ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಭಾರತದ ಸ್ವಾತಂತ್ರ್ಯ ಸಂಗ್ರಾಮ ಆಧರಿಸಿದ ಆನ್ ಲೈನ್ ಶೈಕ್ಷಣಿಕ ಕ್ರೀಡೆಗಳ ಸರಣಿಯಾದ 'ಆಜಾದಿ ಕ್ವೆಸ್ಟ್' (ಸ್ವಾತಂತ್ರ್ಯದ ಅನ್ವೇಷಣೆ)ಗೆ ಚಾಲನೆ ನೀಡಿದ ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್


ಆಟಿಕೆಗಳು ಮತ್ತು ಕ್ರೀಡೆಗಳ ಮೂಲಕ ಜನರನ್ನು ತೊಡಗಿಸಿ, ಮನರಂಜನೆ ಮತ್ತು ಶಿಕ್ಷಣ ನೀಡಿ ಎಂಬ ಮಾನ್ಯ ಪ್ರಧಾನಮಂತ್ರಿಯವರ ಕರೆಯಿಂದ ಪ್ರೇರಿತವಾದ ಈ ಉಪಕ್ರಮ

ಸರಣಿ ಮೊಬೈಲ್ ಕ್ರೀಡೆಗಳ ಮೂಲಕ 'ಆಜಾದಿ ಕಾ ಅಮೃತ ಮಹೋತ್ಸವ'ದ ಅಂಗವಾಗಿ ವರ್ಷವಿಡೀ ಸಹಯೋಗಕ್ಕಾಗಿ ಪ್ರಕಾಶನ ವಿಭಾಗ ಮತ್ತು ಝಿಂಗಾ ಇಂಡಿಯಾದಿಂದ ತಿಳಿವಳಿಕೆ ಒಡಂಬಡಿಕೆಗೆ ಸಹಿ

ಈ ಕ್ರೀಡೆಗಳು ಏಕಕಾಲದಲ್ಲಿ ಆನ್ ಲೈನ್ ಗೇಮರ್ ಗಳ ಬೃಹತ್ ಮಾರುಕಟ್ಟೆ ಅನ್ವೇಷಿಸುವ ಮತ್ತು ಅವರಿಗೆ ಶಿಕ್ಷಣ ನೀಡುವ ಪ್ರಯತ್ನವಾಗಿದೆ: ಶ್ರೀ ಅನುರಾಗ್ ಠಾಕೂರ್

ಈ ಕ್ರೀಡೆಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಅಧಿಕೃತ ಮಾಹಿತಿಯ ನಿಧಿಯನ್ನು ಸುಲಭವಾಗಿ ಪ್ರವೇಶಿಸಬಹುದಾಗಿದೆ: ಶ್ರೀ ಠಾಕೂರ್

ಭಾರತದಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಿಗಾಗಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬಿಡುಗಡೆಯಾದ ಈ ಕ್ರೀಡೆಗಳು ಸೆಪ್ಟೆಂಬರ್ 2022 ರಲ್ಲಿ ಜಾಗತಿಕವಾಗಿಯೂ ಲಭ್ಯವಾಗಲಿವೆ

Posted On: 24 AUG 2022 6:32PM by PIB Bengaluru

ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಗಾಥೆಯನ್ನು ಹೊರತರುವ ಸಲುವಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಇಂದು ಝಿಂಗಾ ಇಂಡಿಯಾದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಆನ್ ಲೈನ್ ಶೈಕ್ಷಣಿಕ ಮೊಬೈಲ್ ಕ್ರೀಡೆಗಳ ಸರಣಿಯಾದ 'ಆಜಾದಿ ಕ್ವೆಸ್ಟ್' (ಸ್ವಾತಂತ್ರ್ಯದ ಅನ್ವೇಷಣೆ)ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಮತ್ತು ಜಿಂಗಾ ಇಂಡಿಯಾದ ದೇಶೀಯ ಮುಖ್ಯಸ್ಥ ಶ್ರೀ ಕಿಶೋರ್ ಕಿಚ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅನುರಾಗ್ ಠಾಕೂರ್, ಸ್ವಾತಂತ್ರ್ಯ ಸಂಗ್ರಾಮಕ್ಕೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅಪ್ರತಿಮ ವೀರರ ಕೊಡುಗೆಯನ್ನು ಗುರುತಿಸುವ ಸರ್ಕಾರದ ಪ್ರಯತ್ನಗಳ ಸರಣಿಯಲ್ಲಿ ಇದು ಮತ್ತೊಂದು ಕ್ರಮ ಎಂದು ಹೇಳಿದರು.

"ಈ ಕ್ರೀಡೆಗಳು ಆನ್ ಲೈನ್ ಗೇಮರ್ ಗಳ ಬೃಹತ್ ಮಾರುಕಟ್ಟೆಯನ್ನು ತಲುಪಲು ಮತ್ತು ಕ್ರೀಡೆಗಳ ಮೂಲಕ ಅವರಿಗೆ ಶಿಕ್ಷಣ ನೀಡುವ ಪ್ರಯತ್ನವಾಗಿದೆ. ಭಾರತ ಸರ್ಕಾರದ ವಿವಿಧ ಸಂಸ್ಥೆಗಳು ದೇಶದ ಮೂಲೆಮೂಲೆಗಳಿಂದ ಎಲೆಮರೆಯ ಕಾಯಿಯಂತಿದ್ದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾಹಿತಿ ಸಂಗ್ರಹಿಸಿವೆ. ಆಜಾದಿ ಕ್ವೆಸ್ಟ್ ಎಂಬುದು ಈ ಜ್ಞಾನದ ಕಲಿಕೆಯನ್ನು ಆಕರ್ಷಕ ಮತ್ತು ಸಂವಾದಾತ್ಮಕವಾಗಿಸುವ ಪ್ರಯತ್ನವಾಗಿದೆ", ಎಂದು ಸಚಿವರು ವಿವರಿಸಿದರು. ಎಲ್ಲಾ ವಯೋಮಾನದವರು ಈ ಕ್ರೀಡೆಯ ಬಗ್ಗೆ ಆಸಕ್ತಿ ತೋರಲಿದ್ದು, ಬಹು ಬೇಗನೆ ಮನೆಯವರೆಲ್ಲರ ನೆಚ್ಚಿನ ಕ್ರೀಡೆಯಾಗುತ್ತದೆ ಎಂಬ ವಿಶ್ವಾಸವನ್ನು ಶ್ರೀ ಠಾಕೂರ್ ವ್ಯಕ್ತಪಡಿಸಿದರು.

ಭಾರತದಲ್ಲಿ ಹೆಚ್ಚುತ್ತಿರುವ ಎವಿಜಿಸಿ ವಲಯದ ಬಗ್ಗೆ ಮಾತನಾಡಿದ ಶ್ರೀ ಠಾಕೂರ್ ಅವರು, ಭಾರತದಲ್ಲಿ ಎವಿಜಿಸಿ ವಲಯವನ್ನು ಪೋಷಿಸಲು ಇದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ನಿರಂತರ ಪ್ರಯತ್ನವಾಗಿದೆ ಎಂದು ತಿಳಿಸಿದರು. ಕಳೆದ ಕೆಲವು ವರ್ಷಗಳಲ್ಲಿ ಭಾರತವು ಗೇಮಿಂಗ್ ವಲಯದಲ್ಲಿ ಅಗ್ರ 5 ದೇಶಗಳಲ್ಲಿ ಒಂದಾಗಿದೆ. 2021 ರಲ್ಲೇ ಗೇಮಿಂಗ್ ವಲಯವು ಶೇ.28 ರಷ್ಟು ವೃದ್ಧಿಸಿದೆ. ಆನ್ ಲೈನ್ ಗೇಮರ್ ಗಳ ಸಂಖ್ಯೆ 2020 ರಿಂದ 2021 ರವರೆಗೆ ಶೇಕಡಾ 8 ರಷ್ಟು ಹೆಚ್ಚಾಗಿದ್ದು, 2023ರ ವೇಳೆಗೆ ಅಂತಹ ಗೇಮರ್ ಗಳ ಸಂಖ್ಯೆ 45 ಕೋಟಿಯನ್ನು ತಲುಪುವ ನಿರೀಕ್ಷೆಯಿದೆ ಎಂದು ಸಚಿವರು ಹೇಳಿದರು.

ಈ ಅಪ್ಲಿಕೇಶನ್ ಗಳು ನಮ್ಮ ಎವಿಜಿಸಿ ವಲಯದ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಮತ್ತು ಅದೇ ವೇಳೆ ನಮ್ಮ ಭವ್ಯವಾದ ಇತಿಹಾಸವನ್ನು ವಿಶ್ವದ ಮೂಲೆಗಳಿಗೆ ಕೊಂಡೊಯ್ಯುತ್ತವೆ ಎಂದು ಅವರು ಹೇಳಿದರು. ಈ ಅಪ್ಲಿಕೇಶನ್ ಗಳಲ್ಲಿನ ಮಾಹಿತಿಯನ್ನು ಪ್ರಕಾಶನ ವಿಭಾಗ ಮತ್ತು ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ (ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್)ಯ ತಜ್ಞತೆಯನ್ನು ಬಳಸಿಕೊಂಡು ರೂಪಿಸಿದ್ದು, ನಮ್ಮ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅಧಿಕೃತ ಮಾಹಿತಿಯನ್ನು ಸುಲಭವಾಗಿ ಪ್ರವೇಶಿಸಬಹುದಾದ ಭಂಡಾರವಾಗಲಿದೆ ಎಂದು ಅವರು ಹೇಳಿದರು.

ಈ ಆಪ್ ಗಳನ್ನು ಅಭಿವೃದ್ಧಿ ಪಡಿಸಿದ ಝಿಂಗಾ ಇಂಡಿಯಾದ ಕಠಿಣ ಪರಿಶ್ರಮವನ್ನು ಸಚಿವರು ಶ್ಲಾಘಿಸಿದರು. ಎಲ್ಲಾ ವಯೋಮಾನದ ಜನರು ಈ ಆಪ್ ಗಳನ್ನು ಡೌನ್ಲೋಡ್ ಮಾಡುವಂತೆ ಸಚಿವರು ಉತ್ತೇಜಿಸಿದರು ಮತ್ತು ಈ ಆಪ್ ನಮ್ಮ ಸ್ವಾತಂತ್ರ್ಯ ಹೋರಾಟದ ಬಗ್ಗೆ ಕಲಿಯಲು ಪ್ರಮುಖ ಶೈಕ್ಷಣಿಕ ಸಾಧನವಾಗಲಿದೆ ಎಂದು ಹೇಳಿದರು. ಆಪ್ ಏಕಕಾಲದಲ್ಲಿ ಬಳಕೆದಾರರನ್ನು ರಂಜಿಸುತ್ತದೆ, ತೊಡಗಿಸಿಕೊಳ್ಳುತ್ತದೆ ಮತ್ತು ಶಿಕ್ಷಣ ನೀಡುತ್ತದೆ ಎಂದೂ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಝಿಂಗಾ ಇಂಡಿಯಾದ ದೇಶೀಯ ಮುಖ್ಯಸ್ಥ ಶ್ರೀ ಕಿಶೋರ್ ಕಿಚ್ಲಿ, "ಸ್ವಾತಂತ್ರ್ಯದ ಹಾದಿಯು ಭಾರತದ ಇತಿಹಾಸದಲ್ಲಿ ಒಂದು ಪರಿವರ್ತನಾತ್ಮಕ ಮೈಲಿಗಲ್ಲನ್ನು ಸ್ಮರಿಸುತ್ತದೆ ಮತ್ತು ಭಾರತದ ಗತಕಾಲವನ್ನು ಗೌರವಿಸುವ ಈ ಪ್ರಮುಖ ರಾಷ್ಟ್ರೀಯ ಪ್ರಯತ್ನದ ಭಾಗವಾಗಲು ನಾವು ಹೆಮ್ಮೆಪಡುತ್ತೇವೆ. ಕ್ರೀಡೆಗಳ ಮೂಲಕ ಜನರನ್ನು ಸಂಪರ್ಕಿಸುವುದು ಝಿಂಗಾದಲ್ಲಿನ ನಮ್ಮ ಧ್ಯೇಯವಾಗಿದೆ. ಈ ಪ್ರಮುಖ ಯುಗದ ಬಗ್ಗೆ ಬೋಧನಾ ಅನುಭವವಾಗಿ ಸಂವಾದಾತ್ಮಕ ಮನರಂಜನೆಯ ಶಕ್ತಿಯನ್ನು ಬಳಸಿಕೊಳ್ಳುವಾಗ ಎಲ್ಲಾ ವಯಸ್ಸಿನ ಆಟಗಾರರನ್ನು ತೊಡಗಿಸಿಕೊಳ್ಳಲು ಈ ಉಪಕ್ರಮವನ್ನು ವಿನ್ಯಾಸಗೊಳಿಸಲಾಗಿದೆ" ಎಂದರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಥೆಗಳು ಮತ್ತು ಮೈಲಿಗಲ್ಲುಗಳನ್ನು ಮತ್ತು ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಶೌರ್ಯವನ್ನು ಪ್ರದರ್ಶಿಸಲು, ಜನರನ್ನು ತೊಡಗಿಸಿಕೊಂಡು, ಮನರಂಜನೆಯೊಂದಿಗೆ ಶಿಕ್ಷಣ ನೀಡುವಂತಹ ಕ್ರೀಡೆಗಳು ಮತ್ತು ಆಟಿಕೆಗಳನ್ನು ಅಭಿವೃದ್ಧಿಪಡಿಸುವಂತೆ ಮಾನ್ಯ ಪ್ರಧಾನಮಂತ್ರಿಯವರು ಗೇಮಿಂಗ್ ಮತ್ತು ಆಟಿಕೆ ಉದ್ಯಮಗಳ ಬಾಧ್ಯಸ್ಥರಿಗೆ ನೀಡಿದ ಕರೆಯಿಂದ ಈ ಉಪಕ್ರಮವು ಪ್ರೇರೇಪಿತವಾಗಿದೆ. 'ಆಜಾದಿ ಕ್ವೆಸ್ಟ್' ಸರಣಿಯ ಮೊದಲ ಎರಡು ಕ್ರೀಡೆಗಳು ಭಾರತದ ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಹೇಳುತ್ತವೆ, ಪ್ರಮುಖ ಮೈಲಿಗಲ್ಲುಗಳು ಮತ್ತು ಮಹಾನ್ ನಾಯಕರುಗಳನ್ನು ಎತ್ತಿ ತೋರಿಸುತ್ತವೆ, ಮೋಜಿನ ಕ್ರೀಡೆಯೊಂದಿಗೆ ಹೆಣೆದುಕೊಂಡಿವೆ. ಈ ಕ್ರೀಡೆಗಳ ವಸ್ತುವಿಷಯವು ಸರಳವಾಗಿದ್ದರೂ, ಸಮಗ್ರವಾಗಿದೆ, ವಿಶೇಷವಾಗಿ ಪ್ರಕಾಶನ ವಿಭಾಗದಿಂದ ತಜ್ಞತೆಯೊಂದಿಗೆ ರೂಪಿಸಲಾದ ಮತ್ತು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ ತಜ್ಞರಿಂದ ಪರಿಶೀಲಿತವಾಗಿದೆ.

ಆಜಾದಿ ಕ್ವೆಸ್ಟ್ (ಸ್ವಾತಂತ್ರ್ಯದ ಅನ್ವೇಷಣೆ) ಬಗ್ಗೆ:

ಪ್ರಕಾಶನ ವಿಭಾಗವು ಇಂದು ನಡೆಯುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವದ ಅಡಿಯಲ್ಲಿ ಸರಣಿ ಕ್ರೀಡೆಗಳನ್ನು ಅಭಿವೃದ್ಧಿಪಡಿಸಲು ಝಿಂಗಾ ಇಂಡಿಯಾದೊಂದಿಗೆ ತಿಳಿವಳಿಕಾ ಒಡಂಬಡಿಕೆಗೆ ಸಹಿ ಹಾಕಿದೆ. ಆಜಾದಿ ಕ್ವೆಸ್ಟ್ ಗೇಮ್ ಗಳು ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಲ್ಲಿ ಭಾರತದ ಜನತೆಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಿದೆ ಮತ್ತು ಸೆಪ್ಟೆಂಬರ್ 2022 ರಿಂದ ವಿಶ್ವದಾದ್ಯಂತ ಲಭ್ಯವಾಗಲಿದೆ. ಆನ್ ಲೈನ್ ಗೇಮಿಂಗ್ ಕಂಪನಿ ಝಿಂಗಾ ಇಂಡಿಯಾವನ್ನು 2010 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು ಮತ್ತು ಮೊಬೈಲ್ ಮತ್ತು ವೆಬ್ ನಲ್ಲಿ ಕೆಲವು ಅತ್ಯಂತ ಜನಪ್ರಿಯ ಗೇಮ್ ಫ್ರಾಂಚೈಸಿಗಳನ್ನು ಅದು ಅಭಿವೃದ್ಧಿಪಡಿಸಿದೆ.

'ಆಡಿ-ಕಲಿ (ಗೇಮಿಫಿಕೇಷನ್ ಆಫ್ ಎಡ್ಯುಕೇಷನ್)' ಪರಿಕಲ್ಪನೆಯನ್ನು ಆಧರಿಸಿದ ವಿಶಿಷ್ಟ ಕ್ರೀಡಾ ಸರಣಿಯು ದೇಶದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ. ಕ್ರೀಡೆ-ಆಧಾರಿತ ಕಲಿಕೆಯು ತರಗತಿ ಮತ್ತು ವಯಸ್ಸನ್ನು ಮೀರಿ ಕಲಿಕೆಯ ಪ್ರಕ್ರಿಯೆಯನ್ನು ವಿಸ್ತರಿಸುವ ಮೂಲಕ ಸಮಾನ ಮತ್ತು ಜೀವಮಾನದ ಶಿಕ್ಷಣವನ್ನು ಒದಗಿಸುತ್ತದೆ. ಆಜಾದಿ ಕ್ವೆಸ್ಟ್ ಸರಣಿಯು ಭಾರತದ ಸ್ವಾತಂತ್ರ್ಯ ಸಂಗ್ರಾಮ ಮತ್ತು ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ದಂತಕಥೆಗಳ ಜ್ಞಾನವನ್ನು ನೀಡುತ್ತದೆ, ಆ ಮೂಲಕ ಆಟಗಾರರ ಮೇಲೆ ಹೆಮ್ಮೆಯ ಭಾವನೆ, ಮತ್ತು ಕರ್ತವ್ಯ ಪ್ರಜ್ಞೆಯನ್ನು ಪ್ರೇರೇಪಿಸುತ್ತದೆ ಹಾಗೂ ವಸಾಹತುಶಾಹಿ ಮನಸ್ಥಿತಿಯ ಪ್ರಜ್ಞೆಯನ್ನು ತೆಗೆದುಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಮಾನ್ಯ ಪ್ರಧಾನಿಯವರು ತಮ್ಮ 76 ನೇ ಸ್ವಾತಂತ್ರ್ಯ ದಿನದ ಭಾಷಣದಲ್ಲಿ 'ಅಮೃತ ಕಾಲದ ಪಂಚ ಪ್ರಾಣ' ದ ಪ್ರತಿಪಾದನೆ ಮಾಡಿದರು.

ಸರಣಿಯ ಮೊದಲ ಪಂದ್ಯ ಆಜಾದಿ ಕ್ವೆಸ್ಟ್: ಮ್ಯಾಚ್ 3 ಪಝಲ್, 1857 ರಿಂದ 1947ರವರೆಗೆ ಭಾರತದ ಸ್ವಾತಂತ್ರ್ಯದ ವರ್ಣರಂಜಿತ ಪಯಣವನ್ನು ಆಟಗಾರರಿಗೆ ಪ್ರಸ್ತುತಪಡಿಸುವ ಸರಳ ಮತ್ತು ಸುಲಭ ಸಾಂದರ್ಭಿಕ ಕ್ರೀಡೆಯಾಗಿದೆ. ಆಟಗಾರರು ಕ್ರೀಡೆಯನ್ನು ಆಡುತ್ತಾ ಹೋದಂತೆ 495 ಹಂತಗಳಲ್ಲಿ ವ್ಯಾಪಿಸಿದ, ಕ್ರೀಡೆಯಲ್ಲಿ 75 ಟ್ರಿವ್ಯಾ ಕಾರ್ಡ್ ಗಳನ್ನು ಸಂಗ್ರಹಿಸಬಹುದು, ಇದು ಪ್ರತಿಯೊಂದು ಇತಿಹಾಸದ ಪ್ರಮುಖ ಕ್ಷಣಗಳನ್ನು ಪ್ರದರ್ಶಿಸುತ್ತದೆ, ಲೀಡರ್ ರ್ಬೋರ್ಡ್ ಗಳಲ್ಲಿ ಸ್ಪರ್ಧೆಯಿರುತ್ತದೆ ಮತ್ತು ಕ್ರೀಡೆಯ ಬಹುಮಾನಗಳನ್ನು ಮತ್ತು ಪ್ರಗತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತದೆ. ಮತ್ತೊಂದೆಡೆ, ಆಜಾದಿ ಕ್ವೆಸ್ಟ್: ಹೀರೋಸ್ ಆಫ್ ಭಾರತ್ ಅನ್ನು 75 ಹಂತಗಳಲ್ಲಿ ಹರಡಿರುವ 750 ಪ್ರಶ್ನೆಗಳ ಮೂಲಕ ಭಾರತದ ಸ್ವಾತಂತ್ರ್ಯದ ವೀರರ ಬಗ್ಗೆ ಆಟಗಾರರ ಜ್ಞಾನವನ್ನು ಪರೀಕ್ಷಿಸಲು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಬಹುದಾದ 75 'ಆಜಾದಿ ವೀರ್' ಕಾರ್ಡ್ ಗಳ ಮೂಲಕ ಕಡಿಮೆ ಪರಿಚಿತ ಹೀರೋಗಳ ಬಗ್ಗೆ ತಿಳಿಸಲು ರಸಪ್ರಶ್ನೆಯನ್ನು ಕ್ರೀಡೆಯಾಗಿಯೂ ವಿನ್ಯಾಸಗೊಳಿಸಲಾಗಿದೆ.

ಪ್ರಕಾಶನ ವಿಭಾಗ ಮತ್ತು ಝಿಂಗಾ ಇಂಡಿಯಾ ನಡುವಿನ ಒಂದು ವರ್ಷದ ಸಹಯೋಗವು ಅಂತಹ ಹೆಚ್ಚಿನ ಕ್ರೀಡೆಗಳನ್ನು ನೀಡುತ್ತದೆ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ವಿವಿಧ ಆಯಾಮಗಳ ಬಗ್ಗೆ ಶಿಕ್ಷಣ ನೀಡುವ ಮತ್ತು ಜನರಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ದೇಶಭಕ್ತಿಯ ಭಾವನೆಯನ್ನು ಬೆಳೆಸುವ ದೃಷ್ಟಿಕೋನದೊಂದಿಗೆ ವಸ್ತು ವಿಷಯ ಮತ್ತು ವೈಶಿಷ್ಟ್ಯಗಳ ದೃಷ್ಟಿಯಿಂದ ಅಸ್ತಿತ್ವದಲ್ಲಿರುವ ಆಟಗಳನ್ನು ಸಹ ವಿಸ್ತರಿಸುತ್ತದೆ. ಕ್ರೀಡೆಗಳು ಆಟಗಾರರಿಗೆ ಪ್ರತಿ ತಿಂಗಳು ಆಜಾದಿ ಕ್ವೆಸ್ಟ್ ಅನ್ನು ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ ಸೇರಿದಂತೆ ರೋಮಾಂಚಕ ಬಹುಮಾನಗಳನ್ನೂ ಒದಗಿಸುತ್ತವೆ.

'ಆಜಾದಿ ಕ್ವೆಸ್ಟ್' ಬ್ರೋಷರ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ:

http://davp.nic.in/ebook/goi_print/index.html

ಆಟಗಳನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ:

ಐ.ಓ.ಎಸ್. ಸಾಧನಗಳು:

https://apps.apple.com/us/app/azadi-quest-match-3-puzzle/id1633367594

ಆನ್ ಡ್ರಾಯ್ಡ್ ಸಾಧನಗಳು

https://play.google.com/store/apps/details?id=com.zynga.missionazaadi

 

******


(Release ID: 1854227) Visitor Counter : 258