಯೇ ಪ್ರವಾಸಿಗರಿಗೆ ಅನುಭವ ದೊರಕಿಸಿಕೊಡಲಾಗುತ್ತಿದೆ. ಈ ವಲಯದಲ್ಲಿ ಪ್ರವಾಸೋದ್ಯಮದಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ಬೀರಲು ಪಂಚ ಪ್ರಾಣ್ [ಐದು ವಚನಗಳು] ಕಾರಣವಾಗಿದ್ದು, ರಾಷ್ಟ್ರೀಯ ಏಕತೆಗೆ ಇದು ಹೆಚ್ಚು ಶಕ್ತಿ ನೀಡುತ್ತದೆ. ರನ್ ವೇ, ಇತರೆ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ದೀಸಾ ವಾಯು ಪಡೆಯ ನೆಲೆ ಬಲಗೊಳಿಸುತ್ತಿರುವುದರಿಂದ ಈ ಭಾಗದಲ್ಲಿ ವಾಯುಪಡೆ ಶಕ್ತಿ ಹೆಚ್ಚಲಿದೆ. “ಇದರಿಂದ ಈ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚು ಉತ್ತೇಜನ ನೀಡುತ್ತದೆ ಎಂದು ಹೇಳಿದರು.  

ತಮ್ಮ ಭಾಷಣ ಮುಗಿಸುವ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು, ಬನಸ್ಕಾಂತ ಪ್ರದೇಶದಲ್ಲಿ ಸರ್ಕಾರ ಎರಡು ದಶಕಗಳಲ್ಲಿ ಕೈಗೊಂಡ ಪ್ರಯತ್ನಗಳ ಪರಿಣಾಮ ಸಂಪೂರ್ಣವಾಗಿ ಈ ಪ್ರದೇಶ ರೂಪಾಂತರಗೊಂಡಿದೆ. ತಳಮಟ್ಟದಲ್ಲಿ ಪರಿವರ್ತನೆಗೆ ಮಹಿಳೆಯರು ಕಾರಣರಾಗಿದ್ದಾರೆ. “ನರ್ಮದಾ ನೀರು, ಸುಜಲಾಂ, ಸಫಲಾಂ ಮತ್ತು ಹನಿ ನೀರಾವರಿ ಪ್ರಮುಖ ಪಾತ್ರ ವಹಿಸಿದ್ದು, ಇಲ್ಲಿನ ಬದಲಾವಣೆಯಲ್ಲಿ ಮಹತ್ವದ ಕೊಡುಗೆ ನೀಡಿದೆ. ಇಂದು ಜಾರಿಗೊಳಿಸುತ್ತಿರುವ ಬಹುತೇಕ ಯೋಜನೆಗಳಿಂದ ರೈತರು, ಮಹಿಳೆಯರು ಮತ್ತು ಯುವ ಸಮೂಹ ಲಾಭ ಪಡೆಯಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.   

ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್, ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀಮತಿ ದರ್ಶನಾ ವಿಕ್ರಂ ಜರ್ದೋಸ್, ಸಂಸದರಾದ ಶ್ರೀ ಸಿ.ಆರ್. ಪಾಟೀಲ್, ಶ್ರೀ ಪ್ರಭಾತ್ ಭಾಯ್ ಪಾಟೀಕಲ್, ಶ್ರೀ ಬಾರಸಿನ್ಹ ಧಾಬಿ ಮತ್ತು ಶ್ರೀ ದಿನೇಶ್ ಭಾಯಿ ಅನವೈದ್ಯಾ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿ ಅವರು ಅಂಬಾಜಿಯಲ್ಲಿ 7200 ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿದರು ಮತ್ತು ಶಿಲಾನ್ಯಾಸ ನೆರವೇರಿಸಿದರು. ಪಿಎಂ ಆವಾಸ್ ಯೋಜನೆಯಡಿ 45,000 ಮನೆಗಳನ್ನು ಸಮರ್ಪಿಸಿದರು ಮತ್ತು ಶಿಲಾನ್ಯಾಸ ನೆರವೇರಿಸಿದರು. ಪ್ರಧಾನಮಂತ್ರಿ ಅವರು ತರಂಗಾ ಹಿಲ್ – ಅಂಬಾಜಿ – ಅಬು ಹೊಸ ಬ್ರಾಡ್ ಗೇಜ್ ಮಾರ್ಗಕ್ಕೆ ಶಿಲಾನ್ಯಾಸ ಮಾಡಿದರು ಮತ್ತು ಪ್ರಸಾದ್ ಯೋಜನೆಯಡಿ ಯಾತ್ರಾರ್ಥಿಗಳಿಗೆ ಸೌಲಭ್ಯಗಳನ್ನು ಕಲ್ಪಿಸುವ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. 51 ಶಕ್ತಿ ಪೀಠಗಳಲ್ಲಿ ಒಂದಾಗಿರುವ ಅಂಬಾಜಿಗೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಹೊಸ ರೈಲು ಮಾರ್ಗದಿಂದ ಅನುಕೂಲವಾಗಲಿದೆ ಮತ್ತು ಯಾತ್ರಾರ್ಥಿಗಳ ಈ ಎಲ್ಲ ಸ್ಥಳಗಳಲ್ಲಿ ಪೂಜೆಯ ಅನುಭವ ಶ್ರೀಮಂತಗೊಳ್ಳಲಿದೆ. ರನ್ ವೇ ನಿರ್ಮಾಣ ಸೇರಿ ಇತರೆ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿರುವ ಮತ್ತು ದೇಸಾದಲ್ಲಿ ವಾಯುಪಡೆ ಸಹಯೋಗದಲ್ಲಿ ರನ್ ವೇ ನಿರ್ಮಾಣ, ಅಂಬಾಜಿ ಬೈಪಾಸ್ ರಸ್ತೆ ನಿರ್ಮಾಣ ಇದರಲ್ಲಿ ಸೇರಿದೆ.

ನ್ಯೂ ಪಲನಪುರ್ – ನ್ಯೂ ಮಹೆಸನ ವಿಭಾಗದ 62 ಕಿಲೋಮೀಟರ್ ಉದ್ದದ ಪಶ್ಚಿಮ ಸರಕು ಸಾಗಣೆ ಕಾರಿಡಾರ್ ಹಾಗೂ 13 ಕಿಲೋಮೀಟರ್ ನ್ಯೂ ಪಲನಪುರ್ – ನ್ಯೂ ಚಾತೊದರ್ ವಿಭಾಗದ ಮಾರ್ಗಗಳನ್ನು ಪ್ರಧಾನಮಂತ್ರಿ ಅವರು ಸಮರ್ಪಣೆ [ಪಲನಪುರ ಬೈಪಾಸ್ ಮಾರ್ಗ] ಮಾಡಿದರು. ಇದರಿಂದ ಪಿಪವವ್ ದೀನ್ ದಯಾಳ್ ಬಂದರು ಪ್ರಾಧಿಕಾರ [ಕಾಂಡ್ಲಾ], ಗುಜರಾತ್ ನ ಮುದ್ರಾ ಮತ್ತು ಇತರೆ ಬಂದರುಗಳು  ಸೇರಿವೆ. ಈ ವಲಯಗಳು ಮುಕ್ತವಾದ ಕಾರಣದಿಂದ ಪಶ್ಚಿಮ ಭಾಗಕ್ಕೆ ಮೀಸಲಾದ ಸರಕು ಸಾಗಾಣೆ ಕಾರಿಡಾರ್ 734 ಕಿಲೋಮೀಟರ್ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭವಾದಂತಾಗಿದೆ. ಗುಜರಾತ್ ನ ಮೆಹ್ಸಾನ – ಪಲನ್ ಪುರ್; ಹರ್ಯಾಣದ ಸ್ವರೂಪ್ ಗಂಜ್, ಕೇಶವ್ ಗಂಜ್, ಕಿಶನ್ ಘರ್, ರೆವಾರಿ -ಮನೆಸಾರ್ ಮತ್ತು ನರ್ನೌಲ್ ವಲಯದ ಕೈಗಾರಿಕೆಳಿಗೆ ಅನುಕೂಲವಾಗಿದೆ. ಮಿತಾ -ಥರದ್ – ದೇಶಾ ರಸ್ತೆ ಸೇರಿದಂತೆ ಹಲವು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೂ ಸಹ ಪ್ರಧಾನಮಂತ್ರಿ ಅವರು ಚಾಲನೆ ನೀಡಿದರು.  

ಈ ವಿಶಾಲ ವ್ಯಾಪ್ತಿಯ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ವಿಶ್ವದರ್ಜೆಯ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸಲು, ನಗರ ಸಾಗಣೆ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಬಹುಮಾದರಿ ಸಂಪರ್ಕ ವ್ಯವಸ್ಥೆಯನ್ನು ಸುವ್ಯವಸ್ಥೆಗೊಳಿಸುವ ಪ್ರಧಾನಮಂತ್ರಿ ಅವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದು ಸಾಮಾನ್ಯ ಜನರ ಬದುಕಿನಲ್ಲಿ ಸೌಕರ್ಯ ಹೆಚ್ಚಿಸುವಲ್ಲಿ ಸರ್ಕಾರದ ನಿರಂತರ ಪ್ರಯತ್ನದ ಪ್ರತೀಕವಾಗಿದೆ.

 

*****

 

 

 

 



(Release ID: 1864668) Visitor Counter : 128