ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೂರತ್‌ನಲ್ಲಿ ₹ 3400 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದ ಪ್ರಧಾನಿ


" ಜನರ ಒಗ್ಗಟ್ಟು ಮತ್ತು ಸಾರ್ವಜನಿಕ ಭಾಗವಹಿಸುವಿಕೆ ಎರಡಕ್ಕೂ ಸೂರತ್ ಒಂದು ಅದ್ಭುತ ಉದಾಹರಣೆಯಾಗಿದೆ"

"4 ʻಪಿʼ ಎಂದರೆ ʻಪೀಪಲ್‌, ಪಬ್ಲಿಕ್‌, ಪ್ರೈವೇಟ್‌ ಪಾರ್ಟ್‌ನರ್‌ಶಿಪ್‌ (ಜನರು, ಸಾರ್ವಜನಿಕರು, ಖಾಸಗಿ ಸಹಭಾಗಿತ್ವ). ಈ ಮಾದರಿಯು ಸೂರತ್ ಅನ್ನು ವಿಶೇಷವಾಗಿಸಿದೆ"

"ಡಬಲ್ ಎಂಜಿನ್ ಸರಕಾರದಲ್ಲಿ, ಅನುಮೋದನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಅನುಷ್ಠಾನವು ಅಭೂತಪೂರ್ವ ವೇಗವನ್ನು ಸಾಧಿಸಿದೆ"

"ಹೊಸ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಸೂರತ್‌ಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ"

"ಸೂರತ್ ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನಗಳಿಗೆ ಹೆಸರುವಾಸಿಯಾಗಲಿದೆ"

"ವಿಶ್ವಾಸ ಬೆಳೆದಾಗ, ಪ್ರಯತ್ನವು ಬೆಳೆಯುತ್ತದೆ, ಮತ್ತು ʻಸಬ್‌ ಕಾ ಪ್ರಾಯಾಸ್‌ʼ (ಎಲ್ಲರ ಪ್ರಯತ್ನವು ) ರಾಷ್ಟ್ರದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತದೆ"

Posted On: 29 SEP 2022 1:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೂರತ್‌ನಲ್ಲಿ ₹3,400 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದರು. ಪ್ರಧಾನಮಂತ್ರಿಯವರು ರಸ್ತೆ ಮೂಲಸೌಕರ್ಯ ಕಾಮಗಾರಿಗಳ ಹಂತ-1 ಮತ್ತು ʻಡೈಮಂಡ್ ರಿಸರ್ಚ್ ಅಂಡ್ ಮರ್ಕೆಂಟೈಲ್ʼ (ಡ್ರೀಮ್) ನಗರದ ಮುಖ್ಯ ದ್ವಾರವನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿಯವರು ಯೋಜನೆಯ ಎರಡನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಇದಲ್ಲದೆ, ಡಾ. ಹೆಡ್ಗೆವಾರ್ ಸೇತುವೆಯಿಂದ ಭೀಮ್ರಾಡ್-ಬಾಮ್ರೋಲಿ ಸೇತುವೆಯವರೆಗೆ 87 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಜೀವವೈವಿಧ್ಯ ಉದ್ಯಾನವನಕ್ಕೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನಮಂತ್ರಿಯವರು ಸೂರತ್‌ನ ವಿಜ್ಞಾನ ಕೇಂದ್ರದಲ್ಲಿ ಖೋಜ್ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ನವರಾತ್ರಿಯ ಶುಭ ಸಂದರ್ಭದಲ್ಲಿ ಸೂರತ್‌ನಲ್ಲಿ ಅನೇಕ ಯೋಜನೆಗಳನ್ನು ಉದ್ಘಾಟಿಸುವ ಮತ್ತು ಮುಂಬರುವ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಅವಕಾಶ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಹಾಸ್ಯಮಿಶ್ರಿತ ಲಘು ಧಾಟಿಯಲ್ಲಿ ಸೂರತ್‌ನ ವಿಶೇಷತೆಯನ್ನು ಹೊಗಳಿದ ಪ್ರಧಾನಿಯವರು, ನವರಾತ್ರಿಯ ಉಪವಾಸ ಆಚರಿಸುತ್ತಿರುವ ತಮ್ಮಂತಹ ವ್ಯಕ್ತಿಯು ಇಂತಹ ಸಮಯದಲ್ಲಿ ಮಹಾನ್ ಪಾಕಪದ್ಧತಿಗೆ ಹೆಸರುವಾಸಿಯಾದ ನಾಡು ಸೂರತ್‌ಗೆ ಬರುವುದು ಸ್ವಲ್ಪ ಕಷ್ಟದ ಕೆಲಸವೇ ಎಂದು ಹೇಳಿದರು. 75 ಅಮೃತ್ ಸರೋವರಗಳ ಕಾಮಗಾರಿ ಭರದಿಂದ ಸಾಗುತ್ತಿರುವುದಕ್ಕೆ ಪ್ರಧಾನಮಂತ್ರಿಯವರು ಹರ್ಷ ವ್ಯಕ್ತಪಡಿಸಿದರು.  ಸೂರತ್ ನಗರವು ಜನರ ಒಗ್ಗಟ್ಟು ಮತ್ತು ಸಾರ್ವಜನಿಕ ಭಾಗವಹಿಸುವಿಕೆ ಎರಡಕ್ಕೂ ಒಂದು ಅದ್ಭುತ ಉದಾಹರಣೆಯಾಗಿದೆ ಎಂದು ಪ್ರಧಾನಿ ಶ್ಲಾಘಿಸಿದರು. ಸೂರತ್‌ನ ಅತಿ ದೊಡ್ಡ ಲಕ್ಷಣವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇದು ಕಾರ್ಮಿಕರನ್ನು ಗೌರವಿಸುವ ನಗರವಾಗಿದೆ ಎಂದು ಹೇಳಿದರು. "ಇದೊಂದು ರೀತಿಯ ಮಿನಿ ಹಿಂದೂಸ್ತಾನ, ಭಾರತದ ಎಲ್ಲಾ ಮೂಲೆಗಳ ಜನರಿಗೂ ಸೂರತ್‌ ನೆಲೆ ಒದಗಿಸಿದೆ,ʼʼ ಎಂದು ಶ್ರೀ ಮೋದಿ ಹೇಳಿದರು.

ಈ ಶತಮಾನದ ಆರಂಭದ ದಶಕಗಳಲ್ಲಿ, ವಿಶ್ವದಲ್ಲಿ ʻಸಾರ್ವಜನಿಕ-ಖಾಸಗಿ ಸಹಭಾಗಿತ್ವದʼ(3ಪಿ ) ಬಗ್ಗೆ ಅತಿ ಹೆಚ್ಚು ಚರ್ಚೆಗಳು ನಡೆದದ್ದನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಈಗ ಸೂರತ್‌ ʻ4 ಪಿʼಗೆ ಒಂದು ಉದಾಹರಣೆಯಾಗಿದೆ ಎಂದು ಹೇಳಿದರು. "4 ಪಿ ಎಂದರೆ ʻಪೀಪಲ್‌, ಪಬ್ಲಿಕ್‌, ಪ್ರೈವೇಟ್‌ ಪಾರ್ಟ್‌ನರ್‌ಶಿಪ್‌ (ಜನರು, ಸಾರ್ವಜನಿಕ, ಖಾಸಗಿ ಪಾಲುದಾರಿಕೆ) ಎಂದರ್ಥ. ಈ ಮಾದರಿಯು ಸೂರತ್ ಅನ್ನು ವಿಶೇಷವಾಗಿಸಿದೆ", ಎಂದು ಶ್ರೀ ಮೋದಿ ಹೇಳಿದರು. ಇಂದು, ಸೂರತ್ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ, ಸಾಂಕ್ರಾಮಿಕ ರೋಗಗಳು ಮತ್ತು ಪ್ರವಾಹಗಳಿಗೆ ಕುಖ್ಯಾತಿಯಿಂದ ಈಗ ಈ ನಗರವು ಬಹುದೂರ ಸಾಗಿ ಬಂದಿದೆ ಎಂದು ಅವರು ಹೇಳಿದರು. ಸೂರತ್‌ನ ನಾಗರಿಕ ಜೀವನದಲ್ಲಿ ಜೀವವೈವಿಧ್ಯ ಉದ್ಯಾನದ ಪ್ರಯೋಜನಗಳ ಬಗ್ಗೆ ಅವರು ವಿವರಿಸಿದರು.

ಡಬಲ್ ಎಂಜಿನ್ ಸರಕಾರ ರಚನೆಯಾದ ನಂತರ ಮೂಡಿಬಂದ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸೂರತ್‌ನ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಮನೆಗಳು ಮತ್ತು ಇತರ ಸೌಲಭ್ಯಗಳ ನಿರ್ಮಾಣವು ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಹೇಳಿದರು. ʻಆಯುಷ್ಮಾನ್ ಭಾರತ್ʼ ಯೋಜನೆಯಿಂದ ಪಡೆಯಲಾದ ಪ್ರಯೋಜನಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ದೇಶದಲ್ಲಿ ಇದುವರೆಗೆ ಸುಮಾರು 40 ದಶಲಕ್ಷ ಬಡ ರೋಗಿಗಳು ಉಚಿತ ಚಿಕಿತ್ಸೆಯನ್ನು ಪಡೆದಿದ್ದಾರೆ ಎಂದು ಗಮನಸೆಳೆದರು. "ಗುಜರಾತ್‌ನ 32 ಲಕ್ಷಕ್ಕೂ ಹೆಚ್ಚು ರೋಗಿಗಳು ಮತ್ತು ಸೂರತ್‌ನ ಸುಮಾರು 1.25 ಲಕ್ಷ ರೋಗಿಗಳು ಈ ಪ್ರಯೋಜನ ಪಡೆದಿದ್ದಾರೆ" ಎಂದು ಪ್ರಧಾನಿ ಮಾಹಿತಿ ನೀಡಿದರು.

ಸೂರತ್‌ನ ಜವಳಿ ಮತ್ತು ವಜ್ರದ ವ್ಯವಹಾರದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಇದು ದೇಶಾದ್ಯಂತ ಅನೇಕ ಕುಟುಂಬಗಳ ಜೀವನವನ್ನು ಪೋಷಿಸುತ್ತದೆ ಎಂದು ಹೇಳಿದರು. ʻಡ್ರೀಮ್ ಸಿಟಿʼ ಯೋಜನೆ ಪೂರ್ಣಗೊಂಡಾಗ, ಸೂರತ್ ವಿಶ್ವದ ಅತ್ಯಂತ ಸುರಕ್ಷಿತ ಮತ್ತು ಅತ್ಯಂತ ಅನುಕೂಲಕರ ವಜ್ರ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿ ಅಭಿವೃದ್ಧಿ ಹೊಂದಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ನಗರದಿಂದ ವಿಮಾನ ನಿಲ್ದಾಣಕ್ಕೆ ರಸ್ತೆ ಸಂಪರ್ಕವು ಸೂರತ್‌ನ ಸಂಸ್ಕೃತಿ, ಸಮೃದ್ಧಿ ಮತ್ತು ಆಧುನಿಕತೆಯನ್ನು ಪ್ರತಿಬಿಂಬಿಸುತ್ತದೆ ಎಂದರು. ನಗರದಲ್ಲಿ ವಿಮಾನ ನಿಲ್ದಾಣದ ಅಗತ್ಯದ ಬಗ್ಗೆ ಹೆಚ್ಚು ಗಮನ ಹರಿಸದ ಕೇಂದ್ರದ ಅಂದಿನ ಸರಕಾರದ ಬಗ್ಗೆ ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. "ಇಂದು ನೋಡಿ, ಇಲ್ಲಿಂದ ಎಷ್ಟು ವಿಮಾನಗಳು ಕಾರ್ಯಾಚರಣೆಗೊಳ್ಳುತ್ತಿವೆ, ಪ್ರತಿದಿನ ಎಷ್ಟೊಂದು ಜನರು ಇಲ್ಲಿಗೆ ವಿಮಾನದಲ್ಲಿ ಬಂದು ಇಳಿಯುತ್ತಾರೆ", ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಸೂರತ್ ಮೆಟ್ರೋಗೆ ಅನುಮೋದನೆ ಅಗತ್ಯವಿದ್ದಾಗ ಉದ್ಭವಿಸಿದ್ದ ಇದೇ ರೀತಿಯ ಪರಿಸ್ಥಿತಿಯನ್ನು ಶ್ರೀ ಮೋದಿ ಅವರು ಸ್ಮರಿಸಿದರು.

ಲಾಜಿಸ್ಟಿಕ್ಸ್‌ನ (ಸರಕು-ಸಾಗಣೆ) ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸೂರತ್‌ನ ಜನರಿಗೆ ಯಾವುದೇ ವ್ಯವಹಾರದ ಅರ್ಥವೇನೆಂದು ತಿಳಿದಿದೆ ಎಂದರು.  ʻರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿʼಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಬಹು ಮಾದರಿ ಸಂಪರ್ಕದ ಬೃಹತ್ ಯೋಜನೆಯ ಕಾಮಗಾರಿ ನಡೆಯುತ್ತಿದೆ ಎಂದರು. ʻಹಜಿರಾ ಘೋಗಾ ರೋಪ್ಯಾಕ್ಸ್ʼ ನೌಕಾ ಸೇವೆಯು ʻರೋಪ್ಯಾಕ್ಸ್ʼ ಮೂಲಕ 400 ಕಿ.ಮೀ ರಸ್ತೆ ದೂರವನ್ನು ಕ್ರಾಂತಿಕಾರಿ ರೀತಿಯಲ್ಲಿ 10-12 ಗಂಟೆಗಳಿಂದ 3-4 ಗಂಟೆಗಳಿಗೆ ಇಳಿಸುತ್ತದೆ. ಆ ಮೂಲಕ ಸಮಯ ಮತ್ತು ಹಣ ಎರಡನ್ನೂ ಉಳಿಸುತ್ತಿದೆ. ಸೂರತ್‌ನಿಂದ ಕಾಶಿ ಮತ್ತು ಪೂರ್ವ ಉತ್ತರ ಪ್ರದೇಶಕ್ಕೆ ಸಂಪರ್ಕದ ಉದಾಹರಣೆ ನೀಡಿದ ಪ್ರಧಾನಮಂತ್ರಿಯವರು, ಟ್ರಕ್ ಲೋಡ್ ಸರಕುಗಳನ್ನು ಸಾಗಿಸಲಾಗುತ್ತಿದೆ ಮತ್ತು ಈಗ ರೈಲ್ವೆ ಮತ್ತು ಕರಾವಳಿ ಇಲಾಖೆಗಳು ಹಡಗುಗಳ ಸಂಖ್ಯೆಯನ್ನು ಹೆಚ್ಚಿಸಲು ವಿಶಿಷ್ಟ ಆವಿಷ್ಕಾರಗಳೊಂದಿಗೆ ಮುಂದೆ ಬಂದಿವೆ ಎಂದರು. "ರೈಲ್ವೆಯು ತನ್ನ ಬೋಗಿಗಳ ವಿನ್ಯಾಸವನ್ನು ಸರಕುಗಳಿಗೆ ಸುಲಭವಾಗಿ ಹೊಂದಿಕೊಳ್ಳುವ ರೀತಿಯಲ್ಲಿ ಬದಲಾಯಿಸಿದೆ. ಇದಕ್ಕಾಗಿ ಒಂದು ಟನ್ ಕಂಟೇನರ್‌ಗಳನ್ನು ಸಹ ವಿಶೇಷವಾಗಿ ತಯಾರಿಸಲಾಗಿದೆ. ಈ ಕಂಟೇನರ್‌ಗಳನ್ನು ಸುಲಭವಾಗಿ ಲೋಡ್ ಮಾಡಬಹುದು ಮತ್ತು ಅನ್‌ಲೋಡ್‌ ಮಾಡಬಹುದು,ʼʼ ಪ್ರಧಾನಮಂತ್ರಿಯವರು ವಿವರಿಸಿದರು. ಆರಂಭಿಕ ಯಶಸ್ಸಿನ ನಂತರ, ಈಗ ಸೂರತ್‌ನಿಂದ ಕಾಶಿಗೆ ಹೊಸ ರೈಲನ್ನು ಓಡಿಸುವ ಪ್ರಯತ್ನ ನಡೆಯುತ್ತಿದೆ. ಈ ರೈಲು ಸೂರತ್‌ನಿಂದ ಕಾಶಿಗೆ ಸರಕುಗಳನ್ನು ಸಾಗಿಸುತ್ತದೆ,ʼʼ ಎಂದರು.

ʻಡೈಮಂಡ್ ಸಿಟಿʼಯಿಂದ ʻಬ್ರಿಡ್ಜ್ ಸಿಟಿʼಯಾಗಿ ಮತ್ತು ಈಗ ʻಎಲೆಕ್ಟ್ರಿಕ್ ವೆಹಿಕಲ್ ಸಿಟಿʼಯಾಗಿ ಸೂರತ್‌ನ ಅಸ್ಮಿತೆಗಳು ಬದಲಾಗುತ್ತಿರುವುದರ ಬಗ್ಗೆ ಪ್ರಧಾನಮಂತ್ರಿ ಅವರು ಪ್ರಸ್ತಾಪಿಸಿದರು. ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಆಗಮನದ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸೂರತ್ ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನಗಳಿಗೆ ಹೆಸರುವಾಸಿಯಾಗಲಿದೆ ಎಂದು ಹೇಳಿದರು. ಪ್ರಸ್ತುತ, ಕೇಂದ್ರ ಸರಕಾರವು ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ರಾಜ್ಯ ಸರಕಾರಗಳಿಗೆ ಸಹಾಯ ಮಾಡುತ್ತಿದೆ ಮತ್ತು ದೇಶದ ಇತರ ನಗರಗಳಿಗೆ ಹೋಲಿಸಿದರೆ ಸೂರತ್ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿದೆ ಎಂದು ಶ್ರೀ ಮೋದಿ ಹೇಳಿದರು. ಇಂದು ಸೂರತ್ ನಗರದಲ್ಲಿ 25 ಚಾರ್ಜಿಂಗ್ ಕೇಂದ್ರಗಳನ್ನು ಉದ್ಘಾಟಿಸಲಾಗಿದ್ದು, ಅಷ್ಟೇ ಸಂಖ್ಯೆಯ ನಿಲ್ದಾಣಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಸೂರತ್‌ನಲ್ಲಿ 500 ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆಯಾಗಿದೆ ಎಂದು ಹೇಳಿದರು.

ಭಾಷಣದ ಅಂತ್ಯದಲ್ಲಿ ಪ್ರಧಾನಮಂತ್ರಿಯವರು, ಸೂರತ್‌ನಲ್ಲಿ ಕಳೆದ ಎರಡು ದಶಕಗಳಿಂದ ಕಂಡುಬಂದ ಅಭಿವೃದ್ಧಿಯ ವೇಗದ ಬಗ್ಗೆ ಬೆಳಕು ಚೆಲ್ಲಿದರು. ಮುಂಬರುವ ವರ್ಷಗಳಲ್ಲಿ ಅಭಿವೃದ್ಧಿಯ ವೇಗವು ಮತ್ತಷ್ಟು ಹೆಚ್ಚಲಿದೆ ಎಂದರು. "ಈ ಬೆಳವಣಿಗೆಯು ಇಂದು ಡಬಲ್-ಎಂಜಿನ್ ಸರಕಾರದ ಮೇಲಿನ ನಂಬಿಕೆಯ ರೂಪದಲ್ಲಿ ಪ್ರತಿಬಿಂಬಿತವಾಗಿದೆ. ವಿಶ್ವಾಸ ಬೆಳೆದಾಗ, ಪ್ರಯತ್ನವು ಬೆಳೆಯುತ್ತದೆ ಮತ್ತು ʻಸಬ್ ಕಾ ಪ್ರಯಾಸ್ʼನಿಂದ (ಸರ್ವರ ಪ್ರಯತ್ನದಿಂದ) ರಾಷ್ಟ್ರದ ಅಭಿವೃದ್ಧಿಯ ವೇಗ ಹೆಚ್ಚಾಗುತ್ತದೆ," ಎಂದು ಪ್ರಧಾನಿ ಹೇಳಿದರು.

ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಸಂಸದರಾದ ಶ್ರೀ ಸಿ.ಆರ್.ಪಾಟೀಲ್ ಮತ್ತು ಶ್ರೀ ಪ್ರಭುಭಾಯಿ ವಾಸವಂ, ಕೇಂದ್ರದ ಸಹಾಯಕ ಸಚಿವರಾದ ಶ್ರೀಮತಿ ದರ್ಶನಾ ವಿಕ್ರಮ್ ಜರ್ದೋಶ್ ಮತ್ತು ಗುಜರಾತ್‌ನ ಗೃಹ ಸಚಿವರಾದ ಶ್ರೀ ಹರ್ಷ ಸಾಂಘ್ವಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 
ಹಿನ್ನೆಲೆ
 
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೂರತ್‌ನಲ್ಲಿ ₹3400 ಕೋಟಿಗೂ ಅಧಿಕ ಮೌಲ್ಯದ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದರು. ಇವುಗಳಲ್ಲಿ ನೀರು ಸರಬರಾಜು, ಒಳಚರಂಡಿ ಯೋಜನೆಗಳು, ʻಡ್ರೀಮ್ ಸಿಟಿʼ, ಜೀವವೈವಿಧ್ಯ ಉದ್ಯಾನವನ ಹಾಗೂ ಸಾರ್ವಜನಿಕ ಮೂಲಸೌಕರ್ಯ, ಪಾರಂಪರಿಕತೆ ಪುನಃಸ್ಥಾಪನೆ, ಸಿಟಿ ಬಸ್ / ಬಿಆರ್‌ಟಿಎಸ್‌ ಮೂಲಸೌಕರ್ಯ, ಎಲೆಕ್ಟ್ರಿಕ್ ವಾಹನ ಮೂಲಸೌಕರ್ಯ, ಕೇಂದ್ರ ಮತ್ತು ರಾಜ್ಯ ಸರಕಾರದ ಜಂಟಿ ಅಭಿವೃದ್ಧಿ ಯೋಜನೆಗಳಂತಹ ಇತರ ಅಭಿವೃದ್ಧಿ ಕಾಮಗಾರಿಗಳು ಸೇರಿವೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಸ್ತೆ ಮೂಲಸೌಕರ್ಯ ಕಾಮಗಾರಿಗಳ ಹಂತ-1 ಮತ್ತು ʻಡೈಮಂಡ್ ರಿಸರ್ಚ್ ಅಂಡ್ ಮರ್ಕಂಟೈಲ್ʼ (ಡ್ರೀಮ್) ನಗರದ ಮುಖ್ಯ ದ್ವಾರವನ್ನು ಉದ್ಘಾಟಿಸಿದರು. ಸೂರತ್‌ನಲ್ಲಿ ವಜ್ರ ವ್ಯಾಪಾರ ವಹಿವಾಟಿನ ತ್ವರಿತ ಬೆಳವಣಿಗೆಗೆ ಪೂರಕವಾಗಿ ವಾಣಿಜ್ಯ ಮತ್ತು ವಸತಿ ಸ್ಥಳದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಆಶಯದೊಂದಿಗೆ ʻಡ್ರೀಮ್ ಸಿಟಿʼ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಪ್ರಧಾನಮಂತ್ರಿಯವರು ಯೋಜನೆಯ ಎರಡನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಡಾ. ಹೆಡ್ಗೆವಾರ್ ಸೇತುವೆಯಿಂದ ಭೀಮ್ರಾಡ್-ಬಮ್ರೋಲಿ ಸೇತುವೆಯವರೆಗೆ 87 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಜೀವವೈವಿಧ್ಯ ಉದ್ಯಾನವನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಸೂರತ್‌ನ ವಿಜ್ಞಾನ ಕೇಂದ್ರದಲ್ಲಿ ಖೋಜ್ ವಸ್ತುಸಂಗ್ರಹಾಲಯವನ್ನೂ ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ಮಕ್ಕಳಿಗಾಗಿ ನಿರ್ಮಿಸಲಾದ ಈ ವಸ್ತುಸಂಗ್ರಹಾಲಯವು ಸಂವಾದಾತ್ಮಕ ಪ್ರದರ್ಶನಗಳು, ಪ್ರಶ್ನೋತ್ತರ ಆಧಾರಿತ ಚಟುವಟಿಕೆಗಳು ಮತ್ತು ಜಿಜ್ಞಾಸೆ-ಆಧಾರಿತ ಅನ್ವೇಷಣೆಗಳನ್ನು ಹೊಂದಿರುತ್ತದೆ.

ಈ ವ್ಯಾಪಕ ಶ್ರೇಣಿಯ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯು ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಅಭಿವೃದ್ಧಿ, ನಗರ ಚಲನಶೀಲತೆ ವರ್ಧನೆ ಮತ್ತು ಬಹು ಮಾದರಿ ಸಂಪರ್ಕದ ಸುಧಾರಣೆಗಳತ್ತ ಪ್ರಧಾನಮಂತ್ರಿಯವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದು ಸಾಮಾನ್ಯ ಜನರ ಜೀವನ ಸುಗಮತೆಯನ್ನು ಹೆಚ್ಚಿಸುವತ್ತ ಅವರ ಸರಕಾರ ನಿರಂತರ ಗಮನ ಹರಿಸುವುದನ್ನು ಸೂಚಿಸುತ್ತದೆ. 

 

*******



 


(Release ID: 1863523) Visitor Counter : 137