ಪ್ರಧಾನ ಮಂತ್ರಿಯವರ ಕಛೇರಿ

ಮಧ್ಯಪ್ರದೇಶದ ಕರಾಹಲ್ ನಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಸಮಾವೇಶವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ


"ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ ಅಡಿಯಲ್ಲಿ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ ನಾಲ್ಕು ಕೌಶಲ್ಯ ಕೇಂದ್ರಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ"

''ಭಾರತದ ಹೆಣ್ಣುಮಕ್ಕಳು ಮತ್ತು ತಾಯಂದಿರು ನನ್ನ "ರಕ್ಷಾ ಕವಚ"(ರಕ್ಷಣಾತ್ಮಕ ಗುರಾಣಿ)"

"ಇಂದಿನ ನವ ಭಾರತದಲ್ಲಿ, ಮಹಿಳಾ ಶಕ್ತಿಯ ಧ್ವಜವು ಪಂಚಾಯತ್ ಭವನದಿಂದ ರಾಷ್ಟ್ರಪತಿ ಭವನದವರೆಗೆ ಹಾರಾಡುತ್ತಿದೆ"

"ನೀವು ಎಲ್ಲಾ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವಿರಿ ಆದರೆ ಚೀತಾಗಳಿಗೆ ಯಾವುದೇ ಹಾನಿಯನ್ನುಂಟುಮಾಡಲು ಅವಕಾಶ ನೀಡುವುದಿಲ್ಲ ಎಂಬ ವಿಶ್ವಾಸ ನನಗಿದೆ"

"ಮಹಿಳಾ ಶಕ್ತಿಯು ಕಳೆದ ಶತಮಾನದ ಭಾರತ ಮತ್ತು ಈ ಶತಮಾನದ ನವ ಭಾರತದ ನಡುವಿನ ವ್ಯತ್ಯಾಸವನ್ನು ಗುರುತಿಸುವ ಅಂಶವಾಗಿದೆ"

"ಕಾಲಾನಂತರದಲ್ಲಿ, ಸ್ವಸಹಾಯ ಗುಂಪುಗಳು,ರಾಷ್ಟ್ರ ಸಹಾಯ ಗುಂಪುಗಳು ಆಗಿ ಬದಲಾಗುತ್ತವೆ"

"ಗ್ರಾಮೀಣ ಆರ್ಥಿಕತೆಯಲ್ಲಿ ಮಹಿಳಾ ಉದ್ಯಮಿಗಳಿಗೆ ಹೊಸ ಸಾಧ್ಯತೆಗಳನ್ನು ಸೃಷ್ಟಿಸಲು ಸರ್ಕಾರವು ನಿರಂತರವಾಗಿ ಕೆಲಸ ಮಾಡುತ್ತಿದೆ"

"ಭೇಟಿ ನೀಡುವ ವಿದೇಶಿ ಗಣ್ಯರ ಮೆನುವಿನಲ್ಲಿ ಯಾವಾಗಲೂ ಒರಟಾದ ಧಾನ್ಯಗಳಿಂದ ತಯಾರಿಸಿದ ಕೆಲವು ವಸ್ತುಗಳು ಇರುತ್ತವೆ"

"ದೇಶಾದ್ಯಂತ ಪೊಲೀಸ್ ಪಡೆಯಲ್ಲಿ ಮಹಿಳೆಯರ ಸಂಖ್ಯೆ 1 ಲಕ್ಷದಿಂದ 2 ಲಕ್ಷಕ್ಕಿಂತ ಹೆಚ್ಚು ದ್ವಿಗುಣಗೊಂಡಿದೆ"

Posted On: 17 SEP 2022 2:41PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಶಿಯೋಪುರದ ಕರಾಹಲ್ ನಲ್ಲಿ ಆಯೋಜಿಸಿದ್ದ ಸ್ವಸಹಾಯ ಗುಂಪುಗಳ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಪ್ರಧಾನಮಂತ್ರಿ ಕೌಶಲ ವಿಕಾಸ್ ಯೋಜನೆ ಅಡಿಯಲ್ಲಿ ನಾಲ್ಕು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ (ಪಿವಿಟಿಜಿ) ಕೌಶಲ್ಯ ಕೇಂದ್ರಗಳನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿ ಅವರು ಸ್ವಸಹಾಯ ಗುಂಪುಗಳ ಸದಸ್ಯರಿಗೆ ಬ್ಯಾಂಕ್ ಸಾಲ ಮಂಜೂರಾತಿ ಪತ್ರಗಳನ್ನು ಹಸ್ತಾಂತರಿಸಿದರು ಮತ್ತು ಜಲ ಜೀವನ್ ಮಿಷನ್ ಅಡಿಯಲ್ಲಿ ಕಿಟ್ ಗಳನ್ನು ಸಹ ಅವರು ಹಸ್ತಾಂತರಿಸಿದರು. ಸ್ವಸಹಾಯ ಗುಂಪುಗಳ ಸದಸ್ಯರಾಗಿರುವ ಸುಮಾರು ಒಂದು ಲಕ್ಷ ಮಹಿಳೆಯರು ಈ ಸಂದರ್ಭದಲ್ಲಿ ಹಾಜರಿದ್ದರು ಮತ್ತು ವಿವಿಧ ಕೇಂದ್ರಗಳಿಂದ ಸುಮಾರು 43 ಲಕ್ಷ ಮಹಿಳೆಯರು ಸಂಪರ್ಕ ಹೊಂದಿದ್ದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಸಮಯಾವಕಾಶ ಸಿಕ್ಕರೆ, ತಮ್ಮ ಜನ್ಮದಿನದಂದು ತಮ್ಮ ತಾಯಿಯಿಂದ ಆಶೀರ್ವಾದ ಪಡೆಯಲು ಪ್ರಯತ್ನಿಸುತ್ತೇನೆ ಎಂದರು. ಇಂದು, ಅವರು ತಮ್ಮ ತಾಯಿಯನ್ನು ಭೇಟಿಯಾಗಲು ಹೋಗಲು ಸಾಧ್ಯವಾಗದಿದ್ದರೂ, ಲಕ್ಷಾಂತರ ಬುಡಕಟ್ಟು ತಾಯಂದಿರ ಆಶೀರ್ವಾದವನ್ನು ಪಡೆಯುತ್ತಿರುವುದಕ್ಕೆ ನಮ್ಮ ತಾಯಿ ಸಂತೋಷಪಡುತ್ತಾರೆ ಎಂದು ಅವರು ಹೇಳಿದರು. 'ಭಾರತದ ಹೆಣ್ಣುಮಕ್ಕಳು ಮತ್ತು ತಾಯಂದಿರು ನನ್ನ 'ರಕ್ಷಾ ಕವಚ' (ರಕ್ಷಣಾ ಕವಚ)' ಎಂದು ಅವರು ಹೇಳಿದರು. ವಿಶ್ವಕರ್ಮ ಜಯಂತಿಯಂದು ಸ್ವಸಹಾಯ ಸಂಘಗಳ ಇಂತಹ ದೊಡ್ಡ ಸಮಾವೇಶವು ಅತ್ಯಂತ ವಿಶೇಷವಾಗಿದೆ ಎಂದು ಹೇಳಿದ ಅವರು, ವಿಶ್ವಕರ್ಮ ಪೂಜೆಯ ಸಂದರ್ಭದಲ್ಲಿ ಶುಭ ಕೋರಿದರು.

ಎಪ್ಪತ್ತೈದು ವರ್ಷಗಳ ನಂತರ ಚೀತಾಗಳು ಭಾರತಕ್ಕೆ ಮರಳಿದ ಬಗ್ಗೆ ಪ್ರಧಾನಮಂತ್ರಿ ಅವರು ಬಹಳ ಹೆಮ್ಮೆ ಮತ್ತು ಸಂತೋಷವನ್ನು ವ್ಯಕ್ತಪಡಿಸಿದರು. " ಇಲ್ಲಿಗೆ ಬರುವ ಮೊದಲು, ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳನ್ನು ಬಿಡುಗಡೆ ಮಾಡುವ ಸುಯೋಗ ನನಗೆ ಸಿಕ್ಕಿತು" ಎಂದು ಅವರು ನೆನಪಿಸಿಕೊಂಡರು. ಅವರು ಗೌರವಾನ್ವಿತ ಅತಿಥಿಗಳು ಎಂದು ಕರೆದ ಚೀತಾಗಳಿಗೆ ಸ್ಥಳದಲ್ಲಿ ನೆರೆದಿದ್ದ ಎಲ್ಲರಿಂದಲೂ ವಿನಂತಿಸಿಕೊಂಡರು ಮತ್ತು ಚಪ್ಪಾಳೆ ತಟ್ಟಿದರು. "ನಿಮ್ಮಲ್ಲಿ ನಂಬಿಕೆ ಇರುವುದರಿಂದ ಚೀತಾಗಳನ್ನು ನಿಮ್ಮ ಸುಪರ್ದಿಗೆ ನೀಡಲಾಗಿದೆ. ನೀವು ಎಲ್ಲಾ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುತ್ತೀರಿ ಆದರೆ ಚೀತಾಗಳಿಗೆ ಯಾವುದೇ ಹಾನಿಯನ್ನುಂಟುಮಾಡಲು ಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ. ಅದಕ್ಕಾಗಿಯೇ, ಇಂದು, ನಾನು ಈ ಎಂಟು ಚಿರತೆಗಳ ಜವಾಬ್ದಾರಿಯನ್ನು ನಿಮಗೆ ಹಸ್ತಾಂತರಿಸಲು ಬಂದಿದ್ದೇನೆ", ಎಂದು ಅವರು ಈ ಪ್ರದೇಶದ ಜನರಿಗೆ ಹೇಳಿದರು. ಇಂದು ಸ್ವಸಹಾಯ ಗುಂಪುಗಳಿಂದ 10 ಲಕ್ಷ ಸಸಿಗಳನ್ನು ನೆಡುವುದನ್ನು ಗಮನಿಸಿದ ಪ್ರಧಾನಮಂತ್ರಿಯವರು, ಇದು ಭಾರತದ ಪರಿಸರ ಸಂರಕ್ಷಣಾ ಪ್ರಯತ್ನಗಳಿಗೆ ಹೊಸ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದರು.

ಭಾರತದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಪ್ರಾತಿನಿಧ್ಯವನ್ನು ಬಿಂಬಿಸಿದ ಪ್ರಧಾನಮಂತ್ರಿ ಅವರು, ಮಹಿಳಾ ಶಕ್ತಿಯು ಕಳೆದ ಶತಮಾನದ ಭಾರತ ಮತ್ತು ಈ ಶತಮಾನದ ನವ ಭಾರತದ ನಡುವಿನ ವ್ಯತ್ಯಾಸವನ್ನು ಗುರುತಿಸುವ ಅಂಶವಾಗಿ ಮಾರ್ಪಟ್ಟಿದೆ ಎಂದು ಹೇಳಿದರು. " ಇಂದಿನ ನವ ಭಾರತದಲ್ಲಿ, ಮಹಿಳಾ ಶಕ್ತಿಯ ಧ್ವಜವು ಪಂಚಾಯತ್ ಭವನದಿಂದ ರಾಷ್ಟ್ರಪತಿ ಭವನದವರೆಗೆ ಹಾರಾಡುತ್ತಿದೆ," ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಇತ್ತೀಚಿನ ಪಂಚಾಯತ್ ಚುನಾವಣೆಯಲ್ಲಿ 17 ಸಾವಿರ ಮಹಿಳೆಯರು ಪಂಚಾಯತ್ ಸಂಸ್ಥೆಗಳಿಗೆ ಚುನಾಯಿತರಾದರು ಎಂದು ಅವರು ಗಮನಿಸಿದರು. ಇದು ದೊಡ್ಡ ಬದಲಾವಣೆಯ ಸಂಕೇತವಾಗಿದೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರದ ಭದ್ರತೆಯಲ್ಲಿ ಮಹಿಳೆಯರ ಕೊಡುಗೆಯನ್ನು ಪ್ರಧಾನಮಂತ್ರಿ ಅವರು ಸ್ಮರಿಸಿದರು. ಇತ್ತೀಚಿನ ಹರ್ ಘರ್ ತಿರಂಗಾ (ಮನೆ ಮನೆಯಲ್ಲಿ ಧ್ವಜಾರೋಹಣ) ಅಭಿಯಾನದಲ್ಲಿ ಮಹಿಳೆಯರು ಮತ್ತು ಸ್ವಸಹಾಯ ಗುಂಪುಗಳ ಪಾತ್ರ ಮತ್ತು ಕೊರೊನಾ ಅವಧಿಯಲ್ಲಿ ಅವರ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ಕಾಲಾನಂತರದಲ್ಲಿ 'ಸ್ವಸಹಾಯ ಗುಂಪುಗಳು' ' ರಾಷ್ಟ್ರ ಸಹಾಯ ಗುಂಪುಗಳು ' ಆಗಿ ಬದಲಾಗುತ್ತವೆ ಎಂದು ಅವರು ಹೇಳಿದರು. ಯಾವುದೇ ವಲಯದ ಯಶಸ್ಸು ಮಹಿಳೆಯರ ಪ್ರಾತಿನಿಧ್ಯದ ಹೆಚ್ಚಳದೊಂದಿಗೆ ನೇರ ಸಂಬಂಧ ಹೊಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮಹಿಳಾ ನೇತೃತ್ವದ ಉಪಕ್ರಮವಾದ ಸ್ವಚ್ಛ ಭಾರತ ಅಭಿಯಾನದ ಯಶಸ್ಸು ಈ ಮಾದರಿಗೆ ಉತ್ತಮ ಉದಾಹರಣೆಯಾಗಿದೆ. ಅದೇ ರೀತಿ, ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ 7 ಕೋಟಿ ಕುಟುಂಬಗಳು ಕೊಳವೆ ನೀರಿನ ಸಂಪರ್ಕವನ್ನು ಪಡೆದುಕೊಂಡಿವೆ ಮತ್ತು ಅದರಲ್ಲಿ 40 ಲಕ್ಷ ಕುಟುಂಬಗಳು ಮಧ್ಯಪ್ರದೇಶದವರಾಗಿದ್ದಾರೆ. ಈ ಯಶಸ್ಸಿಗೆ ಭಾರತದ ಮಹಿಳೆಯರು ಕಾರಣ ಎಂದು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು.

ಕಳೆದ 8 ವರ್ಷಗಳಲ್ಲಿ ಸ್ವಸಹಾಯ ಗುಂಪುಗಳನ್ನು ಸಶಕ್ತಗೊಳಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. " ಇಂದು ದೇಶಾದ್ಯಂತ 8 ಕೋಟಿಗೂ ಹೆಚ್ಚು ಸಹೋದರಿಯರು ಈ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಪ್ರತಿ ಗ್ರಾಮೀಣ ಕುಟುಂಬದಿಂದ ಕನಿಷ್ಠ ಒಬ್ಬ ಸಹೋದರಿಯಾದರೂ ಈ ಅಭಿಯಾನಕ್ಕೆ ಸೇರಬೇಕು ಎಂಬುದು ನಮ್ಮ ಗುರಿಯಾಗಿದೆ", ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

'ಒಂದು ಜಿಲ್ಲೆ, ಒಂದು ಉತ್ಪನ್ನ' ಉಪಕ್ರಮದ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಅವರು, ಪ್ರತಿ ಜಿಲ್ಲೆಯಿಂದ ಸ್ಥಳೀಯ ಉತ್ಪನ್ನಗಳನ್ನು ದೊಡ್ಡ ಮಾರುಕಟ್ಟೆಗಳಿಗೆ ಕೊಂಡೊಯ್ಯುವ ಪ್ರಯತ್ನ ಇದಾಗಿದೆ ಎಂದರು. ಗ್ರಾಮೀಣ ಆರ್ಥಿಕತೆಯಲ್ಲಿ ಮಹಿಳಾ ಉದ್ಯಮಿಗಳಿಗೆ ಹೊಸ ಸಾಧ್ಯತೆಗಳನ್ನು ಸೃಷ್ಟಿಸಲು ಸರ್ಕಾರವು ನಿರಂತರವಾಗಿ ಕಾರ್ಯಪ್ರವೃತ್ತವಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಸ್ವಸಹಾಯ ಸಂಘಗಳು ತಮ್ಮ ಉತ್ಪನ್ನಗಳಿಗಾಗಿ ವಿಶೇಷವಾಗಿ ರಚಿಸಲಾದ ಮಾರುಕಟ್ಟೆಗಳಲ್ಲಿ 500 ಕೋಟಿ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿವೆ ಎಂದು ಅವರು ಮಾಹಿತಿ ನೀಡಿದರು. ಪಿಎಂ ವನ್ ಧನ್ ಯೋಜನೆ ಮತ್ತು ಪಿಎಂ ಕೌಶಲ್ ವಿಕಾಸ್ ಯೋಜನೆಯ ಪ್ರಯೋಜನಗಳು ಸಹ ಮಹಿಳೆಯರನ್ನು ತಲುಪುತ್ತಿವೆ. ಜಿಇಎಂ ಪೋರ್ಟಲ್ ನಲ್ಲಿ ಎಸ್ ಎಚ್ ಜಿಯ ಉತ್ಪನ್ನಕ್ಕಾಗಿ 'ಸರಸ್' ಸ್ಥಳದ ಬಗ್ಗೆಯೂ ಅವರು ಮಾಹಿತಿ ನೀಡಿದರು.

ವಿಶ್ವಸಂಸ್ಥೆಯನ್ನು ತಲುಪಲು ಮತ್ತು ಆ ಮೂಲಕ 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುವ ಒರಟು ಸಿರಿಧಾನ್ಯಗಳ ವರ್ಷವೆಂದು ಘೋಷಿಸಲು ಭಾರತವು ಅದ್ಭುತ ಪ್ರಯತ್ನಗಳನ್ನು ಮಾಡಿದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಸೆಪ್ಟೆಂಬರ್ ತಿಂಗಳನ್ನು ದೇಶದಲ್ಲಿ ಪೌಷ್ಠಿಕಾಂಶ ಮಾಸವೆಂದು ಆಚರಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿಯ ಅವರು ಸ್ಮರಿಸಿದರು. ಸಿರಿ ಧಾನ್ಯಗಳಿಂದ ತಯಾರಿಸಿದ ಕನಿಷ್ಠ ಒಂದು ವಸ್ತುವು ಭೇಟಿ ನೀಡುವ ವಿದೇಶಿ ಗಣ್ಯರ ಮೆನುವಿನ ಭಾಗವಾಗಿರಬೇಕು ಎಂದು ತಾವು ಖಚಿತಪಡಿಸುವುದಾಗಿ ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು.

2014ರಿಂದೀಚೆಗೆ ಸರ್ಕಾರದ ಪ್ರಯತ್ನಗಳನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಮಹಿಳೆಯರ ಘನತೆಯನ್ನು ಹೆಚ್ಚಿಸಲು ಮತ್ತು ಅವರು ಪ್ರತಿದಿನ ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ದೇಶವು ನಿರಂತರವಾಗಿ ಶ್ರಮಿಸುತ್ತಿದೆ ಎಂದರು. ಶೌಚಾಲಯಗಳ ಅನುಪಸ್ಥಿತಿ ಮತ್ತು ಅಡುಗೆಮನೆಯಲ್ಲಿ ಕಟ್ಟಿಗೆಯಿಂದ ಬರುವ ಹೊಗೆಯಿಂದ ಉಂಟಾಗುವ ತೊಂದರೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಮಹಿಳೆಯರು ಹೇಗೆ ತೀವ್ರ ತೊಂದರೆಗಳನ್ನು ಎದುರಿಸಿದರು ಎಂಬುದನ್ನು ಶ್ರೀ ನರೇಂದ್ರ ಮೋದಿ ಸ್ಮರಿಸಿದರು. ದೇಶದಲ್ಲಿ 11 ಕೋಟಿಗೂ ಹೆಚ್ಚು ಶೌಚಾಲಯಗಳ ನಿರ್ಮಾಣ, 9 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಅನಿಲ ಸಂಪರ್ಕಗಳನ್ನು ಒದಗಿಸುವ ಮೂಲಕ ಮತ್ತು ಭಾರತದ ದೂರದ ಭಾಗಗಳಲ್ಲಿರುವ ಕೋಟ್ಯಂತರ ಕುಟುಂಬಗಳಿಗೆ ನಲ್ಲಿಯಿಂದ ನೀರನ್ನು ಒದಗಿಸುವ ಮೂಲಕ ಅವರ ಜೀವನವನ್ನು ಸುಲಭಗೊಳಿಸಲಾಗಿದೆ ಎಂದು ಪ್ರಧಾನಮಂತ್ರಿ ಅವರು ಹರ್ಷ ವ್ಯಕ್ತಪಡಿಸಿದರು. ಮಾತೃವಂದನಾ ಯೋಜನೆಯಡಿ 11,000 ಕೋಟಿ ರೂಪಾಯಿಗಳನ್ನು ಗರ್ಭಿಣಿಯರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಮಧ್ಯಪ್ರದೇಶದ ತಾಯಂದಿರಿಗೆ ಈ ಯೋಜನೆಯಡಿ 1300 ಕೋಟಿ ರೂಪಾಯಿ ಕುಟುಂಬಗಳ ಆರ್ಥಿಕ ನಿರ್ಧಾರ ತೆಗೆದುಕೊಳ್ಳುವಲ್ಲಿ ಮಹಿಳೆಯರ ಹೆಚ್ಚುತ್ತಿರುವ ಪಾತ್ರವನ್ನು ಅವರು ಗಮನಿಸಿದರು.

ಜನ್ ಧನ್ ಬ್ಯಾಂಕ್ ಖಾತೆಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು, ಇದು ದೇಶದಲ್ಲಿ ಮಹಿಳಾ ಸಬಲೀಕರಣದ ದೊಡ್ಡ ಮಾಧ್ಯಮವಾಗಿ ಮಾರ್ಪಟ್ಟಿದೆ ಎಂದರು. ಕೊರೋನಾ ಅವಧಿಯಲ್ಲಿ, ಜನ್ ಧನ್ ಬ್ಯಾಂಕ್ ಖಾತೆಗಳ ಶಕ್ತಿಯೇ ಸರ್ಕಾರವು ಸುರಕ್ಷಿತವಾಗಿ ಮತ್ತು ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲು ಅನುವು ಮಾಡಿಕೊಟ್ಟಿತು ಎಂದು ಪ್ರಧಾನಮಂತ್ರಿ ಅವರು ತಕ್ಷಣ ನೆನಪಿಸಿಕೊಂಡರು. "ಇಂದು, ಪಿಎಂ ಆವಾಸ್ ಯೋಜನೆಯಡಿ ಪಡೆದ ಮನೆಗಳಲ್ಲಿ ಮಹಿಳೆಯರ ಹೆಸರುಗಳನ್ನು ಲಗತ್ತಿಸಲಾಗಿದೆ. ನಮ್ಮ ಸರ್ಕಾರವು ದೇಶದ 2 ಕೋಟಿಗೂ ಹೆಚ್ಚು ಮಹಿಳೆಯರಿಗೆ ಮನೆ ಮಾಲಿಕರಾಗಲು ಅನುವು ಮಾಡಿಕೊಟ್ಟಿದೆ. ಮುದ್ರಾ ಯೋಜನೆಯಡಿ, ಇಲ್ಲಿಯವರೆಗೆ ದೇಶದಾದ್ಯಂತದ ಸಣ್ಣ ಉದ್ಯಮಗಳು ಮತ್ತು ವ್ಯವಹಾರಗಳಿಗೆ 19 ಲಕ್ಷ ಕೋಟಿ ರೂ.ಗಳ ಸಾಲವನ್ನು ನೀಡಲಾಗಿದೆ. ಈ ಹಣದ ಸುಮಾರು ಶೇ. 70 ರಷ್ಟು ಮಹಿಳಾ ಉದ್ಯಮಿಗಳು ಸ್ವೀಕರಿಸಿದ್ದಾರೆ. ಸರ್ಕಾರದ ಇಂತಹ ಪ್ರಯತ್ನಗಳಿಂದಾಗಿ, ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ಮಹಿಳೆಯರ ಪಾತ್ರವು ಇಂದು ಹೆಚ್ಚಾಗುತ್ತಿದೆ ಎಂದು ನನಗೆ ಸಂತೋಷವಾಗಿದೆ", ಎಂದು ಅವರು ಹೇಳಿದರು.

"ಮಹಿಳೆಯರ ಆರ್ಥಿಕ ಸಬಲೀಕರಣವು ಸಮಾಜದಲ್ಲಿ ಅವರನ್ನು ಸಮಾನವಾಗಿ ಸಶಕ್ತಗೊಳಿಸುತ್ತದೆ," ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದ ಹೆಣ್ಣುಮಕ್ಕಳು ಈಗ ಸೈನಿಕ ಶಾಲೆಗಳಿಗೆ ಹೇಗೆ ದಾಖಲಾಗುತ್ತಿದ್ದಾರೆ, ಪೊಲೀಸ್ ಕಮಾಂಡೋಗಳಾಗುತ್ತಿದ್ದಾರೆ ಮತ್ತು ಸೇನೆಗೆ ಸೇರುತ್ತಿದ್ದಾರೆ ಎಂಬುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಮುಚ್ಚಿದ ಬಾಗಿಲುಗಳನ್ನು ತೆರೆದು ಅವರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದ್ದಕ್ಕಾಗಿ ಸರ್ಕಾರವನ್ನು ಶ್ಲಾಘಿಸಿದರು.

ಕಳೆದ 8 ವರ್ಷಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿನ ಗಮನಾರ್ಹ ಬದಲಾವಣೆಗಳ ಬಗ್ಗೆ ಎಲ್ಲರ ಗಮನ ಸೆಳೆದ ಪ್ರಧಾನಮಂತ್ರಿ ಅವರು, ದೇಶಾದ್ಯಂತ ಪೊಲೀಸ್ ಪಡೆಯಲ್ಲಿ ಮಹಿಳೆಯರ ಸಂಖ್ಯೆ 1 ಲಕ್ಷದಿಂದ 2 ಲಕ್ಷಕ್ಕೆ ದ್ವಿಗುಣಗೊಂಡಿದೆ ಎಂದು ಎಲ್ಲರಿಗೂ ತಿಳಿಸಲು ಹೆಮ್ಮೆ ವ್ಯಕ್ತಪಡಿಸಿದರು. ನಮ್ಮ 35 ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳು ಈಗ ಕೇಂದ್ರೀಯ ಪಡೆಗಳ ಭಾಗವಾಗಿದ್ದಾರೆ ಮತ್ತು ದೇಶದ ಶತ್ರುಗಳ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ  ಪ್ರತಿಪಾದಿಸಿದರು. " ಈ ಸಂಖ್ಯೆಯು 8 ವರ್ಷಗಳ ಹಿಂದೆ ಇದ್ದುದಕ್ಕಿಂತ ಸುಮಾರು ದುಪ್ಪಟ್ಟಾಗಿದೆ", ಎಂದು ಹೇಳಿದ ಪ್ರಧಾನಮಂತ್ರಿ, "ನಿಮ್ಮ ಶಕ್ತಿಯ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಸಬ್ಕಾ ಪ್ರಯಾಸ್ ನೊಂದಿಗೆ , ನಾವು ಖಂಡಿತವಾಗಿಯೂ ಉತ್ತಮ ಸಮಾಜ ಮತ್ತು ಬಲವಾದ ರಾಷ್ಟ್ರವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗುತ್ತೇವೆ" ಎಂದು ಅವರು ಹೇಳಿದರು.

ಮಧ್ಯಪ್ರದೇಶದ ರಾಜ್ಯಪಾಲ ಶ್ರೀ ಮಂಗುಭಾಯಿ ಪಟೇಲ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್, ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಡಾ. ವೀರೇಂದ್ರ ಕುಮಾರ್ ಮತ್ತು ಕೇಂದ್ರ ರಾಜ್ಯ ಸಚಿವರಾದ ಶ್ರೀ ಫಗ್ಗನ್ ಸಿಂಗ್ ಕುಲಸ್ತೆ ಮತ್ತು ಶ್ರೀ ಪ್ರಹ್ಲಾದ್ ಪಟೇಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ - ಎನ್ ಆರ್ ಎಲ್ ಎಂ) ಅಡಿಯಲ್ಲಿ ಉತ್ತೇಜಿಸಲಾಗುತ್ತಿರುವ ಸಾವಿರಾರು ಮಹಿಳಾ ಸ್ವಸಹಾಯ ಗುಂಪು ( ಎಸ್ ಎಚ್ ಜಿ) ಸದಸ್ಯರು / ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹಾಜರಾತಿಗೆ ಸಮ್ಮೇಳನವು ಸಾಕ್ಷಿಯಾಗಿದೆ.

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ ಅಡಿಯಲ್ಲಿ ನಾಲ್ಕು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ (ಪಿವಿಟಿಜಿ) ಕೌಶಲ್ಯ ಕೇಂದ್ರಗಳನ್ನು ಉದ್ಘಾಟಿಸಿದರು.

ಡಿಎವೈ- ಎನ್ ಆರ್ ಎಲ್ ಎಂ ಗ್ರಾಮೀಣ ಬಡ ಕುಟುಂಬಗಳನ್ನು ಹಂತ ಹಂತವಾಗಿ ಎಸ್ ಎಚ್ ಜಿ ಗಳಿಗೆ ಸಜ್ಜುಗೊಳಿಸುವುದು ಮತ್ತು ಅವರ ಜೀವನೋಪಾಯವನ್ನು ವೈವಿಧ್ಯಗೊಳಿಸಲು ಮತ್ತು ಅವರ ಆದಾಯ ಮತ್ತು ಜೀವನ ಗುಣಮಟ್ಟವನ್ನು ಸುಧಾರಿಸಲು ಅವರಿಗೆ ದೀರ್ಘಕಾಲೀನ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಅಭಿಯಾನವು ಕೌಟುಂಬಿಕ ಹಿಂಸೆ, ಮಹಿಳಾ ಶಿಕ್ಷಣ ಮತ್ತು ಇತರ ಲಿಂಗ ಸಂಬಂಧಿತ ಕಾಳಜಿಗಳು, ಪೌಷ್ಟಿಕತೆ, ನೈರ್ಮಲ್ಯ, ಆರೋಗ್ಯ ಇತ್ಯಾದಿ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ನಡವಳಿಕೆ ಬದಲಾವಣೆ ಸಂವಹನದ ಮೂಲಕ ಮಹಿಳಾ ಎಸ್ ಎಚ್ ಜಿ ಸದಸ್ಯರನ್ನು ಸಶಕ್ತಗೊಳಿಸುವತ್ತ ಕೆಲಸ ಮಾಡುತ್ತಿದೆ.

 

*****



(Release ID: 1860254) Visitor Counter : 174