ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಆಶಾ ಪರೇಖ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ


68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸೆಪ್ಟೆಂಬರ್ 30 ರಂದು ನಡೆಯಲಿದೆ

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ

Posted On: 27 SEP 2022 1:35PM by PIB Bengaluru

2020 ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರಸಿದ್ಧ ನಟಿ ಆಶಾ ಪರೇಖ್ ಅವರಿಗೆ ನೀಡಲಾಗುವುದು ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಇಂದು ಪ್ರಕಟಿಸಿದೆ. ನವದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಆಯ್ಕೆಯ ನಿರ್ಧಾರವನ್ನು ಪ್ರಕಟಿಸಿದ ಕೇಂದ್ರ ಸಚಿವರಾದ ಶ್ರೀ ಅನುರಾಗ್ ಠಾಕೂರ್, "ಭಾರತೀಯ ಚಿತ್ರರಂಗಕ್ಕೆ ಆದರ್ಶಪ್ರಾಯ ಜೀವಮಾನದ ಕೊಡುಗೆಗಾಗಿ ಆಶಾ ಪರೇಖ್ ಜಿ ಅವರನ್ನು ಗುರುತಿಸಿ ಪ್ರಶಸ್ತಿ ನೀಡಲು ದಾದಾಸಾಹೇಬ್ ಫಾಲ್ಕೆ ಆಯ್ಕೆಯ ತೀರ್ಪುಗಾರರು ನಿರ್ಧರಿಸಿದ್ದಾರೆ ಎಂದು ಘೋಷಿಸಸುವುದು  ನನಗೆ ಗೌರವ ತಂದ ವಿಷಯವಾಗಿದೆ" ಎಂದು ಹೇಳಿದರು. 68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು 2022 ರ ಸೆಪ್ಟೆಂಬರ್ 30 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಚಿವರು ಘೋಷಿಸಿದರು.

ಆಶಾ ಪರೇಖ್ ಅವರು ಪ್ರಸಿದ್ಧ ಚಲನಚಿತ್ರ ನಟಿ, ನಿರ್ದೇಶಕಿ ಮತ್ತು ನಿರ್ಮಾಪಕಿ ಹಾಗು ಒಬ್ಬ ಪಾರಂಗತ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ. ಬಾಲನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ದಿಲ್ ದೇಕೆ ದೇಖೋ ಚಿತ್ರದಲ್ಲಿ ನಾಯಕಿಯಾಗಿ ಪದಾರ್ಪಣೆ ಮಾಡಿದರು ಮತ್ತು 95 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕಟಿ ಪತಂಗ್, ತೀಸ್ರಿ ಮಂಜಿಲ್, ಲವ್ ಇನ್ ಟೋಕಿಯೋ, ಆಯಾ ಸಾವನ್ ಝೂಮ್ ಕೆ, ಆನ್ ಮಿಲೋ ಸಜ್ನಾ, ಮೇರಾ ಗಾಂವ್ ಮೇರಾ ದೇಶ್ ಮುಂತಾದ ಚಲನಚಿತ್ರಗಳು ಅವರು ನಟಿಸಿದ ಚಲನಚಿತ್ರಗಳಲ್ಲಿ ಅತಿ ಹೆಚ್ಚು ಜನಪ್ರಿಯವಾದವು.

1992 ರಲ್ಲಿ ಆಶಾ ಪಾರೇಖ್ ಅವರು ಪದ್ಮಶ್ರೀಗೆ ಭಾಜನರಾದರು.  ಅವರು 1998-2001 ರವರೆಗೆ ಚಲನಚಿತ್ರ ಪ್ರಮಾಣೀಕರಣ ಕೇಂದ್ರೀಯ ಮಂಡಳಿಯ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಆಶಾ ಪರೇಖ್ ಅವರಿಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡುವ ನಿರ್ಧಾರವನ್ನು ಐದು ಸದಸ್ಯರ ತೀರ್ಪುಗಾರ ಸಮಿತಿ ನಿರ್ಧರಿಸಿದೆ ಎಂದು ಶ್ರೀ ಅನುರಾಗ್ ಠಾಕೂರ್ ಅವರು ಘೋಷಿಸಿದರು. 52 ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ ಆಯ್ಕೆಗಾಗಿ ತೀರ್ಪುಗಾರರ ತಂಡವು ಚಲನಚಿತ್ರೋದ್ಯಮದ ಈ ಕೆಳಗಿನ ಐದು ಸದಸ್ಯರನ್ನು ಒಳಗೊಂಡಿತ್ತು:

  1.   ಶ್ರೀಮತಿ ಆಶಾ ಭೋಂಸ್ಲೆ

  2.   ಶ್ರೀಮತಿ ಹೇಮಾ ಮಾಲಿನಿ

   3.  ಶ್ರೀಮತಿ ಪೂನಂ ಧಿಲ್ಲೋನ್

  4.   ಶ್ರೀ ಟಿ ಎಸ್ ನಾಗಾಭರಣ

   5.  ಶ್ರೀ ಉದಿತ್ ನಾರಾಯಣ

 

******



(Release ID: 1862535) Visitor Counter : 226