ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್‌ನ ಗಾಂಧಿನಗರ ನಿಲ್ದಾಣದಲ್ಲಿ ಗಾಂಧಿನಗರ - ಮುಂಬೈ ನಡುವಿನ  ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಿದ ಪ್ರಧಾನಮಂತ್ರಿ


ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಿದ ಪ್ರಧಾನಿ

Posted On: 30 SEP 2022 11:06AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಾಂಧಿನಗರ ನಿಲ್ದಾಣದಲ್ಲಿ ಗಾಂಧಿನಗರ- ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಿದರು ಮತ್ತು ಅಲ್ಲಿಂದ ಕಲುಪುರ ರೈಲು ನಿಲ್ದಾಣದವರೆಗೆ ರೈಲಿನಲ್ಲಿ ಪ್ರಯಾಣಿಸಿದರು.

ಪ್ರಧಾನಮಂತ್ರಿಯವರು ಗಾಂಧಿನಗರ ನಿಲ್ದಾಣಕ್ಕೆ ಆಗಮಿಸಿದಾಗ, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್, ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರೊಂದಿಗೆ ಇದ್ದರು. ಪ್ರಧಾನಮಂತ್ರಿಯವರು ವಂದೇ ಭಾರತ್ ಎಕ್ಸ್‌ಪ್ರೆಸ್ 2.0 ರ ರೈಲು ಬೋಗಿಗಳನ್ನು ಪರಿಶೀಲಿಸಿದರು ಮತ್ತು ಬೋಗಿಗಳ ಸೌಲಭ್ಯಗಳನ್ನು ಪರಿಶೀಲಿಸಿದರು. ಶ್ರೀ ಮೋದಿ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ 2.0 ರ ಲೋಕೋಮೋಟಿವ್ ಎಂಜಿನ್‌ನ ನಿಯಂತ್ರಣ ಕೇಂದ್ರವನ್ನು ಸಹ ಪರಿಶೀಲಿಸಿದರು.

ನಂತರ ಪ್ರಧಾನಿಯವರು ಗಾಂಧಿನಗರ ಮತ್ತು ಮುಂಬೈ ನಡುವೆ ನವೀಕರಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಿದರು. ಅವರು ಅಲ್ಲಿಂದ ಕಲುಪುರ ರೈಲು ನಿಲ್ದಾಣದವರೆಗೆ ರೈಲಿನಲ್ಲಿ ಪ್ರಯಾಣಿಸಿದರು. ಈ ಸಂದರ್ಭದಲ್ಲಿ ರೈಲ್ವೇ ಸಿಬ್ಬಂದಿಯ ಕುಟುಂಬ ಸದಸ್ಯರು, ಮಹಿಳಾ ಉದ್ಯಮಿಗಳು ಮತ್ತು ಸಂಶೋಧಕರು ಮತ್ತು ಯುವಕರು ಸೇರಿದಂತೆ ತಮ್ಮ ಸಹ-ಪ್ರಯಾಣಿಕರೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು. ವಂದೇ ಭಾರತ್ ರೈಲುಗಳನ್ನು ಯಶಸ್ವಿಗೊಳಿಸಲು ಶ್ರಮಿಸಿದ ಕಾರ್ಮಿಕರು, ಎಂಜಿನಿಯರ್‌ಗಳು ಮತ್ತು ಇತರ ಸಿಬ್ಬಂದಿಗಳೊಂದಿಗೆ ಅವರು ಸಂವಾದ ನಡೆಸಿದರು.

ಗಾಂಧಿನಗರ ಮತ್ತು ಮುಂಬೈ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ 2.0 ಬದಲಾವಣೆಗೆ ಚಾಲನೆ ನೀಡಲಿದೆ ಮತ್ತು ಭಾರತದ ಎರಡು ವ್ಯಾಪಾರ ಕೇಂದ್ರಗಳ ನಡುವೆ ಸಂಪರ್ಕವನ್ನು ಹೆಚ್ಚಿಸುತ್ತದೆ. ಇದು ಗುಜರಾತಿನ ವ್ಯಾಪಾರಿಗೆಗೆ ಮುಂಬೈಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ ಮತ್ತು ವಿಮಾನದಲ್ಲಿ ಲಭ್ಯವಿರುವ ಸೌಲಭ್ಯಗಳೊಂದಿಗೆ ಹೆಚ್ಚಿನ ವೆಚ್ಚದ ವಿಮಾನಯಾನ ಟಿಕೆಟ್‌ಗಳ ಹೊರೆಯಿಲ್ಲದೇ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ. ಗಾಂಧಿನಗರದಿಂದ ಮುಂಬೈಗೆ ವಂದೇ ಭಾರತ್ ಎಕ್ಸ್‌ಪ್ರೆಸ್ 2.0 ನ ಏಕಮುಖ ಪ್ರಯಾಣದ ಸಮಯ ಸುಮಾರು ಐದೂವರೆ ಗಂಟೆಗಳು ಎಂದು ಅಂದಾಜಿಸಲಾಗಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ 2.0 ಅತ್ಯುನ್ನತವಾದ ಮತ್ತು ವಿಮಾನ ಪ್ರಯಾಣದಂತಹ ಅನುಭವಗಳನ್ನು ನೀಡುತ್ತದೆ. ಇದು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆ - ಕವಚ್ ಸೇರಿದಂತೆ ಸುಧಾರಿತ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ವಂದೇ ಭಾರತ್ 2.0 ಹೆಚ್ಚು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ, ಉದಾಹರಣೆಗೆ ಗಂಟೆಗೆ 0 ರಿಂದ 100 ಕಿಲೋಮೀಟರ್ ವೇಗವನ್ನು ಕೇವಲ 52 ಸೆಕೆಂಡುಗಳಲ್ಲಿ ತಲುಪುತ್ತದೆ ಮತ್ತು ಗರಿಷ್ಠ ವೇಗ ಗಂಟೆಗೆ 180 ಕಿಲೋಮೀಟರ್‌ಗಳವರೆಗೆ ಇರುತ್ತದೆ. ಹಿಂದಿನ ಆವೃತ್ತಿಯ 430 ಟನ್‌ಗಳಿಗೆ ಹೋಲಿಸಿದರೆ ಸುಧಾರಿತ ವಂದೇ ಭಾರತ್ ಎಕ್ಸ್‌ಪ್ರೆಸ್ 392 ಟನ್ ತೂಕವಿರುತ್ತದೆ. ಇದು ವೈ-ಫೈ ಕಂಟೆಂಟ್ ಆನ್ ಡಿಮ್ಯಾಂಡ್ ಸೌಲಭ್ಯವನ್ನೂ ಹೊಂದಿರಲಿದೆ. ಪ್ರತಿ ಬೋಗಿಯು 32 ಇಂಚಿನ ಸ್ಕ್ರೀನ್‌ಗಳನ್ನು ಹೊಂದಿದ್ದು, ಹಿಂದಿನ ಆವೃತ್ತಿಯಲ್ಲಿದ್ದ 24 ಇಂಚಿಗೆ ಹೋಲಿಸಿದರೆ ಪ್ರಯಾಣಿಕರ ಮಾಹಿತಿ ಮತ್ತು ಇನ್ಫೋಟೈನ್‌ಮೆಂಟ್ ಅನ್ನು ಒದಗಿಸುತ್ತದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಪರಿಸರ ಸ್ನೇಹಿಯಾಗಲಿದೆ, ಏಕೆಂದರೆ ಎಸಿಗಳು ಶೇಕಡಾ 15 ರಷ್ಟು ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿರುತ್ತವೆ. ಟ್ರಾಕ್ಷನ್ ಮೋಟರ್‌ನ ಧೂಳು-ಮುಕ್ತ ಶುದ್ಧ ಗಾಳಿಯ ತಂಪಾಗಿಸುವಿಕೆಯೊಂದಿಗೆ, ಪ್ರಯಾಣವು ಹೆಚ್ಚು ಆರಾಮದಾಯಕವಾಗಿರುತ್ತದೆ. ಈ ಹಿಂದೆ ಎಕ್ಸಿಕ್ಯೂಟಿವ್ ಕ್ಲಾಸ್ ಪ್ರಯಾಣಿಕರಿಗೆ ಮಾತ್ರ ನೀಡಲಾಗಿದ್ದ ಸೈಡ್ ರಿಕ್ಲೈನರ್ ಸೀಟ್ ಸೌಲಭ್ಯವನ್ನು ಈಗ ಎಲ್ಲಾ ವರ್ಗಕ್ಕೂ ಲಭ್ಯವಾಗುವಂತೆ ಮಾಡಲಾಗುವುದು. ಎಕ್ಸಿಕ್ಯೂಟಿವ್  ಬೋಗಿಗಳು 180-ಡಿಗ್ರಿ ತಿರುಗುವ ಆಸನಗಳ ಹೆಚ್ಚುವರಿ ವೈಶಿಷ್ಟ್ಯವನ್ನು ಹೊಂದಿವೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಹೊಸ ವಿನ್ಯಾಸದಲ್ಲಿ, ಗಾಳಿಯ ಶುದ್ಧೀಕರಣಕ್ಕಾಗಿ ರೂಫ್-ಮೌಂಟೆಡ್ ಪ್ಯಾಕೇಜ್ ಘಟಕದಲ್ಲಿ (ಆರ್‌ಎಂಪಿಯು) ಫೋಟೋ-ಕ್ಯಾಟಲಿಟಿಕ್ ಅಲ್ಟ್ರಾವೈಲೆಟ್‌ ಗಾಳಿ ಶುದ್ಧೀಕರಣ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಚಂಡೀಗಢದ ಸೆಂಟ್ರಲ್ ಸೈಂಟಿಫಿಕ್ ಇನ್‌ಸ್ಟ್ರುಮೆಂಟ್ಸ್ ಆರ್ಗನೈಸೇಶನ್ (ಸಿಎಸ್‌ಐಒ), ಶಿಫಾರಸು ಮಾಡಿರುವಂತೆ, ತಾಜಾ ಗಾಳಿ ಮತ್ತು ಹಿಂತಿರುಗುವ ಗಾಳಿಯ ಮೂಲಕ ಬರುವ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾಗಳು, ವೈರಸ್‌ಗಳು ಇತ್ಯಾದಿಗಳಿಂದ ಮುಕ್ತವಾದ ಗಾಳಿಯನ್ನು ಫಿಲ್ಟರ್ ಮಾಡಲು ಮತ್ತು ಸ್ವಚ್ಛಗೊಳಿಸಲು ಆರ್‌ಎಂಪಿಯುನ ಎರಡೂ ತುದಿಗಳಲ್ಲಿ ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಸ್ಥಾಪಿಸಲಾಗಿದೆ.

 

*****



(Release ID: 1863858) Visitor Counter : 160